ರಸ್ತೆಯಂಚಿನಲ್ಲಿ, ಪೊದೆಗಳ ಸಂದಿಯಲ್ಲಿ, ಕಳೆಗಿಡಗಳ ಮಧ್ಯೆ ಪುಟ್ಟ ಪುಟ್ಟ ವನಪುಷ್ಪಗಳು ನಗುನಗುತ್ತಿರುತ್ತವೆ. ವರ್ಷ ಪೂರಾ ಇವು ಕಾಣಸಿಗುತ್ತಾದರೂ ಮಳೆಗಾಲದಲ್ಲಿ ಹೆಚ್ಚು. ಜೀವದ್ರವವಾದ ಮಳೆಯು ಭೂಮಿಯೊಳಕ್ಕೆ ಹೋದಾಗ ಉಸಿರಿನ ಮೂಲ ಹಸಿರು ಭುವಿಯಿಂದ ಹೊರಹೊಮ್ಮುತ್ತದೆ. ಈ ಹಸಿರ ಮಧ್ಯ ನಾನಾ ವಿಧದ ಹೂಗಳು ಅರಳಿ ನಿಂತು ಹಕ್ಕಿ, ಚಿಟ್ಟೆ ಮತ್ತು ದುಂಬಿಗಳನ್ನು ಆಕರ್ಷಿಸುತ್ತವೆ.
ಈ ಸುಂದರ ಸುಮಗಳಲ್ಲಿ ಕೆಲವನ್ನು ಪರಿಚಯ ಮಾಡಿಕೊಳ್ಳೋಣ.

ಅಮೆರಿಕಾದ ಉಷ್ಣವಲಯದ ಕಾಡುಗಳಿಂದ ವಲಸೆ ಬಂದಿರುವ
ಜಮೈಕನ್ ಬ್ಲೂ ಸ್ಪೈಕ್ ಎಂದು ಕರೆಯಲ್ಪಡುವ ಈ ಹೂಗಿಡ ಮಳೆಗಾಲ ಶುರುವಾದೊಡನೆ ಗಿಡದಿಂದ ಮೇಲೆ ಚಾಚಿರುವ ಕಡ್ಡಿಯ ಮಧ್ಯಭಾಗದಲ್ಲಿ ಆಕರ್ಷಕ ಪುಟ್ಟ ಪುಟ್ಟ ನೀಲಿ ಹೂಗಳ ಗುಚ್ಛವೊಂದನ್ನು ಸಿಕ್ಕಿಸಿಕೊಂಡು ರಸ್ತೆ ಬದಿಯಲ್ಲಿ, ಬಯಲುಗಳಲ್ಲಿ ಎದ್ದು ಕಾಣುತ್ತದೆ.
ಮುಟ್ಟಿದರೆ ಮುನಿ(ಟಚ್ ಮಿ ನಾಟ್) ಕೂಡ ಅಮೆರಿಕಾದ ಉಷ್ಣವಲಯದ ಕಾಡಿನಿಂದ ಬಂದದ್ದೇ. ಇದರ ಕೆಂಪುಬಣ್ಣದ ರೋಮಗಳಂತಿರುವ ಹೂಗಳು ಅತ್ಯಂತ ಆಕರ್ಷಕ. ಹಿಂದಿಯಲ್ಲಿ ಇದನ್ನು "ಲಾಜವಂತಿ" ಅನ್ನುವರಂತೆ. ಲಜ್ಜೆಯಿಂದ ಮುದುಡುವ ಇದರ ಎಲೆಗಳ ಸ್ವಭಾವದಿಂದ ಈ ಹೆಸರು ಬಂದಿರಬೇಕು.

ವೆಸ್ಟ್ ಇಂಡೀಸ್ ಮೂಲದ
ನೆತ್ತರ ಪುಷ್ಪ(ಬ್ಲಡ್ ಫ್ಲವರ್) ಕಾಡುಗಳಲ್ಲಿ ಝರಿ, ತೊರೆಗಳ ಪಕ್ಕದಲ್ಲಿ ಸಾಮಾನ್ಯವಾಗಿ ಕಾಣಿಸುತ್ತದೆ. ಟೈಗರ್ ಚಿಟ್ಟೆಯ ಕಂಬಳಿಹುಳುಗಳ ಆಹಾರ ಸಸ್ಯವಿದು. ಎಕ್ಕದ ಬೀಜಗಳನ್ನೇ ಹೋಲುವ ಇದರ ಬೀಜಗಳು ಗಾಳಿಗೆ ತೇಲುತ್ತಾ ಪ್ರಸಾರವಾಗುತ್ತದೆ.
"ದೆವ್ವದ ಉಗುರು"- ಎಂಥ ವಿಚಿತ್ರ ಹೆಸರಲ್ವಾ? ಮೆಕ್ಸಿಕೊ ದೇಶದಿಂದ ಬಂದಿರುವ ಈ ಪುಷ್ಪಕ್ಕೆ ಇಂಗ್ಲೀಷ್ ನಲ್ಲಿ ಹಾಗೇ ಹೆಸರಿದೆ (
ಡೆವಿಲ್ಸ್ ಕ್ಲಾ). ಈ ಹೂ ಆಕರ್ಷಕವಾಗಿದ್ದರೂ ಮುಟ್ಟಿದರೆ ಅಂಟಂಟಾಗಿರುತ್ತದೆ.
ಮೆಕ್ಸಿಕನ್ ಫ್ಲಾಸ್ ಎಂದು ಕರೆಯುವ ಈ ಹೂ ಅದರ ಹೆಸರೇ ಹೇಳುವಂತೆ ಮೆಕ್ಸಿಕನ್ ಮೂಲದ್ದು. "ವುಲ್ಲನ್" ರೀತಿ ಕಾಣುವ ಪುಟ್ಟಪುಟ್ಟ ಹೂಗಳು ಬಹಳ ಸುಂದರವಾಗಿರುತ್ತವೆ. ನೀಲಿ, ಪಿಂಕ್ ಮತ್ತು ಬಿಳಿ ಬಣ್ಣಗಳಲ್ಲಿ ಇವು ಕಂಡುಬರುತ್ತವೆ. ಆಗಸ್ಟ್ ನಿಂದ ಡಿಸೆಂಬರಿನವರೆಗೆ ಮಾತ್ರ ಈ ಹೂಗಳ ವಿಕ್ಷಣೆ ಸಾಧ್ಯ.

ಎಲ್ಲೆಲ್ಲೂ ಕಂಡುಬರುವ
ಲಾಂಟಾನ ಸಸ್ಯದ ಮೂಲ ಅಮೆರಿಕಾದ ಉಷ್ಣವಲಯ. ವರ್ಷಪೂರ್ತಿ ಗಾಢಸುಗಂಧ ಹೊರಸೂಸುತ್ತಾ ಅರಳುವ ಹೂಗಳು ಚಿಟ್ಟೆ ಮತ್ತು ಪತಂಗಗಳನ್ನು ತನ್ನೆಡೆಗೆ ಆಕರ್ಷಿಸುತ್ತವೆ.
* * * *
ಯಾರ ಮುಡಿಗೂ ಏರದೆ, ಯಾವ ದೇವರ ಪೂಜೆಗೂ ಬಳಸಲ್ಪಡದೇ ತನ್ನಷ್ಟಕ್ಕೆ ತಾನುಳಿದು ಅಳಿದುಹೋಗುವ ಈ ಸುಂದರ ಸುಮಗಳನ್ನು ಸ್ಪರ್ಷಿಸುವ ಅದೃಷ್ಟ ಪಾತರಗಿತ್ತಿಗಳಂತೆ ನಮ್ಮ ಕಣ್ಣಿಗೂ ಲಭಿಸಲಿ.