Sunday, January 17, 2010

ಬೆವರ ಜೊತೆ ರಕ್ತವೂ ಹರಿದಿದೆ. ದಿ ಬೆಸ್ಟ್ ಪಿಚ್ಚರ್ ಸಿಗುತ್ತೆ ಬಿಡಿ

ಮೊಣಕಾಲಿಗೂ ಮೇಲೆ ನೀರು ಹರಿಯುತ್ತಿತ್ತು. ನುಣುಪಾದ ಬೆಣಚು ಕಲ್ಲುಗಳ ಮೇಲೆ ಜಾರದಂತೆ ಹುಷಾರಾಗಿ ನಿಂತಿದ್ದೆ. ಹಿಂದೆ ಒಣಗಿದ್ದ ಮರವೊಂದಿತ್ತು. ಅದರ ರೆಂಬೆಗೆ ಬೆನ್ನು ತಾಗಿಸಿ ನಿಂತಿದ್ದೆ. ಕೈಯಲ್ಲಿ ಒಂದೂವರೆ ಕೆಜಿ ತೂಕದ ಕ್ಯಾಮೆರಾ ಇದ್ದದ್ದರಿಂದ ಇಷ್ಟೆಲ್ಲ ಮುಂಜಾಗರೂಕತೆಗೆ ಬೇಕಿತ್ತು. ನನ್ನ ಪಕ್ಕದಲ್ಲಿ ಶಿವು ಇದ್ದರು. ಅವರದೂ ಅದೇ ಕಥೆ. ನಾಗೇಂದ್ರರದ್ದು ಕ್ಯಾಮೆರಾ ಚಿಕ್ಕದಿದ್ದುದರಿಂದ ಸ್ವಲ್ಪ ಮುಂದಿದ್ದರು.
ದೂರದಲ್ಲಿ ಮಕ್ಕಳು ನೀರಲ್ಲಿ ಆಡುತ್ತಿದ್ದರು. ಅವರ ನಮ್ಮ ನಡುವೆ ಮೇಲೆ ರಸ್ತೆಗಾಗಿ ಮಾಡಿರುವ ಸೇತುವೆ. ಸೇತುವೆಯ ಎರಡು ಕಂಬಗಳ ನಡುವಿನಿಂದ ನಾವು ಮಕ್ಕಳನ್ನು ನೋಡಬಹುದಿತ್ತು. ಆ ದಿನ ಮಕ್ಕಳಿಗೆ ನೀರಿನಲ್ಲಿ ಆಡಲು ಬಣ್ಣಬಣ್ಣದ ಚೊಂಬು ತಟ್ಟೆಗಳನ್ನು ಕೊಟ್ಟಿದ್ದೆವು. ನೀರೇ ಮಕ್ಕಳಿಗೆ ದೊಡ್ಡ ಆಟಿಕೆ. ಅಂತಹುದರಲ್ಲಿ ಪ್ರೋತ್ಸಾಹಿಸುವಂತೆ ಅವರಿಗೆ ಆಟಿಕೆಗಳನ್ನೂ ಕೊಟ್ಟರೆ ಅವರನ್ನೆಲ್ಲಾ ಹಿಡಿಯುವರುಂಟೆ?
"ಸುಹಾಸ ಇತ್ತ ಬಾ. ಅಶ್ವಿನಿ ಅತ್ತ ನಿಲ್ಲು. ಭರತ ಮುಂದೆ ಹೋಗು..." ಎಂದು ನಾಗೇಂದ್ರ ಕೂಗುತ್ತಿದ್ದರು. ಮಕ್ಕಳು ಅವರದೇ ಆದ ಸಂಭ್ರಮದಲ್ಲಿ ಅವರಿದ್ದರು. ಇವರು ಇತ್ತ ಕಡೆಯಿಂದ ಕೂಗುತ್ತಿದ್ದುದು ಅವರಿಗೇನು ಕೇಳಿಸುತ್ತಿತ್ತೋ ಅವರಿನ್ನೇನೋ ಮಾಡುತ್ತಿದ್ದರು. ಹೇಳಿದ ಮಾತು ಕೇಳುತ್ತಿಲ್ಲವಲ್ಲ ಎಂದು ನಾಗೇಂದ್ರರಿಗೆ ಬೇಸರ ಕೋಪ ಎಲ್ಲ ಒಂದೇ ಬಾರಿ ಉದ್ಭವಿಸಿತು. ತಕ್ಷಣ ಪಕ್ಕದಲ್ಲಿದ್ದ ವಿ.ಡಿ.ಭಟ್, "ನಾಗೇಂದ್ರ ನೀವು ಹೇಳ್ತಾ ಇರಿ. ಮಕ್ಕಳು ಬೇಕಾದ್ದು ಮಾಡ್ತಾ ಇರಲಿ. ಆಗ ನಾವು ತೆಗೆದದ್ದೆಲ್ಲ ಒಳ್ಳೆ ಚಿತ್ರಗಳಾಗ್ತವೆ" ಎಂಬ ಅಮೂಲ್ಯ ಸಲಹೆ ಕೊಟ್ಟರು. ಆಗ ಶುರುವಾಯ್ತು ನಮ್ಮ ಕೂಗಾಟ ಮಕ್ಕಳ ನೀರಾಟ! ಜೊತೆಯಲ್ಲೇ ಕ್ಲಿಕ್ಕಿಸುವಿಕೆ ಮುಂದುವರೆದಿತ್ತು.
"ಮಲ್ಲಿಕಾರ್ಜುನ್ ಶಟರ್ ಸ್ಪೀಡ್ ಎಷ್ಟು ಇಟ್ಟಿದ್ದೀರ?" ಎಂದು ಶಿವು ಎಚ್ಚರಿಸಿದರು. "ಬದಲಾಯಿಸುತ್ತಿದ್ದೇನೆ ಶಿವು. ಒಂದಕ್ಕೇ ಫಿಕ್ಸ್ ಆಗಿಲ್ಲ" ಅಂದೆ. "ಗುಡ್. ಬದಲಾಯಿಸುತ್ತಿರಿ. ಯಾವುದು ಸಕ್ಸ್‌ಸ್ ಆಗುತ್ತೋ ಹೇಳಲಾಗದು" ಅಂದರು ಶಿವು.
ಇದ್ದಕ್ಕಿದ್ದಂತೆ ನಾನು ಒರಗಿದ್ದ ಒಣ ಮರದ ರೆಂಬೆ ಲಟಾರನೆ ಮುರಿಯಿತು. ಎರಡೂ ಕೈಲಿ ಕ್ಯಾಮೆರಾ ಇತ್ತು. ಆಸರೆಗೆ ತಡವಿಕೊಳ್ಳಲು ಕೈ ಖಾಲಿ ಇಲ್ಲ. ನಾನು ಬಿದ್ದರೆ ಚಿಂತೆಯಿಲ್ಲ. ಕ್ಯಾಮೆರಾ ನೀರಲ್ಲಿ ಬೀಳಬಾರದಲ್ಲ. ಪಕ್ಕದಲ್ಲಿದ್ದ ಯಾರಿಗೂ ಆ ಕ್ಷಣದಲ್ಲಿ ಇದು ಅರಿವಿಗೆ ಬಂದಿರಲಿಲ್ಲ. ಬೀಳುವಾಗ ಏನೂ ತೋಚದೆ ಕ್ಯಾಮೆರಾ ಅವುಚಿಕೊಂಡು ಹಣೆಯನ್ನೇ ಆಸರೆ ಮಾಡಿಕೊಂಡು ಮರದ ಕಾಂಡಕ್ಕೆ ಗುದ್ದಿದಂತೆ ಒರಗಿದೆ. ಹಣೆಗೆ ಏನೋ ಚುಚ್ಚಿದಂತಾಯ್ತು. ಸಧ್ಯ ಕ್ಯಾಮೆರಾ ಮತ್ತು ನಾನು ನೀರಿನಲ್ಲಿ ಬೀಳುವುದರಿಂದ ಬಚಾವಾಗಿದ್ದೆವು. ತಕ್ಷಣ ಶಿವು, "ಮಲ್ಲಿಕಾರ್ಜುನ್ ಏನಾಯ್ತು" ಎಂದು ಸಹಾಯಕ್ಕೆ ಧಾವಿಸಿದರು. ನಾಗೇಂದ್ರ ಮತ್ತು ವಿ.ಡಿ.ಭಟ್ ಕೂಡ ಬಂದರು. ಹಣೆಯಿಂದ ರಕ್ತ ಸ್ರಾವವಾಗುತ್ತಿತ್ತು. ನನಗೇನೂ ಕಾಣದೆ, "ಶಿವು ಏನಾದ್ರೂ ಚುಚ್ಚಿಕೊಂಡಿದೆಯೋ ನೋಡಿ" ಎಂದು ಕೇಳಿದೆ. ಕರ್ಚೀಫನ್ನು ನೀರಲ್ಲಿ ಅದ್ದಿ ಒರೆಸಿಕೊಂಡೆ. "ಏನೂ ಚುಚ್ಚಿಲ್ಲ. ಗಾಯ ಆಗಿದೆ. ನೀವು ರೆಸ್ಟ್ ತಗೊಳ್ಳಿ. ಗಾಬರಿಯಾಗಬೇಡಿ" ಅಂದರು ಶಿವು. ಆದರೆ ಆ ಸಂಜೆ ಬೆಳಕು ಮುಗಿದ ಮೇಲೆ ಏನೂ ಮಾಡಲು ಸಾಧ್ಯವಿಲ್ಲವಲ್ಲ. ಅಲ್ಲದೆ ಮಕ್ಕಳು ಇದೇನೂ ಗೊತ್ತಿಲ್ಲದೆ ಆಡುತ್ತಿದ್ದರು. ನಾವು ಎದ್ದು ನಿಂತೆವು. ಒದ್ದೆ ಕರ್ಚೀಫನ್ನು ಹಣೆಗೆ ಒತ್ತಿಕೊಳ್ಳುತ್ತಾ ಕ್ಲಿಕ್ಕಿಸಲು ಶುರುಮಾಡಿದೆ.
"ಮಲ್ಲಿಕಾರ್ಜುನ್, ಬೆವರ ಜೊತೆ ರಕ್ತವೂ ಹರಿದಿದೆ. ದಿ ಬೆಸ್ಟ್ ಪಿಚ್ಚರ್ ಸಿಗುತ್ತೆ ಬಿಡಿ" ಅಂದರು.ಅವರ ನುಡಿ ಸುಳ್ಳಾಗಲಿಲ್ಲ. ಅದ್ಭುತ ಕಲಾಕೃತಿ ಆ ದಿನ ಸೃಷ್ಟಿಯಾಗಿತ್ತು.(ಫೋಟೋ ಹಿಂದಿನ ಕಥೆಗಳು ಬರೆಯಬೇಕೆಂದು ಶಿವು ಮತ್ತು ನಾನು ಮಾತನಾಡಿಕೊಂಡು ಬರೆಯುತ್ತಿದ್ದೇವೆ. ನಿಮ್ಮ ಅನಿಸಿಕೆ ಮತ್ತು ಪ್ರೋತ್ಸಾಹ ಅತ್ಯಗತ್ಯ. ದಯವಿಟ್ಟು ನಿಮ್ಮ ಅನಿಸಿಕೆ ತಿಳಿಸಿ. ಮುತ್ಮುರ್ಡುವಿನ ರಂಗಸ್ಥಳದಲ್ಲಿ ಸೃಷ್ಟಿಯಾದ ಮತ್ತಷ್ಟು ಚಿತ್ರಗಳ ಬಗ್ಗೆ ಒಂದೊಂದಾಗಿ ಮುಂದೆ ಬರೆಯುವೆ.)

17 comments:

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ಈ ಅದ್ಭುತ ಫೋಟೊ ನೋಡಿದ್ದೆ...!!
ನೋಡಿದಷ್ಟು ಸಾಲದು ಎನ್ನುವಂಥಹ ಫೋಟೊ ಇದು...!!
ಇದರ ಹಿಂದಿನ ಘಟನೆಯೂ ರೋಚಕವಾಗಿದೆ...!
ನಿಮ್ಮ ನಿರೂಪಣೆಯೂ ಸೊಗಸಾಗಿದೆ...

ನಿಮ್ಮಿಬ್ಬರ ಪುಸ್ತಕಕ್ಕೆ ಕಾತುರದಿಂದ ಕಾಯುತ್ತಿರುವೆ...
ಇದೊಂದು ಇತಿಹಾಸ ಸೃಷ್ಟಿಸಲಿದೆ...

ನಿಮ್ಮ ಸಾಹಸಕ್ಕೆ ಅಭಿನಂದನೆಗಳು...

ಶುಭಸ್ಯ ಶೀಘ್ರಮ್...!!!!!!!!

Dr. B.R. Satynarayana said...

ಮಲ್ಲಿಕಾರ್ಜುನ್ ಫೊಟೋ ಹಾಗೂ ಫೋಟೋ ಹಿಂದಿನ ಕಥೆ ಕೂಡಾ ಚೆನ್ನಾಗಿದೆ. ಅದನ್ನು ನೀವು ಬರೆದಿರುವ ರೀತಿ, ಻ದಕ್ಕೆ ಕೊಟ್ಟಿರುವ ಟೈಟಲ್ ಎಲ್ಲವೂ ಅದ್ಭುತ. ಶಿವು ಃಏಳಿದಂತೆ ಯಾವುದು ಕ್ಲಿಕ್ಕಾಗುತ್ತೋ ಹೇಳುವುದು ಕಷ್ಟ ಻ಲ್ಲವೇ? ಇಲ್ಲಿ ನೋಡಿ ಎಲ್ಲವೂ ಸೇರಿ ಒಂದು ಒಳ್ಳೆಯ ಬರಹ ಕ್ಲಿಕ್ಕಾಗಿದೆ. ಅಭಿನಂದನೆಗಳು. ತುಂಬಾ ದಿನವಾಗಿತ್ತು ಬರೆದು. ಏನು? ಪವರ್ ಪ್ರಾಬ್ಲೆಮ್ಮಾ ಅಥವಾ ಪ್ರವಾಸನಾ?

ಕ್ಷಣ... ಚಿಂತನೆ... bhchandru said...

ಮಲ್ಲಿಕಾರ್ಜುನ ಸರ್‍,
ಫೋಟೋ ಹಿಂದಿನ ಲೇಖನ, ಅನುಭವ ಬರಹ ಚೆನ್ನಾಗಿದೆ. ಇಲ್ಲಿರುವ ಫೋಟೋ ಸಹ ಮನದಾಳದಲ್ಲಿ ನಿಲ್ಲುವಂತಹದು.
ಅಭಿನಂದನೆಗಳು. ಹೀಗೆಯೆ ಮತ್ತಷ್ಟು ಬರಹ-ಚಿತ್ರಗಳು ಬರುತ್ತಿರಲಿ.

ಸ್ನೇಹದಿಂದ,

ಗೌತಮ್ ಹೆಗಡೆ said...

e photokke alwa prajaavani visheshanka 1st prize bandiddu? matte photo hindina story bareyo idea mast ide sir.bega shuru maadi...:)

Giri said...

ಅದ್ಭುತ..!!!
ಫೋಟೋ ಜೊತೆಗೆ camera settings ಕೊಟ್ಟರೆ ಇನ್ನೂ ಒಳ್ಳೆಯದು.

ಸಾಗರದಾಚೆಯ ಇಂಚರ said...

ಸರ್,
ತುಂಬಾ ಚಂದದ ಫೋಟೋ
ಅದಕ್ಕೆ ತಕ್ಕಂತ ವಿವರಣೆ
ಪುಸ್ತಕಕ್ಕೆ ಶುಭ ಹಾರೈಕೆಗಳು

sunaath said...

ಬರಿ ಅದ್ಭುತವಲ್ಲ, ಅತ್ಯದ್ಭುತ ಫೋಟೋ ಇದು. ನಿರೂಪಣೆಯೂ ಸಹ ರೋಮಾಂಚಕವಾಗಿದೆ.

Nisha said...

Sundara chitra hagu niroopane.

ದಿನಕರ ಮೊಗೇರ.. said...

ಮಲ್ಲಿಕಾರ್ಜುನ್ ಸರ್,
ಇದೊಂದು ಅದ್ಭುತ ಫೋಟೋ...... ಒಳ್ಳೆಯ ಫೋಟೋಗ್ರಾಫರ್ ಗೂ ಸಹ ಹೊಟ್ಟೆ ಉರಿಸುವಷ್ಟು ಚೆನ್ನಾಗಿವೆ ಫೋಟೋಗಳು...... ನಿರೂಪಣೆ ಸಹ ಚೆನ್ನಾಗಿದೆ...... ಈ ಸಲ ನಿಮ್ಮ ಪುಸ್ತಕಕ್ಕಾಗಿ ಸಹ ಕಾಯುತ್ತೇನೆ...... ಬೇಗ ಮುಗಿಸಿ ನಮ್ಮ ಕೈಗೆ ಇಡಿ........

Ranjita said...

ಮಲ್ಲಿಕಾರ್ಜುನ್ ಸರ್ ಫೋಟೋ ಹಿಂದಿನ ಕತೆ ಕೇಳಿ ಬೇಜಾರಾಯ್ತು

ಕಣ್ಣಲ್ಲಿ ತುಂಬೋ ಅದ್ಭುತ ಫೋಟೋ .. ನಿಜವಾಗಲು ಶಿವು ಸರ್ ಹೇಳಿದ ಹಾಗೆ " ದಿ ಬೆಸ್ಟ್ ಪಿಚ್ಚರ್ ಅದು "

Deepasmitha said...

ಫೋಟೋ ಹಿಂದಿನ ಕಥೆ ಚೆನ್ನಾಗಿದೆ. ನಿಜ, ಒಂದು ಒಳ್ಳೆ ಕಲಾಕೃತಿ ಸೃಷ್ಟಿಯಾಗಲು ಎಷ್ಟೊಂದು ಶ್ರಮವಹಿಸಬೇಕು, ಬೆವರು, ರಕ್ತ ಹರಿಸಬೇಕು. ನಿಮ್ಮಿಬ್ಬರ ಪುಸ್ತಕಕ್ಕೆ ಕಾಯುತ್ತಿದ್ದೇವೆ

PARAANJAPE K.N. said...

ಫೋಟೋ ಅದ್ಭುತವಾಗಿದೆ, ಅದರ ಹಿ೦ದಿನ ರೋಚಕ ಕಥೆಯನ್ನು ಕೂಡ ಮನಮುಟ್ಟುವ೦ತೆ ಬರೆದಿದ್ದೀರಿ. ಇನ್ನಷ್ಟು ಈ ತರಹದ ಫೋಟೋ ಹಿಂದಿನ ಕಥೆಗಳು ಬರಲಿ, ಮಣಿಕಾ೦ತರ "ಹಾಡುಹುಟ್ಟಿದ ಸಮಯ" ದ೦ತೆ ನಿಮ್ಮ "ಫೋಟೋ ಹಿಂದಿನ ಕಥೆ" ಕೂಡ ಜನಪ್ರಿಯವಾಗಲಿ.

ಬಾಲು ಸಾಯಿಮನೆ said...

ನಾಗೇಂದ್ರ ಮುತ್ಮುರ್ಡು, ಆರೇಳು ವರ್ಷಗಳ ಹಿಂದೆ ಈ ರೀತಿಯ ಪ್ರಯೋಗ ಮಾಡಿದಾಗಲೇ ಅನಿಸಿತ್ತು; ಇದು ಅದ್ಭುತ ಫೋಟೋ ಸಿರೀಸ ಆಗುತ್ತೇ ಅಂತ. ಈಗಂತೂ ಅವು ಒಂದರ ಮೇಲೊಂದು ಪ್ರಶಸ್ತಿ ಪಡಿತಾ ಇರುವಾಗ, ಖುಷಿ ಆಗ್ತಾ ಇದೆ. ಎಲ್ಲಾ ಅಘನಾಶಿನಿ ನೀರಿನ ಮಹಾತ್ಮೆ!

ಸೀತಾರಾಮ. ಕೆ. said...

ಫ಼ೋಟೋ ಹಿ೦ದಿನ ಶ್ರಮ - ಶ್ರದ್ಧೆ ತಿಳಿಯುವದು ಅವಶ್ಯಕ. ಅದು ನಮಗೆ ಅದ್ಭುತ ರಸಾನುಭವ ನೀಡುವ ತಮ್ಮ ಕಲೆಯ ಹಿ೦ದಿನ ಕಾಳಜಿ ಪರಿಶ್ರಮಗಳ ಪರಿಚಯ ಮಾಡಿ ಇನ್ನೊ೦ದು ಆಯಾಮವನ್ನ ತೆರೆಯುತ್ತದೆ.

Guru's world said...

ಮಲ್ಲಿಕಾರ್ಜುನ್ ಸರ್,, ನಿಮ್ಮ ಮತ್ತೆ, ಶಿವೂ ರವರ ಫೋಟೋ ಬಗ್ಗೆ,, ಎಷ್ಟು ಹೊಗಳಿದರು ಸಾಲದು....ಗುಡ್,, ನಿಮ್ಮ ಫೋಟೋ ಹಿಂದಿನ ಅನುಭವದ ಪುಸ್ತಕಕ್ಕಾಗಿ ಕಾಯುತ್ತ ಇದ್ದೇವೆ....ಅದಸ್ಟು ಬೇಗ ಮೂಡಿಬರಲಿ....

AntharangadaMaathugalu said...

ಮಲ್ಲಿಕಾರ್ಜುನ್ ಸಾರ್..
ಈ ಫೋಟೋ ನಾನು ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕ ೨೦೦೯ರಲ್ಲಿ ಮೊದಲ್ ಬಾರಿ ನೋಡಿದ್ದೆ. ಈ ಚಿತ್ರಗಳ ಮೂಲಕವೇ ನನಗೆ ನಿಮ್ಮ ಹಾಗೂ ಶಿವು ಸರ್ ಅವರ್ ಬ್ಲಾಗ್ ಲೋಕಗಲ ಪರಿಚಯವಾಗಿದ್ದು. ಅತ್ಯದ್ಭುತವಾದ ಚಿತ್ರ..... ನಿರೂಪಣೆ ಕೂಡ ಸುಂದರವಾಗಿದೆ. ನೆನೆಪುಗಳನ್ನು ಮೆಲುಕುಹಾಕುವುದು ಎಷ್ಟು ಮಧುರವಾಗಿರತ್ತೆ ಅಲ್ವಾ?

ಶ್ಯಾಮಲ

ಸುಧೇಶ್ ಶೆಟ್ಟಿ said...

ಅದ್ಭುತ ಚಿತ್ರ...!

ಈ ಚಿತ್ರದ ಎಷ್ಟು ಕಷ್ಟದ ಕಥೆಯಿದೆ...! ಪುಸ್ತಕಕ್ಕೆ ಕಾಯುತ್ತೇವೆ...