Tuesday, July 6, 2010

ಕಮ್ ಸೆಪ್ಟೆಂಬರ್



ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ತಂದೆ ಮನೆಗೆ ಒಂದು ಗ್ರಾಮಾಫೋನ್ ತಂದಿದ್ದರು. ಗ್ರಂಡಿಕ್ ಎನ್ನುವ ಜರ್ಮನ್ ಕಂಪನಿಯದ್ದು. ಆಗ ಅದಕ್ಕೆ ಒಂದೂವರೆ ಸಾವಿರ ಕೊಟ್ಟಿದ್ದರಂತೆ. ಸಿಕ್ಕಾಪಟ್ಟೆ ದೊಡ್ಡದಿತ್ತು. ಅದರ ಒಂದು ಭಾಗದಲ್ಲಿ ರೇಡಿಯೋ ಇದ್ದರೆ ಇನ್ನೊಂದು ಭಾಗದಲ್ಲಿ ಗ್ರಾಮಾಫೋನ್ ಇತ್ತು. ಒಮ್ಮೆಗೇ ಆರು ಪ್ಲೇಟ್ ಹಾಕಬಹುದಾಗಿತ್ತು. ಒಂದಾದ ನಂತರ ಒಂದು ಪ್ಲೇ ಆಗುತ್ತಿತ್ತು. ಬೆಳಿಗ್ಗೆ ಐದೂವರೆಗೆಲ್ಲಾ ನನ್ನಜ್ಜಿ ದೇವರ ಹಾಡುಗಳನ್ನು ಹಾಕುತ್ತಿದ್ದರು. ನಂತರ ನನ್ನಮ್ಮ ಆಗಿನ ಕಾಲದ ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಕುತ್ತಿದ್ದರು. ಈಗಲೂ ಗ್ರಾಮಾಫೋನ್‌ನಲ್ಲಿ ಕೇಳಿದ ಹಾಡುಗಳನ್ನು ಕೇಳಿದಾಗ ಅಂದಿನ ದಿನಗಳು ನೆನಪಾಗುತ್ತವೆ.



ಆ ಗ್ರಾಮಾಫೋನ್ ಪ್ಲೇಟುಗಳಲ್ಲಿ ಪುಟ್ಟ ಅಪರಿಚಿತ ಪ್ಲೇಟೊಂದಿತ್ತು. ಅದರಲ್ಲಿ ಕೇವಲ ಮ್ಯೂಜಿಕ್ ಮಾತ್ರ ಬರುತ್ತಿತ್ತು. ನನ್ನಮ್ಮನಿಗೆ ಇಷ್ಟವಾದ ಪ್ಲೇಟ್‌ಗಳಲ್ಲಿ ಅದೂ ಒಂದು. ಅದರ ಸಂಗೀತ ಎಲ್ಲರಿಗೂ ಇಷ್ಟವಾಗುತ್ತಿತ್ತು. ಅಮ್ಮ ಅದನ್ನು "ಕಮ್ ಸೆಪ್ಟೆಂಬರ್" ಎಂದು ಕರೆಯುತ್ತಿದ್ದರು. ನನಗೆ ಸರಿಕಾಣುತ್ತಿರಲಿಲ್ಲ. ನಮ್ಮ ಮಗುವಿಗೆ ಫಾರಿನ್ ಹೆಸರಿಟ್ಟಂತೆ ಭಾಸವಾಗುತ್ತಿತ್ತು.



ಮುಂದೆ ಟೇಪ್‌ರೆಕಾರ್ಡರ್ ಬಂದು ಗ್ರಾಮಾಫೋನ್ ಮೇಲೆ ಕುಳಿತುಕೊಂಡಿತು. ಗ್ರಾಮಾಫೋನ್ ಬಳಕೆಯೇ ನಿಂತುಹೋಯಿತು. ಟೀವಿ ಕೂಡ ಜೀವನದ ಭಾಗವಾಯಿತು. ಅದರೊಂದಿಗೆ ವಿಸಿಆರ್ ಕೂಡ ಆಗಮಿಸಿತು. ಕಾಲಾಯ ತಸ್ಮೈ ನಮಃ.


ಮಾಧುರಿ ದೀಕ್ಷಿತ್ ಮತ್ತು ಸಂಜಯ್ ಕಪೂರ್ ನಟಿಸಿರುವ "ರಾಜ" ಎನ್ನುವ ಚಿತ್ರ ೧೯೯೫ ರಲ್ಲಿ ಬಿಡುಗಡೆಯಾಯಿತು. ಆ ಸಮಯದಲ್ಲಿ ಟೀವಿಯಲ್ಲಿ ಆ ಚಿತ್ರದ ಹಾಡೊಂದು ಬಂತು. "ನಜ್‌ರೇ ಮಿಲೀ... ದಿಲ್ ದಡ್‌ಕಾ... ಮೇರೆ ದಡ್‌ಕನ್ ನೇ ಕಹಾ... ಲವ್ ಯೂ ರಾಜಾ..." ಎಂಬ ಹಾಡು ಬರುತ್ತಿದ್ದಂತೆಯೇ ನನ್ನಜ್ಜಿ, "ಅರೇ.. ಕಮ್ ಸೆಪ್ಟೆಂಬರ್" ಅಂದರು. ಅಡುಗೆ ಮನೆಯಿಂದ ಹಾಡು ಕೇಳಿಸಿಕೊಂಡು ನನ್ನಮ್ಮನೂ ಹೊರಗೆ ಬಂದು, "ಕಮ್ ಸೆಪ್ಟೆಂಬರ್ ಮ್ಯೂಜಿಕ್ಕಲ್ವಾ?" ಅಂದರು. ಕಮ್ ಸೆಪ್ಟೆಂಬರ್‌ನ ಟ್ಯೂನ್ ಬಳಸಿದ್ದರಿಂದಾಗಿ ಹಿಂದಿ ಬರದಿದ್ದರೂ ಎಂಬತ್ತನಾಲ್ಕು ವರ್ಷದ ನನ್ನಜ್ಜಿಗೆ ಈಗಲೂ ಈ ಹಿಂದಿ ಹಾಡೆಂದರೆ ಬಹಳ ಇಷ್ಟ!
ನನಗೆ ಹೆಣ್ಣು ಕೊಟ್ಟ ಮಾವ ಫಿಲಂ ಪ್ರೇಮಿ. ಬೆಂಗಳೂರಿನ ಮೊಟ್ಟಮೊದಲ ಥಿಯೇಟರ್ ಪ್ಲಾಜಾ(ಈಗಿಲ್ಲ ಬಿಡಿ!) ದಲ್ಲಿ ಮೊಟ್ಟಮೊದಲ ಚಿತ್ರದಿಂದ ಎಲ್ಲಾ ಚಿತ್ರಗಳನ್ನೂ ನೋಡಿದಂತಹ ಭೂಪರು. ಅವರ ಬಳಿ ಮಾತಾಡುವಾಗ ಈ ’ಕಮ್ ಸೆಪ್ಟೆಂಬರ್’ ವಿಚಾರ ಬಂತು. ಆಗವರು, "ಅದೊಂದು ಅದ್ಭುತವಾದ ಚಿತ್ರ. ಸಿಡಿ ಸಿಕ್ಕರೆ ನೋಡಿ. ನನಗೂ ತಂದುಕೊಡಿ" ಅಂದರು. ಅದೊಂದು ಆಲ್ಬಮ್ ಅಥವಾ ಹಾಡಿನ ಸಾಲಿರಬಹುದೆಂದು ಭಾವಿಸಿದ್ದ ನನಗೆ ಚಿತ್ರವೆಂದು ತಿಳಿದು ಖುಷಿ ಮತ್ತು ಕುತೂಹಲ ಎರಡೂ ಉಂಟಾಯಿತು.
ಅಂತೂ "ಕಮ್ ಸೆಪ್ಟೆಂಬರ್" ಚಿತ್ರದ ಡಿವಿಡಿ ಕೊಳ್ಳುವಲ್ಲಿ ಯಶಸ್ವಿಯಾದೆ. ವಿಚಿತ್ರವೆಂದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಅಷ್ಟೊಂದು ಅದರ ಸಂಗೀತವನ್ನು ಇಷ್ಟಪಡುತ್ತಿದ್ದ ನನ್ನ ತಾಯಿಯೇ ಇಲ್ಲ ಈ ಚಿತ್ರವನ್ನು ನೋಡಲು. ವಯಸ್ಸಾದ ನನ್ನಜ್ಜಿಗೆ ಅರ್ಥವಾಗದ ಇಂಗ್ಲೀಷ್ ಚಿತ್ರಕ್ಕಿಂತ ಯಾವಾಗಲಾದರೊಮ್ಮೆ ಈ ಸಂಗೀತದ ಸೊಲ್ಲು ಕೇಳಿಸಿದರೆ ಸಾಕು, ದಿಲ್ ಖುಷ್!!

* * * * *



"ಹೆಣ್ಣು ಗಂಡಿನಿಂದ ಗೌರವವನ್ನು ಬಯಸುತ್ತಾಳೆ.
ಹೆಣ್ಣು ಸುಲಭವಾಗಿ ಗಂಡಿಗೆ ದೊರಕಿದರೆ ಆಕೆಯನ್ನು ಆತ ಗಂಭೀರವಾಗಿ ಪರಿಗಣಿಸುವುದಿಲ್ಲ... ನಿಶ್ಚಿತಾರ್ಥ, ಮದುವೆ, ಮನೆ ಮತ್ತು ಮಕ್ಕಳು ಎಂಬುದೆಲ್ಲ ಬೇಕೆನ್ನುವುದಿದ್ದರೆ ಹೆಣ್ಣು ತನ್ನ ಆದರ್ಶಗಳನ್ನು ಉಚ್ಛಸ್ಥಾಯಿಯಲ್ಲಿಟ್ಟುಕೊಳ್ಳಬೇಕು...
ಶಯನಗೃಹವೆಂಬುದು ಮದುವೆಯ ದಿರಿಸಿನಂತೆ. ಗಂಡು ಮದುವೆಗೆ ಮುಂಚೆ ಆ ದಿರಿಸಿನಲ್ಲಿ ಹೆಣ್ಣನ್ನು ನೋಡಬಾರದು..."

ಇಂಥಹ ಸಾರ್ವಕಾಲಿಕವಾದ ಮಾತುಗಳನ್ನು ಆಡುವುದು ೧೯೬೧ರಲ್ಲಿ ಬಿಡುಗಡೆಯಾದ "ಕಮ್ ಸೆಪ್ಟೆಂಬರ್" ಚಿತ್ರದ ನಾಯಕ ರಾಬರ್ಟ್. ಹಾಗಂತ ಇದೇನೂ ನೀತಿ ಬೋಧನೆಯ ಚಿತ್ರವಲ್ಲ. ಪ್ರೇಮ, ಪ್ರೀತಿಯ ಅಪ್ಪಟ ಹಾಸ್ಯಮಯ ಚಿತ್ರ.



ಚಿತ್ರದ ನಾಯಕ ರಾಬರ್ಟ್ ಟಾಲ್ಬೋಟ್ ಒಬ್ಬ ಲಕ್ಷಾಧೀಶ್ವರ ಅಮೇರಿಕನ್. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳು ಇಟಲಿಯ ನದಿ ದಂಡೆಯಲ್ಲಿರುವ ತನ್ನ ಬಂಗಲೆಯಲ್ಲಿ ತನ್ನ ರೋಮನ್ ಗೆಳತಿ ಲೀಸಾಳೊಂದಿಗೆ ಕಳೆಯುವುದು ರೂಢಿ. ಎಲ್ಲ ಎಡವಟ್ಟುಗಳ ಪ್ರಾರಂಭವಾಗುವುದು ಆತ ಇದ್ದಕ್ಕಿಂದ್ದಂತೆ ಜುಲೈ ತಿಂಗಳಿನಲ್ಲಿ ಆಗಮಿಸಿದಾಗ!




ವರ್ಷದ ಕೇವಲ ಒಂದು ತಿಂಗಳಿನ ಅವಧಿಯ ಸಂಬಂಧದ ಅನಿಶ್ಚಿತತೆಯನ್ನು ಮನಗಂಡು ಲೀಸಾ ಒಬ್ಬ ಇಂಗ್ಲೀಷಿನವನನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಗ ರಾಬರ್ಟ್‌ನ ಫೋನ್ ಬರುತ್ತದೆ. ಅವನ ಜೇನಿನಂತೆ ಮಧುರವಾದ ಪ್ರೀತಿಬೆರೆತ ದನಿಗೆ ಕರಗಿ ಮದುವೆ ದಿರಿಸನ್ನು ಕಿತ್ತೊಗೆದು ಓಡುತ್ತಾಳೆ. ಇತ್ತ ಅವನ ಬಂಗಲೆಯನ್ನು ನೋಡಿಕೊಳ್ಳುವ ಮೋರಿಸ್ ಒಡೆಯನಿರದ ಬಂಗಲೆಯನ್ನು ವಸತಿಗೃಹವನ್ನಾಗಿಸಿರುತ್ತಾನೆ! ಸೆಪ್ಟೆಂಬರಿನಲ್ಲಿ ಬರುವ ರಾಬರ್ಟ್ ಜುಲೈನಲ್ಲಿ ಬಂದಾಗ ಅವನ ಪಜೀತಿ ಹೇಳತೀರದು. ವಸತಿಗೃಹವೆಂದು ತಿಳಿದು ಉಳಿದಿರುವ ಆರು ಹದಿಹರೆಯದ ಹುಡುಗಿಯರು ಜೊತೆಗೊಬ್ಬ ವಾರ್ಡನ್‌ರನ್ನು ಸಂಭಾಳಿಸಲು ಅವರ ಬಳಿಯೊಂದು ಸುಳ್ಳು ಯಜಮಾನನ ಬಳಿಯೊಂದು ಸುಳ್ಳು... ಹೀಗೆ ಸುಳ್ಳಿನ ಸರಮಾಲೆ ಬೆಳೆದು ಸಿಕ್ಕಿಬೀಳುತ್ತಾನೆ. ಅಷ್ಟರಲ್ಲಿ ಲೀಸಾಳ ಆಗಮನವಾಗುತ್ತದೆ. ತನ್ನ ಮತ್ತು ಲೀಸಾಳ ನಡುವೆ ಶಿವಪೂಜೆಯಲ್ಲಿ ಆಗಮಿಸಿದ ಕರಡಿಗಳಂತಿರುವ ಹುಡುಗಿಯರನ್ನು ಆಚೆ ಕಳಿಸಲು ಮೋರಿಸ್‌ಗೆ ಆಜ್ಞಾಪಿಸುತ್ತಾನೆ. ವಸತಿಗೃಹವೆಂದು ತಿಳಿದು ಉಳಿದಿರುವ ಹುಡುಗಿಯರನ್ನು ಹೊರಕಳಿಸಬೇಕೆಂದಿರುವಾಗ, "ಪ್ರಣಯ ಪಕ್ಷಿ"ಗಳಂತೆ ನಾವಿನ್ನು ಹಾರಾಡಬಹುದು ಎಂದು ಕನಸುಕಾಣುತ್ತಾ ರಾಬರ್ಟ್ ಬಿಚ್ಚಿದ ಶಾಂಪೇನ್ ಬಾಟಲ್‌ನ ಬಿರಡೆ ತುಳಿದು ಅವರ ವಾರ್ಡನ್ ಬಿದ್ದು ಲೆಕ್ಕಾಚಾರವೆಲ್ಲಾ ಉಲ್ಟಾ ಹೊಡೆಯುತ್ತದೆ. ನಾಲ್ವರು ಮೆಡಿಕಲ್ ಕಾಲೇಜಿನ ಹುಡುಗರ ಆಗಮನದೊಂದಿಗೆ ಪರಿಸ್ಥಿತಿ ಬಿಗಡಾಯಿಸುತ್ತದೆ.



ಮೆಡಿಕಲ್ ವಿದ್ಯಾರ್ಥಿ ಟೋನಿ ಮತ್ತು ರಾಬರ್ಟ್‌ನ ಮನೆಯಲ್ಲಿ ಉಳಿದಿರುವ ಸ್ಯಾಂಡಿ ಎಂಬ ಹುಡುಗಿಯ ನಡುವೆ ಪ್ರೇಮಾಂಕುರ, ರಾಬರ್ಟ್ ಮತ್ತು ಲೀಸಾಳ ನಡುವೆ ಪ್ರೇಮ ನಿವೇದನೆ ಇವುಗಳ ನಡುವೆ ಸೂತ್ರದಾರನಂತೆ ಕೆಲಸ ಮಾಡುವ ಮೋರಿಸ್ ನಮ್ಮನ್ನು ತುದಿಗಾಲಿನಲ್ಲಿ ನಿಂತು ಆನಂದಿಸುವಂತೆ ಮಾಡುತ್ತಾರೆ.



ಚಿತ್ರವನ್ನು ನೋಡುವ ನಮಗೇ ಇಷ್ಟು ಆನಂದವಾಗುವುದಾದರೆ ಚಿತ್ರ ತಂಡಕ್ಕೆ ಹೇಗಿರಬೇಕೆಂದು ನೋಡಿದರೆ, ಚಿತ್ರದ ಶೂಟಿಂಗ್ ಮುಗಿದು ೧೦ ದಿನಕ್ಕೆಲ್ಲಾ ಇದರಲ್ಲಿ ಯುವ ಪ್ರೇಮಿಗಳಾಗಿ ನಟಿಸಿದ್ದ ಬಾಬ್ಬಿ ಡ್ಯಾರಿನ್ ಮತ್ತು ಸ್ಯಾಂಡ್ರಾ ವಿವಾಹವಾದರಂತೆ!
ಚಿತ್ರದುರ್ಗಕ್ಕೆ ಹೋದಾಗ ಈಗಲೂ ನಾವು ನಾಗರಹಾವು ಚಿತ್ರದಲ್ಲಿ ಆರತಿ ಇಲ್ಲಿ ಕುಣಿದದ್ದು, ವಿಷ್ಣುವರ್ಧನ್ ಇಲ್ಲಿ ನಿಂತಿದ್ದು ಎಂದೆಲ್ಲಾ ಮಾತನಾಡುವಂತೆ "ಕಮ್ ಸೆಪ್ಟೆಂಬರ್" ಚಿತ್ರದ ಇಟಲಿಯ ಪೋರ್ಟೋಫಿನೋ ಬಳಿಯಿರುವ ಬಂಗಲೆಯು ಶೂಟಿಂಗ್ ಮಾಡಿದ್ದರಿಂದಾಗಿ ಪ್ರಸಿದ್ದಿ ಪಡೆದು ಪ್ರವಾಸಿ ಸ್ಥಳವಾಗಿದೆ.
ಇಂಥ ಚಂದದ ಚಿತ್ರವನ್ನು ನಮ್ಮ ಬಾಲಿವುಡ್‌ನವರು ರೀಮೇಕ್ ಮಾಡಿದ್ದಾರೆ. ೧೯೮೦ರಲ್ಲಿ "ಏಕ್ ಬಾರ್ ಕಹೋ" ಎಂಬ ಈ ಚಿತ್ರದಲ್ಲಿ ಬಿಸ್ವಜಿತ್ ಮತ್ತು ಶಬಾನಾ ಅಜ್ಮಿ ನಟಿಸಿದ್ದರು.

Sunday, June 13, 2010

ಕಬಿನಿ ದಂಡೆಯಲ್ಲಿ ವನ್ಯಜೀವಿ ದರ್ಶನ

‘ಟಪ್’ ಎಂದು ಜೀಪಿಗೆ ಹೊಡೆದ ತಕ್ಷಣ ಜೀಪು ನಿಂತಿತು. ಜೀಪಿನ ಕಿಟಕಿಯಿಂದ ಅರ್ಧ ಮೈಯನ್ನು ಹೊರಗಿಟ್ಟುಕೊಂಡು ಸುತ್ತೆಲ್ಲಾ ಗಮನಿಸುತ್ತಿದ್ದ ಜೀವನ್ ಮತ್ತು ವಾಹನ ಓಡಿಸುತ್ತಿದ್ದ ಡ್ರೈವರ್ ನಡುವೆ ನಡೆದ ಮೂಕ ಸಂಭಾಷಣೆಯಿದು.

“ಶ್! ಶಬ್ಧ ಮಾಡಬೇಡಿ. ಅಲ್ಲಿ ನೋಡಿ ಹುಲಿ ಬರುತ್ತಿದೆ ನೀರು ಕುಡಿಯಲು” ಎಂದು ಕೈ ತೋರಿಸಿದರು.

ನಮಗೆಲ್ಲ ರೋಮಾಂಚನ. ಝೂಮ್ ಲೆನ್ಸ್‌ನಲ್ಲಿ ಹುಲಿರಾಯನನ್ನು ನೋಡುತ್ತಿದ್ದಂತೆಯೇ ನನಗೆ ಕ್ಲಿಕ್ಕಿಸುವುದೂ ಮರೆತುಹೋಯಿತು.

“ಫೋಟೋ ತೆಗೀರಿ ಸರ್...” ಎಂದು ಜೀವನ್ ತಿವಿದಾಗಲೇ ವಾಸ್ತವಕ್ಕೆ ಮರಳಿದ್ದು. ಅದರದೇ ಮನೆಯಲ್ಲಿ ಅಂದರೆ ಕಾಡಲ್ಲಿ ಹುಲಿಯನ್ನು ನೋಡುವುದಂತೂ ಎಂಥವರಿಗೂ ಮರೆಯಲಾಗದ ಅನುಭವ.

ಜೀವನ್ ಕಬಿನಿ ಜಂಗಲ್ ಲಾಡ್ಜಸ್‌ನ ನ್ಯಾಚುರಲಿಸ್ಟ್. ತೆರೆದ ಜೀಪಿನಲ್ಲಿ ಪ್ರವಾಸಿಗರನ್ನು ಕಾಡಿನಲ್ಲಿ ಕರೆದೊಯ್ದು ವನ್ಯ ಪ್ರಾಣಿಗಳನ್ನು ತೋರಿಸುತ್ತಾರೆ.

ಕಬಿನಿ ನದಿಯ ಉತ್ತರದಲ್ಲಿ ೬೫೦ ಚದರ ಕಿಮೀ ವ್ಯಾಪ್ತಿಯ ನಾಗರಹೊಳೆ ಅಭಯಾರಣ್ಯವಿದೆ. ಈಶಾನ್ಯದಲ್ಲಿ ೮೭೪ ಚದರ ಕಿಮೀ ವ್ಯಾಪಿಸಿರುವ ಬಂಡೀಪುರ ಮತ್ತು ೩೨೧ ಚದರ ಕಿಮೀ ವ್ಯಾಪ್ತಿಯ ಮದುಮಲೈ ಅಭಯಾರಣ್ಯಗಳು ಹಾಗೂ ನೈರುತ್ಯದಲ್ಲಿ ೩೪೫ ಚದರ ಕಿಮೀ ವ್ಯಾಪ್ತಿಯ ಕೇರಳದ ವೈನಾಡ್ ಅಭಯಾರಣ್ಯಗಳಿವೆ. ಇಷ್ಟು ಸಮೃದ್ಧ ಜೀವಜಾಲ ಕಂಡೊಡನೆ ಬ್ರಿಟಿಷರು ಮತ್ತು ರಾಜಮಹಾರಾಜರು ಬೇಟೆಯಾಡಲಿದು ಉತ್ತಮ ಸ್ಥಳವೆಂದು ನಿರ್ಧರಿಸಿ ಹೆಚ್.ಡಿ.ಕೋಟೆಯ ಅಂತರಸಂತೆ ವಲಯದ ಕಾರಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಅದ್ಭುತವಾದ ಬಂಗಲೆಗಳನ್ನು ನಿರ್ಮಿಸಿದ್ದರು. ಹಾಗೆಯೇ ಅನೇಕ ಹುಲಿಗಳನ್ನು ಬೇಟೆಯೂ ಆಡಿದರು.

ಆದರೆ ಈಗ ಆ ಬಂಗಲೆಗಳು ಸರ್ಕಾರ ನಡೆಸುತ್ತಿರುವ ಕಬಿನಿ ಜಂಗಲ್ ರಿವರ್ ಲಾಡ್ಜಸ್‌ನ ಭಾಗವಾಗಿದೆ. ಇಲ್ಲಿ ತರಭೇತಿ ಹೊಂದಿದ ಪ್ರಕೃತಿ ವಿಜ್ಞಾನಿಗಳಿದ್ದಾರೆ. ಬೆಳಿಗ್ಗೆ ಎರಡೂವರೆ ಗಂಟೆ ಮತ್ತು ಮಧ್ಯಾಹ್ನ ಎರಡೂವರೆ ಗಂಟೆ ಕಾಡಿನೊಳಗೆ ತೆರೆದ ಜೀಪಿನಲ್ಲಿ ಸುತ್ತಿಸುತ್ತಾರೆ. ಜಿಂಕೆಗಳು, ಲಂಗೂರ್‌ಗಳು, ದೊಡ್ಡ ಅಳಿಲು, ಕಾಡು ನಾಯಿಗಳು, ಹುಲಿ, ಚಿರತೆ, ಆನೆಗಳು, ಕಾಡು ಹಂದಿಗಳು, ಸಾಂಬಾರ್, ಮೌಸ್ ಡೀರ್, ಬಾರ್ಕಿಂಗ್ ಡೀರ್, ಕಾಟಿ, ವಿವಿಧ ಹಕ್ಕಿಗಳು ಅವುಗಳ ವಾಸಸ್ಥಾನದಲ್ಲೇ ನೋಡುವುದರಿಂದ ವನ್ಯಜೀವಿಗಳ ಮೇಲೆ ಪ್ರೀತಿ, ಗೌರವ ಮತ್ತು ಆದರ ಹುಟ್ಟಿಸುತ್ತದೆ.

ಕೇರಳದ ವೈನಾಡಿನಲ್ಲಿ ಜನಿಸಿ ಕಾವೇರಿ ನದಿಯನ್ನು ಸೇರಿ ಬಂಗಾಳಕೊಲ್ಲಿ ಸೇರುವ ಕಬಿನಿ ನದಿಗೆ ಹೆಚ್.ಡಿ.ಕೋಟೆಯಿಂದ ಹದಿನಾಲ್ಕು ಕಿಮೀ ದೂರದಲ್ಲಿ ಬೀಚಗಾನಹಳ್ಳಿ ಮತ್ತು ಬಿದರಹಳ್ಳಿ ನಡುವೆ ಅಣೆಕಟ್ಟನ್ನು ಕಟ್ಟಲಾಗಿದೆ. ಬೇಸಿಗೆಯಲ್ಲಿ ಬಿಸಿಲು ಏರಿದಂತೆ ಕಬಿನಿ ಅಣೆಕಟ್ಟಿನ ಒಡಲಲ್ಲಿ ನೀರು ನಿಧಾನವಾಗಿ ಖಾಲಿಯಾಗುತ್ತದೆ. ನೀರಿನಡಿಯಲ್ಲಿ ಮುಳುಗಿರುವ ವಿಶಾಲಭೂಮಿ ಹೊರ ಪ್ರಪಂಚಕ್ಕೆ ತೆರೆದುಕೊಂಡು ಅಲ್ಲಿ ಚಿಗುರು ಹಸಿರು ಹೊರಹೊಮ್ಮುತ್ತದೆ. ಆಗ ನಾಗರಹೊಳೆ, ಬಂಡೀಪುರ, ಮದುಮಲೈ, ವೈನಾಡಿನ ಆನೆಗಳು, ಕಾಡುಕೋಣಗಳು ಹಿಂಡುಹಿಂಡಾಗಿ ಹಿನ್ನೀರಿನತ್ತ ವಲಸೆ ಬರುತ್ತವೆ. ಆಗ ಒಮ್ಮಗೇ ೬೦ ರಿಂದ ೭೦ ಆನೆಗಳು ಹಿಂಡು ಹಿಂಡಾಗಿ ಕಾಣಿಸುತ್ತವೆ. ದೋಣಿಯಲ್ಲಿ ಕುಳಿತು ಆನೆಗಳ ಹಿಂಡನ್ನು ಬಿದಿರ ಹಿನ್ನೆಲೆಯಲ್ಲಿ ನೋಡಲು ತುಂಬಾ ಚೆನ್ನಾಗಿರುತ್ತದೆ. ಒಣ ಮರಗಳ ಮೇಲೆ ಕುಳಿತ ಬೆಳ್ಳಕ್ಕಿಗಳು, ನೀರು ಕಾಗೆಗಳು, ಸ್ನೇಕ್ ಬರ್ಡ್, ಮಿಂಚುಳ್ಳಿಗಳು, ಹದ್ದುಗಳು, ಬಾತುಗಳು ಇತ್ಯಾದಿ ಹಕ್ಕಿಗಳನ್ನು ನೋಡುತ್ತಾ ಸಾಗಿದಂತೆ ನಮ್ಮ ಎಣಿಕೆಯೇ ತಪ್ಪುತ್ತದೆ.

ಭಾರತದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಗುಜರಾತ್‌ವರೆಗೆ ೧,೬೦೦ ಕಿಮೀ ಉದ್ದದ, ೧,೬೦,೦೦೦ ಚದರ ಕಿಮೀ ವ್ಯಾಪ್ತಿಯ ಪಶ್ಚಿಮಘಟ್ಟವನ್ನು ದೇಶದ ಅತಿದೊಡ್ಡ ಜೈವಿಕ ತಾಣವೆಂದು ಪರಿಗಣಿಸಲಾಗಿದೆ. ಇದರ ಪ್ರತಿನಿಧಿಯಾದ ಕಬಿನಿ ಸುತ್ತಮುತ್ತಲ ತಾಣ ಜೀವವೈವಿದ್ಯದ ದರ್ಶನ ಮಾಡಿಸುವಲ್ಲಿ ಹೇಳಿ ಮಾಡಿಸಿದಂತ ತಾಣ.


















ಮಲಬಾರ್ ಜೈಂಟ್ ಸ್ಕ್ವಿರ್ಲ್


ಬಾರ್ಕಿಂಗ್ ಡೀರ್






ಆಸ್ಪ್ರೇ ಹಕ್ಕಿ


ಸ್ನೇಕ್ ಬರ್ಡ್


ಆಸ್ಪ್ರೇ ಹಕ್ಕಿ


ನೀರು ಕಾಗೆ

Tuesday, June 1, 2010

ಎರಡು ಕನಸು!




ಮಗನನ್ನು ಶಾಲೆಯ ಬಸ್ಸಿಗೆ ಹತ್ತಿಸಿ ಹಾಗೇ ವೆಂಕಟರಮಣನ ಹೋಟೆಲ್ ಮುಂದೆ ಬಂದೆ. ಹೊರಗೆ ನಿಂತಿದ್ದ ಅವನನ್ನು ಕಂಡು ಹಿಂದಿನ ದಿನ ಧರ್ಮಸ್ಥಳಕ್ಕೆ ಹೋಗುತ್ತೇನೆಂದು ಹೇಳಿದ್ದುದು ನೆನಪಿಗೆ ಬಂತು.
ಬೈಕ್ ನಿಲ್ಲಿಸಿ, “ಏನ್ ಸಮಾಚಾರ ಧರ್ಮಸ್ಥಳಕ್ಕೆ ಹೋಗ್ತೀನಂತ ಹೇಳಿ ಪ್ಯಾಂಟು ಷರ್ಟು ಹಾಕಿರುವ ಗೊಮ್ಮಟೇಶ್ವರನ ಥರಾ ನಿಂತಿದ್ದೀಯ?” ಎಂದು ಕಿಚಾಯಿಸಿದೆ.
ಮುಖ ಒಂಥರಾ ಅರಳೆಣ್ಣೆ ಕುಡಿದವನಂತೆ ಮಾಡಿಕೊಂಡು, “ಅಷ್ಟು ದೂರ ಬಿಸಿಲಲ್ಲಿ ಇವನ್ಯಾಕೆ ಬರ್ಬೇಕು ಅಂತ ದೇವರೇ ನನ್ಮುಂದೆ ಪ್ರತ್ಯಕ್ಷ ಆಗ್ಬಿಟ್ಟಿದ್ದಾನೆ” ಅಂದ.
ಚಿಕ್ಕ ವಯಸ್ಸಿಗೇ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಿ ಜೀವನಾನುಭವ ಪಡೆದಿರುವ ಇವನು ಅರ್ಧ ತೋಳಿನ ಅಂಗಿ ಧರಿಸಿ ನಿಂತಿದ್ದರೆ, ಚಿಕ್ಕ ವಯಸ್ಸಿನವನಂತೆ, ಏನೂ ತಿಳಿಯದವನಂತೆ ಕಾಣುತ್ತಾನೆ. ಇವನಿಂದ ದೇವರ ಮಾತು ಹೊರಗೆ ಬರಲು ಹೊಟ್ಟೆಯೊಳಕ್ಕೆ ಕಾಫಿ ಕಳಿಸಬೇಕು!
ಇಬ್ಬರೂ ಭುಜಂಗನ ಹೋಟೆಲಿಗೆ ಹೋದೆವು. “ಪ್ರಕಾಶ ಎರ್ಡು ಪಾರ್ಟ್ ಕಾಫಿ” ಎಂದು ಹೇಳಿ ವೆಂಕಟರಮಣನಿಗೆ, “ದೇವರ ವಿಷ್ಯ ಏನು?” ಎಂದು ಕೇಳಿದೆ.
“ಭಾನುವಾರ ರಶ್ಶಿರುತ್ತೆ ನಾಳೆ ಗುರುವಾರ ಧರ್ಮಸ್ಥಳಕ್ಕೆ ಹೊರಡೋಣ ಅಂದಿದ್ದ ವೆಂಕಟರೆಡ್ಡಿ. ಬೆಳಿಗ್ಗೆ ಎಲೆಕ್ಟ್ರಿಕ್ ಕಂಬದಲ್ಲಿ ಶಾರ್ಟ್ ಆಗಿದೆ. ಮಸಾಲೆ ಅರೆಯಲು ಗ್ರೈಂಡರ್ ಆನ್ ಮಾಡ್ತಿದ್ದಂತೆ ಮೋಟರ್ ಸುಟ್ಟು ಹೋಯಿತು. ಮೂರು ಸಿಎಫ್ಎಲ್ ಬಲ್ಪುಗಳು ಬರ್ನ್ ಆದವು. ಯುಜಿಡಿ ಬ್ಲಾಕ್ ಆಗಿ ಹೋಟೆಲ್ನಿಂದ ಪಾತ್ರೆ ತೊಳೆದ ನೀರು ಹೊರಕ್ಕೆ ಹೋಗ್ತಾಯಿಲ್ಲ. ಲೈನ್ ಮನ್‌ನ ಕರೆದುಕೊಂಡು ಬಂದಿದ್ದೆ. ವೈರುಗಳು ಮೆಲ್ಟಾಗಿದೆ, ಸುಟ್ಟು ಹೋಗಿದೆ. ಬದಲಾಯಿಸೆಂದ. ಮೇಲೆ ನೀರಿನ ಟ್ಯಾಂಕಲ್ಲಿ ನೀರು ಖಾಲಿಯಾಗಿದೆ. ಸಂಪಲ್ಲಿರುವ ನೀರನ್ನು ಪಂಪ್ ಮಾಡಲು ಆಗಲ್ಲ...” ಎಂದು ನಿರ್ವಿಕಾರವಾಗಿ ಹೇಳತೊಡಗಿದ.
ಕೇಳುತ್ತಿದ್ದ ನನಗೇ ಸಮಸ್ಯೆಗಳ ನಂದಿಬೆಟ್ಟವೇ ಮೇಲೆ ಬಿದ್ದಂತಾಗಿ ಹೌಹಾರಿದೆ.
ಶಕುನಗಳು, ಕನಸಿನ ಪ್ರಭಾವ ಮುಂತಾದವುಗಳನ್ನು ವೆಂಕಟರಮಣ ನಂಬುತ್ತಾನೆ. ಎಲ್ಲ ದಿವ್ಯಾಸ್ತ್ರಗಳೂ ಒಟ್ಟಿಗೇ ಪ್ರಯೋಗ ಆಗಿರುವಾಗ ಇದರ ಮುನ್ಸೂಚನೆ ಕೂಡ ಸಿಕ್ಕಿರಬೇಕಲ್ಲ ಎಂಬ ವಿಚಿತ್ರ ತರ್ಕದಿಂದ, “ಹೀಗೆಲ್ಲಾ ಆಗುತ್ತೆ ಅಂತ ಏನಾದರೂ ಕನಸು ಬಿದ್ದಿತ್ತಾ?” ಅಂತ ಕೇಳಿದೆ.
“ಅಯ್ಯೋ ಕನಸುಗಳಿಗೇನು ಬರ. ಮೊನ್ನೆ ಒಂದು ವಿಚಿತ್ರವಾದ ಕನಸು ಬಿದ್ದಿತ್ತು. ನಿಮಗೆ ಹೇಳ್ಬೇಕೂಂತ ಇದ್ದೆ” ಅಂದ. ತಕ್ಷಣ, “ಪ್ರಕಾಶ ಇನ್ನೊಂದು ಪಾರ್ಟ್ ಕಾಫಿ” ಎಂದು ಹೇಳಿ ಕೇಳಲು ಕುಳಿತೆ.
“ನಮ್ಮ ಅಡುಗೆ ಭಟ್ಟ ಮುರುಗ ಗೊತ್ತಲ್ಲ. ಅವನಿಲ್ಲದಿದ್ದರೆ ನನ್ನ ಕೈ ಕತ್ತರಿಸಿದಂತೆ ಆಗುತ್ತೆ. ಮೊನ್ನೆ ಕನಸಲ್ಲಿ ಅವನು ಸತ್ತುಹೋಗಿದ್ದ! ಕೆರೆ ಪಕ್ಕ ಹೆಣ ಹೂಳಲು ಜಾಗ ನೋಡಿಕೊಂಡು ಬರಲು ನನ್ನ ತಮ್ಮ ಗೋಪಾಲನನ್ನು ಕಳಿಸಿದೆ. ಹೊರಗೆ ವಿಪರೀತ ಮಳೆ ಬರುತ್ತಿತ್ತು. ಗೋಪಾಲ ಬಂದವನು ನೀರೆಲ್ಲ ತುಂಬಿದೆ ಹೆಣ ಹೂಳಲು ಜಾಗಾನೇ ಇಲ್ಲ ಅಂದ.
ಏನು ಮಾಡುವುದು ಅಂದುಕೊಂಡು ಹೊರಗೆ ಬಂದೆ. ಮುನಿಸಿಪಾಲಿಟಿಯವರು ಆಟೋಗೆ ಮೈಕಿಟ್ಟು ಹೆಣಗಳನ್ನು ಜ್ಯೂನಿಯರ್ ಕಾಲೇಜಿನ ಮೈದಾನಕ್ಕೆ ಸಾಗಿಸಿ ಸುಡಿ ಎಂದು ಜೋರಾಗಿ ಅನೌನ್ಸ್ ಮಾಡುತ್ತಿದ್ದಾರೆ. ಹೆಣ, ಸೌದೆ ಎಲ್ಲ ಮೈದಾನಕ್ಕೆ ಸಾಗಿಸಿದೆವು. ಅಲ್ಲಿ ಆಗಲೇ ಸಾಕಷ್ಟು ಜನ ಸೌದೆ ಇಟ್ಟು ಹೆಣಗಳನ್ನು ಮಲಗಿಸಿದ್ದರು. ನಾವೂ ಜಾಗ ಮಾಡಿಕೊಂಡು ಸೌದೆ ಜೋಡಿಸಿ ಮುರುಗನನ್ನು ಮಲಗಿಸಿದೆವು. ಗೋಪಾಲ ಮನೆಯಲ್ಲಿ ಕೆಲಸವಿದೆಯೆಂದು ಹೊರಟುಬಿಟ್ಟ. ಮಳೆಗೆ ನೆನೆದ ಸೌದೆ ಉರಿಯದು. ಸೀಮೆ ಎಣ್ಣೆ ಮರೆತು ಬಂದಿದ್ದೆ. ಬೇರೆಯವರದ್ದೂ ಅದೇ ಕಥೆ. ಒಬ್ಬೊಬ್ಬರೇ ಸೀಮೆ ಎಣ್ಣೆ ತರ್ತೀನಿ ನನ್ನ ಹೆಣ ನೋಡಿಕೋ ಅಂತ ಹೇಳಿ ಹೊರಟರು. ನನಗೂ ಸೀಮೆ ಎಣ್ಣೆ ಬೇಕು ಅಂದೆ. ನಾವೆಲ್ಲ ಸ್ವಲ್ಪ ಜಾಸ್ತಿ ತಂದರೆ ನಿನಗಾಗುತ್ತೆ ಇಲ್ಲೇ ಇರು ಎಂದು ಹೇಳಿ ಎಲ್ಲರೂ ಜಾಗ ಖಾಲಿ ಮಾಡಿದರು. ಅಲ್ಲುಳಿದದ್ದು ಹೆಣಗಳು ಮತ್ತು ನಾನು ಮಾತ್ರ.
ನೋಡುತ್ತಿದ್ದಂತೆಯೇ ಒಂದೊಂದೇ ಹೆಣಗಳು ಎದ್ದು ಓಡಾಡತೊಡಗಿದವು. ಅರೆ! ಅದರ ಯಜಮಾನ ಬಂದರೆ ಏನು ಹೇಳುವುದು? ಹೋಗಿ ಒಬ್ಬೊಬ್ಬರನ್ನೇ ಮಲಗಿಸತೊಡಗಿದೆ. ಒಂದನ್ನು ಮಲಗಿಸುವಷ್ಟರಲ್ಲಿ ಇನ್ನೆರಡು ಓಡಾಡುತ್ತಿದ್ದವು. ಎಷ್ಟು ಹೊತ್ತಾದರೂ ಯಾರೂ ಬರಲಿಲ್ಲ. ನನಗೆ ಮಾತ್ರ ಬಿಡುವಿರದ ಕೆಲಸ! ಅಷ್ಟರಲ್ಲಿ ಮುರುಗ ಎದ್ದು ಮೈಮುರಿದು “ಹೋಗಣ್ಣೋ ಎಷ್ಟು ಹೊತ್ತು ಮಲಗೋದು. ನನಗೆ ಬೇಜಾರು” ಅಂತ ಹೇಳಿದವನು ನನ್ನ ಮಾತಿಗೂ ಕಾಯದೆ ಸೀದಾ ಮನೆಕಡೆ ಹೊರಟುಬಿಟ್ಟ...”
“ಏನ್ಸಾರ್ ಇನ್ನೊಂದೊಂದು ಪಾರ್ಟ್ ಕಾಫಿ ಕೊಡ್ಲಾ?” ಎಂದು ಕೇಳಿ ಹೋಟೆಲಿನ ಪ್ರಕಾಶ ವೆಂಕಟರಮಣನ ಕಥೆಗೆ ಬ್ರೇಕ್ ಹಾಕಿದ.
“ಅಯ್ಯೋ ಲೇಟಾಗುತ್ತೆ, ರೆಡಿಯಾಗಿ ಹೊರಡಬೇಕು, ನಮ್ಮಜ್ಜಿ ತಿಥಿಯಿದೆ. ಮಧ್ಯಾಹ್ನದೊಳಗೆ ಬಂದುಬಿಡ್ತೀನಿ” ಎಂದು ಹೇಳುತ್ತಾ ಎದ್ದ ವೆಂಕಟರಮಣ.
“ಎಲ್ಲಿಗೆ ಹೋಗ್ತಿರೋದು?” ಎಂದು ಕೇಳಿದೆ.
“ವಿಜಯಪುರ ಆಚೆ ಇರೋ ನಾರಾಯಣಪುರದಲ್ಲಿ ಅವರ ಮಣ್ಣು ಮಾಡಿರೋದು. ಅಲ್ಲಿಗೆ ಹೋಗಿ ಬರಬೇಕು. ಇಲ್ಲೇ ಮಣ್ಣ ಮಾಡೋಣ ಅಂದ್ರೆ ಕೇಳಬೇಕಲ್ಲ. ನಮ್ಮಜ್ಜಿ ಕನಸಲ್ಲೆಲ್ಲಾ ಬಂದು ಕಾಟ ಕೊಡ್ತಿದ್ರು” ಅಂದ.
“ಅಂದ್ರೆ, ಸಾಯೋದಕ್ಕೆ ಮುಂಚೆ ಏನಾದ್ರೂ ಒಪ್ಪಂದ ಆಗಿತ್ತಾ?”ಎಂದು ಕೇಳಿದೆ.
“ನಮ್ಮ ತಾತನನ್ನು ಆ ಕಾಲದಲ್ಲಿ ನಾರಾಯಣಪುರದ ನಮ್ಮ ಕಡೆಯವರ ಜಮೀನಿನಲ್ಲಿ ಹೂತಿದ್ದರಂತೆ. ನಮ್ಮಜ್ಜಿ ಯಾವಾಗ್ಲೂ ನನ್ನನ್ನು ಸತ್ತ ಮೇಲೆ ನಿಮ್ಮ ತಾತನ ಪಕ್ಕದಲ್ಲೇ ಹೂಣಬೇಕು ಅನ್ನುತ್ತಿದ್ದರು. ಅವರು ಹಾಗಂದಾಗಲೆಲ್ಲ ನಿಂಗೇನು ಗೊತ್ತಾಗುತ್ತಾ ನಾವು ಎಲ್ಲಿ ಹೂಳ್ತೀವಿ ಅಂತ ರೇಗಿಸ್ತಿದ್ದೆ. ಪ್ರತಿವರ್ಷ ನಮ್ಮ ತಾತನ ತಿಥಿಗೆ ಪೂಜೆಗೆ ಹೋದಾಗಲೆಲ್ಲಾ ನಮಗೆ ಸಾಕು ಸಾಕಾಗುತ್ತಿತ್ತು. ಸಮಾಧಿ ಸುತ್ತಮುತ್ತ ಮುಳ್ಳು ಕಂಪೆಗಳು ಬೆಳೆದು ಅಲ್ಲಿಗೆ ಹೋಗೋದಕ್ಕೇ ಆಗೋದಿಲ್ಲ. ಆಗೆಲ್ಲಾ ನಮ್ಮಜ್ಜಿದು ಊರ ಹತ್ತಿರವೇ ಮಾಡಬೇಕು ಅಂದುಕೊಳ್ಳುತ್ತಿದ್ದೆ. ಆದರೆ ಪದೇ ಪದೇ ಒಂದು ಕನಸು ಬೀಳಲು ಶುರುವಾಗಿ ನನ್ನ ನಿರ್ಧಾರ ಬದಲಿಸಬೇಕಾಯ್ತು.
ಕನಸಿನಲ್ಲಿ ನಮ್ಮಜ್ಜಿ ತೀರಿಕೊಂಡಿದ್ದರು. ಆ ಮುಳ್ಳುಕಂಪೆ ತರಿದು ಗುಣಿ ಒಡೆಯಲು ಯಾರೂ ಮುಂದೆ ಬರದೆ ಕೊನೆಗೆ ನಮ್ಮಪ್ಪ ಬೇಜಾರಾಗಿ ಅಲ್ಲೇ ಕುಂಟೆ ಪಕ್ಕದ ಕಟ್ಟೆ ಮೇಲೆ ಸುಟ್ಟು ಬಿಡೋಣ ಅಂದ್ರು. ಅಜ್ಜಿ ಯಾವಾಗ್ಲೂ ತಾತನ ಪಕ್ಕ ಮಣ್ಣು ಮಾಡು ಅಂತಿದ್ಲಲ್ಲ ಅಂದೆ. ಈ ಮುಳ್ಳುಗಳನ್ನು ತೆಗೆಯಲು ಆಗಲ್ಲ, ಪರವಾಗಿಲ್ಲ ಬಿಡೋ ಅಂದ್ರು ಅಪ್ಪ. ಅಲ್ಲೇ ಸೌದೆ ತರಿಸಿ, ಹೆಣಕ್ಕೆ ಬೆಂಕಿ ಇಟ್ಟು ವಾಪಸಾಗುತ್ತಿದ್ದೆವು. ಹಿಂದೇನೇ ಸತ್ತಿದ್ದ ನಮ್ಮಜ್ಜಿ ಎದ್ದು ಬಂದುಬಿಟ್ಲು. ನಮ್ಮನ್ನು ಚೆನ್ನಾಗಿ ಬಯ್ಯಲು ಶುರುಮಾಡಿದಳು. ನಾನೇಳಿದ್ದೇನು? ನೀವು ಮಾಡ್ತಿರೋದೇನು? ನಿಮಗೆ ಜ್ಞಾನ ಇಲ್ವಾ?.... ಸಹಸ್ರನಾಮ ಪ್ರಾರಂಭಿಸಿದಳು... ಎರಡು ಮೂರು ಬಾರಿ ನಮ್ಮಜ್ಜಿ ಬದುಕಿರುವಾಗಲೇ ಈ ಕನಸು ಬಿದ್ದಿತ್ತು. ಹಾಗಾಗಿ ಅವರು ಸತ್ತ ಮೇಲೆ ಅಲ್ಲೇ ತಾತನ ಪಕ್ಕದಲ್ಲೇ ಮಣ್ಣು ಮಾಡಿದ್ವಿ. ಸರಿ, ಮಧ್ಯಾಹ್ನ ಸಿಗ್ತೀನಿ” ಎನ್ನುತ್ತಾ ಹೊರಟ ವೆಂಕಟರಮಣ.

Sunday, May 16, 2010

ಗಾಣಲಿಂಗೇಶ್ವರನಾಗಿ ರೂಪುಗೊಳ್ಳುತ್ತಿರುವ ಗಾಣದಕಲ್ಲು


ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿರುವ ಗಾಣ.

ಬೃಹತ್ ಉದ್ದಿಮೆಗಳಾಗಿ ಬೆಳೆದು ನಿಂತಿರುವ ಎಣ್ಣೆ ಕಾರ್ಖಾನೆಗಳೊಂದಿಗೆ ಪರಂಪರಾಗತವಾಗಿ ನಡೆದುಕೊಂಡು ಬಂದಂತಹ ಸಂಪ್ರದಾಯಿಕ ಎಣ್ಣೆ ಗಾಣಗಳು ಯಾವ ತರಹದ ಪೈಪೋಟಿಗಳನ್ನು ನಡೆಸಲಸಾಧ್ಯವಾಗಿ, ಅಸಹಾಯಕವಾಗಿ ಇಂದು ಸಂಪೂರ್ಣವಾಗಿ ನೆಲಕಚ್ಚುತ್ತಿವೆ. ಇನ್ನೂ ಅಲ್ಲಲ್ಲಿ ಕೆಲವೆಡೆ ಈ ಎಣ್ಣೆ ಗಾಣಗಳು ಜೀವಂತವಾಗಿದ್ದರೂ ಆಧುನಿಕ ತಂತ್ರಜ್ಞಾನದ ಪರಿಸರದಲ್ಲಿ ಸಂದಿಗ್ಧತೆಯಲ್ಲಿವೆ.
ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಈ ರೀತಿ ಪಳೆಯುಳಿಕೆಯಂತೆ ನಿಂತಿದ್ದ ಗಾಣದ ಕಲ್ಲಿಗೆ ಲಿಂಗವನ್ನು ಪ್ರತಿಷ್ಠಾಪಿಸಿ ಗಾಣಲಿಂಗೇಶ್ವರನನ್ನಾಗಿ ರೂಪಾಂತರಗೊಳಿಸಿದ್ದಾರೆ. ಕಳ್ಳಿಪಾಳ್ಯ ವಿ.ನಾಗರಾಜಪ್ಪ ಇದರ ರೂವಾರಿಯಾಗಿದ್ದು ಅನೇಕ ಕಡೆ ಅವರು ಗಾಣಲಿಂಗೇಶ್ವರನ್ನು ಪ್ರತಿಷ್ಠಾಪಿಸಿರುವರು.
ಗಾಣವೆಂದರೆ, ಒಂದು ವಸ್ತುವನ್ನು ಹಿಂಡಿ, ದ್ರವರೂಪದ ವಸ್ತುವನ್ನು ಪಡೆಯುವಲ್ಲಿ ಉಪಯೋಗಿಸುವ ಸಾಧನ. ಮೂಲತಃ ಕೊಬ್ಬರಿ, ಕಡಲೆ, ಹರಳು, ಹೊನ್ನೆ, ಎಳ್ಳು, ಔಡಲ, ಕುಸುಬಿ ಮುಂತಾದ ಎಣ್ಣೆ ಹಿಂಡುವ ಸಾಧನವಾಗಿದ್ದ ಗಾಣ, ನಂತರದ ದಿನಗಳಲ್ಲಿ ಇದು ಕಬ್ಬನ್ನು ಅರೆಯುವ ಸಾಧನವಾಗಿ ರೂಪುಗೊಂಡು ಆಲೆಮನೆ ಎಂಬ ಹೆಸರು ಪಡೆಯಿತು. ಪ್ರಾಚೀನ ಗುಡಿ, ಮಠ, ಮನೆಗಳ ನಿರ್ಮಾಣ ಕಾರ್ಯದಲ್ಲಿ ಗಚ್ಚನ್ನು ತಯಾರಿಸುವ ಸಾಧನವೂ ಗಾಣದ ಕಲೆಯ ಇನ್ನೊಂದು ರೂಪಾಂತರ.


ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದಲ್ಲಿ ಪಳೆಯುಳಿಕೆಯಂತೆ ನಿಂತಿರುವ ಗಾಣದ ಕಲ್ಲು.

ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಮರದಗಾಣಗಳು ಬಳಸಿದರೆ, ಹಳೇ ಮೈಸೂರು ಕಡೆಯ ಪ್ರದೇಶಗಳಲ್ಲಿ ಕಲ್ಲಿನ ಗಾಣಗಳು ಹೆಚ್ಚಾಗಿ ರೂಢಿಯಲ್ಲಿದೆ.
ಎಣ್ಣೆ ಗಾಣಗಳ ರಚನಾತ್ಮಕತೆ ದೃಷ್ಟಿಯಿಂದ ಮೂರು ಪ್ರಕಾರದ್ದಾಗಿ ಗುರುತಿಸಬಹುದು. ಜೋಡೆತ್ತುಗಳ ಅಥವಾ ಕೋಣಗಳ ಸಹಾಯದಿಂದ ನಡೆಸುವ ಕಲ್ಲಿನ ಗಾಣ, ಮನುಷ್ಯರೇ ಶ್ರಮವಹಿಸಿ ತಿರುಗಿಸಿ ಎಣ್ಣೆಯನ್ನು ಉತ್ಪಾದಿಸಬಹುದಾದ ಮರದ ಗಾಣ ಮತ್ತು ಕೇವಲ ಒಂಟಿ ಎತ್ತನ್ನು ಬಳಸಿಕೊಂಡು ಎಣ್ಣೆಯನ್ನು ಉತ್ಪಾದಿಸುವಂತಹ ಒಂಟೆತ್ತಿನ ಗಾಣ.
ಗಾಣದ ವಿನ್ಯಾಸವು ಮೊದಲು ಸುಮಾರು ೯ ರಿಂದ ೧೦ ಅಡಿ ವ್ಯಾಸದ ಚಪ್ಪಟೆಯಾದ ಗಟ್ಟಿ ನೆಲ ನಿರ್ಮಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಇಲಿ ತೈಲ ಬೀಜಗಳನ್ನು ಹಾಕಲು ದೊಡ್ಡ ಒರಳನ್ನು ಇಡಲಾಗುತ್ತದೆ. ಅದಕ್ಕೆ ಗಾಣದ ಮರವನ್ನು ಕಟ್ಟುತ್ತಾರೆ. ಕಬ್ಬಿಣದ ಬಳೆಯ ಅಂಚನ್ನುಳ್ಳ ಮರದ ಒನಕೆಯನ್ನು ಗಾಣದ ಒರಳಿನ ಸೂಕ್ತವಾದ ಆಯಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿರುತ್ತಾರೆ. ಗಾಣದ ಮರ ಹಾಗೂ ಒರಳಿನ ಕೆಳಭಾಗಕ್ಕೂ ಹೊಂದಿಕೊಂಡಿರುವಂತೆ ಕತ್ತರಿ ಹಲಗೆಯೊಂದನ್ನು ನಿರ್ಮಿಸಿ ಆ ಹಲಗೆಯ ಮೇಲೆ ಭಾರವಾದ ಕಲ್ಲುಗಳನ್ನು ಹೇರಿರುತ್ತಾರೆ. ಕತ್ತರಿ ಹಲಗೆಯು ತನ್ನೊಂದು ಹಗ್ಗದಿಂದ ಗಾಣದ ಮಧ್ಯಭಾಗವನ್ನು ಆವರಿಸಿಕೊಂಡು ಭದ್ರವಾಗಿರುತ್ತದೆ. ನಂತರ ಒನಕೆಗೆ ಹೊಂದಿಕೊಂಡು ಆಸರೆಯಾಗಿರುವಂತೆಯೂ ಬೀಜಗಳನ್ನು ಅರೆಯುವ ಪ್ರಧಾನ ಕ್ರಿಯೆಯು ಸುಸೂತ್ರವಾಗುವಂತೆ ಮಲ್ಲಗಂಬವೊಂದನ್ನು ಸ್ವಲ್ಪ ಓರೆಯಾಗಿ ನಿಲ್ಲಿಸಲಾಗುತ್ತದೆ. ಹೀಗೆ ಸ್ಥಾನ ಗ್ರಹಣ ಮಾಡಿದ ಈ ಮಲ್ಲಗಂಬವು ಮಧ್ಯದಲ್ಲಿ ಬಲವಾದ ಹಗ್ಗದ ಜೋಡಣೆಯನ್ನು ಹೊಂದಿರುತ್ತದೆ. ಈ ಎಲ್ಲಾ ಸಿದ್ಧತೆಗಳನ್ನು ಒಳಗೊಂಡು ರಚನೆಯಾದ ಎಣ್ಣೆಗಾಣದ ಕ್ರಿಯೆಯಿಂದ ಕೊಬ್ಬರಿ, ಔಡಲ, ಶೇಂಗಾ ಮುಂತಾದ ತೈಲ ಬೀಜಗಳ ಎಣ್ಣೆ ಉತ್ಪಾದನೆಯಾಗುತ್ತದೆ. ಇಂಥಾ ಪ್ರತಿಭಾಪೂರ್ಣವಾದ ಗಾಣದ ಕರಕುಶಲ ಕಲೆಯು ಬಡಿಗನ ಕುಶಾಗ್ರಮತಿಯನ್ನು ಪ್ರತಿನಿಧಿಸುತ್ತದೆ. ನೋಡಲು ಲಿಂಗದ ಆಕಾರದ ಈ ಗಾಣ ತುಂಬಾ ಕಲಾತ್ಮಕತೆಯಿಂದ ಕೂಡಿದುದಾಗಿರುತ್ತದೆ.


ವರದನಾಯಕನಹಳ್ಳಿಯಲ್ಲಿ ಗಾಣಲಿಂಗೇಶ್ವರನಾಗಿ ರೂಪುಗೊಂಡಿರುವ ಗಾಣದಕಲ್ಲು.

“ಎಳ್ಳಿಲ್ಲದ ಗಾಣವನ್ನಾಡಿದ ಎತ್ತಿನಂತಾಯಿತೆನ್ನ ಭಕ್ತಿ” ಎಂದು ಬಸವಣ್ಣನವರು ಹೇಳಿದ್ದಾರೆ. ಆದರೀಗ ಗಾಣವೇ ಇಲ್ಲ. ಗಾಣವು ಪರಿವರ್ತನೆಗೊಂಡು ಗಾಣಲಿಂಗೇಶ್ವರನಾಗಿರುವುದು, ಹಳೆಯ ಕುಶಲಕಲೆಗಳು, ವೃತ್ತಿಗಳು, ಕಲಾಪ್ರಕಾರಗಳು ಪಡೆದುಕೊಳ್ಳುತ್ತಿರುವ ರೂಪಾಂತರದ ಪ್ರತಿರೂಪವಾಗಿ ಕಾಣಿಸುತ್ತದೆ.

Monday, April 26, 2010

ನೆರಳು ಗೊಂಬೆಯಾಟದ ಮೂಲಕ ಪಾಠ



ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲಿಕೆಯನ್ನು ಆಕರ್ಷಣೀಯವಾಗಿಸಲು ನೆರಳುಗೊಂಬೆಯಾಟವನ್ನು ಬಳಸುತ್ತಾರೆ. ವಿಶೇಷವೆಂದರೆ ಇಲ್ಲಿ ಮಕ್ಕಳೇ ಪಾತ್ರಗಳನ್ನು ನಿರ್ದೇಶಿಸುವುದು ಮತ್ತು ಸಂಭಾಷಣೆ ಹೇಳುವುದು ಹಾಗೂ ಪ್ರೇಕ್ಷಕರೂ ಅವರೇ. ಶಿಕ್ಷಕರೇನಿದ್ದರೂ ಅಲ್ಲಲ್ಲಿ ಸಲಹೆ ನೀಡುವುದಷ್ಟೇ.
ಇದಕ್ಕೆ ಬಳಸುವ ಪರಿಕರಗಳೂ ಸರಳವಾಗಿವೆ. ತೆಳುವಾದ ಬಟ್ಟೆಯನ್ನು ಕಟ್ಟುತ್ತಾರೆ. ಕೋಣೆಯನ್ನು ಕತ್ತಲು ಮಾಡಿ ಕಿಟಕಿ ಬೆಳಕನ್ನು ಮಾತ್ರ ಬಳಸುತ್ತಾರೆ. ಗೊಂಬೆಗಳನ್ನು ಮಕ್ಕಳೇ ರಟ್ಟನ್ನು ಕತ್ತರಿಸಿ ತಯಾರಿಸುತ್ತಾರೆ. ಅದಕ್ಕೆ ಕಡ್ಡಿಗಳನ್ನು ಅಂಟಿಸಿರುತ್ತಾರೆ. ಪಾತ್ರಗಳ ಸಂಭಾಷಣೆಯನ್ನು ಮೌಕಿಕವಾಗಿ ವ್ಯಕ್ತಪಡಿಸುತ್ತಾ ಅದಕ್ಕೆ ತಕ್ಕಂತಹ ಅಭಿನಯವನ್ನು ಗೊಂಬೆಗಳ ಮೂಲಕ ತೋರಿಸುವ ವಿದ್ಯಾರ್ಥಿಗಳ ಕ್ರಿಯಾಶೀಲತೆ ಬೆರಗುಹುಟ್ಟಿಸುತ್ತದೆ.
ಪ್ರಾಣಿ ಪಕ್ಷಿಗಳ ಕಥೆಗಳು, ಪಂಚತಂತ್ರದ ಕಥೆಗಳು, ಜಾನಪದ ಕಥೆಗಳು, ಐದನೇ ತರಗತಿಯಲ್ಲಿ ಪಠ್ಯದಲ್ಲಿ ಬರುವ ಶಬರಿ ಮತ್ತು ರಾಮ ಲಕ್ಷ್ಮಣ ಪಾಠ, ಆರನೇ ತರಗತಿಯ ಇಂಗ್ಲೀಷ್‌ನ ಮೌಸ್ ಅಂಡ್ ದಿ ಲಯನ್ ಪಾಠ ಎಲವನ್ನೂ ಮಕ್ಕಳು ಪಾತ್ರಗಳಾಗಿ ಗೊಂಬೆಗಳ ಮೂಲಕ ನೆರಳು ಮೂಡಿಸಿ ನಲಿಯುತ್ತಾರೆ.



ನಲಿಕಲಿ ತರಭೇತಿಯಲ್ಲಿ ಮಕ್ಕಳನ್ನು ರಂಜಿಸುತ್ತಾ ಪಾಠ ಹೇಳಲು ನಾನಾ ವಿಧಗಳಿವೆ. ಒತ್ತು ಚಿತ್ರಗಳು, ಊದು ಚಿತ್ರಗಳು, ಮಾರ್ಬಲ್ ಪೇಂಟಿಂಗ್, ಜೋಡಣೆ ಚಿತ್ರಗಳು ಇತ್ಯಾದಿ. ಇವೆಲ್ಲವನ್ನೂ ಬಳಸಿದರೂ ನಮ್ಮ ಶಾಲೆಯ ಮಕ್ಕಳಿಗೆ ಅಚ್ಚುಮೆಚ್ಚಿನದು ಈ ನೆರಳು ಗೊಂಬೆಯಾಟ. ಪರಿಣಾಮಕಾರಿ ಬೋಧನೆಗೆ ಇದು ಸಹಕಾರಿಯಾಗಿದೆ ಎನ್ನುತ್ತಾರೆ ಶಿಕ್ಷಕ ವೆಂಕಟರೆಡ್ಡಿ.
ನೆರಳು ಗೊಂಬೆಯಾಟವನ್ನು ತೊಗಲು ಗೊಂಬೆಯಾಟವೆಂದೂ ಕರೆಯುವರು. ಈ ಕಲೆ ಅತಿ ಪ್ರಾಚೀನವಾದುದು. ಚೀನಾ ಮತ್ತು ಜಪಾನಿನ ಪ್ರಾಚೀನ ಸಾಹಿತ್ಯದಲ್ಲಿ ಇದರ ಪ್ರಸ್ತಾಪ ಬರುತ್ತದೆ. ಕ್ರಿ.ಪೂ. ಮೂರನೆಯ ಶತಮಾನದಲ್ಲಿಯೇ ತೊಗಲು ಗೊಂಬೆಯಾಟವು ಆಂಧ್ರದಲ್ಲಿ ಪ್ರಚಾರದಲ್ಲಿದ್ದುದಕ್ಕೆ ಆಧಾರಗಳಿವೆ. ಈ ಕಲೆ ಶಾತವಾಹನ, ಪಲ್ಲವ, ಚಾಳುಕ್ಯ, ಕಾಕತೀಯ ರಾಜರ ಕಾಲದಲ್ಲಲ್ಲದೆ ವಿಜಯನಗರ, ತಂಜಾವೂರು ರಾಜರುಗಳ ಕಾಲದಲ್ಲಿ ಅತ್ಯಂತ ಉನ್ನತಸ್ಥಿತಿಯನ್ನು ಪಡೆದು ಪ್ರಾಚೀನ ರೇವುಪಟ್ಟಣಗಳಾದ ಕಳಿಂಗಪಟ್ಟಣ, ಜೀಮಾನೀಪಟ್ಟಣ, ಕೋರಂಗಿ, ವಾಡ್ರೇವು ಇವುಗಳ ಮೂಲಕ ವಿದೇಶಗಳಿಗೆ ತೆರಳಿದ ಭಾರತೀಯರೊಡನೆ ಆಗ್ನೇಯ ಏಷ್ಯಾವನ್ನು ಪ್ರವೇಶಿಸಿದವು ಎಂಬ ಅಭಿಪ್ರಾಯವಿದೆ. ಅಲಿಂದ ಈ ಕಲೆ ಪಶ್ಚಿಮಾಭಿಮುಖವಾಗಿ ಪರ್ಶಿಯಾ, ಟರ್ಕಿ ದೇಶಗಳನ್ನು ಹಾಯ್ದು ಗ್ರೀಸ್ ದೇಶವನ್ನು ಪ್ರವೇಶಿಸಿತು. ಗ್ರೀಸಿನಲ್ಲೇ ಹೊಸ ರೂಪತಳೆದು ಉತ್ತರ ಆಫ್ರಿಕಾದಲ್ಲಿ ಮುಸ್ಲಿಂ ದೇಶಗಳಿಗೆ, ಇಟಲಿಗೆ ಮತ್ತು ಅಲ್ಲಿಂದ ಮುಂದೆ ಫ್ರಾನ್ಸ್‌ಗೆ ಕೂಡ ಹರಡಿತು.



ವಿದ್ಯಾರ್ಥಿಗಳು ನೆರಳುಗೊಂಬೆಯಾಟದ ಮೂಲಕ ಇಲಿ ಮತ್ತು ಸಿಂಹದ ಕಥೆಯನ್ನು ನಿರೂಪಿಸುತ್ತಿರುವುದು.



ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇಂತಹ ಮನರಂಜನೆಯನ್ನು ಸುಗ್ಗಿಯ ಕಾಲದಲ್ಲಿ, ದುಡಿಮೆಯ ನಂತರ ಫಸಲನ್ನು ಮನೆಯಲ್ಲಿ ತುಂಬಿಕೊಂಡ ಮೇಲೆ ಏರ್ಪಡಿಸುವರು. ಇದಕ್ಕೆ ಸಂಭಾವನೆಯಾಗಿ ಕಲಾವಿದರಿಗೆ ಊರಿನವರು ದವಸ ಧಾನ್ಯಗಳನ್ನು ಸಂಗ್ರಹಿಸಿ ಕೊಡುತ್ತಾರೆ. ರಾಮಾಯಣ, ಮಹಾಭಾರತ, ಭಾಗವತ, ಪುರಾಣ ಹಾಗೂ ಜನಪದ ಕಥೆಗಳಿಂದ ಆಯ್ದ ಭಾಗಗಳನ್ನು ಈ ತೊಗಲು ಗೊಂಬೆಯಾಟದಲ್ಲಿ ಸಾಹಿತ್ಯವಾಗಿ ಬಳಸುವರು. ಇವರು ಬಳಸುವ ವಾದ್ಯ ವಿಶೇಷಗಳು ಮತ್ತು ಹಿಮ್ಮೇಳ ಈ ಕಲೆಯ ಮತ್ತೊಂದು ವೈಶಿಷ್ಟ್ಯ.
ಇಂತಹ ತೆರೆಮರೆಗೆ ಸರಿಯುತ್ತಿರುವ ಜನಪದ ಕಲೆಯನ್ನು ಶಾಲೆಯಲ್ಲಿ ಕಲಿಕೆಯ ಸಾಧನವಾಗಿ ಬಳಸಿರುವುದು ವಿಶೇಷ. ಈ ಕಲೆ ಮಕ್ಕಳನ್ನು ಕಲಿಕೆಯತ್ತ ಸೆಳೆಯುವುದಲ್ಲದೆ ಅವರೇ ಪಾಲ್ಗೊಂಡು ಅನುಭವಿಸಿ ಅಭಿನಯಿಸಲು ಪ್ರೇರೇಪಿಸುತ್ತದೆ. ಇಲಿ ಮಕ್ಕಳೇ ಹೊಸ ಹೊಸ ಕಥೆಗಳನ್ನು ನಿರೂಪಿಸುವುದರಿಂದ ಅವರ ಕ್ರಿಯಾಶೀಲತೆ ಅರಳುತ್ತದೆ.




ವರದನಾಯಕನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಒಡೆದ ಬಳೆಚೂರು, ಒಣ ಎಲೆ ಹೂವು ಮತ್ತು ಮಾರ್ಬಲ್ ಪೇಂಟಿಂಗ್ ಬಳಸಿ ಹಳೆ ಆಹ್ವಾನಪತ್ರಿಕೆಗಳಲ್ಲಿ ಗ್ರೀಟಿಂಗ್ ಕಾರ್ಡ್ ತಯಾರಿಸಿ ತಮ್ಮಲ್ಲೇ ಹಂಚಿಕೊಳ್ಳುತ್ತಾರೆ.

Wednesday, April 14, 2010

ಕೋಲೆ ಬಸವನಾಟ


ಕೋಲೆ ಬಸವನಾಟದಲ್ಲಿ ಎರಡು ಕಾಲಿನಲ್ಲಿ ನಿಂತ ಬಸವ.


ಇತ್ತೀಚೆಗೆ ನಮ್ಮೂರ ಬಳಿಯ ವರದನಾಯಕನಹಳ್ಳಿ ಗ್ರಾಮದಲ್ಲಿ ಕೋಲೆ ಬಸವನಾಟ ನಡೆಯಿತು. ಆಂಧ್ರಪ್ರದೇಶದ ನಲ್ಲೂರಿನ ಕಡೆಯಿಂದ ಬಂದಿರುವ ರಂಗಪ್ಪ ತನ್ನ ಬಸವ, ಹಸು, ಹೆಂಡತಿ ಮಕ್ಕಳೊಂದಿಗೆ ಈ ಆಟ ಆಡಿಸುತ್ತಾ ಬಂದಿದ್ದರು.
ಪ್ರಾಣಿಗಳಿಗೆ ಕಲಾಭ್ಯಾಸ ಮಾಡಿಸಿ ಪ್ರದರ್ಶನ ಮಾಡುವ ಕಲೆಗಳಲ್ಲಿ “ಕೋಲೆ ಬಸವನಾಟ” ಪ್ರಮುಖವಾದುದು. ಈ ಆಟ ಆಡಿಸುವವರನ್ನು ಕೆಲವು ಕಡೆ ಗಂಗೆತ್ತಿನವರು ಅಥವಾ ಕವಲೆತ್ತಿನವರು ಎಂದು ಕರೆಯುತ್ತಾರೆ. ಮಕ್ಕಳ ಪರಿಭಾಷೆಯಲ್ಲಿ ಬುರ್ ಬುರ್ ಬಸವಣ್ಣ ಎಂದೂ ಹೇಳುವುದುಂಟು. ಪ್ರೇಕ್ಷಕರ ಮನಸ್ಸನ್ನು ಮಂತ್ರಮುಗ್ಧವನ್ನಾಗಿ ಮಾಡುವ ಈ ಕಲೆಯಲ್ಲಿ ಮಾತು ಬಾರದ ಪ್ರಾಣಿ ಮಾನವನ ಮಾತನ್ನು ಅರ್ಥಮಾಡಿಕೊಂಡು ಅದ್ಭುತ ಪ್ರದರ್ಶನ ನೀಡುತ್ತದೆ. ಬುದ್ಧಿ ಸೂಕ್ಷ್ಮತೆ ಮಾನವನಿಗಷ್ಟೇ ಮೀಸಲಲ್ಲ ಎಂಬುದನ್ನು ತೋರಿಸಿಕೊಡುತ್ತದೆ. ‘ಕೋಲೆ ಬಸವ ಆಡಿಸಿದಂತೆ ತಲೆ ಆಡಿಸ್ತೀಯ’ ಎಂಬ ಬಳಕೆಯ ಮಾತು ಈ ಕಲೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಬಸವನನ್ನಾಡಿಸುವ ಕಲಾವಿದರು ಅರೆ ಅಲೆಮಾರಿಗಳು. ಸಾಮಾನ್ಯವಾಗಿ ಹಳ್ಳಿಯಿಂದ ಹಳ್ಳಿಗೆ ತಿರುಗುವ ಇವರು ಈ ಆಟವನ್ನು ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಇವರ ಮೂಲ ಉದ್ಯೋಗ ವ್ಯವಸಾಯ. ಮಳೆಗಾಲದಲ್ಲಿ ಮೈಬಗ್ಗಿಸಿ ಬೆವರು ಸುರಿಸಿ ದುಡಿದರೂ ಬೇಸಿಗೆಯಲ್ಲಿ ಸುಮ್ಮನೆ ಕುಳಿತಿರುವುದಿಲ್ಲ, ಕೋಲೆ ಬಸವನನ್ನು ಹಿಡಿದುಕೊಂಡು ಹೊರಡುತ್ತಾರೆ.



ಮಗುವಿನ ಮೇಲೆ ಪಾದಸ್ಪರ್ಶ ಮಾಡುತ್ತಿರುವ ಬಸವ.

ಈ ಕಲೆಯು ಆಂಧ್ರಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ಕೋಲೆ ಬಸವನಾಟದ ಕಲೆ ಗೊಲ್ಲರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಇವರನ್ನು ಪೆದ್ದಟ್ಟಿ ಗೊಲ್ಲರು ಎಂದು ಕರೆಯುತ್ತಾರೆ. ಗೊಲ್ಲರಲ್ಲಿ ತಮ್ಮ ಆರಾಧ್ಯ ದೈವವಾದ ಜುಂಜಪ್ಪನೇ ಬಸವನ ರೂಪವನ್ನು ತಾಳಿದ್ದಾನೆ ಎಂಬ ನಂಬಿಕೆಯಿದೆ.
ಈ ಕಲೆಯ ಪ್ರದರ್ಶನಕ್ಕೆ ಸಾಕಷ್ಟು ಪೂರ್ವಭಾವಿ ಸಿದ್ಧತೆ ಮತ್ತು ಪೂರ್ವಾಭ್ಯಾಸ ಬೇಕಾಗುತ್ತದೆ. ಒಂದು ಬಸವನನ್ನು ಪ್ರದರ್ಶನಕ್ಕೆ ಸಿದ್ಧ ಮಾಡಲು ಅನೇಕ ತಿಂಗಳುಗಳ ನಿರಂತರ ಪರಿಶ್ರಮದ ಅಗತ್ಯವಿದೆ. ಎತ್ತುಗಳನ್ನು ಯಾರಾದರೂ ದಾನ ಮಾಡುತ್ತಾರೆ ಇಲ್ಲವೆ ಉತ್ತಮ ರಾಸುಗಳನ್ನು ನೋಡಿ ಇವರೇ ಆಯ್ಕೆ ಮಾಡಿಕೊಳ್ಳುವರು. ಈ ಪ್ರದರ್ಶನವನ್ನು ಒಂದರ್ಥದಲ್ಲಿ ಬೀದಿಯ ನಾಟಕವೆಂದೇ ಹೇಳಬೇಕು. ನಾಟಕದಲ್ಲಿ ವ್ಯಕ್ತಿಗಳು ಪಾತ್ರವಹಿಸಿದರೆ, ಇಲ್ಲಿ ವ್ಯಕ್ತಿಗಳ ಜೊತೆಗೆ ಪ್ರಾಣಿಗಳೂ ಪಾತ್ರವಹಿಸುತ್ತವೆ. ಕಥೆಯನ್ನು ತಮ್ಮದೇ ಆದ ಶೈಲಿಯಲ್ಲಿ ಅಳವಡಿಸಿಕೊಳ್ಳುವ ಕಲಾವಿದರು ತುಂಬಾ ಪ್ರಭಾವಯುತವಾಗಿ ಅದನ್ನು ನಿರೂಪಿಸುತ್ತಾರೆ.
ಒಂದು ಬಸವ ರಾಮನಾದರೆ, ಒಂದು ಹಸು ಸೀತೆಯಾಗುತ್ತದೆ. ರಾಮನ ಒಡೆಯನೊಬ್ಬನಾದರೆ ಸೀತೆಯ ತಂದೆಯಾಗಿ ಒಬ್ಬ ಪಾತ್ರವಹಿಸುತ್ತಾರೆ. ಬಸವನ ಕೊಂಬುಗಳಿಗೆ ಬಣ್ಣಬಣ್ಣದ ಬಟ್ಟೆ ಸುತ್ತಿ ಅವು ಲಕ್ಷಣವಾಗಿ ಎತ್ತರವಾಗಿ ಕಾಣಿಸುವಂತೆ ಮಾಡಿ ಮೇಲೆ ಕುಚ್ಚನ್ನು ಕಟ್ಟಿರುತ್ತಾರೆ. ಹಣೆಯ ಮೇಲೆ ಆಂಜನೇಯನ ಮುದ್ರೆಯಿರುವ ಹಿತ್ತಾಳೆ ತಗಡಿನ ಅಲಂಕಾರವಿರುತ್ತದೆ. ಬಸವನ ಭುಜ(ಮುಡ)ವನ್ನು ಕರಡಿ ಚರ್ಮದಿಂದ ಗೋಪುರದಂತೆ ಹೊದಿಸಿ ಶೃಂಗರಿಸಿರುತ್ತಾರೆ. ಬೆನ್ನ ಮೇಲೆ ಬಣ್ಣಬಣ್ಣದ ಬಟ್ಟೆಗಳು, ಕಾಲುಗಳಿಗೆ ಗೆಜ್ಜೆ, ಕೊರಳಿಗೆ ಗಂಟೆ ಮತ್ತು ಮಣಿಯ ಸರಗಳಿಂದ ಅಲಂಕಾರ ಮಾಡಿರುತ್ತಾರೆ. ಸೀತೆಯ ಹಣೆಗೆ ಕುಂಕುಮ ಇಟ್ಟು ಬೆನ್ನಿನ ಮೇಲೆ ನಾಲ್ಕಾರು ಬಣ್ಣಬಣ್ಣದ ಸೀರೆಗಳನ್ನು ಹೊದಿಸಿರುತ್ತಾರೆ. ಈ ಬಟ್ಟೆಬರೆಗಳು ಸಾಮಾನ್ಯವಾಗಿ ಪ್ರದರ್ಶನದಲ್ಲಿ ಪ್ರೇಕ್ಷಕರು ಕೊಟ್ಟ ಕೊಡುಗೆಗಳು.



ಸೀತಾರಾಮರ ಮದುವೆಯ ಸನ್ನಿವೇಶದಲ್ಲಿ ರಾಮನ ಸುತ್ತ ಪ್ರದಕ್ಷಿಣೆ ಬರುತ್ತಿರುವ ಸೀತೆ.

ಕೋಲೆ ಬಸವನಾಟಕ್ಕೆ ಡೋಲು, ನಾಗಸ್ವರ, ಮುಖವೀಣೆ ವಾದ್ಯಗಳನ್ನು ಬಳಸುತ್ತಾರೆ. ಕೆಲವು ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ನಾಗಸ್ವರದಲ್ಲಿ ನುಡಿಸುತ್ತಾರೆ. ವಾದ್ಯಗಳ ನಾದಕ್ಕೆ ಅನುಗುಣವಾಗಿ ಗಂಭೀರ ಗತ್ತಿನಲ್ಲಿ ನಡೆಯುವ ಬಸವನ ಅಭಿನಯ ನೋಡಲು ಮನಮೋಹಕವಾಗಿರುತ್ತದೆ. ಕುಣಿಯುವ ಬಸವನ ಕಾಲಿಗೆ ಕಟ್ಟಿರುವ ಗೆಜ್ಜೆಗಳು ಘಲ್ ಘಲ್ ಎಂದು ಸದ್ದು ಮಾಡುವುದು ಪ್ರದರ್ಶನಕ್ಕೇ ಸೊಗಸು. ಹಳ್ಳಿಗಳಲ್ಲಿ ಬಸವನನ್ನಾಡಿಸುವವರು ಬಂದಿದ್ದಾರೆ ಎಂದರೆ ಮಕ್ಕಳು ಸುತ್ತಲೂ ಸೇರಿಕೊಂಡು ಸಿಳ್ಳು, ಕೇಕೆ ಹಾಕುತ್ತಾ ಕುಣಿಯುತ್ತಾರೆ.
ಕೋಲೆ ಬಸವನ ಆಟದಲ್ಲಿ ಸೀತಾರಾಮರ ಮದುವೆಯ ಸನ್ನಿವೇಶವಂತೂ ಪ್ರೇಕ್ಷಕರನ್ನು ಬೆರಗುಗೊಳಿಸುವಂತಹುದು. ವಿವಾಹಕ್ಕೆ ಮೊದಲು ಸೀತೆ ಒಂದು ಕಡೆ ರಾಮ ಒಂದು ಕಡೆ ನಿಂತಿರುತ್ತಾರೆ. ಆಗ ಸೀತೆಯ ತಂದೆ “ನೋಡು ಸೀತಮ್ಮ, ರಾಮದೇವರು ನಿನ್ನ ಮದುವೆ ಆಗಬೇಕೂಂತ ಕೇಳ್ತಾರೆ. ನಿನ್ನ ರೂಪಕ್ಕೆ ಅವರು ಸೋತಿದ್ದಾರೆ. ಮದುವೆಯಾಗ್ತೀಯೇನಮ್ಮಾ? ಅವರು ನೋಡೋಕೆ ಮನ್ಮಥನ ಥರಾ ಇದಾರೆ” ಎಂದು ಕೇಳಿದಾಗ “ಇಲ್ಲ” ಎಂದು ತಲೆಯಲ್ಲಾಡಿಸಿ ಸೀತಮ್ಮ ತನ್ನ ಅಸಮ್ಮತಿಯನ್ನು ಸೂಚಿಸುತ್ತದೆ. ಆಗ ಒಡವೆಯ ಬಗ್ಗೆ, ಸೀರೆಯ ಬಗ್ಗೆ ಆಸೆ ತೋರಿಸುತ್ತಾರೆ. ಆಗ ಸೀತೆ ಆಗಲೆಂಬಂತೆ ತಲೆ ಹಾಕುತ್ತದೆ. ನಡುವೆ ಸಂಧಾನ ಮಾಡುವ ಹಾಸ್ಯದ ಮಾತುಗಳನ್ನಾಡುವ ಕಲಾವಿದರಿಂದ ಆಟಕ್ಕೆ ರಂಗೇರುತ್ತದೆ. ರಾಮನನ್ನು ಪರಿಚಯ ಮಾಡಿಕೊಟ್ಟು ಧಾರೆಯೆರೆಯಲು ಗಂಡಿನ ಕಡೆಯವರನ್ನು ಕರೆಯುತ್ತಾರೆ. ಸೀತೆ ಸಹಜ ನಾಚಿಕೆಯಿಂದ ತಲೆತಗ್ಗಿಸಿಕೊಂಡು ಮೆಲ್ಲನೆ ಬಂದು ರಾಮನ ಪಕ್ಕದಲ್ಲಿ ನಿಲ್ಲುತ್ತದೆ. ಆಗ ಮಂಗಳವಾದ್ಯಗಳು ಮೊಳಗುತ್ತವೆ. ಧಾರೆಯೆರೆದ ಮೇಲೆ ರಾಮನ ಸುತ್ತ ಸೀತೆ ಮೂರು ಸುತ್ತು ಸುತ್ತುವುದು, ಸಪ್ತಪದಿ ನಡೆಯುವುದು ನಿಜಕ್ಕೂ ಹೃದಯಸ್ಪರ್ಶಿ.
ಮೊದಲು ಸಂಜೆವೇಳೆಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ಈಗ ಟಿ.ವಿ. ಸಂಸ್ಕೃತಿಯಿಂದಾಗಿ ಸಂಜೆ ಜನ ಸೇರುವುದು ಕಡಿಮೆ. ಈ ವೃತ್ತಿಯನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ. ಬಿಟ್ಟರೆ ಮನೆಯಲ್ಲಿ ಏನಾದರೂ ತೊಂದರೆಯಾಗುವುದು. ಆದರಿಂದ ಎಷ್ಟೇ ಶ್ರೀಮಂತರಾದರೂ ವರ್ಷಕ್ಕೆ ಒಂದು ದಿನವಾದರೂ ಬಸವನ ಭಜನೆ ಮಾಡಿಸಲೇಬೇಕೆಂಬುದು ನಮ್ಮ ತಾತನ ಕಾಲದಿಂದಲೂ ಕಂಡುಕೊಂಡ ಸತ್ಯ. ನಮಗೆ ಬಸವನೇ ದೇವರು. ಆತನ ಸೇವೆಯಿಂದಲೇ ನಮ್ಮ ಜೀವನ ಎನ್ನುತ್ತಾರೆ ರಂಗಪ್ಪ.



ಸೀತಾರಾಮರ ಮದುವೆಯ ಸನ್ನಿವೇಶ.

ಈ ಕಲಾವಿದರು ಬಸವನೊಂದಿಗೆ ಮನೆಮನೆಗೂ ಹೋಗುತ್ತಾರೆ. ಮನೆ ಹೆಣ್ಣು ಮಕ್ಕಳು ಸೀತಾ ರಾಮರಿಗೆ ಕುಂಕುಮವಿಟ್ಟು, ಗಂಧದಕಡ್ಡಿ ಹಚ್ಚಿ ಬೆಳಗಿ ಹುರುಳಿ ಹಿಟ್ಟು ಅಥವಾ ರಾಗಿ ಹಿಟ್ಟು ಕಲಸಿ ಕೊಡುತ್ತಾರೆ. ಕಲಾವಿದರಿಗೆ ಶಕ್ತ್ಯಾನುಸಾರ ರಾಗಿ, ಜೋಳ, ಅಕ್ಕಿಯನ್ನು ಕೊಟ್ಟು ಕಳುಹಿಸುತ್ತಾರೆ. ಮನರಂಜನೆಯ ದೃಷ್ಟಿಯಿಂದ ಕೋಲೆ ಬಸವನ ಆಟ ಎಲ್ಲರಿಗೂ ಅಚ್ಚುಮೆಚ್ಚು. ಬಸವ, ಹಸುಗಳೊಡನೆ ಅವಿನಾಭಾವ ಸಂಬಂಧ ಬೆಸಿಕೊಂಡಿರುವ ರೈತರಿಗೆ ಇದು ಭಕ್ತಿ, ಮನರಂಜನೆ ಹಾಗೂ ನೀತಿ ಬೋಧಿಸುವ ಮಾಧ್ಯಮವಾಗಿದೆ. ಕೌಲೆತ್ತಿನವರ ತೆಲುಗು ಕನ್ನಡ ಮಿಶ್ರ ಭಾಷೆ ವಿಚಿತ್ರವೆನಿಸಿದರೂ ಭಾವಪೂರ್ಣತೆಯಿಂದಿದ್ದು ಎಲ್ಲರ ಮನಮುಟ್ಟುತ್ತದೆ. ರಾಮ ಸೀತೆಯರ ಮದುವೆ ಹಳ್ಳಿಯ ಮದುವೆಯ ಸಮಗ್ರ ಸಂಕೇತವಾಗಿರುತ್ತದೆ.

Saturday, April 3, 2010

ತೊಗಲು ಗೊಂಬೆಯಾಟ




ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಪಲ್ಲಿಯಿಂದ ಬಂದಿರುವ ಶಿಂದೆ ರಾಮಮೂರ್ತಿ(೯೯೮೦೯೮೦೩೮೩) ತನ್ನ ಟಿಲ್ಲರಿನಲ್ಲಿ ತೊಗಲು ಗೊಂಬೆಯಾಟದ ಪರಿಕರಗಳನ್ನು ಹೊತ್ತು ತಂದು ವರದನಾಯಕನಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾನೆ. ಮಳೆಗಾಲ ಬಿಟ್ಟರೆ ವರ್ಷ ಪೂರ ಅಲೆಮಾರಿಯಾಗಿ ಈತ ಸುತ್ತುತ್ತಿರುತ್ತಾನೆ. ಸರ್ಕಾರದ ಕರಕುಶಲಕಲೆಯ ಮುಖ್ಯ ಕಚೇರಿಯಿಂದ ಈತನಿಗೆ ಗುರಿತಿನ ಪತ್ರ ನೀಡಿದ್ದಾರೆ. ತೆಲುಗು ಭಾಷೆಯಲ್ಲಿ ರಾಮಾಯಣದಲ್ಲಿ ಬರುವ ಸುಂದರ ಖಾಂಡ, ಮೈರಾವಣ ಚರಿತ್ರೆ, ಸತಿ ಸುಲೋಚನಾ, ಲಕ್ಷ್ಮಣ ಮೂರ್ಚೆ ಪ್ರಸಂಗ ಇತ್ಯಾದಿ ಕಥೆಗಳನ್ನು ಆಡಿಸುವರು.

ತಬಲಾ, ಹಾರ್ಮೋನಿಯಂ, ಮೈಕ್ ಮತ್ತು ಆರು ಜನ ಸದಸ್ಯರುಗಳ ತಂಡ ಈ ಪ್ರದರ್ಶನ ನೀಡುವರು. ಪ್ರತಿ ಪ್ರದರ್ಶನಕ್ಕೆ ೪೦೦೦ ರೂ ಪಡೆಯುವ ಇವರು ಬರಿಯ ಆಟದಿಂದ ಬದುಕು ಸಾಗುವುದು ಕಷ್ಟವೆಂದು ಈಗೀಗ ಚಿಕ್ಕ ಆಕಾರದ ತೊಗಲು ಗೊಂಬೆಗಳನ್ನು ಮಾಡಿ ನಗರಗಳಲ್ಲಿ ೨೦೦ ರೂಗಳಂತೆ ಮಾರಾಟಮಾಡುತ್ತಿರುವರು. ವಿದೇಶೀಯರು ಹೆಚ್ಚಾಗಿ ಇವನ್ನು ಖರೀದಿಸುವರು.





ಕರ್ನಾಟಕದ ಗೊಂಬೆಯಾಟದ ಪ್ರಕಾರಗಳಲ್ಲಿ ತೊಗಲು ಗೊಂಬೆಗೆ ವಿಶಿಷ್ಟ ಸ್ಥಾನವಿದೆ. ಇದು “ಸಿಳ್ಳೆಕ್ಯಾತ” ಎಂಬ ಜನರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿರುವ ಉದ್ಯೋಗಿ ಕಲೆ. ಈ ಸಿಳ್ಳೆಕ್ಯಾತ ಅಥವಾ ಕಿಳ್ಳೆಕ್ಯಾತ ಜನಾಂಗ ಮೂಲತಃ ರತ್ನಗಿರಿ ಜಿಲ್ಲೆಗೆ ಸೇರಿದವರು. ಇವರು ಮರಾಠಿ ಮಿಶ್ರಿತ ತೆಲುಗು ಅಥವಾ ಕನ್ನಡ ಮಾತನಾಡುತ್ತಾರೆ. ತೊಗಲು ಗೊಂಬೆಯಾಡಿಸುವವರನ್ನು ಕಿಳ್ಳೆಕ್ಯಾತರು, ಸಿಳ್ಳೆಕ್ಯಾತರು, ಗೊಂಬೆರಾಮರು, ಗೊಂಬೆಯೋರು ಎಂಬ ಹಲವಾರು ಹೆಸರಿನಿಂದ ಕರೆಯುತ್ತಾರೆ. ತೆಲುಗಲ್ಲಿ ಇವರನ್ನು ಬೊಮ್ಮಲಾಟವಾಳ್ಳು ಎನ್ನುವರು.
ಇವರ ಮನೆ ಮಾತು ಮರಾಠಿ. ಮಹಾರಾಷ್ಟ್ರದ ಕಡೆಯಿಂದ ವಲಸೆ ಬಂದ ಜನ ಇವರು ಎಂಬುದಕ್ಕೆ ಸಾಕಷ್ಟು ಆಧಾರಗಳು ಸಿಗುತ್ತವೆ. ವಲಸೆ ಬರಲು ಕಾರಣವೇನೇ ಇರಲಿ, ಇವರು ಬಂದ ಕಡೆಯೇ ಹೊಂದಿಕೊಂಡಿರುವುದಂತೂ ನಿಜ. ತೊಗಲು ಗೊಂಬೆಯಾಟ ಉದ್ಯೋಗಿ ಕಲೆಯಾದ್ದರಿಂದ ಇವರು ಒಂದೆಡೆ ನೆಲೆಸಲು ಸಾಧ್ಯವಾಗುವುದಿಲ್ಲ. ಇವರು ಹಳ್ಳಿ ಹಳ್ಳಿಗೆ ಗೊಂಬೆಗಳನ್ನು ಹೊತ್ತುಕೊಂಡು ಹೋಗಿ ಆಡಿಸಿ ಜನರನ್ನು ಸಂತೋಷಪಡಿಸಿ ಅವರು ನೀಡಿದ ಮರಿ, ಕುರಿ, ದವಸ, ಧಾನ್ಯ, ಹಣ ಮುಂತಾದ ಕಾಣಿಕೆಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಾರೆ.
ಇವರು ಎಲಾ ಸಂದರ್ಭಗಳಲ್ಲೂ ಒಂದೇ ರೀತಿಯ ಆಟ ಪ್ರದರ್ಶಿಸುವುದಿಲ್ಲ. ತಿಥಿ ಸಂದರ್ಭದಲ್ಲಿ ಸ್ವರ್ಗಾರೋಹಣ ಪ್ರಸಂಗ, ಮದುವೆ ಮತ್ತಿತರ ಸಂದರ್ಭದಲ್ಲಿ ಗಿರಿಜಾ ಕಲ್ಯಾಣ ಪ್ರಸಂಗ ಆರಿಸಿಕೊಳ್ಳುತ್ತಾರೆ. ಮಳೆ ಬರದೆ ಕ್ಷಾಮ ಒದಗಿದಾಗ ಮಳೆ ಹುಯ್ಯಲಿ ಎಂದು ತೊಗಲು ಗೊಂಬೆ ಆಟ ಆಡಿಸುವುದುಂಟು. ಕಲಾವಿದರು ಅನೇಕ ಆಟಗಳ ಸಾಹಿತ್ಯವನ್ನು ಬಾಯಿಪಾಠ ಮಾಡಿಕೊಂಡಿರುತ್ತಾರೆ. ಆರಂಭದಲ್ಲೂ ಗಣೇಶನ ಪೂಜೆ, ಮುಕ್ತಾಯದಲ್ಲೂ ಗಣೇಶನ ಪೂಜೆ ಸ್ತುತಿ ಇರುತ್ತದೆ. ಕಲಾಪ್ರದರ್ಶನದಲ್ಲಿ ಹೆಂಗಸರೂ ಭಾಗವಹಿಸುತ್ತಾರೆ. ಸ್ತ್ರೀ ಪಾತ್ರಗಳ ಗೊಂಬೆಗಳನ್ನು ಕುಣಿಸುವಲ್ಲಿ ಹಾಡು ಮತ್ತು ಸಂಭಾಷಣೆಗಳಿಗೆ ಸ್ತ್ರೀಯೇ ಕಂಠದಾನ ಮಾಡುತ್ತಾಳೆ.



ಮೊದಲು ಗೊಂಬೆರಾಮರು ತೊಗಲು ಗೊಂಬೆಯನ್ನು ಜಿಂಕೆಯ ಚರ್ಮದಿಂದ ಮಾಡುತ್ತಿದ್ದರು. ಆದರೆ ಈಗ ಮೇಕೆಯ ಚರ್ಮ ಬಳಸುವರು. ತೊಗಲು ಗೊಂಬೆ ಆಡಿಸುವುದು ಒಂದು ಕಲೆಯಾದರೆ ಆ ಗೊಂಬೆ ಮಾಡುವುದೂ ಒಂದು ಕುಶಲ ಕಲೆ. ಚರ್ಮ ಹದಮಾಡಿ ಒಣಗಿಸಬೇಕು. ಪಾತ್ರಗಳ ಲಕ್ಷಣ ಹಾಗೂ ಔಚಿತ್ಯಕ್ಕೆ ತಕ್ಕಂತೆ ತೊಗಲನ್ನು ಕತ್ತರಿಸಿ ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಾಕುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರಗಳ ರೂಪ ರಚಿಸುತ್ತಾರೆ. ವಿವಿಧ ರೀತಿಯ ಸಣ್ಣ ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ಬೇಕಾದ ಕಡೆ ರಂಧ್ರ ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ. ಗೊಂಬೆಗಳು ಚಲಿಸುವಂತೆ ಅನುಕೂಲವಾಗಲು ಕೈ ಕಾಲು ಕತ್ತುಗಳಿಗೆ ಕೀಲುಗಳಿರುತ್ತವೆ. ಕೈಚಳಕದಿಂದ ಆಡಿಸಲು ಹಿಂದಕ್ಕೆ ಬಿದಿರಿನ ಕಡ್ಡಿಯನ್ನು ಕಟ್ಟಿರುತ್ತಾರೆ. ಗೊಂಬೆಯಾಡಿಸುವುದು ಆಡಿಸುವವನ ಕೈಚಳಕದ ಮೇಲೆ ನಿಂತಿರುತ್ತದೆ. ಗೊಂಬೆಗಳು ಸುಮಾರು ಎರಡು ಮೂರು ಅಡಿ ಎತ್ತರ ಇರುತ್ತವೆ. ಕೆಲವೆಡೆ ಮಾನವಾಕೃತಿಯ ಅಳತೆಯ ಗೊಂಬೆಗಳು ಇರುವುದೂ ಉಂಟು. ಗೊಂಬೆಗಳು ನೋಟಕ್ಕೆ ಪುರಾಣ ಪುರುಷರ ಕಲ್ಪನೆ ಉಂಟುಮಾಡುತ್ತದೆ. ಗೊಂಬೆಗಳನ್ನು ತಯಾರಿಸುವಾಗ ಪಾತ್ರದ ಹಿರಿಮೆ, ಗಂಭೀರತೆ, ಜನ್ಮಕಾಲ, ಬೆಳವಣಿಗೆ ಕಾಲ ಹೀಗೆ ವಿವಿಧ ಹಂತಗಳಿಗೆ ಅನುಗುಣವಾಗಿ ಅವುಗಳ ಆಕಾರವೂ ಸಹ ಬದಲಾವಣೆ ಹೊಂದುತ್ತದೆ.
ಎಂಟರಿಂದ ಹತ್ತು ಬಿದಿರು ಗಳಗಳನ್ನು ಬಳಸಿ ಮಂಟಪದ ರೀತಿ ರಚಿಸಿ ಉದ್ದದ ಬಿಳಿ ಬಟ್ಟೆ ಸುಕ್ಕಿರದಂತೆ ಕಟ್ಟುತ್ತಾರೆ. ಪೆಟ್ರೋಮ್ಯಾಕ್ಸ್ ಇಲ್ಲವೇ ವಿದ್ಯುಚ್ಛಕ್ತಿ ದೀಪದ ಬಳಕು ಬಳಸುತ್ತಾರೆ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಮೇಲೆ ಪಡಿನೆಳಲಾಗುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ. ಈ ಆಟ ಜನಸಾಮಾನ್ಯರಿಗೆ ಸುಲಭವಾಗಿ ಪೌರಾಣಿಕ ಕಥೆಗಳನ್ನು ಹೇಳುವ ಮಾಧ್ಯಮ.
ತೊಗಲು ಗೊಂಬೆಯಾಟ ಆಡಿಸಿದರೆ ಊರಿಗೆ ತಗುಲಿದ ರೋಗ ರುಜಿನ ಅನಿಷ್ಟಗಳು ತೊಲಗುತ್ತವೆಂದು, ಮಳೆ ಬಾರದಿದ್ದಾಗ ಆಡಿಸಿದರೆ ಮಳೆ ಬೀಳುವುದೆಂದು ಜನರಲ್ಲಿ ನಂಬಿಕೆಯಿದೆ. ರಾತ್ರಿ ೯ ರಿಂದ ಪ್ರಾರಂಭಿಸಿ ಮಧ್ಯರಾತ್ರಿ ೨ ಅಥವಾ ೩ ಗಂಟೆಯವರೆಗೂ ಆಟ ನಡೆಯುತ್ತದೆ.








ವರದನಾಯಕನಹಳ್ಳಿ ಗ್ರಾಮದಲ್ಲಿ ಅಪರೂಪದ ಜನಪದ ಕಲೆ ತೊಗಲುಗೊಂಬೆಯಾಟ ರಾತ್ರಿ ೧೦ ಗಂಟೆಗೆ ಪ್ರಾರಂಭವಾಗಿ ಮುಗಿಯುವಷ್ಟರಲ್ಲಿ ಮಧ್ಯರಾತ್ರಿ ೧.೩೦ ಆಗಿತ್ತು. ಶಿಂದೆ ರಾಮಮೂರ್ತಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ರಾಮಾಯಣದ ಸುಂದರಕಾಂಡದ ಪ್ರಸಂಗವನ್ನು ಹಾರ್ಮೋನಿಯಂ ಮತ್ತು ತಬಲದ ಹಿಮ್ಮೇಳದೊಂದಿಗೆ ತೆಲುಗಿನಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ನಡೆಸಿಕೊಟ್ಟರು. ಸುತ್ತಮುತ್ತಲಿನ ಗ್ರಾಮಗಳಿಂದ ಹೆಂಗಸರು, ಮಕ್ಕಳು, ವೃದ್ಧರು ಎಲರೂ ಬಂದು ತೊಗಲುಗೊಂಬೆಯಾಟದ ಮೋಜನ್ನು, ಮನರಂಜನೆಯನ್ನು ಅನುಭವಿಸಿದರು.



ಈ ಕಲೆಯ ಪ್ರದರ್ಶನಕ್ಕೆ ವಿಶಿಷ್ಟ ರಂಗಸಜ್ಜಿಕೆ ಬೇಕು. ಎತ್ತರದ ವೇದಿಕೆ ಮೇಲೆ ಸುಮಾರು ೮ ಅಡಿ ಅಗಲ, ೮ ಅಡಿ ಉದ್ದ ಮತ್ತು ೮ ಅಡಿ ಎತ್ತರ ಇರುವಂತೆ ಮಂಟಪ ರಚಿಸಿ, ಎರಡು ಮೊಳ ಅಗಲ ೯ ಮೊಳ ಉದದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿರುತ್ತಾರೆ. ಮಂಟಪದ ಉಳಿದ ಮೂರು ಬದಿಗಳನ್ನು ಚಾಪೆ ಅಥವಾ ಕಂಬಳಿಗಳಿಂದ ಮುಚ್ಚುತ್ತಾರೆ.
ಒಬ್ಬ ಏಕಕಾಲದಲ್ಲಿ ಎರಡು ಗೊಂಬೆಗಳನ್ನು ಆಡಿಸಬಲ್ಲ. ಆಡಿಸುವ ಗೊಂಬೆಗಳಿಗೆ ಮೂರು ಸೂತ್ರದ ಕಡ್ಡಿಗಳಿರುತ್ತವೆ. ಕಡ್ಡಿಗಳನ್ನು ಬೆರಳುಗಳಿಗೆ ಸಿಕ್ಕಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ಕುಣಿಯುವ ಈ ಬಣ್ಣದ ಗೊಂಬೆ ಬಿಳಿ ತೆರೆಯ ಮೇಲೆ ಪಡಿ ಮೂಡುವಂತೆ ತೆರೆಯ ಹಿಂಭಾಗದಲ್ಲಿ ವಿದ್ಯುಚ್ಛಕ್ತಿ ದೀಪ ಬಳಸಿ ಮಂದವಾದ ಬೆಳಕು ನೀಡುವ ವ್ಯವಸ್ಥೆ ಮಾಡಿರುತ್ತಾರೆ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಹಿಂದೆ, ಕಥೆಗೆ ತಕ್ಕಂತೆ ಗೊಂಬೆಗಳನ್ನು ಜೋಡಿಸಿಟ್ಟುಕೊಂಡಿರುತ್ತಾರೆ. ತೆರೆಯ ಮೇಲೆ ಮೂಡುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ.
ಆರಂಭದಲ್ಲಿ ಗಣೇಶನ ಸ್ತುತಿಯೊಂದಿಗೆ ಗಣಪತಿಯ ಗೊಂಬೆಯನ್ನು ಕುಣಿಸುತ್ತಾರೆ. ಅನಂತರ ಕಥಾ ಪ್ರಸಂಗ ಪ್ರಾರಂಭವಾಗುತ್ತದೆ. ತೊಗಲುಗೊಂಬೆಯಾಟದಲ್ಲಿ ಯುದ್ಧ ಸನ್ನಿವೇಶಗಳಂತೂ ಅತ್ಯಂತ ಕುತೂಹಲಕಾರಿಯಾಗಿರುತ್ತದೆ. ತೊಗಲುಗೊಂಬೆಯ ತಲೆ, ಎದೆ, ಕೈ ಕಾಲುಗಳು ಬೇರೆ ಬೇರೆಯಾಗಿದ್ದು ಅವನ್ನು ದಾರಗಳಿಂದ ಜೋಡಿಸಲಾಗಿರುವುದರಿಂದ ಇಂತಹ ಪ್ರದರ್ಶನಕ್ಕೆ ಅನುಕೂಲ. ಕೈಕಾಲುಗಳು, ಮುಂಡ, ತಲೆ ಇವುಗಳು ಸರಿದಾಡುವಂತೆ ಅವುಗಳಿಗೆ ಬಿದಿರಿನ ಅಥವಾ ಈಚಲ ಕಡ್ಡಿಗಳನ್ನು ಜೋಡಿಸಿರುತ್ತಾರೆ.
ಕಲಾವಿದರು ಯಾವುದೇ ಪ್ರಸಂಗದಲ್ಲಾಗಲಿ ಮಧ್ಯೆ ಮಧ್ಯೆ ಬಂಗಾರಕ್ಕ, ಕಿಳ್ಳೇಕ್ಯಾತ, ಪಿಳ್ಳಿಜುಟ್ಟು ಮುಂತಾದ ಹಾಸ್ಯ ಪಾತ್ರಗಳನ್ನು ತರಲು ಮರೆಯುವುದಿಲ್ಲ. ಪ್ರೇಕ್ಷಕರು ತೂಕಡಿಸುವಾಗ ಕೆಲವು ಪಾತ್ರಗಳು ಆರ್ಭಟ ಮಾಡಿಕೊಂಡು ಬರುತ್ತವೆ. ಕೊನೆಯ ತನಕ ಪ್ರೇಕ್ಷಕರ ಆಸಕ್ತಿಯನ್ನು ಕಾಯ್ದುಕೊಳ್ಳಲು ಮತ್ತು ಬೇಸರವನ್ನು ನಿವಾರಿಸಿ ಮನರಂಜನೆ ನೀಡಲು ಈ ಪಾತ್ರಗಳು ಮುಖ್ಯ ಪಾತ್ರ ವಹಿಸುತ್ತವೆ. ಕೆಲವು ಸಮಯದಲ್ಲಿ ಅಶ್ಲೀಲವೆನಿಸಬಹುದಾದ ಹಾಸ್ಯವನ್ನು ತಂದು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿಬಿಡುತ್ತಾರೆ. ನಿರ್ಜೀವ ಗೊಂಬೆಗಳು ಜೀವತಳೆದು ಬೆಡಗಿನ ಪ್ರತಿಲೋಕವನ್ನೇ ಸೃಷ್ಟಿಸುವುದು ಇಲ್ಲಿನ ಅನನ್ಯ ತಂತ್ರಗಾರಿಕೆ. ಈ ಆಟವು ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಹದವಾಗಿ ಮೇಳೈಸಿರುವ ಅಪರೂಪದ ಕಲಾಸೃಷ್ಟಿ.



ಹಗಲಿನ ಬೆಳಕಿನಲ್ಲಿ ನೋಡಿದಾಗ ತೀರಾ ಸಾಮಾನ್ಯವೆನಿಸುವ ತೊಗಲುಗೊಂಬೆಗಳು ಕಲಾಸಕ್ತರನ್ನು ತೀವ್ರವಾಗಿ ಸೆಳೆಯುವುದು, ತಮ್ಮ ಬೆಡಗನ್ನು ಮೆರೆಯುವುದು ದೀಪದ ಬೆಳಕಿನಲ್ಲಿ. ಬಿಳಿ ಪರದೆಯ ಮೇಲೆ ಬಂದಾಗ ಯಾವುದೇ ವಸ್ತು ತನ್ನಿಂತಾನೇ ಅದ್ಭುತವಾಗುವುದಿಲ್ಲ. ಪ್ರತಿಭಾವಂತನ ಕೈಗೆ ಸಿಕ್ಕಾಗ ಮಾತ್ರ ಅದರ ವಿಶಿಷ್ಟ ಸಾಧ್ಯತೆ ತೆರೆದುಕೊಳ್ಳುತ್ತದೆ. ಆಟಗಾರನ ಅನುಭವ, ಕರಕೌಶಲ್ಯಗಳು ಹೊಸ ಮಾಯಾಲೋಕವನ್ನು ಸೃಷ್ಟಿಸುವುದನ್ನು ನೋಡಿಯೇ ಅನುಭವಿಸಬೇಕು. ನವರಸಗಳನ್ನು ಮೈದುಂಬಿಕೊಳ್ಳುವ ತೊಗಲುಗೊಂಬೆ ಕಲಾವಿದ ಯಾವುದೇ ಸನ್ನಿವೇಶವನ್ನು ಪ್ರೇಕ್ಷಕರ ಮನಮುಟ್ಟುವಂತೆ ನಿರೂಪಿಸುವಲ್ಲಿ ಸಿದ್ಧಹಸ್ತನಾಗಿರುತ್ತಾನೆ.
ಗೊಂಬೆಗಳಲ್ಲಿನ ವಿಶೇಷ ಆಕರ್ಷಣೆಗಳಲ್ಲಿ ಅವುಗಳ ಬಣ್ಣ, ಹೊಳೆಯುವ ಆಭರಣ, ಮಣಿಸರ ಇತ್ಯಾದಿಗಳು. ಕೆಲವೇ ಬಣ್ಣಗಳನ್ನು ಬಳಸಿಕೊಂಡು ಬೆಡಗು, ಸಂಕೀರ್ಣತೆಯ ಅನುಭವ ಕಟ್ಟಿಕೊಡುತ್ತಾರೆ. ಆಭರಣ ಮತ್ತಿತರ ಹೊಳಪಿನ ಕುಸುರಿ ಬೇಕಿರುವೆಡೆ ಚರ್ಮದಲ್ಲಿ ರಂಧ್ರಗಳನ್ನು ಮಡಿರುತ್ತಾರೆ. ಅತ್ಯಂತ ಜಾಣತನದ ಆದರೆ ಬಹಳ ಪರಿಣಾಮಕಾರಿಯಾದ ಕ್ರಮವಿದು.
ತೊಗಲುಗೊಂಬೆಯಾಟ ಒಂದು ಅದ್ಭುತ ಕೈಚಳಕದ ಆಟ. ಈ ಆಟ ಜನಸಾಮಾನ್ಯರಿಗೆ ಸುಲಭವಾಗಿ ಪೌರಾಣಿಕ ಕಥೆಗಳನ್ನು ಹೇಳುವ ಮಾಧ್ಯಮ. ಇವರು ಬಹುತೇಕ ಮಹಾಭಾರತ ಮತ್ತು ರಾಮಾಯಣದ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಾರೆ. ಗೊಂಬೆಗಳನ್ನು ಕುಣಿಸುತ್ತಾ ಆ ಗೊಂಬೆಗೆ ಜೀವ ತುಂಬುವಂತೆ ತಾವೇ ಹಾಡುತ್ತಾ ಸಂಭಾಷಿಸುವ ಇವರ ಕಲೆ ಎಂಥವರನ್ನೂ ದಂಗುಬಡಿಸುತ್ತದೆ. ಆಧುನಿಕ ಅನಿಮೇಷನ್ ಲೋಕದ ಪುರಾತನ ಕೊಂಡಿ ಈ ತೊಗಲುಗೊಂಬೆಯಾಟ.