Tuesday, August 11, 2009

ಪೌರಾತ್ಯ ರಾಷ್ಟ್ರಗಳ ವೆನಿಸ್ - ಅಲೆಪ್ಪಿ

ನಮ್ಮ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರ ಫೋನ್.
"ಸರ್, ಎಲ್ಲಿದ್ದೀರಿ?"
"ಅಲೆಪ್ಪಿಯಲ್ಲಿ.. ಆಟೋದಲ್ಲಿ ಸರ್.. ಇಲ್ಲಿ ಇವರ ಭಾಷೆ ನಮಗೆ ಬರಲ್ಲ, ನಮ್ಮ ಭಾಷೆ ಇವರಿಗೆ ಬರಲ್ಲ"
"ಒಂದ್ಕೆಲ್ಸ್ ಮಾಡಿ ಸರ್. ಒಂದು ಡಬ್ಬದಲ್ಲಿ ನಾಲ್ಕು ಕಲ್ಲು ಹಾಕಿ ಅಲುಗಾಡಿಸಿ. ಅವರಿಗೆ ಅರ್ಥವಾಗುತ್ತೆ..!"
ಪ್ರತಿಯೊಂದು ಸಮಸ್ಯೆಗೂ ಪ್ರಕಾಶ್ ಹೆಗಡೆಯವರ ಬಳಿ ಉತ್ತರವಿದೆ. ಮಲಯಾಳಂ ಮಾತನಾಡಲು ಎಷ್ಟು ಸುಲಭದ ಮಾರ್ಗ ಹೇಳುತ್ತಿದ್ದಾರೆ ಅನ್ನಿಸಿ ನನ್ನದೂ ಒಗ್ಗರಣೆ ಹಾಕಬೇಕಲ್ಲ...
"ಆ ಡಬ್ಬಕ್ಕೆ ಸ್ವಲ್ಪ ನೀರು ಹಾಕಿದರೆ ಹೇಗೆ ಸರ್? "ಳ" ಗಳ ಉತ್ಪತ್ತಿ ಆಗುತ್ತೆ..." ಎಂದು ಹೇಳಿದೆ.
"ಅಲ್ಲಿನ ವಿಶೇಷಗಳನ್ನೆಲ್ಲ ಸೆರೆ ಹಿಡಿದು ತನ್ನಿ ಸರ್. ಆಲ್ ದಿ ಬೆಸ್ಟ್..."
ಪ್ರಕಾಶ್ ಹೆಗಡೆಯವರು ಹಾರೈಸಿದಂತೆಯೇ ಅಲ್ಲಿನ ಅನೇಕ ವಿಶೇಷಗಳೊಂದಿಗೆ ಬಂದಿರುವೆ. ನೋಡಿ ನಿಮ್ಮ ಅನಿಸಿಕೆ ತಿಳಿಸಿ.



ನೀರು ಜಡೆಯ ನೀರೆಯರು
ಕೇರಳದ ಮಹಿಳೆಯರ ಜಡೆ ಕಡುಕಪ್ಪು ಮತ್ತು ಥೇಟ್ ಅವರ ನಾಗದೋಣಿಯಂತೆ ಉದ್ದೋಉದ್ದ. ತೆಂಗು ಬೆಳೆಯುವ ನಾಡದು. ಆಯುರ್ವೇದದ ತವರೂರು. ತೆಂಗಿನೆಣ್ಣೆಗೆ ದಾಸವಾಳದ ಹೂ, ಮೆಹೆಂದಿ ಎಲೆ, ತುಳಸಿ, ಕರಿಬೇವು, ಕೈಯೂನಿ ಇತ್ಯಾದಿ ಮಿಶ್ರಣ ಮಾಡಿ ತಯಾರಿಸಿದ ಎಣ್ಣೆ ಕೂದಲಿಗೆ ಹಚ್ಚಿಕೊಳ್ಳುತ್ತಾರೆ. ತಲೆಗೂದಲನ್ನು ಶಾಂಪು, ಸೀಗೆಕಾಯಿ ಬಳಸದೆ ಬರೀ ನೀರು ಹಾಕಿಕೊಂಡು ನೀರುಜಡೆ(ಅದೇ..ಜಡೆ ತುದಿಯಲ್ಲೊಂದು ಪುಟ್ಟ ಗಂಟು) ಹಾಕುವರು. ಇಲ್ಲಿನ ಬಿಸಿಲಿಗೆ ಅದು ಅಗತ್ಯ ಕೂಡ. ಹಾಗೆ ತಲೆ ತೊಳೆಯಬೇಕಾದಾಗ ದಾಸವಾಳದ ಎಲೆಯನ್ನು ಸ್ವಲ್ಪ ನೀರಿನೊಂದಿಗೆ ಕಲ್ಲಿನ ಮೇಲೆ ಅರೆದು, ಅದನ್ನು ಶಾಂಪೂ ತರಹ ಬಳಸುವರಂತೆ. ನೋಡಿದ್ರಾ ಹೇಗಿದೆ ಕೇರಳದ ನಾರಿಯರ ಕಪ್ಪು ಜಡೆಯ ರಹಸ್ಯ.

ಚಿನ್ನದ ಅಥವಾ ಬಣ್ಣದ ಅಂಚಿರುವ ಬಿಳಿ ಕಾಟನ್ ಸೀರೆಯನ್ನು ಕಸುವು ಮುಂಡು ಮತ್ತು ನೇರ್ಯತ್ತು ಅನ್ನುತ್ತಾರೆ. ಈ ಸೀರೆ, ಕಪ್ಪು ಬಣ್ಣದ ಹೊಳೆಯುವ ಉದ್ದ ಕೂದಲು... ಅದರ ಮೇಲೆ ಮಲ್ಲಿಗೆ ಹೂ... ಸಾದಾ... ಸೀದಾ... ಸುಂದರ...

ಮುಂಡು
ಬಿಳಿ ಪಂಚೆ ಅಲ್ಲಿನ ಸಾಂಪ್ರದಾಯಿಕ ಉಡುಪು. ಅಲ್ಲಿನ ವಾತಾವರಣಕ್ಕೆ ಅದು ಸೂಕ್ತ. ಆದರೆ ಅವರು ನಮ್ಮಂತೆ ಉಡುವುದಿಲ್ಲ. ಉಲ್ಟಾ!
ಸುಮ್ಮನೆ ಪಂಚೆ ಉಡುವುದನ್ನು ಊಹಿಸಿಕೊಳ್ಳಿ. ಬೆನ್ನು ಬಳಸಿ ಬಂದಿರುವ ಪಂಚೆಯ ಎರಡೂ ತುದಿಗಳನ್ನು ಎರಡು ಕೈಗಳಲ್ಲೂ ಹಿಡಿದಿರುವಿರಿ. ನಮ್ಮ ಕಡೆ ಮೊದಲು ಎಡಗೈಯಲ್ಲಿರುವ ತುದಿಯನ್ನು ಒಳಗೆ ತಂದು ನಂತರ ಬಲಗೈಯಲ್ಲಿರುವ ಬಲತುದಿಯನ್ನು ತಂದು ಸಿಕ್ಕಿಸುತ್ತೇವೆ. ಆದರೆ ಅವರು ಇದರ ತಿರುಗಾಮುರುಗಾ. ಮೊದಲು ಬಲಗೈ ನಂತರ ಎಡಗೈ. ಅವರದನ್ನು "ಮುಂಡು" ಅನ್ನುವರು.

ರಸ್ತೆ ಪಕ್ಕದಲ್ಲಿ ಮಾರಾಟಕ್ಕಿಟ್ಟಿದ್ದ ನಳ್ಳಿ, ಸೀಗಡಿ ಮತ್ತು ಮೀನುಗಳನ್ನು ನೋಡುವಾಗ, ಆಟೋ ಡ್ರೈವರ್ ಶಿಬು ಅವನ್ನು "ಕೊಂಜಿ", "ಚೆಮ್ಮೀನ್" ಮತ್ತು "ಕರಿಮಿ" ಎನ್ನುವರೆಂದ. "ಕರಿಮಿ" ಅಂದರೆ, ನನ್ನನ್ನು "ಕರಿ" ಮಾಡಿ ಎಂದೇ? ಗೊತ್ತಿಲ್ಲ!

ನೀರುಕಾಗೆ(ಕಾರ್ಮೊರಾಂಟ್) ಅವರ ಭಾಷೆಯಲ್ಲಿ "ನ್ಯಾರ" ಆಗಿದೆ.
ಮಿಂಚುಳ್ಳಿಯನ್ನು "ಪೊಣ್ಮಾನ್" ಅನ್ನುವರಂತೆ.



ಬತ್ತದ ವಿಶೇಷ
ಇಡೀ ಪ್ರಪಂಚದಲ್ಲಿ ನೆದರ್‌ಲ್ಯಾಂಡ್ ಬಿಟ್ಟರೆ ಇಲ್ಲಿ ಮಾತ್ರ ಸಮುದ್ರ ಮಟ್ಟಕ್ಕಿಂತ ಕೆಳಗೆ (೧.೫ - ೨ ಮೀಟರ್ ಕೆಳಗೆ) ಬತ್ತ ಬೆಳೆಯುವರು. ಇವರ ಹಸಿರು ಗದ್ದೆಗಳು ಮಾತಿನಿಂದ ಬಣ್ಣಿಸಲು ಸಾಧ್ಯವಿಲ್ಲ. ಕುವೆಂಪು ಅವರ ಕವನವನ್ನಷ್ಟೇ ಇಲ್ಲಿ ಬರೆಯಬಲ್ಲೆ.
ಹಸುರಾಗಸ ; ಹಸುರು ಮುಗಿಲು ;
ಹಸುರು ಗದ್ದೆಯಾ ಬಯಲು ;
ಹಸುರಿನ ಮಲೆ ; ಹಸುರು ಕಣಿವೆ ;
ಹಸುರು ಸಂಜೆಯಾ ಬಿಸಿಲೂ!

ಅದೊ ಹುಲ್ಲಿನ ಮಕಮಲ್ಲಿನ
ಪೊಸಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈಮುಚ್ಚಿರೆ
ಬೇರೆ ಬಣ್ಣವನೆ ಕಾಣೆ !

ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು !
ಹಕ್ಕಿಯ ಕೊರಲಿಂಪು ಹಸುರು ;
ಹಸುರು ಹಸುರಿಳೆಯುಸಿರೂ !

ಹಸುರತ್ತಲ್ ! ಹಸುರಿತ್ತಲ್ !
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್‌ನೆತ್ತರ್ ಒಡಲಿನಲಿ !

ನಾಗದೋಣಿ
ನಾರ್ವೆ ದೇಶದ "ಸ್ನೇಕ್ ಬೋಟ್" ಹೋಲುತ್ತದೆಂದು ಇಲ್ಲಿಗೆ ಮೊದಲು ಬಂದ ಯುರೋಪಿಯನ್ನರು ಇದನ್ನು "ಸ್ನೇಕ್ ಬೋಟ್" ಎಂದು ಕರೆದರು. ಹಾಗಾಗಿ ಕನ್ನಡದಲ್ಲಿ "ನಾಗದೋಣಿ" ಅನ್ನಬೇಕಾಗಿದೆ. ಕೇರಳಿಗರು ಮಾತ್ರ "ಚುಂಡನ್ ವಲ್ಲಂ" ಅನ್ನುವರು. ೨೪ ರಿಂದ ೩೬ ಮೀಟರ್ ಉದ್ದವಿರುವ ಈ ಚುಂಡನ್ ವಲ್ಲಂಗಳ ತುದಿ ಒಳ್ಳೆ ಹಾವಿನ ಹೆಡೆಯಂತೆಯೇ ಇರುತ್ತದೆ. ಹಿತ್ತಾಳೆಯಿಂದ ಅಲಂಕರಿಸಿದ ಈ ಹೆಡೆಯ ಭಾಗವನ್ನು "ಅಮರಂ" ಅನ್ನುವರು. ನೂರಕ್ಕೂ ಹೆಚ್ಚು ಜನ ಅಂಬಿಗರು, ವಾದ್ಯಗಾರರೊಂದಿಗೆ ಸೇರಿ "ವಂಚಿಪಟ್ಟು" ಎನ್ನುವ ಹಾಡುಗಳನ್ನು ಹಾಡುತ್ತಾ ಹೊಂದಾಣಿಕೆಯಿಂದ ಹುಟ್ಟುಹಾಕುವುದನ್ನು ನೋಡುವುದೇ ಹಬ್ಬ. ಅವರ ವೇಗ, ಶಕ್ತಿ, ಸ್ಥಿರತೆ, ಹೊಂದಾಣಿಕೆ... ಎಲ್ಲವೂ ಮೇಳೈಸಿದರೆ ಮಾತ್ರ ವಿಜಯ. ಈ ವಿಜಯದ ಕಿರೀಟ ಮಾಲೆಯೇ "ನೆಹರೂ ಟ್ರೋಫಿ".

ಜವಹರಲಾಲ್ ನೆಹರೂರವರು ೧೯೫೨ರಲ್ಲಿ ಅಲೆಪ್ಪಿಗೆ ಬಂದಿದ್ದಾಗ ಮೊಟ್ಟಮೊದಲು ಈ ಚುಂಡನ್ ವಲ್ಲಂ ಸ್ಪರ್ಧೆ ಆಯೋಜಿಸಿದ್ದರು. ಇದನ್ನು ನೋಡಿ ಪುಳಕಿತರಾದ ನೆಹರೂ ದಿಲ್ಲಿಗೆ ಹೋದ ಮೇಲೆ ಅಲ್ಲಿಂದ ತಮ್ಮ ಹಸ್ತಾಕ್ಷರವಿರುವ ಬೆಳ್ಳಿಯ ಟ್ರ‍ೋಫಿ ಕಳಿಸಿಕೊಟ್ಟರಂತೆ. ಈ ಟ್ರೋಫಿ ಗೆಲ್ಲಲು ಪ್ರತಿವರ್ಷ ಆಗಸ್ಟ್ ತಿಂಗಳ ಎರಡನೆ ಶನಿವಾರ ಇಲ್ಲಿನ ಪುನ್ನಮಡ ಲೇಕ್‌ನಲ್ಲಿ ಸ್ಪರ್ಧೆ... ಅದನ್ನು ವೀಕ್ಷಿಸಲು ದೇಶವಿದೇಶಗಳಿಂದ ಬಂದ ಜನಸಾಗರ...

ಈ ಬಾರಿ ಅಂದರೆ ೫೭ನೇ ವರ್ಷದ ಸ್ಪರ್ಧೆಗೆ ನೆಹರೂ ಕುಟುಂಬದಿಂದ ಸೋನಿಯಾಗಾಂಧಿ ಆಗಮಿಸಿದ್ದರು. ಅವರದ್ದೂ ಚಿತ್ರವನ್ನು ತೆಗೆಯಲು ಸಾಧ್ಯವಾಯ್ತು. ನೋಡಿ...

೧೩೭೦ ಮೀಟರ್ ಉದ್ದದ ಟ್ರಾಕ್‌ನಲ್ಲಿ ನಡೆಯುವ ದೋಣಿ ಸ್ಪರ್ಧೆ.

ಪ್ರಪಂಚದ ಅತಿ ದೊಡ್ಡ ಟೀಮ್‌ಸ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಸ್ನೇಕ್‌ಬೋಟ್ ರೇಸ್.

ನೆಹರೂ ಪೆವಿಲಿಯನ್‌ನಲ್ಲಿ ಮುಖ್ಯ ಅತಿಥಿಗಳು.

ಇನ್ನಷ್ಟು ನಾಗದೋಣಿಗಳ ಚಿತ್ರಾವಳಿ ವೀಕ್ಷಿಸಿ.














ಚಿತ್ರದಲ್ಲಿರುವ ವಿದೇಶಿ ಮಹಿಳೆಯರು ಮೂರು ತಿಂಗಳ ಹಿಂದೆ ಬಂದು ಇಲ್ಲಿನ ಮಹಿಳೆಯರೊಂದಿಗೆ ಸೇರಿ ತರಬೇತಿ ಪಡೆದು ಪ್ರಶಸ್ತಿಯನ್ನೂ ಬಾಚಿಕೊಂಡರು. ಹ್ಯಾಟ್ಸ್ ಆಫ್ ಟು ದೆಮ್.

28 comments:

ಸೂರ್ಯ ವಜ್ರಾಂಗಿ said...

ಫೋಟೋಗಳು ಚೆನ್ನಾಗಿವೆ ಸರ್... ಕೇರಳದ ಬಗ್ಗೆ ಮೋಹ ಹುಟ್ಟಿಸುತ್ತವೆ.
ಇನ್ನೂ ಅತ್ಯುತ್ತಮ ಛಾಯಾಚಿತ್ರಗಳು ನಿಮ್ಮ ಕಣ್ಣಲ್ಲಿ ಸೆರೆಯಾಗಲಿ.
ಧನ್ಯವಾದಗಳು

ಸವಿಗನಸು said...

ಫೋಟೋಗಳಿಗೆ ತಕ್ಕ ವಿವರಣೆಯ ಬರವಣಿಗೆ ಸೊಗಸಾಗಿದೆ.....ಕೇರಳದ ಸುಂದರತೆ ಚೆನ್ನಾಗಿ ಸೆರೆ ಹಿಡಿದ್ದಿದೀರಾ.....ನಮ್ಮನ್ನೊಮೆ ಕೇರಳಕ್ಕೆ ಕರೆದೊಯ್ದಂತ್ತಿತ್ತು....
ಮತ್ತಷ್ಟು ಬರಲಿ.....

ರಾಜೀವ said...

ಸರ್,

ಸೂಪರ್ ಚಿತ್ರಗಳು, ಅದಕ್ಕೆ ತಕ್ಕಂತೆ ವಿವರಣೆ. ಮಲಯಾಳಂ ಬರದೇ ಇದ್ದರೂ ಇಷ್ಟೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದೀರ. ನಿಮ್ಮ ಹುಡುಕಾಟದ ಪ್ರವೃತ್ತಿ ಭಾಷೆಗಳ ವ್ಯಾಪ್ತಿಯನ್ನು ಮೀರಿದ್ದು ಎಂದು ನಿರೂಪಿಸಿಬಿಟ್ಟಿರಿ. ಹೀಗೇ ಮುಂದುವರಿಯಲಿ.

"ಮುಂಡು"ವಿನ ವಿಷಯ ಚೆನ್ನಾಗಿ ವಿವರಿಸಿದ್ದೀರ. ಕುವೆಂಪು ಪದ್ಯ ಸೂಕ್ತವಾದ ಹಸಿರು ಬಣ್ಣದಲ್ಲೇ ಬರೆದಿದ್ದೀರ. ಮನ ಮುಟ್ಟಿತು ನಿಮ್ಮ ಬರಹ.

Keshav.Kulkarni said...

Super, felt like in Kerala.

- Keshav

Naveen ಹಳ್ಳಿ ಹುಡುಗ said...

Anna.. Photos Super..

ರೂpaश्री said...

ಕೇರಳದ ನಾರಿಯರ ಕಪ್ಪು ಜಡೆಯ ರಹಸ್ಯ, "ಮುಂಡು"ವಿನ ವಿಷಯ, ಕುವೆಂಪು ಕವನ, ನಾಗದೋಣಿಗಳು ... ವಾಹ್ ಎಲ್ಲವೂ ಸೂಪರ್!!
ಎಲ್ಲವನ್ನು ಕುಳಿತಲ್ಲಿಯೇ ನೋದಲು ಅವಕಾಶಮಾಡಿಕೊಟ್ಟ ನಿಮಗೆ ಧನ್ಯವಾದಗಳು:)

ನಮ್ಮನೆ.. SWEET HOME..... said...

ನಮಸ್ತೆ....


ನಿಮ್ಮ ಬ್ಲಾಗಿನ ಫೋಟೊಗಳನ್ನು ನೋಡಲು ನಾನು ಬರುತ್ತೇನೆ.
ನಿಮ್ಮ ಬರವಣಿಗೆ ಕೂಡ ತುಂಬಾ ಚೆನ್ನಾಗಿದೆ. ಸುಂದರ ಫೋಟೊಗಳನ್ನು ನೋಡಿದರೆ ನಾವೂ ಒಮ್ಮೆ ಹೋಗಿ ಬರೋಣ ಅನ್ನಿಸುತ್ತದೆ.
ಈ ಸಾರಿ ಕೇರಳಕ್ಕೆ ಹೋಗಿ ಇನ್ನೂ ಎಷ್ಟು ಸರಕು ತಂದಿದ್ದೀರಾ...?
ನಾವೆಲ್ಲ ಓದಲು ಮತ್ತು ನೋಡಲು ಕಾಯುತ್ತಿದ್ದೇವೆ.

ನಮ್ಮ ಮನೆಯವರೆಲ್ಲ ನಿಮ್ಮ ಫೋಟೊಗಳ ಅಭಿಮಾನಿಯಾಗಿಬಿಟ್ಟಿದ್ದೇವೆ...

thanks

hEmAsHrEe said...

very nice photos and information along with those !

thanks !

ವನಿತಾ / Vanitha said...

ಚೆಂದದ ಫೋಟೋಗಳೊಂದಿಗೆ ಒಳ್ಳೆಯ ಲೇಖನ .ನಾನು ೧೯೯೦ ರ ದಶಕದಲ್ಲಿ ನೋಡುತ್ತಿದ್ದಾಗ 'ಚಂಬಕ್ಕಳ ಚುಂದನ್' ಅವರು ಪ್ರತೀಸಲವೂ ವಿಜಯಿಯಾಗಿರುತ್ತಿದ್ದರು..ತುಂಬಾ ಖುಷಿ ಆಗತ್ತೆ ಅಲ್ವ boatರೇಸ್ ನ್ನು ನೋಡೋಕ್ಕೆ..ಇಲ್ಲಿ ಕುಳಿತುಕೊಂಡೇ ನಮಗೆ ನೋಡಲು ಅವಕಾಶ ಮಾಡಿದ ನಿಮಗೆ ತುಂಬ ತುಂಬಾ ಧನ್ಯವಾದಗಳು..

ವಿನುತ said...

ಅದ್ಭುತವಾದ ಚಿತ್ರಗಳು ಹಾಗೂ ಮಾಹಿತಿಗಳು. ಕಳಶ ಪ್ರಾಯದ೦ತೆ ಕುವೆ೦ಪು ಕವನ. ಇಲ್ಲಿ೦ದಲೇ ಕೇರಳದ ದರ್ಶನಕ್ಕೆ ಧನ್ಯವಾದಗಳು ಮಲ್ಲಿಕಾರ್ಜುನ್ ಅವರೇ.

sunaath said...

ಕೇರಳದ ನಿಸರ್ಗದ ಹಾಗೂ ಡೋಣಿಸ್ಪರ್ಧೆಯ ಅತ್ಯುತ್ತಮ ಚಿತ್ರಗಳನ್ನು ನೀಡಿರುವಿರಿ. ನಿಮಗೆ ಅನೇಕಾನೇಕ ಧನ್ಯವಾದಗಳು.

Unknown said...

ನಮ್ಮೆದುರಿಗೆ ಕೇರಳದ ಮಾಯಾಲೋಕವನ್ನೇ ತೆರೆದಿಟ್ಟಿದ್ದಕ್ಕೆ ಥ್ಯಾಂಕ್ಸ್. ಈ ಚಿತ್ರಗಳ ಬಗ್ಗೆ ಮಾತನಾಡುವುದಕ್ಕಿಂತ, ಬರೆಯುವುದಕ್ಕಿಂತ ನೋಡಿ ಅನುಭವಿಸುವುದೇ ಹೆಚ್ಚು ಖುಷಿಕೊಡುತ್ತದೆ.

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍, ಹೇಗಿದ್ದೀರಿ? ಎಲ್ಲ ಕುಶಲವೆ?

ಕೇರಳ ಪ್ರವಾಸದ ಹಾಗೂ ನಾಗದೋಣಿ ಸ್ಪರ್ಧೆಯ ದೋಣಿಗಳ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದೀರಿ. ಜೊತೆಗೆ ಕೇರಳದ ಸೌಂದರ್ಯ, ಅಲ್ಲಿನ ಜನರ ಜೀವನಶೈಲಿಯ ಸೂಕ್ಷ್ಮತೆ, ನಾರೀಮಣಿಯರ ನೀರಜಡೆಗೆ ವಿವರಣೆ, ಹಸಿರು ಸಿರಿಗೆ ಸರಿಯಾಗಿ ಹೊಂದುವ ಕುವೆಂಪುರವರ ಕವನ ಇವೆಲ್ಲದರ ಚಿತ್ರ-ಬರಹದ ನಿರೂಪಣೆ ಸರಳವಾಗಿದ್ದು ಮನಸೆಳೆಯುವಂತಿದೆ. ಹಾಗೆಯೇ ಕಾರಿನಲ್ಲಿಯೇ ಕುಳಿತು ಸೆಲ್ಯೂಟ್‌ ಮಾಡುತ್ತಿರುವ `ಸೋನಿಯಾ ಗಾಂಧಿ'ಯವರ ಚಿತ್ರವಂತೂ ಅಪರೂಪದ್ದು ಎನಿಸುತ್ತದೆ.

ವಿಶ್ವಾಸದೊಂದಿಗೆ,

ಚಂದ್ರಶೇಖರ ಬಿ.ಎಚ್.
೧೨.೮.೦೯

ಪಾಚು-ಪ್ರಪಂಚ said...

Mallikarjun sir,

Doni spardheya ella ghatanegalannu tumbaa sundaravaagi serehidididdeera. Nanagoo keralakke hoguva aase ittu, adare hogalu agalilla. Nimma chitragalannu nodida mele manassige kushi ayitu.

Dhanyavaadagalu
Prashanth

ಮನಸು said...

chennagide ella chitragalu adakke takkanta vivarane..

vandanegalu

Harihara Sreenivasa Rao said...

chitra-vichitra sound galiruva Bhaashe Bhavanegalu Keraladavu.Avugala neera prateeka nimma Lekhana bahu chenna.Adare adeeko nimage hakkigala meele bahu preeiruvantide.Iadanne vivarisuva innodu maalike barali.Hasir nettar yaavudendu balla blaagigaru yaaraadaroo vivarisuviraa?

Unknown said...

ಮಲ್ಲಿಕಾರ್ಜುನ ಸಾರ್ ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು . ಶ್ರೀ ಕೃಷ್ಣನು ತಮಗೆ ಸಕಲ ಸೌಭಾಗ್ಯವನ್ನು ಕೊಟ್ಟು ಹರಸಲಿ ಎ೦ದು ಈ ಶುಭ ಸ೦ದರ್ಭದಲ್ಲಿ ಹಾರೈಸುತ್ತೇನೆ
ರೂಪಾ

Umesh Balikai said...
This comment has been removed by the author.
Umesh Balikai said...

ಮಲ್ಲಿ ಸರ್,

ಶಿವು ಅವರ 'ಛಾಯಾಕನ್ನಡಿ'ಯಲ್ಲಿ ಅಲೆಪ್ಪಿಯ ಬಗ್ಗೆ ಓದಿದ್ದೆ... ನಿಮ್ಮ ಬ್ಲಾಗಿನಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿತು. ಅಲ್ಲಿನ ಜನರ ವೇಷಭೂಷಣಗಳು, ನಾಗದೋಣಿ ಸ್ಪರ್ಧೆಯ ಚಿತ್ರಗಳು ಎಲ್ಲಾ ತುಂಬಾ ಚೆನ್ನಾಗಿವೆ. ನನಗೂ ಒಂದ್ಸಲ ಹೋಗಿ ನೋಡಬೇಕೆನಿಸಿದೆ. ಮುಂದಿನ ಆಗಸ್ಟ್ ನಲ್ಲಿ ಹೋಗೋಣ ಅಂದ್ಕೊಂಡಿದೀನಿ...

ಅಲೆಪ್ಪಿಯ ಸುಂದರ ಪರಿಚಯ ಮಾಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

Shweta said...

ಕೇರಲಕೊಮ್ಮೆ ಹೋಗಲೇಬೇಕು ಎಂಬ ಫೀಲ್ ಹುಟ್ಟಿಸಿ ಬಿಟ್ಟಿರಿ ನೀವು ಸರ್....ತುಂಬಾ ಚೆನ್ನಾಗಿದೆ..
ಫೋಟೋ ಮತ್ತು ವಿವರಣೆ ಎಲ್ಲವು ...........
ಥ್ಯಾಂಕ್ಸ್

minchulli said...

ಮಲ್ಲಿಕ್ ನಾನೇ ಮೊನ್ನೆ ಕೇಳಬೇಕು ಅಂದುಕೊಂಡಿದ್ದೆ ಬ್ಲಾಗ್ ಅಪ್ ಡೇಟ್ ಆಯ್ತಾ ಅಂತ. ಅಷ್ಟರಲ್ಲಿ ನೀವೇ ಬಂದಿರಿ. ಖುಷಿ...ನಿಮ್ಮ ಬರಹ ಚಿತ್ರ ನೋಡೋದಿಕ್ಕೆ... ನಿಮ್ಮ ಬಹುಮುಖ ಪ್ರತಿಭೆ ನಂಗೆ ಯಾವತ್ತೂ ಬೆರಗು... ನನ್ನನು ಕರ್ಕೊಂಡು ಹೋಗಿದ್ರೆ (ನಿಮ್ಮ ಖರ್ಚಿನಲ್ಲಿ ಅನ್ನೂದು ಇಲ್ಲಿ ಮುಖ್ಯವಾಗುತ್ತೆ.) ನಿಮಗೆ ಭಾಷೆ ಸಮಸ್ಯೆನೇ ಇರ್ತಾ ಇರಲಿಲ್ಲ ನೋಡಿ.. ನಾನು ದುಭಾಷಿ ತ್ರಿಭಾಷಿ ಎಲ್ಲಾ ಆಗ್ತಿದ್ದೆ... ಮುಂದಿನ ವರ್ಷ ಹೋಗುವಾಗ ಈ ವಿಚಾರ ನೆನಪಾಗಲಿ ಅಂತ ಹಾರೈಸುತ್ತೇನೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ನಿಮ್ಮ ಬ್ಲಾಗು ನಂಗೆ ಹೊಟ್ಟೆಕಿಚ್ಚು...
ಅಂದ ಹಾಗೆ "ನಾವು ಹುಷಾರಾಗಿರಬೇಕು ಇನ್ಮೇಲೆ!!!" ಅನ್ನೋ ಒಗ್ಗರಣೆ ಯಾಕೋ... ????

shivu.k said...

ಮಲ್ಲಿಕಾರ್ಜುನ್,

ಕೇರಳದಲ್ಲಿ ಎಲ್ಲಾ ಚೆನ್ನಾಗಿದ್ದವು. ಅಲ್ಲಿನ ಬಿಸಿಲೊಂದನ್ನು ಬಿಟ್ಟು. ಬೆಳಿಗ್ಗೆ ಎಂಟು ಗಂಟೆ ಮೈಯಲ್ಲಿ ಬೆವರು ಹರಿಯುತ್ತಿತ್ತು. ಮತ್ತೆ ನಾವಿದ್ದ ಮೂರು ದಿನವೂ ಯಾವ ಹೋಟಲ್ಲಿನಲ್ಲಿಯೂ ಊಟ ಸರಿಯಿರದೇ ಬೇಸರವಾಗಿತ್ತಲ್ವಾ...

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಮಲ್ಲಿಕಾರ್ಜುನ್
ಅಲೆಪ್ಪಿಯ ಫೋಟೋಗಳು ತುಂಬಾ ಚೆನ್ನಾಗಿವೆ. ಇನ್ನೂ ಉತ್ತಮವಾದ ಚಿತ್ರಗಳನ್ನು ತೆಗೆಯಲು ಪ್ರಯತ್ನಿಸಬಹುದಿತ್ತೇನೋ...

NiTiN Muttige said...

ಫೋಟೋಗಳು ಚೆನ್ನಾಗಿವೆ

ಧರಿತ್ರಿ said...

ತಡವಾಗಿ ಬಂದೆ..ಮುನಿಸು ಬೇಡಣ್ಣ...

ಫೋಟೋಗಳು ಮನಸ್ಪರ್ಶಿ. ಕೇರಳದ ಇಡೀ ಸಾಂಸ್ಕೃತಿಕ ಸೌಂದರ್ಯವನ್ನು ನಿಮ್ಮ ಫೋಟೋಗಳು ಕಟ್ಟಿಕೊಟ್ಟಿವೆ. ಧನ್ಯವಾದಗಳು
-ಧರಿತ್ರಿ

ಸುಮ said...

ಫ್ರೀಯಾಗಿ ಕೇರಳದ ಅಲೆಪ್ಪಿಯ ಟೂರ‍್ ಮಾಡಿಸಿದ್ದಕ್ಕೆ ಧನ್ಯವಾದಗಳು ಸರ‍್

suresh kota said...

ನೆಕ್ಸ್ಟ್ ಎಲ್ಲಿಗೆ?

Mahanthesh said...

ತಾವು ತೆಗೆದಿರುವ ಛಾಯಾಚಿತ್ರಗಳು ಹಾಗೂ ಲೇಖನಗಳು ಬಹಳ ಅದ್ಭುತವಾಗಿವೆ. ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕಾಗಿ ಕ್ಷಮೆಯಿರಲಿ. ತಮ್ಮ ಮುಂದಿನ ಚಿತ್ರಮಾಲೆ ಮತ್ತು ಬರಹಗಳಿಗಾಗಿ ಕಾಯುತ್ತಿರುತ್ತೇವೆ.