Monday, June 10, 2013

ದೇಶಪ್ರೇಮಿಗಳ ಮನೆ


 ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ೧೯೨೦ ರಲ್ಲಿ ಬಂಡಿನಾರಾಯಣಪ್ಪ ಅವರು ಕಟ್ಟಿರುವ ಈ ಮನೆ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರ ಸ್ಥಾನವಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಿವಿಧ ಬಗೆಯ ವಿನ್ಯಾಸ ಮತ್ತು ಆಕಾರದ ಮನೆಗಳಿವೆ. ಅವು ತಮ್ಮದೇ ಆದ ಪ್ರಾಮುಖ್ಯತೆ ಹೊಂದಿವೆ. ಆದರೆ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲೊಂದು ವಿಶಿಷ್ಟ ಮನೆ ಇದೆ. ಇದು ಜಿಲ್ಲೆ ಮತ್ತು ತಾಲ್ಲೂಕಿನ ಪಾಲಿಗೆ ಐತಿಹಾಸಿಕ ಮನೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಮನೆಯೇ ಕೇಂದ್ರ ಸ್ಥಾನ.  ಮನೆ, ಗ್ರಾಮಗಳನ್ನು ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದವರಿಗೆ ಈ ಮನೆ ಆಶ್ರಯ ತಾಣವಾಗಿತ್ತು. ಸ್ವತಂತ್ರ್ಯ ಭಾರತದ ಕನಸನ್ನು ಕಂಡವರಿಗೆ ಆಶಾಜ್ಯೋತಿಯಾಗಿತ್ತು.
 ತಾಲ್ಲೂಕಿನ ಭಕ್ತರಹಳ್ಳಿಯ ಹಿರಿಯ ಮುತ್ಸದ್ಧಿ ಬಂಡಿ ನಾರಾಯಣಪ್ಪನವರು ೧೯೨೦ರಲ್ಲಿ ಸುಂದರ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಿದ ಮನೆಯಿದು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಿಗೆ ಹಣಕಾಸಿನ ನೆರವು, ಗುಪ್ತ ಪತ್ರ ರವಾನೆ, ಕಾರ್ಯಾಚರಣೆಗಳ ಯೋಜನೆ ಎಲ್ಲವನ್ನೂ ಈ ಮನೆಯಿಂದಲೇ ರವಾನಿಸಲಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರಿಗೆ ಬಂಡಿನಾರಾಯಣಪ್ಪ ಮಹಾಪೋಷಕರಾಗಿದ್ದರು.
  ಹಾಗಾಗಿ ಭಕ್ತರಹಳ್ಳಿ ಗ್ರಾಮದಲ್ಲಿ ಅತಿ ಹೆಚ್ಚು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಾಯಿತು. ಈ ಹೋರಾಟದಲ್ಲಿ ಬ್ರಿಟಿಷ್ ಪೊಲೀಸರ ಗುಂಡಿಗೆ ಭಕ್ತರಹಳ್ಳಿಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರು ವೀರಮರಣವನ್ನಪ್ಪಿದರು ಮತ್ತು ಹಲವಾರು ಮಂದಿ ಜೈಲು ಪಾಲಾದರು. ಇದರಿಂದಾಗಿ ಭಕ್ತರಹಳ್ಳಿಯು ’ದೇಶಭಕ್ತರಹಳ್ಳಿ’ ಎಂದೇ ಖ್ಯಾತಿ ಪಡೆಯಿತು.
 ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜಮನೆತನದ ಆಡಳಿತದ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಗೆ ನಾರಾಯಣಪ್ಪನವರು ಎರಡು ಬಾರಿ ಆಯ್ಕೆಯಾಗಿದ್ದರು. ಬಂಡಿ ಚಿಹ್ನೆಯಿಂದ ಆಯ್ಕೆಯಾಗಿದ್ದರಿಂದಾಗಿ ಅವರಿಗೆ ಬಂಡಿ ನಾರಾಯಣಪ್ಪ ಎಂದೇ ಹೆಸರು ರೂಢಿಗೆ ಬಂದಿತು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಜನರಲ್ಲಿ ಹಚ್ಚಿದವರಲ್ಲಿ ಅವರು ಪ್ರಮುಖರು. ಆಗ ಸ್ವಾತಂತ್ರ್ಯ ಹೋರಾಟಗಾರರಿಗೆ ಪೋಷಕರ ಅತ್ಯಗತ್ಯವಿತ್ತು.



ಬಂಡಿ ನಾರಾಯಣಪ್ಪ.

’ನಾರಾಯಣಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ಪೋಷಕರ ಸ್ಥಾನ ತುಂಬಿದ್ದಲ್ಲದೇ ತಮ್ಮ ಮಕ್ಕಳಾದ ಬಿ.ಎನ್.ಕ್ಯಾತಣ್ಣ ಮತ್ತು ಬಿ.ಎನ್.ಪುಟ್ಟಣ್ಣ ಅವರನ್ನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಬ್ರಿಟಿಷ್ ವಿರುದ್ಧದ ಚಳುವಳಿಯಲ್ಲಿ ಬಂಡಿ ನಾರಾಯಣಪ್ಪನವರ ಮಕ್ಕಳು ಜೈಲುಪಾಲಾದರು. ಸರ್ಕಾರಿ ಲೆಕ್ಕದಲ್ಲಿ ಭಕ್ತರಹಳ್ಳಿಯ  ೧೩ ಮಂದಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸಲಾಗಿದೆ. ಆದರೆ ಆಗ ಗ್ರಾಮದ ಮಕ್ಕಳು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯಕ್ಕಾಗಿ ಧೇನಿಸುವ, ಪ್ರಾರ್ಥಿಸುವ ಮತ್ತು ಹೋರಾಟಗಾರರಿಗೆ ನೆರವಾಗುವ ಕಾರ್ಯದಲ್ಲಿ ಭಾಗಿಯಾಗಿದ್ದರು. ಎಲ್ಲೆಡೆ ಅದೇ ಚರ್ಚೆಯಾಗುತ್ತಿತ್ತು’ ಎಂದು ಹಿರಿಯರಾದ ವೆಂಕಟಮೂರ್ತಿ ಹೇಳುತ್ತಾರೆ.
 ’ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರಿಗೆ ಆಪ್ತರಾಗಿದ್ದ ಬಂಡಿ ನಾರಾಯಣಪ್ಪನವರು ಸಾಮಾನ್ಯರೇನು ಆಗಿರಲಿಲ್ಲ, ಕೆ.ಸಿ.ರೆಡ್ಡಿ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಕೋರಿ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಭೇಟಿಯಾಗಿದ್ದರು’ ಎಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.
 ’ಆಗಿನ ಕಾಲದಲ್ಲಿ ನಡೆಯುತ್ತಿದ್ದ ಕವಾಯತು, ಕಾಂಗ್ರೆಸ್ ಮುಖಂಡರ ಬಿಳಿ ಜುಬ್ಬಾ, ಪೈಜಾಮ, ಹಾಫ್ ಕೋಟು, ಗಾಂಧಿ ಟೋಪಿ. ರಾಷ್ಟ್ರಪ್ರೇಮದ ಬಗ್ಗೆ ಭಾಷಣ. ತಾಲ್ಲೂಕು ಹಾಗೂ ಜಿಲ್ಲಾ ಮುಖಂಡರು ಬರುತ್ತಿದ್ದುದು, ಎಲ್ಲ ಕನಸಿನಂತೆ ಗೋಚರಿಸುತ್ತದೆ. ನಾವು ಆಗ ಶಾಲಾ ವಿದ್ಯಾರ್ಥಿಗಳು. ನಮಗೆಲ್ಲಾ ಇವರು ಮಾದರಿ ವ್ಯಕ್ತಿಗಳಾಗಿದ್ದರು. ಮುಂದೆ ನಾನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾದಾಗ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಹಾಗೂ ಸರ್ಕಾರಿ ಲೆಕ್ಕದಲ್ಲಿರುವ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕವನ್ನು ಹಾಕಿಸಿದೆ’ ಎಂದು ವೆಂಕಟಮೂರ್ತಿ ವಿವರಿಸಿದರು.

2 comments:

sunaath said...

ಶ್ರೇಷ್ಠ ವ್ಯಕ್ತಿಯೊಬ್ಬರ ಬಗೆಗೆ ತಿಳಿಸಿರುವಿರಿ. ಧನ್ಯವಾದಗಳು.

ದೀಪಸ್ಮಿತಾ said...

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂಥ ಅನೇಕರು ಇನ್ನೂ ಎಲೆ ಮರೆಯ ಕಾಯಿಯಾಗಿದ್ದಾರೆ