
ಬೆಂಗಳೂರಿನಿಂದ ರೈಲಿನಲ್ಲಿ ಕುಮಾರ್ ಮತ್ತು ನಾನು ಹೊರಟಾಗ ಮನಸ್ಸಿನ ತುಂಬಾ ಲಕ್ಷಾಂತರ ಹಕ್ಕಿಗಳ ಕಲರವ. ಏಕೆಂದರೆ ಹೊರಟಿದ್ದುದು ಒರಿಸ್ಸಾದ ಚಿಲ್ಕಾ ಸರೋವರಕ್ಕೆ. ಪ್ರಪಂಚದ ಎರಡನೆಯ ಅತಿದೊಡ್ಡ ಸಮುದ್ರ ಮತ್ತು ಸಿಹಿನೀರು ಬೆರೆತಂತಹ ಸರೋವರವಾದ ಚಿಲ್ಕಾ, ನೀರು ಹಕ್ಕಿಗಳಿಗೆ ಭಾರತದ ಅತಿ ದೊಡ್ಡ ಚಳಿಗಾಲದ ಆಶ್ರಯತಾಣ. ಪಕ್ಷಿವೀಕ್ಷಕರು ಇನ್ನೂರಕ್ಕೂ ಅಧಿಕ ಜಾತಿಯ ಹಕ್ಕಿಗಳನ್ನಿಲ್ಲಿ ಗುರುತಿಸಿರುವರು.
ಜೆಟ್ ವಿಮಾನಕ್ಕೆ ಹಾರಲು ಕಲಿಸಿದ ಫ್ಲೆಮಿಂಗೋಗಳು.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿ ಎನ್ ಹೆಚ್ ಎಸ್) ಅವರು ನಡೆಸುವ "ಪಕ್ಷಿ ಶಾಸ್ತ್ರದ ಕುರಿತು ಅರಿಯುವ ಕಾರ್ಯಕ್ರಮ" ಎಂಬ ಕೋರ್ಸ್ನ ಭಾಗವಾದ ಹಕ್ಕಿಗಳಿಗೆ ಉಂಗುರ ತೊಡಿಸುವ ಕಾರ್ಯಕ್ಕೆ ನಾವು ಹೊರಟಿದ್ದೆವು. ಬಲುಗಾಂ ಎಂಬ ಪುಟ್ಟ ಊರಿನಲ್ಲಿ ಸಹಪಾಠಿಗಳೊಂದಿಗೆ ಸೇರಿಕೊಂಡೆವು. ಭಾರತದ ನಾನಾ ಭಾಗಗಳಿಂದ ಬಂದಿದ್ದ ನಮ್ಮೆಲ್ಲರಿಂದಾಗಿ ಮಿನಿ ಭಾರತವೇ ಬಲುಗಾಂನಲ್ಲಿ ಸೇರಿದಂತಿತ್ತು. ಬಲುಗಾಂನ ಹಿತ್ತಲಲ್ಲೇ ಇದೆ ಚಿಲ್ಕಾ ಸರೋವರ.

ಒಂದು ದಿನವಿಡೀ ದೋಣಿಯಲ್ಲಿ ಕೂತು ಸರೋವರವನ್ನು ಸುತ್ತಾಡಿ ಹಕ್ಕಿಗಳನ್ನು ಗುರುತಿಸಲು ಪ್ರಯತ್ನಿಸಿದೆವು. ವಿಜ್ಞಾನಿಗಳಾದ ಡಾ.ದೀಪಕ್ ಮತ್ತು ಡಾ.ಬಾಲಚಂದ್ರನ್ ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಕಿತ್ತಳೆ ಹಣ್ಣಿನಂತಿರುವ ನೀರಿನಂಚಿನ ಸೂರ್ಯ ಮತ್ತು ಭಾರತಕ್ಕೆ ಅತಿಥಿಗಳಾಗಿ ಬಂದಿರುವ ಲಕ್ಷಾಂತರ ಹಕ್ಕಿಗಳ ದರ್ಶನದಿಂದ ಮನಸ್ಸು ಪುಳಕಿತಗೊಂಡಿತು. ದೋಣಿ ಹತ್ತಿರ ಹೋದಂತೆ ಆಕಾಶಕ್ಕೆ ಕತ್ತಲು ಬರಿಸುವಂತೆ ಹಾರುವ ಆ ಬಾತುಗಳ ಸಂಖ್ಯೆ ಮತ್ತು ಶಕ್ತಿ ಅದ್ಭುತ.


ಮರುದಿನ ನಮ್ಮ ಪ್ರಯಾಣ ಚಿಲ್ಕಾ ಸರೋವರದ ಮುಖ್ಯ ದ್ವೀಪವಾದ ನಲಬಾನಕ್ಕೆ. ಫ್ಲೆಮಿಂಗೋಗಳ ಹಾರಾಟವನ್ನು ಇಲ್ಲಿ ನಿಂತು ನೋಡುವುದೇ ಒಂದು ಭಾಗ್ಯ. ಆಕಾಶದಲ್ಲಿ ಗುಲಾಬಿ ಬಣ್ಣದ ಗೆರೆಯೆಳೆದಂತೆ ಹಾರುವ ಅವುಗಳ ಹಾರಾಟವೇ ಒಂದು ದೃಶ್ಯಕಾವ್ಯ.

ಮಧ್ಯಪ್ರದೇಶದ ಧಾರ್ನ ಮಹಾರಾಜರಿಂದ ೧೯೨೬ರಲ್ಲಿ ಮೊದಲ ಬಾರಿಗೆ ಹಕ್ಕಿಗಳಿಗೆ ಉಂಗುರವನ್ನು ತೊಡಿಸಲು ಭಾರತದಲ್ಲಿ ಪ್ರಾರಂಭಿಸಲಾಯಿತು. ಬಿ.ಎನ್.ಹೆಚ್.ಎಸ್. ಆಗ ಮಹಾರಾಜರಿಗೆ ೫೦೦ ಉಂಗುರಗಳನ್ನು ಸರಬರಾಜು ಮಾಡಿತ್ತು. ನಂತರ ಅಲ್ಲಲ್ಲಿ ಈ ಉಂಗುರ ಹಾಕುವ ಕಾರ್ಯ ನಡೆದರೂ ಅಧಿಕೃತವಾಗಿ ಶುರುವಾದದ್ದು ಡಾ.ಸಲೀಂ ಅಲಿಯವರ ನೇತೃತ್ವದಲ್ಲಿ ೧೯೫೯ ರಲ್ಲಿ ಅದರಲ್ಲೂ ಡಬ್ಲ್ಯು.ಎಚ್.ಓ.(WHO) ಸಹಭಾಗಿತ್ವದಲ್ಲಿ ಹಕ್ಕಿಗಳು ತಮ್ಮೊಂದಿಗೆ ರೋಗಾಣುಗಳನ್ನು ಹೊತ್ತು ತರುತ್ತವೆಯೋ ಎಂದು ಪರೀಕ್ಷಿಸಲು. ೧೯೮೭ ರಿಂದ ಹಕ್ಕಿಗಳ ವಲಸೆಯ ಅಧ್ಯಯನ ಮಾಡಲು ಉಂಗುರ ತೊಡಿಸಲು ಪ್ರಾರಂಭಿಸಲಾಯಿತು.

ಸಂಯುಕ್ತ ರಾಷ್ಟ್ರಗಳಲ್ಲಿ ಪ್ರತಿವರ್ಷ ನಾಲ್ಕು ಲಕ್ಷ ಹಕ್ಕಿಗಳಿಗೆ ಉಂಗುರ ತೊಡಿಸುತ್ತಾರೆ. ಭಾರತದಲ್ಲಿ ನಾಲ್ಕು ದಶಕಗಳಿಂದ ಐದು ಲಕ್ಷ ಹಕ್ಕಿಗಳಿಗೆ ಉಂಗುರ ತೊಡಿಸಲಾಗಿದೆ. ಇವುಗಳಲ್ಲಿ ಪುನಃ ಸಿಕ್ಕಂತಹ ಹಕ್ಕಿಗಳು ಶೇಕಡ ಒಂದರಷ್ಟು. ಇದಕ್ಕೆ ಕಾರಣ ಉಂಗುರ ತೊಡಿಸುವ ಪರಿಣಿತರು ಕಡಿಮೆ ಇರುವುದು ಮತ್ತು ಹಣದ ಕೊರತೆ. ಇದನ್ನು ನೀಗಿಸಲು ಬಿ.ಎನ್.ಹೆಚ್.ಎಸ್. ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲಿದೆ.