Friday, July 13, 2012

ಕೀಟ ಬೇಟೆ

ಚೀಲದಲ್ಲಿ ತುಂಬಿರುವ ಈಸುಳ್ಳಿಗಳು.

ಮಾನವನ ಆಹಾರಪದ್ಧತಿಯಲ್ಲಿ ಕೀಟಭಕ್ಷಣೆಯೂ ಸೇರಿದೆ. ಎಲೆಗಳನ್ನು ಸೇರಿಸಿ ಗೂಡು ಕಟ್ಟುವ ಕಟ್ಟಿರುವೆ, ಜೇನು ಹುಟ್ಟಿನಲ್ಲಿರುವ ಹಾಲುಳ ಎನ್ನುವ ಬಿಳಿಹುಳಗಳು, ಅತ್ತಿ ಹಣ್ಣಿನಲ್ಲಿನ ಹುಳುಗಳು ಹಾಗೂ ಮಳೆಹುಳುಗಳು ಗ್ರಾಮೀಣ ಭಾಗದ ಜನರ ಆಹಾರದ ಒಂದು ಭಾಗವಾಗಿದೆ. ರುಚಿ ಮತ್ತು ಪ್ರೋಟೀನ್ ಅಂಶ ಹೆಚ್ಚಿರುವುದರಿಂದ ಹಲವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಮಕ್ಕಳಿಗೂ ತಿನ್ನಿಸುತ್ತಾರೆ.
 ಈಚೆಗೆ ಬಿದ್ದ ಭರಣಿ ಮಳೆಗೆ ನೆಲದಾಳದಿಂದ ರೆಕ್ಕೆ ಮೂಡಿದೊಡನೆ ಮೇಲೇಳುತ್ತಿದ್ದ ಗೆದ್ದಲು ಹುಳುಗಳನ್ನು ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿಯ ಹೊರವಲಯದಲ್ಲಿ ಪಂಜಿನ ಸಹಾಯದಿಂದ ಗ್ರಾಮಸ್ಥರು ಹಿಡಿದು ಗುಡ್ಡೆ ಹಾಕಿ ಚೀಲದೊಳಕ್ಕೆ ತುಂಬುತ್ತಿದ್ದರು. ಅತ್ಯಂತ ರುಚಿಕರ ಆಹಾರವೆಂಬುದು ಇದನ್ನು ಗ್ರಾಮೀಣರು ಇಷ್ಟಪಡುತ್ತಾರೆ.
 ರೆಕ್ಕೆಬಂದಿರುವ ಗೆದ್ದಲು ಹುಳುಗಳನ್ನು ಗ್ರಾಮೀಣರು ಈಸುಳ್ಳಿ, ಈಸಿಳ್ಳು, ಈಸೀಗಳು ಎಂದು ಕರೆಯುತ್ತಾರೆ. ಹಲವಾರು ಹಳ್ಳಿಗಳಲ್ಲಿ ಮಳೆ ಬಂದು ನಿಂತ ದಿನ ಹುಳುಗಳನ್ನು ಹಿಡಿಯುವುಕ್ಕೇ ಸಮಯ ಮೀಸಲಿಡುತ್ತಾರೆ. ಬೆಳಕಿನೆಡೆಗೆ ಆಕರ್ಷಿತವಾಗುವ ಈ ಹುಳುಗಳನ್ನು ಜನರು ಪಂಜು, ಲೈಟು, ಬೆಂಕಿ, ಲ್ಯಾಟೀನು ಮುಂತಾದವುಗಳಿಂದ ಆಕರ್ಷಿಸಿ ಒಟ್ಟುಗೂಡಿಸಿ ಸಂಗ್ರಹಿಸುತ್ತಾರೆ.
ಅಶ್ವಿನಿ, ಭರಣಿ ಮತ್ತು ಕೃತಿಕಾ ಮಳೆಯ ಸಂದರ್ಭದಲ್ಲಿ ಮಾತ್ರ ಸಿಗುವ ಈ ಮಳೆಹುಳುಗಳ ಸಂಗ್ರಹಣೆಗೆ ಹಲವು ಉಪಾಯಗಳನ್ನೂ ಮಾಡುತ್ತಾರೆ. ನೆಲಮಟ್ಟದಲ್ಲಿ ನೀರಿರುವ ಮಡಿಕೆಯನ್ನು ಹೂತಿಟ್ಟು ಅದರ ಬಾಯಿಯ ಬಳಿ ಬೆಳಕಿನ ಮೂಲವನ್ನಿಟ್ಟು ಕೆಲವರು ಹಿಡಿದರೆ, ಕೆಲವರು ಹುತ್ತವನ್ನು ಹುಡುಕಿ ಅದರ ಮೇಲೆ ಸೊಪ್ಪಿನ ಗುಡಾರವನ್ನು ನಿರ್ಮಿಸಿ ಬೆಳಕಿನ ಮೂಲವನ್ನಿಟ್ಟು ಹುಳುಗಳನ್ನು ಸಂಗ್ರಹಿಸುವರು. ಕೆಲವು ಹಳ್ಳಿಗಳಲ್ಲಿ ಒಂದು ಲೋಟ ಹುಳುಗಳನ್ನು ೮ ರಿಂದ ೧೦ ರೂಗಳಿಗೆ ಮಾರಾಟವನ್ನೂ ಮಾಡುವುದೂ ಉಂಟು.

 
ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿಯ ಹೊರವಲಯದಲ್ಲಿ ಈಚೆಗೆ ಬಿದ್ದ ಭರಣಿ ಮಳೆಗೆ ನೆಲದಾಳದಿಂದ ರೆಕ್ಕೆ ಮೂಡಿದೊಡನೆ ಮೇಲೇಳುತ್ತಿದ್ದ ಗೆದ್ದಲುಹುಳುಗಳನ್ನು ಪಂಜಿನ ಸಹಾಯದಿಂದ ಗ್ರಾಮಸ್ಥರು ಹಿಡಿದು ಗುಡ್ಡೆ ಹಾಕಿ ಚೀಲದೊಳಕ್ಕೆ ತುಂಬುತ್ತಿರುವುದು. 


‘ಈ ಮಳೆಹುಳುಗಳನ್ನು ಸಂಗ್ರಹಿಸುವುದು ಒಂದು ಭಾಗವಾದರೆ ಇದರ ಸಂಸ್ಕರಣೆ ಮತ್ತೊಂದು ಮುಖ್ಯ ಭಾಗ. ರೆಕ್ಕೆ ಕಳಚಿರುವ ಹುಳುಗಳನ್ನು ಬತ್ತದ ಜರಡಿಯಲ್ಲಿ ಹಾಕಿ ಕಲಕಿ ರೆಕ್ಕೆ ಹಾಗೂ ಇನ್ನಿತರ ಕಸದಿಂದ ಬೇರ್ಪಡಿಸುತ್ತಾರೆ. ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಬಾಣಲಿಯಲ್ಲಿ ಹದವಾಗಿ ಹುರಿಯಲಾಗುತ್ತದೆ. ಇದಕ್ಕೆ ಬೆಳ್ಳುಳ್ಳಿ, ಉಪ್ಪು ಮೆಣಸು ಸೇರಿಸಿದರೆ ರುಚಿಕಟ್ಟಾದ ಆಹಾರವಾಗುತ್ತವೆ. ಇದರಲ್ಲಿ ಯಥೇಚ್ಛವಾಗಿ ಪ್ರೋಟೀನ್ ಅಂಶವಿರುವುದರಿಂದ ಮಕ್ಕಳಿಗೂ ಒಳ್ಳೆಯದು. ಹಿಂದೆ ಎಳೆಯ ಮಕ್ಕಳು ಬಡಕಲಾಗಿದ್ದರೆ ಅಂತಹ ಮಕ್ಕಳಿಗೆ ಹುತ್ತದ ತಳದಲ್ಲಿರುವ ದೊಡ್ಡ ಆಕಾರದ ರಾಣಿ ಗೆದ್ದಲು ಹುಳುವನ್ನು ತಂದು ಮಕ್ಕಳಿಗೆ ತಿನ್ನಿಸುವ ಪರಿಪಾಠವೂ ಇತ್ತು. ನಾವಂತೂ ಪ್ರತಿವರ್ಷ ಈಸಿಳ್ಳುಗಳನ್ನು ಹಿಡಿದು ತಿನ್ನುತ್ತೇವೆ’ ಎನ್ನುತ್ತಾರೆ ಕಾಚನಾಯಕನಹಳ್ಳಿಯ ಶ್ರೀನಿವಾಸ್.
 ಮನುಷ್ಯರಿಗಷ್ಟೇ ಅಲ್ಲದೆ ಕೋತಿಗಳಿಗೂ ಈಸುಳ್ಳಿಗಳು ಬಹಳ ಪ್ರಿಯ. ಓತಿಕ್ಯಾತ, ಕಾಗೆ ಮುಂತಾದ ಹುಳು ಭಕ್ಷಕ ಜೀವಿಗಳಿಗೆಲ್ಲಾ ಇದು ಬಹು ಮುಖ್ಯವಾದ ಆಹಾರವಾಗಿದೆ.
 ಸುಮಾರು ಐವತ್ತು ಮಿಲಿಯನ್ ವರ್ಷಗಳಿಂದಲೂ ಈ ಭೂಮಿಯಲ್ಲಿ ವಾಸಿಸುತ್ತಿರುವ ಸಂಘಜೀವಿಗಳಾದ ಗೆದ್ದಲುಗಳು ಮಾನವನಿಗಿಂತ ಮುಂಚಿನಿಂದಲೇ ತಮ್ಮ ಜೀವನಕ್ರಮವನ್ನು ರೂಪಿಸಿಕೊಂಡಿವೆ. ಇವುಗಳಲ್ಲಿ ೩೦೦೦ ಪ್ರಬೇಧಗಳಿವೆ. ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳಲ್ಲಿ ಇವು ಕಂಡುಬರುತ್ತವೆ. ಮರಮುಟ್ಟುಗಳಲ್ಲಿರುವ ಸೆಲ್ಯುಲೋಸ್ ಇದರ ಪ್ರಮುಖ ಆಹಾರ.
 ಗೆದ್ದಲು ಹುಳುಗಳಲ್ಲಿ ಮೊಟ್ಟೆಯಿಡುವ ರಾಣಿಯಲ್ಲದೆ, ರಾಜವಂಶ, ಕೆಲಸಗಾರ ಮತ್ತು ಸೈನಿಕ ಎಂಬ ಮೂರು ವರ್ಗಗಳಿವೆ. ಸಂತಾನೋತ್ಪತ್ತಿ ನಡೆಸುವುದಷ್ಟೇ ರಾಜವಂಶದ ಹುಳುಗಳ ಕೆಲಸ. ಬೇಸಿಗೆಯ ಕಡೆಯಲ್ಲಿ ಮೊದಲ ಮಳೆ ಬಿದ್ದೊಡನೆಯೇ ಈ ರಾಜವಂಶದ ಹುಳುಗಳಿಗೆ ರೆಕ್ಕೆ ಮೂಡುತ್ತವೆ. ಹೊಸ ಸಂಸಾರ ಹೂಡಲು ತಯಾರಾದ ವಯಸ್ಸಿಗೆ ಬಂದ ಗೆದ್ದಲು ಹುಳುಗಳಿಗೆ ರೆಕ್ಕೆ ಮೂಡಿ ಗೂಡಿನಿಂದ ಹೊರಕ್ಕೆ ಬರುತ್ತವೆ. ಇದು ಅವುಗಳ ಜೀವನದ ಮೊದಲ ಮತ್ತು ಕಡೆಯ ಹಾರಾಟ. ಸೂಕ್ತ ಸಂಗಾತಿಯನ್ನರಸಿ ನಡೆಸುವ ಕಟ್ಟ ಕಡೆಯ ಹಾರಾಟವಿದು.
 ಸೂಕ್ತ ಸಂಗಾತಿ ಸಿಕ್ಕೊಡನೆ, ತಮ್ಮ ರೆಕ್ಕೆ ಕಳಚಿಕೊಂಡು ಇವು ಸೂಕ್ತ ಸ್ಥಳ ಹುಡುಕಿ ತಮ್ಮ ಸಂಸಾರವನ್ನು ಪ್ರಾರಂಭಿಸುತ್ತವೆ. ಹೆಣ್ಣು ಮೊಟ್ಟೆಯಿಡತೊಗುತ್ತದೆ. ದಿನಕ್ಕೆ ಸಾವಿರಾರು ಮೊಟ್ಟೆಯಿಡುವ ಹೆಣ್ಣು ಹುಳ ಶೀಘ್ರವಾಗಿ ತನ್ನದೇ ಯಶಸ್ವಿ ಕುಟುಂಬದ ಒಡತಿಯಾಗುತ್ತದೆ. ಮಣ್ಣಿನ ಫಲವತ್ತತೆ, ಅಂತರ್ಜಲ ಹೆಚ್ಚಿಸುವಲ್ಲಿ, ಹಲವಾರು ಪ್ರಾಣಿಗಳ ಆಹಾರವಾಗಿ ಉಪಯುಕ್ತ ಜೀವಿಯಾಗಿದೆ.

No comments: