ವೆಂಕಟರಮಣನ ಸಂಕಟಗಳು ಒಂದಾ ಎರಡಾ...
ಅವನ ಮದುವೆ ಕಥೆ ಅವನ ಬಾಯಲ್ಲೇ ಕೇಳೋಣ...
ಮದನಪಲ್ಲಿಯಿಂದ ನಮ್ಮಣ್ಣ ಬರುತ್ತಿದ್ದಂತೆಯೇ ನಮ್ಮಜ್ಜಿಯ ರಾಗ ಶುರುವಾಗುತ್ತಿತ್ತು. ಹಳೇ ಗ್ರಾಮಾಫೋನ್ ಪ್ಲೇಟಿನಂತೆ ಒಂದೇ ರಾಗ.. "ಇವನಿಗೊಂದು ಹೆಣ್ಣು ನೋಡೋ. ಬೇಗ ಮದುವೆ ಮಾಡೋಣ.."
"ಇನ್ನೂ ಎರಡು ವರ್ಷ ಬೇಡಣ್ಣ. ಅಜ್ಜಿ ಮಾತು ಕೇಳ್ಬೇಡ" ಅಂತ ನಮ್ಮಣ್ಣನಿಗೆ ಹೇಳುತ್ತಿದ್ದೆ.
ನಮ್ಮಣ್ಣ ಊರೂರು ಸುತ್ತಿದವನು. ಯಾವಾಗ ಯಾರನ್ನು ಹೇಗೆ ಮಾತಾಡಬೇಕೆಂದು ಅರಿತವನು. ಇಬ್ಬರಿಗೂ ತಲೆ ಸವರುತ್ತಿದ್ದ!
ಒಮ್ಮೆ ಮದನಪಲ್ಲಿಗೆ ಅಣ್ಣನ ಮನೆಗೆ ಹೋಗಿದ್ದೆ. ಆಗ ಅಣ್ಣ ಸ್ನೇಹಿತರ ಮನೆಗೆ ಹೋಗಬೇಕು ಬಾ ಎಂದು ನನ್ನನ್ನು ಕರೆದುಕೊಂಡು ಹೋದ. ಅಲ್ಲಿಗೆ ಹೋದ ಮೇಲೆ ಗೊತ್ತಾಯಿತು ಹೆಣ್ಣು ನೋಡಲು ಎಂದು. ನನಗೆ ಗಾಬರಿ, ಕೋಪ ಒಟ್ಟೊಟ್ಟಿಗೇ ಬಂತು. ಅವರ ಮನೆಯಲ್ಲಿ ಇಬ್ಬರು ಹುಡುಗಿಯರು. ನನ್ನ ಪುಣ್ಯ.. ಅವರಿನ್ನೂ ಓದಬೇಕು ಈಗಲೇ ಮದುವೆ ಮಾಡುವುದಿಲ್ಲ ಅಂದುಬಿಟ್ಟರು. ಆದರೆ ಅಣ್ಣನ ಮಾತಿನ ಮೋಡಿಗೆ ಪುಂಗಿಯ ಎದುರಿಗೆ ತಲೆದೂಗುವ ಹಾವಿನಂತಿದ್ದ ಅವರು, "ಇಲ್ಲೇ ಪೀಲೇರಿನಲ್ಲಿ ನಮ್ಮ ನೆಂಟರಿದ್ದಾರೆ. ಅವರ ಮನೆಯಲ್ಲೊಂದು ಹೆಣ್ಣಿದೆ ನಡೀರಿ ಹೋಗೋಣ" ಎಂದು ಹೊರಡಿಸಿಬಿಟ್ಟರು.
ದುರುಗುಟ್ಟಿ ನೋಡುತ್ತಿದ್ದ ನನ್ನನ್ನು, "ಏ! ನೋಡಿದ ತಕ್ಷಣ ಆಗ್ಬಿಡುತ್ತಾ ಸುಮ್ನಿರೋ" ಅಂದ ಅಣ್ಣ.
ಪೀಲೇರಿಗೆ ಹೋದೆವು. ಅವರ ಮನೆಯಲ್ಲಿ ಕಾಫಿ ತಿಂಡಿ ತಿನ್ನುವಾಗ ಡಿವಿಡಿಯಲ್ಲಿ ಫಾರ್ವರ್ಡ್ ಬಟನ್ ಒತ್ತಿದಂತೆ ಟುಯ್ ಟುಯ್ ಎಂದು ಹುಡುಗಿ ಬಂದು ಹೋಗಿಬಿಟ್ಟಳು.
ಹುಡುಗಿಯ ತಂದೆ ಬಂದು ನಮ್ಮಣ್ಣನನ್ನು, "ಹುಡುಗ ಹುಡುಗೀನ ನೋಡಿದ್ನಲ್ಲ. ಓಕೆನಾ?" ಅಂದರು.
ಅಣ್ಣ, "ಹುಂ..ಓಕೆ..ಓಕೆ" ಅಂದ.
ದುರುಗುಟ್ಟಿ ನೋಡುತ್ತಿದ್ದ ನನ್ನನ್ನು ನೋಡಿ ವೆಂಕಟೇಶ್ವರನಂತೆ ಹಸ್ತವನ್ನು ತೋರಿಸುತ್ತಾ ಸುಮ್ಮನಿರು ಅನ್ನುತ್ತಿದ್ದಾನೆ.
ಬರುವಾಗ ದಾರಿಯಲ್ಲಿ, "ಯಾಕಣ್ಣ ಹೀಗೆ ಮಾಡಿದೆ? ನೀನು ಮಾಡಿದ್ದು ಸರಿಯಿಲ್ಲ... ನಾನು ಹುಡುಗೀನ ಸರಿಯಾಗಿ ನೋಡಿಲ್ಲ... ನೀನ್ಯಾಕೆ ಇಷ್ಟ ಆಯ್ತು ಅಂತ ಹೇಳಿದೆ?" ಒಳಗಿದ್ದ ಸಿಟ್ಟೆಲ್ಲ ಕಾರತೊಡಗಿದೆ.
"ಸುಮ್ನಿರೊ... ನಿಮ್ಮ ಹುಡುಗಿ ಚೆನ್ನಾಗಿಲ್ಲ... ಇಷ್ಟ ಆಗಲಿಲ್ಲ.. ಅಂತ ಮುಖದ ಮೇಲೆ ಹೊಡೆದಂಗೆ ಹೇಳೊಕಾಗುತ್ತಾ..? ಈಗೇನು ಬರೀ ನೋಡಿ ತಾನೆ ಬರ್ತಿರೋದು... ಇಷ್ಟಕ್ಕೇ ಮದುವೆ ಆಗಿಬಿಡುತ್ತಾ?" ಮತ್ತೆ ಅಣ್ಣ ತಲೆ ಸವರಿದ.
ಮನೆಗೆ ಬಂದು ಅಣ್ಣ ಅದೇನು ಹೇಳಿದನೋ ತಿಳಿಯದು ಮನೆಯವರೆಲ್ಲ ನಾವೂ ನೋಡಿಬರುತ್ತೇವೆಂದು ಹೇಳಿ ಪೀಲೇರಿಗೆ ಹೋಗಿ ಬಂದರು.
"ಹುಡುಗಿ ಚೆನ್ನಾಗಿದ್ದಾಳಲ್ಲ... ನೀನ್ಯಾಕೆ ಬೇಡ ಅಂತೀಯ? ಒಂದ್ಕೆಲ್ಸ ಮಾಡು.. ನಿನ್ನ ಫ್ರೆಂಡ್ ನಾರಾಯಣನನ್ನು ಕರೆದುಕೊಂಡು ಹೋಗಿ ಸರಿಯಾಗಿ ನೋಡಿಕೊಂಡು ಬಾ..." ಎಂದು ಮನೆಯಲ್ಲಿ ಹೊಸ ರಾಗ ಪ್ರಾರಂಭಿಸಿದರು.
ಹರಕೆಯ ಕುರಿಯಂತೆ ನಾರಾಯಣನ ಜೊತೆ ಹೊರಟೆ. ಅವರ ಮನೆಯಲ್ಲಿ ಹುಡುಗಿ ಕೈಯಲ್ಲಿ ಕಾಫಿ ತಿಂಡಿ ಕೊಡಿಸಿದರು. ಹುಡುಗಿಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮುಜುಗರ. ವಾರೆಗಣ್ಣಲ್ಲಿ ನೋಡಿದೆ..!
"ಹೇಗಿದ್ದಾಳಯ್ಯ ಹುಡುಗಿ?" ನಾರಾಯಣನನ್ನು ಕೇಳಿದೆ.
"ಸುಮ್ನಿರಯ್ಯ ಆಮೇಲೆ ಮಾತಾಡೋಣ..." ಎನ್ನುತ್ತಾ ಅವನು ತಿಂಡಿ ತಿನ್ನುತ್ತಿದ್ದಾನೆ!
ಇನ್ನೇನು ಹೊರಡಬೇಕು ಆಗ ಪುಟ್ಟ ಹುಡುಗಿಯೊಬ್ಬಳು ಬಂದು "ಅಂಕಲ್ ಆಂಟಿ ನಿಮ್ಮ ಜೊತೆ ಮಾತಾಡಬೇಕಂತೆ" ಅಂದಳು.
"ನೋಡಯ್ಯ ಹುಡುಗಿ ನಿನ್ನ ಜೊತೆ ಮಾತಾಡಬೇಕಂತೆ... ಸರಿಯಾಗಿ ನೋಡು... ನನ್ನ ತಲೆ ತಿನ್ಬೇಡ..." ಎಂದು ನಾರಾಯಣ ಒಣಗಿದ್ದ ನನ್ನ ಬಾಯಿಗೆ ಮೆಣಸಿನಕಾಯಿ ಅರೆದ.
ಅವರ ಮನೆಪಕ್ಕ ಹೂಗಿಡಗಳಿವೆ. ಅದರ ನಡುವೆ ಬಾವಿಯಿದೆ. ಆ ಬಾವಿ ಪಕ್ಕ ನಿಂತೆ. ದೂರದಲ್ಲಿ ನಿರ್ದೇಶಕನಂತೆ ನಾರಾಯಣ ನಿಂತ.
ಹುಡುಗಿ ಬಂದಳು... ನನ್ನ ಎದೆ ಡವ ಡವ...
"ನಿಮ್ಮನ್ನೇನೋ ಕೇಳ್ಬೇಕು... ಏನೂ ಅನ್ಕೋಬೇಡಿ..." ಅಂದಳು.
"ಏನು?" ಆಳದ ಬಾವಿಯೊಳಗಿಂದ ಬಂದಂತಿತ್ತು ನನ್ನ ಸ್ವರ!
"ಎರಡು ಸಾವಿರ ರೂಪಾಯಿ ಬೇಕಾಗಿತ್ತು..." ಅಂದಳು.
"ಆಂ.." ಬೆವೆತಿದ್ದ ಹಣೆಯನ್ನು ಒರೆಸಲೂ ಕೈ ಮೇಲೇರುತ್ತಿಲ್ಲ.
"ವಾಪಸ್ ಕೊಡ್ತೀನಿ... ಸಾಲ ಅಂತ ಕೊಡಿ.."
ಅಬ್ಬಬ್ಬಾ.. ಆಂಧ್ರ ಹುಡುಗೀರು ಗಟ್ಟಿಗಿತ್ತಿಯರು... ಆದ್ರೆ ಈ ರೀತಿಯಾ..?
"ಇಲ್ಲ ಇಲ್ಲ... ನನ್ಹತ್ರ ದುಡ್ಡಿಲ್ಲ... ಕೊಡಲ್ಲ.." ತೊದಲಿದೆ.
ದೂರದಲ್ಲಿ ನಾರಾಯಣ ಮ್ಯೂಸಿಕ್ ಡೈರೆಕ್ಟರ್ ಥರಹ ಕೈಸೈಗೆ ಮಾಡುತ್ತಿದ್ದಾನೆ.
"ನೆಕ್ಸ್ಟ್ ಟೈಮ್ ಬಂದಾಗ ವಾಪಸ್ ಕೊಡ್ತೀನಿ ಕೊಡಿ..."
ಈಗ್ಲೆ ಹೀಗೆ... ಇನ್ನು ಮದುವೆಯಾದರೆ..? ನನಗೇನೂ ತೋಚದೆ ಸೀದಾ ನಾರಾಯಣನ ಬಳಿ ಬಂದು, "ನಡಿಯಯ್ಯಾ ಹೋಗೋಣ..." ಎಂದು ಹೊರಡಿಸಿದೆ.
"ಸರಿಯಾಗಿ ಮಾತಾಡ್ದೇನಯ್ಯಾ?" ಅವನ ಪ್ರಶ್ನೆ.
"ಹುಡುಗಿ ಎರಡು ಸಾವಿರ ದುಡ್ಡು ಕೇಳಿದ್ಲಯ್ಯಾ.." ಅಂದೆ.
"ಏ ಬಿಡಯ್ಯ.. ಏನೋ ತಮಾಷೆಗೆ ಕೇಳಿರಬೇಕು.. ಹುಡುಗಿ ಇಷ್ಟತಾನೇ?"
ನಾರಾಯಣನ ಮಾತಿಗೂ ನನ್ನ ಆಲೋಚನೆಗೂ ತಾಳೆಯಾಗುತ್ತಿಲ್ಲ.
ಮದನಪಲ್ಲಿಗೆ ಬಂದೆವು. ನಾಗಾರ್ಜುನನ "ಸಿಸಿಂದ್ರಿ" ಫಿಲಂ ರಿಲೀಜ್ ಆಗಿತ್ತು. ಹೋದೆವು. ನಾರಾಯಣ ನಾಗಾರ್ಜುನನ ಫ್ಯಾನ್. ನೋಡಲೂ ಹಾಗೇ ಇದ್ದಾನೆ. ಹಾಗಾಗಿ ಹುಡುಗಿ ಹೇಗಿದ್ದಾಳೆಂದು ಸರಿಯಾಗಿ ಹೇಳುತ್ತಾನೆಂಬ ಭ್ರಮೆ ನನ್ನದು.
"ಹುಡುಗಿ ಸಣ್ಣ... ಬಣ್ಣ ಅಷ್ಟಕ್ಕಷ್ಟೇ... ಚೆನ್ನಾಗಿಲ್ಲ ಅಲ್ವೇನಯ್ಯಾ?" ನಾರಾಯಣನ ತಲೆ ತಿನ್ನಲು ಪ್ರಾರಂಭಿಸಿದೆ. ಆ ಚಲನಚಿತ್ರದಲ್ಲಿ ಹೀರೋಯಿನ್ ಆಮನಿಯ ಜೊತೆಯಲ್ಲಿ ಸಣ್ಣಗಿರುವ ಹುಡುಗಿಯೊಬ್ಬಳಿರುತ್ತಾಳೆ. ಅವಳನ್ನು ತೋರಿಸುತ್ತಾ, "ನೋಡ್ಕೊಳ್ಳಯ್ಯ... ಹೀಗೇ ಇರೋದು ಹುಡುಗಿ.. ಇವಳೇ ಅನ್ಕೋ... ನಾನು ಬಡ್ಕೊಂಡೆ... ಸರಿಯಾಗಿ ನೋಡು.. ಮಾತಾಡ್ಸು.." ಎಂದು ನಾರಾಯಣ ನನ್ನ ತಲೆ ಗಜಿಬಿಜಿ ಮಾಡಿದ.
ಬೆಳ್ಳಿತೆರೆಗೂ ನಿಜಬದುಕಿಗೂ ವ್ಯತ್ಯಾಸವಿದೆಯೆಂಬ ಸಣ್ಣ ವಿಚಾರ ನನ್ನ ತಲೆಗೆ ಹೊಳೆಯಲೇ ಇಲ್ಲ.
ದಾರಿಯಲ್ಲಿ ಬರುವಾಗ, "ಸರಿಯಾಗಿ ಹೇಳು ನಾರಾಯಣ... ನೀನೇ ನನ್ನ ಜಾಗದಲ್ಲಿ ಇದ್ದಿದ್ದರೆ ಆಗ್ತಿದ್ಯಾ?" ಅಂತ ಕೇಳಿದೆ.
"ನೀನು ಆಗಲ್ಲ ಅಂದ್ರೆ ಹೇಳಯ್ಯ... ನಾನೇ ಮದುವೆ ಆಗ್ತೀನಿ" ಅಂದುಬಿಟ್ಟ!
ಫಿಗರ್ ನಾರಾಯಣನೇ ಹೀಗನ್ನಬೇಕಾದರೆ ಗಾಬರಿಯಲ್ಲಿ ನಾನೇ ಸರಿಯಾಗಿ ನೋಡಿಲ್ಲವೇನೋ... ಫಿಲಂನಲ್ಲಿ ನೋಡಿದ ಹುಡುಗಿ... ನಿಜವಾದ ಹುಡುಗಿ... ಎಲ್ಲ ಕಲಸುಮೇಲೋಗರವಾಗಿ ಹುಡುಗಿ ಮುಖವೇ ನೆನಪಾಗದಾಯಿತು!
ಮನೆಯಲ್ಲಿ ಸರಿಯಾಗಿ ನೋಡಿಲ್ಲವೆಂದೇ ಹೇಳಿದೆ.
ಸ್ವಲ್ಪ ದಿನಗಳಾಯ್ತು. ಮನೆಯವರೆಲ್ಲ ಹೋಗಿದ್ದಾಗ ಅಪ್ಪ ಹೋಗಿರಲಿಲ್ಲ. ಈಗ ತಾನೇ ಹೊರಟ. ಎರಡು ಟಾಟಾ ಸುಮೋ ಬಂದವು. ನೆಂಟರು ಪಂಟರು ಎಲ್ಲ ಹತ್ತಿದರು. ದುರ್ಗಮ ದಾರಿಯಲ್ಲಿ ದಿಕ್ಕುತಪ್ಪಿದ ದಾರಿಹೋಕನಂತಾಗಿತ್ತು ನನ್ನ ಸ್ಥಿತಿ. ನಾನು ಯಾರಿಗೂ ಇಲ್ಲಿ ಲೆಕ್ಕಕ್ಕೇ ಇಲ್ಲ.
ಅವರ ಮನೆ ತಲುಪಿದಾಗ ಮದ್ಯಾಹ್ನ ೧೨ ಗಂಟೆ. ಸೂರ್ಯ ಮೇಲೂ ಒಳಗೂ ಸುಡುತ್ತಿದ್ದ. ಅವರೆಲ್ಲ ಗಾಡಿಯಿಂದ ಇಳಿದರೂ ನಾನು ಕೆಳಗಿಳಿಯಲಿಲ್ಲ. ಎಷ್ಟು ಕರೆದರೂ ಸುಮೋ ಬಿಟ್ಟು ಕದಲಲಿಲ್ಲ. ಸುಮಾರು ೧.೩೦ಕ್ಕೆ ಹುಡುಗಿ ಅಣ್ಣ ಬಂದ. ತೆಲುಗು ಫಿಲಂನಲ್ಲಿ ವಿಲನ್ ಪಾತ್ರ ಮಾಡುವ ಕ್ಯಾಪ್ಟನ್ ರಾಜ ಥರ ಇದ್ದಾನೆ. ಬೇಕೆಂದರೆ ನನ್ನನ್ನು ಕಂಕುಳಲ್ಲಿ ಎತ್ತಿಕೊಂಡು ಹೋಗಿಬಿಡಬಲ್ಲ!
"ಬೇಗ ಬಾ... ಎಲ್ಲರೂ ಕಾಯುತ್ತಿದ್ದಾರೆ..." ಎಂದು ಕೈಹಿಡಿದು ಎಳೆದ. ಬಿಡಿಸಿಕೊಳ್ಳುತ್ತಾ ಯಾಕೆ ಎಂದು ಕೇಳಿದೆ.
"ಎಂಗೇಜ್‌ಮೆಂಟ್.. ಬೇಗ ಬಾ.." ಅಂದ.
ತಮಾಷೆ ಮಾಡ್ತಿರಬೇಕು... ಆವತ್ತು ನೋಡಿದರೆ ಎರಡು ಸಾವಿರ ರೂಪಾಯಿ... ಇವತ್ತು ಎಂಗೇಜ್‌ಮೆಂಟ್... ತಿಂಡಿ ತಿನ್ನುವುದಕ್ಕಿರಬೇಕೆಂದುಕೊಂಡು ಹೊರಟೆ.
ಒಳಗೆ ಹೋದೆ. ಗಾಬರಿಯಾಯ್ತು. ಹುಡುಗಿ, ಪುರೋಹಿತ ಎಲ್ಲ ಕುಳಿತಿದ್ದಾರೆ. ಏನು ಮಾಡುವುದೋ ತೋಚಲಿಲ್ಲ. ಅಪ್ಪ "ಕೂತ್ಕೋ" ಅಂದರು.
ಅವರಿಗೆ ಮೂಗಿನ ತುದಿಯಲ್ಲೇ ಕೋಪ. ಇನ್ನೊಮ್ಮೆ ಗಟ್ಟಿಯಾಗಿ "ಕೂತ್ಕೊಳೋ" ಅಂದರು.ಆ ಎಂಗೇಜ್‌ಮೆಂಟ್ ಫೋಟೋ ನೋಡಿದರೆ ನಿಮಗೆ ನನ್ನ ಮುಖಾನೇ ಕಾಣಲ್ಲ. ಬರೀ ಕೋಪ, ಬೇಜಾರು ಮಾತ್ರ ಕಾಣುತ್ತೆ.
"ಯಾಕಣ್ಣ ಹೀಗೆ ಮಾಡಿದೆ" ಎಂದು ಅಣ್ಣನನ್ನು ಕೇಳಿದೆ.
"ಈಗ ಏನಾಗಿದೆಯೋ?" ಎಂದು ಏನೂ ತಿಳಿಯದವನಂತೆ ಅಣ್ಣ ನನ್ನನ್ನೇ ಕೇಳಿದ.
"ಹುಡುಗಿ ಸಣ್ಣ, ಕಲರ್ ಕಡಿಮೆ... ನಿನಗೆ ಕಾಣ್ತಿಲ್ವಾ?" ಅಂದೆ.
"ಇನ್ನೊಂದು ತಿಂಗಳು ಬಿಟ್ಟು ಬಂದು ನೋಡು ಹೇಗಿರ್ತಾಳೇಂತ. ಹುಡುಗೀರು ಮದುವೆ ಫೀಕ್ಸ್ ಆದ್ಮೇಲೆ ದಪ್ಪಗಾಗ್ತಾರೆ... ಕಲರ್ ಕೂಡ ಬರ್ತಾರೆ.. ನಮ್ಮೂರಿನ ನೀರಿಗೆ ಇನ್ನೂ ಬೆಳ್ಳಗಾಗ್ತಾಳೆ ಬಿಡೋ.. ನಿನಗೇನು ಗೊತ್ತು" ಎಂದು ನನ್ನ ಬಾಯಿ ಮುಚ್ಚಿಸಿದ.
"ಕೊಡೋದು ಬಿಡೋದು ಏನೂ ಬೇಡ. ನಮ್ಮೂರಲ್ಲಿ ನಾವೇ ಮದ್ವೆ ಇಟ್ಕೋತೀವಿ" ಎಂದು ಅಪ್ಪ ಅವರಿಗೆ ಹೇಳಿದ. ಹೇಳಿದ್ದೇ ಸಾಕಾಯ್ತು ಹೆಣ್ಣಿನವರು ಮನೆ ಕಟ್ಟಿಕೊಂಡರು... ನನ್ನ ತಲೆ ಮೇಲೆ ಚಪ್ಪಡಿ ಪೇರಿಸಿದರು!
ಬಂದೇ ಬಿಡ್ತಲ್ಲ ಆ ದಿನ... ಮದುವೆ ದಿನ.. ಸರ್ಕಾರಿ ಬಸ್ ನೌಕರರ ಪ್ರತಿಭಟನೆಯಿಂದಾಗಿ ಅವತ್ತು ಬಸ್‌ಗಳಿರಲಿಲ್ಲ. ಹೊಸಹುಡ್ಯದ ಪ್ಲೇಗ್‌ಮಾರಮ್ಮ ಚತ್ರ. ಆರತಕ್ಷತೆಗೆ ಎಲ್ಲರೂ ಕಾಯುತ್ತಿದ್ದರು. ಹೆಣ್ಣಿನವರು ತಡವಾಗಿ ಲಾರಿಯಲ್ಲಿ ಬಂದಿಳಿದರು. ಆರತಿ ಬೆಳಗುತ್ತಿರುವಾಗಲೇ ಹೆಣ್ಣು ಡಬ್ ಎಂದು ಬಿದ್ದಳು.
ನನ್ನ ಪಕ್ಕದಲ್ಲಿ ನಿಂತಿದ್ದ ಮಲ್ಲಳ್ಳಿ ಮುನಿಯಪ್ಪ, " ಹೋಗಿ ಹೋಗಿ ಯಾವುದೋ ರೋಗದ ಕೋಳೀನ ತಂದಿದ್ದೀರಲ್ಲ. ನಿಮಗೆ ಬೇರೆ ಹೆಣ್ಣೇ ಸಿಗಲಿಲ್ವಾ? ಎಷ್ಟು ದುಡ್ಡು ಕೊಟ್ರು?" ಎಂದರು. ಭೂಮಿ ಬಾಯ್ಬಿಡಬಾರದಾ ಅನ್ನಿಸಿಬಿಡ್ತು.
ರಿಸೆಪ್ಶನ್‌ಗೆ ಹೆಣ್ಣಿಗೆ ಮೇಕಪ್ ಮಾಡಿದ್ದರು. ಒಳ್ಳೆ ಯಕ್ಷಗಾನದ ಪಾತ್ರದಂತಿತ್ತು. ಸ್ಟೇಜ್ ಮೇಲೆ ಕೂತಿದ್ರೆ... ನಮ್ಮನ್ನು ನೋಡ್ತಿರೋರೆಲ್ಲ ಏನೆಂದು ಕಮೆಂಟ್ ಮಾಡ್ತಿರಬಹುದು ಎಂದು ಆಲೋಚಿಸಿದಷ್ಟೂ ಬೇಸರವಾಗುತ್ತಿತ್ತು.
ನಮ್ಮಣ್ಣ ಆದಿನಾರಾಯಣ, ನಮ್ಮಜ್ಜಿ ಆದೆಮ್ಮ. ಇವರಿಬ್ಬರೂ ನನ್ನನ್ನು ಆಳ ಬಾವಿಗೆ ತಳ್ಳಿದ ಆದಿಮಾನವರು. ಇವರ ಆಲೋಚನೆ ಕೂಡ ಆದಿಮಾನವನಂತೆಯೇ ಇತ್ತು.
ಏನೇನೆಲ್ಲ ಕನಸು ಕಂಡಿದ್ದೆ. ನಾನು ಮದುವೆಯಾಗುವ ಹುಡುಗಿ ಹೇಗಿರಬೇಕೆಂದುಕೊಂಡಿದ್ದೆ. ಹೇಗಾಯ್ತು...
ಮಹೂರ್ತ ಸಮೀಪಿಸಿತು. ಪುರೋಹಿತರು ತಾಳಿ ಕಟ್ಟಲು ಹೇಳಿದರು. ಆಗಲೂ ನನಗೆ ಹಿಂಜರಿಕೆ. ಕಟ್ಟುವುದೋ ಬೇಡವೋ..? ಕಟ್ಟಿದ ಮೇಲೆ ಏನೂ ಮಾಡೋಕಾಗಲ್ವಲ್ಲ! ನಿಲ್ಲಲು ಇದೇನು ಫಿಲಮ್ಮಾ?
ಮದುವೆಯಾಯ್ತು. ಸ್ಟೇಜ್ ಮೇಲೆ ಕುರ್ಚಿ ಹಾಕಿ ಕೂರಿಸಿದರು. ನಾರಾಯಣ ಬಂದ. ಹತ್ತಿರ ಕರೆದು, "ನಿನ್ನ ಎದೆ ಮೇಲೆ ಕೈಯಿಟ್ಟು ಹೇಳಯ್ಯ. ಹುಡುಗಿ ಚೆನ್ನಾಗಿದ್ದಾಳಾ?" ಅಂದೆ.
"ನಾನೇನಯ್ಯ ಮಾಡ್ಲಿ. ನಿಮ್ಮನೆಯವರೆಲ್ಲ ನನ್ನ ಬಾಯಿ ಮುಚ್ಸಿದ್ರು. ಎಲ್ರೂ ಒಪ್ಪಿರೋವಾಗ ಇವನದೇನು. ನೀನೂ ಹುಡುಗಿ ಚೆನ್ನಾಗಿದ್ದಾಳೆ ಅಂತ ಹೇಳ್ಬಿಡು ಅಂದಿದ್ದು. ಋಣಾನುಬಂಧ. ಮುಂದೆ ಸರಿ ಹೋಗುತ್ತೆ ಬಿಡು" ಅಂದ.
ಮುಂದಿನ ಸಾಲಲ್ಲಿ ಸುಂದರವಾದ ಹುಡುಗಿ ಕುಳಿತಿದ್ದಳು. "ಎಷ್ಟು ಚೆನ್ನಾಗಿದ್ದಾಳಲ್ವಾ. ಇವಳನ್ನಾದ್ರೂ ಮದುವೆ ಆಗಿದ್ದಿದ್ರೆ..." ಎಂಬ ಆಲೋಚನೆ ಬಂದು ಮನಸ್ಸು ದುಗುಡಗೊಂಡಿತು. ಅಕ್ಕ ಬಂದವಳು ಅದೇ ಸುಂದರ ಹುಡುಗಿಯನ್ನು ತೋರಿಸಿ, "ಬೆಂಗಳೂರಲ್ಲಿ ರಾಜಣ್ಣ ಮಾವ ಇದ್ದಾರಲ್ಲ ಅವರ ನೆಂಟರ ಹುಡುಗಿ ಮಂಜುಳ ಅಂತ. ನಿನಗೆ ಕೊಡ್ಬೇಕು ಅಂದ್ಕೊಂಡಿದ್ದರಂತೆ. ಅವಳ ಪರೀಕ್ಷೆ ಆಗಲಿ ಎಂದು ಕಾಯುತ್ತಿದ್ದರಂತೆ... ಮಾವ ಹೇಳಿದರು" ಅಂದಳು.
ಕುತ್ತಿಗೆಯಿಂದ ಹಾರ ತೆಗೆದೆ. ಅದರಲ್ಲಿದ್ದ ನೀರು ರೇಷ್ಮೆ ಶರ್ಟಿನ ಮೇಲಿಳಿದು ಕರೆಯಾಗಿತ್ತು...
ಮನುಷ್ಯತ್ವದ ಪರವಾಗಿ ಮಾತನಾಡಲು ಎಂದೂ ಭಯಪಡಬಾರದು
5 hours ago
22 comments:
ಪಾಪ ವೆಂಕಟರಮಣ..!!! ಕಥೆ ಚೆನ್ನಾಗಿದೆ..ಆದರೆ ಯಾಕೆ ಎರಡು ಸಾವಿರ ಕೇಳಿದ್ದು ಅಂತ ಹೇಳಲಿಲ್ಲ....?? ನಮ್ಮ ಕಡೆಯಿಂದ Mrs & Mr ವೆಂಕಟರಮಣ ಅವರಿಗೆ Good Wishes..:-)
ಎಲ್ಲರೂ ಸಂಕಟ ಬಂದಾಗ ವೆಂಕಟರಮಣ ಅನ್ನುತ್ತಾರೆ. ಆದರೆ ಇಲ್ಲಿ ವೆಂಕಟರಮಣನಿಗೇ ಸಂಕಟ ಬಂದಿದೆಯಲ್ಲಾ?:) ಇದು ಸತ್ಯ ಕಥೆಯೋ ಇಲ್ಲಾ ಕಾಲ್ಪನಿಕವೋ? ಕಾಲ್ಪನಿಕವಾದರೆ ತುಂಬಾ ಉತ್ತಮ ಹಾಸ್ಯಮಯ ಕಥೆ. ಸತ್ಯ ಕಥೆಯಾದರೆ ಸಣ್ಣ ವ್ಯಥೆ ಮೂಡುತ್ತದೆ. ಸೌಂದರ್ಯ ಬೇಕು ನಿಜ. ಆದರೆ ಅದೇ ಅಂತಿಮ ಅಲ್ಲ. ಸುಂದರ ಮೊಗದ ಹಿಂದಿನ ಕುರೂಪತೆ ಹೇಗೆ ಕಾಣದೋ ಹಗೆಯೇ ಸಾಮಾನ್ಯ ರೂಪಿನ ಒಳಗಣ ಸುಂದರ ಮನಸೂ ಒಮ್ಮೆಗೇ ಕಾಣದು. ಈ ಕಿವಿ ಮಾತನ್ನು ವೆಂಕಟರಮಣನಿಗೆ ನಾರಾಯಣ ಹೇಳಿದ್ದರೆ ಸ್ವಲ್ಪವಾದರೂ ನಗುವ ಫೋಸ್ ನೀಡುತ್ತಿದ್ದ ಎಂದೆನಿಸಿತು!
ಮಲ್ಲಿಕಾರ್ಜುನ್,
ಪಾಪ ವೆಂಕಟರಮಣ ! ಹುಡುಗಿ ಚೆಂದ ಇದ್ದಳೋ - ಇಲ್ಲವೋ ಅನ್ನೋದಕ್ಕಿಂತ ಅವಳನ್ನು ಸರಿಯಾಗಿ ನೋಡಲು ವೆಂಕಟರಮಣ ಪಟ್ಟ ಕಷ್ಟಕ್ಕೆ ಪಾಪ ಎನಿಸಿತು !
ಹೋಗಲಿ ಬಿಡಿ, ಚೆಂದದ ಮುಖ ಮಾತ್ರವಲ್ಲ ಮನಸ್ಸು ಕೂಡ ಮುಖ್ಯ ! ಆದರೂ ಹೀಗೇ ಮೋಸ ಮಾಡಬಾರದಿತ್ತು ಅಜ್ಜಿ -ಅಣ್ಣ ಇಬ್ಬರೂ !
ಮಲ್ಲಿಕಾರ್ಜುನ್ ಅವರೇ,
ವೆಂಕಟರಮಣ ಕಲ್ಯಾಣ ಚರಿತೆ ಮೂಲಕ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದೀರಿ. ನನಗೂ ಕನ್ಯೆ ಹಣ ಕೇಳಿದ್ದು ಯಾಕೆ ಅಂತ ತಿಳಿಯಲಿಲ್ಲ.
"ಡಿವಿಡಿಯಲ್ಲಿ ಫಾರ್ವರ್ಡ್ ಬಟನ್ ಒತ್ತಿದಂತೆ ಟುಯ್ ಟುಯ್ ಎಂದು ಹುಡುಗಿ ಬಂದು ಹೋಗಿಬಿಟ್ಟಳು..."...ಈ ಸಾಲು ಮಜವಾಗಿದೆ. ಪಾಪ ವೆಂಕಟರಮಣನ ಪರಿಸ್ಥಿತಿ ಯಾರಿಗೂ ಬೇಡ..!
ಹೇಗಿದೆ ಅವರ ಸಂಸಾರ ಈಗ..?
ಮಲ್ಲಿಕಾರ್ಜುನ,
ತುಂಬ ಸರಸವಾದ ನಿರೂಪಣೆ. ಕತೆಯಲೂ ಕ್ಯಾಮರಾದ ಕೈಚಳಕ
ತೋರಿಸುತ್ತಿದ್ದೀರಿ. ಅಭನಂದನೆಗಳು.
ಮಲ್ಲಿಕಾರ್ಜುನ್ ಸರ್,
ಸಕತ್ತಾಗಿದೆ ನಿರೂಪಣೆ...... ಪಾಪ ವೆಂತತ ......ಇದು ಸತ್ಯ ಕಥೆಯಾ...... ಕಲ್ಪನೆಯ ಕಥೆಯಾದರೆ..... ಸೂಪರ್ ಕಲ್ಪನೆ ಸರ್...... ತುಂಬಾ ನವಿರಾಗಿ , ರುಚಿಯಾಗಿ ನಿರೂಪಣೆ ಮಾಡಿದ್ದೀರಾ........
ಕಥೆ ಸಕತ್ತಾಗಿದೆ. ಆದರೆ ಹುಡುಗಿ ಎರಡು ಸಾವಿರ ಕೇಳಿದ್ದು ಯಾಕೆ ಅಂತ ಗೊತ್ತಾಗ್ಲಿಲ್ಲ. :)
ಸೂಪರ್.. :)
ಚೆ೦ದದ ಕಥೆ. ವೆ೦ಕಟನ ವ್ಯಥೆ. ಹುಡುಗಿ ೨೦೦೦ರೂ ಕೇಳಿದ್ದೇಕೆ ಇದು ಎಲ್ಲರ೦ತೆ ನನ್ನ ಪ್ರಶ್ನೆ.
ವೆ೦ಕಟರಮಣನ ಸ೦ಕಟದ ಕಥೆ ಚೆನ್ನಾಗಿದೆ. ಸುನಾಥರು ಹೇಳಿದ೦ತೆ ಕ್ಯಾಮೆರಾದಲ್ಲಿ ನ ನಿಮ್ಮ ಕೈಚಳಕ ದ೦ತೆ
ಕಥೆಗಾರಿಕೆಯಲ್ಲೂ ನೀವು ಪಳಗಿರುವುದು ಖುಷಿ ತ೦ದಿದೆ. ಇನ್ನಷ್ಟು ಕಥೆಗಳ ನಿರೀಕ್ಷೆಯಲ್ಲಿ .....
ha ha ha...
Venkata in Sankata :P
ಈ ಕಥೆಯನ್ನು ‘ತಿಂಗಳು’ ಪತ್ರಿಕೆಯಲ್ಲಿ ಓದಿ ಇಲ್ಲಿ ನೋಡಿದೆ. ಮನೆಯವರೆಲ್ಲಾ ಮದುವೆಯ ಹುಡುಗ ಅಥವಾ ಹುಡುಗನನ್ನು ನಯವಾಗಿ ಹಳ್ಳಕ್ಕೆ ತಳ್ಳುವ ಪರಿಯನ್ನು ಸೊಗಸಾಗಿ ಚಿತ್ರಿಸಿರುವಿರಿ
ವೆಂಕಟರಮಣನಿಗೆ ಶುಭ ಹಾರೈಕೆಗಳನ್ನು ತಿಳಿಸಿ
ತುಂಬಾ ಚೆನ್ನಾಗಿದೆ ಕಥೆ
ಮಲ್ಲಿ, ಮತ್ತೆ ನನ್ನನ್ನ ಮದನಪಲ್ಲಿಗೆ ಮತ್ತೆ ಪೀಲೇರಿಗೆ ಕರೆದೊಯ್ದಿರಿ.....ಹಹಹ...ನಿಮ್ಮ ಕ್ಯಾಮರನಷ್ಟೇ ಚೂಟಿಯಾಗಿದೆ ಲೇಖನಿ ಹಿಡಿತ...ಸಂಕಟ ಬಂದಾಗ ವೆಂಕಟರಮಣ...ಅಲ್ಲಲ್ಲ ವೆಂಕಟ ಬಂದಾಗ ಸಂಕಟರಮಣ...ಹಹಹ...........ಆದ್ರೆ ಪ್ರಕಾಶ್ ಕಥೆ ನೋಡಿದ್ರಲ್ಲಾ...ರೂಪ-ಶಾಪ ಆಗ್ಬಾರ್ದು ಅಲ್ವಾ?
ಈ ತರಹದ ಸಂಕಟ ಬಂದ್ರೆ 'ವೆಂಕಟರಮಣ' ನಿಗೂ ಏನು ಮಾಡಕ್ಕಾಗಲಿಲ್ವೆ!!! ಒಳ್ಳೇ ಸ್ವಾರಸ್ಯವಾದ ನಿರೂಪಣೆ ಮಲ್ಲಿ!
ಕುತೂಹಲಭರಿತವಾಗಿತ್ತು ವೆಂಕಟರಮಣನ ಕಥೆ. ಕಥೆಯ ನಡುವಿನ ಫ್ರೇಮ್ ಗಳು ಚೆನ್ನಾಗಿವೆ.
ಮಲ್ಲಿಕಾರ್ಜುನ ಸರ್, ಸರಳವಾಗಿದ್ದು ಕುತೂಹಲದಿಂದ ಕೂಡಿದೆ. ಆದರೆ ಹುಡುಗಿ ಸಾಲ ಕೇಳಿದ್ದು ಯಾಕಿರಬಹುದು? ಎಂಬ ಯೋಚನೆ ಕೊರೆಯುತ್ತಿದೆ.
ಸ್ನೇಹದಿಂದ,
ಮಲ್ಲಿಕಾರ್ಜುನ್ ಸಾರ್
ಕಥೆ ಚೆನ್ನಾಗಿದೆ... ಪಾಪ ವೆಂಕಟರಮಣ... ಆದರೆ ಎಲ್ಲರೂ ಕೇಳಿದ ಪ್ರಶ್ನೆಯೇ...ಹುಡುಗಿ ೨೦೦೦ ಏಕೆ ಕೇಳಿದಳು ಅಂತ ದಯವಿಟ್ಟು ಉತ್ತರ ಹೇಳಿ....
ಶ್ಯಾಮಲ
ತುಂಬಾ ಚೆನ್ನಾಗಿದೆ ಕಥೆ...
ಸ್ನೇಹಿತರೆ,
ವೆಂಕಟರಮಣನ ಹೆಂಡತಿ ತನ್ನ ತಂಗಿಯೊಂದಿಗೆ ಬೆಟ್ ಕಟ್ಟಿದ್ದರಂತೆ. ಹಾಗಾಗಿ ಎರಡು ಸಾವಿರ ರೂ ಕೇಳಿದ್ದು!
ನಿಮ್ಮ ಎಲ್ಲಾ ಕಮೆಂಟುಗಳನ್ನು ವೆಂಕಟರಮಣ ಓದಿದ. ಈಗ ಅವನದು ಸುಖಮಯ ದಾಂಪತ್ಯ!!! ೧೩ ವರ್ಷದ ಮಗ ಮತ್ತು ೧೧ ವರ್ಷದ ಮಗಳಿದ್ದಾಳೆ. ಅವನ ಹೆಂಡತಿಗೂ ಈ ಕಥೆ ಓದಿ ಹೇಳಿ ಮೂತಿ ತಿವಿಸಿಕೊಂಡಿದ್ದಾನೆ! ಅವನ ಮಕ್ಕಳೂ ನಕ್ಕು ಅವನನ್ನು ರೇಗಿಸಿದ್ದಾರೆ.
ಮಲ್ಲಿಕಾರ್ಜುನ ಸರ್,
ವೆಂಕಟರಮಣನ ಸಂಕಟಗಳನ್ನು
ನಿಮ್ಮ ಬ್ಲಾಗ ಮತ್ತು ತಿಂಗಳು ಮಾಸಪತ್ರಿಕೆಯಲ್ಲಿಯೂ
ಬಂದಿರುವುದು ತುಂಬಾ ತಮಾಷೆಯಾಗಿ ಬಂದಿದೆ.
ಇಂತಹ ಪ್ರಯತ್ನಗಳಲ್ಲಿ ಫೋಟೊಗಳನ್ನು ಹಾಕುವದನ್ನು ಮರೆಯಬೇಡಿ.
what a beautiful story.......... marrege uta da bagge barle illa... en mosari... innomme hendathina sariyagi nodlike heli. nale dina mistake madkobardalva..........
Post a Comment