Tuesday, June 25, 2013

ಕಲಾವಿದನ ಕನಸುಗಳು


ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿಯ ಕಲಾ ಶಿಕ್ಷಕ ಎಂ.ನಾಗರಾಜು ಶಾಲೆಯ ಗೋಡೆಯ ಮೇಲೆ ರಾಷ್ಟ್ರಕವಿಯ ಚಿತ್ರ ಬಿಡಿಸುತ್ತಿರುವುದು.

 ನಗರಗಳಲ್ಲಿರುವಂತೆ ಗ್ರಾಮೀಣ ಭಾಗಗಳಲ್ಲಿ ಚಿತ್ರಕಲೆಯನ್ನು ಅಭ್ಯಸಿಸುವವರು ವಿರಳ. ಆದರೆ, ‘ಚಿತ್ರಕಲೆಯೇ ನನ್ನ ಉಸಿರು, ನಮ್ಮ ಹಳ್ಳಿಯಲ್ಲಿ ಒಂದು ಆರ್ಟ್ ಗ್ಯಾಲರಿ ಮಾಡಬೇಕು’ ಎಂಬ ಉನ್ನತ ಕನಸನ್ನು ಕಾಣುತ್ತಾ ಚಿತ್ರಕಲೆಯಲ್ಲಿ ಸಾಧನೆ ಮಾಡುತ್ತಿರುವ ಕಲಾಶಿಕ್ಷಕರೊಬ್ಬರು ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ತಿಪ್ಪೇನಹಳ್ಳಿಯ ಎಂ.ನಾಗರಾಜು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಾ ಶಿಕ್ಷಕರಾಗಿ ವೃತ್ತಿ ಮಾಡುತ್ತಲೇ ಜಲವರ್ಣ, ನಿಸರ್ಗ ಚಿತ್ರಗಳು, ಟೆರ್ರಾಕೋಟ, ತೈಲವರ್ಣ, ವರ್ಲಿ, ನೈಜಚಿತ್ರಣ, ನವ್ಯಕಲೆ, ಕಲ್ಪನಾ ಚಿತ್ರಗಳು, ಚಿಕಣಿ ಮುಂತಾದ ವಿವಿಧ ಪ್ರಕಾರಗಳ  ಚಿತ್ರಗಳನ್ನು ಬಿಡಿಸುತ್ತಿದ್ದಾರೆ.
 ಶಿಡ್ಲಘಟ್ಟ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ರಜಾ ದಿನಗಳಲ್ಲಿ ಉಚಿತ ಕಲಾ ಶಿಬಿರಗಳನ್ನು ಏರ್ಪಡಿಸುತ್ತಾ ಗ್ರಾಮೀಣ ಮಕ್ಕಳನ್ನು ಕಲಾ ಶಿಕ್ಷಣದೆಡೆಗೆ ಸೆಳೆಯುತ್ತಿದ್ದಾರೆ. ಮಕ್ಕಳನ್ನು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿಗೊಳಿಸುತ್ತಿದ್ದಾರೆ.
 ಜಾನಪದ ಶಿವಗಂಗೆ ಕಲಾಮೇಳ, ಕಿನ್ನಾಳ ಕಲೆ ಕಾರ್ಯಾಗಾರ, ಜಲವರ್ಣ ನಿಸರ್ಗ ಚಿತ್ರಕಲಾ ಶಿಬಿರ, ಟೆರ್ರಾಕೋಟ ಕಲಾ ಶಿಬಿರ, ಆಳ್ವಾಸ್ ವರ್ಣ ಜಾಗೃತಿ ಬೃಹತ್ ಶಿಬಿರಗಳಲ್ಲಿ ಪಾಲ್ಗೊಂಡು ಅನುಭವ ಹೆಚ್ಚಿಸಿಕೊಂಡಿದ್ದಾರೆ. ವಿವಿಧ ಪುಸ್ತಕಗಳಿಗೆ ರೇಖಾ ಚಿತ್ರಗಳು ಮತ್ತು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕೆಲವು ಶಾಲೆಗಳನ್ನೂ ಚಿತ್ರಕಲೆಯಿಂದ ಅಲಂಕರಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗೀತಚಿತ್ರಗಳನ್ನು ರಚಿಸಿದ್ದಾರೆ. ಮೈಸೂರು ದಸರಾ ವಸ್ತು ಪ್ರದರ್ಶನಲ್ಲಿ ಪ್ರಶಸ್ತಿ ಸೇರಿದಂತೆ ವಿವಿಧ ಚಿತ್ರಕಲಾ ಪುರಸ್ಕಾರಗಳನ್ನು ಪಡೆದಿದ್ದಾರೆ.
 ‘ನಾನು ಚಿಕ್ಕಂದಿನಲ್ಲೇ ಚಿತ್ರಕಲೆಯಲ್ಲಿ ಆಕರ್ಷಿತನಾದೆ. ಹೈಸ್ಕೂಲಿನಲ್ಲಿದ್ದಾಗ ನನ್ನ ಶಿಕ್ಷಕರಾದ ನಟರಾಜ್ ಪ್ರೋತ್ಸಾಹದಿಂದ ತಾಲ್ಲೂಕು ಮಟ್ಟದ ಚಿತ್ರಕಲೆಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದೆ. ನಂತರ ಜಿಲ್ಲಾ ಮಟ್ಟದಲ್ಲೂ ಬಹುಮಾನ ಪಡೆದೆ. ಅಂದೇ ಚಿತ್ರಕಲೆಯಲ್ಲೇ ಮುಂದುವರೆಯಲು ಪಣತೊಟ್ಟೆ. ತುಮಕೂರಿನಲ್ಲಿನ ರವೀಂದ್ರ ಕಲಾನಿಕೇತನದಲ್ಲಿ ಐದು ವರ್ಷದ ಕೋರ್ಸ್ ಮುಗಿಸಿ ಊರಿಗೆ ವಾಪಸಾದೆ. ಆಗ ಕೆಲಸ ಸಿಗದೆ ಬೋರ್ಡ್ ಹಾಗೂ ಫಲಕಗಳನ್ನು ಬರೆಯುವ ಅಂಗಡಿ ತೆರೆದಿದ್ದೆ. ನಂತರ ಸರ್ಕಾರಿ ಕಲಾ ಶಿಕ್ಷಕನಾಗಿ ಕೆಲಸ ಸಿಕ್ಕ ಮೇಲೆ ಚಿತ್ರಕಲೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ’ ಎಂದು ತಮ್ಮ ಕಲಾ ಜೀವನದ ಬಗ್ಗೆ ಎಂ.ನಾಗರಾಜು ತಿಳಿಸಿದರು.
 ‘ದಿವಂಗತ ಎಸ್.ಎಂ.ಪಂಡಿತ್ ಅವರ ಪ್ರೇರಣೆಯಿಂದ ಮೊದಲು ಕ್ಯಾಲೆಂಡರ್ ಆರ್ಟ್‌ಗಳನ್ನು ಮರುನಿರ್ಮಾಣದಲ್ಲಿ ಆಸಕ್ತಿಯಿತ್ತು. ನಂತರ ಪ್ರಕೃತಿ ಚಿತ್ರಗಳತ್ತ ಒಲವು ಹರಿಯಿತು. ಅರಸೂರ್, ಅಡಪದ್ ಮತ್ತು ಮಣಿ ಮುಂತಾದ ಹಿರಿಯ ಕಲಾವಿದರಿಂದ ಪ್ರೇರಿತನಾಗಿ ನೈಜ ಚಿತ್ರಕಲೆಯಿಂದ ಈಗ  ನವ್ಯದೆಡೆಗೆ ಆಸಕ್ತಿ ಹರಿದಿದೆ. ಸುಮಾರು ೫೦ ಕಲಾಕೃತಿಗಳನ್ನು ಈಗಾಗಲೇ ತಯಾರಿಸಿರುವೆ. ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವೆ. ನನ್ನ ಗುರುಗಳಿಂದಾಗಿ ನಾನು ಚಿತ್ರಕಲೆಯತ್ತ ಆಕರ್ಷಿತನಾದೆ. ಹಾಗಾಗಿ ಸೃಜನಶೀಲ ಮಕ್ಕಳಿಗೆ ಮಾರ್ಗದರ್ಶನ ನೀಡಿ ಚಿತ್ರಕಲೆಯಲ್ಲಿ ಸಾಧನೆ ಮಾಡುವಂತೆ ಮಾಡುವುದು ನನ್ನ ಪ್ರಮುಖ ಉದೇಶ. ನಮ್ಮ ಗ್ರಾಮದಲ್ಲಿ ಕಲಾ ಗ್ಯಾಲರಿಯೊಂದನ್ನು ನಿರ್ಮಿಸಿ ಕಲಾ ಕೇಂದ್ರವಾಗಿಸುವುದು ನನ್ನ ಕನಸು’ ಎಂದು ತಮ್ಮ ಆಸಕ್ತಿಯನ್ನು ವಿವರಿಸಿದರು.














No comments: