Sunday, January 30, 2011

"ಅರೆಕ್ಷಣದ ಅದೃಷ್ಟ" ಪುಸ್ತಕ ಬಿಡುಗಡೆ ಸಮಾರಂಭದ ಚಿತ್ರಗಳು

ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ನನ್ನ "ಅರೆಕ್ಷಣದ ಅದೃಷ್ಟ" ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾರೈಸಿ, ಪ್ರೋತ್ಸಾಹ ನೀಡಿದ ಎಲ್ಲ ಸಹೃದಯವಂತ ಗೆಳೆಯರಿಗೂ ನನ್ನ ಹೃದಯಪೂರ್ವಕ ವಂದನೆಗಳು. ಆ ದಿನದ ಈ ಫೋಟೋಗಳನ್ನು ಶಿವು.ಕೆ.,ಪ್ರಕಾಶ್ ಹೆಗಡೆ ಮತ್ತು ರಾಜೇಶ ತೆಗೆದಿದ್ದಾರೆ.

ವಸುಧೇಂದ್ರರ ಅಪ್ಪುಗೆ.


ಹಿರಿಯ ಛಾಯಾಗ್ರಾಹಕರಾದ ಎಂ.ವಿಶ್ವನಾಥ್‌ರೊಂದಿಗೆ.


ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಲಾಧರ್, ದೇವರಾಜ್ ಮತ್ತು ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ನಾಗಭೂಷಣ್.





ಡಾ.ಶೇಷಶಾಸ್ತ್ರಿಯವರು ಸದಾ ಅಧ್ಯಯನದಲ್ಲಿ ನಿರತರು.





ಹಿರಿಯ ಛಾಯಾಗ್ರಾಹಕರಾದ ಹೆಬ್ಬಾರ್‌, ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ವೆಂಕಟರೆಡ್ಡಿ, ಶಿಡ್ಲಘಟ್ಟ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಕಂಠ, ತರಬಳ್ಳಿ ಭಾಸ್ಕರರೆಡ್ಡಿ






































































































































































Saturday, January 22, 2011

ಅರೆಕ್ಷಣದ ಅದೃಷ್ಟ

ಆತ್ಮೀಯ ಬ್ಲಾಗ್ ಸ್ನೇಹಿತರಿಗೆ ನನ್ನ ನಮಸ್ಕಾರಗಳು.
ನವಕರ್ನಾಟಕ ಪ್ರಕಾಶನ ಸಂಸ್ಥೆಯವರು ಪ್ರಕಟಿಸುತ್ತಿರುವ ನನ್ನ ಪುಸ್ತಕ "ಅರೆಕ್ಷಣದ ಅದೃಷ್ಟ" ಭಾನುವಾರ ದಿನಾಂಕ ೨೩-೦೧-೨೦೧೧ ರಂದು ಬೆಳಿಗ್ಗೆ ೧೦ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ.ಪತ್ರಕರ್ತರು ಹಾಗೂ ಪರಿಸರವಾದಿಗಳೂ ಆದ ನಾಗೇಶ್ ಹೆಗಡೆ ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಎಸ್.ರಾಜಾರಾಮ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಯಮಾಡಿ ಬನ್ನಿ. ಶುಭ ಹಾರೈಸಿ.



ಉದ್ದನೆಯ ಹುಳು ನಿಧಾನವಾಗಿ ಪಾತರಗಿತ್ತಿಯ ರೂಪ ಆಗುವುದಾದರೂ ಹೇಗೆ? ಗೂಡಿನಲ್ಲಿ ಬೆಚ್ಚಗಿರುವ ಪುಟಾಣಿ ಹಕ್ಕಿಗಳಿಗೆ ಕಾಳುಗಳನ್ನು ತಂದುಕೊಡಲು ಹಕ್ಕಿಗಳು ಪಡುವ ಪ್ರಯಾಸವೇನು? ಕೀಟಗಳು ಕಡ್ಡಿಯ ಮೇಲೆ ಸರ್ಕಸ್ ಮಾಡುತ್ತ ಮುಂದೆ ಸಾಗುತ್ತಿದ್ದರೆ, ಅದರ ಮೇಲೆ ನಿಗಾ ಇಡುವ ಹಕ್ಕಿ ಮುಂದಿನ ತಂತ್ರವೇನು?....ಇನ್ನೂ ಮುಂತಾದ ಪ್ರಶ್ನೆಗಳಿಗೆ ಚಿತ್ರಗಳೊಂದಿಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ. ದಯವಿಟ್ಟು ಓದಿ. ಮಕ್ಕಳಿಗೂ ಕೊಡಿ. ನಿಮ್ಮ ಅನಿಸಿಕೆಯನ್ನು ತಿಳಿಸಿ.




ನಿಮ್ಮೆಲ್ಲರ ಹಾರೈಕೆಗಳನ್ನು ಆಶಿಸುವ,
ಇಂತಿ,
ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ

Tuesday, January 18, 2011

ಉಣಿಸೆ ಮೀನಿಗಾಗಿ ಪಕ್ಷಿ, ಮನುಷ್ಯರ ಸ್ಪರ್ಧೆ - ಕೆಸರಿನಲ್ಲಿ ನಡೆಯುವ ಜುಗಲಬಂದಿ

ಅಗಲವಾದ ರಕ್ಕೆ ಬಿಚ್ಚಿಕೊಂಡು ಗಿಡುಗ ಆಹಾರಕ್ಕಾಗಿ ಅತ್ತ ಹೊಂಚು ಹಾಕುತ್ತಿದ್ದರೆ, ಇತ್ತ ಅದೇ ಆಹಾರಕ್ಕಾಗಿ ಕೆಲ ಮಂದಿ ಶ್ರಮಿಸುತ್ತಿದ್ದರು. ಅಹಾರ ತನಗೆ ಸಿಕ್ಕೀತು ಎಂದು ದೊಡ್ಡ ಸುತ್ತುಗಳನ್ನು ಹಾಕುತ್ತ ಗಿಡುಗ ನಿಗಾವಹಿಸಿದ್ದರೆ, ಇದ್ದಬದ್ದ ಎಲ್ಲವನ್ನೂ ಒಯ್ದುಬಿಡಬೇಕು ಎಂಬ ಉಮೇದು ಕೆಲ ಮಂದಿಯದ್ದು. ಆಹಾರ ಒಂದು, ಬೇಟೆಗಾರರು ಹಲವರು ಎಂಬಂತೆ ನಡೆದಿತ್ತು ಜುಗಲಬಂದಿ.

ಪಕ್ಷಿ ಮತ್ತು ಮನುಷ್ಯರ ನಡುವಿನ ಆಹಾರ ಸಂಘರ್ಷ ಕಂಡು ಬಂದದ್ದು ಶಿಡ್ಲಘಟ್ಟದ ಕೈವಾರ ರಸ್ತೆಯಲ್ಲಿರುವ ತಮ್ಮನಹಳ್ಳಿ ಕೆರೆಯ ಬಳಿ. ಆಹಾರದ ರೂಪದಲ್ಲಿ ಇದ್ದದ್ದು ಬೃಹತ್ ಪ್ರಾಣಿಯೇನಲ್ಲ, ಪುಟ್ಟ ಪುಟ್ಟ ಆಕಾರದ ‘ಉಣಿಸೆ ಮೀನು’.


ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಕೆರೆಯಲ್ಲಿ ಉಣಿಸೆ ಮೀನು ಹಿಡಿಯುತ್ತಿರುವ ಗ್ರಾಮಸ್ಥರು.

ಸಾಮಾನ್ಯವಾಗಿ ಕೆರೆಯಲ್ಲಿ ನೀರು ಕಡಿಮೆಯಾದಾಗ. ಅಳಿದುಳಿದ ಸ್ವಲ್ಪ ನೀರಿನಲ್ಲಿ ಉಣಿಸೆ ಮೀನು ಸಿಗುತ್ತವೆ. ನಾಟಿ ಮೀನುಗಳಲ್ಲಿಯೇ ಅತ್ಯಂತ ಸಣ್ಣ ಮೀನುಗಳು ಕೆರೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಚಿಮ್ಮತೊಡಗುತ್ತವೆ. ಈ ಒಂದು ಕ್ಷಣಕ್ಕಾಗಿ ಕಾಯುವ ನೀರು ಹಕ್ಕಿಗಳು ಮತ್ತು ಇತರ ಪಕ್ಷಿಗಳು ಗುಂಪುಗುಂಪಾಗಿ ಕೆರೆ ಬಳಿ ಬರುತ್ತವೆ. ಗ್ರಾಮಸ್ಥರು, ‘ಉಣಿಸಲೆದ್ದವೆ ಹಿಡಿಯೋಕೋಗೋಣ ಬರ್ರೋ’ ಎನ್ನುತ್ತಾ ಸಂಭ್ರಮದಿಂದ ಕೆರೆಗಳತ್ತ ಹೋಗುತ್ತಾರೆ. ಗದ್ದೆಗಳಲ್ಲಿ ಹಾಕುವ ರೀತಿ ಟಾಕುಗಳನ್ನು ಕೆರೆಯಲ್ಲಿ ಹಾಕಿ ಉಣಿಸೆ ಮೀನುಗಳನ್ನು ಹಿಡಿಯುತ್ತಾರೆ.


ಮೀನುಹಿಡಿಯಲು ಬಂದ ಬಿಳಿಗರುಡ.

ಉಣಿಸೆ ಮೀನುಗಳು ನೋಡಲಿಕ್ಕೂ ಚೆಂದ, ತಿನ್ನಲು ಸಹ ರುಚಿಕಟ್ಟು. ಆದರೆ ಅವುಗಳನ್ನು ಪಡೆಯಲು ಮೈಕೈ ಎಲ್ಲವೂ ಕೆಸರು ಮಾಡಿಕೊಳ್ಳಬೇಕು. ಗೊಜ್ಜು ಗೊಜ್ಜಾದ ನೀರಿನಲ್ಲಿ ಜರಡಿ ಹಿಡಿದು ಶೋಧಿಸಿ, ಕಪ್ಪೆ, ಏಡಿ ಮುಂತಾದವುಗಳನ್ನು ಬದಿಗಿರಿಸಿ, ಮಣ್ಣಿನಲ್ಲಿ ತೊಳೆದು ಶುದ್ಧೀಕರಿಸಿದಾಗ ಮೀನುಗಳು ಕೈಗೆ ಸಿಗುತ್ತವೆ. ಇಷ್ಟೆಲ್ಲ ಕಷ್ಟಪಟ್ಟು ಮೀನುಗಳನ್ನು ಕೆರೆಯಿಂದ ತೆಗೆದು ಪಕ್ಕಕ್ಕೆ ಇರಿಸಿದರೆ ಸಾಕು, ರೊಂಯ್ಯನೇ ಬರುವ ಗಿಡುಗಗಳು ತಮ್ಮ ಪಂಜದಲ್ಲಿ ಮೀನನ್ನು ಹಿಡಿದು ಹಾರಿಬಿಡುತ್ತವೆ. ಇಷ್ಟಕ್ಕೆ ತೃಪ್ತಿಪಡದ ಹದ್ದು ಮತ್ತು ಗಿಡುಗಗಳು ಹೊಂಚು ಹಾಕುತ್ತ ಆಕಾಶಪೂರ್ತಿ ಸುತ್ತುತ್ತ ಇರುತ್ತವೆ.

ಬೇಕಾದ ಮೀನುಗಳನ್ನು ಒಯ್ಯುವ ಜನರು ಕೆರೆಯಂಚಿನಲ್ಲಿ ಬೇಡದ ಮೀನುಗಳನ್ನು, ಕಪ್ಪೆಗಳನ್ನು, ಏಡಿಗಳನ್ನು ಎಸೆದು ಹೋಗುತ್ತಾರೆ. ಇದರಿಂದ ಕೆರೆ ಪರಿಸರ ಮಲಿನಗೊಳ್ಳುತ್ತದೆ. ಮತ್ತವೇ ಹದ್ದು ಮತ್ತು ಗಿಡುಗಗಳು ಬಂದು ಅವುಗಳನ್ನು ತಮ್ಮ ಪಂಜದಲ್ಲಿ ಹಿಡಿದುಕೊಂಡು ಆ ಸ್ಥಳದಿಂದ ದೂರದೂರಕ್ಕೆ ಹೋಗುತ್ತವೆ. ಇದನ್ನೆಲ್ಲ ನೋಡುವ ಜನರು, ‘ಹದ್ದುಗಳು ನಿಸರ್ಗದ ಪೌರ ಕಾರ್ಮಿಕರು’ ಎಂದು ತಮಾಷೆ ಕೂಡ ಮಾಡುತ್ತಾರೆ.


ಹಾರುವಾಗಲೇ ಕೆಳಗಿರುವ ಮೀನನ್ನು ಅಂದಾಜಿಸಿ ವೇಗ ಮತ್ತು ಗಾಳಿಯದಿಕ್ಕನ್ನು ಲೆಕ್ಕ ಹಾಕಿಕೊಂಡು ಮೀನನ್ನು ಹಿಡಿಯುವ ಗರುಡ.

‘ಉಣಿಸೆ ಮೀನಿನ ಸಾರು ರುಚಿಕಟ್ಟಾದದ್ದು. ಅತ್ಯಂತ ಸಣ್ಣದಾಗಿರುವ ಈ ಮೀನುಗಳನ್ನು ಬೂದಿ, ರಾಗಿ ಹಿಟ್ಟು, ಹುಣಸೆಹಣ್ಣು ಮತ್ತು ಉಪ್ಪಿನಲ್ಲಿ ಬಳಸಿ ಗುಡ್ಡೆ ಹಾಕಿಕೊಂಡು ತೊಳೆಯುತ್ತಾರೆ. ಕೆಲವರು ಗಟ್ಟಿಯಾಗಿ ಸಾರು ಮಾಡಿದರೆ, ಇನ್ನು ಕೆಲವರು ಬಸಿದು ಸಾರು (ಬಸ್ಸಾರು) ಮಾಡುತ್ತಾರೆ. ಜನ ಹೆಚ್ಚು ಇಷ್ಟಪಡುವುದು ರಾಗಿ ಮುದ್ದೆ ಮತ್ತು ತಂಗಳು ಸಾರು. ಈ ಮೀನುಗಳು ತಿನ್ನುವುದರಿಂದ ದೇಹಕ್ಕೆ ಪೌಷ್ಠಿಕತೆ ಸಿಗುತ್ತದೆ. ಮುಳ್ಳು ಚುಚ್ಚುವ ಭಯವಿರುವುದಿಲ್ಲ. ಆದರಿಂದ ಮಕ್ಕಳಿಂದ ಮುದುಕರವರೆಗೂ ಇದು ಉತ್ತಮ ಹಾಗೂ ರುಚಿಕಟ್ಟಾದ ಆಹಾರ’ ಎನ್ನುತ್ತಾರೆ ಪಾಕಪ್ರವೀಣರು.


ಹಾರುವ ಬಿಳಿಗರುಡನ ತೀಕ್ಷ್ಣ ನೋಟ.

‘ಉಣಿಸೆ ಮೀನು ನೋಡಿದರೆ, ಅನೇಕರ ಬಾಯಲ್ಲಿ ನೀರು ಒಸರುತ್ತದೆ. ಇದರ ರುಚಿ ತಿಳಿದವರು ಹಣಕ್ಕೆ ಪ್ರಾಮುಖ್ಯತೆ ನೀಡದೇ ಎಷ್ಟಾದರೂ ಕೊಳ್ಳುತ್ತಾರೆ. ನಮ್ಮ ಮನೆಗಾಗಿ ನಾವು ಇಲ್ಲಿ ಮೀನುಗಳನ್ನು ಹಿಡಿಯುತ್ತೇವೆ. ಆದರೆ ಇಲ್ಲಿ ಕೆಲವರು ಒಂದು ಕೆಜಿಗೆ ೨೫೦ ರೂಪಾಯಿಯಂತೆ ಮೀನುಗಳನ್ನು ಮಾರುತ್ತಾರೆ. ಕೆಸರಿನಲ್ಲಿ ಇಡೀ ದಿನ ನಿಂತು ಮೀನು ಹಿಡಿಯುವ ಶ್ರಮ ಮೀನುಸಾರು ತಿನ್ನುವಾಗ ಸಾರ್ಥಕವಾಯಿತು ಅನ್ನಿಸುತ್ತದೆ’ ಎಂದು ತಮ್ಮನಹಳ್ಳಿಯ ನಾರಾಯಣಸ್ವಾಮಿ ತಿಳಿಸಿದರು.
‘ಕೆರೆಗಳಲ್ಲಿ ನೀರು ನಿಲ್ಲದೇ ಬಟಾಬಯಲಾಗುತ್ತಿದೆ. ದೊಡ್ಡ ಮಾವಿನ ತೋಪುಗಳು, ಕೋಸು ಮುಂತಾದ ಬೆಳೆಗಳಿಗೆ ಸಿಂಪಡಿಸುವ ವಿಷಕಾರಿ ಕ್ರಿಮಿನಾಶಕ ಬಳಸಿದ ಪಂಪ್ ಮತ್ತು ಡ್ರಮ್‌ಗಳನ್ನು ಕೆರೆಯಲ್ಲಿ ತೊಳೆಯುತ್ತಾರೆ. ಲಾರಿ, ಟೆಂಪೋ ಮುಂತಾದ ದೊಡ್ಡ ವಾಹನಗಳನ್ನು ಕೆರೆಯಲ್ಲಿ ತೊಳೆದು ಡೀಸಲ್, ಆಯಿಲ್ ಕೆರೆಯ ನೀರಿಗೆ ಸೇರುತ್ತಿದೆ. ಔಷಧಿ ಸಿಂಪಡಿಸಿರುವ ಗಡ್ಡೆ ತರಕಾರಿಗಳನ್ನು ತೊಳೆಯಲು ರೈತರು ಕೆರೆಯನ್ನೇ ಅವಲಂಬಿಸುತ್ತಾರೆ. ಕೆರೆಯಲ್ಲಿ ಮೀನುಭಕ್ಷಕ ಮೀನುಸಾಕಾಣಿಕೆ ಮುಂತಾದ ಕಾರಣಗಳಿಂದ ಈಗ ಉಣಿಸೆ ಮೀನುಗಳು ಅಪರೂಪವಾಗುತ್ತಿವೆ. ಸ್ಥಳೀಯ ಮೀನುಗಳಲ್ಲಿ ಪ್ರಸಿದ್ಧವಾದ ಉಣಿಸೆ ಮೀನುಗಳನ್ನು ಉಳಿಸುವುದರಿಂದ ಕೆರೆಗಳ ಅಭಿವೃದ್ಧಿಯೂ ಆಗುತ್ತದೆ, ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಅವರು ತಿಳಿಸಿದರು.


ಬಿಳಿಗರುಡ ಪಕ್ಷಿಯ ಹರವಿಕೊಂಡ ರೆಕ್ಕೆಗಳ ಮೇಲಿನ ಚಿತ್ತಾರ ನೋಡಲು ಬಲು ಸುಂದರ.

Monday, December 6, 2010

ಮನೆಮನೆಗೂ ಆವರಿಸಿದ ಅಮೃತಬಳ್ಳಿ


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಮ್ಮ ಕಾಂಪೌಂಡಿಗೆ ಹಬ್ಬಿಸಿರುವ ಅಮೃತಬಳ್ಳಿ ಸಸ್ಯ.


ಕಳೆದ ವರ್ಷ ಹೆಚ್೧ಎನ್೧ ಸೋಂಕು ತೀವ್ರ ಸ್ವರೂಪದಲ್ಲಿ ವ್ಯಾಪಿಸಿದ್ದ ಸಂದರ್ಭದಲ್ಲಿ ಬಹುತೇಕ ಮಂದಿ ಆಯುರ್ವೇದ, ಹೋಮಿಯೋಪಥಿ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳ ಜೊತೆಗೆ ಗಿಡಮೂಲಿಕೆ ಔಷಧಿಗಳ ಬಗ್ಗೆಯೂ ಚರ್ಚಿಸುತ್ತಿದ್ದರು. ಅವುಗಳಲ್ಲಿ ಅಮೃತಬಳ್ಳಿ ಕೂಡ ಒಂದು. ಅಮೃತಬಳ್ಳಿ ಬಗ್ಗೆ ನಂಬಿಕೆ ಮೂಡಿಸಿಕೊಂಡಿದ್ದ ಕೆಲವರು ಅದರ ಬಗ್ಗೆ ಮೊಬೈಲ್‌ನಲ್ಲಿ ಎಸ್ಎಂಎಸ್ ಮತ್ತು ಇಮೇಲ್ ಸಂದೇಶಗಳನ್ನೂ ಸಹ ರವಾನಿಸಿದ್ದರು.

ಪ್ರಚಾರದ ಪ್ರಭಾವವೋ ಅಥವಾ ಬೇರೆ ಕಾರಣವೋ ನಿಖರವಾಗಿ ಗೊತ್ತಿಲ್ಲ. ಆದರೆ ನಮ್ಮೂರಿನ ಬಹುತೇಕ ಮನೆಗಳಲ್ಲಿ ಅಮೃತಬಳ್ಳಿಯನ್ನು ಬೆಳೆಸಲಾಗುತ್ತಿದೆ. ಸುಂದರ ಚಪ್ಪರದ ರೂಪದಲ್ಲಿ ಮನೆ ಸುತ್ತಮುತ್ತಲೂ ಅದು ಬೆಳೆಯುತ್ತಿದೆ.


ಶಿಡ್ಲಘಟ್ಟದ ಗೌಡರಬೀದಿಯ ಗೃಹಿಣಿ ಶಾಂತಮ್ಮಮುನಿಕೃಷ್ಣಪ್ಪ ಅವರ ಮನೆಯ ಮೇಲೆಲ್ಲಾ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಗೌಡರ ಬೀದಿಯಲ್ಲಿರುವ ಶಿವಲೀಲಮ್ಮ ರಾಜಣ್ಣ ತಮ್ಮ ಮನೆ ಎದುರಿನ ಕಾಂಪೌಂಡ್ ಮೇಲೆ ಅಮೃತಬಳ್ಳಿ ಬೆಳೆಸಿದ್ದರೆ, ಅದೇ ಬೀದಿಯ ಶಾಂತಮ್ಮಮುನಿಕೃಷ್ಣಪ್ಪ ಮನೆ ಮೇಲೆಲ್ಲಾ ಪಸರಿಸುವಂತೆ ಬೆಳೆಸಿದ್ದಾರೆ. ಷರಾಫ್ ಬೀದಿಯ ಮುರಳಿ ಮನೆಯ ಎರಡು ಅಂತಸ್ತುಗಳಲ್ಲೂ ಅಮೃತಬಳ್ಳಿ ಹರಡಿದ್ದು ಆಕರ್ಷಕವಾಗಿದೆ. ಹೀಗೆ ಪಟ್ಟಣದ ರಾಘವೇಂದ್ರಸ್ವಾಮಿ ಗುಡಿ ಬೀದಿ, ವಾಸವಿ ರಸ್ತೆ, ಹೌಸಿಂಗ್ ಬೋರ್ಡ್ ಮುಂತಾದ ಕಡೆ ಅಮೃತಬಳ್ಳಿ ಬೆಳೆಸಿದ್ದಾರೆ.


ಶಿಡ್ಲಘಟ್ಟ ತಾಲ್ಲೂಕಿನ ಕಂಬದಹಳ್ಳಿಯ ಗೋವಪ್ಪನವರ ವೆಂಕಟರಾಯಪ್ಪನವರ ಕಾಂಪೋಂಡಿಗೆ ಹಬ್ಬಿರುವ ಅಮೃತಬಳ್ಳಿ ಸಸ್ಯ.

ಹೃದಯಾಕಾರದ ಎಲೆ ಹೊಂದಿರುವ ಅಮೃತಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು ಟೈನೋಸ್ಪೋರಾ ಕಾರ್ಡಿಫೋಲಿಯಾ. ಎಲ್ಲಾ ವಾತಾವರಣದಲ್ಲೂ ಹುಲುಸಾಗಿ ಬೆಳೆಯುವ ಇದಕ್ಕೆ ಸಂಸ್ಕೃತದಲ್ಲಿ ಗುಡುಚಿ, ಮಧುಪುರಾನಿ, ಅಮ್ರಿತಾ, ಕುಂಡಲಿನಿ, ಚಾಕ್ರಲಕ್ಷನಿಕಾ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.
"ಜ್ವರ, ಶೀತ, ಅಧಿಕ ರಕ್ತದೊತ್ತಡ, ನೋವು, ವಾತ, ಮೈಕೈನೋವು, ಕಾಮಾಲೆ, ರಕ್ತಹೀನತೆ, ಹೃದ್ರೋಗ, ದಡಾರ, ಉಗುರುಸುತ್ತು, ಅಲರ್ಜಿ, ಸುಟ್ಟಗಾಯ, ಋತುಸ್ರಾವದ ತೊಂದರೆ, ಎದೆ ಹಾಲು ಕೊರತೆ, ಗರ್ಭಿಣಿಯರ ನಂಜು, ಚರ್ಮರೋಗ ಮುಂತಾದ ಅನೇಕ ಕಾಯಿಲೆಗಳಿಗೆ ಔಷಧಿ ಅಮೃತಬಳ್ಳಿ. ಸಕ್ಕರೆ ಖಾಯಿಲೆಗೆ ಅಮೃತಬಳ್ಳಿ ಎಲೆ, ಬೇವಿನ ಎಲೆ, ಬಿಲ್ವಪತ್ರೆಗಳನ್ನು ಒಣಗಿಸಿ ಪುಡಿಮಾಡಿ ಪ್ರತಿದಿನ ಬೆಳಿಗ್ಗೆ ಒಂದು ಚಮಚ ನೀರಿನೊಂದಿಗೆ ಸೇವಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರ ಕಾಂಡದ ಕಷಾಯ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಔಷಧಿ. ಹಾವು, ಚೇಳುಗಳ ಕಡಿತಕ್ಕೆ ಇದರ ಕಾಂಡವನ್ನು ತೇಯ್ದು ಹಚ್ಚಿದರೆ ವಿಷ ಕಡಿಮೆಯಾಗುತ್ತದೆ" ಎಂದು ವನ ಔಷಧಿಗಳ ಬಗ್ಗೆ ಅರಿವಿರುವ ಸ.ರಘುನಾಥ ತಿಳಿಸಿದರು.


ಶಿಡ್ಲಘಟ್ಟದ ಷರಾಫ್ ಬೀದಿಯ ಮುರಳಿಯವರ ಮನೆಯ ಎರಡು ಮಹಡಿಗೂ ಹಬ್ಬಿರುವ ಅಮೃತಬಳ್ಳಿ ಸಸ್ಯ.

"ನಾವು ಮೂರು ವರ್ಷಗಳಿಂದ ಅಮೃತಬಳ್ಳಿ ಬೆಳೆಸುತ್ತಿದ್ದೇವೆ. ಮನೆ ಬಳಿ ಅಥವಾ ಹೂತೋಟಗಳಲ್ಲಿ ಈ ಸಸ್ಯವನ್ನು ಬೆಳೆಸುವುದರಿಂದ ಹಾವು ಬರುವುದಿಲ್ಲ. ಇದು ಮನೆಮದ್ದಾಗಿ ಸದಾಕಾಲ ಬಳಕೆಗೆ ಬರುತ್ತದೆ. ನಮ್ಮ ಯಜಮಾನರಿಗೆ ಸಕ್ಕರೆ ಖಾಯಿಲೆಯಿರುವುದರಿಂದ ಅವರು ಪ್ರತಿನಿತ್ಯ ಬೆಳಿಗ್ಗೆ ನಾಲ್ಕು ಎಲೆಗಳನ್ನು ತಿನ್ನುತ್ತಾರೆ. ಸಣ್ಣ ಪುಟ್ಟ ಖಾಯಿಲೆಗಳಿಗೆ ನಾವು ಔಷಧಿ ಅಂಗಡಿಗೆ ಹೋಗುವುದೇ ಇಲ್ಲ. ಇದರ ಚಿಕ್ಕ ಕಾಂಡವನ್ನು ನೆಟ್ಟರೆ ಸಾಕು ಬೆಳೆಯುತ್ತದೆ. ನಮ್ಮಿಂದ ಅನೇಕರು ತೆಗೆದುಕೊಂಡು ಹೋಗಿ ಬೆಳೆಸುತ್ತಿದ್ದಾರೆ” ಎಂದು ಗೌಡರಬೀದಿಯ ಗೃಹಿಣಿ ಶಿವಲೀಲಮ್ಮ ರಾಜಣ್ಣ ತಿಳಿಸಿದರು.

Saturday, November 20, 2010

’ವರದ’ನಾಯಕನಹಳ್ಳಿ ಸಹಕಾರ ಸಂಘ

‘ಸಿಲ್ಕ್’ ಮತ್ತು ‘ಮಿಲ್ಕ್’ಗೆ ಖ್ಯಾತಿ ಗಳಿಸಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ರೇಷ್ಮೆ ಮತ್ತು ಹೈನುಗಾರಿಕೆ ಮೇಲೆ ಅವಲಂಬಿತವಾಗಿವೆ. ಹೈನುಗಾರಿಕೆ ಅಭಿವೃದ್ಧಿ ಮಾಡುವಲ್ಲಿ ಸಹಕಾರಿ ಸಂಘಗಳ ಪಾತ್ರವೂ ವಿಶೇಷ. ಕೆಲ ಸಹಕಾರಿ ಸಂಘಗಳು ಹೈನುಗಾರಿಕೆ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿದ್ದರೆ ಇನ್ನೂ ಕೆಲ ಸಂಘಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿವೆ.



ಆ ಕೆಲವೇ ಸಂಘಗಳಲ್ಲಿ ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಕೂಡ ಒಂದು. ದೈನಂದಿನ ಚಟುವಟಿಕೆಗಳ ಜೊತೆಗೆ ಶಾಲಾ ಮಕ್ಕಳಿಗಾಗಿ ಹಾಲು ಪೂರೈಕೆ, ಗ್ರಾಮದಲ್ಲಿ ಬೀದಿದೀಪಗಳನ್ನು ಅಳವಡಿಸುವುದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣಕಾಸು ನೆರವು ನೀಡುವುದು ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ.
"ಸಂಘ ಸ್ಥಾಪನೆಗೊಂಡು ೩೫ ವರ್ಷಗಳು ಕಳೆದಿವೆ. ೧೬ ಲೀಟರ್ ಹಾಲಿನ ಶೇಖರಣೆಯಿಂದ ಆರಂಭಗೊಂಡ ಸಂಘ ಈಗ ೮೦೦ ಲೀಟರಿನಷ್ಟು ಹಾಲನ್ನು ಪ್ರತಿ ದಿನ ಸಂಗ್ರಹಿಸುತ್ತಿದೆ. ಸಹಕಾರಿ ಸಂಘಗಳ ಲೆಕ್ಕ ಪರಿಶೋಧಕರಿಂದ ಪ್ರತಿ ವರ್ಷವೂ ‘ಬಿ’ ಗ್ರೇಡ್ ಪಡೆಯುತ್ತಿದ್ದೇವೆ. ಹಾಲಿನ ಅಳತೆ ನಿಖರವಾಗಿ ದಾಖಲಿಸಲು ಕಂಪ್ಯೂಟರೀಕೃತ ಅಳತೆ ವ್ಯವಸ್ಥೆ ಮಾಡಿದ್ದೇವೆ. ರಾಸುಗಳಿಗೆ ಆರೋಗ್ಯ ತಪಾಸಣೆ, ವೈದ್ಯರಿಂದ ಚಿಕಿತ್ಸೆ, ರಾಸುಗಳಿಗೆ ನೀಡಬೇಕಾದ ಪೌಷ್ಠಿಕ ಆಹಾರ ಹಾಗೂ ಪಾಲನೆ ಬಗ್ಗೆ ಕಾರ್ಯಗಾರ, ಪಶು ಆಹಾರ ಸರಬರಾಜು, ಮೇವಿನ ಬೀಜ ವಿತರಣೆ ಮತ್ತು ಶುದ್ಧ ಹಾಲು ನೀಡುವ ಗ್ರಾಹಕರನ್ನು ಗುರುತಿಸಿ ಬಹುಮಾನ ನೀಡುತ್ತೇವೆ" ಎಂದು ಸಂಘದ ಅಧ್ಯಕ್ಷ ವಿ.ಬಿ.ಅಮರನಾಥ್ ತಿಳಿಸಿದರು.
ಆರಂಭದಲ್ಲಿ ಚೀಮನಹಳ್ಳಿ ಹಾಗೂ ತಾತಹಳ್ಳಿಯಿಂದ ಉತ್ಪಾದಕರು ಬರುತ್ತಿದ್ದರು. ಈಗ ಅಲ್ಲೆಲ್ಲಾ ಸಹಕಾರ ಸಂಘಗಳು ಸ್ಥಾಪನೆಯಾದ್ದರಿಂದ ಕೇವಲ ವರದನಾಯಕನಹಳ್ಳಿಗೆ ಮಾತ್ರ ಈ ಸಂಘ ಸೀಮಿತವಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದ ಈ ಸಂಘವು ಉಳಿತಾಯದ ರೂಪದಲ್ಲಿ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಜಮೆ ಮಾಡಿದ್ದು ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ.
"ಕಳೆದ ೮ ವರ್ಷಗಳಿಂದ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಬಿಸಿಯೂಟದ ಜೊತೆ ಮಜ್ಜಿಗೆಗಾಗಿ ಸಂಘದವರು ಹಾಲು ಒದಗಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳಂದು ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದರ ಜೊತೆ ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸುತ್ತಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಶಾಲೆಯ ಅಗತ್ಯಗಳಿಗೆ ಸ್ಪಂದಿಸುತ್ತಾರೆ" ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ವಿ.ವೆಂಕಟರೆಡ್ಡಿ ತಿಳಿಸುತ್ತಾರೆ.
"ಗ್ರಾಮದಲ್ಲಿ ಓಡಾಡಲು ಅನುಕೂಲವಾಗುವಂತೆ ಅಗತ್ಯವಾದ ಸಿಎಫ್ಎಲ್ ಬೀದಿ ದೀಪಗಳ ಅಳವಡಿಕೆ. ಆರ್ಥಿಕವಾಗಿ ಅಶಕ್ತ ಕುಟುಂಬದವರಿಗೆ ಅನಾರೋಗ್ಯ ಕಂಡು ಬಂದಾಗ ಅವರ ತುರ್ತು ಅಗತ್ಯಕ್ಕೆ ೨೦೦೦ ದಿಂದ ೪೦೦೦ ರೂಗಳವರೆಗೆ ನೆರವು ನೀಡುವುದರ ಜೊತೆಗೆ ಗ್ರಾಮದ ಜಾತ್ರೆ ಹಾಗೂ ಉತ್ಸವಗಳಿಗೆ ಸಂಘದವರು ಹಾಲು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡುತ್ತಾರೆ. ಗ್ರಾಮದ ಜನಪದ ಕಲೆಗಳ ಪ್ರೋತ್ಸಾಹಕ್ಕಾಗಿ ನೆರವು ನೀಡುವರು. ಈ ಬಾರಿ ಶಾಲೆ ಹಾಗೂ ಎಲ್ಲ ಗ್ರಾಮಸ್ಥರೂ ಒಂದೇ ಸ್ಥಳದಲ್ಲಿ ರಾಷ್ಟ್ರೀಯ ಹಬ್ಬದಾಚರಣೆ ಮಾಡಬೇಕೆಂಬ ಉದ್ದೇಶದಿಂದ ಧ್ವಜ ಸ್ತಂಬ ಮತ್ತು ಕಲ್ಲಿನ ವೇದಿಕೆ ನಿರ್ಮಿಸುತ್ತಿದ್ದಾರೆ" ಎಂದು ಹೇಳುತ್ತಾರೆ ಗ್ರಾಮದ ಹಿರಿಯ ಗೋಪಾಲಪ್ಪ.

Thursday, November 11, 2010

ಕಾಡು ಹೂಗಳ ಕಾರುಬಾರು...


ಕ್ಯಾಸಿಯಾಮರ

ಶಿಡ್ಲಘಟ್ಟದ ಹೊರವಲಯದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರೇಷ್ಮೆ ವಿಸ್ತರಾಣಾಧಿಕಾರಿಗಳ ಕಚೇರಿ ಮುಂದೆ ಕ್ಯಾಸಿಯಾಮರ ಹಳದಿ ಬಣ್ಣದ ಹೂಗಳನ್ನು ಅರಳಿಸಿಕೊಂಡು ದಾರಿ ಹೋಕರ ಕಣ್ಮನ ತಣಿಸುತ್ತಿದೆ.
ಈ ಕಚೇರಿಯ ಆವರಣದಲ್ಲಿ ಎರಡು ಮರಗಳಿವೆ. ಟೆಕೋಮಾ ಅಥವಾ ಟಿಬೆಬುಯಾ ಎಂದು ಕರೆಯುವ ಮರ ಬೇಸಿಗೆಯಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ಎಲೆಯನ್ನೆಲ್ಲಾ ಉದುರಿಸಿಕೊಂಡು ಹಳದಿ ಹೂಗಳನ್ನು ಮರದ ತುಂಬಾ ಅರಳಿಸಿ ಕಂಗೊಳಿಸುತ್ತದೆ. ಇನ್ನೊಂದು ಮರವಾದ ಸೀಮೆ ತಂಗಡಿ ವಿಜಯದಶಮಿ ಸಮಯದಲ್ಲಿ ಮರದ ತುಂಬಾ ಹಳದಿ ಬಣ್ಣದ ಹೂವನ್ನು ಅರಳಿಸಿ ಹೊನ್ನಿನ ಹೂ ಚೆಲ್ಲುವಂತೆ ಭಾಸವಾಗುತ್ತದೆ.
ಮರದ ಕೆಳಗೆ ಬಿದ್ದ ಹೂವಿನಿಂದ ನೆಲವೆಲ್ಲ ಶೃಂಗಾರಗೊಂಡಿದೆ. ಮಳೆ ಕಡಿಮೆ ಇರುವ ಪ್ರದೇಶದಿಂದ ಮಳೆ ಹೆಚ್ಚು ಇರುವ ಪ್ರದೇಶಗಳಲ್ಲಿ ಬೆಳೆಯಬಲ್ಲ ಈ ಮರ ಸೌಂದರ್ಯದ ಪ್ರತೀಕವಾಗಿದೆ. ಆಂಗ್ಲ ಭಾಷೆಯಲ್ಲಿ ಕ್ಯಾಸಿಯಾ ಎಂದು ಕರೆಯುವ ಇದರ ದಟ್ಟ ಹಳದಿ ಬಣ್ಣದ ಚಿಕ್ಕ ಹೂಗಳು ಆಕರ್ಷಕವಾಗಿವೆ. ಹೂದಾನಿಯಲ್ಲಿ ಸಿಂಗರಿಸಿಟ್ಟರೆ ವಾರಕ್ಕೂ ಹೆಚ್ಚು ಕಾಲ ಬಾಡುವುದಿಲ್ಲ.
ತಂಗಡಿ, ಸೀಮೆತಂಗಡಿ ಮತ್ತು ಕಕ್ಕೆ ಗಿಡಗಳ ಹೂಗಳು ಒಂದೇ ರೀತಿಯಿದ್ದರೂ ಎಲ್ಲವೂ ಬೇರೆ ಬೇರೆ. ಸೌಂದರ್ಯವಷ್ಟೇ ಅಲ್ಲದೆ ಆಯುರ್ವೇದದ ಔಷಧಿ ತಯಾರಿಕೆಯಲ್ಲೂ ಇದರ ಹೂ, ಎಲೆ ಹಾಗೂ ತೊಗಟೆ ಬಳಕೆಗೆ ಬರುತ್ತದೆ.


ಅರಳಿರುವ ಕಾಡು ತುಂಬೆ ಹೂಗಳು.

ಶಿಡ್ಲಘಟ್ಟದ ಹೊರವಲಯದಲ್ಲಿ ಅಮ್ಮನಕೆರೆ ಏರಿಯ ಮೇಲೆ ರಸ್ತೆಯ ಎರಡೂ ಬದಿಯಲ್ಲಿ ಕೆಂಪು ಕೆಂಪಾದ ಪುಟ್ಟ ಪುಟ್ಟ ಹೂಗಳು ಅರಳಿ ಪ್ರಯಾಣಿಗರ ಕಣ್ಮನ ತಣಿಸುತ್ತಿವೆ. ಇಷ್ಟು ದಿನ ಕಳೆ ಗಿಡಗಳಂತೆ ಕಂಡುಬರುತ್ತಿದ್ದ ಗಿಡಗಳಲ್ಲಿ ಈಗ ಹೂಗಳು ಅರಳಿ ಹಸಿರಿನ ಹಿನ್ನೆಲೆಯಲ್ಲಿ ಆಕರ್ಷಕವಾಗಿ ಕಾಣುತ್ತಿದೆ.


ಕಾಡು ತುಂಬೆ ಹೂ

ಪಿ.ಲಂಕೇಶರ "ಕೆಂಪಾದವೋ ಎಲ್ಲ ಕೆಂಪಾದವೋ..." ಹಾಡಿನ ಸಾಲುಗಳನ್ನು ನೆನೆಪಿಸುವಂತೆ ಅರಳಿರುವ ಈ ಹೂವನ್ನು "ಕಾಡು ತುಂಬೆ", "ಹಾಲು ಬಳ್ಳಿ" ಎಂದು ಕರೆಯುವರು. ಇಂಗ್ಲೀಷಿನಲ್ಲಿ ಇದನ್ನು ರೆಡ್ ಸ್ಟಾರ್ ಗ್ಲೋರಿ ಎನ್ನುತ್ತಾರೆ. ಸುಮಾರು ೩ ರಿಂದ ೪ ಸೆಮೀ ಉದದ ಕೆಂಪು ಹೂಗಳಿಂದ ಹಳದಿ ಬಣ್ಣದ ಪರಾಗರೇಣುಗಳು ಹೊರಬಂದು ಅತ್ಯಂತ ಸುಂದರವಾಗಿರುತ್ತವೆ. ಉತ್ತರ ಮೆಕ್ಸಿಕೋ ಮತ್ತು ಅರಿಜೋನಾ ಮೂಲದ ಈ ಸಸ್ಯ ಈಗ ಭಾರದ್ದೇ ಆಗಿಹೋಗಿದೆ. ಸಾಧಾರಣವಾಗಿ ಮಳೆ ಮುಗಿಯುವ ಸಮಯದಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಈ ಹೂಗಳು ಅರಳುತ್ತವೆ. ಈ ಹೂಗಳನ್ನು ಕಂಡು ರೈತರು ಮಳೆ ಮುಗಿಯಿತೇ ಎಂದು ಆತಂಕ ಅನುಭವಿಸುವಂತಾಗಿದೆ.



ಈ ಹೂವಿನ ಜತೆಯಲ್ಲೇ ತಂಗಡಿ, ದತ್ತೂರಿ, ಮುಟ್ಟಿದರೆ ಮುನಿ, ಲಾಂಟಾನಾ, ಮಾರ್ನಿಂಗ್ ಗ್ಲೋರಿ, ತುಂಬೆ, ಸಿಲ್ವರ್ ಕಾಕ್ಸ್‌ಕೂಂಬ್, ಉತ್ತರಂಗಿ ಮುಂತಾದ ಹೂಗಳೂ ಅಲ್ಲಲ್ಲಿ ಅರಳಿರುವುದರಿಂದ ನಾನಾ ವಿಧದ ಬಣ್ಣ ಬಣ್ಣದ ಚಿಟ್ಟೆಗಳು ಮಕರಂದ ಹೀರಲು ಹಾರಾಡುತ್ತಿರುತ್ತವೆ.


ಮಾರ್ನಿಂಗ್ ಗ್ಲೋರಿ


ಉತ್ತರಂಗಿ



ಈ ಬೆಡಗಿನ ಸಿರಿಗಳು ಕೇವಲ ಕೆಲ ದಿನಗಳು ಮಾತ್ರ ಅರಳಿ ತಮ್ಮ ಚೆಲುವಿನಿಂದ ನೋಡುಗರ ಮನತಣಿಸಿ ಅನೇಕ ಚಿಟ್ಟೆ ಹಾಗೂ ದುಂಬಿಗಳ ಹೊಟ್ಟೆಯನ್ನೂ ತುಂಬಿಸಿ ತಾವು ಬಂದ ಕೆಲಸ ಮುಗಿಯಿತೆಂಬಂತೆ ಮಾಯವಾಗುತ್ತವೆ.


ಮುಟ್ಟಿದರೆ ಮುನಿ



ಮೊದಲು ಪ್ರತಿ ಮನೆಯ ಹಿಂದೆ ಅಥವಾ ಮುಂದೆ ಹೂದೋಟವಿದ್ದೇ ಇರುತ್ತಿತ್ತು. ಇಂಥಹ ಹೂ ಬಳ್ಳಿಗಳನ್ನು ಬೇಲಿಗೆ ಹಬ್ಬಿಸುತ್ತಿದ್ದರು. ಮನೆಗೆ ಸುಂದರ ವಾತಾವರಣವನ್ನು ಇವು ಕಲ್ಪಿಸುತ್ತಿದ್ದವು. ಆದರೆ ಆಧುನಿಕತೆ ಬೆಳೆದಂತೆ ಮನೆ ಮುಂದಿನ ಆವರಣದಲ್ಲಿ ಇಂಥ ಕಾಡು ಹೂ ಬಳ್ಳಿ ಕಾಣೆಯಾಗುತ್ತಿವೆ. ಮುಡಿಗೇರದೆ ಗುಡಿಸೇರದೆ ತನ್ನಷ್ಟಕ್ಕೆ ತಾನರಳಿ ಅಳಿದುಹೋಗುವ ಈ ಸುಂದರ ಸುಮಗಳನ್ನು ಸ್ಪರ್ಷಿಸುವ ಅದೃಷ್ಟ ಪಾತರಗಿತ್ತಿಗಳಂತೆ ನಮ್ಮ ಕಣ್ಣಿಗೂ ಇರಲಿ.


ತುಂಬೆ


ಹಳದಿ ಕಾಡುತುಂಬೆಹೂ



ತಂಗಡಿ

Thursday, November 4, 2010

ಶಿಡ್ಲಘಟ್ಟದಲ್ಲೊಂದು ವಿಶಿಷ್ಟ ಕೃಷಿ ಪ್ರಯೋಗ


ಶಿಡ್ಲಘಟ್ಟ ತಾಲ್ಲೂಕು ಹಿತ್ತಲಹಳ್ಳಿಯ ರೈತ ಎಚ್.ಜಿ.ಗೋಪಾಲಗೌಡ ತಮ್ಮ ತೋಟದಲ್ಲಿ ಬೆಳೆದಿರುವ ಮಿಶ್ರ ಬೆಳೆ

ಹವಾಮಾನ ಮತ್ತು ಪರಿಸರಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ವಿಜ್ಞಾನಿಗಳ ಹಾಗೆ ಚಿಂತನೆ ನಡೆಸಿ, ಉತ್ತಮ ಬೆಳೆ ಬೆಳೆಯಬೇಕು ಎಂದು ಮೇಲಿಂದ ಮೇಲೆ ರೈತರಿಗೆ ಸಲಹೆ ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಸರ್ಕಾರದಿಂದ ಪ್ರೋತ್ಸಾಹ ಕೂಡ ನೀಡಲಾಗುತ್ತದೆ. ಆದರೆ ಇದ್ಯಾವುದರ ಮೇಲೆಯೂ ಅವಲಂಬಿತರಾಗದೇ ತಾಲ್ಲೂಕಿನ ರೈತರೊಬ್ಬರು ವಿಶಿಷ್ಟ ರೀತಿಯ ಪ್ರಯೋಗ ಕೈಗೊಂಡಿದ್ದಾರೆ.

ನಮ್ಮ ತಾಲ್ಲೂಕಿನ ಹಿತ್ತಲಹಳ್ಳಿಯ ಕೃಷಿಕ ಎಚ್.ಜಿ.ಗೋಪಾಲಗೌಡ ಅವರು ಕೇವಲ ಮಳೆಯನ್ನೇ ನಂಬಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಮಾವು, ರಾಗಿ, ಕಡಲೆಕಾಯಿ, ಹಿಪ್ಪುನೇರಳೆ, ಅವರೆ, ಬೆಂಡೆ, ಹಲಸಂದೆ, ಸಾಸಿವೆ, ತೊಗರಿ, ಚೆಂಡುಹೂ ಮತ್ತು ಬದುಗಳಲ್ಲಿ ಸಿಲ್ವರ್ ಗಿಡಗಳನ್ನು ಬೆಳೆದಿದ್ದಾರೆ. ಗುಂಡಿಗಳಲ್ಲಿ ಕೃಷಿ ತ್ಯಾಜ್ಯವನ್ನು ತುಂಬಿ, ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ.



"ಮೂರು ವರ್ಷಗಳ ಹಿಂದೆ ಈ ಜಮೀನಿನಲ್ಲಿ ನೀಲಗಿರಿ ಮರಗಳಿದ್ದವು. ಅದರಿಂದ ಕಡಿಮೆಆದಾಯ ಬರುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಮಿಶ್ರ ಬೆಳೆಯ ಪ್ರಯೋಗ ಕೈಗೊಂಡೆ. ಮೊದಲ ವರ್ಷ ಉತ್ತಮ ಫಲ ಸಿಗಲಿಲ್ಲ. ಆದರೆ ಕಳೆದ ವರ್ಷ ೪೦ ಕ್ವಿಂಟಾಲ್ ರಾಗಿ, ನಾಲ್ಕು ರೇಷ್ಮೆ ಬೆಳೆಗಾಗುವಷ್ಟು ಹಿಪ್ಪುನೇರಳೆಸೊಪ್ಪು, ೨ ಚೀಲ ಕಡಲೆಕಾಯಿ, ಒಂದು ಚೀಲ ಅವರೆಕಾಯಿ, ೨ ತಿಂಗಳ ಕಾಲ ಮನೆ ಬಳಕೆಗಾಗುವಷ್ಟು ತರಕಾರಿ ಬೆಳೆದೆ. ಜಮೀನಿನ ಫಲವತ್ತತೆಗೆ ರೇಷ್ಮೆ ತ್ಯಾಜ್ಯ, ಕುರಿ ತ್ಯಾಜ್ಯ, ಸಗಣಿ, ಗಂಜಲ, ಬಯೋಗ್ಯಾಸ್ ಸ್ಲರಿ ಬಳಕೆ ಮಾಡಿರುವೆ. ಆದಷ್ಟೂ ಸಾಗುವಳಿ ವೆಚ್ಚ ಕಡಿಮೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ" ಎಂದು ಗೋಪಾಲಗೌಡ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.



"ಜಮೀನಿನ ಸುತ್ತ ೩ ಅಡಿ ಆಳ ಮತ್ತು ಅಗಲದ ಗುಣಿ ಮಾಡಿರುವುದರಿಂದ ದನಗಳ ಕಾಟವಿಲ್ಲ ಮತ್ತು ಮಳೆ ನೀರು ಇಂಗುತ್ತದೆ. ನಮ್ಮ ಜಮೀನಿನಲ್ಲಿ ಬಿದ್ದ ಮಳೆನೀರು ಒಂದು ತೊಟ್ಟೂ ಪೋಲಾಗದಂತೆ ಜಮೀನಿನ ಏರು ತಗ್ಗನ್ನು ಅನುಸರಿಸಿ ಮಧ್ಯೆ ಮಧ್ಯೆ ಗುಣಿ ಮಾಡಿದ್ದೇವೆ. ಇದರಿಂದಾಗಿ ಜಮೀನಿನ ಪಕ್ಕದಲ್ಲೇ ನೀಲಗಿರಿ ತೋಪಿದ್ದರೂ ಜಮೀನಿಗೆ ತೊಂದರೆಯಾಗಿಲ್ಲ. ಇದಲ್ಲದೆ ಜಮೀನಿನ ಒಂದು ಭಾಗದಲ್ಲಿ ೨೫ ಮೀಟರ್ ಉದ್ದ ಅಗಲ ಮತ್ತು ೪ ಮೀಟರ್ ಆಳದ ಕೃಷಿಹೊಂಡ ನಿರ್ಮಿಸಿದ್ದೇವೆ. ಪಕ್ಕದಲ್ಲಿ ಕಾಲುವೆಯಿದ್ದು ಮಳೆ ನೀರು ಹರಿದು ಹೋಗುವಾಗ ಹೊಂಡದಲ್ಲಿ ಬಂದು ಇಂಗುತ್ತದೆ" ಎಂದು ಅವರು ನೀರಿನ ಸದ್ಭಕೆಯ ತಂತ್ರವನ್ನು ವಿವರಿಸುತ್ತಾರೆ.



"ಗೋಪಾಲಗೌಡರು ಕಡಿಮೆ ನೀರು ಬಳಸಿ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಗುಣಮಟ್ಟದ ರೇಷ್ಮೆ ಗೂಡನ್ನೂ ಬೆಳೆಯುತ್ತಾರೆ. ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ಕಡಿಮೆ ವೆಚ್ಚ ಮಾಡಿ ಹೆಚ್ಚು ಇಳುವರಿ ಪಡೆಯುವ ಇವರ ಮಾದರಿ ವಿಧಾನ ಹಾಗೂ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ವರ್ಷ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಚೀನಾ ಮತ್ತು ಹಾಂಕಾಂಗ್ ದೇಶಗಳು ಮತ್ತು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಸಿರಿ ರೈತಕೂಟದ ಅಧ್ಯಕ್ಶರಾಗಿ ಇತರ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಥಹ ರೈತರಿರುವುದು ಜಿಲ್ಲೆಗೇ ಹೆಮ್ಮೆ" ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವರಾಂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.



ಗೋಪಾಲಗೌಡರ ಪೋನ್ ನಂ: ೯೪೪೮೧೩೮೩೯೭