Friday, July 13, 2012

ಬೇಟೆಯ ನೆನಪುಗಳು


ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಹಕ್ಕಿಪಿಕ್ಕಿಕಾಲೋನಿಯಲ್ಲಿ ಹಕ್ಕಿಪಿಕ್ಕಿಗಳ ಬಳಿ ಇರುವ, ಹಿಂದೆ ಅವರು ಬೇಟೆಗಾಗಿ ಬಳಸುತ್ತಿದ್ದ ಬೇಟೆಯ ಪರಿಕರಗಳು.

“ವಾಕ್ಕೂ ಸೊಕ್ಕು ಕಡಮ ಭಿಂಗು” ಎಂದರೆ ಗೌಜಹಕ್ಕಿಯ ಬಲೆ ಎಂದರ್ಥ. “ಖಡಾ ಬಲ್ಡಾಪರ್ ಟಾಂಗ್‌ಚೀರಿ ಪಡೀಸ್” ಎನ್ನುವುದು ಪುರಲಕ್ಕಿ ಬಲೆಯನ್ನು. ಈ ನುಡಿಗಟ್ಟುಗಳು ವಾಗ್ರಿ ಭಾಷೆಯಲ್ಲಿವೆ. ಇದು ಹಕ್ಕಿಪಿಕ್ಕಿಗಳ ಭಾಷೆ. ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬಾದ ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿದೆ. ಹಿಂದೆ ಬೇಟೆ ಮತ್ತು ಆಹಾರ ಸಂಗ್ರಹಣೆಯ ಮೂಲಕ ವ್ಯವಸ್ಥಿತವಾಗಿ ಸಂಘಟಿತವಾಗುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಾ ಜೀವನ ರೂಪಿಸಿಕೊಂಡಿದ್ದ ಸಮಯದಲ್ಲಿ ಇವರು ಶುದ್ಧ ಅಲೆಮಾರಿಗಳಾಗಿದ್ದರು. ಹಕ್ಕಿಪಿಕ್ಕಿಯರು ಹಿಂದೆ ಬೇಟೆಗಾಗಿ ಬಳಸುತ್ತಿದ್ದ ಚಿತ್ರ ವಿಚಿತ್ರವಾದ ಬಲೆಗಳು, ಪೌದುಗಳು, ಹಕ್ಕಿಗಳನ್ನು ಹಿಡಿಯಲು ಬಳಸುತ್ತಿದ್ದ ಪರಿಕರಗಳು ಈಗಲೂ ಅವರ ಬಳಿ ಪಳೆಯುಳಿಕೆಯಂತಿವೆ. ಹಕ್ಕಿಪಿಕ್ಕಿಗಳು ಹಿಂದೆ ಗಿಡಮೂಲಿಕೆಗಳ ಜನಕರಾಗಿದ್ದರು. ನೋವುಗಳಿಗೆ ಮಸಾಜ್ ಮಾಡಲು ಬಳಸುವ ವಿವಿಧ ಎಣ್ಣೆಗಳನ್ನು ಇವರು ತಯಾರಿಸುತ್ತಿದ್ದರು. ಉಡದ ಎಣ್ಣೆ, ನವಿಲಿನ ಎಣ್ಣೆ, ಬೆಳ್ಳುಳ್ಳಿ ಎಣ್ಣೆ ಇತ್ಯಾದಿ ಇವರ ಸಂಗ್ರಹದಲ್ಲಿರುತ್ತಿದ್ದವು. ಕಾಡು ಉತ್ಪನ್ನಗಳಾದ ಗೆಡ್ಡೆ ಗೆಣಸು ಹಾಗೂ ಜೇನನನ್ನೂ ಸಹ ಮಾರಾಟ ಮಾಡುತ್ತಿದ್ದರು.
ಬೇಟೆಯಿಂದ ವ್ಯವಸಾಯಕ್ಕೆ ಮಾರ್ಪಾಡಾದ ನಂತರ ನೆಲೆ ನಿಂತು ಒಟ್ಟಾಗಿ ಬಾಳುವುದರೊಂದಿಗೆ ತಮ್ಮದೇ ಆದ ಸಾಮಾಜಿಕ ವ್ಯವಸ್ಥೆಯನ್ನು ಕಾಲಾಂತರದಲ್ಲಿ ಇವರು ರೂಪಿಸಿಕೊಂಡಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯಲ್ಲಿ ಹಕ್ಕಿಪಿಕ್ಕಿಕಾಲೋನಿ ಮತ್ತು ಬಾಳೇಗೌಡನಹಳ್ಳಿ ಎಂಬ ಎರಡು ಗ್ರಾಮಗಳಲ್ಲಿ ಇವರು ನೆಲೆಯನ್ನು ಕಂಡುಕೊಂಡಿದ್ದಾರೆ. ಇಂದು ಹಕ್ಕಿಪಿಕ್ಕಿಯರ ಸಂಪ್ರದಾಯಗಳು ಬಹುವಾಗಿ ಕಣ್ಮರೆಯಾಗುತ್ತಿವೆ. ಇವರ ಆರಂಭದ ದಿನಗಳಲ್ಲಿ ಬೇಟೆಯಾಡುವುದೇ ಮೂಲ ಕಸುಬಾಗಿತ್ತು. ಇವರು ತಮ್ಮ ಮೂಲಸ್ಥಾನವಾದ ಮಧ್ಯ ಭಾರತದ ವಿಂದ್ಯಪರ್ವತದಿಂದ, ಗುಜರಾತ್, ರಾಜಾಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕಗಳತ್ತ ಬೇಟೆಯನ್ನು ಅರಸುತ್ತಾ ಬಂದವರು. ಆಡುಮುಟ್ಟದ ಸೊಪ್ಪು ಹೇಗೆ ಇಲ್ಲವೋ, ಅದೇ ರೀತಿಯಲ್ಲಿ ಹಕ್ಕಿಪಿಕ್ಕಿಯರು ತಿನ್ನದೇ ಇರುವ ಸೊಪ್ಪು ಇಲ್ಲವೆನ್ನಬಹುದು. ನಾಡಿಗಿಂತ ಕಾಡಿನ ಜೀವನವೇ ಹೆಚ್ಚಾಗಿ ಅನುಭವಿಸಿದ ಈ ಬುಡಕಟ್ಟು ಕಾಡಿನಲ್ಲಿರುವ ಎಲ್ಲಾ ಸೊಪ್ಪುಗಳನ್ನು ತಮ್ಮ ಆಹಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಇವರ ಮಾಂಸಾಹಾರದ ಅಡುಗೆಯ ಬಗ್ಗೆ ತಿಳಿಯುವುದರಿಂದ ಇವರು ಎಂಥೆಂಥಹ ಬೇಟೆಯನ್ನಾಡುತ್ತಿದ್ದರು ಎಂಬುದರ ಬಗ್ಗೆಯೂ ತಿಳಿದುಬರುತ್ತದೆ. ತಿತರೋನಿ(ಗೌಜಲಹಕ್ಕಿ), ಗೇರಾಜನಿ(ಪುರಲಕ್ಕಿ), ನ್ಹೋರಿನಿ(ಗುಳ್ಳೇನರಿ), ಮುಂಗಶ್ನಿ(ಮುಂಗುಸಿ), ಗೋಯಿನಿ(ಉಡ), ಗಿಲೋರಿನಿ(ಅಳಿಲು), ಚಕತಾಂಡೋನಿ(ಹಾಲಕ್ಕಿ), ಗುಗ್ಗೂನಿ(ಗೂಬೆ), ಢೋಳ್ನಿ(ಸೊರಕ್ಕಿ), ಕೊಂಗಾನಿ(ಬಿಳಿಕೊಕ್ಕರೆ), ಶಾಮ್ಮುರಗನಿ(ಕರಿತಲೆಯ ಬಾತುಕೋಳಿ), ಖೇಕಡನಿ(ಏಡಿ), ಮಾತ್ಸುಲುನಿ(ಮೀನು), ಗೂಬ್ನಿ(ಹೆಗ್ಗಣ), ಲಕ್ಕಡ್‌ಪೋಡನಿ(ಮರಕುಟಿಕಹಕ್ಕಿ), ಪರ್ಯಾವೋನಿ(ಪಾರಿವಾಳ), ಹರಣ್ಣಿ(ಚಿಗರೆ), ದಾಂತಿ(ಮೊಲ), ಡುಕರ್ನಿ(ಕಾಡುಹಂದಿ), ಭೋಕಡಾನಿ(ಆಡು), ಮುರಗಾನಿ(ಕೋಳಿ), ಮೇಂಡೋನಿ(ಕುರಿ), ಭೇಖೋನಿ(ಕೋಣ), ಬಿಲ್ಲಾಡಾನಿ(ಕಾಡುಬೆಕ್ಕು). ಈ ರೀತಿಯ ಇವರ ಆಹಾರ ಕ್ರಮ ಹಿಂದೆ ಇದ್ದ ಇವರ ಅಲೆಮಾರಿತನ, ಕಾಡಿನ ಜೀವನ ಮತ್ತು ಇವರ ಆರ್ಥಿಕ ಪರಿಸ್ಥಿತಿಯನ್ನೂ ತಿಳಿಸುತ್ತದೆ.

ಹಕ್ಕಿಗಳನ್ನು ಹಿಡಿಯಲು ಹೇಗೆ ಪೌದುಗಳನ್ನು ಹರಡಬೇಕೆಂದು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿರುವುದು.

‘ಹಿಂದೆ ಬೇಟೆಯೇ ನಮ್ಮ ಬದುಕಾಗಿತ್ತು. ಆಗ ನಾವು ಬಹುತೇಕ ಪ್ರಾಣಿ ಪಕ್ಷಿಗಳನ್ನು ಜೀವ ಸಹಿತ ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಕೌಜುಗ ಜಾತಿಯ ನೆಲದ ಮೇಲೆ ಚಲಿಸುವ ಹಕ್ಕಿಗಳನ್ನು ಪೌದುಗಳನ್ನು ಬಳಸಿ ಹಿಡಿಯುತ್ತಿದ್ದೆವು. ಮೊಲ, ಮುಂಗುಸಿಯಂಥಹ ಪ್ರಾಣಿಗಳನ್ನು ಬೋನುಗಳನ್ನು ಬಳಸಿ ಹಿಡಿಯುತ್ತಿದ್ದೆವು. ಕೆಲವು ಪ್ರಾಣಿಗಳನ್ನು ಹಿಡಿಯಲು ಮೊಟ್ಟೆ, ಒಣಮೀನು, ಮಾಂಸದ ವಾಸನೆಗೆ ಆಕರ್ಷಿಸಿ ಬಲೆಗೆ ಬೀಳಿಸುತ್ತಿದ್ದೆವು. ಬೋನನ್ನು ಇಟ್ಟು ಹಸುವಿನೊಂದಿಗೆ ತಲೆಗೆ ಟೋಪಿ ಮಾಡಿಕೊಂಡು ಕರುವಿನಂತೆ ನಟಿಸುತ್ತಾ ಬೋನಿಗೆ ಓಡಿಸಿ ಕೌಜುಗಗಳನ್ನು ಹಿಡಿಯುತ್ತಿದ್ದೆವು. ಆದರೆ ಸರ್ಕಾರ ಬೇಟೆಯನ್ನು ನಿಷೇಧಿಸಿರುವುದರಿಂದ ನಾವು ಈಗ ವ್ಯವಸಾಯ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಕೈಕಸುಬನ್ನು ಮಾಡಿ ಜೀವನ ನಡೆಸುತ್ತೇವೆ’ ಎನ್ನುತ್ತಾರೆ ಹಕ್ಕಿಪಿಕ್ಕಿಯರಲ್ಲಿ ಹಿರಿಯರಾದ ವೈರ್‌ಮಣಿ.

No comments: