Tuesday, March 17, 2009

ದೇವರು ಹೀಗೂ ಕಾಣಿಸಬಹುದು!

ದೊಡ್ಡಬಳ್ಳಾಪುರ ಹತ್ತಿರವಾಗುತ್ತಿತ್ತು. ಕಿರ್ ಕಿರ್ರೋ ಎಂದು ಶಬ್ದ ಮಾಡುತ್ತಾ ಹಕ್ಕಿಗಳು ಹಾರಿ ರಸ್ತೆಯ ಎಡದ ಮರದಿಂದ ಬಲದ ಮರಕ್ಕೆ ಹಾರಿದ್ದು ಕಾಣಿಸಿತು. ತಕ್ಷಣ ಕಾರನ್ನು ರಸ್ತೆ ಬದಿ ನಿಲ್ಲಿಸಿದೆ. ನೋಡಿದರೆ ಮರದ ಮೇಲೆ ಜೋಡಿ ಹಕ್ಕಿಗಳು ಕೂತಿವೆ.
ಇದರ ಹೆಸರು ನೀಲಕಂಠ. ಇಂಗ್ಲೀಷಿನಲ್ಲಿ ಇದಕ್ಕೆ ಎರಡು ಹೆಸರುಗಳಿವೆ. ಬ್ಲೂ ಜೇ(ಬಣ್ಣದಿಂದ) ಮತ್ತು ಇಂಡಿಯನ್ ರೋಲರ್(ಹಾರಾಡುವಾಗ ಪಲ್ಟಿ ಹೊಡೆಯುವುದರಿಂದ). ಇನ್ನೊಂದು ವಿಶೇಷವೆಂದರೆ ಇದು ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ನಮ್ಮ ರಾಜ್ಯ ಮತ್ತು ಭಾಷೆಯಷ್ಟೇ ಸುಂದರವಾದ ಹಕ್ಕಿ.
ಆ ಮರದಲ್ಲೇ ಇದ್ದ ಪೊಟರೆಯಲ್ಲಿ ಗೂಡು ಮಾಡುತ್ತಿದ್ದಿರಬಹುದು. ಇಣುಕುತ್ತಿತ್ತು. ಫೋಟೋ ತೆಗೆದು ದೇವಸ್ಥಾನದ ಬಾಗಿಲು ಹಾಕಿದರೆ ಕಷ್ಟ ಎಂದುಕೊಂಡು ಹೊರಟೆವು.
ಚಂದವಾದ.. ನೀಲಿ..
ರೇಷ್ಮೆಸೀರೆಯುಟ್ಟ ನಾರಿಯಂತೆ..
ಬೆಡಗು ಬಿನ್ನಾಣ..
ನಾಚಿಕೆಯೇ.. ಬಡಿವಾರ..!
ಈ ಹಕ್ಕಿಯ ಫೋಟೋ ನೋಡಿ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಪ್ರಕಾಶ್ ಹೆಗಡೆಯವರ ಉದ್ಘಾರವಿದು.
ನಾವು ಹೋಗುತ್ತಿದ್ದುದು ಘಾಟಿಗೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬಹ್ಮಣ್ಯಸ್ವಾಮಿ ದೇವಾಲಯವಿರುವುದು ಕಣಿವೆಯಲ್ಲಿ. ಹಾವಿನಂತೆ ಬಳುಕುವ ಹಾದಿಯಲ್ಲಿ ಬೆಟ್ಟಗಳ ನಡುವಿರುವ ಕಣಿವೆಯೊಳಕ್ಕೆ ಇಳಿಯಬೇಕು.
ಇಲ್ಲಿ ಸುಬ್ರಹ್ಮಣ್ಯ ತಪಸ್ಸನ್ನು ಮಾಡಿದನೆಂಬ ಪ್ರತೀತಿಯಿದೆ. ಇಲ್ಲಿನ ದೇವರ ಮೂರ್ತಿಗೆ ಎರಡು ರೂಪ. ಒಂದುಕಡೆಯಿಂದ ಸುಬ್ರಹ್ಮಣ್ಯ ಮತ್ತೊಂದು ಕಡೆಯಿಂದ ಲಕ್ಷ್ಮೀನರಸಿಂಹ ಕಾಣುತ್ತಾರೆ.
ದಾರಿಯಲ್ಲಿ ಬರುವಾಗ ನಾಗ ಗಣಪತಿ ದೇವಾಲಯವಿತ್ತು. ಅಲ್ಲಿ ಗಣೇಶನ ಎತ್ತರದ ಸುಂದರವಾದ ಮೂರ್ತಿಯನ್ನು ನೋಡಲು ಹೋದೆವು.
ಆ ದೇವಾಲಯದಲ್ಲಿದ್ದ ಬಿಳಿ ಎಕ್ಕದ ಹೂಗಳ ಮಕರಂದವನ್ನು ಸೂರಕ್ಕಿಯು ಹೀರುತ್ತಿತ್ತು. ಅದನ್ನು ನೋಡುವುದೇ ಚಂದ. ಗಾಳಿಯಲ್ಲಿ ರೆಕ್ಕೆ ಪಟಪಟಿಸುತ್ತಲೇ ಸ್ಟ್ರಾ ತರಹದ ತನ್ನ ಕೊಕ್ಕನ್ನು ಹೂವಿನೊಳಗೆ ತೂರಿಸಿ ಮಕರಂದ ಹೀರುತ್ತದೆ
ದಾರಿಯಲ್ಲಿ ವಾಪಸಾಗುವಾಗ ನನ್ನ ಹೆಂಡತಿ ಮತ್ತು ಮಗ ಎಷ್ಟು ದೇವರುಗಳನ್ನು ನೋಡಿದೆವೆಂದು ಲೆಕ್ಕಹಾಕುತ್ತಿದ್ದರು. ನಾನೂ ಮನಸ್ಸಿನಲ್ಲಿ ಲೆಕ್ಕಹಾಕತೊಡಗಿದೆ!

44 comments:

ಕಾರ್ತಿಕ್ ಪರಾಡ್ಕರ್ said...

Yekkada huvina makaranda heeruva hakkiya chitra tumbaa ishta aitu....

PARAANJAPE K.N. said...

ಮಲ್ಲಿಯವರೇ
ನಮಸ್ಕಾರ. ಮುದ್ದಾದ ಫೋಟೋಗಳು. ಎಕ್ಕದ ಹೂವಿನ ಮಕರ೦ದ ಹೀರುವ ಸಾರಕ್ಕಿ ಫೋಟೋ ಅ೦ತೂ ಸೂಪರ್.
ನಿಮ್ಮ ತಾಳ್ಮೆ,photography ಯಲ್ಲಿರುವ ನಿಮ್ಮ ಪರಿಣತಿ ಅನುಪಮ.

Unknown said...

ಅದ್ಭುತ ಮಲ್ಲಿಕಾರ್ಜುನ್ ಅವರೆ. ಮೊದಲ ಚಿತ್ರವಂತೂ ಶಿರ್ಷಿಕೆಗೆ ಅನುಗುಣವಾಗಿಯೇ ಇದೆ. ನೀಲಕಂಠ ನಮ್ಮ ರಾಜ್ಯಪಕ್ಷಯೆಂದು ನನಗೆ ತಿಳಿದಿದ್ದು ಇವತ್ತೆ! ಅದರ ಚಿತ್ರವನ್ನೂ ಜೊತೆಜೊತೆಯಲ್ಲೇ ನೋಡಿ ಖುಷಿಯಾಯಿತು.
ನಿಮ್ಮ ಶ್ರಮಕ್ಕೆ ನನ್ನ ಅಭಿನಂದನೆಗಳು. ಈಗ ನಾನೂ ಯಾವಾಗಲೂ ಕ್ಯಾಮೆರಾ ಹೆಗಲಿಗೇರಿಸಿಕೊಂಡೇ ಓಡಾಬೇಕು ಅನ್ನಿಸುತ್ತಿದೆ.

ಅಹರ್ನಿಶಿ said...

ಬಹಳ ದಿನಗಳ ನ೦ತರ ನಾ ನೋಡಿದ ಅಪರೂಪದ ಬ್ಲಾಗ್ ಪೋಸ್ಟ್. "ಆಟೋಗ್ರಾಫ್ - ಫೋಟೋಗ್ರಾಫ್".ವರ್ಣಿಸಲಸದಳ.
ನಿಮ್ಮ ಚೈತನ್ಯ ಇಮ್ಮಡಿಯಾಗಲಿ.ಬ್ಲಾಗ್ ಲೋಕದಲ್ಲಿ ಕ೦ಡುಕೊ೦ಡ ಅಪರೂಪದ ವ್ಯಕ್ತಿ ನೀವು.

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...!

ಪ್ರಕ್ರತಿಯ ಸಹಜ...
ಸುಂದರಿಯನ್ನ ನೋಡಿ..

ಕವನ ನೆನಪಾಗಿದ್ದರೆ..
ಅದಕ್ಕೆ...

ಸುಂದರ.. ಮನಮೋಹಕ...
ಚಾಕಚಕ್ಯತೆ... ನೈಪುಣ್ಯತೆಯ..
ತಾಳ್ಮೆ.., ಶ್ರದ್ಧೆಯ...
ಫೋಟೊ ಕಾರಣ...

ಅಭಿನಂದನೆಗಳು..

PaLa said...

ನಮ್ಮ ರಾಜ್ಯ ಪಕ್ಷಿಯ ಪರಿಚಯಕ್ಕೆ ವಂದನೆಗಳು

ವಿನುತ said...

ಮಲ್ಲಿಕಾರ್ಜುನ್ ಅವರೇ,

ಅಬ್ಬಾ! ಮೊದಲ ಚಿತ್ರದಲ್ಲಿ, ನೀಲಕಂಠನ ರೆಕ್ಕೆಯಲ್ಲಿರುವ ಗಾಜಿನ ಹೊಳಪು, ಮುಂದೆರಡರಲ್ಲಿ, ನೀರೆಯ ಸೀರೆಯ ನೆರಿಗೆಯಂತೆ ಹರಡಿರುವ ಪುಕ್ಕಗಳು, ಕೊನೆಯದಾಗಿ, ಜಪಾನೀಯರ ಬೀಸಣಿಕೆಯಂತೆ ಗರಿಗೆದರಿ ಮಕರಂದ ಹೀರುತ್ತಿರುವ ಈ ಚಿತ್ರಗಳನ್ನು ನೋಡುತ್ತಿದ್ದರೆ, ಬೇಂದ್ರೆಯವರ ’ಗರಿ’ ಯ ಹಕ್ಕಿ ಹಾರುತಿದೆ ನೋಡಿದಿರಾ ನೆನಪಾದರೆ ಆಶ್ಚರ್ಯವಿಲ್ಲ...

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ -ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದೊಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ಅರ್ಥವತ್ತಾದ ಶೀರ್ಷಿಕೆ ಹಾಗೂ ಸುಂದರ ಚಿತ್ರಗಳಿಗಾಗಿ ಅಭಿನಂದನೆಗಳು.

sunaath said...

ಮಲ್ಲಿಕಾರ್ಜುನ,
ನಮ್ಮ ರಾಜ್ಯದ್ದೇ ಆದ ನೀಲಕಂಠ ಪಕ್ಶಿಯ ದರ್ಶನ ಹಾಗೂ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು. ಜೊತೆಗೇ ನೂರಕ್ಕಿಯ
ಚಿತ್ರ ಕೊಟ್ಟಿದ್ದೀರಲ್ಲ; ಅದಂತೂ ಅದ್ಭುತ. ಆ ಚಿತ್ರವನ್ನು ನನ್ನ computerದ desktop ಮೇಲೆ ಹಾಕಿಕೊಳ್ಳಲು ನಿಮ್ಮ ಅನುಮತಿಯನ್ನು ಕೋರುತ್ತೇನೆ.

ಕ್ಷಣ... ಚಿಂತನೆ... said...

ನಯನ ಮನೋಹರವಾಗಿದೆ. ತಾಳ್ಮೆ, ಸಮಯ, ನಿಸರ್ಗದ ಮೇಲಿನ ಪ್ರೀತಿ ಇಂತಹ ಉತ್ತಮ ಸನ್ನಿವೇಶ ಹಾಗೂ ಸೌಂದರ್ಯವನ್ನು ಕಾಣಿಸುವಲ್ಲಿ ಸಫಲವಾಗುತ್ತವೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿವೆ.

ಧನ್ಯವಾದಗಳು

Greeshma said...

ಅಬ್ಬ! ಎಂಥ color!!
ಇದು ಎಲ್ಲಾ ಕಡೆ ಕಾಣಲು ಸಿಗತ್ತಾ? ಅಥವಾ ನಿಮ್ಮಂತವರ ಕ್ಯಾಮೆರಾಗೆ ಮಾತ್ರ ನ?

guruve said...

ನೀಲಕಂಠ, ನಮ್ಮ ರಾಜ್ಯ ಪಕ್ಷಿ ಎಂದು ತಿಳಿದಿರಲಿಲ್ಲ. ಅದನ್ನು ನೋಡಿರಲೂ ಇಲ್ಲ. ಒಳ್ಳೆಯ ಮಾಹಿತಿ ಮತ್ತು ಶೀರ್ಷಿಕೆ. ಫೋಟೋಗಳು ಎಂದಿನಂತೆ ಚೆನ್ನಾಗಿವೆ.
ಮುಂದಿನ ಬಾರಿ ನಮ್ಮ ಊರಿನಲ್ಲೆಲ್ಲಾದರೂ(ದೊಡ್ದಹೆಜ್ಜಾಜಿ - ದೊಡ್ಡಬಳ್ಳಾಪುರ ತಾಲ್ಲೂಕು) ಕಾಣುತ್ತವೆಯಾ ನೋಡಬೇಕು.

ಚಂದ್ರಕಾಂತ ಎಸ್ said...

ಅದ್ಭುತ ಮಲ್ಲಿಕಾರ್ಜುನ ಅವರೆ. ಮೊದಲನೆಯ ಫೋಟೊ ಎಷ್ಟು ಚೆನ್ನಾಗಿದೆ ಎಂದುಕೊಂಡು ನೋಡುತ್ತಾ ಹೋದರೆ ಎಲ್ಲ ಫೋಟೋಗಳೂ ಒಂದನ್ನೊಂದು ಮೀರಿಸುವಷ್ಟು ಸುಂದರವಾಗಿವೆ. ಅಷ್ಟು ಸುಂದರ ಪಕ್ಷಿಗಳನ್ನು, ಪ್ರಕೃತಿಯನ್ನು ಚಿಟ್ಟೆಗಳನ್ನು ನಮಗೆಲ್ಲಾ ಪರಿಚಯಿಸುವ ನಿಮಗೂ ಶಿವೂ ಮತ್ತು ಪ್ರಕಾಶ್ ಅವರಿಗೂ Hats off

vinuta avara pratikriye eShTu cennaagideyeMdare innu Enu baredarU nIrasa enisuttade.

ಮಲ್ಲಿಕಾರ್ಜುನ.ಡಿ.ಜಿ. said...

ಕಾರ್ತಿಕ್,
ಎಕ್ಕದ್ ಹೂವಿಂದ ಮಕರಂದ ಹೀರುತ್ತಿರುವ SunBird ಸಿಕ್ಕಾಪಟ್ಟೆ active. ನಾನು ಒಂದೇ ಫ್ರೇಮ್ ತೆಗೆಯಲು ಸಾಧ್ಯವಾದದ್ದು. ಅದು ನನ್ನ ಅದೃಷ್ಟ ಸುಂದರವಾಗಿದೆ! ಆಮೇಲೆ ಅರ್ಧ ಗಂಟೆ ಕಾದರೂ ಸಾಧ್ಯವಾಗಲಿಲ್ಲ.

ಮಲ್ಲಿಕಾರ್ಜುನ.ಡಿ.ಜಿ. said...

ಪರಂಜಪೆ ಸರ್,
ನೀವು ತಾಳ್ಮೆ ಅಂತೀರ. ನಮ್ಮ ಮನೆಯವರು ಮೈಮರೀತೀರ ಅಂತಾರೆ! ಹಕ್ಕಿಗಳನ್ನು ನೋಡುತ್ತಾ ಅವುಗಳಿಗೆ ಕಾಯುವಾಗ ಸಮಯದ ಪರಿವೇ ಇರಲ್ಲ! ದೇವಸ್ಥಾನ ಬಾಗಿಲು ಹಾಕ್ತರೆ ನಡೀರಿ ಅಂದಾಗಲೇ ಈ ದೇವರ ರಥ ಕದಲಿದ್ದು!

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯನಾರಾಯಣ್ ಸರ್,
ನಿಮಗೆ ಶೀರ್ಷಿಕೆ ಇಷ್ಟವಾಗಿದ್ದು ಖುಷಿಯಾಯ್ತು. ನನ್ನ ದೃಷ್ಟಿಯಲ್ಲಿ ಈ ಬಣ್ಣಬಣ್ಣದ ಹಕ್ಕಿಗಳೂ ಜೀವಂತ ದೇವರುಗಳು.
ನಾವಂತೂ ಕ್ಯಾಮೆರಾ ಹಿಡಿದು ಹಾಳಾಗಿದೀವಿ! ತೇಜಸ್ವಿಯವರ ಭಾಷೆಯಲ್ಲಿ ಹೇಳೋದಾದ್ರೆ,"ಲಾಟರಿ ಹೊಡೀತಿದೀವಿ"! ಇದೊಂಥರಾ ಸನ್ಯಾಸಿ ಬೆಕ್ಕನ್ನು ಸಾಕಿಕೊಂಡಂತೆ!!
ಇನ್ನು ನಿಮ್ಮಿಷ್ಟ!!

ಮಲ್ಲಿಕಾರ್ಜುನ.ಡಿ.ಜಿ. said...

ಅಹರ್ನಿಶಿ ಶ್ರೀಧರ್ ಅವರೆ,
ಪ್ರಕಾಶ್ ಹೆಗಡೆ ಮತ್ತು ನಾನು ಮಾತನಾಡಿಕೊಳ್ತಿದ್ವಿ ನಮ್ಮ ಬ್ಲಾಗ್ ಮ್ಯಾಪ್ ನೋಡಿ, ಯಾರಪ್ಪಾ ಆಫ್ರಿಕಾ(ಟಾನ್ಜಾನಿಯಾ)ದಲ್ಲಿರೋ ಕನ್ನಡಿಗರು ಅಂತ. ನೀವು ನನ್ನ ಬ್ಲಾಗ್ ಗೆ ಬಂದದ್ದು ತುಂಬ ಖುಷಿಯಾಯಿತು. ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಅನಂತ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಅಹರ್ನಿಶಿ ಶ್ರೀಧರ್ ಅವರೆ,
ನಿಮ್ಮ http://aksharapaatre.blogspot.com/
ಬ್ಲಾಗ್ ನಲ್ಲಿ ನನ್ನ ಚಿತ್ರ ಮತ್ತು ಅದರ ಮೇಲೆ ನಿಮ್ಮ "ಬೆಳ್ಳಿ ಚುಕ್ಕಿ" ಕವನ ನೋಡಿ ಖುಷಿಯಾಯಿತು.

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ನಿಮ್ಮ ಕವನದ ದೆಸೆಯಿಂದ ನೀಲಕಂಠ ಹಕ್ಕಿಯ ಮೂರನೇ ಚಿತ್ರ ಬ್ಲಾಗಲ್ಲಿ ಹಾಕಲು ಸಾಧ್ಯವಾಯ್ತು.
ಆ ಹಕ್ಕಿಯ ಮುಂದೆ ನಾವೆಲ್ಲಾ ನೆಪ ಮಾತ್ರ, ಅಲ್ಲವೇ?

Keshav.Kulkarni said...

ನಿಮ್ಮ ಫೋಟೋ-ಲೇಖನ ಜುಗಲಬಂದಿ ತುಂಬ ಚೆನ್ನಾಗಿ ಬರುತ್ತಿವೆ. ಇದೂ ತುಂಬ ಇಷ್ಟವಾಯ್ತು.
- ಕೇಶವ (www.kannada-nudi.blogspot.com)

ಮಲ್ಲಿಕಾರ್ಜುನ.ಡಿ.ಜಿ. said...

ವಿನುತ ಮೇಡಂ,
ಧನ್ಯವಾದಗಳು.ಎಷ್ಟು ಚಂದದ ಕಾಮೆಂಟ್ ನಿಮ್ಮದು.
ನೀವು ಹೇಳಿರುವುದು ಅಕ್ಷರಶಃ ಸತ್ಯ. ಈ ಹಕ್ಕಿಗಳನ್ನು ವರ್ಣಿಸಲು ಬೇಂದ್ರೆಯವರೇ ಸರಿ.

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ,
ನೀಲಕಂಠ ನಮ್ಮ ರಾಜ್ಯಪಕ್ಷಿ ಎಂಬುದು ಅರ್ಥಪೂರ್ಣ ಅಲ್ಲವೇ?
ಈ ಅಂದಕ್ಕೆ, ಬಣ್ಣಗಳಿಗೆ ಮನಸೋಲದವರು ಯಾರಿದ್ದಾರೆ?

ಮಲ್ಲಿಕಾರ್ಜುನ.ಡಿ.ಜಿ. said...

ಸುನಾತ್ ಸರ್,
ನೀವು ನನ್ನ ಬಳಿ permission ಕೇಳುವುದೇ ಬೇಕಿಲ್ಲ. ನಾನು ಪಟ್ಟ ಸಂತೋಷವನ್ನು ಎಲ್ಲರೊಂದಿಗೂ ಹಂಚಿಕೊಳ್ಳುವುದೇ ನನ್ನ ಉದ್ದೇಶ. ಹಾಗಾಗಿ ನೀವು ಈ ಹಕ್ಕಿಯ ಫೋಟೋ desktop ಮೇಲೆ ಹಾಕಿಕೊಂಡರೆ ಇನ್ನೂ ಸಂತೋಷವಾಗುತ್ತೆ. ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್.

ಮಲ್ಲಿಕಾರ್ಜುನ.ಡಿ.ಜಿ. said...

ಕ್ಷಣ ಚಿಂತನೆ..,
ಧನ್ಯವಾದಗಳು. ನಿಸರ್ಗದೆಡೆಗೆ ಪ್ರೀತಿ ಮುಖ್ಯ. ಫೊಟೋ ನಂತರ. ನಿಮ್ಮ ಮಾತು ನಿಜ.

shivu.k said...

ಮಲ್ಲಿಕಾರ್ಜುನ್ ,

ದೇವರ ಬಗ್ಗೆ ನಿಮ್ಮ ಅಭಿಪ್ರಾಯ ನನಗಿಷ್ಟವಾಯಿತು....ನಮ್ಮ ಅನೇಕ ದೇವರುಗಳು ಹೀಗೆ ಕಾಡಿನಲ್ಲಿ, ಪ್ರಾಣಿ ಪಕ್ಷಿ, ಕೀಟಗಳಲ್ಲಿ ಕಾಣಿಸುತ್ತವಲ್ಲವೇ ಏಕೆಂದರೆ ನಾವು ಹೆಚ್ಚಾಗಿ ದ್ಯಾನಿಸುವುದು ಗುಡಿಯಲ್ಲಿನ ದೇವರಿಗಿಂತ ಇವನ್ನೇ ಅಲ್ಲವೇ....ನೀಲಕಂಟ ಪಕ್ಷಿಯ ಫೋಟೋ ಚೆನ್ನಾಗಿದೆ...
sun bird ಫೋಟೋ ಸಲಾಗಿಗೆ ಆಗಬಹುದು...ಪ್ರಯತ್ನಿಸಿ....

ಧರಿತ್ರಿ said...

'ದೇವರೂ ಹೀಗೂ ಕಾಣಿಸಬಹುದು'! ಹೌದು..ಇತ್ತೀಚೆಗೆ ನಾನೂ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿದ್ದೆ..ಸುಂದರ ಹಕ್ಕಿಗಳನ್ನು ಕಣ್ಣಿಗೆ ಬಿದ್ದರೂ ವಿಶೇಷ ಅನಿಸಲಿಲ್ಲ..ನೋಡಿ ಈವಾಗ ನಿಮ್ಮ ಫೋಟೋ ನೋಡಿ ಅವುಗಳ ಹೆಸರು, ವಿಶೇಷತೆ ಎಲ್ಲವೂ ಗೊತ್ತಾಯಿತು..ಅದಕ್ಕೆ ಎಫ್. ಅಸಾದುಲ್ಲಾ ಬೇಗ್ ಶಾಯರಿ ಯಲ್ಲಿ ಹೇಳಿರೋದು,
"ಕಲ್ಲಿನಲ್ಲೂ ಅಡಗಿದೆ ಸೌಂದರ್ಯ
ಕೆತ್ತುವ ಸಾಮರ್ಥ್ಯ ವಿದ್ದರೆ!
ಪ್ರತಿಮಾತುನಲ್ಲೂ ಅಡಗಿದೆಸಾಹಿತ್ಯ
ಗ್ರಹಿಸುವ ಸಾಮರ್ಥ್ಯವಿದ್ದರೆ ..
ಭೇಷ್ ಮಲ್ಲಿಯಣ್ಣ...
ನಿಮ್ಮೊಳಗಿನ ಕಲಾವಿದನನನ್ನು ಮತ್ತೊಮ್ಮೆ ಪರಿಚಯಿಸಿದ್ದೀರಿ..
ಮತ್ತೆ ಬರುವೆ...
ಪ್ರೀತಿಯಿಂದ,
ಧರಿತ್ರಿ

ಮಲ್ಲಿಕಾರ್ಜುನ.ಡಿ.ಜಿ. said...

ಗ್ರೀಷ್ಮಾ ಅವರೆ,
ಎಲ್ಲ ಕಡೆಯೂ ದೇವರಿದ್ದಾನೆ. ಇದೊಂತರಹ ಪ್ರಹಲ್ಲಾದ ಹೇಳಿದಂತಾಯ್ತು! ನಾವು ನಮ್ಮ ಮನಸ್ಸನ್ನು tune ಮಾಡಿಕೊಳ್ಳಬೇಕಷ್ಟೇ!

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್ ಅವರೆ,
ನಿಮ್ಮದು ದೊಡ್ಡಬಳ್ಳಾಪುರ ತಾಲ್ಲೂಕಾ?
Blue Jay ಫೋಟೋ ತೆಗೆದದ್ದು ದೊಡ್ಡಬಳ್ಳಾಪುರ ಬಳಿಯೇ. ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರಕ್ಕೆ ಹೋಗುವ ದಾರಿಯಲ್ಲಿ ಇಟ್ಟಿಗೆ ಫ್ಯಾಕ್ಟರಿಗಳಿವೆಯಲ್ಲ ಅಲ್ಲೇ. ನಿಮ್ಮೂರ ಬಳಿ ಗೂಡೇನಾದರು ಮಾಡಿದ್ದರೆ ತಿಳಿಸಿ ಬರುತ್ತೇನೆ. ಈಗ ಅದರ Nesting Season.

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಕಾಂತಾ ಮೇಡಂ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಮಜ್ಜಿಗೆ ಕಡೆದಾಗ ಬೆಣ್ಣೆ ಹತ್ತಿರವಾಗುವಂತೆ ನಾವೆಲ್ಲಾ ಸೇರಿದ್ದೇವೆ ಅಲ್ಲವೆ?

ಬಾಲು ಸಾಯಿಮನೆ said...

ಪ್ರಶಸ್ತಿ ಬಂದದ್ದಕ್ಕೆ ಅಭಿನಂದನೆಗಳು. ನಾಗೆಂದ್ರ ಮುತ್ಮುರ್ಡು ಅವರ ಮನೆಯಲ್ಲಿ ನಿಮ್ಮ ಭೇಟಿಯಾಗಿದ್ದೆ . ನೆನಪಿದೆಯಾ? ನಿಮ್ಮ ಬ್ಲಾಗ follow ಮಾಡಲು ಪ್ರಯತ್ನಿಸಿದರರೂ ಬರುತ್ತಿಲ್ಲ. ಕಾರಣ ಏನು?.
ಧನ್ಯವಾದಗಳು.
ಬಾಲು

Laxman (ಲಕ್ಷ್ಮಣ ಬಿರಾದಾರ) said...

ಮಲ್ಲಿಕಾರ್ಜುನ ಸರ್, ತುಂಬಾ ಸಂತಸ ದ ಸುದ್ದಿ,
ಅಭಿನಂದನೆಗಳು ಶಿವು ಮತ್ತು ಮಲ್ಲಿಕಾರ್ಜುನರಿಗೆ.
ಲಕ್ಷ್ಮಣ

ವಿನುತ said...

ಮಲ್ಲಿಕಾರ್ಜುನ್ ಅವರೇ, ನಿಮ್ಮ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ನಿಮಗೆ ದೊರೆತ ಅಂತರರಾಷ್ಟ್ರೀಯ ಮನ್ನಣೆಗೆ ಹೃತ್ಪೂರ್ವಕ ಅಭಿನಂದನೆಗಳು

ಚಂದ್ರಕಾಂತ ಎಸ್ said...

ಮಲ್ಲಿಕಾರ್ಜುನ್
ಅಭಿನಂದನೆಗಳು. ಈ ಪ್ರಶಸ್ತಿ ನಿಮ್ಮ ಪರಿಶ್ರಮಕ್ಕೆ ಸಿಕ್ಕ ಫಲ.ನಿಮ್ಮ ಬ್ಲಾಗ್ ನಲ್ಲಿರುವ ಚಿತ್ರಗಳನ್ನು ರಾಯಲ್ ಸೊಸೈಟಿಗೆ ಕಳುಹಿಸಿಕೊಟ್ಟಿದ್ದಿರಾ ? ಬೇರೆಯವಾದರೆ ದಯವಿಟ್ಟು ಅವುಗಳನ್ನೂ ಬ್ಲಾಗ್ ಗೆ ಹಾಕಿ. ನಮಗೆ ಮತ್ತಷ್ಟು ಸಂತಸವಾಗುತ್ತದೆ.

Raveesh Kumar said...

ಲಂಡನ್ನಿನ ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಪ್ರತಿನಿಧಿ ಸದಸ್ಯತ್ವ ದೊರೆತಿದ್ದಕ್ಕೆ ಅಭಿನ೦ದನೆಗಳು.

ಚಿತ್ರಾ said...

ಮಲ್ಲಿಕಾರ್ಜುನ್,

ನನ್ನ ಹಾರ್ದಿಕ ಅಭಿನಂದನೆಗಳು ನಿಮಗೆ! ರಾಯಲ್ ಫೋಟೋಗ್ರಾಫಿಕ್ ಸೊಸೈಟಿಯ ಮಾನ್ಯತೆಗೆ.

ಈ ನಿಮ್ಮ ಲೇಖನ- ಮಾಹಿತಿಯೊಂದಿಗೆ ತುಂಬಾ ಉತ್ತಮವಾಗಿ ಮೂಡಿಬಂದಿದೆ.(ಎಂದಿನಂತೆ). ಫೋಟೋಗಳಂತೂ ಮನಸೂರೆಗೊಳ್ಳುತ್ತಿವೆ.

guruve said...

ಗೂಡುಗಳ ಬಗ್ಗೆ ತಿಳಿಸಿ.

ಅದಕ್ಕಿಂತ ಮೊದಲು, ತಮಗೆ ’ರಾಯಲ್ ಫೋಟೋಗ್ರಾಫಿಕ್ ಸೊಸೈಟಿ’ ಯಲ್ಲಿ ಪ್ರತಿನಿಧಿ ಸದಸ್ಯತ್ವ ಸಿಕ್ಕಿರುವುದಕ್ಕೆ, ಹಾರ್ದಿಕ ಅಭಿನಂದನೆಗಳು. ನಿಮ್ಮ ಸಾಧನೆ ಹೀಗೆ ಮುಂದುವರೆಯಲಿ.

Guruprasad said...

ಹಲೋ ಮಲ್ಲಿಕಾರ್ಜುನ್,
ನಿಮ್ಮ ಈ ಫೋಟೋಸ್ ನೋಡಿ ತುಂಬ ಖುಷಿ ಆಯಿತು, ತುಂಬ ಚೆನ್ನಾಗಿ ಇದೆ, ಪ್ರಕೃತಿ ನಿಸರ್ಗ, ಪ್ರಾಣಿ ಪಕ್ಷಿಗಳ ಜೊತೆ ಬೇರೆಯುವೆದೆ ಒಂದು ಕುಶಿ ಕೊಡುವ ವಿಚಾರ...
ಹಾಂ ಹಾಗೆ ನಿಮಗೆ ಮತ್ತು ಶಿವುರವರಿಗೆ ಲಂಡನ್ನಿನ ಪ್ರತಿಷ್ಠಿತ ರಾಯಲ್ ಫೋಟೋಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ(Associate) ಎಂಬ ಗೌರವ ಸಿಕ್ಕಿರುವುದು ನೋಡಿ ತುಂಬ ಸಂತೋಷ ಆಯಿತು.. wish you all the best for both of you.

sunaath said...

ಮಲ್ಲಿಕಾರ್ಜುನ,
ನಿಮ್ಮ ಛಾಯಚಿತ್ರಣಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರೆತದ್ದು
ತಿಳಿದು ಭಾಳಾ ಖುಶಿಯಾಯ್ತು. ಅಭಿನಂದನೆಗಳು. ಇನ್ನೂ ಹೆಚ್ಚಿನ ಮನ್ನಣೆ ನಿಮಗೆ ಲಭಿಸುತ್ತಿರಲಿ ಅಂತ ಹಾರೈಸುತ್ತೇನೆ.

Rajesh Manjunath - ರಾಜೇಶ್ ಮಂಜುನಾಥ್ said...

ಮಲ್ಲಿಕಾರ್ಜುನ್ ಸರ್,
ಚೆಂದದ ಫೋಟೋಗಳು ಮತ್ತು ಸೊಗಸಾದ ವಿಶ್ಲೇಷಣೆ....
ಜೊತೆಗೆ ಛಾಯಚಿತ್ರ ರಂಗದಲ್ಲಿ ನಿಮ್ಮ ಸಾಧನೆಗೆ ಮನದಾಳದ ಹಾರ್ಧಿಕ ಅಭಿನಂದನೆಗಳು...

Greeshma said...

ಮಲ್ಲಿ ಸರ್,
Royal society associate ಆದ್ರಂತೆ! ಸಂತೋಷ :)
u deserve it. ಅಭಿನಂದನೆಗಳು.

Annapoorna Daithota said...

Sheershikeye photo galannu vivarisuttide.
Namagoo devarannu thorisiddikke dhanyavadagalu :-)

ಮಲ್ಲಿಕಾರ್ಜುನ.ಡಿ.ಜಿ. said...

ಕೇಶವ್ ಕುಲಕರ್ಣಿ, ಶಿವು ಮತ್ತು ಧರಿತ್ರಿ - ನಿಮಗೆಲ್ಲಾ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

"ಕಾಡಿನಹಾದಿ" ಬ್ಲಾಗ್ ನ ಬಾಲು ಸರ್, ನಿಮ್ಮ ಬ್ಲಾಗ್ ತುಮ್ಬಾ ಚೆನ್ನಾಗಿದೆ. ನಾಗೇಂದ್ರರ ಮನೇಲಿ ಭೇಟಿಯಾಗಿದ್ದು ನೆನಪಿದೆ. ಚೆನ್ನಾಗಿದ್ದೀರಾ? follow ಲಿಂಕ್ ನ ಪ್ರಾಬ್ಲಮ್ ನನಗೂ ತಿಳಿವಲ್ದು!?

ಮಲ್ಲಿಕಾರ್ಜುನ.ಡಿ.ಜಿ. said...

ಲಕ್ಷ್ಮಣ್ ಸರ್, ವಿನುತ ಮೇಡಂ, ಚಂದ್ರಕಾಂತಾ ಮೇಡಂ, ರವೀಶ್ ಕುಮಾರ್ ಅವರೆ, ಚಿತ್ರಾ ಮೇಡಂ, ಗುರುಪ್ರಸಾದ್ ಅವರೆ, ಗುರುಸ್ ವರ್ಲ್ಡ್ ನ ಗುರು ಅವರೆ, ಸುನಾತ್ ಸರ್, ರಾಜೇಶ್ ಮಂಜುನಾಥ್, ಗ್ರೀಷ್ಮಾ ಮೇಡಂ,ಅನ್ನಪೂರ್ಣ ಮೇಡಂ - ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು.
ಇಂಟರ್ ನೆಟ್ ತೊಂದರೆ ನಮ್ಮಂತ ಚಿಕ್ಕ ಊರುಗಳಲ್ಲಿ!! ಹಾಗಾಗಿ ತಡವಾಗಿ ಉತ್ತರಿಸುತ್ತಿರುವೆ, ಕ್ಷಮಿಸಿ.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ. ದಯವಿಟ್ಟು ನಿಮ್ಮ ಇನ್ನುಳಿದ ಛಾಯಾಚಿತ್ರಗಳನ್ನು ಬ್ಲಾಗಿಗೆ ಹಾಕಿ. ಸಾಹಿತಿಗಳ ಸಹಿ ಸಗ್ರಹದ ಕಾನ್ಸೆಪ್ಟ್ ನಿಜಕ್ಕೂ Fine. very very nice....