Thursday, October 1, 2009

ಗುಮ್ಮ ಬಂತು ಗುಮ್ಮ..!


ಕುಚ್ಚಣ್ಣ ಬೀದಿಗೆ ಹೋದಾಗ ಮಕ್ಕಳು, ದೊಡ್ಡವರು, ಬುರ್ಖಾ ಧರಿಸಿದ್ದ ಮಹಿಳೆಯರು ಎಲ್ಲ ಸೇರಿದ್ದರು.
ನನಗಾಗಿ ಕಾಯುತ್ತಿದ್ದ ಶ್ರೀನಿವಾಸ್, "ಬನ್ನಿ ಮಲ್ಲಿ. ಇಷ್ಟೊತ್ತು ನಮ್ಮ ಅನಂತು ಮನೆ ಹತ್ತಿರಾನೇ ಇತ್ತು. ಈ ಹುಡುಗರ ಗಲಾಟೆಗೆ ಹೆದರಿಕೊಂಡು ಆ ಸೊಂದಿಯಲ್ಲಿರೋ ಮನೆಯ ಕಿಟಕಿ ಮೇಲೆ ಕೂತಿದೆ" ಎಂದು ತೋರಿಸಿದರು.

ನೋಡಿದರೆ ಕಿಟಕಿಯಲ್ಲಿ ಕೂತಿದೆ "ಬಾರ್ನ್ ಔಲ್". ಕನ್ನಡದಲ್ಲಿ "ಪಾಳುಗುಮ್ಮ" ಅನ್ನುವರು. ಇದು ನಿಶಾಚರ ಹಕ್ಕಿ. ಹಳೆಯ ಕಟ್ಟಡಗಳಲ್ಲಿ, ಶ್ಮಶಾನಗಳಲ್ಲಿ ಇರುವಂತಹುದು ಇಲ್ಲಿಗೇಕೆ ಬಂತು? ದಾರಿ ತಪ್ಪಿ ಬಂತಾ?ಕಾಡು ಕಡಿಮೆಯಾಗುತ್ತಿದ್ದಾಗ ಹುಲಿಗಳು ಮನುಷ್ಯನ ವಾಸಸ್ಥಾನಕ್ಕೆ ನುಗ್ಗುತ್ತಿದ್ದವಂತೆ. ಈಗ ಗೂಬೆಗಳ ಸರದಿಯಿರಬೇಕು.

ಸಂಕಟಬಂದಾಗ ಬರುವನು ವೆಂಕಟರಮಣ!
ನಾನು ಮನೆ ಬಿಡುವಾಗಲೇ ಫೋನ್ ಮಾಡಿದ್ದೆ. ಬಂದವನೇ ಆಶ್ಚರ್ಯದಿಂದ ಗೂಬೆಯನ್ನು ನೋಡುತ್ತಾ, "ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" ಅಂದ. ಅವನನ್ನೂ ಸೇರಿಸಿಕೊಂಡಿದ್ದಾನಾ ಎಂದು ಅವನೆಡೆಗೆ ನೋಡಿದೆ. ಶ್ರೀನಿವಾಸ್ ನಗುತ್ತಾ "ನೀವು ಫೋಟೋ ತೆಗೀರಿ" ಅಂದರು.

ಹದ್ದಿನಷ್ಟು ದೊಡ್ಡದಿದ್ದ ಈ ಹಕ್ಕಿಯ ಫೋಟೋ ನಾನು ತೆಗೆಯುವುದನ್ನು ನೋಡಿ ಅಲ್ಲಿದ್ದ ಹುಡುಗರು ವಿಚಿತ್ರ ಆವೇಶ ಬಂದಂತೆ ಕಿರುಚಿದರು. ಶ್ರೀನಿವಾಸ್ ಮತ್ತು ನಾನು ಅವರಿಗೆ ಸುಮ್ಮನಿರಲು ಹೇಳಿ ಸೋತೆವು. ಪಾಪ! ಆ ಗೂಬೆಗೆ ಹಗಲು ಹೊತ್ತಲ್ಲಿ ಸರಿಯಾಗಿ ಕಾಣಿಸದು. ನಮ್ಮ ಜನರ ಕರ್ಕಶ ಕೂಗಿಗೆ ಏನನ್ನಿಸಿತೋ ಹಾರಿ ಕುಂಬಾರಪೇಟೆಯ ಹಳೆಯ ಮನೆಯೊಂದರ ಮೇಲೆ ಏರಿತು.

ಅಲ್ಲೆಲ್ಲಾ ಮುಸಲ್ಮಾನರ ಮನೆಗಳು. ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಏತಕ್ಕೆ ಫೋಟೋ ತೆಗೆಯುತ್ತಿರುವುದೆಂದು ಕೇಳಿದರು. ಪೇಪರಿಗೆ ಕೊಡಲು ಎಂದು ಹೇಳಿದೆ. ಅದೇನನ್ನಿಸಿತೋ ಅವರ ಮನೆಯೊಳಗೆ ಬಂದು ಮಹಡಿ ಮೇಲಿಂದ ಫೋಟೋ ತೆಗೆಯುವಂತೆ ನನಗೆ ಹೇಳಿದರು. ನನಗೋ ಮುಜುಗರ. ನನ್ನ ಹಿಂಜರಿಕೆ ಅರ್ಥವಾದಂತೆ ಒಬ್ಬ ಹುಡುಗನನ್ನು ಜೊತೆಮಾಡಿ ಕಳಿಸಿದರು.
ಅವರ ಮನೆ ಮೇಲೆ ನಿಂತು ಫೋಟೋ ತೆಗೆಯುತ್ತಿದ್ದೆ. ಅಷ್ಟರಲ್ಲಿ ಕೆಲ ಹುಡುಗರು ಆ ಗೂಬೆ ಇದ್ದೆಡೆ ನುಗ್ಗಿದರು. ಅದು ಜಾಗ ಬದಲಾಯಿಸಿತು. ನಾನೂ ಆ ಮನೆಯಿಂದ ಹೊರಬಂದೆ.
"ನೀವು ಆ ಗೂಬೆಯದಲ್ಲ, ಈ ಗೂಬೆಗಳ ಫೋಟೋ ತೆಗೀಬೇಕು. ಅಷ್ಟೊಂದು ಅವತಾರಗಳು ಆಡ್ತಾ ಇದ್ದಾರೆ" ಎನ್ನುತ್ತಾ ವೆಂಕಟರಮಣ ಗುಂಪಿನತ್ತ ತೋರಿಸಿದ.

ಅಷ್ಟರಲ್ಲಿ ಒಬ್ಬ ಏಣಿ ತಂದ.
"ನೋಡಿದ್ರಾ. ನಾನು ಫೋಟೋ ತೆಗೆಯಲು ಜನ ಎಷ್ಟೊಂದು ಅನುಕೂಲ ಮಾಡಿಕೊಡ್ತಿದ್ದಾರೆ" ಎಂದು ಮೆಚ್ಚುಗೆಯಿಂದ ಶ್ರೀನಿವಾಸ್‌ಗೆ ಹೇಳಿದೆ.
"ನೀವು ಬೇಗ ಫೋಟೋ ತಗೊಂಡು ಬಂದುಬಿಡ್ರಿ. ಹೋಗೋಣ" ಎಂದು ಅವರು ಅವಸರಿಸಿದರು. ಇವರ್ಯಾಕೆ ಅವಸರ ಮಾಡುತ್ತಿದ್ದಾರ‍ೆ ಎಂದುಕೊಳ್ಳುತ್ತಾ ನಾನು ಅಲ್ಲೇ ಒಂದು ಸಣ್ಣ ಗೋಡೆ ಮೇಲೆ ಹತ್ತಿ ನಿಂತೆ. ನನ್ನ ಕ್ಯಾಮೆರಾ ಲೆನ್ಸಿಗೆ ಅಷ್ಟು ಸಾಕಿತ್ತು. ಏಣಿ ಬೇಡ ಎಂದು ಹೇಳಿದೆ.
ಆದರೆ ನಾನು ಯೋಚಿಸಿದಂತೆ ಅವರು ಏಣಿ ತಂದದ್ದಲ್ಲ!
ಏಣಿ ಗೋಡೆಗೆ ಆನಿಸಿ ಒಬ್ಬ ಹುಡುಗನನ್ನು ಹತ್ತಿಸಿ ಗೂಬೆಯನ್ನು ಹಿಡಿಯಲು ಹೇಳುತ್ತಿದ್ದಾರೆ.
"ಬೇಗ ಫೋಟೋ ತಕ್ಕೊಂಡು ಬನ್ನಿ" ಎಂದು ಶ್ರೀನಿವಾಸ್ ಅವಸರಿಸುತ್ತಿದ್ದಾರೆ.
ಆ ಹುಡುಗ ಹತ್ತಿರ ಹತ್ತಿರ ಹೋಗುತ್ತಿದ್ದ.
ಗೂಬೆ ನನ್ನನ್ನೊಂದು ಬಾರಿ, ಹುಡುಗನೆಡೆಗೊಂದು ಬಾರಿ ನೋಡುತ್ತಿದೆ.
"ಏ! ಹತ್ರ ಹೋಗ್ಬೇಡ" ಎಂದು ಹುಡುಗನನ್ನು ನೋಡಿ ನಾನು ಕೂಗಿದೆ.
ಒಬ್ಬ ’ಹುಡುಗನ ಜೊತೆ ಗೂಬೆಯ ಫೋಟೋ ತೆಗೀರಿ’ ಎಂದು ನನಗೆ ಆದೇಶ ಕೊಟ್ಟರೆ, ಇನ್ನೊಬ್ಬ ಗೂಬೆಯನ್ನು ಹಿಡಿಯಲು ಹುಡುಗನಿಗೆ ಹೇಳುತ್ತಿದ್ದಾನೆ.
ಪರಿಸ್ಥಿತಿ ನಮ್ಮ ಕೈಮೀರುತ್ತಿತ್ತು.
ಇಲ್ಲಿ ಶ್ರೀನಿವಾಸ್ "ಸಾಕು ಬನ್ನಿ" ಎಂದು ತಿವಿಯುತ್ತಿದ್ದಾರೆ.
ಪುಣ್ಯವಶಾತ್ ಹೆದರಿದ ಗೂಬೆ ಹಾರಿ ಸ್ವಲ್ಪ ದೂರದ ಮನೆಯೊಂದರ ಮೇಲೆ ಹೋಯಿತು.
"ಗೂಬೆ ಮನೆಗೆ ಬಂದರೆ ಅಪಶಕುನ. ಕೆಲವರು ಮನೇನೇ ಖಾಲಿ ಮಾಡ್ತಾರೆ. ಇವರ ಗಲಾಟೆಯಿಂದ ಅದು ಹಾರಿದ್ರೂ ಫೋಟೋ ತೆಗೆಯೋದಕ್ಕೆ ಹೋದ ನಮ್ಮ ಮೇಲೇ ಜನ ಗೂಬೆ ಕೂರಿಸ್ತಾರೆ. ಯಾಕೆ ಬೇಕು ಗ್ರಹಚಾರ. ಬನ್ನಿ ಹೋಗೋಣ" ಎನ್ನುತ್ತಾ ಶ್ರೀನಿವಾಸ್ ಹೊರಕ್ಕೆ ಎಳೆದುಕೊಂಡು ಬಂದರು.
"ಈ ಫೋಟೋಗಳನ್ನು ಏನು ಮಾಡ್ತೀರ?" ಎಂದು ವೆಂಕಟರಮಣ ಕೇಳಿದ.
"ಪೇಪರಿಗೆ ಕಳಿಸೋದು" ಅಂದೆ.
"ಕಳ್ಸಿ.. ಕಳ್ಸಿ.. ದಿನಾ ಬೆಳಿಗ್ಗೇನೇ ಆ ರಾಜಕಾರಣಿಗಳ ಗೂಬೆ ಮುಖ ನೋಡಿ ದಿನದ ಕೆಲಸ ಶುರುಮಾಡ್ತೀವಿ. ನಿಜವಾಗ್ಲೂ ಅವರು ಅಪಶಕುನ. ಇದು ಅದರಪಾಡಿಗದು ಇರೋ ಪಾಪದ ಪಕ್ಷಿ" ಅಂದ ವೆಂಕಟರಮಣ.
ನಂಬಿಕೆಯ ಬೇರನ್ನೇ ಅಲ್ಲಾಡಿಸುವ ಇವನ ಮಾತಿಗೆ ತಲೆಕೆರೆದುಕೊಂಡೆ.
ನಮ್ಮೆಲ್ಲರ ಚಿತ್ರವಿಚಿತ್ರ ನಡವಳಿಕೆಗಳ ಬಗ್ಗೆ ಯೋಚಿಸಿದಷ್ಟೂ ಮನಸ್ಸು ಗೋಜಲು ಗೊಜಲು!

23 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಲ್ಲಿಕಾರ್ಜುನ್ ಅವರೆ...
ಗೂಬೆ ಫೋಟೋಸ್ ಎಲ್ಲ ಚೆನ್ನಾಗಿವೆ, ಇಷ್ಟವಾದ್ವು.

"ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" ಅಂದ. ಅವನನ್ನೂ ಸೇರಿಸಿಕೊಂಡಿದ್ದಾನಾ ಎಂದು ಅವನೆಡೆಗೆ ನೋಡಿದೆ.

ಈ ಮೇಲಿನ ಸಾಲು ಓದಿ ನಗು ಬಂತು. ಫೋಟೋ ಜೊತೆ ಚಂದದ ತಿಳಿಹಾಸ್ಯಭರಿತ ಲೇಖನ, ಇಷ್ಟವಾಯ್ತು.

Laxman (ಲಕ್ಷ್ಮಣ ಬಿರಾದಾರ) said...

ಮಲ್ಲಿಕಾರ್ಜುನ ಸರ್,
ನಾನು ಇಷ್ಟು ಚೆನ್ನಾಗಿರೋ ಗೂಬೆ ಚಿತ್ರ ನೋಡಿರಲೇ ಇಲ್ಲ. ಚಿತ್ರಗಳು ಮತ್ತು ಲೇಖನ ಚೆನ್ನಾಗಿ ಬಂದಿದೆ. ಗೂಬೆಯ ಮುಖದಲ್ಲಿ ಹೃದಯ ಚಿತ್ರ ಗಮನ ಸೆಳೆಯಿತು.

ನನ್ನ ಕಥೆ ಓದಿ ಅಭಿಪ್ರಾಯ ತಿಳಿಸಿ.
www.nanisaha.blogspot.com

ಸವಿಗನಸು said...

ಮಲ್ಲಿ ಸರ್,
ತುಂಬ ಚೆನ್ನಾಗಿದೆ...
"ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" super
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು....

Ittigecement said...

ಹುಡುಕಾಟದವರೆ...

ನಿಮ್ಮ ಫೋಟೊಗಳ ಕಟ್ಟಾ ಅಭಿಮಾನಿ ನಾನು...

ಇತ್ತೀಚೆಗೆ ಲೇಖನಗಳು ತುಂಬಾ ಸೊಗಸಾಗಿ ಬರ್ತಾ ಇದೆ...

"ರಾಜಕಾರಣಿಗಳೇ ದೊಡ್ಡ ಗೂಬೆ..
ಅವರೇ ಒಂದು ಅಪಶಕುನ ..
ನಮ್ಮ ದೇಶಕ್ಕೆ.. ನಮ್ಮ ರಾಜ್ಯಕ್ಕೇ ಅವರೇ ಗೂಬೆಗಳು...
ಅಂಥವರ ಫೋಟೊ ನೋಡಿ ದಿನ(ಪೇಪರ್) ಶುರು ಮಾಡ್ತೀವಲ್ಲ...

ನಿಮಗೂ..
ನಿಮ್ಮ ಸುಂದರ ಚಿತ್ರ ಲೇಖನಕ್ಕೂ..

ವೆಂಕಟರಮಣನಿಗೂ ಅಭಿನಂದನೆಗಳು....

ಮನಸು said...

ನಿಮ್ಮ ಬ್ಲಾಗ್ ನಲ್ಲಿ ಇರೋ ಗೂಬೆ ನೋಡೋಕ್ಕೆ ಇಷ್ಟು ಗೂಬೆಗಳು ಬಂದಿವೆ ಎಂದು ಹೇಳುತ್ತೀರಾ ಏನು..? ಹಹಹಹ....
"ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" ಇದನ್ನು ಓದಿ ನಗು ಬಂತು ಹಹಹ
ಚಿತ್ರ ತುಂಬಾ ಚೆನ್ನಾಗಿದೆ...

ಸುಮ said...

ಚಿತ್ರ ಲೇಖನ ಚೆನ್ನಾಗಿದೆ ಮಲ್ಲಿಕಾರ್ಜುನ ಅವರೆ. ನಾನು ಗೂಬೆಯ ಬಗ್ಗೆ "ಗೂಬೆಯ ಗೋಳು" ಎಂಬ ಲೇಖನವನ್ನು ನನ್ನ ಬ್ಲಾಗ್ನಲ್ಲಿ ಪ್ರಕಟಿಸಿದ್ದೆ.

Guruprasad said...

ಮಲ್ಲಿಕಾರ್ಜುನ್
ಗೂಬೆಗಳ ಫೋಟೋ ಚೆನ್ನಾಗಿ ಇದೆ...ಹಾಗೆ ನಿಮ್ಮ ಬರಹ ಕೂಡ.. ಸುಂದರ ಚಿತ್ರ ಲೇಖನಕ್ಕೆ ಅಭಿನಂದನೆಗಳು

ರಾಜೀವ said...

ಮಲ್ಲಿಕಾರ್ಜುನ್ ಅವರೆ,

ನಿಮ್ಮ ಸಾಹಸ ಮೆಚ್ಚಬೇಕಾದ್ದು. ಫೋಟೋಗಳು ಚೆನ್ನಾಗಿದೆ.
ಗೂಬೆಗಳು ತುಂಬಾ ಸಂಕೋಚದ ಪಕ್ಷಿ ಎಂದು ಕೇಳಿದ್ದೆ. ಹಾಗಾದರೆ ನಿಮಗೆ ಪೋಸ್ ಕೊಟ್ಟು ಹೇಗೆ ನಿಂತಿತ್ತು?

ದೀಪಸ್ಮಿತಾ said...

ಮಲ್ಲಿಕಾರ್ಜುನ್ ಸರ್, ಫೋಟೋಗಳು ಚೆನ್ನಾಗಿವೆ. ಲೇಖನ ತಿಳಿಹಾಸ್ಯದಿಂದ ಕೂಡಿದೆ. ಯಾವಯಾವುದೋ ಗೂಬೆಗಳ ಮುಖ ನೋಡುವ ಬದಲು ನಿಜವಾದ ಗೂಬೆ ನೋಡುವುದೇ ಶುಭಶಕುನ ಎಂದು ನನ್ನ ಅನಿಸಿಕೆ

ರೂpaश्री said...

Mallikarjun,

Wonderful photos of the barnowl. Dint know its called 'paaLugumma' !
This is one of the few bird species with the female showier than the male. Its ability to locate prey by sound alone is the best of any animal that has ever been tested.
Loved the humour in ur post esp.."ಒಂದು ಗೂಬೆಯನ್ನು ನೋಡಲು ಇಷ್ಟೊಂದು ಗೂಬೆಗಳಾ?" :-)

ವನಿತಾ / Vanitha said...

ಎಲ್ಲೋ ಕತ್ತಲಲ್ಲಿ zooನಲ್ಲಿ ಗೂಬೆಯನ್ನು ನೋಡಿದ್ದು..ಅಬ್ಬಬ್ಬ..ಗೂಬೆ ಕೂಡ ಇಷ್ಟು ಚೆನ್ನಾಗಿರುತ್ತದೆ ಎಂದು ಇವತ್ತೇ ಗೊತ್ತಾಗಿದ್ದು..ಒಳ್ಳೆಯ ಫೋಟೋ & ಬರಹ..

Unknown said...

ಮಲ್ಲಿಕಾರ್ಜುನ್ ನಮ್ಮ ಜನಕ್ಕೆ ಗೂಬೆಯನ್ನು ಕಂಡರೆ ಅದೇನೋ ಶಂಕೆ. ನಮ್ಮ ತೋಟದಲ್ಲಿ ಒಂದೆರಡು ಗೂಬೆಗಳು ಗೂಡು ಮಾಡಿಕೊಂಡು ಕೆಲವು ವರ್ಷ ಇದ್ದುದನ್ನು ನಾನು ಕಂಡಿದ್ದೇನೆ. ಹಾಗೇ ಮೊನ್ನೆ ಮೇ ತಿಂಗಳಿನಲ್ಲಿ ನನ್ನ ಮಗಳನ್ನು ನನ್ನಕಾಲೇಜಿಗೆ ಕರೆದುಕೊಂಡು ಬಂದಿದ್ದೆ. ಗಾಯಗೊಂಡಿದ್ದ ಗೂಬೆಯೊಂದು ಅವಳ ಕಣ್ಣಿಗೆ ಬಿದ್ದಿತ್ತು. ಅದೇಕೆ ಗಾಯಗೊಂಡಿತ್ತು ಎಂದು ನನಗೆ ತಿಳಿಯಲಿಲ್ಲ. ಮೊಬೈಲ್ ಕ್ಯಾಮೆರಾದಲ್ಲಿ ಅದರ ಫೋಟೋ ತೆಗೆದುಕೊಂಡು ಸುಮ್ಮನಾಗಿಬಿಟ್ಟೆ. ನಂತರ ಕೆಲ ದಿನಗಳಲ್ಲಿಯೇ ಅದು ಗಾಯಗೊಂಡಿದ್ದ ಜಾಗದಲ್ಲಿಯೇ ಒಂದು ಪಾರಿವಾಳ ಗಾಯಗೊಂಡಿತ್ತು. ನಂತರ ಮತ್ತೊಂದು ಪಾರಿವಾಳ. ನಾನು ಅದಕ್ಕೆ ಕಾರಣ ಹುಡುಕತೊಡಗಿದೆ. ಆಗ ನನಗೆ, ನಮ್ಮ ಕಾಲೇಜಿನ ಬೇಸ್ ಮೆಂಟಿನ ರೂಮುಗಳಿಗೆ ಅಲವಡಿಸಿರುವ ಎಕ್ಸಾಸ್ಟ್ ಫ್ಯಾನುಗಳಿಗೆ ಸಿಕ್ಕಿ ಅವು ಗಾಯಗೊಳ್ಳುತ್ತಿವೆ ಎಂದು ತಿಳಿಯಿತು. ಗೂಬೆಗಂತೂ ಹಗಲು ಕಣ್ಣು ಕಾಣುವುದಿಲ್ಲ. ಆದರೆ ಪಾರಿವಾಳ ಏಕೆ ಫ್ಯಾನಿಗೆ ಸಿಕ್ಕಿ ಹಾಕಿಕೊಳ್ಳುತ್ತವೆ ಎಂದು ಯೋಚಿಸುತ್ತಿದ್ದೇನೆ.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,

ಫೋಟೋಗಳು ಮತ್ತು ಬರಹ ಚೆನ್ನಾಗಿದೆ.

ನಾನೂ ನನ್ನ ತಮ್ಮ ಒಮ್ಮೆ ಲಾಲ್‌ ಬಾಗಿಗೆ ಹವ್ಯಾಸೀ ಪಕ್ಷಿವೀಕ್ಷಕರಾಗಿ ಸ್ನೇಹಿತನ ಒತ್ತಾಯದ ಮೊದಲ ಬಾರಿಗೆ ಹೋದಾಗ ಅಲ್ಲಿ ಸೇರಿದ್ದ ಗುಂಪಿನಲ್ಲಿ ನಾವೂ ಸೇರಿದೆವು. ಮೊದಲಬಾರಿಗೇ ನಮಗೆ ಕಾಣ ಸಿಕ್ಕದ್ದು `ಈ ಗೂಬೆ'. ನಂತರ ಮತ್ತಷ್ಟು ವಿಧವಿಧದ ಹಕ್ಕಿಗಳನ್ನು ಸ್ನೇಹಿತನ ಜೊತೆಗೆ ಕೇಳಿ ತಿಳಿದು ನೋಡುತ್ತ ಮನೆಗೆ ಬಂದದ್ದಾದಯಿತು. ನನ್ನ ತಮ್ಮ ಮನೆಯಲ್ಲಿ ಹೀಗೆ, ಹೀಗೆ ಆಯಿತು ಎಂದು ತಿಳಿಸಿದ. ಮನೆಯಲ್ಲಿನವರ ಪ್ರತಿಕ್ರಿಯೆ `ಇಲ್ಲಿಂದ ಅಲ್ಲಿಗೆ ಹೋಗಿ ಬರೀ ಗೂಬೆ ನೋಡಿ ಬಂದಿರಾ?' ಎಂದು.

ಧನ್ಯವಾದಗಳು,
ಸ್ನೇಹದಿಂದ,

ಚಂದ್ರು

ಸೀತಾರಾಮ. ಕೆ. / SITARAM.K said...

ಗೂಬೆ ತು೦ಬಾ ಅಪರೂಪದ್ದು ಅನಿಸುತ್ತಿದೆ. ಗೂಬೆ ಮುದ್ದಾಗಿದೆ!!
ಜೊತೆಗೆ ನಿಮ್ಮ ವಿವರಣೆ ಶೈಲಿ.
ಗೂಬೆ ಬೆನ್ನು ಬಿದ್ದ ಗೂಬೆಗಳ ಫೋಟೊ ಮಾತ್ರ ಇಲ್ಲ ಅನ್ಸುತ್ತೆ.
ಛಾಯಾ ಚಿತ್ರಗಳು ಸು೦ದರವಾಗಿವೆ.

ವಿನುತ said...

ಇಷ್ಟು ಚ೦ದದ ಗೂಬೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ಸೃಷ್ಟಿಯಲ್ಲಿ ಎಷ್ಟೊ೦ದು ವೈವಿಧ್ಯತೆ ಇದೆ ಅನ್ನುವುದು ನಿಮ್ಮ ಬ್ಲಾಗಿನಿ೦ದ ತಿಳಿಯುತ್ತದೆ. ಅದೆಷ್ಟು ಚೆನ್ನಾಗಿ ಹೃದಯವನ್ನು ಗೂಬೆಯ ಮುಖದ ಮೇಲೇ ಇರಿಸಿದ್ದಾನೆ ಕಲಾಕಾರ!! ಮುದ್ದಾದ ಗೂಬೆ! ಇನ್ನು ಮು೦ದೆ ಯಾರಿಗಾದರೂ "ಗೂಬೆ" ಎ೦ದೆನ್ನುವ ಮುನ್ನ ನಾಲ್ಕು ಬಾರಿ ಯೋಚಿಸುತ್ತೇನೆ.

PARAANJAPE K.N. said...

ಮಲ್ಲಿಕ್, ಚಂದದ ಗೂಬೆಗಳನ್ನು ತೋರಿಸಿದ್ದೀರಿ. ಬರಹವೂ ಚೆನ್ನಾಗಿದೆ.

shivu.k said...

ಮಲ್ಲಿಕಾರ್ಜುನ್,

ಗೂಬೆ ಫೋಟೊ ಚೆನ್ನಾಗಿದೆ. ಅದಕ್ಕಿಂತ ಅದನ್ನು ಕ್ಲಿಕ್ಕಿಸುವಾಗಿನ ಅನುಭವ ಇನ್ನೂ ಚೆನ್ನಾಗಿದೆ. ನಿಮ್ಮೂರಿನಲ್ಲಿ ಸದ್ಯ ನೀವು ಎಲ್ಲಾ ಜನರಲ್ಲೂ ಮತ್ತು ಮಕ್ಕಳಲ್ಲೂ ಪ್ರಕೃತಿ ಬಗ್ಗೆ ಒಂದು ಕಾಳಜಿಯನ್ನು ಸೃಷ್ಟಿಸಿದ್ದೀರಿ. ಅದು ಸುಲಭದ ಕೆಲಸವಲ್ಲ.

ಮತ್ತೆ ನನಗೆ ವೆಂಕಟರಮಣ ಕುತೂಹಲದ ವ್ಯಕ್ತಿಯಾಗಿ ಕಾಣುತ್ತಾನೆ. ಆತನ ಮಾತು, ನಡುವಳಿಕೆ, ಕೆಲಸ, ಸಿನಿಮಾಕ್ರೇಜ್, ಇತ್ಯಾದಿಗಳು ತೇಜಸ್ವಿಯವರ ಪಾತ್ರಗಳಲ್ಲಿ ಬರುವ ಕೆಲವರನ್ನು ನೆನಪಿಸುತ್ತವೆ. ನೀವ್ಯಾಕೆ ಆತನ ಬಗ್ಗೆ ಬರೆಯಬಾರದು?

Me, Myself & I said...

ಮಲ್ಲಿಕಾರ್ಜುನ್ ಸರ್,

"ಅವನನ್ನೂ ಸೇರಿಸಿಕೊಂಡಿದ್ದಾನಾ ಎಂದು ಅವನೆಡೆಗೆ ನೋಡಿದೆ" - ಈ ಮಾತನ್ನ ಕೇಳಿ ಈಗ ನನಿಗೆ ನಿಮ್ಮೊಂದಿಗೆ ತುಂಬಾ ಹುಷಾರಾಗಿ ಕಾಮೆಂಟ್ಇಸ್ಬೇಕು ಅನ್ನಿಸ್ತಿದೆ.

ತುಂಬಾ ಒಳ್ಳೆ ಪ್ರಯತ್ನ,
ಅಭಿನಂದನೆಗಳು

AntharangadaMaathugalu said...

ಮಲ್ಲಿಕಾರ್ಜುನ್ ಸಾರ್...
ಗೂಬೆ ಇಷ್ಟು ಮುದ್ದಾಗಿರುತ್ತದೆಂದು ಗೊತ್ತಿರಲಿಲ್ಲ. ತುಂಬಾ ಮುದ್ದಾಗಿ ಪೋಸ್ ಕೊಟ್ಟಿರೋ ಥರ ಇದೆ. ಹಾಸ್ಯ ಭರಿತ ಲೇಖನ ಓದಿ ನಗು ಬಂತು....ಒಂದು ಗೂಬೆ ಎದುರಿಗೆ ನೋಡಲು ಅಷ್ಟೊಂದು ಗೂಬೆಗಳು ಬಂದಿದ್ದವು....ಅದರ ಚಿತ್ರ ಬ್ಲಾಗ್ ನಲ್ಲಿ ನೋಡಲೂ ಬೇಕಾದಷ್ಟು ಬಂದಿದ್ದೇವೆ...
;-).... ಇನ್ನು ಮೇಲೆ ಯಾರಾದರೂ ಗೂಬೆಯೆಂದು ಬೈದರೆ ಕೋಪ ಮಾಡ್ಕೊಳ್ಳಲ್ಲ ಬಿಡಿ ಸಾರ್...
ಶ್ಯಾಮಲ

sunaath said...

ಗೂಬೆ ಇಷ್ಟೊಂದು ಸುಂದರ ಪಕ್ಷಿ ಎನ್ನೋದು, ನಿಮ್ಮ ಚಿತ್ರಗಳನ್ನು ನೋಡಿದ ಮೇಲೇ ಗೊತ್ತಾಯಿತು.

ಶಿವಪ್ರಕಾಶ್ said...

Nicely Captured.
ಹಾಗೆ, ವೆಂಕಟರಮಣ ಅವರ ಮಾತುಗಳು ತುಂಬಾ ಚನ್ನಾಗಿವೆ... :)

PaLa said...

ಪಾಳುಗುಮ್ಮದ ಚಿತ್ರಸಹಿತ ಪರಿಚಯಕ್ಕೆ ವಂದನೆ.. ಹಿಹಿ ಬರಹದಲ್ಲಿನ ಸಂಭಾಷಣೆ ಮುದ ನೀಡಿತು :)

Harihara Sreenivasa Rao said...

Mallika-Arjuna avaree(with respect to your beautivulface and writings)---
--Goobe apashakunada pakshri ennuvudu saamaanya nambike. Adare DEPAAVALIyalli ellaroo mukhyavaagi poojisuva deevate SRI MAHALAKSHMIYA VAAHANA ennuvudannuu at least hindugalaada naavu smarisabeeku. Vishnuvinavaahanavaada GARUDA kudaa haddu, googeyajaatige seeriddendu hiriyaru tilisuttare. Budubudikeyavaru belagumunjaane guubeya dhwniyannu keliyee aadinada bhavishyavannu forecastemaaduva paddhti innu jaariyallide. Shubhanudiyee Shakunadahakki--da.ra.beendre antha ondu nenapu.
Chitra, vivaranege intahavannuu seerisi pl.