Wednesday, September 16, 2009

ನೆರೆರಾಜ್ಯದಿಂದ ಬಂದು ನಾರು ತಯಾರಿಸುವವರು

ಹೊಚ್ಚ ಹೊಸ ಸೈಕಲ್‌ನ ಚಕ್ರದ ಆಕ್ಸೆಲ್‌ನ ಸುತ್ತ ಬಹುಬಗೆಯ ಬಣ್ಣ ಬಣ್ಣದಿಂದ ಕೂಡಿದ ನಾರಿನ ರಿಂಗ್ ಹಾಕಿರುವುದನ್ನು ಗಮನಿಸಿದ್ದೀರಾ. ಅದರ ಮೂಲ ಯಾವುದು ಗೊತ್ತೆ? "ಕತ್ತಾಳೆಗಿಡ" ಅಂದರೆ ಆಶ್ಚರ್ಯವೇ? ಮೊದಲಬಾರಿ ಆ ಬಗ್ಗೆ ಕೇಳಿದಾಗ ನನಗೂ ಹಾಗೆಯೇ ಆಗಿತ್ತು.
ಅದೊಂದು ದಿನ ,"ನಮ್ಮ ತೋಟದ ಬೇಲಿಗೆ ಹಾಕಿರುವ ಕತ್ತಾಳೆ ಪಟ್ಟೆ ಕುಯ್ಯಲು ಬರುತ್ತಾರೆ" ಎಂದು ನನ್ನ ತಂದೆ ಸಣ್ಣದೊಂದು ಘೋಷಣೆ ಎಂಬಂತೆ ಮನೆಯಲ್ಲಿ ಹೇಳುತ್ತಿದ್ದುದು ಕೇಳಿಸಿತು. "ಈ ವರ್ಷವೂ ತಮಿಳವ್ರು ಬಂದಿದ್ದಾರಾ" ಎಂದು ಒಳಗಿದ್ದ ಅಮ್ಮ ವಿಚಾರಿಸಿದರು. "ಹೌದು, ನಮ್ಮ ಎದುರು ತೋಟದಲ್ಲಿ ಕ್ಯಾಂಪ್ ಮಾಡಿದ್ದಾರೆ" ಅಂದರು ಅಪ್ಪ.
ಬೆಳೆದ ಕೂದಲನ್ನು ನಾವು ಕತ್ತರಿಸಿಕೊಳ್ಳುವಂತೆ ಬೆಳೆದ ಕತ್ತಾಳೆ ಪಟ್ಟೆಗಳನ್ನು ತಮಿಳುನಾಡಿನಿಂದ ಬರುವ ಇವರು ಕತ್ತರಿಸಿ ನಾರು ಮಾಡಿ ಹಣ ಸಂಪಾದಿಸುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಮ್ಮ ಶಿಡ್ಲಘಟ್ಟಕ್ಕಂತೂ ಇವರ ತಂಡ ವರ್ಷಕ್ಕೊಮ್ಮೆ ಎಂಬಂತೆ ಬರುತ್ತದೆ. ಯಾರದೋ ತೋಟದಲ್ಲಿ ಒಂದಷ್ಟು ದಿನ ಬೀಡು ಬಿಟ್ಟಿದ್ದುಇಲ್ಲಿ ಬೆವರು ಚೆಲ್ಲಿ ಹೋಗುತ್ತಾರೆ. ನಾವು ಮಕ್ಕಳಿದ್ದಾಗಿಂದ ಕಂಡಿದ್ದು ಇದೆಲ್ಲ.




ಕತ್ತಾಳೆ ಕತ್ತರಿಸುವುದು ನೋಡಿದಷ್ಟು ಸುಲಭವಲ್ಲ.

ಈ ಕತ್ತಾಳೆ ನಾರಿನಿಂದ ಎತ್ತು ಎಮ್ಮೆಗಳಿಗೆ ಕಟ್ಟಲು ಹಗ್ಗ, ಕೊರಳಕಣ್ಣಿ, ಮೂಗುದಾಣ, ರಥ ಎಳೆಯುವ ಮಿಣಿ, ಬಣ್ಣ ಬಳಿಯುವ ಬ್ರಷ್ ಇತ್ಯಾದಿ ತಯಾರಿಸುತ್ತಾರೆ. ಕಬ್ಬನ್ನು ಅರೆಯುವ ರೀತಿಯಲ್ಲಿಯೇ ಇರುವಂತಹ, ಡೀಸಲ್ ಎಂಜಿನ್‌ನಿಂದ ನಡೆಯುವ ಯಂತ್ರದಿಂದ ಕತ್ತಾಳೆಯಲ್ಲಿರುವ ನೀರಿನಾಂಶವನ್ನು ತೆಗೆದು ನಾರನ್ನು ಬಿಸಿಲಲ್ಲಿ ಒಣಗಿಸುತ್ತಾರೆ. ದುರ್ನಾತ ಬೀರುವ ಅದರ ತ್ಯಾಜ್ಯವನ್ನು ಏನು ಮಾಡುವರೆಂದು ಕುತೂಹಲದಿಂದ ಕೇಳಿದೆ. ಈ ತಂಡದ ಯಜಮಾನ ರಾಜಣ್ಣ, "ನಮಗೆ ಜಾಗ ಕೊಟ್ಟಿರುವ ಜಮೀನೋರು ಗೊಬ್ಬರ ಮಾಡ್ಕೊಂತಾರೆ. ಅದಕ್ಕೆ ಅವರು ನಮಗೆ ಜಾಗ ಕೊಟ್ಟಿರೋದು" ಎಂದು ಹೇಳಿದ. ಇದೊಂತರಹ ಪರಸ್ಪರ ಸಹಕಾರ. "ನೀ ನನಗಾದರೆ ನಾ ನಿನಗೆ" ಎಂಬಂತೆ.



ಬೇಲಿಯಂಚಿಗೆ ಯಾರಿಗೂ ಬೇಡವೆಂಬಂತೆ ಬೆಳೆದ ಕತ್ತಾಳೆಗೆ ಈಗ ಬೆಲೆ.


ಏಕ ದಳ ಸಸ್ಯ (ಅದು ನಮ್ಮ ರಾಜಕೀಯ "ದಳ"ದಂತಲ್ಲ) ಗುಂಪಿನ ಅಮರಿಲ್ಲಿಡೇಸಿ ಕುಟುಂಬಕ್ಕೆ ಸೇರಿದ ಕತ್ತಾಳೆ ಸಸ್ಯಗಳೆಲ್ಲ "ಅಗೇವ್" ಎಂದೇ ಪ್ರಸಿದ್ಧಿ. ಮೂಲತಃ ಮೆಕ್ಸಿಕೋ ದೇಶದ ಕತ್ತಾಳೆ, ಬಂಜರು ಪ್ರದೇಶಗಳು, ಉಷ್ಣವಲಯಗಳ ಪ್ರಮುಖ ಸಸ್ಯಜಾತಿ. ಇದರ ಬೆಳವಣಿಗೆಗೆ ಯಾವ ಶ್ರಮದ ಅಗತ್ಯವೂ ಇಲ್ಲ. ತನ್ನ ಪಾಡಿಗೆ ತಾನು ಬೆಳೆಯುತ್ತಾ ಗಟ್ಟಿಕಾಂಡವಾಗಿ ರೂಪುಗೊಳ್ಳುತ್ತದೆ. ಇದನ್ನು ಪೋರ್ಚುಗೀಸರು ೧೫ನೆಯ ಶತಮಾನದಲ್ಲಿ ಭಾರತಕ್ಕೆ ತಂದರು ಎಂದು ಹೇಳಲಾಗುತ್ತದೆ.
ಈ ಕತ್ತಾಳೆ ಎಂಬುದು ಕಲ್ಪವೃಕ್ಷವೇ ಸರಿ. ಇದರಿಂದ ನಾರು ತೆಗೆದು ಹಗ್ಗ, ಚೀಲ, ಬುಟ್ಟಿ ಮುಂತಾದವನ್ನು ತಯಾರಿಸುವುದಂತೂ ಸರಿ. ಅದರ ರಸದಿಂದ "ಹೆಕೊಜೆನಿನ್" ಎಂಬ ಔಷಧೀಯ ರಸವನ್ನು ದೊಡ್ಡ ಕಂಪನಿಗಳು ಉತ್ಪಾದಿಸುತ್ತಾರೆ. (ಇದು ನಮ್ಮ ಆಯುರ್ವೇದದಲ್ಲಿ ಯಾಕೆ ಪ್ರಸ್ತಾಪ ಆಗಿಲ್ಲ ಎನ್ನಲಿಕ್ಕೆ ಕಾರಣ ಗೊತ್ತಾಯಿತಲ್ಲ? ಅದು ನಮ್ಮವರಿಗೆ ಗೊತ್ತೇ ಇರಲಿಲ್ಲ.) ಇನ್ನು ಈ ರಸವನ್ನು ಕುದಿಸಿದರೆ ಮೇಲ್ಪದರದಲ್ಲಿ ಒಂದು ಬಗೆಯ ಅಂಟು ಬರುತ್ತದೆ. ಅದನ್ನೂ ದೊಡ್ಡ ಪ್ರಮಾಣದಲ್ಲಿ ನಿರಂತರ ಪೂರೈಸುವವರು ಸಿಕ್ಕರೆ ಉದ್ಯಮಗಳು ಖರೀದಿ ಮಾಡಿ ವ್ಯಾಕ್ಸ್ ಉತ್ಪಾದಿಸಬಹುದು.



ಮುಳ್ಳು ತೆಗೆದ ಕತ್ತಾಳೆಗೆ ಈಗ ಸಂಸ್ಕಾರ


ಇಷ್ಟೆಲ್ಲ ಉಪಯುಕ್ತವಾಗಬಲ್ಲ ಕತ್ತಾಳೆಯನ್ನು ಕತ್ತರಿಸುವುದು ಬಹು ನಾಜೂಕಿನ ಕೆಲಸ. ಅವರು ಕತ್ತರಿಸುವುದು ನೋಡಿದರೆ, ಮಕ್ಕಳಾಟದಂತೆ ಕಾಣುತ್ತದೆ. ಆದರೆ ನಾವು ಹತ್ತಿರ ಹೋದರೆ ಮುಳ್ಳುಗಳು ಮೈಕೈಗೆಲ್ಲ ಮುತ್ತಿಕ್ಕಿ ಮಾತನಾಡಿಸುತ್ತವೆ! ಕತ್ತಾಳೆಯ ದುರ್ನಾತ ಬೀರುವ ತ್ಯಾಜ್ಯ ಮೈಕೈಯೆಲ್ಲಾ ತುರಿಕೆ, ಗುಳ್ಳೆಗಳನ್ನೆಬ್ಬಿಸುತ್ತವೆ. ಆದರೂ ಆ ಜನರಿಗೆ ಕತ್ತಾಳೆಯ ಸಹವಾಸ ಲೀಲಾಜಾಲ. ಶ್ರಮಜೀವನ ಅಂದರೆ ಇದೇ ತಾನೆ?




ನಾರಲ್ಲಿ ಅಳಿದುಳಿದ ನೀರಿನಾಂಶವೂ ಹೀಗೆ ಯಂತ್ರದ ಮೂಲಕ ಹಿಂಡಿ ಹಿಂಡಿ ಹೊರಕ್ಕೆ.


ಮಾವಿನ ಬೆಳೆ ಮುಗಿದ ಮೇಲೆ ನಮ್ಮೂರಿನಿಂದ ಹೊರಡುವ ಈ ಅಲೆಮಾರಿ ಜನ ಕಡಲೆಕಾಯಿ ಕೀಳುವ ಸಮಯದಲ್ಲಿ ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗದ ಕಡೆ ತೆರಳುತ್ತಾರೆ. ಅಲ್ಲಿನ ಕತ್ತಾಳೆ ಕೂಡ ಈ ತಮಿಳು ವಲಸಿಗರ ಕೈಯಲ್ಲೇ ಮುಕ್ತಿ ಕಾಣಬೇಕು. ನಾವು ಗಡಿವಿವಾದ ಎಂದು ತಮಿಳ್ನಾಡು ಜತೆ ಕಚ್ಚಾಡುತ್ತಿರುವಾಗ ಕೆಳಸ್ತರದಲ್ಲಿ ಪರಸ್ಪರ ಅವಲಂಬಿತ ಬದುಕು ಸಹಬಾಳ್ವೆಗೆ ಮೂಕ ಸಾಕ್ಷಿ.


ಸಂಸ್ಕರಿಸಿದ ಎಳೆಗಳು ಎಳೆಯರ ಕಾವಲಿನಲ್ಲಿ ಎಳೆ ಬಿಸಿಲಿಗೆ.

24 comments:

Unknown said...

ಮಲ್ಲಿಕಾರ್ಜುನ್ ಒಳ್ಳೆಯ ಮಾಹಿತಿಯುಕ್ತ ಚಿತ್ರಲೇಖನವನ್ನು ಕೊಟ್ಟಿದ್ದೀರ. ನಮ್ಮ ಕಡೆಯೂ ಈ ಕತ್ತಾಳೆ ಬೆಳೆಯುತ್ತದೆ. ಹೆಚ್ಚಾಗಿ ತೋಟದ ಬೇಲಿಗೆ ಇದನ್ನು ಹಾಕುತ್ತಾರೆ. ಒಮ್ಮೆ ಹಾಕಿದರೆ ಸಾಕು. ಯಾವುದೇ ಗೊಬ್ಬರ ನೀರು ಇಲ್ಲದೆ ಅದು ಸೊಂಪಾಗಿ ಬೆಳೆಯುತ್ತದೆ. ಇದರಿಂದ ರೈತರಿಗೆ ಹಲವಾರು ಉಪಯೋಗಗಳಿವೆ. ಹೀಗೆ ತಮಿಳುನಾಡಿನಿಂದ ಬಂದು ಕತ್ತಾಳೆ ನಾರು ತೆಗೆಯುವವರು ರೈತರಿಗೆ ದುಡ್ಡುಕೊಟ್ಟು ಖರೀದಿ ಮಾಡುತ್ತಾರೆ. ನಂತರ ಆ ಕತ್ತಾ ಳೆಯ ಗಿಡದಲ್ಲಿ ಬೆಳೆಯುವ ಗಳ ಅಥವಾ ಬೊಂಬು ರೈತರಿಗೆ ಬಹೋಪಯೋಗಿ ವಸ್ತು. ಕತ್ತಾ ಳೆ ಅಡ್ಡಾದಿಡ್ಡಿಯಾಗಿ ಬೆಳೆದರೆ ಹಂದಿ ಕತ್ತೆ ಸಾಕುವವರಿಗೆ ಒಂದು ಬುಡಕ್ಕೆ ಇಷ್ಟು ಎಂದು ಮಾರಿಬಿಡುತ್ತಾರೆ. ಅದರ ಗಿಣ್ಣು ಅಥವಾ ಲಿಂಗ ಭಾಗ ಹಂದಿಗಳಿಗೆ ಅತಿ ಪ್ರಿಯವಾದ ಆಹಾರ.
ಆತಂಕದ ವಿಷಯವೆಂದರೆ, ಈಗ ತಂತಿಭೇಲಿ, ಫೆನ್ಸಿಂಗ್ ಇತ್ಯಾದಿ ಕಾರಣದಿಂದ ಕತ್ತಾಳೆ ಬೇಲಿ ಕಾನೆಯಾಗುತ್ತದೆ.

guruve said...

ಕತ್ತಾಳೆ ಇಷ್ಟೆಲ್ಲಾ ಉಪಯುಕ್ತ ಅಂತ ಗೊತ್ತಿರಲಿಲ್ಲಾ.. ನಮ್ಮೂರಿನಲ್ಲಿ, ಹುಲ್ಲು ಕಟ್ಟಲು ಕಚ್ಚಾ ಕತ್ತಾಳೆ ನಾರನ್ನು ಬಳಸುತ್ತಿದ್ದಷ್ಟೇ ನೆನಪಿದೆ! ಬಹಳ ಉಪಯುಕ್ತ ಮಾಹಿತಿ..

ಸವಿಗನಸು said...

ಮಲ್ಲಿ ಸರ್,
"ಕಸ ದಿಂದ ರಸ" ಕತ್ತಾಳೆ ಯಿಂದಾಗುವ ಉಪಯೋಗ ಗೊತ್ತೆ ಇರಲಿಲ್ಲ...ನಮ್ಮೂರ ಕಡೆ ಯಾರು ಬಂದಿರಲಿಲ್ಲ ಇದನ್ನು ಬಳಸುವವರು...
ಒಳ್ಳೆಯ ಮಾಹಿತಿಯುಕ್ತ ಲೇಖನ ಪೋಟೋ ಸಮೇತ ಕೊಟ್ಟಿದ್ದೀರ
ಧನ್ಯವಾದಗಳು...

ಸಂದೀಪ್ ಕಾಮತ್ said...

ಒಳ್ಳೆಯ ಲೇಖನ ,ಧನ್ಯವಾದಗಳು.

ಶಿವಪ್ರಕಾಶ್ said...

ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು

ಬಿಸಿಲ ಹನಿ said...

ನಿಮ್ಮ ಲೇಖನ ಓದುತ್ತಿರುವಾಗ ನಾನು ಚಿಕ್ಕವನಿದ್ದಾಗ ನಮ್ಮ ಹಳ್ಳಿಯಲ್ಲಿ ನಾರು ತಯಾರಿಸುತ್ತಿರುವದನ್ನು ನೋಡಿದ ನೆನಪಾಯಿತು. ನೀವು ಹೇಳಿದಂತೆ ನೀರಿನಲ್ಲಿ ನೆನೆಹಾಕಿ ಸ್ವಲ್ಪ ದಿವಸಕ್ಕೆ ಬರುವ ಇದರ ದುರ್ನಾತವನ್ನು ಸಹಿಸಲಾಗುವದಿಲ್ಲ. ನಾರಿನ ತಯಾರಿಕೆಯ ಬಗ್ಗೆ ನಿಮ್ಮ ಲೇಖನ ಹಾಗೂ ಫೋಟೋಗಳು ತುಂಬಾ ಚನ್ನಾಗಿವೆ.

Guruprasad said...

ಮಲ್ಲಿಕಾರ್ಜುನ್
ಫೋಟೋಗಳ ಸಮೇತ ಕತ್ತಾಳೆ ಗಿಡದ ಅದರಿಂದ ತಯಾರಿಸುವ ವಿವಿದ ವಸ್ತುಗಳ ಪರಿಚಯ ತುಂಬ ಚೆನ್ನಾಗಿ ಇದೆ. ಒಳ್ಳೆ ಮಾಹಿತಿ.. ಈ ತರಹದ ಎಸ್ಟೋ ಚಿಕ್ಕ ಚಿಕ್ಕ ಕೆಲಸಗಳು ಒಂದಕೊಂದು ಪರಸ್ಪರರಂತೆ ಅವಲಂಬಿತ ವಾಗಿ ಇರುತ್ತವೆ ಅಲ್ವ...

sunaath said...

ಮಲ್ಲಿಕಾರ್ಜುನ,
ನಿಮ್ಮಿಂದ ಮತ್ತೊಂದು ಸೊಗಸಾದ ಉಪಯುಕ್ತ ಲೇಖನ. ನಿಮ್ಮ ಲೇಖನಗಳನ್ನು ಓದುವಾಗ ನೀವು ನಮ್ಮ ಜೊತೆಗೆ ಮಾತನಾಡುತ್ತಿರುವಿರೇನೊ ಎಂದು ಭಾಸವಾಗುತ್ತದೆ.

ಸುಮ said...

ಕತ್ತಾಳೆಯಿಂದ ನಾರು ತಯಾರಿಸುತ್ತಾರೆಂದು ಪಠ್ಯಪುಸ್ತಕಗಳಲ್ಲಿ ಓದಿ ತಿಳಿದಿತ್ತು. ಹೆಚ್ಚಿನ ಚಿತ್ರಸಹಿತ ಮಾಹಿತಿಗಾಗಿ ಧನ್ಯವಾದಗಳು.

ESSKAY said...

ಚಿಕ್ಕವನಾದಾಗಿನಿಂದ "ಕತ್ತಾಳೆ"ಯನ್ನು ರೈಲಿನಲ್ಲಿ ಪ್ರಯಾಣಿಸುವಾಗ ನೋಡುತ್ತಾ ಇದ್ದೇನೆ. ಆದ್ರೆ ಅದರ ಉಪಯೋಗ ಹೀಗೆ ಆಗುತ್ತದೆ ಎಂದು ಗೊತ್ತಿರಲಿಲ್ಲ.
ಈ ಮಾಹಿತಿ ಹಾಗೂ ಬಾಲ್ಯದ ಕಾಲದ ನೆನಪನ್ನು ಮಾಡಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
- ಸುನೀಲ್ ಕೇಳ್ಕರ್

RAMU said...

ಕತ್ತಾಳೆ ಗಿಡದ ಉಪಯೋಗ ಮತ್ತು ಅದರಿಂದ ಹಾಗುವ ಲಾಭಾಂಶ ವನ್ನು ಚಿತ್ರ ಸಹಿತ ತಿಳಿಸಿದಕ್ಕೆ ಧನ್ಯವಾದಗಳು.
ಈ ತರಹದ ಮಾಹಿತಿ ಲೇಖನಗಳು ಅಚ್ಹುಮೆಚ್ಚು...
ಒಂದೇ ಒಂದು ಸುಳಿವಿನಿಂದ ಎಷ್ಟೊಂದು ವಿಚಾರ ಹೊರಬರುತ್ತೆ ಆಲ್ವಾ....
ಕತ್ತಲೆ ಗಿಡದ ವಿಚಾರ ಸೊಗಸಿಗಿತ್ತು. ಈ ತರಹದ ಲೇಕನಗಳು ಇನ್ನು ಬರಲಿ...


ರಾಮು.
9480427376

PARAANJAPE K.N. said...

ಮಾಹಿತಿಯುಕ್ತ ಲೇಖನ.ಲೇಖನ ಹಾಗೂ ಫೋಟೋಗಳು ತುಂಬಾ ಚನ್ನಾಗಿವೆ

SSK said...

ಮಲ್ಲಿಕಾರ್ಜುನ ಅವರೇ,
ಸುನಾಥ್ ಅವರ ಮಾತನ್ನು ನಾನು ಅಕ್ಷರ ಸಹ ಒಪ್ಪುತ್ತೇನೆ! ನೀವು ಯಾವುದೇ ವಿಷಯದ ಬಗ್ಗೆ ಲೇಖನ ಬರೆದರೂ ಅದನ್ನು ಓದುತ್ತಾ ಓದುತ್ತಾ ನಾವೂ ಅದರ ಒಂದು ಭಾಗವಾಗಿ ಬಿಡುತ್ತೇವೆ, ಅಷ್ಟು ಮಂತ್ರ ಮುಗ್ಧವಾಗಿರುತ್ತವೆ ನಿಮ್ಮ ಲೇಖನದ ವಿಚಾರಗಳು!!
ಉಪಯುಕ್ತ ಲೇಖನಕ್ಕೆ, ಫೋಟೋ ಮತ್ತು ಸವಿವರಗಳಿಗೆ ಧನ್ಯವಾದಗಳು!

ಬಾಲು said...

ಉಪಯುಕ್ತ ಲೇಖನ, ಕತ್ತಾಳೆಯಿಂದ ಇಷ್ಟೆಲ್ಲಾ ಮಾಡುತ್ತಾರೆಂದು ತಿಳಿದಿರಲಿಲ್ಲ.

umesh desai said...

ಮಾಹಿತಿ ಚಿತ್ರ ಎರಡೂ ಚೆನ್ನಾಗಿವೆ ವಿಷಯ ಸಂಗ್ರಹಣೆ ಚೆನ್ನಾಗಿದೆ....

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍, ಕತ್ತಾಳೆಯ ಉಪಯುಕ್ತತೆ ಹಾಗೂ ನಾರನ್ನು ಹೇಗೆಲ್ಲ ಸಂಸ್ಕರಿಸಿ ತೆಗೆಯುತ್ತಾರೆ ಎಂಬುದರ ಸಚಿತ್ರ ಮಾಹಿತಿಯನ್ನು ಓದಿ ಬಹಳಷ್ಟು ತಿಳಿಯಲು ಅನುಕೂಲವಾಯಿತು. ಧನ್ಯವಾದಗಳು.

ಸ್ನೇಹದಿಂದ,
ಚಂದ್ರು

ಸುಧೇಶ್ ಶೆಟ್ಟಿ said...

nammorinallu kaththaale iddudu nenapide... adannu yaake upayogisuthiddaru annodu nenapilla... E baraha thumba ishta aayithu mallikaarjun avre...

shivu.k said...

ಮಲ್ಲಿಕಾರ್ಜುನ್,

ಕತ್ತಾಳೆ ಗಿಡಗಳನ್ನು ನಿಮ್ಮ ಊರಿಗೆ ಮತ್ತು ತೋಟಕ್ಕೆ ಬಂದಾಗ ನೋಡಿದ್ದೆ. ಅದರ ಚಿತ್ರ ಸಹಿತ ಸೊಗಸಾದ ಮಾಹಿತಿಯನ್ನು ಕೊಟ್ಟಿದ್ದೀರಿ. ಕಸದಿಂದ ರಸ ಎನ್ನುವ ಗಾದೆ ಮಾತು ಹಳೆಯದಾಯಿತು. ಈಗ ಯಾವುದು ಕಸವಲ್ಲ. ಇದು ನನ್ನ ಅನಿಸಿಕೆ.

ಧನ್ಯವಾದಗಳು.

Ittigecement said...

ಹುಡುಕಾಟದವರೆ...

ಬಹಳ ತಡವಾಗಿ ಬಂದಿದ್ದಕ್ಕೆ ಸ್ಸಾರಿ..

ಈ ಸಸ್ಯಕ್ಕೆ ನಮ್ಮ ಊರಲ್ಲಿ "ಮುಳ್ಳು ಪರಂಗಿ"
ಅಥವಾ "ಬೇಲಿ ಪರಂಗಿ" ಅನ್ನುತ್ತಾರೆ...
ಬಯಲು ಸೀಮೆಯಲ್ಲಿ "ಗಾದಾಳಿ" ಅನ್ನುತ್ತಾರಂತೆ..

ಹೊಲಗಳಿಗೆ ರಕ್ಷಣೆಕೊಡುವದಲ್ಲದೇ..
ಕೃಷಿಕರಿಗೆ ಬೇಕಾದ ಹಗ್ಗಗಳನ್ನು ಇದರಲ್ಲೇ ಮಾಡಿಕೊಳ್ಳುತ್ತಾರೆ..
ಅದರ ಮಧ್ಯದಿಂದ ಬರುವ(ಕಾಂಡ) "ಗಳ"ವೂ ಸಹ ಬಹಳ ಉಪಯೋಗಿ..
ಅದರಿಂದ ಏಣಿ ಇತ್ಯಾದಿಗಳನ್ನು ಮಾಡುತ್ತಾರೆ..
ಬೇಲಿಕಟ್ಟಲೂ ಬಳಸುತ್ತಾರೆ...

ಇದನ್ನು ನೀರಲ್ಲಿ ನೆನೆಸಿ ತೊಳೆಯುವದು ಸುಲಭದ ಮಾತಲ್ಲ..
ತುರಿಕೆಯಾಗುತ್ತದೆ..

ನಿಮ್ಮ ಹುಡುಕಾಟ ಹೀಗೇ ಮುಂದುವರೆಯಲಿ..

ಚಕೋರ said...

ವಾಹ್! ಫೋಟೋಸ್, ಬರಹ ಎಲ್ಲವೂ ಸೊಗಸು!

ಪಾಚು-ಪ್ರಪಂಚ said...

ಮಲ್ಲಿಕಾರ್ಜುನ್ ಅವರೇ,
ಕತ್ತಾಳೆಯ ಬಗ್ಗೆ ಓದಿ ತಿಳಿದಿದ್ದೆ. ನಮ್ಮ ಊರಿನಲ್ಲಿ ಬೇಲಿಯ ಬದಿ ಇದನ್ನ ನೋಡಿದ್ದೆ. ಆದರೆ ಇದರ ಉಪಯೋಗ ತಿಳಿದಿರಲಿಲ್ಲ.

ಸುಂದರ ಚಿತ್ರ ಮಾಹಿತಿಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಮಲ್ಲಿಕಾರ್ಜುನರವರೇ ಕತಾಳೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದಿರಿ ತಮ್ಮ ಅದ್ಭುತ ಛಾಯಾಚಿತ್ರಗಳೊ೦ದಿಗೆ. ಈ ಕತಾಳೆ ಸಸ್ಯವನ್ನ ನಮ್ಮ ಗಣಿಗಳಲ್ಲಿ ಭೂತ್ಯಾಜ್ಯ ಶೇಖರಣೆಗಳ ಮಣ್ಣು ಸವೆತವನ್ನು ತಡೆಯಲು ಆ ಶೇಖರಣೆಗಳ ಇಳಿಜಾರಲ್ಲಿ ನೆಡುತ್ತಾರೆ. ನಮ್ಮ ಬಳ್ಳಾರಿ ಜಿಲ್ಲೆಯ ಎಲ್ಲಾ ಗಣಿಗಳಲ್ಲಿ ಹೇರಳವಾಗಿ ಇವುಗಳನ್ನು ನೋಡಬಹುದು.
ಅವುಗಳ ಫೋಟೋ ನನ್ನ ಬ್ಲೊಗ್-ನಲ್ಲಿ ಹಾಕಿರುವೆ.
Link :http://nannachutukuhanigavanagalu.blogspot.com/2009/09/blog-post_24.html

PaLa said...

ತುಂಬ ಚೆನ್ನಾಗಿದೆ ಚಿತ್ರ ಲೇಖನ.. ಚಿಕ್ಕವರಿರ್ಬೇಕಾದ್ರೆ ನಾವೂ ಸೈಕಲ್ಲಿಗೆ ಈ ಬಣ್ಣದ ನಾರನ್ನು ಸಿಕ್ಕಿಸಿಕೊಳ್ತಾ ಇದ್ವಿ.. ನಾನಿದು ತೆಂಗಿನ ನಾರು ಅಂದ್ಕೊಂಡಿದ್ದೆ.. ಸಿಕ್ಕಿದ್ರೆ ಒಂದೆರಡು ಪ್ರಾಡಕ್ಟಿನ ಚಿತ್ರ ಕೂಡ ಹಾಕಬಹುದಿತ್ತೇನೊ.. ಇಂತಹ ಅಪರೂಪದ ಮಾಹಿತಿ ಒದಗಿಸ್ತಾ ಇರೋ ನಿಮಗೆ ಥ್ಯಾಂಕ್ಸ್.