Wednesday, September 22, 2010

ರೇಷ್ಮೆ ಗೂಡಿಗಿಂತ ಬದುಕು ಭಾರ!


ರೇಷ್ಮೆ ಗೂಡಿನ ಮೂಟೆಯನ್ನು ಸಮತೋಲನದಿಂದ ಕಾಯ್ದುಕೊಂಡು ಸಾಗುತ್ತಿರುವ ಕಾರ್ಮಿಕ


ಒಂದೆಡೆ ದೇಶ ಪ್ರಗತಿಯತ್ತ ಧಾವಿಸುತ್ತಿದೆ ಎಂದು ಸಂಭ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಪ್ರಗತಿಯೂ ಅಲ್ಲ-ಸಂಭ್ರಮವೂ ಇಲ್ಲ ಎಂದು ಕೆಲವರು ಬಾಳುತ್ತಿದ್ದಾರೆ. ಸ್ವಾವಲಂಬಿ ದೇಶ ನಿರ್ಮಾಣದತ್ತ ಎಲ್ಲರೂ ಸಂತಸದಿಂದ ಮುನ್ನಡೆಯುತ್ತಿದ್ದರೆ, ಕೆಲವರು ಬಡತನದ ದಾಸ್ಯದಿಂದ ಹೊರಬರಲಾಗದೇ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರಿ ಸೌಲಭ್ಯಗಳು ವಿಪುಲವಾಗಿದ್ದರೂ, ಅವುಗಳ ನೆರವಿಲ್ಲದೇ-ಸರ್ಕಾರದ ಆಶ್ರಯವಿಲ್ಲದೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ.


ಪಾದಗಳಿಗೆ ಚಪ್ಪಲಿಗಳನ್ನು ಹಾಕಿಕೊಳ್ಳದೇ ತಲೆಯ ಮೇಲೆ ಮೂಟೆ ಹೊತ್ತು ಸೈಕಲ್ಲಿನಲ್ಲಿ ಹೋಗುತ್ತಿರುವ ಕಾರ್ಮಿಕರು.


ಕಷ್ಟನಷ್ಟಗಳ ನಡುವೆಯೂ ಪುಟ್ಟ ಆಶಾಕಿರಣದೊಂದಿಗೆ ಜೀವನ ಸಾಗಿಸುತ್ತಿರುವ ಆ ಕೆಲವರಲ್ಲಿ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಕೂಲಿ ಕಾರ್ಮಿಕರು ಕೂಡ ಸೇರಿದ್ದಾರೆ.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ಲಕ್ಷಾಂತರ ರೂಪಾಯಿಯಲ್ಲಿ ವಹಿವಾಟು ನಡೆಯುತ್ತದೆ, ಆದರೆ ಕಾರ್ಮಿಕರ ಕೂಲಿಯು ದಿನಕ್ಕೆ ೧೫೦ ರೂಪಾಯಿಯ ಗಡಿ ದಾಟುವುದಿಲ್ಲ. ಪಾದಗಳಿಗೆ ಚಪ್ಪಲಿಯೂ ಹಾಕಿಕೊಳ್ಳದೇ ಕೆಲಸ ಮಾಡುವ ಈ ಶ್ರಮಿಕರು ತಲೆಯ ಮೇಲೆ ೩೦ ರಿಂದ ೫೦ ಕೆ.ಜಿಯಷ್ಟು ರೇಷ್ಮೆ ಗೂಡನ್ನು ಹೊರುತ್ತಾರೆ. ಸೈಕಲ್ಲಿನಲ್ಲೇ ಸಾಗುವ ಅವರು ತಲೆಯ ಮೇಲೆ ಮೂಟೆಯ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಅಪಘಾತಕ್ಕೀಡಾಗದಂತೆ ಎಚ್ಚರಿಕೆ ಸಹ ವಹಿಸಬೇಕು.



ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಿಂದ ಹೊರಬರುತ್ತಿರುವ ಕಾರ್ಮಿಕ

ಅಸಂಘಟಿತ ವಲಯದಲ್ಲಿರುವ ಈ ಕಾರ್ಮಿಕರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ. ಚುನಾಯಿತ ಪ್ರತಿನಿಧಿಗಳು ನೀಡುವ ಭರವಸೆಗಳ ಹೊರತಾಗಿ ಅವರಿಗೆ ಏನೂ ಸಿಕ್ಕಿಲ್ಲ. ಅನಾರೋಗ್ಯ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆ ಕಾಡಿದರೂ ಅವರು ದಿನದ ೧೫೦ ರೂಪಾಯಿಯಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಬೇರೆ ಮಾರ್ಗವಿಲ್ಲ.


ಎಷ್ಟೇ ತೊಂದರೆಯಿದ್ದರೂ ಮೂಟೆಯನ್ನು ಹೊತ್ತು ಜೀವನ ಸಾಗಬೇಕು.

"ನಾವು ಸುಮಾರು ೨೬೮ ಕಾರ್ಮಿಕರಿದ್ದೇವೆ. ನಿತ್ಯವೂ ೨೦ ರಿಂದ ೫೦ ಕೆಜಿ ತೂಕದವರೆಗೂ ಗೂಡನ್ನು ಹೊರುತ್ತೇವೆ. ಮಾರುಕಟ್ಟೆಯಲ್ಲಿ ಗೂಡು ಬರುವುದರ ಮೇಲೆ ನಮ್ಮ ಸಂಪಾದನೆ ಅವಲಂಬಿತವಾಗಿರುತ್ತದೆ. ದಿನಕ್ಕೆ ೧೫೦ ರೂಪಾಯಿ ಸಂಪಾದಿಸುತ್ತೇವೆ. ಆದರೆ ಸೈಕಲ್ ಬಾಡಿಗೆ, ಬಸ್ ಪ್ರಯಾಣ, ಹೋಟೆಲ್ ಊಟ ಎಲ್ಲ ಕಳೆದು ೭೫ ರಿಂದ ೧೦೦ ರೂಪಾಯಿ ಉಳಿಯುತ್ತದೆ. ಅಲ್ಪಸಂಪಾದನೆಯಲ್ಲೇ ಸಂಸಾರ ನಡೆಸಬೇಕು, ಮಕ್ಕಳಿಗೆ ಓದಿಸಬೇಕು, ಆಹಾರದ ಕೊರತೆ ಕಾಡದಂತೆ ನೋಡಿಕೊಳ್ಳಬೇಕು" ಎಂದು ಕಾರ್ಮಿಕ ದೊಡ್ಡತೇಕಹಳ್ಳಿ ವೆಂಕಟೇಶ್ ತಿಳಿಸಿದರು.


ಸೈಕಲ್ ಇರದಿದ್ದರೂ ಚಿಂತೆಯಿಲ್ಲ, ನಡೆದುಕೊಂಡೇ ಮೂಟೆ ಸಾಗಿಸುತ್ತಿರುವ ಕಾರ್ಮಿಕರು.

"ಸಂಸಾರದ ನಿತ್ಯ ಜಂಜಾಟವನ್ನು ಹೇಗಾದರೂ ತೂಗಿಸಬಹುದು. ಆದರೆ ಅಪಘಾತ ಅಥವಾ ಅನಾರೋಗ್ಯ ಕಾಡಿದ್ದಲ್ಲಿ ಔಷಧಿ ಕೊಳ್ಳಲು ಮತ್ತು ಆಸ್ಪತ್ರೆಗೆ ದಾಖಲಾಗಲು ಹಣವಿರುವುದಿಲ್ಲ. ಸರ್ಕಾರದ ಯಾವುದೇ ಯೋಜನೆಗೆ ಒಳಪಡದ ನಮಗೆ ಯಾವುದೇ ಸೌಕರ್ಯಗಳು ಸಹ ಸಿಗುವುದಿಲ್ಲ. ಬದುಕಲು ಸಾಲ ಮಾಡಬೇಕಾಗುತ್ತದೆ. ಆದರೆ ಸಾಲ ತೀರಿಸುವುದರಲ್ಲೇ ನಮ್ಮ ಬದುಕು ಕೊನೆಯಾಗುತ್ತದೆ" ಎಂದು ಅವರು ಅಳಲು ತೋಡಿಕೊಂಡರು.



"ದೇಹವನ್ನು ದಂಡಿಸಿ ಕೆಲಸ ಮಾಡುವ ಈ ಕಾರ್ಮಿಕರು ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೀರ್ಘ ಕಾಲದವರೆಗೆ ಬದಕುಲು ಆಗುವುದಿಲ್ಲ. ಪಿಂಚಣಿ, ಆರೋಗ್ಯ ವಿಮೆ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ, ಭವಿಷ್ಯ ನಿಧಿ ಮುಂತಾದ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೋರಾಟದ ಮನೋಭಾವವನ್ನೇ ಕಳೆದುಕೊಂಡ ಸ್ಥಿತಿಯಲ್ಲಿರುವ ಈ ಕಾರ್ಮಿಕರು ನಿರಾಸೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ" ಎಂದು ರಾಜ್ಯ ಹಮಾಲಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಕೆ.ಮಹಾಂತೇಶ್ ಅಭಿಪ್ರಾಯಪಡುತ್ತಾರೆ.
"ಪ್ರತಿಯೊಬ್ಬ ಕಾರ್ಮಿಕನಿಗೂ ಸಂಖ್ಯೆ ನೀಡಲಾಗಿದೆ. ಗೂಡು ಮಾರುಕಟ್ಟೆಯಿಂದ ಹೊರಹೋಗುವಾಗ ಅವರಿಗೆ ಪಾಸು ನೀಡಿರುತ್ತೇವೆ. ಅವರು ಗೇಟ್ ಬಳಿ ಪಾಸ್ ನೀಡಿ ಹೊರಹೋಗಬೇಕು. ಬಹುತೇಕ ಕಾರ್ಮಿಕರಿಗೆ ಓದು-ಬರಹ ಗೊತ್ತಿಲ್ಲ. ಸರ್ಕಾರದಿಂದ ಸೌಲಭ್ಯಗಳಿವೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಪರಿವೆ ಅವರಿಗಿಲ್ಲ" ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿ ರತ್ನಯ್ಯ ಶೆಟ್ಟಿ ಹೇಳುತ್ತಾರೆ.

4 comments:

ಮನದಾಳದಿಂದ............ said...

ಹಸಿವು, ಬಡತನ ಎಲ್ಲವನ್ನೂ ಮಾಡಿಸುತ್ತದೆ ಮಲ್ಲಿ ಸರ್,
ಚಿತ್ರಗಳು ಮನಕರಗಿಸುತ್ತವೆ.........

sunaath said...

ನಮ್ಮ ನಾಡಿನ ದುರಂತ ಇದು. ನಾವು ಬೆಳವಣಿಗೆ ಸಾಧಿಸುತ್ತಿದ್ದೇವೆ ಎಂದು ನಮ್ಮ ಪ್ರಧಾನಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಯಾವುದರಲ್ಲಿ ಬೆಳವಣಿಗೆ ಎನ್ನುವದು ಅವರಿಗೇ ಗೊತ್ತು. ಕಾರ್ಮಿಕರ ಚಿತ್ರಗಳನ್ನು ನೋಡಿ ಹಾಗು ಅವರ ಬವಣೆಯ ಬದುಕಿನ ಬಗೆಗೆ ಓದಿ, ವಿಷಾದವಾಯಿತು.

ನಮ್ಮ ನಾಡಿನ ಅನೇಕ ತರಹದ ಚಿತ್ರಗಳನ್ನು ನೀವು ಕೊಡುತ್ತಿದ್ದೀರಿ. ಕೆಲವು ಸುಖದ ಚಿತ್ರಗಳು, ಕೆಲವು ವಿನೋದದ ಚಿತ್ರಗಳು, ಕೆಲವು ವಿಷಾದದ ಚಿತ್ರಗಳು. ಇವೆಲ್ಲಕ್ಕಾಗಿ ನಿಮಗೆ ಅಭಿನಂದನೆಗಳು ಹಾಗು ಧನ್ಯವಾದಗಳು.

ಜಲನಯನ said...

ಮಲ್ಲಿ.. ನಿಮ್ಮ ಚಿತ್ರ ಮತ್ತು ಲೇಖನ ಎರಡೂ ಬಹಳ ಸಮಯ ಸ್ಫೂರ್ತಿಯಿಂದ ಮತ್ತು ಚಿಂತನೆ ತುಂಬಿದ ಪೋಸ್ಟ್ ಆಗಿರುತ್ತವೆ...ಚನ್ನಾಗಿವೆ ರೇಶ್ಮೆ ಗೂಡನ್ನು ಸಾಗಿಸುವ ಪರಿ

Gubbachchi Sathish said...

ವಾಸ್ತವಕ್ಕೆ ಹಿಡಿದ ಕನ್ನಡಿ.