Sunday, June 2, 2013

ತಲೆಗೆ ಕಾಯಿ ಒಡೆಸಿಕೊಳ್ಳುವ ಭಿನ್ನ ಕಲೆ


 ಗುರುವು ಇಬ್ಬರು ವೀರಕುಮಾರರ ತಲೆ ಮೇಲೆ ತೆಂಗಿನಕಾಯಿಯನ್ನು ಹೊಡೆದು ಕಾಯಿಪವಾಡ ಪ್ರದರ್ಶಿಸಿದರು.


ಜಾನಪದ ಆಚರಣೆಗಳು ವೈವಿದ್ಯಮಯ. ಅವುಗಳಲ್ಲಿ ಕೆಲವು ನೋಡಲು ಮೈನವಿರೇಳಿಸುವಂತೆ ಭೀಭತ್ಸವಾಗಿರುತ್ತವೆ. ಇಂಥಹ ವಿಶಿಷ್ಟವಾದ ಜನಪದ ಆಚರಣೆ ‘ತೆಂಗಿನಕಾಯಿ ಪವಾಡ’. ಕುರುಬ ಜನಾಂಗದವರು ನಡೆಸುವ ಈ ಜಾನಪದ ಕಲೆಯು ದೈವಾರಾಧಕ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಚಿಕ್ಕವರಿಂದ ಹಿಡಿದು ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವ ದೃಶ್ಯ ಎಂಥವರಿಗಾದರೂ ಮೈನವಿರೇಳಿಸುವಂಥದ್ದು.
 ಸಮಾಜದಲ್ಲಿ ಹಾಲಿನಲ್ಲಿ ನೀರು ಬೆರೆಯುವಂತೆ ಬಾಳ್ವೆ ನಡೆಸುವರೆಂದು ಕುರುಬ ಜನಾಂಗದವರನ್ನು ಹಾಲು ಮತಸ್ಥರೆಂದು ಕರೆಯುತ್ತಾರೆ. ಇವರ ಕುಲದೈವ ಬೀರೇದೇವರು. ಈಶ್ವರ ಬೀರೇಶ್ವರನಾಗಿ ಭೂಲೋಕಕ್ಕೆ ಬಂದನೆಂದು ಇವರು ನಂಬುತ್ತಾರೆ. ಇವರು ತಮ್ಮ ಕುಲದೇವರನ್ನು ಪೂಜಿಸುವ ಆಚರಣೆಯನ್ನು ಕುರುಬರ ದ್ಯಾವರ ಎನ್ನುತ್ತಾರೆ. ತಮ್ಮ ಮೂಲ ದೇವಸ್ಥಾನದ ಬಳಿ ಸೇರಿ ಆಚರಿಸುವ ಹಬ್ಬವಿದು. ಭೀರೇಶ್ವರ, ಭತ್ಯೇಶ್ವರ, ಸ್ದಿದೇಶ್ವರ, ಅಬ್ಬಿಣಿ ಬೀರೇಶ್ವರ, ಇಟ್ಟೇಶ್ವರ, ಕಾಶಿ ಬೀರೇಶ್ವರ, ಅಜ್ಜ ಬೀರೇಶ್ವರ, ಗುರು ಮೂರ್ತೇಶ್ವರ, ಮೈಲಾರ ಲಿಂಗೇಶ್ವರ ಹೀಗೆ ವಿವಿಧ ಹೆಸರಿನ ಮನೆದೇವರನ್ನು ಇವರಲ್ಲಿ ಹಲವರು ಹೊಂದಿದ್ದಾರೆ.
 ದ್ಯಾವರದಲ್ಲಿ ತಮಟೆ ಎತ್ತನ್ನು ಕಳಸ ಹಾಗೂ ಭಂಡಾರದ ಪೆಟ್ಟಿಗೆಯೊಂದಿಗೆ ತೆಗೆದುಕೊಂಡು ಹೋಗಿ ಗುರು ಅಥವಾ ಜಂಗಮರಿಂದ ಪೂಜೆ ಮಾಡಲಾಗುತ್ತದೆ. ಗುರುವು, ತಮಟೆ ಎತ್ತಿನ ಪಾದ ಮತ್ತು ಹಣೆ ತೊಳೆದು ಪೂಜಿಸಿ ಬೀರಪ್ಪನನ್ನು ಹೊಗಳುತ್ತಾ ವೀರಮಕ್ಕಳು, ವೀರಗಾರ್ರು ಅಥವಾ ಈರಗಾರ್ರ ತಲೆ ಮೇಲೆ ತೆಂಗಿನಕಾಯಿಯನ್ನು ಹೊಡೆಯುತ್ತಾರೆ.
 ಈರಗಾರ್ರು ಆವೇಶ ಬಂದಂತೆ ‘ಭಲರೇ, ಭಾಲ್ವರೇ ವೀರ, ವೀರಾಧಿವೀರ, ವಿಸ್ಮಯಕಾರ, ದಶಾವತಾರ, ಭಗಿನಿಕುಮಾರ, ರಾರಾ ನಾ ಮ್ದುದುಲ ವೀರಭದ್ರ, ಭಲರೇ ಬಾಲ್ವರೇ ವೀರ’ ಎಂಬ ಘೋಷಣೆ ಕೂಗುತ್ತಿರುತ್ತಾರೆ. ಹುಡುಗರಿಂದ ಮುದುಕರವರೆಗೆ ತಮ್ಮ ತಲೆ ಮೇಲೆ ಕಾಯಿ ಹೊಡೆಸಿಕೊಳ್ಳಲು ಕೊರಳಿಗೆ ಹೂಮಾಲೆ ಹಾಕಿಕೊಂಡು ಗುರುಗಳಿಂದ ಆಶೀರ್ವಾದ ಪಡೆದುಕೊಂಡು ದಂಡಕಗಳನ್ನು ಹೇಳಿಸಿಕೊಂಡು ಸಿದ್ಧರಾಗಿರುತ್ತಾರೆ. ಹೀಗೆ ತಲೆ ಮೇಲೆ ಕಾಯಿ ಒಡೆಸಿಕೊಳ್ಳುವುದನ್ನು ತೆಂಗಿನಕಾಯಿ ಪವಾಡ ಎನ್ನುತ್ತಾರೆ. ಈ ಕಾಯಿ ಪವಾಡ ನೋಡಲು ಸಾವಿರಾರು ಮಂದಿ ಭಕ್ತಾದಿಗಳು ಕುತೂಹಲಿಗಳಾಗಿ ಸೇರಿರುತ್ತಾರೆ.



ಗುರುವು ವೀರಕುಮಾರರಿಗೆ ಚಾಟಿಯಿಂದ ಹೊಡೆಯುತ್ತಿರುವುದು.

 ‘ಈ ಪವಾಡದಲ್ಲಿ ಭಾಗವಹಿಸುವ ವೀರಮಕ್ಕಳು ಉಪವಾಸ ವ್ರತವನ್ನು ಕೈಗೊಂಡಿರುತ್ತಾರೆ. ಹೀಗೆ ಕಟ್ಟುನಿಟ್ಟಾಗಿ ಬಹಳ ಭಯ ಭಕ್ತಿಯಿಂದ ಇದಾಗ ಮಾತ್ರ ತಲೆ ಮೇಲೆ ಎಷ್ಟು ಕಾಯಿ ಒಡೆದರೂ ತಲೆಗೆ ಗಾಯವಾಗುವುದಿಲ್ಲ. ಒಂದು ವೇಳೆ ಕಾಯಿ ಕರಟ ತಗುಲಿ ರಕ್ತ ಬಂದ್ದಿದರೂ ಭಂಡಾರ ಹಚ್ಚುವುದರಿಂದ ದೇವರ ಶಕ್ತಿಯಿಂದ ಗಾಯ ವಾಸಿಯಾಗುತ್ತದೆ. ಅದಕ್ಕಾಗಿ ಯಾವುದೇ ರೀತಿಯ ಔಷಧಿ ಪಡೆಯಬೇಕಾದ ಅಗತ್ಯವಿಲ್ಲ. ಕೆಲವರು ನಿರಂತರವಾಗಿ ಕಾಯಿಗಳನ್ನು ಒಡೆಸಿಕೊಳ್ಳುತ್ತಾರೆ’ ಎಂದು ಕಾಯಿ ಒಡೆಯುವ ಕೈವಾರದ ಬಳಿಯ ಆಲಂಬಗಿರಿಯ ಗುರುಮಠದ ಗುರು ಸಿದ್ಧಲಿಂಗಾರಾಧ್ಯರು ಹೇಳುತ್ತಾರೆ.
 ‘ನಮ್ಮ ಜನಾಂಗದ ವಿಶಿಷ್ಟ ಆಚರಣೆಯಿದು. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಐದು ಅಥವಾ ಒಂಬತ್ತು ವರ್ಷಗಳಿಗೊಮ್ಮೆ ನಡೆಯುವ ನಮ್ಮ ದ್ಯಾವರಗಳಲ್ಲಿ ಮಾತ್ರ ಇದನ್ನು ನಾವುಗಳು ನೋಡಲು ಸಾಧ್ಯವಿತ್ತು. ಈಗ ಕನಕದಾಸರ ಜಯಂತ್ಯುತ್ಸವದಲ್ಲಿ ಈ ಕಲಾವಿದರನ್ನು ಮತ್ತು ಗುರುಗಳನ್ನು ಕರೆಸುವುದರಿಂದಾಗಿ ಈ ಆಚರಣೆಯನ್ನು ಎಲ್ಲ ಜನರೂ ನೋಡಲು ಸಾಧ್ಯವಾಗಿದೆ. ಈ ರೀತಿ ಪ್ರತಿ ವರ್ಷ ಕರೆಸುತ್ತಿದ್ದರೆ, ಈ ಜಾನಪದ ಕಲಾ ಸಂಸ್ಕೃತಿಗೆ ಪ್ರೋತ್ಸಾಹವನ್ನು ನೀಡಿದಂತಾಗುವುದು’ ಎಂದು ಕೆ.ಕೆ.ಪೇಟೆಯ ಆರ್.ಎಂ.ನವೀನ್‌ಕುಮಾರ್ ಹೇಳಿದರು.

1 comment:

Badarinath Palavalli said...

ಜಗದ ಉದ್ದಗಲಕ್ಕೂ ಆಚರಣೆಗಳು ಭಿನ್ನ ಭಿನ್ನ. ನಿಮ್ಮ ಈ ಬರಹ ನನಗೆ ಮೆಚ್ಚಿಗೆಯಾಯಿತು.

http://badari-poems.blogspot.in/