Thursday, February 26, 2009

ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಪೂರ್ವಜನ್ಮದ ಕಕ್ಷಿದಾರರು!

ಗೆಳೆಯ ಸತ್ಯನಾರಾಯಣ್ ಬಂದು "ನಮ್ಮ ಕೋರ್ಟ್ ನಲ್ಲಿ ಹಕ್ಕಿಯೊಂದು ಗೂಡು ಮಾಡಿದೆ ಫೋಟೋ ತೆಗೀತೀರಾ?" ಎಂದು ಕೇಳಿದರು. ನನಗೆ ನಗು ಬಂತು. ಎಲ್ಲಾ ಜಾಗ ಬಿಟ್ಟು ಕೋರ್ಟ್ ನಲ್ಲಿ ಗೂಡು ಮಾಡುವುದಕ್ಕೆ ಹಕ್ಕಿಗೇನು ಬುದ್ಧಿ ಇಲ್ವಾ? ಎಂದು ಅನಿಸಿ ನಗುಬಂದಿತು. ಅವರು, "ನೀವು ನಂಬಲ್ಲ ಅಂತಗೊತ್ತು. ನಾವು ವಕೀಲರು ಸಾಕ್ಷಿಯಿಲ್ಲದೆ ಮಾತನಾಡೋದಿಲ್ಲ. ನೋಡಿ ನನ್ನ ಮೊಬೈಲ್ ನ ಕ್ಯಾಮೆರಾದಲ್ಲಿ ಫೋಟೋ ತೆಗೆದಿದ್ದೀನಿ" ಎಂದು ತೋರಿಸಿದರು. ಅದರಲ್ಲಿ ಚಿತ್ರ ತುಂಬಾ ಅಸ್ಪಷ್ಟವಾಗಿತ್ತು. ಅವರು ಹಠತೊಟ್ಟು ನನ್ನನ್ನು ಕೋರ್ಟಿನ ಬಳಿಗೆ ಕರೆದೊಯ್ದರು.
ತೊಂಬತ್ತು ವರ್ಷದ ವೃದ್ಧ ಕಟ್ಟಡ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನ್ಯಾಯಾಲಯದ ಕಟ್ಟಡ ಹಳೆಯದು. ಇದು ೧೯೧೮ರಲ್ಲಿ ಕಟ್ಟಿದ ಕಟ್ಟಡ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ತಾಲೂಕು ಆಡಳಿತ ಕಛೇರಿಯಾಗಿತ್ತು. ಸ್ವಾತಂತ್ರ್ಯಾನಂತರ ಇದೇ ಕಟ್ಟಡದ ಒಂದು ಭಾಗದಲ್ಲಿ ಪೋಲೀಸ್ ಸ್ಟೇಷನ್ ಮತ್ತು ಇನ್ನೊಂದು ಭಾಗದಲ್ಲಿ ತಾಲೂಕು ಕಛೇರಿ ಕಾರ್ಯನಿರ್ವಹಿಸುತ್ತಿತ್ತು. ಹೊಸ ಕಟ್ಟಡಕ್ಕೆ ಪೋಲೀಸ್ ಸ್ಟೇಷನ್ ವರ್ಗಾವಣೆಯಾಯ್ತು. ಮಿನಿವಿಧಾನಸೌಧವಾದ ಮೇಲೆ ಆಡಳಿತ ಕಛೇರಿಯೂ ಅಲ್ಲಿಗೆ ಹೋಯಿತು. ಆಗ ಸ್ವಂತ ಕಟ್ಟಡವಿರದಿದ್ದರಿಂದ ನ್ಯಾಯವಾದಿಗಳ ವಶಕ್ಕೆ ಈ ಕಟ್ಟಡ ಬಂತು. ಈ ಕಟ್ಟಡದ ಮಧ್ಯಭಾಗದ ಖಾಲಿ ಜಾಗದಲ್ಲಿ ಹಳೆಯ ಎರಡು ಅಶೋಕ ಮರಗಳು ಮತ್ತು ಒಣಗಿನಿಂತ ಈಚಲು ಮರದ ಎರಡು ಖಾಂಡಗಳಿದ್ದವು. ವಕೀಲರೆಲ್ಲರ ಆಸಕ್ತಿಯಿಂದಾಗಿ ಈಗ ಅಲ್ಲಿ ಹಸಿರು ಉಸಿರಾಡುತ್ತಿದೆ. ತರತರದ ಹೂಗಿಡಗಳನ್ನು ನೆಟ್ಟಿದ್ದಾರೆ. ರಂಗಿನ ಗುಲಾಬಿಗಳು ನಳನಳಿಸುತ್ತಿವೆ.
ಕೋರ್ಟ್ ನ ಹೂತೋಟದಲ್ಲಿ ಈಚಲ ಕಾಂಡ ಮತ್ತು ಅದರಲ್ಲಿನ ಪೊಟರೆಯನ್ನೂ ಕಾಣಬಹುದು.
ಇಲ್ಲಿ ಒಣಗಿನಿಂತಿರುವ ಈಚಲು ಖಾಂಡದಲ್ಲಿ ಪೊಟರೆ. ಅದರಲ್ಲಿ ಕುಟುರ ಹಕ್ಕಿಯ ಗೂಡು. ಜನದಟ್ಟಣೆಯಿಂದ ಗಿಜಗುಡುವ ನ್ಯಾಯಾಲಯದ ಆವರಣದಲ್ಲಿ ಹಕ್ಕಿ ಗೂಡು ಮಾಡಿದೆಯಲ್ಲ ಎಂಬುದೇ ಅಚ್ಚರಿ. ನಾನಲ್ಲಿ ನೋಡುತ್ತಿರುವಾಗಲೇ ತಾಯಿಹಕ್ಕಿ ಹಾರಿ ಬಂದು ಗುಟುಕು ಕೊಟ್ಟು ಹೋಯಿತು. ಆದರೆ ಇದನ್ನು ಫೋಟೋ ತೆಗೆಯುವುದು ಹೇಗೆ? ನನ್ನ ಕ್ಯಾಮೆರಾ, ಟ್ರೈಪಾಡ್ ಎಲ್ಲ ತಂದು ನಿಲ್ಲಿಸಿದರೆ, ನನ್ನ ಸುತ್ತಲು ಜನ ಮುತ್ತಿ, ಹಕ್ಕಿ ಬರದೇ ನಾನಾ ಪಡಿಪಾಟಲು ಅನುಭವಿಸಬೇಕಾಗುತ್ತೆ. ಈ ಸಮಸ್ಯೆಗೆ ಗೆಳೆಯರೇ ಪರಿಹಾರ ಸೂಚಿಸಿದರು. "ಬೆಳೆಗ್ಗೆ ಬೇಗ ಬನ್ನಿ. ವಾಚ್ ಮನ್ ಗೆ ಹೇಳಿರ್ತೀನಿ. ಯಾರೂ ಇರಲ್ಲ. ನೀವು ಫೋಟೋ ತೆಗೀಬಹುದು" ಅಂದರು.
ಸದಾ ಚಟುವಟಿಕೆಯಿಂದಿರುವ ಸುಂದರ ಸೂರಕ್ಕಿ.
ಮಾರನೇ ದಿನ ಬೆಳಿಗ್ಗೆ ಬೇಗ ಹೋಗಿ ನನ್ನ ಕ್ಯಾಮೆರಾವನ್ನು ಟ್ರೈಪಾಡ್ ಗೆ ಹೊಂದಿಸಿ, ಕೇಬಲ್ ಹಾಕಿ, ಅದರ ತುದಿ ಹಿಡಿದು ದೂರದಲ್ಲಿ ಕೂತು ಗಮನಿಸತೊಡಗಿದೆ. ನನ್ನ ಕಣ್ಮುಂದೆ ಹೂತೋಟವಿತ್ತು. ಚಿಟ್ಟೆಗಳು ಹೂವಿನ ಮಕರಂದ ಹೀರುತ್ತಾ ಹಾರಾಡುತ್ತಿದ್ದವು. ಕೀಚ್ ಕೀಚ್ ಎನ್ನುತ್ತಾ ಸೂರಕ್ಕಿಗಳು ತಮ್ಮ ಚೂಪಾದ ಕೊಕ್ಕಿನಿಂದ ದಾಸವಾಳ ಹೂವಿನ ಮಕರಂದ ಹೀರುತ್ತಿದ್ದವು.
ಅಂಬರಗುಬ್ಬಿಗಳ ಗೂಡು.
ಅತಿ ವೇಗವಾಗಿ ಹಾರಾಡುವ ಅಂಬರಗುಬ್ಬಿಗಳು ಹಾರಾಟ ನಡೆಸಿದ್ದವು. ನೋಡಿದರೆ ಅವೂ ಗೂಡು ಕಟ್ಟಿದ್ದವು. ಇನ್ನು ಗುಬ್ಬಿ, ಪಾರಿವಾಳ, ಅಳಿಲುಗಳೂ ಅಲ್ಲಿದ್ದವು. ಅರೆ! ಇದು ನ್ಯಾಯಾಲಯವೊ ಇಲ್ಲಾ ಕಾನನವೊ ಅನ್ನಿಸಿತು.
ತನ್ನ ಮರಿಗಾಗಿ ಹಣ್ಣು ತಂದಿರುವ ಕುಟುರ.
ಇದರ ಮಧ್ಯೆ ಕುಟುರ ತನ್ನ ಮರಿಗೆ ಹಣ್ಣು, ಕೀಟಗಳನ್ನು ತಂದು ತಿನ್ನಿಸುತ್ತಿತ್ತು. ಮರಿಯಾಗಲೇ ಕೊಂಚ ದೊಡ್ಡದಾಗಿತ್ತು. ತಲೆಯನ್ನು ಗೂಡಿನಿಂದ ಹೊರಕ್ಕೆ ಹಾಕುತ್ತಿತ್ತು.
ನ್ಯಾಯ ಬೇಕೇ ಬೇಕು ಎಂದು ಹಠಯೋಗಿಯಂತೆ ಕುಳಿತಿರುವ ಹದ್ದು.
ನಾನು ಫೋಟೋ ತೆಗೆದು, ಇಷ್ಟೆಲ್ಲಾ ಹಕ್ಕಿ ಚಿಟ್ಟೆ ಕೌತುಕಗಳನ್ನು ನೋಡಿ ಬೆರಗಿನಿಂದ ಹೊರಬರುವಾಗ್ಗೆ ಹದ್ದೊಂದು ನ್ಯಾಯಾಲಯದ ಆವರಣದಲ್ಲಿ ಕುಳಿತಿತ್ತು. ಅದರ ಫೋಟೋವನ್ನೂ ತೆಗೆದೆ. ಅದು ನ್ಯಾಯಾಲಯದ ಬಾಗಿಲು ತೆರೆಯುವುದಕ್ಕಾಗಿ ಕಾದು ಕುಳಿತಿರುವಂತೆ ಅನ್ನಿಸಿತು. ಆಗ ನನಗೆ ಇವು ಹೋದ ಜನ್ಮದಲ್ಲಿ ಹಾಕಿದ್ದ ಕೇಸ್ ಗಳನ್ನು ಶತಾಯಗತಾಯ ಇತ್ಯರ್ಥ ಮಾಡಿಕೊಳ್ಳಬೇಕೆಂಬ ತೀರ್ಮಾನದಲ್ಲಿ ಇಲ್ಲಿಗೆ ಬಂದಿರಬೇಕು ಅನ್ನಿಸಿತು.
ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯನ್ನು ಕಿಟಕಿಯ ಮೇಲೆ ಕುಳಿತು ಆಲಿಸುವ ಗುಬ್ಬಿ ದಂಪತಿ.

30 comments:

Ittigecement said...

ಮಲ್ಲಿಕಾರ್ಜುನ್....

ಮತ್ತದೇ ಹುಡುಕಾಟ...!

ನಿಮ್ಮ ಹುಡುಕಾಟ ನನಗೆ ಇಷ್ಟ...

ಹಕ್ಕಿಗಳ ಫೋಟೊಗಳು ತುಂಬಾ ಮುದ್ದಾಗಿ ಬಂದಿವೆ...

ಪುಟ್ಟ ಹಕ್ಕಿ ಕೊಂಬೆಯನ್ನು ಅಡ್ಡವಾಗಿ ಹಿಡಿದುಕೊಂಡ ಫೋಟೊ... ನಿಮ್ಮಲ್ಲಿರುವ ಕಲೆಯನ್ನು ತೋರಿಸುತ್ತದೆ...

ಫೋಟೊ ನೋಡಿದರೆ ನಿಮ್ಮ ತಾಳ್ಮೆ, ಶ್ರದ್ಧೆ ಎದ್ದು ಕಾಣುತ್ತದೆ...

ಅದಕ್ಕೆ ಪೂರಕವಾಗಿ ಲೇಖನ...

ನಿಮ್ಮ ಬ್ಲಾಗಿಗೆ ಬಂದರೆ ಎಲ್ಲವೂ ಹೊಸದು.. ಇಷ್ಟವಾಗುವಂಥಹದು..!

ಅವಧಿಯಲ್ಲಿ ನಿಮ್ಮ ಬಗೆಗೆ ಬಂದಿರುವದಕ್ಕೆ...
ಸುಧಾದಲ್ಲಿ ನಿಮ್ಮ ಚಿತ್ರ ಲೇಖನ ಬಂದಿರುವದಕ್ಕೆ..
ಈ ಚಂದದ ಚಿತ್ರ ಲೇಖನಕ್ಕೆ...

ಅಭಿ ನಂದನೆಗಳು..
ವಂದನೆಗಳು...

shivu.k said...

ಮಲ್ಲಿಕಾರ್ಜುನ್,

ನ್ಯಾಯ ಎಲ್ಲಿದೆ....ಹಾಡು ನೆನಪಾಯಿತು....

ನಮಗಂತೂ ಸರಿಯಾದ ಸಮಯಕ್ಕೆ ನ್ಯಾಯ ಸಿಗುವುದಿಲ್ಲ...ಅದರೆ ಹದ್ದಿಗೂ ಹಾಗೆ ಹಾಗಿರಬಹುದು...
ಕಟ್ಟಡ, ಅದರ ಬಗ್ಗೆ ಮಾಹಿತಿ, ಮತ್ತು ವಕೀಲರ ಸಹಕಾರ ಪಕ್ಷಿಗಳ ಫೋಟೊ ಎಲ್ಲಾ ಚೆನ್ನಾಗಿದೆ....ನನಗೆ ತಿಳಿದಂತೆ ಇನ್ನೂ ಸುಮಾರು ಹಕ್ಕಿಗಳು ಇದ್ದದ್ದನ್ನು ಹೇಳಿದ್ದೀರಿ...ಸಾಧ್ಯವಾದರೆ ಅವುಗಳನ್ನು ಹಾಕಿ....ವಿಚಾರ ಮತ್ತು ವಸ್ತು ವಿಭಿನ್ನವಾಗಿವೆ....ಮುಂದುವರಿಸಿ....

Anonymous said...

ಫೊಟೋಗಳು ತುಂಬಾ ಚೆನ್ನಾಗಿವೆ.
ಹೌದು, ಈ ಪಕ್ಶಿಗಳು ಸಾಕ್ಷಿನೂ ಹೇಳುತ್ತವಾ?

PaLa said...

ಚಿಕ್ಕಬಳ್ಳಾಪುರದ ಹಳೇ ಕಟ್ಟಡದ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸಿದ್ದೀರ. ಕೋರ್ಟಿನ ವಾತಾವರಣದಲ್ಲೇ ಅದಕ್ಕೆ ಹೊಂದುವಂತಹ ಲೇಖನ ಮತ್ತು ಚಿತ್ರಗಳು ಚೆನ್ನಾಗಿವೆ. ವಂದನೆಗಳು
--
ಪಾಲ

Unknown said...

ಕಾಣುವ ಕಣ್ಣಿದ್ದವರು ಕುಳಿತಲ್ಲೂ, ಕತ್ತಲಲ್ಲೂ ಸ್ವರ್ಗವನ್ನು ಕಾಣುತ್ತಾರೆ. ನಮ್ಮ ಸುತ್ತಮುತ್ತಲವೇ ನಾವು ಕಾಣಲೇಬೇಕಾದ ಒಂದು ಲೋಕವಿದೆ. ಆದರೆ ಕಾಣುವ ಕಣ್ಣು ಮನಸ್ಸು ಬೇಕು ಅಷ್ಟೆ. ಶಿಡ್ಕಘಟ್ಟ ಎಂದರೆ ಬಿಸಿಲ ನಾಡು ಎಂದುಕೊಂಡಿದ್ದ ನನಗೆ ನಿಮ್ಮ ಫೋಟೋಗಳು ಬೇರೆಯದೇ ಕಥೆ ಹೇಳುತ್ತಿವೆ.

Greeshma said...
This comment has been removed by the author.
Greeshma said...

ಚೆನಾಗಿದೆ ಫೋಟೋಗಳು.
ಬಾರಿ ಅಪರೂಪವಾಗಿದೆ ಈಗ ಈ ಹಕ್ಕಿಗಳು . ನಿಮಗೆ ಒಂದೇ ಕಡೆ ಕಾಣೋದಕ್ಕೆ ಸಿಕ್ಕಿದ್ದು ಆಶ್ಚರ್ಯ

ಪಾಚು-ಪ್ರಪಂಚ said...

Hi Mallikarjun,

Putta hakkiya photo tumbaa muddagide.

Sudha dalli nimma chitra lekhana bandide antha prakash sir pratikriye nalli nodide.

Abhinandanegalu

ಚಂದ್ರಕಾಂತ ಎಸ್ said...

ಮೊಟ್ಟಮೊದಲನೆಯದಾಗಿ ಅತಿ ಸುಂದರವಾದ ಬರವಣಿಗೆಯ font ಆರಿಸಿರುವುದಕ್ಕೆ , ಅದಕ್ಕೊಫ್ಫುವ ಹಿನ್ನೆಲೆಯ ಬಣ್ಣ , ಕಣ್ಮನಗಳಿಗೆ ಹಿತ ನೀಡುತ್ತಿರುವುದಕ್ಕೆ ಧನ್ಯವಾದಗಳು. ಸಾಧ್ಯವಾದರೆ ಯಾವ font ತಿಳಿಸಿ.

ರವಿ ಕಾಣದ್ದನ್ನು ಕವಿ ಕಂಡ ಎಂಬ ಕವಿವಾಣಿಯಂತೆ ಉತ್ತಮ ಛಾಯಾಚಿತ್ರಗ್ರಾಹಕರೂ ಆಗಿರುವ ನಿಮ್ಮ ಕೈಚಳಕದಿಂದ ಸೊಗಸಾದ ಚಿತ್ರಗಳನ್ನೂ ಮತ್ತು ಉತ್ತಮ ಅತ್ಯವಶ್ಯಕ ವಿವರಣೆಗಳನ್ನೊಳಗೊಂಡ ಈ ಪೋಸ್ಟ್ ತುಂಬಾ ಚೆನ್ನಾಗಿದೆ.
ದಾಸವಾಳದ ರಸ ಹೀರುತ್ತಿರುವ ಸೂರಕ್ಕಿಯ ಚಿತ್ರವಂತೂ ಲಾಜವಾಬ್!
ಏನೇ ಆಗಲಿ ಕೋರ್ಟ್ ಆವರಣದಲ್ಲಿ ಇಷ್ಟೊಂದು ಪಕ್ಷಿಗಳು ನೆಲಸುವುದಕ್ಕೆ ಅನುವುಮಾಡಿಕೊಟ್ಟ ಶಿಡ್ಲಘಟ್ಟದ ನ್ಯಾಯಾಲಯಕ್ಕೆ ನಮ್ಮ ಕೃತಜ್ಞತೆಗಳು

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್ ಮತ್ತು ಶಿವು ಧನ್ಯವಾದಗಳು.
ಈಗ ನ್ಯಾಯಾಲಯಕ್ಕೆ ಹೊಸ ಜಾಗ ಮಂಜೂರಾಗಿದೆ.ಅಲ್ಲಿ ಕಟ್ಟಡ ಕಟ್ಟುತ್ತಿದ್ದಾರೆ. ಮುಂದೆ ಇಷ್ಟೆಲ್ಲಾ ತರತರಹದ ಹಕ್ಕಿಗಳಿಗೆ ನ್ಯಾಯ ಒದಗಿಸುವವರ್ಯಾರು? ಇದನ್ನೇ ನ್ಯಾಯಾಲಯದ ಖಜಾಂಚಿಯಾದ ಶ್ರೀನಿವಾಸಮೂರ್ತಿಯವರನ್ನು ಕೇಳಿದಾಗ,"ನಮಗೂ ಈ ಜಾಗ ಬಿಡಲು ಇಷ್ಟವಿಲ್ಲ.ಆದರೇನು ಮಾಡುವುದು?"ಅಂದರು. ಬಾಡಿಗೆ ಮನೆ ಬಿಡುವಾಗ ಹೆಂಡತಿ ಅಳುವುದನ್ನು ನೋಡಿ ಗಂಡ,"ಏನನ್ನು ಬಿಟ್ಟಿಲ್ಲ ತಾನೆ?ಏತಕ್ಕೆ ಅಳುತ್ತಿರುವುದು?"ಎಂದು ಕೇಳಿದನಂತೆ. ಆಗ ಹೆಂಡತಿ,"ನನ್ನ ಕಂದ ಗೀಚಿದ ಬರಹ ಅಲ್ಲೆ ಗೋಡೆ ಮೇಲಿದೆ" ಎಂದು ಬಿಕ್ಕಿದಳಂತೆ.
ಪುರಾತನವಾದ, ಇಷ್ಟೊಂದು ಹಕ್ಕಿಗಳಿಗೆ ಆಶ್ರಯ ನೀಡಿರುವ, ೯೦ ವರ್ಷಗಳ ಇತಿಹಾಸ ತನ್ನೊಡಲಲ್ಲಿಟ್ಟುಕೊಂಡಿರುವ ಕಟ್ಟಡ ಶತಕ ಪೂರೈಸುವೆನೊ ಇಲ್ಲವೊ ಎಂದು ತನ್ನ ಭವಿಷ್ಯದ ಬಗ್ಗೆ ಆತಂಕದಿಂದಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ಜ್ಯೋತಿ ಮೇಡಂ,
ಹಕ್ಕಿಗಳು ಸಾಕ್ಷಿ ಹೇಳುವುದಿಲ್ಲವಾದರೂ ಕೋರ್ಟ್ ಕಲಾಪವಂತೂ ಖಂಡಿತ ಕೇಳುತ್ತವೆ! ಗುಬ್ಬಚ್ಚಿಗಳು ಕೂರುವುದೇ ಕಿಟಕಿ ಮೇಲೆ!

ಮಲ್ಲಿಕಾರ್ಜುನ.ಡಿ.ಜಿ. said...

ಪಾಲಚಂದ್ರ ಅವರೆ ಧನ್ಯವಾದಗಳು.
ಇದು ಚಿಕ್ಕಬಳ್ಳಾಪುರದ ಕಟ್ಟಡವಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ನ್ಯಾಯಾಲಯದ ಕಟ್ಟಾಡ.

ಮಲ್ಲಿಕಾರ್ಜುನ.ಡಿ.ಜಿ. said...

ಸತ್ಯ ಸರ್,
ಧನ್ಯವಾದಗಳು. ಶಿಡ್ಲಘಟ್ಟ Silk and Milk ಗೆ ಫೇಮಸ್. ಬಿಸಿಲಿಗೂ ಸಹ! ಮಣ್ಣೆಲ್ಲ ಶೋಸಿ ಚಿನ್ನ ತೆಗೆವಂತೆ ಹಕ್ಕಿಗಳನ್ನೂ ಹೆಕ್ಕುವುದು, ಚಿತ್ರಿಸುವುದು ನಿಜಕ್ಕೂ ಖುಷಿ ಕೊಡುತ್ತೆ.

ಮಲ್ಲಿಕಾರ್ಜುನ.ಡಿ.ಜಿ. said...

ndಗ್ರೀಷ್ಮ ಮತ್ತು ಪ್ರಶಾಂತ್ ಧನ್ಯವಾದಗಳು.
ಚಂದ್ರಕಾಂತ ಮೇಡಂ, ತುಂಬಾ ಥ್ಯಾಂಕ್ಸ್. ನಾನು ಬಳಸುವ ಫಾಂಟ್ ಯಾವುದೆಂದು ಗೊತ್ತಿಲ್ಲ. ಮೊದಲಿಂದಲೂ ಇದೇ ಬಳಸುತ್ತಿರುವೆ!
ನಮ್ಮೂರಿನ ನ್ಯಾಯವಾದಿಗಳಿಗೆ ತಾವು ಪ್ರತಿದಿನ ಓಡಾಡುವ ಕೋರ್ಟ್ ನಲ್ಲಿ ಇರುವ ಹಕ್ಕಿಗಳ ಬಗ್ಗೆ ಪರಿವೇ ಇರಲಿಲ್ಲ. ನನ್ನ ಸ್ನೇಹಿತರಾದ ಸತ್ಯನಾರಾಯಣ್ ಎಲ್ಲರಿಗೂ ತೋರಿಸಿದಾಗ ಆಶ್ಚರ್ಯ ಪಟ್ಟರು!

Bhramara said...

Dear Mallikarjun

The photographs are excellent...the barbet photograph reminds me of E. Hanumantha Rao who made barbets famous with his excellent pics....congratulations..apart from phots i liked the history of the court building ...and the subtle humour...keep it up and all the best.

Yours truly
K. chandrashekara

ಶ್ರೀನಿಧಿ.ಡಿ.ಎಸ್ said...

ಆಹಾ! ಚಂದ!

mukhaputa said...

nijavaagiyu adbutha, tumba sooksmavaagi ellavannu gamanisiddiree baravanige tumba istavaayitu

guruve said...

pakshigala phOTogaLu sundara mattu adbhuta.. aa hoovia hakki (soorakki/sun-bird) phOTo antoo nanage bahaLa hiDisitu..

ಚಿತ್ರಾ said...

ಮಲ್ಲಿಕಾರ್ಜುನ್,
ಅದ್ಭುತ ಫೊಟೋಗಳು!ಇದಕ್ಕೆ ತುಂಬಾ ತಾಳ್ಮೆ ಬೇಕು. ಬೆಳಕು -ನೆರಳುಗಳ ಸಂಯೋಜನೆಯ ಅರಿವು ಬೇಕು! ನಿಮ್ಮೊಳಗಿನ ಕಲಾವಿದನಿಗೆ ನನ್ನ ಸಲಾಮ್!
ಕಡೆಗೆ ನ್ಯಾಯ ಯಾರಿಗೆ ಸಿಕ್ಕಿತು ?

ಮಲ್ಲಿಕಾರ್ಜುನ.ಡಿ.ಜಿ. said...

ಚಂದ್ರಶೇಖರ್ ಸರ್,
ತುಂಬಾ ಥ್ಯಾಂಕ್ಸ್. ನೀವಂದಂತೆ ಹನುಮಂತರಾವ್ ಅವರ ಚಿತ್ರಗಳು ನನಗೂ ಸ್ಫೂರ್ತಿ. ಅವರು ತೆಗೆದಿರುವ ಹುಲಿ, ಅಳಿಲು ಇತ್ಯಾದಿ ಚಿತ್ರಗಳು ಸಾರ್ವಕಾಲಿಕವಾದವುಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್,
ಧನ್ಯವಾದ. ಆ Sunbird ಫೋಟೋ ತೆಗೆಯೋದು ಬಹಳ ಕಷ್ಟ. ಒಂದು ಸೆಕೆಂಡ್ ಒಂದು ಕಡೆ ಕೂರುವಂತಹ ಪ್ರಾಣವಲ್ಲ ಅದು. ಸಿಕ್ಕಾಪಟ್ಟೆ active. ಕಷ್ಟಪಟ್ಟಿದ್ದರ ಬಗ್ಗೆ ಒಲವು ಹೆಚ್ಚು ಅಲ್ವಾ?

ವಿನುತ said...

ನಿಮ್ಮ ಬ್ಲಾಗಿನ ಈ ಎಲ್ಲ ಛಾಯಾಚಿತ್ರಗಳನ್ನು ನೋಡುವಾಗ, ನಾನೇ ಆ ಕ್ಯಾಮೆರಾ ಆಗಬಾರದಿತ್ತೇ ಎಂದನಿಸತ್ತೆ! (ಏನ್ ದುರಾಸೆ ಅಲ್ವಾ? :) )
ನಿಮ್ಮ ಈ ಪರಿಶ್ರಮಕ್ಕೆ ಅಭಿನಂದನೆಗಳು.
ನಮ್ಮೊಡನೆ ಹಂಚಿಕೊಂಡದ್ದಕ್ಕೆ ವಂದನೆಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಚಿತ್ರಾ ಅವರೆ,
ನ್ಯಾಯಾಲಯದ ಕಟ್ಟಡಕ್ಕೇ ಈಗ ನ್ಯಾಯ ಬೇಕಿದೆ!!
ನ್ಯಾಯಾಲಯಕ್ಕೆ ಹೊಸ ಕಟ್ಟಡವಾದ ಮೇಲೆ ಈಗಿರುವುದನ್ನು ಬಿಟ್ಟು ಹೋಗುತ್ತಾರೆ. ಆಗ ಯಾರೋ ಒಬ್ಬ ಗುತ್ತಿಗೆದಾರನಿಗೆ ಕಡಿಮೆ ಬೆಲೆಗೆ ಕೊಡುತ್ತಾರೆ. ಆನಂತರ ಆ ಕಟ್ಟಡ ಇತಿಹಾಸವಾಗುತ್ತದೆ. ಹಳೆಯದನ್ನ ಉಳಿಸುವ ಮನಸ್ಥಿತಿ ಇಲ್ಲ. ಹಳೆಯ ಕಟ್ಟಡದಲ್ಲಿರುವ ಬೀಟೆ, ತೇಗದ ಮರಮುಟ್ಟುಗಳಿಗೆ ಬೆಲೆ ಕಟ್ಟುತ್ತಾರೆ. ಇನ್ನು ಹಕ್ಕಿ ಚಿಟ್ಟೆಗಳಿಗೆ ಬೆಲೆಯೆಲ್ಲಿ?

ಮಲ್ಲಿಕಾರ್ಜುನ.ಡಿ.ಜಿ. said...

ವಿನುತಾ ಅವರೆ,
ನಿಮ್ಮ ಅಭಿನಂದನೆ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿಯಾಗಿದ್ದೇನೆ. ಫೋಟೋ ತೆಗೆಯುವಾಗ ನಾನೇ ಕ್ಯಾಮೆರಾ ಆಗಿಬಿಡುತ್ತೇನೆ!

guruve said...

ಮಲ್ಲಿಕಾರ್ಜುನ್ ಬಹಳ ಸತ್ಯ. ಕಷ್ಟ ಪಟ್ಟಿದ್ದರ ಬಗೆಗೆ ಬಹಳ ಒಲವು ಮತ್ತು ಅದರಿಂದ ಸಿಗುವ ಫಲ ಬಹಳ ರುಚಿ. ಹೌದು ನಾನೊಮ್ಮೆ ಈ sunbird ಫೋಟೊ ತೆಗೆಯಲು ಹೋಗಿ ಸುಸ್ತಾದ/ಸೋತ ನೆನಪು ಮನಸ್ಸಿನಲ್ಲಿದೆ. ನೋಡೋಕ್ಕೆ ಚಿಟ್ಟೆಯಷ್ಟೆ ಚಿಕ್ಕದಾದರೂ ಬಹಳ ಚಟುವಟಿಕೆಯ ಪಕ್ಷಿ. ಹಾಗೆ ನೋಡಿದರೇ ಚಿಟ್ಟೆ ಕೂಡ ಬಹಲ ಚಟುವಟಿಕೆಯ ಕೀಟ?!

ಚಿತ್ರಾ ಸಂತೋಷ್ said...

ಏನಣ್ಣಯ್ಯ..ಇಷ್ಟು ಚೆಂದದ ಫೋಟೋ ತೆಗೆದುಬಿಟ್ಟು..ನಮ್ಮ ಹೊಟ್ಟೆ ಉರಿಸೋದು..!! ನಿಜ ಹೇಳಲಾ..ಬರಹಕ್ಕಿಂತ ಮೊದಲು ನಾ ಫೋಟೋಗಳನ್ನು ನೋಡೋದ್ರಲ್ಲೇ ಮಗ್ನಳಾಗುರುತ್ತೇನೆ. ಇದು ನಿಮ್ಮ ಫೋಟೋಗಳ ಮಹಿಮೆ!
-ಚಿತ್ರಾ

ಮಲ್ಲಿಕಾರ್ಜುನ.ಡಿ.ಜಿ. said...

ಗುರುಪ್ರಸಾದ್,
ನೀವು ಹೇಳಿದಂತೆ ಚಿಟ್ಟೆಯ ಫೋಟೋ ತೆಗೆಯೋದೂ challenging. ಅದನ್ನೂ ಒಂದಷ್ಟು ತೆಗೆದಿರುವೆ.

ಮಲ್ಲಿಕಾರ್ಜುನ.ಡಿ.ಜಿ. said...

ಚಿತ್ರಾ ಅವರು ನನ್ನ ಬ್ಲಾಗ್ ನೋಡಲು ಬರಲಿಲ್ಲವಲ್ಲ ಅಂದ್ಕೋತಿದ್ದೆ. ಅಷ್ಟರಲ್ಲಿ ಬಂದೇಬಿಟ್ಟಿದ್ದಕ್ಕೆ ಥ್ಯಾಂಕ್ಸ್.

maddy said...

Mallikarjun avre photo galu bahala chennagi moodive nimma camera kanNinda...
ellavu ishtavaadavu...

Madhu.

basumegalkeri said...

ಮಾನ್ಯ ಮಲ್ಲಿಕಾರ್ಜುನ ಅವರಿಗೆ,

ನಿಮ್ಮ ಚಿತ್ರಗಳು ಮತ್ತು ತೇಜಸ್ವಿ ಕುರಿತ ಬರಹ- ಎರಡೂ ಚೆನ್ನಾಗಿದೆ.

ಹಕ್ಕಿಗಳ ಫೋಟೋಗಳಂತೂ ಅದ್ಭುತ.

ವಿಶ್ವಾಸದೊಂದಿಗೆ,
ಬಸವರಾಜು
ಕಾರ್ಯನಿರ್ವಾಹಕ ಸಂಪಾದಕ
ವಿಕ್ರಾಂತ ಕರ್ನಾಟಕ ವಾರಪತ್ರಿಕೆ