Friday, August 21, 2009

ಅಂಗಳದ ಗಿಡದಲ್ಲಿ ಹೂಕುಟುಕ

ಮತ್ಯಾರ ನಿರೀಕ್ಷೆಯೋ ನಿನಗೆ...
ಸಣ್ಣಗಾತ್ರದ ಉಜ್ವಲವರ್ಣದ ಅತಿಥಿಗಳು ಈಚೆಗೇನಾದರೂ ನಿಮ್ಮ ಮನೆಯಂಗಳಕ್ಕೆ ಬಂದಿದ್ದರಾ? ನೀವು ಕಚೇರಿಗೆ ಹೋಗಿದ್ದಾಗಲೋ, ಅಥವಾ ಕೆಲಸದಲ್ಲಿ ಮಗ್ನರಾಗಿದ್ದಾಗಲೋ ಆಮಂತ್ರಣ ಇಲ್ಲದೆಯೇ ಬಂದು ಹೋಗಿರುತ್ತಾರೆ ಬಿಡಿ. ನಿಮ್ಮ ಗಮನಕ್ಕದು ಬಂದಿರಲಿಕ್ಕಿಲ್ಲ. ಬರುವುದಷ್ಟೇ ಅಲ್ಲ. ನಿಮ್ಮ ಮನೆಯಲ್ಲಿ ಹೂಗಿಡಗಳಿದ್ದರೆ ಖಂಡಿತ ಚಹಾ... ಕ್ಷಮಿಸಿ ಮಧುಪಾನವನ್ನು ಮಾಡಿ ಹೋಗಿರುತ್ತಾರೆ. ಈ ಬಾರಿ ಈ ಪುಟಾಣಿ ಅತಿಥಿಗಳು ರೆಕ್ಕೆ ಬಡಿಯುತ್ತ ನಿಮ್ಮ ಅಂಗಳಕ್ಕೆ ಅಡಿಯಿಟ್ಟಾಗ ಮರೆಯದೆ ಗಮನಿಸಿ, ಆತಿಥ್ಯ ನೀಡಿ.
ಹೂವಿನ ಸಿಹಿ ಹೀರುತ್ತ ಮೈಮರೆತ ಹಕ್ಕಿ.
ನೆಕ್ಟಾರಿನಿಯಿಡೀ ಕುಟುಂಬಕ್ಕೆ ಸೇರಿರುವ ಈ ಹಳದಿ ಹೂ ಗುಬ್ಬಿ(ಪರ್ಪಲ್ ರಂಪ್ಡ್ ಸನ್‌ಬರ್ಡ್) ಗಾತ್ರದಲ್ಲಿ ಗುಬ್ಬಚ್ಚಿಗಿಂತ ಸಣ್ಣವು. ಹೆಚ್ಚು ಕಡಿಮೆ ಹಮ್ಮಿಂಗ್ ಪಕ್ಷಿಯಂತೆ. ಇದರ ವೈಜ್ಞಾನಿಕ ಹೆಸರು "ನೆಕ್ಟರೀನಿಯಾ ಜೀಲಾನಿಕ".

ಈ "ಮರೆ"ಯಲ್ಲಿ ಕೂತೇ ಮುದ್ದು ಹಕ್ಕಿಗಳ ಚಿತ್ರ ತೆಗೆದದ್ದು.
ಸಾಮಾನ್ಯವಾಗಿ ವನ್ಯಜೀವಿ ಛಾಯಾಗ್ರಾಹಕರು ಹಕ್ಕಿಗಳ ಚಿತ್ರ ತೆಗೆಯಲು ಆಯ್ದುಕೊಳ್ಳುವುದು ಅದರ ಗೂಡನ್ನು. ಏಕೆಂದರೆ ಮರಿಗಳ ಪಾಲನೆಗಾಗಿ ಪದೇ ಪದೇ ಹಕ್ಕಿ ಗೂಡಿಗೆ ಬರುತ್ತದೆಂದು. ಇದಕ್ಕೆ ವ್ಯತಿರಿಕ್ತವಾಗಿ ಈ ಹೂ ಗುಬ್ಬಿಗಳು ನಮ್ಮ ಮನೆಯ ದಾಸವಾಳದ ಗಿಡಕ್ಕೆ ಪದೇ ಪದೇ ಲಗ್ಗೆಯಿಟ್ಟು ಮಧು ಹೀರುತ್ತಿದ್ದವು. ಫೋಟೋ ತೆಗೆದರೆ ಎಷ್ಟು ಚಂದ ಎಂದುಕೊಂಡು ಕ್ಯಾಮೆರಾ ಸಿದ್ಧಮಾಡಿ ಒಮ್ಮೆ ದಿನಪೂರ್ತಿ ಕಾದರೂ ಆ ದಿನ ಅವು ಸುಳಿಯಲೇ ಇಲ್ಲ! ಇನ್ನೊಮ್ಮೆ ನನ್ನ ಮನದ ಇಂಗಿತ ತಿಳಿದವಂತೆ ತಾವಾಗಿಯೇ ಬಂದು "ಟಿಟ್ಯೂಂ ಟಿಟ್ಯೂಂ ಟಿರ್ರ್..." ಎಂದು ಕರೆದವು.
ಹೆಣ್ಣು ಸೂರಕ್ಕಿ.

ಸರಿ ನಾನೂ ಫೋಟೋ ತೆಗೆಯಲು ಸಿದ್ಧನಾದೆ. ಗಂಡಿನ ತಲೆಯ ಮೇಲ್ಭಾಗದಲ್ಲಿ ಲೋಹ ಹೊಳಪಿನ ಹಸಿರು ಬಣ್ಣ. ರೆಕ್ಕೆ ಮತ್ತು ಬಾಲದ ಪುಕ್ಕಗಳು ಹೊಳೆಯುವ ನೇರಳೆ, ಕಂದುಬಣ್ಣ. ಎದೆ, ಹೊಟ್ಟೆ ಹಳದಿ ಬಣ್ಣ. ಹೆಣ್ಣು ಹಕ್ಕಿಗೆ ಹೊಳೆಯುವ ಬಣ್ಣಗಳಿಲ್ಲ. ಬೂದು ಬಿಳುಪು. ಗಲ್ಲ ಮತ್ತು ಹೊಟ್ಟೆಯ ಭಾಗ ಮಾತ್ರ ಹಳದಿ ಬಣ್ಣ. ಇವಕ್ಕೆ ಹೂವುಗಳಲ್ಲಿನ ಮಧು ಹೀರಲು ಅನುಕೂಲವಾಗುವಂತೆ ನೀಳ ಹಾಗೂ ಅತಿ ತೆಳುವಾದ ಕೊಕ್ಕು ಮತ್ತು ಸಹಾಯಕವಾಗಿ ನಾಳಾಕಾರದ ಚೋಷಕ ನಾಲಗೆ ಇರುತ್ತದೆ.

ಗಂಡು ಸೂರಕ್ಕಿ.
ಸಾಮಾನ್ಯವಾಗಿ ಇವು ಜೋಡಿಯಾಗಿಯೇ ಬರುತ್ತವೆ. ಒಂದು ಕ್ಷಣ ಒಂದು ಕಡೆ ನಿಲ್ಲದೆ ಅವಿಶ್ರಾಂತವಾಗಿ ಹಾರಾಡುತ್ತಿರುತ್ತವೆ.
ಮರೆಯೊಳಗೆ ಅವಿತು ತೂಕಡಿಸುವಾಗ ಇವು ಬಂದದ್ದು ತಿಳಿಯುತ್ತಿದ್ದುದೇ ಇವುಗಳ ಚಿಕ್ - ಚಿಕ್ ಅಥವಾ "ಟಿಟ್ಯೂಂ ಟಿಟ್ಯೂಂ ಟಿರ್ರ್..." ಎನ್ನುವ ವಿಶಿಷ್ಟ ಇಂಚರದಿಂದ. ತಕ್ಷಣವೇ ತಡಬಡಾಯಿಸಿ ಕ್ಯಾಮೆರಾ ಅಣಿಗೊಳಿಸುತ್ತಿದ್ದೆ. ಒಂದು ಕಡೆ ಕೂತು ಫೋಟೋಗಾಗಿ ಒಂದು ಭಂಗಿಯನ್ನು ಕೊಡುವುದು ಇವುಗಳ ಜಾಯಮಾನಕ್ಕೇ ಬಂದಂತಿಲ್ಲ! ಒಂದು ರೆಂಬೆಯಿಂದ ಮತ್ತೊಂದಕ್ಕೆ ಒಂದು ಹೂವಿಂದ ಮತ್ತೊಂದು ಹೂವಿಗೆ ನಿರಂತರವಾಗಿ ಸಿಳ್ಳು ಹಾಕುತ್ತಾ ಹಾರುತ್ತಲೇ ಇದ್ದವು.
ವಿವಿಧ ಭಂಗಿಗಳಲ್ಲಿ ಮಧುಪಾನ ಮಾಡುವ ಸೂರಕ್ಕಿ.
ಹಾಂ! ಈ ಹಕ್ಕಿಗೆ ಸೂರಕ್ಕಿಯೆಂತಲೂ ಹೆಸರಿದೆ( ಸನ್ ಬರ್ಡ್ ಎಂಬುದನ್ನು ಕನ್ನಡೀಕರಿಸಿ). ಆದರೆ ಸನ್‌ಬರ್ಡ್ ಎಂಬ ಹೆಸರು ಹೇಗೆ ಬಂತು? ನಾನು ಹುಡುಕಿದ ಯಾವ ಪುಸ್ತಕದಲ್ಲೂ ಇದರ ಬಗ್ಗೆ ಮಾಹಿತಿ ದೊರಕಲಿಲ್ಲ. ಸೂರ್ಯನಿಗೂ ಈ ಹಕ್ಕಿಗೂ ಇರುವ ಸಂಬಂಧವೇ ತಿಳಿಯಲಿಲ್ಲ.
ಅತಿ ಹಗುರ ಹಕ್ಕಿಗಳಾದ್ದರಿಂದ ಹೂವಿನ ತೊಟ್ಟು ದಳಗಳ ಮೇಲೆಲ್ಲಾ ರೆಕ್ಕೆ ಬಡಿಯುತ್ತಾ ತೆಲೆಕೆಳಗಾಗಿ ಜೋತಾಡುತ್ತಾ ಮಧು ಕುಡಿಯುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಭಾರತದಾದ್ಯಂತ ಕಂಡುಬರುವ ಈ ಹೂಗುಬ್ಬಿಗಳು ಪರಾಗಸ್ಪರ್ಶಕ್ಕೆ ಸಹಾಯ ಮಾಡುತ್ತವೆ. ಜೋಳಿಗೆಯಾಕಾರದ ಗೂಡುಕಟ್ಟಿ ಎರಡರಿಂದ ಮೂರು ಮೊಟ್ಟೆಗಳನ್ನಿಡುತ್ತವೆ.
ಮನಮೋಹಕವಾದ ಈ ಹಕ್ಕಿಗಳ ಸೌಂದರ್ಯವನ್ನು ನೋಡಿ ಆನಂದಿಸುವುದು ಜೀವನದ ಸಾರ್ಥಕ ಕ್ಷಣಗಳೇ ಅಲ್ಲವೇ?

13 comments:

SloganMurugan said...

Beautiful!

shivu said...

ಮಲ್ಲಿಕಾರ್ಜುನ್,

ಸದಾ ಚಟುವಟಿಕೆಯಿಂದ ಕೂಡಿದ ಈ ಹಕ್ಕಿಗಳು ಬೆಂಗಳೂರಿನ ಸುತ್ತ ಮುತ್ತ ಕಾಣುವುದೇ ಇಲ್ಲ. ನಾನು ಇವುಗಳ ಫೋಟೋ ತೆಗೆಯ ಬೇಕೆಂದರೆ ಕಡಿಮೆ ಎಂದರೂ ೪೦ ಕಿಲೊಮೀಟರ್ ದೂರ ಚಲಿಸಬೇಕು ಇಲ್ಲವೇ ನಿಮ್ಮೂರಿಗೆ ಬರಬೇಕು.

ಸದಾ ಚಟುವಟಿಕೆಯಿಂದರುವ ಇವುಗಳನ್ನು ಕ್ಲಿಕ್ಕಿಸುವುದು ಬಲು ಕಷ್ಟಸಾಧ್ಯದ ಕೆಲಸ. ಆದರೂ ನೀವು ಕ್ಲಿಕ್ಕಿಸಿದ್ದೀರಿ...ಅಭಿನಂದನೆಗಳು..ಅವುಗಳನ್ನು ನೋಡುವುದು ನಿಜಕ್ಕೂ ಜೀವನದ ಸಾರ್ಥಕದ ಕ್ಷಣಗಳು.

Dr. B.R. Satynarayana said...

ಮಲ್ಲಿಕಾರ್ಜುನ್ ಬಹಳ ದಿನವಾಗಿತ್ತು ನಿಮ್ಮ ಬ್ಲಾಗಿನಲ್ಲಿ ಇಂತಹುದೊಂದು ಪೋಸ್ಟ್ ನೋಡಿ. ಚಿತ್ರ-ವಿವರ ೆರಡೂ ಅದ್ಬುತ. ನಮಗೆ ಓದುವುದು ಗೊತ್ತು; ನೋಡುವುದೂ ಗೊತ್ತು. ಆದರೆ ಎರಡನ್ನೂ ಸಂಯೋಜಿಸಿ ನೋಡುವುದು ಸ್ವಲ್ಪ ಕಷ್ಟವೇ ಸರಿ. ಅದು ನಿಮಗೆ ಸಿದ್ಧಿಸಿದೆ. ಪೋಟೋಗಳಂತೂ ಅದ್ಭುತವಾಗಿವೆ. ನನಗೆ ಬಿಡುವಾದಾಗಲೆಲ್ಲಾ ಾಗಾಗ ನಿಮ್ಮ ಪೋಟೋಗಳನ್ನು ನೋಡುತ್ತಿರುತ್ತೇನೆ. ನೀವು ಕೊಡುವ ವಿವರಣೆ ಅವುಗಳನ್ನು ನನಗೆ ಇನ್ನಷ್ಟು ಆಪ್ತವಾಗಿಸಿಬಿಡುತ್ತವೆ. ಧನ್ಯವಾದ್ಳು ಹಾಗೂ ಅಭಿನಂದನೆಗಳು. ನಿಮಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು

ಕ್ಷಣ... ಚಿಂತನೆ... Think a while said...

ಮಲ್ಲಿಕಾರ್ಜುನ ಸರ್‍, ಮುಂಚಿತವಾಗಿ ಗೌರಿ-ಗಣೇಶ ಹಬ್ಬದ ಶುಭಾಶಯಗಳು.

ಈ ಹಕ್ಕಿಗಳನ್ನು ನಾನು ನಮ್ಮ ಕಚೇರಿ/ಮನೆ ಸುತ್ತಮುತ್ತ ಪ್ರತಿದಿನವೂ ನೋಡುತ್ತಿರುತ್ತೇನೆ. ಅವುಗಳ ಫೋಟೋ ತೆಗೆಯಲು ಹರಸಾಹಸ ಮಾಡಬೇಕು. ಒಂದು ಕ್ಷಣವೂ ಸಹ ಅವು ಒಂದು ಕಡೆಯಲ್ಲಿರುವುದಿಲ್ಲ. ಜೊತೆಗೆ ಹೂಗಳ ಒಳಗೇ ಕೆಲವು ಬಾರಿ ತೂರಿ ಮಧುವನ್ನು ಹೀರುತ್ತಿರುತ್ತವೆ. ಸೂರ್‍ಯನ ಕಿರಣಗಳು ಈ ಹಕ್ಕಿಗಳ ಮೇಲೆ ಬಿದ್ದಾಗ ಅವು ಹೊಳೆಯುವಂತಿರುತ್ತವೆ. ಅದಕ್ಕೆ ಸನ್ಬರ್ಡ್ ಎನ್ನಬಹುದೇನೋ?

ಈ ಸಣ್ಣ ಹಕ್ಕಿಗಳ ಭಂಗಿಗಳ ಫೋಟೋಗಳು ತುಂಬಾ ಮುದ್ದಾಗಿವೆ. ಇಂತಹ ಸುಂದರ ಚಿತ್ರಣ ಕೊಟ್ಟಿದ್ದಕ್ಕೆ ಧನ್ಯವಾದಗಳು.

ಶುಭಾಶಯಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

ಸಿಮೆಂಟು ಮರಳಿನ ಮಧ್ಯೆ said...

ಮುದ್ದಾದ... ಹಕ್ಕಿಗಳು...
ಅವುಗಳ ಮೋಹಕ ಭಂಗಿಗಳು...

ಸುಂದರ ಉಪಯುಕ್ತ ಮಾಹಿತಿಗಳು..

ಸುಂದರ ಫೋಟೊಗ್ರಫಿಗೆ...
ನಿಮ್ಮ ಹುಡುಕಾಟದ ಕಣ್ಣುಗಳಿಗೆ...

ಅಭಿನಂದನೆಗಳು....

ಗೌರಿಗಣೇಶ ಹಬ್ಬದ ಶುಭಾಶಯಗಳು...

ಸವಿಗನಸು said...

ಮಲ್ಲಿಕಾರ್ಜುನ್,
ಗೌರಿ-ಗಣೇಶ ಹಬ್ಬದ ಶುಭಾಶಯಗಳು....
ಹಕ್ಕಿಗಳ ವಿವಿಧ ಭಂಗಿಗಳ ಫೋಟೋಗಳು ತುಂಬಾ ಮುದ್ದಾಗಿವೆ. ಅದರ ಜೊತೆ ಮಾಹಿತಿ ಸಹ ಒದಗಿಸಿದ್ದೀರಾ...
ತುಂಬ ಚೆನ್ನಾಗಿದೆ....
ಇಂತಹ ಸುಂದರ ಚಿತ್ರಣ ನೀಡಿದ್ದಕ್ಕೆ ಅಭಿನಂದನೆಗಳು.

ಜಲನಯನ said...

ಮಲ್ಲಿ, ನಿಮ್ಮನ್ನು ಶಿವೂನ ಭೇಟಿಮಾಡಬೇಕೆಂದು ಈ ಸಲ ಬೆಂಗಳೂರಿಗೆ ಬಂದಾಗ ಪ್ರಯತ್ನಿಸಿದೆ, ಸಾಧ್ಯ ಆಗಲಿಲ್ಲ. ನಿಮ್ಮ ಊರ ಬಳಿಯ ವಿಜಯಪುರದಲ್ಲಿ ನನ್ನ ಚಿಕ್ಕಮ್ಮ ಇದ್ದಾರೆ, ಅಲ್ಲಿಗೆ ಬಂದಿದ್ದಾಗಲೂ ಇದೇ ಯೋಚನೆ.
ನಿಮ್ಮಿಬ್ಬರ ಪ್ರಕೃತಿ ಮತ್ತು ಚಿತ್ರಗ್ರಾಹಿ ಪ್ರೇಮ ಮತ್ತು ಇದನ್ನು ನಮ್ಮೆಲ್ಲರಲ್ಲಿ ಹಂಚುವ ಪರಿ ಬಹಳ ಮೆಚ್ಚುಗೆಯಾಯಿತು.
ಹಕ್ಕಿಗಳನ್ನು ಅಗ್ನಿಯವರೂ ಸೆರೆಹಿಡಿದು ಬ್ಲಾಗಿಸಿದ್ದಾರೆ..ಚನ್ನಾಗಿವೆ ಈ ದೃಶ್ಯಗಳು.

Keshav Kulkarni said...

wonderful.

ಮನಸು said...

WOW!!! tumba chennagide

ಸುಧೇಶ್ ಶೆಟ್ಟಿ said...

ತು೦ಬಾ ಚೆನ್ನಾಗಿದೆ ಸರ್....ಅಲೆಪ್ಪಿಯ ಬಗೆಗಿನ ಬರಹ ತು೦ಬಾ ಹಿಡಿಸಿತು... ಇನ್ನೂ ತು೦ಬಾ ಓದುವುದು ಬಾಕಿ ಇದೆ ನಿಮ್ಮ ಬ್ಲಾಗಿನಲ್ಲಿ... ನಿಧಾನಕ್ಕೆ ಓದುತ್ತೇನೆ...

ಬಾಲು said...

ಸೂಪರ್ ಇದೆ ಫೊಟೊ ಗಳು.
ಬೆ೦ಗಳೂರಿನಲ್ಲಿ ಕಾಗೆ ಗುಬ್ಬಿ ಗಳೆ ನಾಪತ್ತೆ ಆಗಿದೆ.
ನಮ್ಮ ಊರಲ್ಲಿ ಇ ಪಕ್ಷಿ ಗಳನ್ನ ಗುರುತಿಸಬಹುದು ಅನ್ಸುತ್ತೆ.

ಇ ಪಕ್ಷಿಗಳ ಫೊಟೊ ತೆಗೆಯೊದು ಬಹಳ ಪ್ರಯಾಸ ದಾಯಕ, ಆದರೂ ನಿವು ಅಧ್ಭುತ ಫೊಟೊ ಗಳನ್ನ ಕ್ಲಿಕ್ಕಿಸಿದ್ದಿರಿ. ಅಭಿನ೦ದನೆಗಳು.

ಒ೦ದು ಚಿಕ್ಕ ಗುಮಾನಿ : ಇ ಪಕ್ಷಿಗಳು ನಿಮಗೆ ಮಾಡೆಲ್ ಗಳಾಗಿ ಕೆಲಸ ಮಾಡುತ್ತಿವೆಯ ಅ೦ತ!!! (ಸುಮ್ನೆ ತಮಾಶೆಗೆ)

ತೇಜಸ್ವಿನಿ ಹೆಗಡೆ- said...

ಮಲ್ಲಿಕಾರ್ಜುನ ಅವರೆ,

ನಿಮ್ಮ ತಾಳ್ಮೆ ಹಾಗೂ ಪರಿಶ್ರಮ ನಿಜಕ್ಕೂ ಪ್ರಶಂಸನೀಯ. ಎಲ್ಲಾ ಚಿತ್ರಗಳೂ ತುಂಬಾ ಸುಂದರವಾಗಿವೆ. ಮಾಹಿತಿಯುಕ್ತ ಲೇಖದೊಂದಿಗೆ ಮೂಡಿರುವ ಗುಬ್ಬಿಮರಿಗಳ ಚಿತ್ರಗಳು ಮನಸೂರೆಗೊಂಡವು. ಸೂರಕ್ಕಿಯ ಚಿತ್ರ ಮತ್ತೂ ಇಷ್ಟವಾಯಿತು. ಧನ್ಯವಾದಗಳು.

Umesh Balikai said...

ಮಲ್ಲಿ ಸರ್,

ಆಹಾ! ಎಷ್ಟು ಚಂದದ ಹಕ್ಕಿ ಚಿತ್ರಗಳು. ನೋಡೋದೇ ಕಣ್ಣಿಗೆ ಹಬ್ಬ... ನಿಜಕ್ಕೂ ಜೀವನದ ಮಧುರ ಕ್ಷಣಗಳು. ಇಷ್ಟು ಚಂದದ ಚಿತ್ರಗಳನ್ನು ನೋಡಲು ನೀಡಿದ ನಿಮಗೆ ಧನ್ಯವಾದಗಳು. ನಿಮ್ಮೆಲ್ಲ ಚಿತ್ರಗಳು ಒಂದು ಸುಂದರ ಪುಸ್ತಕ ರೂಪದಲ್ಲಿ ಸಿಗುವಂತಾದರೆ ತುಂಬ ಚೆನ್ನ.. ಅದು ನಿಜಕ್ಕೂ ಎಲ್ಲರಿಗೂ ಸಂಗ್ರಹ ಯೋಗ್ಯ ಪುಸ್ತಕವಾಗುವುದರಲ್ಲಿ ಸಂದೇಹವಿಲ್ಲ. ಅದರ ಬಗ್ಗೆ ಯೊಚಿಸ್ತೀರಾ ಪ್ಲೀಸ್?

- ಉಮೇಶ್