Saturday, May 30, 2009

ಧೂಮಲೀಲೆ!

ಬಿಡಲಾರೆ ನಾ ಸಿಗರೇಟು
ಹುಡುಗಿ, ನಿನ್ನಂತೆಯೇ ಅದು ಥೇಟು
ಬಿಡಬಲ್ಲೆನೇ ನಾ ನಿನ್ನ?
ಚಿನ್ನ, ಹಾಗೆಯೇ ಸಿಗರೇಟನ್ನ?

ಎಂದು ನಮ್ಮೆಲ್ಲರ ಪ್ರೀತಿಯ ತುಂಟಕವಿ ಬಿ.ಆರ್. ಲಕ್ಷ್ಮಣರಾವ್ ಸಿಗರೇಟಿನ ಬಗ್ಗೆಯೇ ಕವನ ಬರೆದಿದ್ದಾರೆ.
ಅವರ ಮಾತನ್ನು ತಮಾಷೆಯಾಗಿಯೇ ಸ್ವೀಕರಿಸೋಣ. ಏಕೆಂದರೆ ಸಿಗರೇಟ್ ಸೇವನೆಯಿಂದ ಸೇವಿಸುವರಿಗಷ್ಟೇ ಅಲ್ಲ, ಹತ್ತಿರವಿರುವರಿಗೆಲ್ಲ ಹಾನಿಕಾರಕ. ಹೃದಯ ಮತ್ತು ಲಿವರ್ ಸಂಬಂಧಿಸಿದ ಕಾಯಿಲೆಗಳನ್ನು ಹಾಗೂ ಕ್ಯಾನ್ಸರ್ ದೇಹಕ್ಕೆ ಬಳುವಳಿಯಾಗಿ ನೀಡುತ್ತೆ ಈ ತಂಬಾಕು.
ಮೇ ೩೧ ವಿಶ್ವ ಧೂಮಪಾನ ನಿಷೇಧ ದಿನ.
ಈ ಸಂದರ್ಭದಲ್ಲಿ ಧೂಮಪಾನಿಗಳ ಫೋಟೋ ನೋಡುತ್ತಾ ಸೇದದವರು ಎಷ್ಟು ಭಾಗ್ಯಶಾಲಿಗಳು ಎಂದುಕೊಳ್ಳುತ್ತಾ ತಂಬಾಕು ಸೇವನೆ ಹಾನಿಕಾರಕ ಎಂಬ ಸಂದೇಶ ಸಾರೋಣ. ನನ್ನ ಈ ಬಾರಿಯ ಬ್ಲಾಗ್ ಬರಹದ ಮುಖ್ಯ ಉದ್ದೇಶ ಅದೇ.

ಹೀಗೆ ಎಳೆದರೆ ಕರುಳಾಳದವರೆಗೂ ಹಬ್ಬುತ್ತೆ ಹೊಗೆ!
ಅಬ್ಬಾ! ಸ್ಟೀಮ್ ಎಂಜಿನ್

ಛತ್ರಿಯಡಿ ಕಿಡಿ
ಬಿಡಿ, ಬೀಡಿ

ಕೈಸುಟ್ಟರೂ ಬಾಯಿ ಹೊಗೆ!

ಸಾಕು ಬಿಸಾಡ್ರೀ

ನಡೆದಾಡುವ ಹೊಗೆಮಾನವ

Monday, May 25, 2009

ಸೌಂದರ್ಯದ ಖನಿಗಳು ಈ ವನಸುಮಗಳು

ರಸ್ತೆಯಂಚಿನಲ್ಲಿ, ಪೊದೆಗಳ ಸಂದಿಯಲ್ಲಿ, ಕಳೆಗಿಡಗಳ ಮಧ್ಯೆ ಪುಟ್ಟ ಪುಟ್ಟ ವನಪುಷ್ಪಗಳು ನಗುನಗುತ್ತಿರುತ್ತವೆ. ವರ್ಷ ಪೂರಾ ಇವು ಕಾಣಸಿಗುತ್ತಾದರೂ ಮಳೆಗಾಲದಲ್ಲಿ ಹೆಚ್ಚು. ಜೀವದ್ರವವಾದ ಮಳೆಯು ಭೂಮಿಯೊಳಕ್ಕೆ ಹೋದಾಗ ಉಸಿರಿನ ಮೂಲ ಹಸಿರು ಭುವಿಯಿಂದ ಹೊರಹೊಮ್ಮುತ್ತದೆ. ಈ ಹಸಿರ ಮಧ್ಯ ನಾನಾ ವಿಧದ ಹೂಗಳು ಅರಳಿ ನಿಂತು ಹಕ್ಕಿ, ಚಿಟ್ಟೆ ಮತ್ತು ದುಂಬಿಗಳನ್ನು ಆಕರ್ಷಿಸುತ್ತವೆ.

ಈ ಸುಂದರ ಸುಮಗಳಲ್ಲಿ ಕೆಲವನ್ನು ಪರಿಚಯ ಮಾಡಿಕೊಳ್ಳೋಣ.

ಅಮೆರಿಕಾದ ಉಷ್ಣವಲಯದ ಕಾಡುಗಳಿಂದ ವಲಸೆ ಬಂದಿರುವ ಜಮೈಕನ್ ಬ್ಲೂ ಸ್ಪೈಕ್ ಎಂದು ಕರೆಯಲ್ಪಡುವ ಈ ಹೂಗಿಡ ಮಳೆಗಾಲ ಶುರುವಾದೊಡನೆ ಗಿಡದಿಂದ ಮೇಲೆ ಚಾಚಿರುವ ಕಡ್ಡಿಯ ಮಧ್ಯಭಾಗದಲ್ಲಿ ಆಕರ್ಷಕ ಪುಟ್ಟ ಪುಟ್ಟ ನೀಲಿ ಹೂಗಳ ಗುಚ್ಛವೊಂದನ್ನು ಸಿಕ್ಕಿಸಿಕೊಂಡು ರಸ್ತೆ ಬದಿಯಲ್ಲಿ, ಬಯಲುಗಳಲ್ಲಿ ಎದ್ದು ಕಾಣುತ್ತದೆ.

ಮುಟ್ಟಿದರೆ ಮುನಿ(ಟಚ್ ಮಿ ನಾಟ್) ಕೂಡ ಅಮೆರಿಕಾದ ಉಷ್ಣವಲಯದ ಕಾಡಿನಿಂದ ಬಂದದ್ದೇ. ಇದರ ಕೆಂಪುಬಣ್ಣದ ರೋಮಗಳಂತಿರುವ ಹೂಗಳು ಅತ್ಯಂತ ಆಕರ್ಷಕ. ಹಿಂದಿಯಲ್ಲಿ ಇದನ್ನು "ಲಾಜವಂತಿ" ಅನ್ನುವರಂತೆ. ಲಜ್ಜೆಯಿಂದ ಮುದುಡುವ ಇದರ ಎಲೆಗಳ ಸ್ವಭಾವದಿಂದ ಈ ಹೆಸರು ಬಂದಿರಬೇಕು.


ವೆಸ್ಟ್ ಇಂಡೀಸ್ ಮೂಲದ ನೆತ್ತರ ಪುಷ್ಪ(ಬ್ಲಡ್ ಫ್ಲವರ್) ಕಾಡುಗಳಲ್ಲಿ ಝರಿ, ತೊರೆಗಳ ಪಕ್ಕದಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ. ಟೈಗರ್ ಚಿಟ್ಟೆಯ ಕಂಬಳಿಹುಳುಗಳ ಆಹಾರ ಸಸ್ಯವಿದು. ಎಕ್ಕದ ಬೀಜಗಳನ್ನೇ ಹೋಲುವ ಇದರ ಬೀಜಗಳು ಗಾಳಿಗೆ ತೇಲುತ್ತಾ ಪ್ರಸಾರವಾಗುತ್ತದೆ.
"ದೆವ್ವದ ಉಗುರು"- ಎಂಥ ವಿಚಿತ್ರ ಹೆಸರಲ್ವಾ? ಮೆಕ್ಸಿಕೊ ದೇಶದಿಂದ ಬಂದಿರುವ ಈ ಪುಷ್ಪಕ್ಕೆ ಇಂಗ್ಲೀಷ್ ನಲ್ಲಿ ಹಾಗೇ ಹೆಸರಿದೆ (ಡೆವಿಲ್ಸ್ ಕ್ಲಾ). ಈ ಹೂ ಆಕರ್ಷಕವಾಗಿದ್ದರೂ ಮುಟ್ಟಿದರೆ ಅಂಟಂಟಾಗಿರುತ್ತದೆ.

ಮೆಕ್ಸಿಕನ್ ಫ್ಲಾಸ್ ಎಂದು ಕರೆಯುವ ಈ ಹೂ ಅದರ ಹೆಸರೇ ಹೇಳುವಂತೆ ಮೆಕ್ಸಿಕನ್ ಮೂಲದ್ದು. "ವುಲ್ಲನ್" ರೀತಿ ಕಾಣುವ ಪುಟ್ಟಪುಟ್ಟ ಹೂಗಳು ಬಹಳ ಸುಂದರವಾಗಿರುತ್ತವೆ. ನೀಲಿ, ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ಇವು ಕಂಡುಬರುತ್ತವೆ. ಆಗಸ್ಟ್ ನಿಂದ ಡಿಸೆಂಬರಿನವರೆಗೆ ಮಾತ್ರ ಈ ಹೂಗಳ ವಿಕ್ಷಣೆ ಸಾಧ್ಯ.

ಎಲ್ಲೆಲ್ಲೂ ಕಂಡುಬರುವ ಲಾಂಟಾನ ಸಸ್ಯದ ಮೂಲ ಅಮೆರಿಕಾದ ಉಷ್ಣವಲಯ. ವರ್ಷಪೂರ್ತಿ ಗಾಢಸುಗಂಧ ಹೊರಸೂಸುತ್ತಾ ಅರಳುವ ಹೂಗಳು ಚಿಟ್ಟೆ ಮತ್ತು ಪತಂಗಗಳನ್ನು ತನ್ನೆಡೆಗೆ ಆಕರ್ಷಿಸುತ್ತವೆ.
* * * *
ಯಾರ ಮುಡಿಗೂ ಏರದೆ, ಯಾವ ದೇವರ ಪೂಜೆಗೂ ಬಳಸಲ್ಪಡದೇ ತನ್ನಷ್ಟಕ್ಕೆ ತಾನುಳಿದು ಅಳಿದುಹೋಗುವ ಈ ಸುಂದರ ಸುಮಗಳನ್ನು ಸ್ಪರ್ಷಿಸುವ ಅದೃಷ್ಟ ಪಾತರಗಿತ್ತಿಗಳಂತೆ ನಮ್ಮ ಕಣ್ಣಿಗೂ ಲಭಿಸಲಿ.

Monday, May 18, 2009

ವೀರಗಾಸೆ

ಹಿಂದೆ ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ಬೃಹಸ್ಪತಿ ಸವವೆಂಬ ಯಜ್ಞವನ್ನು ಆರಂಭಿಸಿ, ಅದಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ದಾಕ್ಷಾಯಣಿ ಬರುತ್ತಾಳೆ. ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ ಮಗಳನ್ನು ಅವಮಾನಿಸುತ್ತಾನೆ. ಶಿವನನ್ನು ನಿಂದಿಸುತ್ತಾನೆ. ದಾಕ್ಷಾಯಣಿ ಇದನ್ನು ಸಹಿಸಲಾಗದೆ, "ಶಿವದ್ವೇಷಿಯಾದ ನಿನ್ನ ಮೂಲಕ ಉಂಟಾದ ಈ ದೇಹವನ್ನು ಇನ್ನು ಹೊತ್ತಿರಲಾರೆನು" ಎಂದು ಅಗ್ನಿಕುಂಡಕ್ಕೆ ಬಿದ್ದು ದೇಹತ್ಯಾಗ ಮಾಡಿದಳು. ಆಗ ಶಿವನು ಪ್ರಳಯಕಾಲದ ಭೈರವನಾಗಿ ಉಗ್ರವಾಗಿ ತಾಂಡವನೃತ್ಯ ಮಾಡುತ್ತಾ ಹಣೆ ಬೆವರು ತೆಗೆದು ನೆಲಕ್ಕೆ ಅಪ್ಪಳಿಸಿದ. ಆಗ ಜನಿಸಿದ ಗಂಡುಗಲಿ ವೀರಭದ್ರ. ವೀರಭದ್ರ ಶಿವನ ಆಜ್ಞೆಯಂತೆ ದಕ್ಷಬ್ರಹ್ಮನ ಯಾಗ ಶಾಲೆಗೆ ಹೋಗಿ ಅವನ ತಲೆಯನ್ನು ಚಂಡಾಡುತ್ತಾನೆ.
ಈ ಸಂದರ್ಭದಲ್ಲಿ ವೀರಭದ್ರನು ತೋರಿದ ಪ್ರತಾಪದ ಪ್ರತೀಕವೇ "ವೀರಗಾಸೆ" ಎಂದೂ, ಅಂದಿನಿಂದಲೇ ಈ ಕಲೆ ಬೆಳೆದು ಬಂದಿತೆಂದೂ ಕಲಾವಿದರು ಹೇಳುತ್ತಾರೆ.

ನಮ್ಮೂರು ಶಿಡ್ಲಘಟ್ಟದಲ್ಲಿ ನಾವು ನಡೆಸುವ "ಬಸವ ಜಯಂತಿ" ಹಬ್ಬದ ಉತ್ಸವದಲ್ಲಿ ವೀರಗಾಸೆ ಇರಲೇಬೇಕು. ಇವರಿಗೆ ಲಿಂಗದ ವೀರರು ಎಂದು ಕರೆಯುತ್ತಾರೆ. "ಲಿಂಗದ ವೀರ"ರನ್ನು ಊರಿಗೆ ಕರೆಸಿ ವೀರಭದ್ರನ ಪ್ರತಾಪದ ಬಗ್ಗೆ ಖಡ್ಗ ಹೇಳಿಸಿ ಕಥೆ ಕೇಳುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂಬ ನಂಬಿಕೆಯಿದೆ.

ಅವರು ಹೇಳುವ "ವಡಪು"ಗಳನ್ನು "ಖಡ್ಗ", "ಖಡೆ", "ವಡಬು" ಎಂಬುದಾಗಿಯೂ ಕರೆಯುತ್ತಾರೆ. ಇವುಗಳಲ್ಲಿ ಕೆಲವು ವೀರಾವೇಶದಿಂದ ತುಂಬಿದ್ದರೆ, ಕೆಲವು ನೀತಿಬೋಧಕ, ಪೌರಾಣಿಕ ವಿಷಯಗಳನ್ನು ಸಾರಿ ಹೇಳುತ್ತವೆ. ವಡಬುಗಳನ್ನು ಹೇಳುವಾಗ ಕರಡಿಮಜಲು ನುಡಿಸುವರು.

ಕಲಾವಿದರು ಎಷ್ಟೇ ಶ್ರೀಮಂತರಾಗಿದ್ದರೂ ಶಿವರಾತ್ರಿ, ಯುಗಾದಿ ಹಬ್ಬದಂದು ಕಾವಿ ಧರಿಸಿ ಮೂರು ಮನೆಗಾದರೂ "ಕ್ವಾರಣ್ಯ"ಕ್ಕೆ ಹೋಗಬೇಕು. ಇವರನ್ನು ವೀರಭದ್ರನ ಅವತಾರವೆಂದೇ ಭಾವಿಸಿರುವ ಗ್ರಾಮೀಣರು ಎಂದೂ ಬರಿಗೈಲಿ ಕಳುಹಿಸದೆ "ಭಿಕ್ಷೆ" ನೀಡಿ ನಮಸ್ಕರಿಸುತ್ತಾರೆ.

ಇವರು ತಲೆಗೆ ವಸ್ತ್ರ, ಕಿರೀಟವನ್ನು ಧರಿಸುವರು. ಕಾವಿ ಅಂಗಿ ಮತ್ತು ಪಂಚೆ, ಕಿವಿಗೆ ರುದ್ರಾಕ್ಷಿ, ಹಣೆಗೆ ವಿಭೂತಿ, ಕೊರಳು ತೋಳು ಮುಂಗೈಗಳಲ್ಲಿ ರುದ್ರಾಕ್ಷಿಮಾಲೆ, ನಾಗಾಭರಣ, ಎದೆಯ ಹತ್ತಿರ ವೀರಭದ್ರಸ್ವಾಮಿಯ ಹಲಗೆ, ಸೊಂಟದಲ್ಲಿ ಚೌಲಿ ಹಾಕಿದ ಹಿತ್ತಾಳೆಯ ನರಸಿಂಹ ಮತ್ತು ದಕ್ಷಬ್ರಹ್ಮನ ಶಿರಗಳನ್ನು ಧರಿಸಿರುತ್ತಾರೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ವೀರಭದ್ರನ ಹಲಗೆಯನ್ನು ಹಿಡಿದಿರುತ್ತಾರೆ. ದೇವರ ಉತ್ಸವದ ಮುಂದೆ ಕರಡಿ ವಾದ್ಯದ ಗತ್ತಿಗೆ ಲಯಬದ್ಧವಾಗಿ ಕುಣಿಯುತ್ತಾರೆ. ಕುಣಿತದ ಮಧ್ಯೆ ವೀರಭದ್ರನ ವಡಪುಗಳನ್ನು ಹೇಳುತ್ತಾರೆ.

ಆಹಾಹಾ ರುದ್ರ... ಆಹಾಹಾ ದೇವ....
ಎಲೈ ದುರುಳನಾದ ದಕ್ಷನೇ
ಶಿವನ ನಿಟಿವೆ ನೇತ್ರದಿಂದ ಉದ್ಭವಿಸಿದ
ಹರನ ಕುಮಾರನಾದ ವೀರಭದ್ರನೇ ನಾನು
ತಮ್ಮ ಕರದೊಳಗಿದ್ದ ಗರಗಸಗತ್ತಿಯಿಂದ
ಆ ದಕ್ಷಬ್ರಹ್ಮನ ಶಿರವನ್ನೇ
ಚರಚರನೆ ಕೊರೆದು
ಉರಿಯೊಳಗೆ ಹಾಕಲು...

Tuesday, May 12, 2009

ಆಟೋಗ್ರಾಫ್ - ಫೋಟೋಗ್ರಾಫ್ ಭಾಗ ೩

ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ಸಂಪತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಬಂದು ಸಾಹಸಸಿಂಹ ವಿಷ್ಣುವರ್ಧನ್ ಆದರು. ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿದೆ.
ಹಿರಿಯ ನಟ ಶಿವರಾಂ - ಇವರು ಅದ್ಭುತ ಕಲಾವಿದರಷ್ಟೇ ಅಲ್ಲ, ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿಯ ಸದಸ್ಯರು ಮತ್ತು ಉತ್ತಮ ಛಾಯಾಗ್ರಾಹಕರೂ ಕೂಡ.

ಡಾ.ಬಾಲಮುರಳೀಕೃಷ್ಣ - ಕರ್ನಾಟಕ ಸಂಗೀತ ದಿಗ್ಗಜರಲ್ಲಿ ಪ್ರಮುಖರು. ಹಾಡುಗಾರಿಕೆಯಂತೆ ಇವರು ಕೃತಿರಚನೆಯಲ್ಲೂ ಸಿದ್ಧಹಸ್ತರು.

ಸಿ.ಅಶ್ವತ್ - ಕವಿಗಳನ್ನು ನಮ್ಮ ಮನೆಮನಗಳಿಗೆ ತಲುಪಿಸುವ ಭಾವಜೀವಿ. ಇವರದ್ದು ಮ್ಯೂಜಿಕ್ ಅಲ್ಲ ಮ್ಯಾಜಿಕ್.

ರವಿಬೆಳಗೆರೆಯವರ ಮಾತಲ್ಲೇ ಹೇಳುವುದಾದರೆ ಪ್ರಕಾಶ್ ರೈ, ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟ(ಕನ್ನಡವನ್ನು ಬಿಟ್ಟು!)

ದೈತ್ಯ ಬರಹಗಾರರಾದ ರವಿಬೆಳಗೆರೆ.

ನಮ್ಮ ನಾಡಿನ ಹೆಮ್ಮೆಯ ಪತ್ರಿಕೆಯ ಹೆಮ್ಮೆಯ ಸಂಪಾದಕರಾದ ವಿಶ್ವೇಶ್ವರಭಟ್.

ಮಾತಿನ ಮಲ್ಲರಾದ ಪ್ರೊ.ಕೃಷ್ಣೇಗೌಡರು ಚಿಂತೆ ದೂರ ಮಾಡುತ್ತಾ ಚಿಂತನೆಗೂ ಹಚ್ಚುವರು.

ನಮ್ಮ ಜಿಲ್ಲೆಯವರು ಮತ್ತು ಕ್ಷಣಹೊತ್ತು ಅಣಿಮುತ್ತಿನಿಂದಾಗಿಯೇ ಪ್ರಸಿದ್ಧರಾದ ಷಡಾಕ್ಷರಿಯವರು.

Sunday, May 3, 2009

ಮೀಸೆ ಮೇಲೆ ಕೈ, ಎಲ್ಲಾದಕ್ಕೂ ಸೈ ಸೈ!

ನಾನಾಗ ಚಿಕ್ಕಬಳ್ಳಾಪುರದಲ್ಲಿ ಹೈಸ್ಕೂಲ್ ಓದುತ್ತಿದ್ದೆ. ದೂರದರ್ಶನದಲ್ಲಿ ಮಕ್ಕಳ ಕಾರ್ಯಕ್ರಮದಲ್ಲಿ ನಾಟಕವೊಂದರಲ್ಲಿ ಪಾತ್ರವಹಿಸಿದ್ದೆ. ನನ್ನದು ನಾಗರೀಕನ ಪಾತ್ರ. ಮೇಕಪ್ ಮಾಡುವವರು ನನಗೆ ಬಿಳಿ ಗಡ್ಡ ಮೀಸೆ ಇಡುವೆನೆಂದಿದ್ದರು. ಎಲ್ಲರದ್ದೂ ಆದರೂ ನನಗೆ ಮಾತ್ರ ಇನ್ನೂ ಗಡ್ಡ ಮೀಸೆ ಬಂದಿರಲಿಲ್ಲ. ಮರೆತಿರಬಹುದೆಂದು ಅವರಿಗೆ ಎರಡು ಮೂರು ಬಾರಿ ಕೇಳಿಬಿಟ್ಟೆ. ಆಗ ಆ ಮೇಕಪ್ ಮಾಡುವವರು ಹೇಳಿದ ಮಾತು ಇನ್ನೂ ನನಗೆ ನೆನಪಿದೆ. "ಯಾಕೆ ಆತುರಪಡ್ತೀಯ. ಗಡ್ಡ ಮೀಸೆ ಇನ್ನೂ ಬಂದಿಲ್ವಲ್ಲ ಅಂತ ಈಗ ಅನ್ಸುತ್ತೆ. ಬಂದಮೇಲೆ ದಿನಾ ಅದನ್ನು ಬೋಳಿಸುವ ಕಷ್ಟದಿಂದ ಯಾಕಪ್ಪ ಬರ್ತವೆ ಅನ್ಸುತ್ತೆ" ಅಂದಿದ್ದರು.
ಇಷ್ಟು ಪೀಠಿಕೆಯೊಂದಿಗೆ ಕೆಲವು ಮೀಸೆ ಚಿತ್ರಗಳನ್ನು ನೋಡೋಣವೇ?
ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ...
ಅಬ್ಬಬ್ಬಾ! ಯಾವುದು ಮೀಸೆಯೋ ಯಾವುದು ಗಡ್ಡವೋ...

ಹಣೆಮೇಲಿನ ಪಟ್ಟೆಯಂತೆಯೇ ಶುಭ್ರ ಮೀಸೆ

ಮೀಸೆ... ಚೆಂದ, ತುಂಬಿದ ಆಸೆ ಬಲು ಚೆಂದ

ಇದು ಎಂಥಾ ಗಡ್ಡವಯ್ಯ..!

ಮೊದಮೊದಲಾಗಿ... ಚಿಗುರಿದ ಮೀಸೆ...

ಮೀಸೆ ಮೇಲೆ ಕೈ, ಎಲ್ಲಾದಕ್ಕೂ ಸೈ ಸೈ!

ಶಿಸ್ತುಬದ್ಧ ಮೀಸೆ!

ನದಿಯು ಸಾಗರದಲ್ಲಿ ಲೀನವಾದಂತೆ, ಮೀಸೆಯು ಗಡ್ಡದಲ್ಲಿ ಲೀನವಾಗಿದೆ!

ವೀರಗಾಸೆಯವರ ರೌದ್ರ ಮೀಸೆ