ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ
ಗ್ರಾಮದಲ್ಲಿರುವ ಗುಡ್ಡದ ಮೇಲಿನ ಬೃಹದಾಕಾರದ ಗೆರಿಗಿಗುಂಡು.
ಹಿಂದೆ ಬೆಟ್ಟಗುಡ್ಡಗಳ ಪ್ರದೇಶವನ್ನು
ಪಾಳೇಗಾರರು ಆಯ್ದುಕೊಂಡು ತಮ್ಮ ರಕ್ಷಣಾ ಸ್ಥಾನವನ್ನಾಗಿಸಿಕೊಳ್ಳುತ್ತಿದ್ದರು. ಅಂಥಹ ಪ್ರದೇಶಗಳು ಈಗಿನ
ಕಾಲದಲ್ಲಿ ಹಳೆಯ ನೆನಪುಗಳ ಪಳೆಯುಳಿಕೆಗಳಾಗಿ ನಿಸರ್ಗದತ್ತ ಆಕರ್ಷಕ ಪ್ರದೇಶಗಳಾಗಿ ಮಾರ್ಪಾಡಾಗಿವೆ.
ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮಕ್ಕೆ ಹೊಂದಿಕೊಂಡಿರುವ ಗೆರಿಗಿಗುಂಡು
ಇಂಥಹ ಸೋಜಿಕ ಸ್ಥಳಗಳಲ್ಲೊಂದು. ಊಹಿಸಲಸಾಧ್ಯವಾದ ಬೃಹದಾಕಾರದ ಕಲ್ಲಿನ ಗುಂಡು ಇಲ್ಲಿ ಗುಡ್ಡದ ಮೇಲ್ಭಾಗದಲ್ಲಿದೆ.
ಈ ಗುಡ್ಡದಲ್ಲಿ ಹಲವಾರು ದೊಡ್ಡ ಆಕಾರದ ಕಲ್ಲುಗುಂಡುಗಳಿದ್ದರೂ ಈ ಗುಂಡು ಮಾತ್ರ ಅತಿ ದೊಡ್ಡದು. ಇದನ್ನು
ಹಿಂದಿನಿಂದಲೂ ಇಲ್ಲಿನವರು ಗೆರಿಗಿಗುಂಡು ಎಂದೇ ಕರೆಯುತ್ತಾರೆ.
ಈ ಬೃಹತ್ತಾದ ಗೆರಿಗಿಗುಂಡಿನ ಮೇಲೆ ಹಿಂದೆ ಪಾಳೆಗಾರರು ನಿರ್ಮಿಸಿದ್ದ
ಬುರುಜಿನ ಕೆಲ ಭಾಗವಿದ್ದು, ಇದೊಂದು ಅವರ ರಕ್ಷಣಾ ಸ್ಥಾನವಾಗಿರಬಹುದೆಂಬುದಕ್ಕೆ ಪುರಾವೆ ಸಿಗುತ್ತದೆ.
ಇಲ್ಲಿ ಮನುಷ್ಯನ ಮುಖದ ಆಕಾರದ ಕಲ್ಲು ಬಂಡೆಗಳು, ತ್ರಿಕೋನಾಕಾರದ್ದು, ಇನ್ನೇನು ಬೀಳುತ್ತದೆಯೋ ಎಂದು
ಗಾಬರಿಹುಟ್ಟಿಸುವಂತದ್ದು ಮುಂತಾದ ವಿವಿಧ ರೂಪಗಳನ್ನು ಗುರುತಿಸಬಹುದಾದ ಬಂಡೆಕಲ್ಲುಗಳಿವೆ.
ಗ್ರಾಮಸ್ಥರು ಗೆರಿಗಿಗುಂಡಿನ ಕೆಳಗೆ ಗೆರಿಗಿಲಮ್ಮ ದೇವಾಲಯವನ್ನು
ನಿರ್ಮಿಸಿದ್ದಾರೆ. ಗೆರಿಗಿಗುಂಡು ಮುಂಭಾಗದಲ್ಲಿ ಮುಜರಾಯಿ ಇಲಾಖಾ ವ್ಯಾಪ್ತಿಗೆ ಬರುವ ಲಕ್ಷ್ಮೀನರಸಿಂಹಸ್ವಾಮಿ
ದೇವಾಲಯವಿದೆ. ಇಲ್ಲಿ ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ವಿಶೇಷ ಜಾತ್ರೆಯನ್ನು ನಡೆಸಲಾಗುತ್ತದೆ.
ಮನುಷ್ಯನ ಮುಖವನ್ನು ಹೊಲುವ ಕಲ್ಲುಗಳು.
‘ಪಾಳೇಗಾರರು ಇಲ್ಲಿ ಕೋಟೆಯನ್ನು
ನಿರ್ಮಿಸಿದ್ದರಂತೆ. ಅವರು ಇಲ್ಲಿ ಏಳು ಕೊಪ್ಪರಿಗೆ ನಿಧಿ ನಿಕ್ಷೇಪವನ್ನು ಇಟ್ಟಿರುವರೆಂದು ದಂತಕಥೆಗಳು
ಈಗಲೂ ಗ್ರಾಮದ ಹಿರಿಯರ ಬಾಯಲ್ಲಿ ಕೇಳಬಹುದಾಗಿದೆ. ಪಾಳೇಗಾರರು ಗಂಜಿಗುಂಟೆಯ ಸುತ್ತಮುತ್ತಲೂ ಏಳು ಕೆರೆಗಳನ್ನು
ನಿರ್ಮಿಸಿದ್ದರು. ಇಲ್ಲಿ ಬಹಳ ಜನರಿದ್ದು ಪ್ರತಿದಿನ ಅನ್ನ ಬಸಿದ ಗಂಜಿ ಒಂದು ದೊಡ್ಡ ಗುಣಿಯಲ್ಲಿ ಶೇಖರಣೆಯಾಗುತ್ತಿತ್ತು.
ಅದರಿಂದಲೇ ಈ ಪ್ರದೇಶಕ್ಕೆ ಗಂಜಿಗುಂಟೆ ಎಂಬ ಹೆಸರು ಬಂತು. ಇಲಿನ ಗೆರಿಗಿಗುಂಡಿನ ಕೆಳಗೆ ಒಂದು ದೊಡ್ಡ
ಗವಿಯಿದೆ. ಇಲಿ ಸಾಧುಗಳು ವಾಸವಿರುತ್ತಾರೆ’ ಎಂದು ಗಂಜಿಗುಂಟೆಯ ಶಾಲಾ ಶಿಕ್ಷಕ ಎಲ್.ವಿ.ವೆಂಕಟರೆಡ್ಡಿ
ತಿಳಿಸಿದರು.
ವಾಲಿ ನಿಂತಿರುವ ಬಂಡೆಯ ಮೇಲೂ ಕಲ್ಲಿನ ಗೋಪುರ.
‘ವರ್ಷಕ್ಕೊಮ್ಮೆ ಮಾಘ ಪೌರ್ಣಮಿಯಂದು
ಗುರುವಂದನಾ ಹಾಗೂ ಭಜನೆ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಳ್ಳುತ್ತಾರೆ. ಇಲ್ಲಿಗೆ ಹತ್ತಿರವಿರುವ
ತಲಕಾಯಲಬೆಟ್ಟದಲ್ಲಿ ನಡೆಯುವ ರಥೋತ್ಸವದ ದಿನ ಇಲ್ಲಿನ ಗೆರಿಗಿಗುಂಡು ಗವಿಯಲ್ಲಿ ಅನ್ನಸಂತರ್ಪಣೆಯನ್ನು
ಮಾಡಲಾಗುತ್ತದೆ. ಇಲ್ಲಿನ ವಾತಾವರಣವಂತೂ ಅದ್ಭುತವಾಗಿದೆ. ಮೇಲಿನಿಂದ ಕಾಣುವ ಭೂದೃಶ್ಯಗಳು ಕಣ್ಣಿಗೆ ಆನಂದ
ನೀಡಿದರೆ, ಹೊರಗೆ ಎಷ್ಟೇ ಬಿಸಿಯಿದ್ದರೂ ಗೆರಿಗಿಗುಂಡಿನ ಕೆಳಗೆ ಸದಾ ತಂಪಾಗಿದ್ದು ಜೀವಕ್ಕೆ ತಂಪೆನಿಸುವಂತಿರುತ್ತದೆ.
ಗುಡ್ಡ ಹತ್ತಿ ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ಕೆಲಹೊತ್ತು ಇದು ಬಂದರೆ ದೇಹ ಮತ್ತು ಮನಸ್ಸಿಗೆ ನವಚೈತನ್ಯ
ಬರುತ್ತದೆ’ ಎಂದು ಅವರು ವಿವರಿಸಿದರು.
2 comments:
ಮನಸ್ಸಿಗೆ ತಂಪೆರೆಯುವ ಲೇಖನ.
ಗಂಜಿಗುಂಟೆಯ ಲೇಖನ ಸಚಿತ್ರ ಬರಹ. ಸವಿವರವಾಗಿ ಮೂಡಿಬಂದಿದೆ.
ನನ್ನ ಹಳೇ ಕೋಲಾರ ಜಿಲ್ಲೆಯ ಸ್ಠಳ ವಿಶೇಷಗಳನ್ನು ಇನ್ನಾದರೂ ಜನ ಗಮನಿಸಬೇಕು. ಅಲ್ಲವೇ ಗೆಳೆಯ.
ನನ್ನ ಬ್ಲಾಗಿಗೂ ಸ್ವಾಗತ.
www.badari-poems.blogspot.com
Post a Comment