Tuesday, June 4, 2013

ಜಂಗಮಕೋಟೆ ಎಂಬ ಸೃಷ್ಟಿ ಸ್ಥಾವರ

 
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿಯಿರುವ ವಿಚಿತ್ರ ರೂಪಗಳ ದೊಂಗರಗಳ ಸಾಲು.

ಬೃಹದಾಕಾರದ ಅಣಬೆ, ಮಲಗಿರುವ ಬಸವ, ಹುತ್ತ, ರಣ ಹ್ದದು ಮುಂತಾದ ಚಿತ್ರ ವಿಚಿತ್ರ ಆಕಾರಗಳು ಮಣ್ಣಿನಲ್ಲಿ ರೂಪುಗೊಂಡಿವೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಬಳಿ. ಸುಗಟೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಣಿವೆಗಳು ಅಥವಾ ದೊಂಗರಗಳಲ್ಲಿ ನೂರಾರು ವರ್ಷಗಳಿಂದ ಬೀಳುವ ಮಳೆ ಹಾಗೂ ಹರಿವ ನೀರು ವಿಶಿಷ್ಟವಾಗಿ ಮಣ್ಣುಗಡ್ಡೆಗಳನ್ನು ಕಲಾಕೃತಿಗಳಂತೆ ನಿರ್ಮಿಸಿದೆ.
 ಒಂದೆಡೆ ಪ್ರಪಾತದಂತೆ ಕಣಿವೆಯಿದ್ದರೆ, ಮತ್ತೊಂದೆಡೆ ಅಣಬೆಯಾಕಾರದ ದಿಬ್ಬವಿದೆ. ಯಾವ ಆಧಾರವೂ ಇಲ್ಲದೆ ನಿಂತಂತಿರುವ ಕಂಬಗಳ ಹಾಗೆ ನಡುಗಡ್ಡೆಗಳಿವೆ. ಕೆಲವು ಇನ್ನೇನು ಕುಸಿಯುವಂತೆ ಕಂಡರೆ ಇನ್ನು ಕೆಲವು ಕಲ್ಲಿನಂತೆ ಗಟ್ಟಿಯಾಗಿವೆ. ನೀರಿನ ಕೊರೆತದಿಂದಾಗಿ ಹಲವು ಆಕಾರಗಳನ್ನು ಹೊಂದಿರುವ ಇವು ಪ್ರತಿವರ್ಷವೂ ತಮ್ಮ ರೂಪ ಬದಲಿಸುತ್ತಿರುತ್ತವೆ.
 ಛಾಯಾಗ್ರಹಣಕ್ಕೆ, ಚಾರಣಕ್ಕೆ ಮತ್ತು ಪ್ರಕೃತಿಯ ಸೊಬಗನ್ನು ಸವಿಯುವವರಿಗೆ ಈ ಸ್ಥಳ ಪ್ರಿಯವಾಗುತ್ತದೆ. ನೆಲಮಟ್ಟಕ್ಕಿಂತ ಕೆಳಗಿರುವ ಕಂದರಗಳಲ್ಲಿ ರೂಪುಗೊಂಡಿರುವ ಅದ್ಭುತ ಶಿಲ್ಪಗಳ ದೃಶ್ಯಾವಳಿಗಳು ಸುಮಾರು ೧೦ ಕಿಮೀ ಉದ್ದಕ್ಕೂ ಅಂದರೆ ಹೊಸಕೋಟೆಯವರೆಗೂ ಮುಂದುವರೆದಿದೆ. ಅಲ್ಲಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದರೂ ಪ್ರಕೃತಿಯ ಸೌಂದರ್ಯ ಸವಿಯಲು ಮತ್ತು ಸಾಹಸ ಕ್ರೀಡೆಗಳನ್ನು ಆಯೋಜಿಸಲು ಅಡ್ಡಿಯಾಗಿಲ್ಲ. ೧೦ ರಿಂದ ೩೦ ಮೀಟರ್‌ಗಳವರೆಗೂ ಆಳವಿರುವ ಈ ವಿಶಾಲ ಕಣಿವೆ ಅವರವರ ಭಾವಕ್ಕೆ ತಕ್ಕಂತೆ ತನ್ನ ರೂಪವನ್ನು ಪ್ರದರ್ಶಿಸುತ್ತದೆ.
 ‘ಕಾಲಾಂತರದಲ್ಲಿ ನೀರ ಹರಿವಿಗೆ ಸಿಲುಕಿ, ಮೆದು ಮಣ್ಣು ಕರಗಿ ಕೊಚ್ಚಿ ಹೋಗುತ್ತಾ ನುರುಜುಗಲ್ಲಿನ ಗಟ್ಟಿ ಮಣ್ಣು ಮಾತ್ರ ಉಳಿದು ಈ ದೊಂಗರಗಳು ಕುತೂಹಲ ಕೆರಳಿಸುವ ಚಿತ್ರ ವಿಚಿತ್ರ ಆಕೃತಿಗಳಾಗಿ ರೂಪುಗೊಂಡಿವೆ. ಸೃಷ್ಟಿಯ ಈ ಅದ್ಭುತ ತಾಣಕ್ಕೆ ಪ್ರಚಾರ ನೀಡಿ ಮೂಲಭೂತ ಸೌಕರ್ಯಗಳನ್ನು ಒಸದಿಸಿದಲ್ಲಿ ಚಾರಣ ಮತ್ತು ಸಾಹಸ ಪ್ರವಾಸೋದ್ಯಮದ ಒಂದು ಪ್ರಸಿದ್ಧ ಸ್ಥಳವಾಗುತ್ತದೆ. ನಾವು ಶಾಲಾ ಮಕ್ಕಳನ್ನು ಹೊರಸಂಚಾರಕ್ಕೆಂದು ಪ್ರತಿ ವರ್ಷ ಈ ಸ್ಥಳಕ್ಕೆ ಕರೆದೊಯ್ಯುತ್ತೇವೆ. ವಿದ್ಯಾರ್ಥಿಗಳಿಗೆ ಚಾರಣ, ಸಾಹಸ ಕ್ರೀಡೆ, ಪ್ರಕೃತಿ ವೀಕ್ಷಣೆ, ಔಷಧಿ ಸಸ್ಯಗಳ ಗುರುತಿಸುವಿಕೆ, ವನಭೋಜನ, ಕಾಡುಹಣ್ಣುಗಳ ರುಚಿ ಮುಂತಾದವುಗಳನ್ನು ಪರಿಚಯ ಮಾಡಿಕೊಡಲು ಇದು ಸೂಕ್ತ ಸ್ಥಳ’ ಎನ್ನುತ್ತಾರೆ ಶಿಕ್ಷಕ ಡಿ.ನಾರಾಯಣಸ್ವಾಮಿ.
 ‘ಜಂಗಮಕೋಟೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯದ ಪಕ್ಕದ ಕಾಲುದಾರಿಯಲ್ಲಿ ಸುಮಾರು ಒಂದು ಕಿಮೀ ದೂರ ಕ್ರಮಿಸಿ ಸಣ್ಣ ಗುಡ್ಡವೊಂದನ್ನು ಹತ್ತಿ ಇಳಿದರೆ ದೊಂಗರಗಳ ಸಾಲು ಕಾಣಿಸುತ್ತದೆ. ಶಿಡ್ಲಘಟ್ಟ ತಾಲ್ಲೂಕಿನ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಚಾರಣ, ಮೈನವಿರೇಳಿಸುವ ಅನುಭವ ನೀಡುವುದರೊಂದಿಗೆ ಅವರ ಮನೋಸ್ಥೈರ್ಯವನ್ನೂ ಹೆಚ್ಚಿಸಲು ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಕೆಲವು ಕಡೆ ನೀರು ನಿಂತಿದ್ದು, ಕುರುಚಲು ಪೊದೆ ಗಿಡಗಳಿದ್ದು ಹಲವು ಹಕ್ಕಿ ಪ್ರಬೇಧಗಳನ್ನು ಗುರುತಿಸಬಹುದಾಗಿದೆ’ ಎಂದು ಅವರು ವಿವರಿಸಿದರು.


 ಮಣ್ಣಿನ ಛತ್ರಿ.

 ಬೃಹದಾಕಾರದ ಅಣಬೆಗಳು.

 ನೆಲದಾಳದ್ಲಲಿ ಕೊರೆತದಿಂದ ರೂಪುಗೊಂಡ ಹುತ್ತದ ರೀತಿಯ ಆಕೃತಿಗಳು.


 ನಡುವ್ಲೆಲಾ ಸವೆದು ಕುಸಿಯಬಹುದೆಂದು ಅನಿಸಿದರೂ ಭದ್ರವಾಗಿ ಸೆಟೆದು ನಿಂತ ಆಕೃತಿ.


 ಮಲಗಿರುವ ಒಂಟೆಯೋ ಅಥವಾ ರಹಹ್ದದಿನ ತಲೆಯೋ?


 ಭೂಮಿಯಿಂದ್ದೆದ ಶಿವಲಿಂಗ


 ಭೂಮಿಯೊಳಗಿನ ವಿಸ್ಮಯ.




2 comments:

sunaath said...

ನಿಸರ್ಗವೈಚಿತ್ರ್ಯಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿದು ನಮಗೆ ತಲುಪಿಸಿದ ನಿಮಗೆ ಧನ್ಯವಾದಗಳು.

Badarinath Palavalli said...

ಕಿಕ್ಕಬಳ್ಳಾಪುರ ಮತ್ತು ನಂದಿ ಗ್ರಾಮಗಳ ನಡುವೆ ಬರುವ ತಿರ್ನಳ್ಳಿಯಲ್ಲೂ ಇಂತಹವೇ ಕೌತುಕವಿದೆ.

http://www.badari-poems.blogspot.in/