Monday, May 18, 2009

ವೀರಗಾಸೆ

ಹಿಂದೆ ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ಬೃಹಸ್ಪತಿ ಸವವೆಂಬ ಯಜ್ಞವನ್ನು ಆರಂಭಿಸಿ, ಅದಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ದಾಕ್ಷಾಯಣಿ ಬರುತ್ತಾಳೆ. ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ ಮಗಳನ್ನು ಅವಮಾನಿಸುತ್ತಾನೆ. ಶಿವನನ್ನು ನಿಂದಿಸುತ್ತಾನೆ. ದಾಕ್ಷಾಯಣಿ ಇದನ್ನು ಸಹಿಸಲಾಗದೆ, "ಶಿವದ್ವೇಷಿಯಾದ ನಿನ್ನ ಮೂಲಕ ಉಂಟಾದ ಈ ದೇಹವನ್ನು ಇನ್ನು ಹೊತ್ತಿರಲಾರೆನು" ಎಂದು ಅಗ್ನಿಕುಂಡಕ್ಕೆ ಬಿದ್ದು ದೇಹತ್ಯಾಗ ಮಾಡಿದಳು. ಆಗ ಶಿವನು ಪ್ರಳಯಕಾಲದ ಭೈರವನಾಗಿ ಉಗ್ರವಾಗಿ ತಾಂಡವನೃತ್ಯ ಮಾಡುತ್ತಾ ಹಣೆ ಬೆವರು ತೆಗೆದು ನೆಲಕ್ಕೆ ಅಪ್ಪಳಿಸಿದ. ಆಗ ಜನಿಸಿದ ಗಂಡುಗಲಿ ವೀರಭದ್ರ. ವೀರಭದ್ರ ಶಿವನ ಆಜ್ಞೆಯಂತೆ ದಕ್ಷಬ್ರಹ್ಮನ ಯಾಗ ಶಾಲೆಗೆ ಹೋಗಿ ಅವನ ತಲೆಯನ್ನು ಚಂಡಾಡುತ್ತಾನೆ.
ಈ ಸಂದರ್ಭದಲ್ಲಿ ವೀರಭದ್ರನು ತೋರಿದ ಪ್ರತಾಪದ ಪ್ರತೀಕವೇ "ವೀರಗಾಸೆ" ಎಂದೂ, ಅಂದಿನಿಂದಲೇ ಈ ಕಲೆ ಬೆಳೆದು ಬಂದಿತೆಂದೂ ಕಲಾವಿದರು ಹೇಳುತ್ತಾರೆ.

ನಮ್ಮೂರು ಶಿಡ್ಲಘಟ್ಟದಲ್ಲಿ ನಾವು ನಡೆಸುವ "ಬಸವ ಜಯಂತಿ" ಹಬ್ಬದ ಉತ್ಸವದಲ್ಲಿ ವೀರಗಾಸೆ ಇರಲೇಬೇಕು. ಇವರಿಗೆ ಲಿಂಗದ ವೀರರು ಎಂದು ಕರೆಯುತ್ತಾರೆ. "ಲಿಂಗದ ವೀರ"ರನ್ನು ಊರಿಗೆ ಕರೆಸಿ ವೀರಭದ್ರನ ಪ್ರತಾಪದ ಬಗ್ಗೆ ಖಡ್ಗ ಹೇಳಿಸಿ ಕಥೆ ಕೇಳುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂಬ ನಂಬಿಕೆಯಿದೆ.

ಅವರು ಹೇಳುವ "ವಡಪು"ಗಳನ್ನು "ಖಡ್ಗ", "ಖಡೆ", "ವಡಬು" ಎಂಬುದಾಗಿಯೂ ಕರೆಯುತ್ತಾರೆ. ಇವುಗಳಲ್ಲಿ ಕೆಲವು ವೀರಾವೇಶದಿಂದ ತುಂಬಿದ್ದರೆ, ಕೆಲವು ನೀತಿಬೋಧಕ, ಪೌರಾಣಿಕ ವಿಷಯಗಳನ್ನು ಸಾರಿ ಹೇಳುತ್ತವೆ. ವಡಬುಗಳನ್ನು ಹೇಳುವಾಗ ಕರಡಿಮಜಲು ನುಡಿಸುವರು.

ಕಲಾವಿದರು ಎಷ್ಟೇ ಶ್ರೀಮಂತರಾಗಿದ್ದರೂ ಶಿವರಾತ್ರಿ, ಯುಗಾದಿ ಹಬ್ಬದಂದು ಕಾವಿ ಧರಿಸಿ ಮೂರು ಮನೆಗಾದರೂ "ಕ್ವಾರಣ್ಯ"ಕ್ಕೆ ಹೋಗಬೇಕು. ಇವರನ್ನು ವೀರಭದ್ರನ ಅವತಾರವೆಂದೇ ಭಾವಿಸಿರುವ ಗ್ರಾಮೀಣರು ಎಂದೂ ಬರಿಗೈಲಿ ಕಳುಹಿಸದೆ "ಭಿಕ್ಷೆ" ನೀಡಿ ನಮಸ್ಕರಿಸುತ್ತಾರೆ.

ಇವರು ತಲೆಗೆ ವಸ್ತ್ರ, ಕಿರೀಟವನ್ನು ಧರಿಸುವರು. ಕಾವಿ ಅಂಗಿ ಮತ್ತು ಪಂಚೆ, ಕಿವಿಗೆ ರುದ್ರಾಕ್ಷಿ, ಹಣೆಗೆ ವಿಭೂತಿ, ಕೊರಳು ತೋಳು ಮುಂಗೈಗಳಲ್ಲಿ ರುದ್ರಾಕ್ಷಿಮಾಲೆ, ನಾಗಾಭರಣ, ಎದೆಯ ಹತ್ತಿರ ವೀರಭದ್ರಸ್ವಾಮಿಯ ಹಲಗೆ, ಸೊಂಟದಲ್ಲಿ ಚೌಲಿ ಹಾಕಿದ ಹಿತ್ತಾಳೆಯ ನರಸಿಂಹ ಮತ್ತು ದಕ್ಷಬ್ರಹ್ಮನ ಶಿರಗಳನ್ನು ಧರಿಸಿರುತ್ತಾರೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ವೀರಭದ್ರನ ಹಲಗೆಯನ್ನು ಹಿಡಿದಿರುತ್ತಾರೆ. ದೇವರ ಉತ್ಸವದ ಮುಂದೆ ಕರಡಿ ವಾದ್ಯದ ಗತ್ತಿಗೆ ಲಯಬದ್ಧವಾಗಿ ಕುಣಿಯುತ್ತಾರೆ. ಕುಣಿತದ ಮಧ್ಯೆ ವೀರಭದ್ರನ ವಡಪುಗಳನ್ನು ಹೇಳುತ್ತಾರೆ.

ಆಹಾಹಾ ರುದ್ರ... ಆಹಾಹಾ ದೇವ....
ಎಲೈ ದುರುಳನಾದ ದಕ್ಷನೇ
ಶಿವನ ನಿಟಿವೆ ನೇತ್ರದಿಂದ ಉದ್ಭವಿಸಿದ
ಹರನ ಕುಮಾರನಾದ ವೀರಭದ್ರನೇ ನಾನು
ತಮ್ಮ ಕರದೊಳಗಿದ್ದ ಗರಗಸಗತ್ತಿಯಿಂದ
ಆ ದಕ್ಷಬ್ರಹ್ಮನ ಶಿರವನ್ನೇ
ಚರಚರನೆ ಕೊರೆದು
ಉರಿಯೊಳಗೆ ಹಾಕಲು...

31 comments:

Ittigecement said...

ಹುಡುಕಾಟದ ಮಲ್ಲಿಕಾರ್ಜುನ್.....

ವೀರಗಾಸೆ ಕುಣಿತದ ಬಗೆಗೆ ಕೇಳಿದ್ದೆ..
ವಿವರ ಗೊತ್ತಿರಲಿಲ್ಲ...

ಈ ಜಾನಪದ ಕಲೆಯ ವೇಷ ಭೂಷಣಗಳು ಅದ್ಭುತ...!
ವೀರಭದ್ರ ನಿಜಕ್ಕೂ ಹೀಗೇ ಇರಬಹುದು...ಸುಂದರ ಕಿರೀಟ, ಎಂಥಹ ಮೀಸೆ.. ?
ಅಬ್ಬಾ...!

ಉತ್ತಮ ಚಿತ್ರ ಲೇಖನ..
ಮಾಹಿತಿಗೆ ಧನ್ಯವಾದಗಳು....

shivu.k said...

ಮಲ್ಲಿಕಾರ್ಜುನ್,

ವೀರಭದ್ರ ಮತ್ತು ವೀರಗಾಸೆ ತುಂಬಾ ಸುಂದರವಾಗಿ ಬರೆದಿದ್ದೀರಿ...ಪೌರಾಣಿಕ ಮಾಹಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ...ದಕ್ಷ ಬ್ರಹ್ಮನ ಬಗ್ಗೆ ಗೊತ್ತಿದ್ದರೂ ಈ ವೀರಗಾಸೆ ಕುಣಿತದ ಬಗ್ಗೆ ಗೊತ್ತಿರಲಿಲ್ಲ. ನಿಮ್ಮೂರಲ್ಲಿ ನಡೆಯುವ ಉತ್ಸವಕ್ಕೆ ಒಮ್ಮೆಯಾದರೂ ಬರಬೇಕು. ಉತ್ಸವಗಳ ವಿವರ ಕ್ವಾರಣ್ಯ ಅವರ ವೇಷ ಭೂಷಣಗಳು ಖಡ್ಗ, ಹಲಗೆ[ಅದು ಗುರಾಣಿ ಇರಬೇಕಲ್ಲವೇ ಅಥವ ನೀವು ಹಲಗೆ ಎನ್ನುತ್ತಿರೇನೋ]ಎಲ್ಲವನ್ನು ಸವಿಸ್ತಾರವಾಗಿ ಬರೆದಿದ್ದೀರಿ..ಮತ್ತು ಅವರ ವಿವಿಧ ಭಾವನೆಗಳ ಫೋಟೋಗಳು ತುಂಬಾ ಚೆನ್ನಾಗಿವೆ...ತೆಂಗಿನ ಕಾಯಿಯನ್ನು ಖಡ್ಗದಿಂದ ಒಡೆಯುವ ಫೋಟೋ ತಾಂತ್ರಿಕವಾಗಿ ತುಂಬಾ ಒಳ್ಳೆಯ ಚಿತ್ರವಾಗಿದೆ...ಅದರ ಟೈಮಿಂಗ್ ಕಾಯ್ದುಕೊಂಡಿರುವುದು ನಿಮ್ಮ ಪ್ರತಿಭೆಗೆ ಚಾಕಚಕ್ಯತೆಗೆ ಸಾಕ್ಷಿಯಾಗಿದೆ....

ಅಭಿನಂದನೆಗಳು

Unknown said...

ಮಲ್ಲಿಕಾರ್ಜುನ್ ವೀರಗಾಸೆಯನ್ನು ನಾಲ್ಕಾರು ಬಾರಿ ಹತ್ತಿರದಿಂದ ನೋಡಿದ್ದೇನೆ. ಆ ಶಬ್ದ ರಭಸ ಎಲ್ಲವೂ ನಮ್ಮ ದೇಹದೊಳಗೆ ಪ್ರವೇಶಿಸಿ ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವ ಗಂಡುಕಲೆ ಇದಾಗಿದೆ. ಅದರ ಪೌರಾಣಿಕ ಹಿನ್ನಲೆಯಬಗ್ಗೆಯೂ ಒಂದಷ್ಟು ಓದಿಕೊಂಡಿದ್ದೇನೆ, ಆದರೆ ಜನಪದ ನಂಬಿಕೆಗಳು ಆಚರಣೆ ಮೊದಲಾದ ಮಾಹಿತಿಗಳು ನಿಮ್ಮ ಅದ್ಭುತವಾದ ಚಿತ್ರಗಳೊಂದಿಗೆ ನನ್ನನ್ನು ಬೇರೊಂದು ಲೋಕಕ್ಕೇ ಕರೆದೊಯ್ದವು.

PARAANJAPE K.N. said...

ಮಲ್ಲಿ,
ಪೌರಾಣಿಕ ಹಿನ್ನೆಲೆ ಇರುವ ವೀರಗಾಸೆ ನಮ್ಮ ಜನಪದೀಯ ಸ೦ಸ್ಕ್ರತಿಯ ಪ್ರತೀಕ. ನಿಮ್ಮ ಚಿತ್ರ-ಲೇಖನ ಮಾಲೆ ವರ್ಣಮಯವಾಗಿ ಮೂಡಿಬ೦ದಿದೆ. ನಾನು ವೀರಗಾಸೆ ಕುಣಿತವನ್ನು ಹತ್ತಿರದಿ೦ದ ನೋಡಿ ಬಲ್ಲೆ. ಚೆನ್ನಾಗಿದೆ.

Unknown said...

ಮಲ್ಲಿಕ್, ನಿಮ್ಮ ತಲೆಯೊಳಗೆ ಇನ್ನೂ ಏನೇನು ತುಂಬಿದೆಯೋ ಕುತೂಹಲ.. ವಿಷಯ ಯಾವುದೇ ಇರಲಿ ಅದರ ಬಗ್ಗೆ ಅಧ್ಯಯನ ಮಾಡದೆ ಬರೆಯುವುದಿಲ್ಲ ನೀವು. ಈ ಡೆಡಿಕೇಶನ್ ಜತೆ ನಿಮ್ಮ ಅನ್ವೇಷಕ ಪ್ರಕೃತಿ ಇದೆಯಲ್ಲ ಅದು ನಿಮ್ಮನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತದೆ. ಶುಭವಾಗಲಿ..

ಮನಸು said...

ಸರ್,
ನಮ್ಮ ಊರಲ್ಲಿ ವೀರಗಾಸೆ ಯಾವಾಗಲೊ ಕರೆಸುತ್ತಾರೆ... ಅವರ ಆರ್ಭಟಕ್ಕೆ, ಕುಣಿತಕ್ಕೆ ಎಲ್ಲರೊ ಹೆದರಿ ನಡುಗಿ ಬಿಡುತ್ತಾರೆ.... ನಮ್ಮ ಊರಿನಲ್ಲಿ ದೇವನಸ್ಥಾನ ಪೂಜೆಗೆಂದು ನಮ್ಮ ಮನೆಯಲ್ಲಿ ಕರೆಸಿದ್ದಾಗ ಒಂದು ಮಹಾ ದೊಡ್ಡ ಸಂಗತಿ ನೆಡೆದು ಬಿಟ್ಟಿತ್ತು..... ಹೆಂಗಸರು ಮಕ್ಕಳು ಎಲ್ಲ ಹೆದರಿ ಓಡಿ ಹೋಗಿದ್ದರು....ಬಹಳ ಚೆನ್ನಾಗಿತ್ತು ಅಂದಿನ ಪ್ರಸಂಗ ಹಹ ಇನ್ನು ಮರೆಯಲು ಸಾಧ್ಯವಿಲ್ಲ.
ಎಲ್ಲವನ್ನು ನೆನಪಿಸಿತು ನಿಮ್ಮ ಲೇಖನ, ಚಿತ್ರಗಳು ಸೊಪರ್!!!

ಬಿಸಿಲ ಹನಿ said...

ನಿಮ್ಮ ಚಿತ್ರ ಲೇಖನ ತುಂಬಾ ಚನ್ನಾಗಿದೆ. ಈ ವೀರಗಾಸೆಯವರಿಗೆ ಉತ್ತರ ಕರ್ನಾಟಕದ ಕಡೆ "ಪುರವಂತರು" ಎಂದು ಕೂಡ ಕರೆಯುತ್ತಾರೆ. ನಾವು ಬಾಲ್ಯದಲ್ಲಿದ್ದಾಗ ಜಾತ್ರೆಗಳಲ್ಲಿ ಇವರ ಕುಣಿತ ಹಾಗು ಒಡಪುಗಳನ್ನು ನೋಡಿ ಕೇಳಿ ಆನಂದಿಸುತ್ತಿದ್ದೆವು.ಆ ಒಡಪುಗಳಲ್ಲಿ ಬಳಸುವ ಭಾಷೆಯ ಬಗ್ಗೆ ನಾನು ಸಾಕಷ್ಟು ಸಾರಿ ಬೆರಗಾಗಿದ್ದೇನೆ.ಅದನ್ನು ಮತ್ತೊಮ್ಮೆ ಜ್ಞಾಪಿಸಿದ್ದಕ್ಕೆ ಧನ್ಯವಾದಗಳು.

sunaath said...

ವೀರಗಾಸೆಯ ಬಗೆಗೆ ನೀವು ನೀಡಿದ ಮಾಹಿತಿ ಹಾಗೂ ಚಿತ್ರಗಳು ಅತ್ಯುತ್ತಮವಾಗಿವೆ. ಅಭಿನಂದನೆಗಳು.

SSK said...

ಮಲ್ಲಿಕಾರ್ಜುನ ಅವರೇ, ನಿತ್ಯ ಜಂಜಾಟದ ಪಟ್ಟಣದ ಬದುಕಿಗೊಂದು ಬದಲಾವಣೆ ಎನ್ನುವಂತೆ ನಿಮ್ಮ ಊರಿನಲ್ಲಿ ನಡೆದ ಈ ವೀರಗಾಸೆ, ಅದರ ವಿವರಗಳನ್ನು ನಮಗೆ ನೀಡಿ ಮನಸಿಗೆ ಮುದ ತಂದಿದ್ದೀರ!
ಲೇಖನ ಮತ್ತು ಫೋಟೋಗಳು ತುಂಬಾ ಚೆನ್ನಾಗಿವೆ.
ಊರುಗಳಲ್ಲಿ ಯಾವುದಾದರೊಂದು ಹಬ್ಬಗಳಲ್ಲಿ ಅಥವಾ ಉತ್ಸವಗಳಲ್ಲಿ ಇಂತಹ ಪೌರಾಣಿಕ ನಾಟಕಗಳ ಮನರಂಜನೆ ಇದ್ದೆ ಇರುತ್ತದೆ. ಅವುಗಳನ್ನು ವೀಕ್ಷಿಸುವುದೇ ಒಂದು ವಿಭಿನ್ನವಾದ ಆನಂದ! ನನಗೆ ಯಕ್ಷಗಾನ ನೋಡಲು ತುಂಬಾ ಇಷ್ಟ!

ರೂpaश्री said...

ವೀರಗಾಸೆ ಕುಣಿತದ ಹೆಸರು ಕೇಳಿದ್ದೆ, ಹೆಚ್ಚಿನ ವಿವರಗಳು ಗೊತ್ತಿರಲಿಲ್ಲ.. ನಿಮ್ಮ ಚಿತ್ರಲೇಖನ ಓದಿ ದಕ್ಷ ಬ್ರಹ್ಮನ ವಿಚಾರ ಮತ್ತು ಈ ಕಲೆಯ ಹಿನ್ನಲೆ ಎಲ್ಲವೂ ತಿಳಿಯಿತು.
ಧನ್ಯವಾದಗಳು!!

Guruprasad said...

ಮಲ್ಲಿಕಾರ್ಜುನ್,
ವೀರಗಾಸೆ ಬಗ್ಗೆ ಅಸ್ಟೇನು ಗೊತ್ತಿರಲಿಲ್ಲ,....ಚಿತ್ರ ವಿವರಣೆ ಸಹಿತ , ಪೌರಾಣಿಕ ಕತೆಯ ಸಮೇತ ವಿವರಿಸಿ ಹೇಳಿದ್ದಿರ... ತುಂಬ ಧನ್ಯವಾದಗಳು...... ಹಾಗೆ ನಿಮ್ಮ ಫೋಟೋ ಗಳು ಅಸ್ಟೆ...

ಗುರು

ಶಿವಪ್ರಕಾಶ್ said...

ಮಲ್ಲಿಕಾರ್ಜುನ ಅವರೇ,
ಒಳ್ಳೆ ಮಾಹಿತಿಯುಕ್ತ ಲೇಖನ ಬರೆದಿದ್ದೀರಿ.
ನಮ್ಮ ಮನೆಯ ದೇವರು "ವೀರಭದ್ರ".
ಮನೆಯಲ್ಲಿ ಯಾವುದೇ ಮದುವೆ ನಡೆದರೂ ಈ ಕಾರ್ಯವನ್ನು ಮಾಡಲೇಬೇಕು. ಆದ್ರೆ ಹಿನ್ನಲೆ ಗೊತ್ತಿರಲಿಲ್ಲ.
ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು.

Anonymous said...

ಮಲ್ಲಿಕಾರ್ಜುನ,

"ವೀರಗಾಸೆ" ಗಂಡು ಮೆಟ್ಟಿದ ನಾಡು ಉತ್ತರಕರ್ನಾಟಕದ ಜಾನಪದ ಕಲೆ.

ವೀರಗಾಸೆಯನ್ನು "ಗುಗ್ಗಳ ತೆಗೆಯುವ" ಕಾರ್ಯಕ್ರಮದಲ್ಲಿ ಹೆಚ್ಚಾಗಿ ನೆಡೆಸಲಾಗುತ್ತದೆ, ಈ ಕಲೆಗಾರರನ್ನು "ಪುರವಂತರು" ಎಂದು ಕರೆಯುತ್ತಾರೆ..

ಒಡಪುಗಳ ಪ್ರತಿಯೊಂದು ಸಲುಗಳ ನಡುವೆ ನೆರೆದ ಜನ "ಖಡೇ" ಎನ್ನುತ್ತಾರೆ,

ನನ್ನ ಬಾಲ್ಯದ ನೆನಪುಗಳು ಮತ್ತೆ ಮನದಂಗಳದಲ್ಲಿ ಜೋಕಾಲಿಯಾಡಿದವು.

ಧನ್ಯವಾದ

-ಶೆಟ್ಟರು

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ನೀವು ಬರೆದಂತೆ ಈ ಜಾನಪದ ಕಲೆಯ ವೇಷಭೂಷಣಗಳು ನಿಜಕ್ಕೂ ಅದ್ಭುತ. ಈ ಬಾರಿ ನಮ್ಮೂರಲ್ಲಿ ನಡೆಯುವಾಗ ತಿಳಿಸುವೆ ಬನ್ನಿ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಿಮಗೂ ಈ ಬಾರಿ ವೀರಗಾಸೆ ನಡೆಯುವಾಗ ತಿಳಿಸುವೆ ಬರುವಿರಂತೆ. ಅವರು ಖಡ್ಗ ಹೇಳುವಾಗ ಆವೇಶ ಬರುತ್ತದೆ. ಆಗ ಅವರ ಮುಂದೆ ತೆಂಗಿನಕಾಯನ್ನು ಒಡೆಯುತ್ತಾರೆ ಮತ್ತು ತೆಂಗಿನಕಾಯನ್ನು ಗಾಳಿಯಲ್ಲಿ ಎಸೆದರೆ ಕತ್ತಿಯಿಂದ ಕತ್ತರಿಸುತ್ತಾರೆ. ಸಾಕಷ್ಟು ಪ್ರಯತ್ನದ ನಂತರ ಒಂದು ಉತ್ತಮ ಷಾಟ್ ಸಿಕ್ಕಿತು.

ಮಲ್ಲಿಕಾರ್ಜುನ.ಡಿ.ಜಿ. said...

ಡಾ.ಸತ್ಯನಾರಾಯಣ್ ಸರ್,
ಧನ್ಯವಾದಗಳು. ಕರ್ಪೂರ ಹಚ್ಚಿ ಬಾಯಲ್ಲಿಟ್ಟುಕೊಳ್ಳುವುದು, ಏಣಿಯ ಮೇಲೆ ಕುಣಿಯುವುದು, ಅಕ್ಕಿ ತುಂಬಿರುವ ಚೊಂಬನ್ನು ಕತ್ತಿಯಿಂದೆತ್ತುವುದು ಇತ್ಯಾದಿ ಚತುರತೆಗಳನ್ನು ನೋಡುವುದೇ ಸೊಗಸು.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ನಿಜ. ನೀವಂದಂತೆ ಈ ಕಲೆ ನಮ್ಮ ಜನಪದೀಯ ಸ೦ಸ್ಕ್ರತಿಯ ಪ್ರತೀಕ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಮ ಅವರೆ,
ಧನ್ಯವಾದಗಳು. ಬರೆಯಲು ಹೊರಟಾಗ ಇದರ ಬಗ್ಗೆ ಸಿಗುವ ಮಾಹಿತಿಯನ್ನು ಕಲೆಹಾಕುತ್ತೇನೆ. ಇದರಿಂದ ನನ್ನ ಕಲಿಕೆಯೂ ಆಗುತ್ತದೆಂದು. ಬರೆದಾದ ಮೇಲೆ ಬ್ಲಾಗಲ್ಲಿ ಹಂಚಿಕೊಂಡಾಗ ಇನ್ನೂ ಹೆಚ್ಚಿನ ಮಾಹಿತಿ ಗೆಳೆಯರಾದ ನೀವುಗಳು ಕಮೆಂಟ್ ರೂಪದಲ್ಲಿ ಬರೆಯುತ್ತೀರಿ. ಆಗ ಇನ್ನಷ್ಟು ಕಲಿಕೆ ಆಗುತ್ತೆ. ಅಲ್ಲವೇ?

ಮಲ್ಲಿಕಾರ್ಜುನ.ಡಿ.ಜಿ. said...

ಮನಸು ಅವರೆ,
ವೀರಗಾಸೆಯವರ ಆರ್ಭಟಕ್ಕೆ ಕೆಲವು ಹೆಂಗಸರು ಮಕ್ಕಳು ಹೆದರುವುದುಂಟು. ಊರೆಲ್ಲಾ ಇವರೊಂದಿಗೆ (ಪಲ್ಲಕ್ಕಿ ಸಮೇತ) ಮೆರವಣಿಗೆ ಹೋಗುವಾಗ ನೀವು ಬರೆದಂತಹ ಅನುಭವವಾಗಿದ್ದಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಉದಯ್ ಸರ್,
ನೀವು ಬರೆದಿರುವುದು correct. ಉತ್ತರ ಕರ್ನಾಟಕದ ಕಡೆ "ಪುರವಂತರು" ಎಂದು ಕೂಡ ಕರೆಯುತ್ತಾರೆ. ನಮ್ಮ ಕಡೆ ಲಿಂಗದವೀರರು ಅನ್ನುತ್ತಾರೆ. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

SSK ಅವರೆ,
ನೀವಂದಂತೆ ನಿತ್ಯ ಜಂಜಾಟದ ಬದುಕಿಗೊಂದು ಬದಲಾವಣೆ ಈ ಕಲೆಯ ವೀಕ್ಷಣೆ. ನಿಜ. ಅದಕ್ಕೇ ಈ ಕಲೆಯನ್ನು ಪ್ರೋತ್ಸಾಹಿಸಲೆಂಬಂತೆ ಹಿರಿಯರು ಊರಿಗೆ ಶುಭ ಈ ಕಲೆಯಿಂದ ಎಂದು ಗುರುತಿಸಿರಬೇಕು.

ಮಲ್ಲಿಕಾರ್ಜುನ.ಡಿ.ಜಿ. said...

ರೂಪಶ್ರೀ ಅವರೆ,
ನಿಮಗೆಲ್ಲಾ ಈ ಕಲೆಯ ಚಿತ್ರಗಳು ಇಷ್ಟವಾಗಿದ್ದಕ್ಕೆ ಖುಷಿಯಾಯ್ತು. ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಗುರು ಅವರೆ,
ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕ್ಕೆ ಹಿಗ್ಗಿದ್ದೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ಶಿವಪ್ರಕಾಶ್ ಅವರೆ,
ನಂದಿ ಗ್ರಾಮದಲ್ಲಿ ಮತ್ತು ನಂದಿ ಬೆಟ್ಟದ ಮೇಲೆ ವೀರಭದ್ರಸ್ವಾಮಿ ದೇವಾಲಯವಿದೆ. ನಿಮಗೆ ಲೇಖನ ಇಷ್ಟವಾಗಿದ್ದು ತಿಳಿದು ಖುಷಿಯಾಯ್ತು.

ಮಲ್ಲಿಕಾರ್ಜುನ.ಡಿ.ಜಿ. said...

ಶೆಟ್ಟರೆ,
ನೀವು ಬರೆದಂತೆ ಇವರನ್ನು ಪುರವಂತರು ಎಂದೂ ಕರೆಯುವರು.
ನೀವು ತಿಳಿಸಿದ ಮಾಹಿತಿಗೆ ಧನ್ಯವಾದಗಳು. ಹೀಗೇ ತಿದ್ದಿ ಪ್ರೋತ್ಸಾಹಿಸಿ.

Naveen ಹಳ್ಳಿ ಹುಡುಗ said...

ಮಲ್ಲಿ ಯಣ್ಣ ಮುಂದಿನ ವರ್ಷ ವೀರಗಾಸೆ ನೋಡಲು ನಿಮ್ಮ ಊರಿಗೆ ತಪ್ಪದೆ ಬರುವೆ.. ಲೇಖನ ತುಂಬ ಚೆನ್ನಾಗಿದೆ..

ಧರಿತ್ರಿ said...

ಮಲ್ಲಿಯಣ್ಣ..ಸೂಪರ್ ಆಗಿದೆ. ತುಂಬಾ ಖುಷಿಯಾಯಿತು..ನಮ್ಮ ಕಡೆ ಕಾಲೇಜು ವಿಶೇಷ ಕಾರ್ಯಕ್ರಮಗಳಲ್ಲಿ ಇದನ್ನು ಮಾಡೇ ಮಾಡ್ತಾರೆ..ಹೈಸ್ಕೂಲ್ ನಲ್ಲಿರುವಾಗ ನಾನೂ ಭಾಗವಹಿಸಿದ್ದೆ. ನಿಜಕ್ಕೂ ಆ ವೇಷಭೂಷಣ..ಆಮೇಲೆ ಪಾತ್ರದಲ್ಲಿ ಆ ಹಾವ-ಭಾವ ವ್ಯಕ್ತಪಡಿಸುವುದು ತೀರಾ ಕಷ್ಟ.
-ಧರಿತ್ರಿ

ವಿನುತ said...

ತು೦ಬಾ ಚೆನ್ನಾಗಿದೆ. ತ೦ದೆಯವರ ಬಾಯಲ್ಲಿ 'ಆಹಾಹಾ ರುದ್ರ... ಆಹಾಹಾ ದೇವ....' ಕೇಳ್ತಾ ಇದ್ರೆ, ವೀರಭದ್ರನೇ ಕಾಣಿಸುತ್ತಿದ್ದ. ನಾನೂ ಹೇಳಲು ಹೋಗಿ ನಗೆಪಾಟಲಾಗುತ್ತಿತ್ತು :)

ಮಲ್ಲಿಕಾರ್ಜುನ.ಡಿ.ಜಿ. said...

ಧರಿತ್ರಿಯವರೆ,
ನೀವೂ ಈ ಪಾತ್ರವನ್ನು ಅಭಿನಯಿಸಿದ್ದೀರಾ? ಹೇಗಿತ್ತು ಆ ಅನುಭವ? ತುಂಬಾ ಕಷ್ಟವಲ್ವಾ? ಆವೇಶ, ಕೋಪ ... ಇದರ ಬಗ್ಗೆ ನಿಮ್ಮ ಬ್ಲಾಗಲ್ಲಿ ಬರೆಯಿರಿ.

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಅವರೆ,
ನಿಮ್ಮ ತಂದೆ ಹೇಳುತ್ತಿದ್ದರಾ ವಡಪುಗಳನ್ನು? ಇದನ್ನು ಕೇಳುವುದೇ ಇಂದು ಸೊಗಸು.ಇದಕ್ಕೆಂದೇ ಈ ಕಲೆಗಳನ್ನು ಉಳಿಸಿಕೊಳ್ಳಬೇಕಿದೆ. ಅಲ್ವಾ?