ಶಿಡ್ಲಘಟ್ಟದ ರೇಷ್ಮೆ ದಾರವು ಸೂರತ್ ನಲ್ಲಿ ಜರಿ ರೂಪ ಪಡೆಯುತ್ತೆ. ಕಂಚಿಯಲ್ಲಿ ರೇಷ್ಮೆ ಸೀರೆಯಾಗಿ ರೂಪಾಂತರ ಹೊಂದುತ್ತೆ ಎಂಬ ವಿಷಯ ಎಲ್ಲರಿಗೂ ತಿಳಿದದ್ದೇ. ಆದರೆ "ಕಾಮನ್ ಪರಯ ಕೈಟ್" ಅಥವಾ "ಕಪ್ಪು ಗರುಡ" ಎಂದು ಕರೆಯುವ ಹದ್ದುಗಳ ಭೋಜನಕ್ಕೂ ರೇಷ್ಮೆಗೂ ಏನು ಸಂಬಂಧ ಅನ್ನಿಸಿತೇ? ಇದೊಂಥರಾ ಬೆಟ್ಟದ ನೆಲ್ಲಿ ಮತ್ತು ಸಮುದ್ರದ ಉಪ್ಪಿನಂತೆ. ದಿನವೂ ನಡೆಯುವ ಹದ್ದುಗಳ ಸಹಭೋಜನ ವೀಕ್ಷಿಸಬೇಕೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟಕ್ಕೆ ಬನ್ನಿ. ಅಂದ ಹಾಗೆ, ಊರಿನ ಹೊರಗಿರುವ ಈ ಜಾಗಕ್ಕೆ ಮೂಗು ಮುಚ್ಚಿಕೊಂಡೇ ಹೋಗಬೇಕು.
ಎಲ್ಲೆಲ್ಲಿ ನೋಡಿದರೂ ಹದ್ದುಗಳೇ ಹದ್ದುಗಳು.
ರೇಷ್ಮೆ ಮೊಟ್ಟೆಯಿಂದ ಬಟ್ಟೆಯವರೆಗೆ ಸಾಗುವ ರೇಷ್ಮೆ ಉದ್ಯಮವನ್ನು ಕಲ್ಪವೃಕ್ಷಕ್ಕೆ ಹೋಲಿಸಬಹುದು. ಇಲ್ಲಿ ಎಲ್ಲವೂ ಉಪಯುಕ್ತವೇ. ಕುದಿಯುವ ನೀರಲ್ಲಿ ಗೂಡನ್ನು ಹಾಕಿ ಸೂಕ್ಷ್ಮವಾದ ರೇಷ್ಮೆ ನೂಲನ್ನು ತೆಗೆದ ಮೇಲೆ ಹುಳುಗಳ ತೆಳು ಪೊರೆಯಂತಹ ರೇಷ್ಮೆ ತ್ಯಾಜ್ಯವು ಉಳಿಯುತ್ತದೆ. ರೇಷ್ಮೆ ನೂಲು ತೆಗೆಯುವುದೇ ಒಂದು ಗೃಹ ಕೈಗಾರಿಕೆಯಾದರೆ, ಹುಳು ಮತ್ತು ರೇಷ್ಮೆ ತ್ಯಾಜ್ಯವನ್ನು ಸಂಗ್ರಹಿಸಿ ಬೇರ್ಪಡಿಸಿ, ಒಣಗಿಸುವುದೇ ಮತ್ತೊಂದು ಪುಟ್ಟ ಗುಡಿ ಕೈಗಾರಿಕೆ.
ರೇಷ್ಮೆ ಹುಳುಗಳನ್ನು ಹೆಕ್ಕಿ ತಿನ್ನಲು ನಾಮುಂದು ತಾಮುಂದು ಎನ್ನುತ್ತ ಕುಳಿತ ಹದ್ದುಗಳ ದಂಡು.
ತುಂಬಾ ದುರ್ಗಂಧ ಬೀರುವುದರಿಂದ ಈ ಹುಳುವಿನ ಕೆಲಸ ಊರ ಹೊರಗೆ ನಡೆಯುತ್ತದೆ. ಫಿಲೇಚರ್ ಗಳಲ್ಲಿ ಸಂಗ್ರಹಿಸಿದ ಹುಳುಗಳನ್ನು ತಂದು ನೀರಿನ ತೊಟ್ಟಿಯಲ್ಲಿ ಹಾಕಿ ಕಡ್ಡಿಯಲ್ಲಿ ತಿರುಗಿಸುತ್ತಾರೆ. "ಜಾಲ" ಎಂದು ಕರೆಯುವ ಈ ರೇಷ್ಮೆ ತ್ಯಾಜ್ಯವನ್ನು ಬೇರ್ಪಡಿಸಿ ಒಣಗಿಸುವರು. ಇಲ್ಲಿಂದ ಹುಳುಗಳನ್ನು ಎಣ್ಣೆ ತಯಾರಿಸಲು ತೆಗೆದುಕೊಂಡು ಹೋದರೆ, ಉಳಿದ 'ಜಾಲ'ವು ರೇಷ್ಮೆ ತಯಾರಿಕೆಗೆ ಹೋಗುತ್ತದೆ.
"ಎಷ್ಟೊತ್ತಿಗಪ್ಪಾ ಹುಳುಗಳನ್ನು ಎಸೆಯೋದು..." ಹದ್ದುಗಳ ಕಾತರ.
ಹದ್ದುಗಳೆಲ್ಲ ಬರುವುದೇ ಹುಳುಗಳಿಗಾಗಿ. ಒಣಗಲು ಹಾಕಿದ ಜಾಲದಲ್ಲಿರುವ ಹುಳುಗಳನ್ನು ಹದ್ದುಗಳು ತಂಡೋಪತಂಡವಾಗಿ ಬಂದು ಖಾಲಿ ಮಾಡುತ್ತವೆ. ಈ ರೀತಿ ಪಂಕ್ತಿಯಲ್ಲಿ ಕೂತು ಜಾಲವನ್ನು ಚೊಕ್ಕಟಗೊಳಿಸಲು ಹದ್ದುಗಳು ದುಡ್ಡುಕಾಸು ಕೇಳುವುದಿಲ್ಲ! ನೆಲ ಮುಗಿಲು ಎಲ್ಲೆಲ್ಲಿ ನೋಡಿದರೂ ಹದ್ದುಗಳೇ ಹದ್ದುಗಳು. ನಿಸರ್ಗದ ಪೌರಕಾರ್ಮಿಕರಾದಂತಹ ಹದ್ದುಗಳು ಆಹಾರ ಸರಪಣಿಯ ಮುಖ್ಯ ಕೊಂಡಿ. ಕೀಟನಾಶಕ ಮತ್ತು ಇತರೇ ಮಾನವ ಸೃಷ್ಟಿಸಿದ ವಿಷವಸ್ತುಗಳು ಸತ್ತ ಪ್ರಾಣಿಗಳ ಮುಖಾಂತರ ರಣಹದ್ದುಗಳನ್ನು ಆಕಾಶದಿಂದ ಮಾಯಮಾಡಿರುವ ಸಂಗತಿಯು ಇಲ್ಲಿ ನೆನಪಾಗುತ್ತದೆ. ಆದರೆ, ರೇಷ್ಮೆ ನೂಲು ತಯಾರಿಸುವಾಗ ಆಗಲಿ, ಹುಳು-ಜಾಲ ಬೇರ್ಪಡಿಸುವಾಗ ಆಗಲಿ ರಸಾಯನಿಕಗಳನ್ನು ಉಪಯೊಗಿಸದಿರುವುದು ಒಂದು ಸಂತಸದ ವಿಷಯ.
ಬಿಳಿ ಗರುಡನ ವೀಕ್ಷಣೆ.
ಇಲ್ಲಿ ಹದ್ದುಗಳಷ್ಟೇ ಅಲ್ಲ. ಕಾಗೆಗಳೂ ಇವೆ. ಆದರೆ ಹದ್ದುಗಳಿಂದ ದೂರವಿರುತ್ತವೆ. ಅಪರೂಪಕ್ಕೊಮ್ಮೊಮ್ಮೆ ಒಂದೊಂದು ಬಿಳಿ ಗರುಡ (ಬ್ರಾಮಿನಿ ಕೈಟ್)ಗಳು, ಒಂದೆರಡು ಜಾಡಮಾಲಿ ಹದ್ದು (ವೈಟ್ ಸ್ಕ್ಯಾವೆಂಜರ್ ವಲ್ಚರ್)ಗಳು ಕಾಣಸಿಗುತ್ತವೆ. ಕಪ್ಪು ಗರುಡಗಳಂತೆ ಇವು ಏಕೆ ಗುಂಪುಗುಂಪಲ್ಲಿ ಅಥವಾ ಹೆಚ್ಚಾಗಿ ಕಾಣಿಸುತ್ತಿಲ್ಲ ಎಂಬುದೊಂದು ಅಚ್ಚರಿಯ ಸಂಗತಿ. ಕಪ್ಪು ಗರುಡಗಳ ಗುಂಪು ಹೆಚ್ಚಾಗಿದ್ದು ಬೇರೆ ಹದ್ದುಗಳಿಗೆ ಜಾಗ ಕೊಡುತ್ತಿಲ್ಲವೋ ಏನೋ ಗೊತ್ತಿಲ್ಲ.
ಕಪ್ಪು ಗರುಡನ ತೇಗೋ ಅಥವಾ ಆಕಳಿಕೆಯೋ?!!
25 comments:
ಮಲ್ಲಿಕಾರ್ಜುನ್...
ಮತ್ತೆ ಹೊಸತೊಂದನ್ನು ಹುಡುಕಿದ್ದೀರಿ...
ಸೊಗಸಾದ.. ಬರವಣಿಗೆ..
ಸುಂದರ ಫೋಟೊಗಳು...
ನಿಮ್ಮ ಬ್ಲಾಗ್ ಗೆ ಬಂದರೆ ಹೊಸತೊಂದು ಇರುತ್ತದೆ..
ರೇಷ್ಮೆ ಕೈಗಾರಿಕೆಯಲ್ಲಿ ಹೀಗೆಲ್ಲ ಇರುತ್ತದಾ..?
ನನಗಂತೂ ಇದು ಗೊತ್ತಿರಲಿಲ್ಲವಾಗಿತ್ತು...
ಒಳ್ಳೆಯ ಮಾಹಿತಿಗಾಗಿ...
ಮನಮೋಹಕ ಫೋಟೊ, ಲೇಖನಕ್ಕಾಗಿ..
ಧನ್ಯವಾದಗಳು...!
ನಾವು ಚಿಕ್ಕವರಾಗಿದ್ದಾಗ ನಮ್ಮ ಮನೆಯಲ್ಲಿ ರೇಷ್ಮೆ ಬೆಳೆಯುತ್ತಿದ್ದವು. ನಾನೂ ನಮ್ಮ ತಂದೆಯವರ ಜೊತೆಯಲ್ಲಿ ಹಾಸನ, ರಾಮನಗರ, ಕೊಳ್ಳೆಗಾಲ, ಬೆಂಗಳೂರು ಮಾರುಕಟ್ಟೆಗಳಿಗೆ ರೇಷ್ಮೆಗೂಡು ತೆಗೆದುಕೊಂಡು ಹೋಗಿದ್ದುಂಟು. ಆಗ ಹಾಸನದ ಮಾರುಕಟ್ಟೆಯ ಬಳಿಯೇ ಇಂತಹುದೇ ದೃಶ್ಯಗಳನ್ನು ನೋಡಿದ್ದೆ. ಈಗ ಅದನ್ನು ನಿಮ್ಮ ಫೋಟೋಗಳಲ್ಲಿ ಮತ್ತೆ ಕಂಡಿದ್ದೇನೆ. ನಿಮ್ಮ ಅವಿಶ್ರಾಂತ ಸೃಜನಶೀಲತೆಗೆ ನನ್ನ ಮೆಚ್ಚುಗೆಯಿದೆ.
ಮಲ್ಲಿಕಾರ್ಜುನ ರವರೆ,
ಹದ್ದುಗಳು ಬರೀ ಮೇಲೆ ತೇಲಾಡುವುದನ್ನು ನೋಡಿದ್ದೆ ಅಷ್ಟೆ. ಹತ್ತಿರದಿಂದ ನೋಡಿದ್ದೇ ಇಲ್ಲ. ನಿಮ್ಮ ಫೋಟೋಗಳು ಬಹಳ ಚೆನ್ನಾಗಿವೆ. ಆ "brahmini kites" ಹದ್ದಿನ ಚಿತ್ರ ಬಹಳ ಚೆನ್ನಾಗಿದೆ. ಆ ಪಕ್ಷಿಯ ಹೆಸರಿನ ಹಿಂದೆ ಮಹತ್ವವೇನಾದರೂ ಇದ್ದರೆ ತಿಳಿಸಿ ಕೊಡಿ.
ರೇಷ್ಮೆ ಕೈಗಾರಿಕೆಯ ಸಂಕ್ಷಿಪ್ತ ವಿವರವೂ ಚೆನ್ನಾಗಿದೆ. ಹಿಂದೆ ನಮ್ಮ ಊರಿನಲ್ಲಿ ರೇಷ್ಮೆ ಗೂಡುಗಳನ್ನು ಆಸಕ್ತಿಯಿಂದ ನೋಡುತ್ತಿದ್ದುದು, ಎಲ್ಲಿಂದರಾದಲು ಎತ್ತಿಕೊಂಡು ಬಂದು ನೂಲು ತೆಗೆಯಲು, ಬಿಸಿ ನೀರಿಗೆ ಹಾಕಿ ಹಾಳುಮಾಡುತ್ತಿದ್ದ ನೆನಪುಗಳು ಹಾದು ಹೋದವು!
ಪ್ರಕಾಶ್ ಸರ್,
ಸೀರೆಯನ್ನು ನೀರೆಯರು ಪ್ರೀತಿಸುವಂತೆ ತಯಾರಾಗುವ ಹೊತ್ತಿಗೆ ನಾನಾ stages ಹಾದು ಬರುವ ರೇಷ್ಮೆ ಉದ್ಯಮದಿಂದ ಲಕ್ಷಾಂತರ ಜನರ ಹಸಿವು ನೀಗುತ್ತಿದೆ.
ಹದ್ದು ಈ ದೊಡ್ಡ ಮರದ ಪುಟ್ಟ ರೆಂಬೆಯಷ್ಟೇ.
ಸತ್ಯನಾರಾಯಣ್ ಸರ್,
ರೇಷ್ಮೆ ಮಾರುಕಟ್ಟೆ ಬಳಿ ಕದಿಯುವ ಗೂಡುಗಳನ್ನು ಮತ್ತು sample ಗೂಡುಗಳನ್ನು ಹಾಕಿ ರೇಷ್ಮೆ ತೆಗೆಯುವ ರಾಟೆಗಳನ್ನಿಟ್ಟುಕೊಂಡಿರುತ್ತಾರೆ. ಅದು ಸ್ವಲ್ಪ ಗಲೀಜಿನ ಕೆಲಸ. ಅಲ್ಲೂ ಹದ್ದು ಕಾಗೆಗಳು ಸಾಮಾನ್ಯ.
ಮಲ್ಲಿಕಾರ್ಜುನ ಅವರೆ,
ಹೊಸ ವಿಷಯವೊಂದನ್ನು ನಿಮ್ಮೀ ಪುಟ್ಟ ಲೇಖನದಲ್ಲಿ ತಿಳೀಯುವಂತಾಯಿತು. ರೇಷ್ಮೆ ಉದ್ಯಮದ ಕುರಿತು ಏನೊಂದೂ ಮಾಹಿತಿ ಇರಲಿಲ್ಲ ನನಗೆ. ಹದ್ದುಗಳಿಗೆ ಆಹರ ಒದಗಿಸಿದಂತೆಯೂ ಆಯಿತು.. ಹುಳುಗಳನ್ನು ಬೇರ್ಪಡಿಸುವಂತೆಯೂ ಆಯಿತು. ಒಂದು ರೀತಿ ನಿಸರ್ಗ ನಿರ್ಮಿತ ಕಾರ್ಖಾತೆ ಅಲ್ಲವೇ? :)
ಒಂದು ಸಂದೇಹ.. ಇಷ್ಟೊಂದು ಪ್ರಮಾಣದಲ್ಲಿ ರೇಷ್ಮೆ ಹುಳುಗಳನ್ನು ಸಾಯಿಸಿದರೆ ಅವುಗಳ ಸಂತತಿಯೇ ನಾಶವಾಗುವ ಭಯವಿರದೇ?!
ಮಲ್ಲಿಕಾರ್ಜುನ್,
ರೇಷ್ಮೆ ಗೂಡುಗಳು, ಅವುಗಳ ಮುಂದುವರಿದ ಹಂತಗಳು, ಹದ್ದುಗಳು....ಇತ್ಯಾದಿಗಳ ಬಗ್ಗೆ ಸೊಗಸಾದ ಲೇಖನ....ನಿಮ್ಮೂರಿಗೆ ಬಂದಾಗ ರೇಷ್ಮೆಯ ಗುಡಿ ಕೈಗಾರಿಕೆ, ಚಾಕಿ ಕೇಂದ್ರ...ಇತ್ಯಾದಿಗಳನ್ನು ನೋಡಿದ್ದೆ...ಇಲ್ಲಿ ಮತ್ತೊಮ್ಮೆ ಎಲ್ಲವನ್ನು ಸರಳ ಲೇಖನ ಮತ್ತು ಚಿತ್ರಗಳ ಜೊತೆಗೆ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಿ....ಥ್ಯಾಂಕ್ಸ್....
ಹಾಯ್ ಮಲ್ಲಿಕಾರ್ಜುನ್ ಸರ್,
ತುಂಬಾ ಉಪಯುಕ್ತವಾದ ಮಾಹಿತಿ. ರೇಷ್ಮೆ ಉದ್ಯಮದ ತಿರುಳನ್ನು ಸೊಗಸಾಗಿ ವಿವರಿಸಿದ್ದೀರಿ.. ಅಷ್ಟೇ ಉತ್ತಮವಾದ ಚಿತ್ರಗಳು. ಎಂದಿನಂತೆಯೇ ಹೊಸತನ...!
ಅಭಿನಂದನೆಗಳು..
-ಪ್ರಶಾಂತ್ ಭಟ್
naanu oorinaliddaga nimagaagiruva anubhva nanagoo aagide aadare nimmaa barvanige nimma photographyge
nanna johargalu. idannella acchukattagi padagalalli haagu nimma camera kannininda nammorannu sundaravaagi chitrisuttiddira idu heege munduvareyali
ಸುಂದರ ರೇಷ್ಮೆಯ ಹಿಂದೆ, ಹಿಂಸೆ ಎಷ್ಟಿರುತ್ತದೆ ಎಂದು ತಿಳಿದು
ದುಃಖವಾಯಿತು.
ಗುರು ಅವರೆ,
Brahmini kite ಹೆಸರಿನ ಬಗ್ಗೆ ನನಗೆ ತಿಳಿಯಲಿಲ್ಲ.
ಮೈನಾ ಪ್ರಭೇದಗಳಲ್ಲೂ Brahmini Myna ಎಂಬುದೊಂದಿದೆ.ಈ Brahmini ಪದದ ಬಗ್ಗೆ ತಿಳಿಯಬೇಕಿದೆ.
ನನ್ನ ಲೇಖನದಿಂದ ನಿಮ್ಮ ನೆನಪುಗಳ ಗೂಡಿನಿಂದ ಎಳೆಗಳು ಹೊರಬಂದದ್ದು ತಿಳಿದು ಸಂತೋಷವಾಯ್ತು. ಪ್ರೋತ್ಸಾಹಕ್ಕೆ ಥ್ಯಾಂಕ್ಸ್.
ತೇಜಸ್ವಿನಿ ಹೆಗಡೆಯವರೆ,
ನಿಮ್ಮ ಪ್ರೀತಿಯ ಸೀರೆ ತಯಾರಾಗುವ ಬಗೆಯನ್ನು ಸ್ವಲ್ಪ ಹೇಳಲು ಪ್ರಯತ್ನಿಸಿರುವೆ. ಮುಂದೆ ಇನ್ನೂ ಹೇಳುವೆ.
ರೇಷ್ಮೆ ಹುಳುಗಳನ್ನು ಗೂಡಿನ ತಯಾರಿಕೆಗೆಂದೇ ಲಕ್ಷೋಪಲಕ್ಷವಾಗಿ ಮೊಟ್ಟೆ ಇರಿಸಿ ಸಾಕುತ್ತಾರೆ. ಅದನ್ನು "ಚಾಕಿ ಸೆಂಟರ್ " ಅನ್ನುತ್ತಾರೆ. ಅದಕ್ಕೇ ನಾನು ಹೇಳಿದ್ದು "ಚಿಟ್ಟೆಯಿಂದ ಬಟ್ಟೆವರೆಗೆ" ಎಂದು. ನಿಧಾನವಾಗಿ ಒಂದೊಂದೇ ಬರೆಯುವೆ ಬಿಡಿ.
ಶಿವು,
ಅಜಿತ್ ಕೌಂಡಿನ್ಯನ ಒತ್ತಾಯದ ಮೇರೆಗೆ ಇದನ್ನು ಬರೆದದ್ದು. ನಮ್ಮೂರಿನ ಬಗ್ಗೆ ಬರೀರಿ.ನಮ್ಮೂರಿನ ವಿಶೇಷಗಳ ಬಗ್ಗೆ ಬ್ಲಾಗ್ ಲೋಕದಲ್ಲಿ ತಿಳಿಯಲಿ ಎಂಬುದು ಅವನ ಆಶಯ.
Credit ಅವನಿಗೇ ಸೇರಬೇಕು.
ಮಲ್ಲಿಕಾರ್ಜುನ್ ಅವರೇ,
ನಮ್ಮ ಹಳ್ಳಿಯಲ್ಲಿ ಹಿಪ್ಪನೇರಳೆ ಬೆಳೆಯುತ್ತಿದ್ದರು ಹಾಗೂ ರೇಶ್ಮೆ ಹುಳಗಳನ್ನು ಸಾಕುತಿದ್ದರು. ಅದರ ಗೂಡಿನ ತನಕ ನೋಡಿದ್ದೆನೇ ಹೊರತು ನೀವು ವಿವರಿಸಿರುವ ಪ್ರಕ್ರಿಯೆಯ ಮಾಹಿತಿಯಿರಲಿಲ್ಲ. ಉಪಯುಕ್ತ ಮಾಹಿತಿ ಹಾಗೂ ಚೆಂದದ ಚಿತ್ರಗಳಿಗಾಗಿ ಧನ್ಯವಾದಗಳು.
ಮಲ್ಲಿಕಾರ್ಜುನರೆ
ಆತ್ಮೀಯ ನಮಸ್ಕಾರ. ಬಹಳ ದಿನಗಳಿ೦ದ ನಿಮ್ಮ ಬ್ಲಾಗನ್ನು follow ಮಾಡುತ್ತಿದ್ದೇನೆ. ಅದರಲ್ಲಿರುವ ಹೊಸತನ,
ಹುಡುಕಾಟ, ಸೃಜನಶೀಲತೆ, ಬಹಳ ಇಷ್ಟವಾಯಿತು. ರೇಷ್ಮೆ ಕೃಷಿಯ ಕುರಿತಾದ " ಹದ್ದುಗಳ ಸಹಭೋಜನ"
ಚಿತ್ರ-ಲೇಖನ ಮನಮುಟ್ಟುವ೦ತಿದೆ. ನನ್ನ ಬ್ಲಾಗಿಗೂ ಬ೦ದು ನೋಡಿ ಅಭಿಪ್ರಾಯಿಸಿ, ಬರುತ್ತಿರಿ.
super !!!!
ಕಂಚಿ ಮುಂತಾದ ರೇಷ್ಮೆ ಸೀರೆಗಳನ್ನು ಬಿಟ್ಟು ನಾನಾಯ್ದುಕೊಳ್ಳುವುದು KSIC ಸೀರೆಗಳು. ನನ್ನ ಮೆಚ್ಚಿನ ಸೀರೆಯ ಹಿಂದೆ ಇಂತಹ ನೋವಿನ ಕತೆ ಇದೆ ಎಂಬುದು ನೆನಪಿಗೆ ಬರಲಿಲ್ಲ.ನಿಮ್ಮ ಲೇಖನ ನೋಡಿ ಯಾಕೋ ಆ ರೇಷ್ಮೆ ಹುಳುಗಳ ಗತಿ ನೋಡಿ ತುಂಬಾ ದುಃಖವಾಯಿತು. ಮನುಷ್ಯ ಮುಂದುವರೆದ ಪ್ರಾಣಿಯಾದ ಮೇಲೆ ಕೇವಲ ತನ್ನ ಅಗತ್ಯಕ್ಕಾಗಿ ಪ್ರಾಣಿಗಳನ್ನು ಸಾಕುವುದು,ಅದನ್ನು ನಾಶಗೊಳಿಸುವುದು,ಹಸುಗಳನ್ನು ಹೆಚ್ಚು ಹಾಲು ಕೊಡುವುದಕ್ಕಾಗಿಯೇ ಸಾಕುವುದು. ಅದು ಬರಡಾದ ಕೂಡಲೇ ಕಸಾಯಿಖಾನೆಗೆ ಸಾಗಿಸುವುದು, ಕೋಳಿಗಳನ್ನು ಮೊಟ್ಟೆ ಮಾಂಸಕಾಗಿಯೇ ಸಾಕುವುದು- ಯಾಕೋ ಇವೆಲ್ಲಾ ನೆನಪಿಗೆ ಬಂದಿತು.
ಆ ನೋವಿನ ನಡುವೆಯೂ ನಿಮ್ಮ ಹದ್ದುಗಳು ನನ್ನನ್ನಾಕರ್ಷಿಸಿತು. ಅದರಲ್ಲಿಯೂ ಆ ಬಿಳಿಯ ಗರುಡ ಅತಿ ಸುಂದರವಾಗಿದೆ. ನಿಮ್ಮ ಫೋಟೋಗ್ರಾಫಿ ಕಲೆ ಅದ್ಭುತ.
ಪ್ರಶಾಂತ್ ಭಟ್ ಅವರೆ,
ರೇಷ್ಮೆ ಉದ್ಯಮದ ಬಗ್ಗೆ ಸ್ವಲ್ಪ ಮಾತ್ರ ಬರೆದಿರುವೆ. ಇನ್ನೂ ಸಾಕಷ್ಟಿದೆ. ಹಳೆಯದಾದ ಸೈಕಲ್ ಟೈರ್ ಗಳನ್ನು ಮಾರುವುದನ್ನು ನೀವೆಲ್ಲಾದರೂ ನೋಡಿದ್ದೀರಾ? ನಮ್ಮೂರಲ್ಲಿ ಮಾರುತ್ತಾರೆ. ರೇಷ್ಮೆ ಉದ್ಯಮದಲ್ಲಿ ಅದರ ಉಪಯೋಗದ ಬಗ್ಗೆ ಮುಂದೆಂದಾದರೂ ಬರೆಯುವೆ.
ಸುನಾತ್ ಸರ್,
ನೀವನ್ನುವಂತೆ ಹಿಂಸೆ ಅನ್ನಿಸುತ್ತದೆ. ಆದರೂ ಲಕ್ಷಾಂತರ ಜನರಿಗೆ ಅನ್ನ ನೀಡುವ ಉದ್ಯಮವಿದು. ಇಂತಹ ದೊಡ್ಡ ಉದ್ಯಮದಲ್ಲಿ ನಕಾರಾತ್ಮಕ ಅಂಶಗಳೂ ಇರುತ್ತವೆ ಮತ್ತು ಸಕಾರಾತ್ಮಕ ಅಂಶಗಳೂ ಇರುತ್ತವೆ.
ವಿನುತ ಅವರೆ,
ರೇಷ್ಮೆಹುಳುಗಳನ್ನು ತಂದು ಮೇಯಿಸುವ ಮುನ್ನ ಎರಡು stages ದಾಟಿ ಬಂದಿರುತ್ತವೆ. ಗ್ರೇನೇಜ್ ನಲ್ಲಿ ಮೊಟ್ಟೆಗಳನ್ನು ಸಂಗ್ರಹಿಸುವುದು ಮತ್ತು ಚಾಕಿಸೆಂಟರ್ ನಲ್ಲಿ ಮೊಟ್ಟೆಗಳಿಂದ ಹೊರಬಂದ ಮರಿಗಳನ್ನು ಸ್ವಲ್ಪ ಬೆಳವಣಿಗೆ ಮಾಡಿಸುವುದು.ಅಲ್ಲಿಂದ ಮುಂದೆ ಹುಳುಗಳನ್ನು ತಂದು ಹಿಪ್ಪುನೇರಳೆ ಸೊಪ್ಪು ಹಾಕಿ ಮೇಯಿಸಿ ಗೂಡುಗಳಾದ ಮೇಲೆ ಮಾರುಕಟ್ಟೆಯಲ್ಲಿ ಮಾರುತ್ತಾರೆ.ರಾಮನಗರ ಬಿಟ್ಟರೆ ಶಿಡ್ಲಘಟ್ಟದ ಮಾರುಕಟ್ಟೆ ಕರ್ನಾಟಕದಲ್ಲೇ ಅತಿ ದೊಡ್ಡದು. ಗೂಡನ್ನು ಕೊಂಡು ಫೀಲೇಚರಿನಲ್ಲಿ ರೇಷ್ಮೆ ತಯಾರಿಸುತ್ತಾರೆ. ಅಲ್ಲಿಂದ ಟ್ವಿಸ್ಟಿಂಗ್ ಫ್ಯಾಕ್ಟರಿಯಲ್ಲಿ twist ಮಾಡಿ ಮಗ್ಗಕ್ಕೆ ಹೋಗುತ್ತದೆ ಮತ್ತು ಝರಿ ತಯಾರಿಗೂ ಹೋಗುತ್ತದೆ.
ಪರಂಜಪೆ ಸರ್,
ನಿಮ್ಮ ಬ್ಲಾಗನ್ನೂ ಓದುತ್ತಿರುತ್ತೇನೆ. ಖಂಡಿತ comments ಬರೆಯುವೆ.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ರೂಪಾ ಅವರೆ,
ಥ್ಯಾಂಕ್ಸ್.
ಫೋಟೋಗಳು ಚೆನ್ನಾಗಿವೆ.
ರೇಷ್ಮೆ ಉದ್ಯಮದ ಬಗ್ಗೆ ಸ್ವಲ್ಪ ಕೇಳಿದ್ದೆ, ಆದರೆ ಹದ್ದುಗಳಿಗೂ ಈ ಉದ್ಯಮಕ್ಕೋ ಇರುವ ನಂಟು ಗೊತ್ತಿರಲಿಲ್ಲ.
ಇನ್ನೂ ಉಳಿದ ಭಾಗವನ್ನು ಯಾವಾಗ ವಿವರಿಸುತ್ತೀರಿ?
ಕಾಲೆಳೆಯುವ ಪ್ರೀತಿಯ ಅಣ್ಣನಿಗೆ ನಮಸ್ಕಾರ....
ತಡವಾಗಿ ಬಂದಿದ್ದಕ್ಕೆ ನಮಸ್ಕಾರ. ಶಿಡ್ಲಘಟ್ಟದ ನ್ಯಾಯಾಲಯ ಆಯ್ತು, ಈವಾಗ ರೇಷ್ಮೆ ಉದ್ಯಮದ ಬಗ್ಗೆ ಬರೆದಿದ್ದೀರಿ. ಈಗ ಲೇಖನಗಳ ವೇಗನೂ ಹೆಚ್ಚಿಬಿಟ್ಟಿದೆ ಬಿಡಿ. ಹದ್ದುಗಳ ಪೋಟೋ ತುಂಬಾನೇ ಚೆನ್ನಾಗಿದೆ. ಈ ಕುರಿತು ಇನ್ನೂ ಮಾಹಿತಿ ಸಿಕ್ರೆ ಬ್ಲಾಗಿಗೆ ಹಾಕಿ. ನಮಗೆ ತಿಳಿದಂತಾಗುತ್ತದೆ ಅಲ್ಲವೇ? ನಿಮ್ಮೂರಿಗೆ ಬರುವ ಫ್ಲಾನ್ ಫಲಿಸಿದರೆ ರೇಷ್ಮೆ ಗೂಡನ್ನು ನೋಡುವ ಭಾಗ್ಯ ನನ್ನ ದಾಗಬಹುದು. ಅಂದಹಾಗೆ ನನ್ನ ಅಣ್ನನ ಪತ್ರ ನೋಡಿ ನೀವು ಹೆಗಲು ಮುಟ್ಟಿ ನೋಡಿದ್ರಾ? ಹೊಟ್ಟೆನಾ?
-ತಂಗಿ ಚಿತ್ರಾ
ರೇಷ್ಮೆ ಉದ್ಯಮದ ಬಗ್ಗೆ ಸುಮಾರು documentaries ನೋಡಿದ್ದೆ. ಈ ಹದ್ದುಗಳ ವಿಷಯ ಗೊತ್ತಿರಲಿಲ್ಲ.ಧನ್ಯವಾದಗಳು.
ಗರುಡನ ಕ್ಲೋಸ್ ಅಪ್ ಫೋಟೋ ಚೆನಾಗಿದೆ. ಹೆದರಿಕೆ ಆಗೋ ಅಂತಿದೆ ಕೂಡ.
ಮಲ್ಲಿಕಾರ್ಜುನ್ ಅವರೆ ನಮಸ್ಕಾರ, ತುಂಬ ದಿನಗಳ ಹಿಂದೆ ನಿಮ್ಮ ಬ್ಲಾಗ್ ಓಪನ್ ಆಗಿರಲಿಲ್ಲ; ಇವತ್ತು ನೋಡಿದೆ, ತುಂಬ ಚೆನ್ನಾಗಿದೆ, ಉಪಯುಕ್ತ ಲೇಖನಗಳನ್ನು ಒಗೊಂಡಿದೆ, ಫೋಟೋಗಳನ್ನು ನೋಡುವುದಕ್ಕಂತೂ ಖುಷಿಯಾಗುತ್ತದೆ.ರೇಷ್ಮೆಸೀರೆಗಳ ಹಿಂದಿನ ಪ್ರೊಸೆಸ್ ಬಗ್ಗೆ ಗೊತ್ತಿರಲಿಲ್ಲ, ನಿಮ್ಮ ಲೇಖನದಿಂದ ತಿಳಿದುಕೊಂಡಂತಾಯಿತು.ಧನ್ಯವಾದಗಳು.
-ಪ್ರೀತಿಯಿಂದ
ಗ್ರೀಷ್ಮ.
Post a Comment