Thursday, September 16, 2010

ಮಾಯವಾಗಿರುವ ಏತ ಇಲ್ಲಿ ಪ್ರತ್ಯಕ್ಷ!



ನಮ್ಮ ಜಿಲ್ಲೆಯಲ್ಲಿ ಕೊಳವೆಬಾವಿಗಳು ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗುವುದಿಲ್ಲ. ಹರಸಾಹಸಪಟ್ಟರೂ ಒಂದು ಹನಿ ನೀರು ದೊರೆಯುವುದಿಲ್ಲ. ಕಪಿಲೆ, ಏತ, ಗೂಡೆ ಹಾಕುವುದು, ಪರ್ಷಿಯನ್ ವೀಲ್ ಮುಂತಾದವುಗಳು ಒಂದರ್ಥದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಆದರೆ ನೀರು ಸಿಗುವುದಿಲ್ಲ ಎಂದು ಬೇಸತ್ತು ಕುಳಿತ ರೈತರಿಗೆ ಆಶಾಕಿರಣ ಎಂಬಂತೆ ಏತ ನೀರಾವರಿ ಕೃಷಿ ಕ್ಷೇತ್ರದಲ್ಲಿ ನಿಧಾನವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ.
ಇದಕ್ಕೆ ಅಪ್ಪಟ ಉದಾಹರಣೆ, ಶ್ನಮ್ಮ ಊರು ಶಿಡ್ಲಘಟ್ಟದ ಹೊರವಲಯ ಅಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಮುಕ್ಕಾಲು ಎಕರೆ ಜಮೀನಿನಲ್ಲಿ ಸಹೋದರರು ಸದ್ಬಳಕೆ ಮಾಡುತ್ತಿರುವ ಏತ ನೀರಾವರಿ ಯೋಜನೆ. ಏತ ನೀರಾವರಿಯನ್ನು ವಿಶಿಷ್ಟ ರೀತಿಯಲ್ಲಿ ಬಳಕೆ ಮಾಡುವ ಅವರು ತರಕಾರಿ ಬೆಳೆಗಳನ್ನು ಬೆಳೆಸುತ್ತಾರೆ.
ಕೆರೆಯ ಇನ್ನೊಂದು ಬದಿಯಲ್ಲಿರುವ ಜಮೀನಿಗೆ ಮಧ್ಯೆ ಹಾದು ಹೋಗುವ ರಸ್ತೆಯ ಕೆಳಗಿನಿಂದ ತೂಬಿನ ಮೂಲಕ ಇವರ ಜಮೀನಿಗೆ ನೀರು ಬರುತ್ತದೆ. ಏತವನ್ನು ಬಳಸಿ ಇವರು ಜಮೀನಿಗೆ ನೀರು ಕಟ್ಟುತ್ತಾರೆ.



‘ಸಾಮಾನ್ಯವಾಗಿ ನಾವು ಬೀಟ್ರೂಟ್ ಬೆಳೆಯುತ್ತೇವೆ. ವರ್ಷಕ್ಕೆ ಮೂರು ಬೆಳೆ ತೆಗೆಯುತ್ತೇವೆ. ಬೆಳಿಗ್ಗೆ ೬ ಗಂಟೆಗೆ ನೀರೆತ್ತಲು ಪ್ರಾರಂಭಿಸಿದರೆ ಮಧ್ಯಾಹ್ನ ೨ ಗಂಟೆಯವರೆಗೆ ಮುಂದುವರೆಯುತ್ತದೆ. ನೀರಿನ ಹರಿವು ಕಡಿಮೆಯಿದ್ದರೆ ಸಂಜೆ ೬ ಗಂಟೆಯಾಗುತ್ತದೆ. ವಾರದಲ್ಲಿ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಹರಿಸುತ್ತೇವೆ. ಬೇಸಿಗೆಯಲ್ಲಿ ನೀರು ಇರುವುದಿಲ್ಲ. ಗಾಳಿಯ ಕಾಲದಲ್ಲೂ ಕಷ್ಟ. ನೀರು ಆವಿಯಾಗುತ್ತದೆ. ಗಿಡಗಂಟೆಗಳು ಬೆಳೆದು ಕಾಲುವೆಗಳಲ್ಲಿ ನೀರು ಹರಿಯದಿದ್ದಾಗ ಗಿಡಗಳನ್ನೆಲ್ಲಾ ಸವರುತ್ತೇವೆ. ಅಲ್ಲಿ ಹಾವುಗಳು ಸೇರಿಕೊಂಡಿರುತ್ತವೆ’ ಎಂದು ತಮ್ಮ ಕೆಲಸವನ್ನು ಬಣ್ಣಿಸುವ ಕಿರಿಯ ಸಹೋದರ ಮುನಿರಾಜ ಏತ ನೀರಾವರಿ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.



‘ಇದು ನಮ್ಮ ತಾತನ ಕಾಲದಿಂದಲೂ ಬಂದ ಬಳುವಳಿ. ನೀರಾವರಿಗೆಂದೇ ನಾವು ಜನರೇಟರ್ ಬಳಸಬಹುದು. ಆದರೆ ನಮಗೆ ನಮ್ಮ ಸ್ವಶಕ್ತಿ ಮೇಲೆ ನಂಬಿಕೆಯಿದೆ. ಸ್ವಾಭಿನಾಮ ಮತ್ತು ಸ್ವಶಕ್ತಿಯಿಂದ ಬದುಕುವ ಇರಾದೆ ಹೊಂದಿರುವ ನಮಗೆ ಏತ ನೀರಾವರಿಯಿಂದ ತುಂಬ ಸಹಾಯವಾಗುತ್ತಿದೆ’ ಎನ್ನುತ್ತಾರೆ ಹಿರಿಯ ಸಹೋದರ ಮಂಜುನಾಥ್.



‘ಆಗಾಗ್ಗೆ ಅಮ್ಮ ಹೇಳುತ್ತಿರುತ್ತಾರೆ. ಆಗ ನೀರೆತ್ತುವ ಬಾನೆ ದೊಡ್ಡದಿತ್ತು, ಒಬ್ಬ ಮಹಿಳೆ ಒತ್ತುಕೊಟ್ಟರೆ ಇನ್ನೊಬ್ಬ ಮಹಿಳೆ ನೀರೆತ್ತುವ ಕೆಲಸ ಮಾಡುತ್ತಿದ್ದರಂತೆ. ಪುರುಷರದು ನೀರು ಕಟ್ಟುವ ಕೆಲಸ. ಆಗ ನೀರೂ ಚೆನ್ನಾಗಿತ್ತು ಮನುಷ್ಯರೂ ಗಟ್ಟಿಮುಟ್ಟಾಗಿದ್ದರು. ಈಗ ಎರಡೂ ಇಲ್ಲ ಎಂದು ಕೆಲವೊಮ್ಮೆ ಅವರು ಬೇಸರ ವ್ಯಕ್ತಪಡಿಸುತ್ತಾರೆ’ ಎಂದು ಅವರು ಹೇಳಿದರು.



ಏತದ ಮೂಲಕ ಮೇಲೆ ಬರುವ ನೀರಿನ ಪ್ರಮಾಣ ಕೊಳವೆ ಬಾವಿಗಳಿಗಿಂದ ಕಡಿಮೆ. ಆದರೆ ಮೇಲೆ ಬಂದ ನೀರು ಪೋಲಾಗದೆ ಉಪಯೋಗವಾಗುತ್ತದೆ. ಈ ಯಂತ್ರಗಳಿಂದ ಬರುವ ಸ್ವಲ್ಪ ಪ್ರಮಾಣದ ನೀರನ್ನು ಕಟ್ಟುವವನು ಪೋಲಾಗದಂತೆ ಮಡಾಯಿಗಳನ್ನು ತಿರುವಲು ಸಾಧ್ಯವಾಗುತ್ತದೆ’ ಎಂದು ಹೇಳುವ ಅವರು ನೀರಿನ ಉಳಿತಾಯದ ಬಗ್ಗೆಯೂ ಮಾತನಾಡುತ್ತಾರೆ.

Thursday, September 9, 2010

ನೆನಪಿನ ಗಣಿ ಈ ತುಂಬುಗೆನ್ನೆಯ ದೀಪ . . . !

ನಮ್ಮ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಇತರೆ ಪುಟ್ಟ ಮಕ್ಕಳೊಂದಿಗೆ ಒಂದು ಮಗು ತನ್ನ ವಿಶೇಷ ನೆನಪಿನ ಶಕ್ತಿಯಿಂದ ಗಮನ ಸೆಳೆಯುತ್ತಿದೆ. ಆ ಮಗುವಿನ ಹೆಸರು ದೀಪ. ದೀಪ ಜ್ಞಾನದ ಅನ್ವರ್ಥವೂ ಹೌದು. ಅಂತೆಯೇ ಈ ೪ ವರ್ಷದ ಮಗುವಿನ ಜ್ಞಾನದಾಹವೂ ವಿಶಿಷ್ಟವಾದುದು.


ಕನ್ನಮಂಗಲದ ಅಂಗನವಾಡಿ ಕೇಂದ್ರದಲ್ಲಿ ಓದುತ್ತಿರುವ ದೀಪಾ.

ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು? ಷಟ್ಪದಿಯ ಬ್ರಹ್ಮ ಯಾರು? ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು? ನಮಗೆ ಸ್ವಾತಂತ್ರ್ಯ ಬಂದ ವರ್ಷ ಯಾವುದು? ಭೂಮಿಗೆ ಗುರುತ್ವಾಕರ್ಷಣ ಬಲ ಇದೆ ಎಂದು ಕಂಡು ಹಿಡಿದವರು ಯಾರು? ಮುಂತಾದ ಪ್ರಶ್ನೆಗಳಿಗೆ ಕಾಲೇಜು ಓದಿರುವ ಯುವಕರೇ ಉತ್ತರ ಕೊಡಲು ತೊದಲುವಾಗ, ಈ ಹುಡುಗಿ ಯಾವುದೇ ಭಯವಿಲ್ಲದೇ ಇಂಥಹ ೫೦-೬೦ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರ ನೀಡುತ್ತಾಳೆ.
ಹೀಗೆ ಈ ಮಗುವಿನ ನೆನಪಿನ ಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಲು ತರಬೇತಿ ನೀಡುತ್ತಿರುವವರು ಆಶಾ ಕಾರ್ಯಕರ್ತೆಯಾಗಿರುವ ದೀಪಳ ಅಮ್ಮ ವೆಂಕಟಲಕ್ಷ್ಮಮ್ಮ ಹಾಗೂ ವೈರ್ಮನ್ ಆಗಿರುವ ಅಪ್ಪ ಎಂ.ರಾಮಕೃಷ್ಣಪ್ಪ. ಇವರಿಬ್ಬರೂ ಶೈಕ್ಷಣಿಕವಾಗಿ ಪದವೀಧರರಾಗಿದ್ದು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
"ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸಿ ಒಳ್ಳೆಯ ಕೆಲಸ ಪಡೆಯುವ ಆಸೆಯಿತ್ತು. ಆದರೆ ಕಾರಣಾಂತರಗಳಿಂದ ಈ ಆಸೆ ಈಡೇರಲಿಲ್ಲ. ಹೀಗಾಗಿ ನನ್ನ ಆಸೆಯನ್ನು ಮಗಳು ಈಡೇರಿಸಬಹುದೇ ಎಂಬ ಆಸೆಯಿದೆ. ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಭವಿಷ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲಿ" ಎನ್ನುವ ವೆಂಕಟಲಕ್ಷ್ಮಮ್ಮ ತಾಯಿಯೇ ಮೊದಲ ಗುರು ಎಂಬಂತೆ ತನ್ನ ಮಗಳಿಗೆ ಕತೆಗಳೊಂದಿಗೆ ಸಾಮಾನ್ಯ ಜ್ಞಾನದ ವಿಚಾರಗಳನ್ನು ಧಾರೆಯೆರೆಯುತ್ತಿದ್ದಾರೆ.



ತನ್ನ ತಂದೆ ತಾಯಿಯೊಂದಿಗೆ ದೀಪಾ.

ವಿವಿಧ ವೇದಿಕೆಗಳಲ್ಲಿ ಈ ಮಗು ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹಲವಾರು ಗಣ್ಯರ ಪ್ರಶಂಸೆಗೆ ಕೂಡ ಪಾತ್ರವಾಗಿದೆ. ಸ್ನೇಹ ಯುವಕರ ಸಂಘ ಹಾಗೂ ಸ.ಹಿ.ಪ್ರಾ.ಶಾಲೆ ಕನ್ನಮಂಗಲ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೭ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತನ್ನ ನೆನಪಿನ ಶಕ್ತಿಯ ಪ್ರದರ್ಶನದ ಮೂಲಕ ಸಾಹಿತಿ ಹರಿಹರಪ್ರಿಯ, ಮಾಜಿ ಸಚಿವ ಹಾಗೂ ಶಾಸಕ ವಿ.ಮುನಿಯಪ್ಪ, ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ನಿವೃತ್ತ ಉಪನಿರ್ದೇಶಕ ಸಿ.ಬಿ. ಹನುಮಂತಪ್ಪ ಅವರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
"ಈ ಮಗುವಿನ ರೀತಿ ಎಲ್ಲ ಮಕ್ಕಳಲ್ಲಿಯೂ ಯಾವುದೋ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಹೊರತರಲು ಪೋಷಕರು ಸಹಕಾರ ನೀಡಬೇಕು" ಎಂದು ಅಂಗನವಾಡಿ ಕಾರ್ಯಕರ್ತೆಯಾದ ಎನ್. ಪದ್ಮಾವತಿ ತಿಳಿಸುತ್ತಾರೆ. ದೀಪ ಶಿಶುಗೀತೆ, ಕಥೆ ಹಾಗೂ ನೃತ್ಯದಂತಹ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುತ್ತಾಳೆ ಎಂದು ಇವರು ಗುರುತಿಸಿದ್ದಾರೆ.
"ಇಂಥಹ ಮಕ್ಕಳ ಪ್ರತಿಭೆಯನ್ನು ಸರ್ಕಾರ ಹಾಗೂ ಸಮುದಾಯ ಗುರುತಿಸಿ ಪುರಸ್ಕರಿಸಿ ಪ್ರೋತ್ಸಾಹಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳು ಹೆಚ್ಚೆಚ್ಚು ಹೊರಹೊಮ್ಮುತ್ತವೆ" ಎಂದು ಅಭಿಪ್ರಾಯಪಡುತ್ತಾರೆ ಕನ್ನಮಂಗಲ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ಎಸ್.ಕಲಾಧರ್.

Tuesday, August 31, 2010

ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ರ ಕಮಾಲ್

"ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ನಾಳೆ ಚಿಕ್ಕಬಳ್ಳಾಪುರಕ್ಕೆ ಸ್ವಾಮೀಜಿಗಳ ಇಂಜಿನೀರಿಂಗ್ ಕಾಲೇಜಿಗೆ ಬರ್ತಾರೆ" ಎಂದು ಮನೆಯಲ್ಲಿ ಹೇಳಿದೆ. ನನ್ನ ಹೆಂಡತಿ ಸೌಮ್ಯ ನಾನೂ ಬರ್ತೀನಿ ಎಂದಳು. "ಬೇಡ, ನಾವೆಲ್ಲಾ ಪ್ರೆಸ್ಸಿನವರು ಒಟ್ಟಿಗೇ ಹೋಗುತ್ತೇವೆ. ಅಷ್ಟು ಜನಗಳ ಮಧ್ಯೆ ಕಷ್ಟ ಆಗುತ್ತೆ" ಎಂದು ಹೇಳಿದೆ. ಆದರೆ ಅವಳದ್ದು ಒಂದೇ ಹಠ. "ನಾನು ಅವರ ಆತ್ಮಚರಿತ್ರೆ ವಿಂಗ್ಸ್ ಆಫ್ ಫೈರ್ ಪುಸ್ತಕದ ಮೇಲೆ ಹಸ್ತಾಕ್ಷರ ಪಡೆಯಬೇಕು" ಎಂದು.

ಅದೃಷ್ಟವೋ ಅಥವಾ ಸೌಮ್ಯಳ ಛಲವೋ ಅಷ್ಟು ಸಾವಿರ ಜನರ ಮಧ್ಯೆ ಡಾ.ಕಲಾಂ ಅವರಿಂದ ಹಸ್ತಾಕ್ಷರ ಸಿಕ್ಕಿದ್ದು ಇವಳೊಬ್ಬಳಿಗೇ!




ಡಾ.ಕಲಾಂ ಅವರ ನುಡಿ ಹಾಗೂ ಚಿತ್ರಗಳನ್ನು ಆಸ್ವಾದಿಸಿ...




"ಮನುಷ್ಯ ಎಲ್ಲಿದ್ದರೂ ಈ ಅನಂತ ವಿಶ್ವದ ಒಂದು ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ, ಸಂಕಷ್ಟ, ಕೋಟಲೆಗಳ ಭಯವೇಕೆ? ಸಂಕಷ್ಟ ಬಂದರೆ ಅದರ ಹಿನ್ನೆಲೆಯನ್ನು ಅರಿತುಕೊಳ್ಳಬೇಕು"




"ವಿದ್ಯಾಭ್ಯಾಸದ ವಿಷಯದ ಆಯ್ಕೆಯ ವೇಳೆ ಗಮನಹರಿಸಬೇಕಾದ ಮುಖ್ಯವಾದ ಅಂಶವೆಂದರೆ, ಈ ಆಯ್ಕೆಯಿಂದಾಗಿ ಅವರೊಳಗಿನ ಭಾವನೆ ಮತ್ತು ಆಶೋತ್ತರಗಳು ಪುಷ್ಟಿಗೊಳ್ಳುತ್ತವೆಯೋ ಎಂಬುದು"




"ಸತ್ಯದ ಅನ್ವೇಷಣೆಯನ್ನು ಮಾಡು. ಸತ್ಯವೇ ನಿನಗೆ ಸ್ವಾತಂತ್ರ್ಯ ಕೊಡಿಸುತ್ತದೆ"




"ಯಾವ ವಿಷಯಗಳು ನಿಮ್ಮನ್ನು ಘಾಸಿಗೊಳಿಸುವವೋ ಅವು ನಿಮಗೆ ಶಿಕ್ಷಣವನ್ನೂ ಕೊಡುತ್ತವೆ"




"ಜ್ಞಾನ ಎಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ"




"ವೃತ್ತಿ ಜೀವನದ ತುತ್ತ ತುದಿಗೆ ಏರುವವರು ಯಾವತ್ತೂ ತಮ್ಮ ತಾದಾತ್ಮ್ಯವನ್ನು ಕೆಲಸದ ಮೇಲೆ ಕೇಂದ್ರಬಿಂದುವನ್ನಾಗಿಸಿ ದುಡಿಯುತ್ತಾರೆ. ಹೀಗೆ ಸಂಪೂರ್ಣ ತೊಡಗಿಸಿಕೊಂಡ ಬಳಿಕ ಯಾವುದೇ ಇನ್ನಿತರ ಇಚ್ಛೆಗಳಿಗೆ ಆಸ್ಪದ ಇಲ್ಲ"




"ಸಂತೋಷ, ತೃಪ್ತಿ, ಜಯ ಇವೆಲ್ಲಾ ಜೀವನದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳ ಮೇಲೆ ಹೊಂದಿಕೊಂಡಿದೆ"




"ನೀವು ಒಂದೇ ವಸ್ತುವನ್ನು ಹಿಡಿದು ಕುಳಿತರೆ ಬುದ್ಧಿ ಜಿಡ್ಡುಗಟ್ಟುತ್ತದೆ. ಆದುದರಿಂದ ಹೊಸ ಆಯಾಮಗಳನ್ನು ಕಂಡುಕೊಳ್ಳಬೇಕು"




"ದುರದೃಷ್ಟವಶಾತ್ ಶಾಲೆಗಳಲ್ಲಿ ನಾವು ಓದಿರಿ, ಬರೆಯಿರಿ, ಮಾತನಾಡಿರಿ ಎಂಬ ಕಾರ್ಯಗಳಲ್ಲಿ ತೊಡಗಿಕೊಂಡೆವೇ ಹೊರತು ಇನ್ನೊಬ್ಬರ ಅಭಿಪ್ರಾಯ ಕೇಳುವ ಪಾಠ ಕಲಿತಿಲ್ಲ"




"ದೊಡ್ಡ ಅವಕಾಶಗಳು ಲಭಿಸಿದಾಗ ನಾವು ದೊಡ್ಡ ಸವಾಲುಗಳನ್ನು ಎದುರಿಸಬೇಕಾದದ್ದು ಸಹಜ. ನಾವು ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಮತ್ತು ಸಮಸ್ಯೆಗಳು ನಮ್ಮ ಮೇಲೆ ಸವಾರಿ ಮಾಡಲೇಬಾರದು"





"ಕೇವಲ ತಾತ್ಕಾಲಿಕ ಅಥವಾ ಸುಲಭದಲ್ಲಿ ಸಿಗುವ ಯಶಸ್ಸಿಗೆ ಮರುಳಾಗದಿರಿ. ಶಾಶ್ವತ ಯಶಸ್ಸು ಪಡೆಯಲು ಸದಾ ನಿಷ್ಠೆಯಿಂದ ಪ್ರಯತ್ನ ಮಾಡಬೇಕು"




"ಆಚಾರ-ವಿಚಾರ, ಸಂಪ್ರದಾಯ, ಶಿಷ್ಟಾಚಾರ, ಶಿಸ್ತು ಆಚರಣೆ ಮುಂತಾದ ವಿಚಾರಗಳಲ್ಲಿ ಯುವಜನರು ಎಚ್ಚೆತ್ತು ನಡೆಯಬೇಕು. ಆತ್ಮತೃಪ್ತಿಯ ಬೆಲೆ ಅರಿತ ಬಳಿಕ ಯಾವುದೇ ಆಮಿಷಗಳೂ ಯುವಜನರನ್ನು ಆಕರ್ಷಿಸಲಾರವು"





"ಐ ವಿಲ್ ಡು ಇಟ್,
ವಿ ವಿಲ್ ಡು ಇಟ್,
ಇಂಡಿಯಾ ವಿಲ್ ಡು ಇಟ್..."





"ಯುವಜನರೇ ನೀವೊಬ್ಬರೇ ಸಾಧನೆ ಮಾಡಿದರೆ ಸಾಲದು, ದೇಶವನ್ನೂ ಸಹ ಮುಂಚೂಣಿಗೆ ತರಬೇಕು. ವಿಷನ್-೨೦೨೦ ಯೋಜನೆಯಂತೆ ದೇಶವನ್ನು ಆರ್ಥಿಕವಾಗಿ ಬಲಗೊಳಿಸುವುದರ ಜೊತೆಗೆ ಇತರ ಕ್ಷೇತ್ರಗಳಲ್ಲೂ ಸಶಕ್ತಗೊಳಿಸಬೇಕು. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲೂ ದೇಶವು ತನ್ನದೇ ಆದ ರೀತಿಯಲ್ಲಿ ಸಾಧನೆ ಮಾಡಬೇಕು"




"ದೊಡ್ಡ ದೊಡ್ಡ ಕನಸುಗಳನ್ನು ಕಾಣಿರಿ. ಕನಸುಗಳನ್ನು ನನಸು ಮಾಡಲು ಸಿದ್ಧತೆ ಮಾಡಿ. ಅದಕ್ಕೆ ತಕ್ಕಂತೆ ಪರಿಶ್ರಮ ಪಡಲು ಹಿಂಜರಿಯದಿರಿ"




"ಜೀವನದಲ್ಲಿ ಗುರಿ ಹೊಂದಿರಬೇಕು. ಅದಕ್ಕೆ ತಕ್ಕಂತೆ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಗುರಿ, ಜ್ಞಾನ ಮತ್ತು ಶಿಕ್ಷಣ ಮೇಳೈಸುವುದರ ಜೊತೆಗೆ ಪರಿಶ್ರಮ ಪಟ್ಟಲ್ಲಿ ಸಹಜವಾಗಿ ಯಶಸ್ಸು ದೊರೆಯುತ್ತದೆ"





"ನಮ್ಮದು ಶಾಂತಿಪ್ರಿಯ ದೇಶ. ಆದರೆ ನೆರೆ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಈ ಕಾರಣಕ್ಕಾದರೂ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಹೆಚ್ಚಿನ ಖರ್ಚು ವೆಚ್ಚ ಮಾಡಬೇಕಿದೆ. ನೆರೆ ದೇಶಗಳು ದಾಳಿ ಮಾಡಿದಾಗ ಮಾತ್ರ ನಮ್ಮ ಬಳಿಯಿರುವ ಶಸ್ತ್ರಾಸ್ತ್ರಗಳು ಪ್ರಯೋಗಿಸಲಾಗುವುದು. ನಮ್ಮ ದೇಶಕ್ಕೆ ೬೦೦೦ ವರ್ಷಗಳ ಇತಿಹಾಸವಿದೆ. ಆದರೆ ಭಾರತೀಯರು ಕೇವಲ ೫೦೦ ವರ್ಷಗಳ ಕಾಲ ಮಾತ್ರ ದೇಶವನ್ನು ಆಳಿದ್ದಾರೆ. ನೆರೆ ದೇಶಗಳಿಂದ ಆತಂಕ ಇರುವಾಗ ನಾವು ಭದ್ರತೆ ಕಾಯ್ದುಕೊಳ್ಳುವುದು ಅತ್ಯಗತ್ಯ"





"ಭ್ರಷ್ಟಾಚಾರ ಮುಕ್ತ ದೇಶ ನಿರ್ಮಿಸುವತ್ತ ಎಲ್ಲರೂ ಪಣತೊಡಬೇಕು. ನಮ್ಮ ಮನೆಯಲ್ಲಿ ಕುಟುಂಬ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ, ಅದನ್ನು ತಡೆಯುತ್ತೇನೆ ಎಂದು ಯುವಜನರು ಪ್ರಮಾಣ ಮಾಡಬೇಕು. ಆಗ ಮಾತ್ರ ಭ್ರಷ್ಟಾಚಾರ ಹಂತಹಂತವಾಗಿ ನಿವಾರಿಸಲು ಸಾಧ್ಯ"





"ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಯಾದಷ್ಟೂ ನೂತನ ಆವಿಷ್ಕಾರಗಳನ್ನು ಮಾಡಲು ಸಾಧ್ಯ. ಭಿನ್ನ ಭಿನ್ನ ಮಾದರಿಯ ತಂತ್ರಜ್ಞಾನಗಳು ಮೇಳೈಸಿದರೆ ವಿಭಿನ್ನವಾದ ವಿಶ್ವವನ್ನೇ ನಿರ್ಮಿಸಬಹುದು"




"ಹೊಸ ಭಾರತವನ್ನು ನಿರ್ಮಿಸುವ, ಕನಸುಗಳನ್ನು ನನಸು ಮಾಡುವ ಗುರಿ ಹೊಂದಿರುವ ಯುವಜನರು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದ ದೇಶವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಬೇಕು"