ಪ್ರಕಾಶ್ ಹೆಗಡೆಯವರ ಮನೆಯಲ್ಲಿ ಭರ್ಜರಿ ಭೋಜನ.
ಶಿವು, ನಾನು ಮತ್ತು ಪ್ರಕಾಶ್ ಹೆಗಡೆಯವರು ಬ್ಯಾಟಿಂಗ್ ಶುರುಮಾಡಿದ್ದೆವು.
ಪ್ರಕಾಶ್ರ ಪತ್ನಿ ನಮಗೆ ಬಡಿಸುತ್ತಾ, "ಶಿವು, ನಿಮ್ಮ ಮನೇಲಿ ವಾಟರ್ ಫಿಲ್ಟರ್ ಹಾಕ್ಸಿದ್ರಾ?" ಎಂದು ಕೇಳಿದರು.
"ಇನ್ನೂ ಇಲ್ಲ. ಹಾಕಿಸ್ಬೇಕು" ಅಂದರು ಶಿವು.
"ಈ ರಿವರ್ಸ್ ಆಸ್ಮಾಸಿಸ್ ಇರುವ ಫಿಲ್ಟರ್ ಬೆಲೆ ಜಾಸ್ತಿಯಲ್ವಾ?" ನಾನು ಮಧ್ಯೆ ಮೂಗು ತೂರಿಸಿದೆ.
"ಹೌದು. ನೀವದನ್ನು ಹಾಕ್ಸಿಲ್ವಾ?" ಎಂದು ಕೇಳಿದರು ಪ್ರಕಾಶ್.
"ಇಲ್ಲ ಸರ್. ನಮ್ಮಲ್ಲಿ ಸಿಹಿನೀರಲ್ವಾ. ಹಾಗಾಗಿ ಆ ಸಿಸ್ಟಂ ಬೇಕಿಲ್ಲ. ಅದೂ ಅಲ್ದೆ ನಮ್ಮ ಶಿಡ್ಲಘಟ್ಟದ ನೀರು ಬಹಳ ರುಚಿ" ಅಂದೆ.
"ನೀರು ರುಚಿಯಾ?" ಪ್ರಕಾಶ್ ಅಚ್ಚರಿಪಟ್ಟರು.
"ಹೌದು. ನಿಮ್ಮ ಕಾವೇರಿ ನೀರಿಗಿಂತ ರುಚಿಯಾಗಿರುತ್ತೆ. ಅದಕ್ಕೇ ನಮ್ಮ ರೇಷ್ಮೆಗೂ ಬೆಲೆ ಜಾಸ್ತಿ" ಅಂದೆ.
"ಅಂದ್ರೆ ಸೀರೆ ಮಾಡ್ತೀರಾ?" ಪ್ರಕಾಶ್ರ ಪತ್ನಿ ಕೇಳಿದರು.
"ನಮ್ಮಲ್ಲಿ ಕಚ್ಛಾರೇಷ್ಮೆ ಅಂದ್ರೆ ರಾ ಸಿಲ್ಕ್ ತಯಾರಿಸುತ್ತೇವೆ. ರೇಷ್ಮೆ ಗೂಡನ್ನು ಕುದಿಯುವ ನೀರಲ್ಲಿ ಹಾಕಿ ಅದರಿಂದ ರೇಷ್ಮೆ ಎಳೆಯನ್ನು ತೆಗೆಯುವುದು. ಇಲ್ಲಿ ನೀರಿನ ಗುಣ ಮುಖ್ಯ ಪಾತ್ರ ವಹಿಸುತ್ತೆ. ನಮ್ಮ ಶಿಡ್ಲಘಟ್ಟದ ಸಿಹಿನೀರಲ್ಲಿ ತೆಗೆದ ರೇಷ್ಮೆಗೆ ಬಣ್ಣ, ಹೊಳಪು ಮತ್ತು ಹಿಗ್ಗುವಿಕೆ(ಎಲಾಸ್ಟಿಸಿಟಿ) ಗುಣವಿರುತ್ತೆ. ಹಾಗಾಗಿ ಈ ರೇಷ್ಮೆಯು ಸೀರೆ ತಯಾರಿಸಲು ಕಂಚಿಗೆ, ಜರಿ ತಯಾರಿಸಲು ಸೂರತ್ಗೆ ಹೆಚ್ಚಾಗಿ ಹೋಗುತ್ತೆ. ಬೇರೆ ಕಡೆ ತಯಾರಾಗುವ ರೇಷ್ಮೆಗಿಂತ ನಮ್ಮ ರೇಷ್ಮೆ ಬೆಲೆ ಹೆಚ್ಚು"
"ರೇಷ್ಮೆ ತೆಗೆದು ಉಳಿದಿರೋದ್ರಲ್ಲಿ ಹಾರ ಮಾಡ್ತಾರಾ?" ಪ್ರಕಾಶ್ರ ಪತ್ನಿ ಕೇಳಿದರು.
"ಇಲ್ಲ. ಹಾರ ಮಾಡಲು ಚೆನ್ನಾಗಿರುವ ಗೂಡನ್ನೇ ಬಳಸುತ್ತಾರೆ. ಅದನ್ನು ಕತ್ತರಿಸಿ ಒಳಗಿರುವ ಹುಳುವನ್ನು ಬಿಸಾಡಿ ಹಾರ ತಯಾರಿಸ್ತಾರೆ"
"ಈ ಹುಳುಗಳನ್ನು ಏನ್ಮಾಡ್ತೀರ?" ಪ್ರಕಾಶ್ ಕೇಳಿದರು.
"ಸರ್, ಇಲ್ಲಿ ಯಾವುದೂ ವೇಸ್ಟ್ ಅಲ್ಲ. ರೇಷ್ಮೆ ತೆಗೆದ ಮೇಲೆ ಉಳಿಯುವ ಪೊರೆ, ಹುಳುಗಳನ್ನು ಬೇರ್ಪಡಿಸಿ ಸಂಸ್ಕರಿಸುವುದೇ ಒಂದು ಘಟಕ. ಅದು ಕೆಟ್ಟ ವಾಸನೆ ಬೀರುವುದರಿಂದ ಊರ ಹೊರಗೆ ಮಾಡಿರ್ತಾರೆ. ಈ ಹುಳಗಳಿಂದ ಎಣ್ಣೆ ತಯಾರಿಸುತ್ತಾರೆ. ಆ ಎಣ್ಣೆ ಸೋಪ್ ಫ್ಯಾಕ್ಟರಿಗಳಲ್ಲಿ ಬಳಸುತ್ತಾರೆ"
"ಅಂದದ ಮೈಕಾಂತಿ ಹಿಂದೆ ಎಷ್ಟೊಂದು ಹಿಂಸೆ ಇದೆ ಮಾರಾಯ್ರೆ!" ಪ್ರಕಾಶ್ರ ಆಲೋಚನೆ ಎಲ್ಲೆಲ್ಲಿಗೋ ಹೋಯಿತು.
"ಹಾಗ್ಯಾಕೆ ಯೋಚಿಸ್ತೀರಿ ಸರ್. ರೇಷ್ಮೆ ಮೊಟ್ಟೆಯಿಂದ ಬಟ್ಟೆಯಾಗಲು ನಾನಾ ಹಂತಗಳು. ಮೊದಲು ಗ್ರೇನೇಜ್ನಲ್ಲಿ ಮೊಟ್ಟೆ ತಯಾರಾಗುತ್ತೆ. ನಂತರ ಚಾಕಿ ಸೆಂಟರ್ನಲ್ಲಿ ಮೊಟ್ಟೆಯಿಂದ ಹೊರಬಂದ ಹುಳು ಸ್ವಲ್ಪ ಬೆಳೆಸುವರು. ಇಲ್ಲಿಂದ ರೈತರು ಕೊಂಡು ತಮ್ಮ ಹುಳುಮನೆಯಲ್ಲಿ ಸಾಕುತ್ತಾರೆ. ಬೆಳೆದ ಹುಳುವನ್ನು ಚಂದ್ರಂಕಿಗಳಲ್ಲಿ ಹಾಕಿ ಗೂಡು ಕಟ್ಟಿಸುತ್ತಾರೆ. ಈ ಗೂಡುಗಳನ್ನು ಮಾರುಕಟ್ಟೆಯಲ್ಲಿ ಹರಾಜು ಹಾಕುತ್ತಾರೆ"
"ಗೂಡು ತಯಾರಿಸೋದಕ್ಕೇ ಇಷ್ಟು ಹಂತಗಳಾ? ಎಷ್ಟು ಜನ ಕೆಲಸ ಮಾಡ್ಬೇಕಲ್ವಾ? ರಾಮನಗರದಲ್ಲಿ ಗೂಡು ಮಾರ್ಕೆಟ್ ಇದೆಯೆಂದು ಕೇಳಿರುವೆ" ಅಂದರು ಪ್ರಕಾಶ್.
"ಹೌದು ಸರ್. ರಾಮನಗರ ಬಿಟ್ಟರೆ ನಮ್ಮ ಶಿಡ್ಲಘಟ್ಟದ್ದು ಭಾರತದಲ್ಲೇ ಅತಿ ದೊಡ್ಡದಾದ ಗೂಡಿನ ಮಾರ್ಕೆಟ್. ಇಲ್ಲಿ ಕೋಟ್ಯಾಂತರ ವ್ಯವಹಾರ ನಡೆಯುತ್ತೆ"
"ಗೂಡಿನ ನಂತರ ಏನಾಗುತ್ತೆ" ಕುತೂಹಲದಿಂದ ಶಿವು ಕೇಳಿದರು.
"ಮಾರುಕಟ್ಟೆಯಲ್ಲಿ ಗೂಡು ಕೊಂಡ ರೀಲರುಗಳು ಫಿಲೇಚರ್(ರೇಷ್ಮೆ ನೂಲು ಬಿಚ್ಚಾಣಿಕಾ ಘಟಕ) ನಲ್ಲಿ ಗೂಡಿನಿಂದ ರೇಷ್ಮೆ ನೂಲು ತೆಗೆಯುತ್ತಾರೆ. ಈ ನೂಲನ್ನು ಟ್ವಿಸ್ಟಿಂಗ್ ಫ್ಯಾಕ್ಟರಿಯಲ್ಲಿ ಹುರಿ ಮಾಡಲಾಗುತ್ತೆ. ನಂತರ ಇದು ಡೈಯಿಂಗ್ ಘಟಕದಲ್ಲಿ ಬಣ್ಣ ಪಡೆಯುತ್ತೆ. ಆಮೇಲೆ ಮಗ್ಗದಲ್ಲಿ ಸೀರೆಯಾಗುತ್ತೆ. ಸೀರೆಯಾದಮೇಲೆ ಪಾಲಿಷ್ ಮಾಡಬೇಕು. ಮುಂದೆ ಸೀರೆ ಅಂಗಡಿ..."
"ಅಬ್ಬಬ್ಬಾ! ಎಷ್ಟೊಂದು ಕೆಲಸ. ಒಳ್ಳೆ ರೈಲಿನ ಬೋಗಿಗಳಂತೆ ಒಂದರ ಹಿಂದೆ ಒಂದು ಹೇಳ್ತಾ ಇದ್ದೀರಲ್ಲ" ಎಂದು ಈ ರೇಷ್ಮೆ ಸರಪಣಿಯ ಬಗ್ಗೆ ಪ್ರಕಾಶ್ ಮೆಚ್ಚುಗೆಯ ಅಚ್ಚರಿ ವ್ಯಕ್ತಪಡಿಸಿದರು.
"ನಮ್ಮೂರಲ್ಲಿ ೪೫೦೦ ರೇಷ್ಮೆ ಘಟಕಗಳಿವೆ. ಇದರಲ್ಲಿ ಸುಮಾರು ೩೦೦೦೦ ಮಂದಿ ಕೆಲಸ ಮಾಡುತ್ತಾರೆ. ನಮ್ಮ ತಾಲೂಕಿನಲ್ಲಿ ೫೦೦೦ ಹೆಕ್ಟೇರ್ ಭೂಮಿಯಲ್ಲಿ ರೇಷ್ಮೆ ಕೃಷಿ ಅಂದರೆ ಹಿಪ್ಪು ನೇರಳೆ ಸೊಪ್ಪು ಬೆಳೆಯುತ್ತಾರೆ. ಸುಮಾರು ೧೦೦೦೦ ರೈತ ಕುಟುಂಬಗಳು ಇದನ್ನು ಅವಲಂಭಿಸಿವೆ. ಇದಲ್ಲದೆ ರೇಷ್ಮೆ ಕೊಳ್ಳುವವರು, ಮಾರುವವರು, ಬ್ರೋಕರುಗಳು, ಬಡ್ಡಿಗೆ ಕೊಡುವವರು, ಮೂಟೆ ಹೊರುವವರು, ನೀರು ಗಾಡಿಯವರು, ಫ್ಯಾಕ್ಟರಿಗೆ ಬೇಕಾದ ಸಾಮಾನು ಮಾರುವವರು, ಟೆಂಪೋಗಳು, ಕಾರುಗಳು, ತಳ್ಳುವ ಗಾಡಿಗಳು.... ಒಂದೇ ಎರಡೇ.. ಲಕ್ಷಾಂತರ ಜನರಿಗೆ ಅನ್ನ ಕೊಡುತ್ತಿದೆ ರೇಷ್ಮೆ"
"ರೇಷ್ಮೆ ಹುಳುಗಳ ಸಾವು ನೋವಿನಿಂದ ಅಂದವೂ ಇದೆ ಚಂದವೂ ಇದೆ ಲಕ್ಷಾಂತರ ಜನರಿಗೆ ಹೊಟ್ಟೆ ಬಟ್ಟೆಯೂ ಇದೆ ಅಂತ ಗೊತ್ತಿಲ್ಲಾಗಿತ್ತು ಮಾರಾಯ್ರೆ" ಅಂದರು ಪ್ರಕಾಶ್.
"ಈ ರೇಷ್ಮೆ ಸೀರೆ ಹಿಂದೆ ಇಷ್ಟೊಂದು ಹಿಂಸೆ ಇದೆ ಅಂತ ಈ ಸಾರಿ ಹಬ್ಬಕ್ಕೆ ನನ್ಹೆಂಡತಿಗೆ ಸೀರೆ ಕೊಡಿಸ್ಲಿಲ್ಲ!" ಎಂದು ಶಿವು ಚಟಾಕಿ ಹಾರಿಸಿದರು.
"ಕಳ್ಳಂಗೊಂದು ಪಿಳ್ಳೆ ನೆವವಂತೆ. ಇರಿ ಹೇಮಾಶ್ರೀಗೆ ಫೋನ್ ಮಾಡಿ ಹೇಳ್ತೀನಿ. ನಿಮ್ಮ ಜೇಬಿಗೆ ಕತ್ತರಿ ಹಾಕಿಸ್ತೀನಿ" ಅಂದರು ಪ್ರಕಾಶ್ ಪತ್ನಿ.
ಶಿವು ಗಲಿಬಿಲಿಗೊಂಡರು.
"ನಮ್ದೇನಿದೆ ಶಿವು. ನಮ್ಮದೆಲ್ಲಾ ಹೆಂಗಸರ ಕೈಲಿದೆ..! ಅವ್ರು ಹೇಳಿದಂತೆ ಕುಣಿದ್ರಾಯ್ತು" ಎಂದು ಕಣ್ಣು ಮಿಟುಕಿಸುತ್ತಾ ಸಾಂತ್ವನ ಹೇಳಿದರು ಪ್ರಕಾಶ್.
ಶಿಡ್ಲಘಟ್ಟದ ರೇಷ್ಮೆ ಬಗ್ಗೆ ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ :
http://www.youtube.com/watch?v=eAkaFniaB2o
http://www.youtube.com/watch?v=bqrOSPB7opU
34 comments:
ನಿಜ. ರೇಶ್ಮೆ ಸೀರೆಯ ಅಂದದ ಹಿಂದೆ ಎಷ್ಟು ಜೀವಿಗಳ ಸಾವುನೋವಿದೆ. ಲೇಖನ ಚೆನ್ನಾಗಿದೆ
ರೇಷ್ಮೆ ಸೀರೆ ಅಂದರೆ ಬರೀ ಒಡಲು, border, ಬಳ್ಳಿ, ಹೂವು, ಭುಟ್ಟ ಅಂದುಕೊಳ್ಳುತ್ತೇವೆ ಆದರೆ ಅದರ ಹಿಂದೆ ಎಷ್ಟೆಲ್ಲ ವಿಷಯಗಳಿವೆ! ಸಾಧ್ಯವಾದರೆ ಇವೆಲ್ಲದರ photoಗಳನ್ನೂ ಬ್ಲಾಗಿಗೆ ಹಾಕಿ.. :)
ಮಲ್ಲಿಕಾರ್ಜುನ್ ನಮ್ಮ ಮನೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ರೇಷ್ಮೆ ಕೃಷಿ ಮಾಡಿದ್ದೆವು. ನಂತರ ಹಲವಾರು ಕಾರಣಗಳಿಂದ ದನ್ನು ನಿಲ್ಲಿಸಿದ್ದೆವು. ಅಂದಿನ ನಮ್ಮ ಾರ್ಥಿಕ ಸ್ಥಿತಿಯಲ್ಲಿ ನಮಗೆ ಅದರಿಂದ ತುಂಬಾ ಅನುಕೂಲವಾಗಿತ್ತು. ನಾನೂ ನಮ್ಮ ತಂದೆಯವರೊಡನೆ ರಾಮನಗರ ಮಾರುಕಟ್ಟೆಗೆ ಬಂದಿದ್ದೆ. ನಂತರ ನಾನೇ ಸ್ವತಂತ್ರವಾಗಿ ಹಾಸನ, ಕೊಳ್ಳೆಗಾಲ, ಬೆಂಗಳೂರು ಮಾರುಕಟ್ಟೆಗಳಿಗೆ ಗೂಡು ತಂದಿದ್ದು ಇದೆ. ಆದರೆ ಶಿಡ್ಲಘಟ್ಟಕ್ಕೆ ಬರಲಿಲ್ಲ. ೀಗ ನೀವು ಕೊಟ್ಟಿರುವ ಚಿತ್ರಣ ನೋಡಿದರೆ ಮಾರುಕಟ್ಟೆ, ಪಿಲೇಚರ್, ನೂಲು ಸಂಸ್ಕರಣ ಘಟಕಗಳನ್ನು ನೋಡಲಾದರೂ ಒಮ್ಮೆ ಅಲ್ಲಿಗೆ ಬರಬೇಕು ಅನ್ನಿಸುತ್ತಿದೆ. ಒಂದೆರಡು ಪೋಟೋ ಹಾಕಬಹುದಿತ್ತು.
ಒಂದು ರೇಷ್ಮೆ ಸೀರೆಯ ಹಿಂದೆ ಅದೆಷ್ಟು ಸಾವು ನೋವಿದೆಯಲ್ಲವೆ? ಇಂತಹ ಸೀರೆಗೆ ನಮ್ಮ ಸಂಪ್ರದಾಯದಲ್ಲಿ ಪವಿತ್ರ ಸ್ಥಾನ.ವಿಚಿತ್ರವೆಂದರೆ ಯಾವುದೆ ಮಂಗಳ ಕಾರ್ಯದಲ್ಲಿ ಇಷ್ಟು ಹುಳುಗಳ ಸಮಾಧಿ,ಶವಗಳಿಂದ ತಯಾರಾದ ಈ ಸೀರೆಗೆ ಅಗ್ರಸ್ಥಾನ.
ಇವೆಲ್ಲವುಗಳ ಫೊಟೊ ಹಾಕದೆ ನೀವು ನಿಮ್ಮ ಕ್ಯಾಮರಕ್ಕೆ ಅವಮಾನ ಮಾಡಿದ್ದೀರಿ ಸರ್.
ಮಲ್ಲಿಕಾರ್ಜುನ,
ಆಪ್ತಸಂಭಾಷಣೆಯಲ್ಲಿಯೇ, ರೇಷ್ಮೆ ಬಟ್ಟೆಯ ತಯಾರಿಕೆಯ ಎಲ್ಲ ಹಂತಗಳನ್ನೂ ತಿಳಿಸಿದ್ದೀರಿ. ಅಲ್ಲದೆ, ರೇಶ್ಮೆ ವ್ಯಾಪಾರದ
ವಿವಿಧ ಘಟ್ಟಗಳನ್ನೂ ತಿಳಿಸಿದ್ದೀರಿ. ಇದೆಲ್ಲವನ್ನೂ ಅರಿತುಕೊಂಡದ್ದಕ್ಕೆ ಸಂತೋಷವಾಯಿತು.
ಕೆಲವು ದಿನಗಳ ಹಿಂದೆ ಪಕ್ಷಿಗಳಿಗೆ ಉಂಗುರ ಹಾಕುವದರ ಬಗೆಗೆ ವಿಸ್ತಾರ ಮಾಹಿತಿ ನೀಡಿದ್ದಿರಿ.
ಈ ರೀತಿಯಾಗಿ ನಿಮ್ಮ blog ಮಾಹಿತಿ-ಕೋಶವಾಗಿದೆ.
ಧನ್ಯವಾದಗಳು.
dear malli, nice to read your article about silk and sidlaghatta, you have made it really easy for the reader to understand the complicated process of life cycle of this remarkable silkworm by your style of narration which is simple but engaging and informative. as you know " how you say is as important as what you say" hope to read lot more from your blog in future,
keep up the good work
ರೇಷ್ಮೆಯನ್ನು ಮೂರು ಜನ ಮೂರು ದೃಷ್ಟಿಯಲ್ಲಿ ನೋಡಿದ್ದೀರಿ....!!
ನಿಮ್ಮ ಬರವಣಿಗೆ ನಿಮ್ಮ ಫೋಟೊಗಳಷ್ಟೆ ಚೆನ್ನಾಗಿದೆ.
ಫೋಟೊ ಹಾಕಿದ್ದರೆ ನಿಮ್ಮ ಬರವಣಿಗೆ ಸವಿಯಲು ಆಗುತ್ತಿರಲಿಲ್ಲ.
ಈ ಲೇಖನಕ್ಕೆ ಫೋಟೊ ಕೊರತೆ ಎಂದು ಅನಿಸಲಿಲ್ಲ.
ಇನ್ನಷ್ಟು ಬರವಣಿಗೆ ಲೇಖನ ಬರಲಿ.
Thanks.
ಪ್ರಕಾಶ್ ಮತ್ತು ಶಿವೂ ಅವರ ಮಾತಿನ ಚಟಾಕಿಗಳ ಒಗ್ಗರಣೆಯೊ೦ದಿಗೆ , ರೇಷ್ಮೆ ಕುರಿತಾಗಿ ನೀವು ಕೊಟ್ಟ ಮಾಹಿತಿ ಚೊಕ್ಕವಾಗಿ ಮೂಡಿ ಬ೦ದಿದೆ. ಒ೦ದೆರಡು ಫೋಟೋ ಹಾಕಿದ್ರೆ ಇನ್ನಷ್ಟು ಕಳೆಗಟ್ಟುತ್ತಿತ್ತು.
ರೇಶ್ಮೆ ಸೀರೆಯ ಅಂದದ ಹಿಂದೆ ಎಷ್ಟು ಜೀವಿಗಳ ಸಾವು ನೋವಿದೆ....
ಬೇಕೆ ಬೇಕು....ಫೋಟೋ ಬೇಕು...ಈ ಲೇಖನಕ್ಕೆ ಫೋಟೋ ಕಳೆ ಕಟ್ಟುತಿತ್ತು...
ಲೇಖನ ಚೆನ್ನಾಗಿ ಮೂಡಿ ಬಂದಿದೆ...
ದೀಪಸ್ಮಿತ ಸರ್,
ಹಲವು ಜೀವಿಗಳ ಸಾವು ನೋವು, ಲಕ್ಷಾಂತರ ಜನರ ಅವಲಂಬನೆ, ನೀರೆಯರ ಮೆಚ್ಚಿನ ಸೀರೆ... ಎಲ್ಲವನ್ನೂ ಹೇಳಬಯಸಿದ್ದೇನೆ ಇಲ್ಲಿ. ಮೆಚ್ಚಿಗೆಯಾಗಿದ್ದಕ್ಕೆ ಧನ್ಯವಾದಗಳು.
ರೂಪಾಶ್ರೀ ಅವರೆ,
ಫೋಟೋಗಳನ್ನೆಲ್ಲಾ ಒಂದೇ ಬಾರಿ ಹಾಕಲು ಕಷ್ಟವಾಗುತ್ತೆ. ಏಕೆಂದರೆ ಮೊಟ್ಟೆಯಿಂದ ಬಟ್ಟೆ ತನಕ ಹಲವಾರು ಹಂತಗಳು. ಮುಂದೆ ಅವುಗಳನ್ನು ಬಿಡಿ ಬಿಡಿ ಮಾಡಿಕೊಂಡು ಹಾಕಲು ಪ್ರಯತ್ನಿಸುವೆ.
ಡಾ. ಸತ್ಯನಾರಾಯಣ್ ಸರ್,
ನಮ್ಮೂರಿಗೆ ಬನ್ನಿ. ರೇಷ್ಮೆಯ ನಾನಾ ಹಂತಗಳನ್ನು ನೋಡಬಹುದು. ನೀವೂ ಹಿಂದೆ ರೇಷ್ಮೆ ಬೆಳೆಗಾರರೆಂದು ತಿಳಿದು ಸಂತೋಷವಾಯಿತು.
ಸುಮ ಮೇಡಂ,
ಈ ಲೇಖನಕ್ಕೆ ಫೋಟೋ ಯಾವುದು ಹಾಕಬೇಕು ಯಾವುದು ಬಿಡಬೇಕು ತಿಳಿಯದೆ ಕೊನೆಗೆ ಫೋಟೋ ಹಾಕದೇ ಪ್ರಕಟಿಸಬೇಕಾಯ್ತು. ಸ್ನೇಹಿತರಾದ ಪ್ರಕಾಶ್ ಹೆಗಡೆಯವರ ಬಳಿ ಇದರ ಬಗ್ಗೆ ಸಲಹೆ ಮಾರ್ಗದರ್ಶನ ಕೂಡ ಪಡೆದೆ. ಬೇಸರ ಪಟ್ಟುಕೊಳ್ಳದಿರಿ. ಇನ್ನೊಮ್ಮೆ ಹಲವಾರು ಚಿತ್ರಗಳೊಂದಿಗೆ ಬರುವೆ.
ಸುನಾತ್ ಸರ್,
ಆ ದಿನ ಪ್ರಕಾಶ್ ಹೆಗಡೆಯವರ ಮನೆಯಲ್ಲಿ ನಡೆದ ಮಾತುಕಥೆಯನ್ನು ಪ್ರಕಾಶ್ ಹೆಗಡೆಯವರು ಬಲವಂತ ಮಾಡಿ ಬರೆಸಿದರು. ಮೂರೂ ಜನರ ಮೂರು ದಿಕ್ಕಿನ ಆಲೋಚನೆಯನ್ನು ಆದಷ್ಟೂ ರೇಷ್ಮೆಯ ವಿವರಣೆಯೊಂದಿಗೆ ಬರೆಯಿರಿ ಎಂದು ಅವರು ಸಲಹೆ ಕೊಟ್ಟಿದ್ದರಿಂದಾಗಿ ಈ ಬರಹ ರೂಪುಗೊಂಡಿತು. ನಿಮಗೆ ಇಷ್ಟವಾಗಿದ್ದಕ್ಕೆ ಖುಷಿಯಾಯ್ತು.
ಡಾ.ಸಿರೀಶ್,
ಖುಷಿಯಾಯ್ತು ನಿಮ್ಮ ಕಾಮೆಂಟನ್ನು ನೋಡಿ. ನಾವೆಲ್ಲಿದ್ದರೂ ನಮ್ಮೂರನ್ನು, ಅದರ ವಿಶೇಷವನ್ನು ಹೊಗಳದಿರಲು ಸಾಧ್ಯವೇ? ಹಾಗಾಗಿ ಪ್ರಕಾಶ್ರ ಮನೆಯಲ್ಲಿ ನಮ್ಮೂರಿನ ಬಗ್ಗೆ ಮಾತಾಡಿದ್ದು ನಂತರ ಬರಹವಾಗಿ ಎಲ್ಲರೂ ಓದುವಂತಾಯ್ತು. ಎಷ್ಟೇ ಕೆಟ್ಟದಿದ್ದೂ ನಮ್ಮೂರು ನಮಗೆ ಹೆಚ್ಚು ಅಲ್ವೇ?
SweetHome ನ ಮೇಡಂ,
ತುಂಬ ತುಂಬ ಥ್ಯಾಂಕ್ಸ್.
ಪರಂಜಪೆ ಸರ್,
ಧನ್ಯವಾದಗಳು. ಇನ್ನೊಮ್ಮೆ ಚಿತ್ರಗಳನ್ನು ಹಾಕುವೆ.
ಸವಿಗನಸು ಸರ್,
ಇನ್ನೊಮ್ಮೆ ಖಂಡಿತ ಫೋಟೋ ಹಾಕುವೆ. ಧನ್ಯವಾದಗಳು.
ಅಂದದಲ್ಲಿ ಸಾವೂ ಇದೆ...
ಹೌದು ಮಲ್ಲಿಕಾರ್ಜುನ... ಕೀಟ ಜಗತ್ತನ್ನು ಹತ್ತಿರದಿಂದ ಬಲ್ಲ ನಿಮಗೆ ಗೊತ್ತೇ ಗೊತ್ತು.
ಹೂವುಗಳ ಅಂದಕ್ಕೆ ಮಾರು ಹೋಗಿ ಜೀವ ತೇಯುವ ಕೀಟಗಳಿಗೆ 'ಕೊನೆಯಿಲ್ಲ'.
ಮಲ್ಲಿಕಾರ್ಜುನ್,
ಇಂಥಹ ಬರವಣಿಗೆಗಳಲ್ಲಿ ಏನೋ ಒಂಥರ ಖುಷಿಯಿದೆ ಅಲ್ವಾ...ಪ್ರಕಾಶ್ ಹೆಗಡೆಯವರ ಮನೆಯಲ್ಲಿ ರುಚಿಯಾದ ಊಟ ಮಾತು...ಅದು ಎಲ್ಲಿಗೋ ಹೋಗಿ ಏನೆಲ್ಲಾ ಹೊಸತನ್ನು ಸೃಷ್ಟಿಸಿಕೊಳ್ಳುತ್ತದೆ ಎನ್ನುವುದಕ್ಕೆ ನಿಮ್ಮ ಬರಹವೇ ಸಾಕ್ಷಿ.
ರೇಷ್ಮೆಯ ಉತ್ತಮ ಮಾಹಿತಿಯನ್ನು ನೀಡುತ್ತಾ ನವಿರು ಹಾಸ್ಯದ ಲೇಖನ ತುಂಬಾ ಇಷ್ಟವಾಯಿತು. ಇದಕ್ಕಾಗಿ ಪ್ರಕಾಶ್ ಹೆಗಡೆಯವರ ಮನೆಯೂಟಕ್ಕೆ ಥ್ಯಾಂಕ್ಸ್ ಹೇಳಲಾ...ಅಥವ ನೀವು ಇಷ್ಟು ಚೆನ್ನಾಗಿ ಬರೆದಿದ್ದಕ್ಕೆ ಥ್ಯಾಂಕ್ಸ್...ಹೇಳಲಾ...
ಅಬ್ಬಾ.. ಎಷ್ಟು ಹ೦ತಗಳಿವೆ ರೇಷ್ಮೆ ಕೆಲಸದ ಹಿ೦ದೆ!
ಇ೦ತಹ ಒ೦ದು ವಿಷಯವನ್ನು ಹ೦ಚಿಕೊ೦ಡಿದ್ದಕ್ಕೆ ನಿಮಗೆ ಥ್ಯಾ೦ಕ್ಸ್... ಹಾಗೆ ಶಿವು ಮತ್ತು ಪ್ರಕಾಶ್ ಅವರಿಗೂ ಕೂಡ :)
ಮಲ್ಲಿಕಾರ್ಜುನ್ ಅವರೆ,
ರೇಷ್ಮೆಯ ತಯಾರಿಕೆಯಲ್ಲಿನ ’ಮೊಟ್ಟಿಯಿಂದ ಬಟ್ಟೆ’ವರೆಗಿನ ಎಲ್ಲಾ ಹಂತಗಳನ್ನೂ ಸುಲಭ ರೀತಿಯಲ್ಲಿ ಅರ್ಥವಾಗುವಂತೆ ತಿಳಿಸಿದ್ದೀರಿ.
ಜಾತಿಯಲ್ಲಿ ನೇಯ್ಗೆಯವರಾದ್ದರಿಂದ ಜೊತೆಗೆ ಹೇಮಂತ್ ಜೊತೆ ಸಿರಿಕಲ್ಚರ್ ಯೂನಿಟ್ ಗೊಮ್ಮೆ ಭೆಟ್ಟಿ ಕೊಟ್ಟಿದ್ದರಿಂದ ನನಗೆ ಇದರ ಬಗ್ಗೆ ಸ್ವಲ್ಪ ವಿವರ ಗೊತ್ತಿತ್ತು.. ಆದರೆ ಈಗ ಎಲ್ಲವನ್ನೂ ಪೂರ್ತಿಯಾಗಿ ತಿಳಿಕೊಂಡಂತಾಯಿತು!!
ಇಷ್ಟೊಂದು ಮಾಹಿತಿಯನ್ನು ಹಂಚಿಕೊಂಡಿದಕ್ಕೆ ವಂದನೆಗಳು.
ಮಲ್ಲಿಕಾರ್ಜುನ್ ,
ರೇಷ್ಮೆಯ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ನಿಜ, ರೇಷ್ಮೆ ಸೀರೆಯ ಚೆಲುವಿನ , ನವಿರಿನ , ನುಣುಪಿನ ಮತ್ತು ಸೊಬಗಿನ ಹಿಂದೆ ಇಷ್ಟೆಲ್ಲಾ ನೋವಿನ ಕತೆಯಿದ್ದರೂ, ಚಂದದ ರೇಷ್ಮೆ ಸೀರೆ ಕಂಡ ಕೂಡಲೇ ಉಳಿದದ್ದೆಲ್ಲ ಮರೆತು ಹೋಗುವುದೂ ಕೂಡ ನಿಜ ! ಹಾಗೆ ನೋಡಿದರೆ , ಖುಷಿ ಕೊಡುವ ಬಹಳಷ್ಟು ವಿಷಯಗಳ ಹಿಂದೆ ನೋವು ಅಡಗಿದೆ ಅಲ್ಲವೇ ? ಆದರೆ ನಾವದನ್ನು ಮರೆತೇ ಬಿಡುತ್ತೇವೆ . ಬಣ್ಣ ಬಣ್ಣದ ಪಟಾಕಿ ಸುಟ್ಟು ಸಂಭ್ರಮಿಸುವಾಗ, ವಾಯುಮಾಲಿನ್ಯ , ಶಬ್ದಮಾಲಿನ್ಯವನ್ನು ಅಷ್ಟೇ ಏಕೆ, ಆ ಪಟಾಕಿ ತಯಾರಿಸುವಾಗ ಸುಟ್ಟು ಹೋದ ಶಿವಕಾಶಿಯ ಬಾಲ ಕಾರ್ಮಿಕರ ಕೈಗಳನ್ನು ಸಹ ಮರೆಯುತ್ತೇವೆ ! ಇದು ವೈಪರೀತ್ಯವೇ ಅಲ್ಲವೇ?
ಮಲ್ಲಿಕಾರ್ಜುನ್....
ನಿಮ್ಮ ಬರವಣಿಗೆ ನಿಮ್ಮ ಫೋಟೊಗಳಷ್ಟೇ ಸೊಗಸಾಗಿದೆ....
ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ...
ಉಪ್ಯುಕ್ತ ಮಾಹಿತಿಗಳು...
ಅಂದಿನ ಊಟದ ಜೊತೆಯಲ್ಲಿ...
ಮಾತುಗಳೂ ಸೊಗಸಾಗಿದ್ದವು...
ಉತ್ತಮ ವಿಡಿಯೋಗಳಿಗೂ ಧನ್ಯವಾದಗಳು....
ನಿಮ್ಮಿಂದ ಇನ್ನಷ್ಟು ಲೇಖನಗಳ ನಿರಿಕ್ಷೆಯಲ್ಲಿರುವೆ.....
ಮಲ್ಲಿಕ್ ಯಾವತ್ತೂ ನಿಮ್ಮ ಬ್ಲಾಗೊಂದು ಅಚ್ಚರಿ ನಂಗೆ... ಎಷ್ಟು ವಿಚಾರಗಳನ್ನು ಕಲೆ ಹಾಕುತ್ತೀರಿ. ನಿಮ್ಮ ಈ ಶ್ರದ್ಧೆಗೆ ನಮಸ್ಕಾರ
ಚುಟುಕಾಗಿ ರೇಶ್ಮೆ ಕಥೆ ಹೇಳಿದ್ದಿರಿ. ಬಾಲ್ಯದಲ್ಲಿ ನಮ್ಮುರ ರೇಶ್ಮೆ ಕ್ರಷಿಕರಿಗೆ ರೇಶ್ಮೆ ಸಾಕಾಣಿಕೆ ತಿಳಿದುಕೊಳ್ಳುವ ಕುತೂಹಲಕ್ಕೆ ಸ್ವಯ೦ ಸಹಾಯಕರಾಗಿ ಕೆಲಸ ಮಾಡುತ್ತಿದ್ದದ್ದು ನೆನಪಿಗೆ ಬ೦ತು. ಕತ್ತರಿಸಿದ ಹಿಪ್ಪು ನೇರಳೆ ಸೊಪ್ಪು ಹರಡೋದು, ಜ್ವರ ಬ೦ದಾಗ ಅವುಗಳ ತಟ್ಟೆ ಸ್ವಚ್ಚ ಮಾಡೋದು, ಹಣ್ಣು ಹುಳುಗಳನ್ನು ಗೂಡು ಕಟ್ಟಲು ಚ೦ದ್ರಿಕೆಗೆ ಬಿಡೋದು, ಗೂಡುಗಳನ್ನು ಚ೦ದ್ರಿಕೆಯಿ೦ದ ಬಿಡಿಸೋದು ನಮ್ಮ ಅಟದ ಕೆಲಸವು ಆಗಿತ್ತು. ರೈತರಿಗೆ ಪುಗಸಟ್ಟೆ ಕೂಲಿಗಳು ಅನ್ನಿ ಬೇಕಾದ್ರೆ. ಬಾಲ್ಯ ಜ್ನಾಪಿಸಿದ ತಮ್ಮ ಲೇಖನಕ್ಕೂ ತಮಗೂ ಧನ್ಯವಾದಗಳು.
ಶ್ರೀಕಂಠದಾನಿಯವರೆ,
ಕೆಲವೊಂದು ವೈರುಧ್ಯಗಳ ನಡುವೆ ನಮ್ಮ ಬದುಕು. ಅದ್ನ್ನು ಹೇಳಲು ಪ್ರಯತ್ನಿಸಿರುವೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಶಿವು,
ಬರಹ ಮೆಚ್ಚಿದ್ದಕ್ಕೆ ಖುಷಿಯಾಯ್ತು. ಒಟ್ಟಾರೆ ಒಳ್ಳೆಯ ಊಟ ಮತ್ತು ಬರೆಯಲು ಒತ್ತಾಯಿಸಿದ ಪ್ರಕಾಶ್ ಹೆಗಡೆಯವರಿಗೇ ನಾವು ಥ್ಯಾಂಕ್ಸ್ ಹೇಳೋಣ.
ಸುಧೇಶ್ ಶೆಟ್ಟಿಯವರೆ,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಸಾಧ್ಯವಾದರೆ ವೀಡಿಯೋ ಕೂಡ ಲಿಂಕ್ ಮಾಡಿರುವೆ ನೋಡಿ.
ಮಲ್ಲಿ ಸರ್,
ರೇಷ್ಮೆ ನೂಲಿನ ಹಿಂದೆ ಎಷ್ಟೊಂದು ಹುಳುಗಳ ಕರುಣಾಜನಕ ಸಾವು, ಎಷ್ಟೊಂದು ಜನರ ಕಷ್ಟದ ಕೆಲಸ ಅಡಗಿದೆ ಅಂತ ತಿಳಿದು ಖೇದಾಶ್ಚರ್ಯವಾಯಿತು. ಜೀವನ ಎಷ್ಟೊಂದು ವಿಪರ್ಯಾಸವಲ್ಲವೇ. ರೇಷ್ಮೆ ಹುಳುಗಳ ಜೀವತ್ಯಾಗದಿಂದ ಎಷ್ಟೊಂದು ಜನರ ಹೊಟ್ಟೆಗೆ ಹೊತ್ತಿನ ಗಂಜಿ ಸಿಗುತ್ತದೆ. ಒಂದು ಜೀವಿ ಸತ್ತು ಮತ್ತೊಂದು ಜೀವಿ ಬದುಕುವುದು ಪ್ರಕೃತಿಯ ನಿಯಮ ನೋಡಿ.
ರೇಷ್ಮೆ ಸಂಸ್ಕರಿಸುವ ವಿಧಾನದ ದೀರ್ಘ ಪರಿಚಯ ಮಾಡಿಕೊಟ್ಟಿರಿ. ಅಭಿನಂದನೆಗಳು.
ಒ೦ದು ಸ೦ವಾದದಲ್ಲಿ ಎಷ್ಟೆಲ್ಲ ಮಾಹಿತಿ ಇದೆ!! ಉತ್ತಮ ನಿರೂಪಣೆಯೊಂದಿಗೆ ಉತ್ತಮ ಮಾಹಿತಿ. ಧನ್ಯವಾದಗಳು.
ಮಲ್ಲಿಕಾರ್ಜುನ್, ಬರವಣಿಗೆ ತುಂಬಾ ಸೊಗಸಾಗಿದೆ. ರೇಶ್ಮೆ ಕಥೆ ಮತ್ತು ವ್ಯಥೆಯನ್ನು ಸುಂದರವಾಗಿ ಕಣ್ಣಿಗೆ ಕಟ್ಟುವ ಹಾಗೆ ತಿಳಿಸಿದಿರಿ. ಧನ್ಯವಾಧಗಳು
ರೂಪಶ್ರೀಯವರೆ,
ನೀವು ಲೇಖನ ಮೆಚ್ಚಿದ್ದಕ್ಕೆ ಖುಷಿಯಾಯ್ತು. ಎಲ್ಲಾ ಮಾಹಿತಿ ಒಂದೆಡೆಯೇ ಕೊಟ್ಟು ಬೋರು ಹೊಡೆಸಿರಬಹುದೆಂದುಕೊಂಡಿದ್ದೆ!
ಜೊತೆಯಲ್ಲಿರುವ ವೀಡಿಯೋ ನೋಡಿದಿರಾ?
Post a Comment