Tuesday, February 2, 2010

ಹಾಳು ಬಾವಿಯಲ್ಲಿ ಮಂಡಲ

ಆ ದಿನ ಮಧ್ಯಾಹ್ನ ಮನೆಗೆ ಊಟಕ್ಕೆ ಹೊರಟಿದ್ದೆ. ಕೋಟೆ ಸರ್ಕಲ್ ತಿರುಗುತ್ತಿದ್ದಂತೆ ಈಟೀವಿಯ ವರದಿಗಾರ ಬಾಲಕೃಷ್ಣ ಕಾಣಿಸಿದರು. ಅವರು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಬಂದಿದ್ದಾರೆಂದರೆ ಏನೋ ಹೊಸ್ ಸಂಗತಿಯಿರಬೇಕು ಎಂಬ ಕುತೂಹಲ ಉಂಟಾಯಿತು. "ಏನ್ಸಾರ್ ವಿಶೇಷ?" ಅಂದೆ. "ಪಿಂಡಪಾಪನಹಳ್ಳಿಯಲ್ಲಿ ಎರಡು ಮಂಡಲ ಹಾವುಗಳಿದೆಯಂತೆ. ನಮ್ಮ ಸ್ನೇಕ್ ನಾಗರಾಜ್ ಹಿಡೀತಾನೆ. ನೀವೂ ಬನ್ನಿ ಹೋಗಿಬರೋಣ" ಅಂದರು.ಸ್ನೇಕ್ ನಾಗರಾಜ್ ಕೊತ್ತನೂರು ಗ್ರಾಮದವನು. ಹಾವುಗಳನ್ನು ಹಿಡಿಯುವುದರಲ್ಲಿ ನಮ್ಮ ತಾಲ್ಲೂಕಿಗೇ ಹೆಸರುವಾಸಿ. ಮನೆಗಳಿಗೆ ಬರುವ ಹಾವುಗಳನ್ನಷ್ಟೇ ಅಲ್ಲದೆ ಹಾಳು ಬಾವಿಗಳಲ್ಲಿ ಬಿದ್ದಿರುವಂತಹ ಹಾವುಗಳನ್ನೆಲ್ಲಾ ಹಿಡಿದು ದೂರದ ಕಾಡಿನಲ್ಲಿ ಬಿಟ್ಟು ಬರುವ ಉರಗಪ್ರೇಮಿ.

ನಾನು ಹೋದಾಗ ಎಲ್ಲರೂ ಛಾಯಾರಮೇಶನ ಸ್ಟುಡಿಯೋ ಬಳಿ ಸೇರಿದ್ದರು. ಸ್ನೇಕ್ ನಾಗರಾಜ್ ನನ್ನನ್ನು ನೋಡಿ "ನಮಸ್ಕಾರ ಸರ್" ಅಂದ. ಆತನ ಕೈಲಿ ಚೀಲವೊಂದಿತ್ತು. "ಚೀಲದಲ್ಲಿ ಏನಿದೆ?" ಎಂದು ಕೇಳಿದೆ. "ನಾಗರಹಾವು ಇದೆ ಸರ್. ಇಲ್ಲೇ ಗಿಡ್ನಳ್ಳಿಯಲ್ಲಿ ಹಾಳು ಬಾವಿಯಲ್ಲಿ ಬಿದ್ದಿತ್ತು" ಎಂದ. "ಅಲ್ಲಪ್ಪಾ, ಹಾಳು ಬಾವೀಲಿ ಬಿದ್ದಿದ್ರೆ ನಿಂಗೇನು. ಮನೆಗೇನೂ ನುಗ್ಗಿರಲಿಲ್ಲವಲ್ಲ. ಅದನ್ಯಾಕೆ ಹಿಡಿದು ತಂದೆ?" ಎಂದು ಕೇಳಿದೆ. "ಪಾಪ ಅದಕ್ಕಲ್ಲಿ ಊಟ ಇಲ್ದೇ ವೀಕಾಗಿಬಿಟ್ಟಿದೆ ಸರ್. ಕಾಡಲ್ಲಿ ಬಿಟ್ಬುಡ್ತೀನಿ. ಆರಾಮಾಗಿರ್ತದೆ" ಎಂದು ಅನುಕಂಪದ ಮಾತಾಡಿದ.
ಶಶಿ, ರಮೇಶ್, ಬಾಬು, ಬಾಲಕೃಷ್ಣ, ಸ್ನೇಕ್ ನಾಗರಾಜ್ ಮತ್ತು ನಾನು ಬೈಕುಗಳಲ್ಲಿ ಪಿಂಡಪಾಪನಹಳ್ಳಿಗೆ ಹೊರಟೆವು. ಹಳ್ಳಿಯ ಒಳಗೆ ತೋಪುಗಳ ನಡುವೆ ತೋಟವೊಂದಿತ್ತು. ಅದರಲ್ಲಿ ಹಾಳು ಬಾವಿಯಿತ್ತು. ಅಂದಾಜು ೭೦ ರಿಂದ ೮೦ ಅಡಿ ಆಳವಿರಬಹುದು. ಮುಂಚೆ ನೀರು ಸಮೃದ್ಧವಾಗಿದ್ದ ಕಾಲದಲ್ಲಿ ಬಳಸುತ್ತಿದ್ದ ಮೆಷಿನ್ ರೂಂ(ಮೋಟರ್ ಇಡುವ ಸ್ಟಳ) ಕೂಡ ಶಿಥಿಲವಾಗಿತ್ತು. ಮೆಷಿನ್ ರೂಂ ಒಳಗಿಂದ ಹಗ್ಗ ಕಟ್ಟಿಕೊಂಡು ನಾಗರಾಜ್ ಸಲೀಸಾಗಿ ಬಾವಿಯೊಳಗೆ ಇಳಿದುಬಿಟ್ಟ. ನಮಗಿಲ್ಲಿ ಬಗ್ಗಿ ನೋಡಲೂ ಭಯ. ಕಾಲು ಜರುತ್ತದೆ. ಆದರೂ ಕ್ಯಾಮೆರಾ ಮುಂದೆ ಹಿಡಿದು ಕ್ಲಿಕ್ಕಿಸಲು ಹೋದೆ. ಶಶಿ ತಡೆದ. "ರಿಸ್ಕ್ ತಗೋಬೇಡಿ. ಮೇಲೆ ತರುತ್ತಾನೆ. ಆಮೇಲೆ ಫೋಟೋ ತೆಗೆದರಾಯ್ತು" ಎಂದು ನನ್ನನ್ನು ಹಿಂದಕ್ಕೆ ಎಳೆದ.

ಹಾಳುಬಾವಿಯಲ್ಲಿ ಹಾವು ಹಿಡಿಯುತ್ತಿರುವ ನಾಗರ‍ಾಜ್




ನಾಗರಾಜ್ ಎರಡು ಚೀಲದಲ್ಲಿ ಎರಡು ಹಾವುಗಳನ್ನು ತುಂಬಿಕೊಂಡು ಸಲೀಸಾಗಿ ಮೇಲೆ ತಂದ. ಸ್ವಲ್ಪ ದೂರದಲ್ಲಿ ಕೆರೆಯ ಬಳಿಗೆ ಹೋಗಿ ಬಯಲಲ್ಲಿ ಬಿಟ್ಟ. ಬಾಲಕೃಷ್ಣ ವೀಡಿಯೋ ತೆಗೆದರು. ಸಂದರ್ಶನ ಮಾಡಿದರು.



ಮಂಡಲ ಹಾವಿನ ವಿಷದಂತ ಒಂದು ಸೆಂಟಿಮೀಟರ್ ಉದ್ದ ಇದ್ದು, ಕಚ್ಚಿದರೆ ಗಾಯ ಆಳವಾಗಿ ವಿಷ ಬೇಗ ರಕ್ತವನ್ನು ಸೇರುತ್ತದೆ ಮತ್ತು ಬೇಗ ಪ್ರಭಾವ ಬೀರುತ್ತದೆ. ರಕ್ತ ಹೆಪ್ಪುಗಟ್ಟುವುದನ್ನು ನಿಲ್ಲಿಸಿ ಅತಿಯಾದ ರಕ್ತಸ್ರಾವಕ್ಕೆ ಆಸ್ಪದವಾಗುತ್ತದೆ. ಅಂಗಾಂಶಗಳ ನಾಶವಾಗುತ್ತದೆ. ಇದರ ವಿಷ ನಾಗರ ಹಾವಿನ ವಿಷಕ್ಕಿಂತ ಮೂರನೆ ಒಂದರಷ್ಟು ಪ್ರಭಾವಿ. ತಕ್ಷಣ ಊದು, ಉರಿ, ನೋವು ಕಾಣಿಸಿಕೊಳ್ಳುತ್ತದೆ. ತಲೆತಿರುಗುತ್ತದೆ. ಬಲಹೀನತೆಯಾಗುತ್ತದೆ. ದೇಹದ ಮೇಲೆ ಬೊಬ್ಬೆಗಳು ಏಳುತ್ತವೆ. ಉಗುಳು, ವಾಂತಿ, ಮೂತ್ರ ಮಲಗಳಲ್ಲಿ ರಕ್ತ ಹೋಗುವುದು, ದೃಷ್ಟಿ ಮಂದವಾಗುವುದು, ಉಸಿರಾಟಕ್ಕೆ ತೊಂದರೆಯಾಗುವುದು, ಅತಿರಕ್ತ ಸ್ರಾವದಿಂದ ಮೂತ್ರ ಪಿಂಡಗಳು ಸ್ಥಗಿತಗೊಳ್ಳಬಹುದು.






ಒಮ್ಮೆ ಎರಡೂ ಕೈಗಳಲ್ಲಿ ಎರಡೂ ಮಂಡಲ ಹಾವನ್ನು ಹಿಡಿದ. ಒಂದಂತೂ ಬುಸುಗುಡುತ್ತಾ ಅವನೆಡೆಗೇ ನುಗ್ಗಿತು. ಅದರಷ್ಟೇ ವೇಗವಾಗಿ ಹಿಂದೆ ಸರಿದ. ಅದರ ಬಾಯಿ ಅವನ ಕೈಯನ್ನು ಸವರಿತು. ಮೈಜುಮ್ಮೆನ್ನುವಂತಹ ದೃಶ್ಯವದು.



"ಇಂತಹ ಹಾಳು ಬಾವಿಗೆ ಬಿದ್ದಿರುವುದು ನಿನಗೆ ಹೇಗೆ ಗೊತ್ತಾಗುತ್ತೆ ನಾಗರಾಜ್?" ಎಂದು ಬಾಲಕೃಷ್ಣ ಕೇಳಿದರು."ಈ ಸುತ್ತ ಮುತ್ತ ಎಲ್ಲೇ ಹಾವು ಕಾಣ್ಸಿದ್ರೂ ನನಗೆ ಹೇಳ್ತಾರೆ ಸರ್. ಇದುವರ್ಗೂ ಹಾಗೆ ೬೫೦ ಹಾವುಗಳನ್ನು ಹಿಡಿದು ಬಿಟ್ಟಿದ್ದೀನಿ" ಎಂದ.
ಒಬ್ಬೊಬ್ಬರದು ಒಂದೊಂದು ವಿದ್ಯೆ. ಆದರೆ ಕೆಲವರ ವಿದ್ಯೆಯಿಂದ ತಮ್ಮ ಸುತ್ತಲಿನ ಸಮಾಜ ಮತ್ತು ನಿಸರ್ಗಕ್ಕೂ ಉಪಯೋಗವಾದಾಗ ಅದು ಸಾರ್ಥಕತೆ ಪಡೆಯುತ್ತದೆ.

14 comments:

ಸಾಗರದಾಚೆಯ ಇಂಚರ said...

ಮಲ್ಲಿ ಸರ್
ಸುಂದರವಾದ ಫೋಟೋಗಳು
ಎಲ್ಲರೂ ಹಾವನ್ನು ಕಂಡ ಕೂಡಲೇ ಹೊಡೆಯಲು ಹೋಗುತ್ತಾರೆ
ಅದರಲ್ಲಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬರುವ ನಾಗರಾಜ್ ಅಂಥವರು ಬಹಳ ವಿರಳ
ಅವರ ಸಾಹಸ ಮೆಚ್ಚುವಂತದ್ದೆ ಅಂತೆಯೇ ಮಾನವೀಯ ಗುಣವೂ ಕೂಡಾ

ಮನಸಿನಮನೆಯವನು said...

'ಮಲ್ಲಿಕಾರ್ಜುನ.ಡಿ.ಜಿ.' ಅವರೇ..,

ನಿಮ್ಮ ಕ್ಯಾಮೆರ ದೃಶ್ಯಗಳು ಚೆನ್ನಾಗಿವೆ..

ಇನ್ನೊಂದು ವಿಷಯ.., ಮಂಡಲದ ಹಾವನ್ನು ಸಾಯಿಸಿ ಅದನ್ನು ಸುಡದೆ ಹಾಗೇ ಬಿಟ್ಟರೆ ಅದರ ಒಂದೊಂದು ಮೂಳೆಯಿಂದಲೂ ಹಾವಾಗುತ್ತವೆಯಂತೆ..! ನಿಜವೇ?

ನನ್ನ 'ಮನಸಿನಮನೆ'ಗೆ...:http//manasinamane.blogspot.com

Subrahmanya said...

ಚೆನ್ನಾಗಿದೆ ಸರ್..ಚಿತ್ರಗಳು ಮತ್ತು ಅನುಭವ ಎರಡೂ..

Guruprasad said...

ಒಳ್ಳೆಯ ಲೇಖನ, ಹಾಗೆ ನೀವು ತೆಗೆದ ಫೋಟೋಗಳು ಕೂಡ.. ನಾಗರಾಜ್ ಅವರ ಕಾಳಜಿ ಮತ್ತು ಹಾವಿನ ಬಗ್ಗೆ ಇರುವ ಪ್ರೀತಿ ಶ್ಲಾಗನೀಯ ...

ಸವಿಗನಸು said...

ಮಲ್ಲಿ ಸರ್,
ಚಿತ್ರಗಳು ಮಸ್ತ್ ಇದ್ದಾವೆ....
ನಿಮ್ಮ ಅನುಭವ ಲೇಖನ ಸಹ ಚೆನ್ನಾಗಿದೆ....

PARAANJAPE K.N. said...

ಹಾವುಗಳ ಚಿತ್ರ ಮತ್ತು ನಿಮ್ಮ ಲೇಖನ ಚೆನ್ನಾಗಿದೆ. ನಿಮ್ಮ ಹುಡುಕಾಟ, ಹೊಸ ಹೊಸ ವಿಚಾರಗಳನ್ನು ತಿಳಿಸುವ ಪರಿ ನನಗೆ ಮೆಚ್ಚುಗೆ

V.R.BHAT said...

ಈ ಹಾವಿಗೆ ಕೆಲವುಕಡೆ ಕುದರಾಳ ಅಥವಾ ಕುದರಬಳ ಎನ್ನುತ್ತಾರೆ ! ನಿಮ್ಮ ಫೋಟೋಸ್ ನೋಡಿ ಖುಷಿ ಆಯ್ತು

sunaath said...

ತುಂಬ ಉತ್ತಮ ಮಾಹಿತಿ ಹಾಗು ಚಿತ್ರಗಳು.

ಸೀತಾರಾಮ. ಕೆ. / SITARAM.K said...

ಚೆ೦ದದ ಫ಼ೋಟೋಗಳು. ಉರಗ ಪ್ರೇಮಿ ನಾಗರಾಜನಿಗೆ ನಮ್ಮ ನಮನಗಳು. ಅವನನ್ನು ಪರಿಚಯಿಸಿದ್ದಕ್ಕೆ ತಮಗೆ ವ೦ದನೆಗಳು.

ದಿನಕರ ಮೊಗೇರ said...

chennaagive chitra lekhana............

shivu.k said...

ಮಲ್ಲಿಕಾರ್ಜುನ್,

ಹಾಳುಬಾವಿಯ ಹಾವಿನ ವಿಚಾರವನ್ನು ಓದಿ ನಿಮ್ಮ ತೋಟದ ಬಾವಿ ನೆನಪಾಯಿತು.

ಊರಿಗೆಬ್ಬರೂ ಸ್ನೇಕ್ ನಾಗರಾಜನಂತವರು ಇದ್ದರೇ ಕಾಡಿಗೂ ನಾಡಿಗೂ ಒಳ್ಳೆಯದಲ್ಲವೇ.

Ittigecement said...

ಹುಡುಕಾಟದವರೆ....

ನನಗೆ ಇಷ್ಟವಾಗಿದ್ದು..
ನಿಮ್ಮ ಫೋಟೊಗಳು..
ನಿಮ್ಮ ಹುಡುಕಾಟ..
ಮತ್ತು ನಾಗರಾಜ...!

ನಾಗರಾಜ ಅವರ ಹೆಸರಾದರೂ..
ಅದು ಅವರಿಗೆ ಬಿರುದೂ ಕೂಡ....

ಅಭಿನಂದನೆಗಳು...!!

ಸುಧೇಶ್ ಶೆಟ್ಟಿ said...

ಭಯ ಹುಟ್ಟಿಸಿತು ಈ ಹಾವುಗಳು...

ನಾಗರಾಜ್ ಅವರು ಗ್ರೇಟ್....

ಜಲನಯನ said...

ಮಲ್ಲಿ ಹಾವುಗಳ ಬಗ್ಗೆ ಬರೆಯೋದು ಓಕೆ...ಆದ್ರೆ ಹಾವನ್ನು ಹಿಡಿಯೋರು ಜೋಕೆ..(careful) ಮತ್ತೆ ಇನ್ನೊಂದು jokeಏ..? ಹಹಹ...ನಿಮ್ಮ ಬರವಣಿಗೆ ಮತ್ತು ಚಿತ್ರ ನಮಗೆ ತಿಳಿದದ್ದೇ ಆದ್ರೆ ಇಂತಹ ವಿಸ್ಮಯಕಾರಿ ಘಟನೆಗಲನ್ನ ಸೆರೆಹಿಡಿದು ಲೇಖನ ತರ್ತೀರಲ್ಲ ಅದು ಸ್ಪೆಶಲ್.....ಅಭಿನಂದನೆ.