Friday, February 6, 2009

ಪ್ರವಾಸವೆಂಬ ಔಷಧ!

ಮಡಿಕೇರಿಗೆ ಹೋಗುವಾಗ ಸಿಗುವ ಏರಿಳಿತದ ಹಾದಿಯಲ್ಲಿ ಆ ಗುಡ್ಡದ ಮೇಲೊಂದು ಮನೆ, ಈ ಇಳಿಜಾರಿನಲ್ಲೊಂದು ಮನೆ ಇರುವುದನ್ನು ನೋಡಿ, "ಮನೆಮನೆಗೆ ಹೋಗಿ ವೋಟು ಕೇಳೋದು ಇಲ್ಲಿ ಶ್ಯಾನೆ ಕಷ್ಟ!" ಎಂದು ಮಧು ಉದ್ಗರಿಸಿದ. ಹಾಗಂತ ಅವನೇನೂ ರಾಜಕಾರಣಿಯಲ್ಲ, ಶಿಡ್ಲಘಟ್ಟದ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ. ಔಷಧಿ ಮಾರುತ್ತಾ ಸದಾ ಅಂಗಡಿಗಳಲ್ಲೇ ಬಂಧಿತರಾಗಿರುವವರಿಗೂ ಕೊಂಚ ಬದಲಾವಣೆ ಇರಲೆಂದು ಹದಿನೈದು ಜನ ಪ್ರವಾಸ ಕೈಗೊಂಡಿದ್ದೆವು.
ರಾತ್ರಿ ಹೊರಟು ಕುಶಾಲನಗರ ತಲುಪಿದಾಗ ಬೆಳಗ್ಗೆ ೬ ಗಂಟೆಯ ಚುಮುಚುಮು ಚಳಿ. ಯಾರೂ ಕೆಳಗಿಳಿಯಲಿಲ್ಲ. ಎಲ್ಲರೂ ವಾಹನದಲ್ಲೇ ಮುದುಡಿಕೊಂಡಿದ್ದರು. ಅಂಜನಿ ಫಾರ್ಮದ ಮೋಹನ ಮತ್ತು ನಾನು ಅಲ್ಲೆಲ್ಲಾ ಹುಡುಕಿದಾಗ ಸಿಕ್ಕಿದ್ದು ಲಾಡ್ಜಲ್ಲಿ ಒಂದೇ ರೂಮು. ಮೋಹನ ರೂಮಿಗೆ ಹೋದವನೇ ಪವಡಿಸಿಬಿಟ್ಟ. ನನಗೋ ನಿದ್ದೆ ಬಾರದು. ಕೋಗಿಲೆಯ ಕೂಗು ಕೇಳಿಬರುತ್ತಿತ್ತು. "ಮೋಹನ, ಕೋಗಿಲೆ ಕೂಗ್ತಿದೆಯಲ್ಲೋ" ಅಂದೆ. "ಸುಮ್ನೆ ಮಲ್ಕೊಳ್ರಣ್ಣ. ನಿಮಗೆ ಯಾವಾಗ್ಲೂ ಅದೇ ಧ್ಯಾನ" ಅಂದ. ಎದ್ದು ರೂಮಿನ ಹೊರಗೆ ಬಂದರೆ ಮುಂದೆಯೇ ಇದ್ದ ಗಸಗಸೆ ಮರದಲ್ಲಿ ಗಂಡು ಕೋಗಿಲೆ ಕುಳಿತಿತ್ತು. "ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತೂ..." ಎಂಬ ಉಪಾಸನೆ ಚಿತ್ರದ ಗೀತೆ ನೆನಪಾಯ್ತು.
ಫೋಟೋ ತೆಗೆಯುತ್ತಿರುವಾಗ ಅಲ್ಲಿಗೆ ಗಸಗಸೆ ಗಿಡದ ಪುಟ್ಟಪುಟ್ಟ ಹೂಗಳ ಮಕರಂದ ಹೀರಲು ಮತ್ತು ಹಣ್ಣು ತಿನ್ನಲು ಸಣ್ಣ ಗಾತ್ರದ ಹೂಕುಟುಕ (ಫ್ಲವರ್ ಪೆಕ್ಕರ್) ಹಕ್ಕಿ ಬಂತು. ತುಂಬಾ ಚುರುಕಾಗಿ, ಚಟುವಟಿಕೆಯಿಂದಿರುವ ಈ ಹಕ್ಕಿ ಎಷ್ಟೊಂದು ವೇಗವಾಗಿ ಹಾರಾಡುತ್ತಿತ್ತೆಂದರೆ ನಾನು ಫೋಟೋ ತೆಗೆಯಲು ತುಂಬಾ ಕಷ್ಟಪಡಬೇಕಾಯಿತು.
ಸುಂದರವಾದ ದ್ವೀಪ ದುಬಾರೆ. ಇಲ್ಲಿ ಕಾವೇರಿ ಕವಲೊಡೆದು ಹರಿಯುತ್ತದೆ. ಆನೆಗಳು ಇಲ್ಲಿಯ ಮುಖ್ಯ ಆಕರ್ಷಣೆ. ಮಡಿಕೇರಿಯಿಂದ ಕೇವಲ ೩೨ ಕಿಮೀ ದೂರದಲ್ಲಿದೆ. ದುಬಾರೆಯಲ್ಲಿ ಆನೆ ಲದ್ದಿ ಹಾಕಿ ನಮ್ಮನ್ನು ಸ್ವಾಗತಿಸಿತು!
ಆನೆಗಳ ಸ್ನಾನ, ಊಟ ಮತ್ತು ಆಟಗಳನ್ನು ಹತ್ತಿರದಲ್ಲೇ ನೋಡಿ ಸವಿಯುವ ಭಾಗ್ಯ ನಮ್ಮದಾಯ್ತು.
ಮಡಿಕೇರಿಯಿಂದ ೮ ಕಿಮೀ ದೂರದಲ್ಲಿ ಕಾಫಿ, ಏಲಕ್ಕಿ ತೋಟಗಳ ನಡುವೆ ಬಂಡೆಗಳ ಮೇಲಿಂದ ಅಬ್ಬಿ ಜಲಪಾತ ಧುಮ್ಮಿಕ್ಕುತ್ತದೆ. ಸುಮಾರು ೮೦ ಅಡಿ ಎತ್ತರದಿಂದ ಹಾಲಿನ ಹೊಳೆಯಂತೆ ಬಿಳಿ ನೊರೆಯಾಗಿ ಸುರಿಯುವ ಅಬ್ಬಿ ಜಲಪಾತ ಕಣ್ಮನ ತುಂಬುತ್ತದೆ. ಕೊಡವ ಭಾಷೆಯಲ್ಲಿ "ಅಬ್ಬಿ" ಎಂದರೆ ಜಲಪಾತವೆಂದು ಅರ್ಥ.
ಕ್ರಿ.ಶ.೧೮೨೦ ರಲ್ಲಿ ಕೊಡಗನ್ನು ಆಳುತ್ತಿದ್ದ ಅರಸ ಲಿಂಗರಾಜೇಂದ್ರ ಕಟ್ಟಿಸಿದ ಓಂಕಾರೇಶ್ವರ ದೇವಾಲಯ ಇಸ್ಲಾಂ ಮತ್ತು ರೋಮನ್ ವಾಸ್ತುಶಿಲ್ಪಗಳ ಪ್ರಭಾವವಿರುವ ಏಕೈಕ ಹಿಂದು ದೇವಾಲಯ.
ಕಾವೇರಿ ನಿಸರ್ಗಧಾಮ - ಕುಶಾಲನಗರದಿಂದ ೨ ಕಿಮೀ ದೂರದಲ್ಲಿದೆ. ಕಾವೇರಿ ನದಿಯಿಂದಾವೃತವಾದ ಈ ದ್ವೀಪದ ವಿಸ್ತೀರ್ಣ ೬೫ ಎಕರೆ. ಈ ದ್ವೀಪಕ್ಕೆ ಹೋಗುವುದು ಕಬ್ಬಿಣದ ತೂಗುಸೇತುವೆಯ ಮೇಲೆ. ತೂಗುಸೇತುವೆ ತೂಗುಯ್ಯಾಲೆಯ ಅನುಭವ ನೀಡುತ್ತದೆ.
ಕಾವೇರಿ ದಡದಲ್ಲಿ ಸಾಗಿ ನೀರಾಟವಾಡಬಹುದು. ಬಂಡೆಗಳ ಮೇಲೆ ಕುಳಿತು ನೀರಿನ ಕಾರಂಜಿಯಾಗಬಹುದು!
ಗೋಲ್ಡನ್ ಟೆಂಪಲ್ ಎಂದೇ ಪ್ರಸಿದ್ಧಿ ಪಡೆದಿರುವ ಬೈಲುಕುಪ್ಪೆಯ "ಪದ್ಮಸಾಂಭವ ಬೌದ್ಧ ವಿಹಾರ ಕೇಂದ್ರ" ಕ್ಕೆ ಭೇಟಿಕೊಟ್ಟೆವು. ಟಿಬೆಟಿಯನ್ ಶಿಲ್ಪಿಗಳ ಮೂರು ವರ್ಷಗಳ ಪರಿಶ್ರಮದಿಂದ ೫.೫ ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಸೆಪ್ಟೆಂಬರ್ ೨೪,೧೯೯೯ ರಂದು ಟಿಬೆಟಿಯನ್ನರ ಧಾರ್ಮಿಕ ನಾಯಕ ದಲಾಯಿಲಾಮರಿಂದ ಇದು ಉದ್ಘಾಟನೆಗೊಂಡಿತು. ಸ್ವರ್ಣಲೇಪಿತ ಕಂಚಿನ ಪ್ರತಿಮೆಯಾದ ಬುದ್ಧ ಶಾಕ್ತಮುನಿಯು ನಡುಭಾಗದಲ್ಲಿದ್ದರೆ, ಬಲಬದಿ ಪದ್ಮಶಾಂಭವ್ ಎಂಬ ಏಳನೇ ಶತಮಾನದಲ್ಲಿ ನಳಂದ ವಿಶ್ವವಿದ್ಯಾನಿಲಯದ ಖ್ಯಾತ ಪಂಡಿತರಾಗಿದ್ದವರ ಪುತ್ಥಳಿಯಿದೆ. ಮತ್ತೊರ್ವ ಬುದ್ಧ ಅಮಿತಾಯುಸ್ ರ ಪ್ರತಿಮೆ ಎಡಭಾಗದಲ್ಲಿದೆ. ಈ ಎಲ್ಲ ಪ್ರತಿಮೆಗಳ ಎತ್ತರ ೨೦ ಮೀಟರ್. ಚಿನ್ನದಿಂದ ಲೇಪಿತಗೊಂಡು ಫಳಫಳನೆ ಹೊಳೆಯುವ ಬೃಹತ್ ತ್ರಿಮೂರ್ತಿಗಳನ್ನು ನೋಡುವುದೇ ಒಂದು ಅನನ್ಯ ಅನುಭವ.
ಲಾಮಾಗಳಲ್ಲಿ ಎಲ್ಲರೂ ಕಡುಕೆಂಪು ಬಣ್ಣದ ವಸ್ತ್ರವನ್ನೇ ಧರಿಸುತ್ತಾರೆ. ವೇಸ್ಟ್ ಕೋಟಿನಂತಹ ಒಂದು ಮೇಲಂಗಿ ಹಾಗೂ ಲಂಗದಂತಹ ಒಂದು ನಿಲುವಂಗಿಯೇ ಇವರ ಮುಖ್ಯ ವಸ್ತ್ರಗಳಾಗಿದ್ದು, ಎಲ್ಲಾ ಕಡುಕೆಂಪು ಬಣ್ಣದಿಂದ ಕೂಡಿರುತ್ತದೆ. ಕೆಂಪು ಬಣ್ಣದ ಈ ವಸ್ತ್ರಕ್ಕೆ ಇವರ ಭಾಷೆಯಲ್ಲಿ "ದಚ್ಚಿ" ಎಂದು ಕರೆಯುತ್ತಾರೆ. ಈ ಕಡುಕೆಂಪು ಬಣ್ಣ ತಮ್ಮ ಸನ್ಯಾಸತ್ವದ ಸಂಕೇತ ಎಂದು ಇವರು ಹೇಳುತ್ತಾರೆ.
ತಮ್ಮ ಬಳಿ ಜಪಮಾಲೆಯೊಂದನ್ನು ಇಟ್ಟುಕೊಂಡು ಲಾಮಾಗಳು ಯಾವಾಗಲೂ ಜಪ ಮಾಡುತ್ತಿರುತ್ತಾರೆ. ಚಕ್ರ ತಿರುಗಿಸುವುದೂ ಕೂಡ ಇವರ ಪ್ರಾರ್ಥನೆಯ ಒಂದು ಅಂಗ. ಈ ಚಕ್ರಗಳು ನಾನಾ ಆಕಾರಗಳಲ್ಲಿ ಕಂಡುಬರುತ್ತವೆ.

11 comments:

Ittigecement said...

ಮಲ್ಲಿಕಾರ್ಜುನ್...

ಎಷ್ಟು ಚಂದದ ಫೋಟೊ ..?

ಆ ಹಕ್ಕಿ ಫೋಟೊ ತುಂಬಾ ಮುದ್ದಾಗಿದೆ..

ಹಿಡಿದು ಕೊಂಡು ಬಿಡೋಣ ಆನಿಸುತ್ತದೆ..

ಎಲ್ಲ ಫೋಟೊಗಳು ಸೂಪರ್..!

ವಾವ್...!

ನಾನೂ ನಿಮ್ಮ ಸಂಗಡ ಬರಬೇಕಿತ್ತು ಅನ್ನಿಸಿ ಬಿಡ್ತು...!

ಲೇಖನವೂ ಚೆನ್ನಾಗಿದೆ..

ಒಟ್ಟಿನಲ್ಲಿ ಹೊಟ್ಟೆಕಿಚ್ಚು ತರಿಸಿ ಬಿಟ್ರಿ..

ಅಭಿನಂದನೆಗಳು...!

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್, ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.

shivu.k said...

ಮಲ್ಲಿಕಾರ್ಜುನ್,

ಫೋಟೊಗಳು ತುಂಬಾ ಚೆನ್ನಾಗಿವೆ...ಮಾಹಿತಿಗಳಲ್ಲಿ ಸ್ವಲ್ಪ ಹಾಸ್ಯದ ಮಸಾಲೆ ಇದೆ....[ಸಪ್ಪೆಯಾಗಿದ್ದರೆ ಏನು ಚೆಂದ ಅಲ್ವಾ?]

ಔಷದಿ... ಮಾತ್ರೆ... ಟಾನಿಕ್ಕ್.... ಅಂತ ಮುಳುಗಿರುವವರಿಗೆ ಇಂಥದೊಂದು ಸ್ಟ್ರಾಂಗ್ ಡೋಸ್ ಬೇಕಿತ್ತು..ಸಿಕ್ಕಿದೆ....ಆಗಾಗ ಸಿಗುತ್ತಿರಲಿ...

ಮಲ್ಲಿಕಾರ್ಜುನ.ಡಿ.ಜಿ. said...

ಶಿವು, ಎಲ್ಲರಿಗೂ ನಾನೇ ಗೈಡ್ ಆಗಿದ್ದೆ. ನಮ್ಮಲ್ಲಿ ವಯಸ್ಸಾದವರು, ಯುವಕರು ಇಬ್ಬರನ್ನೂ ಸಮಾಧಾನಿಸಿಕೊಂಡು ಹೇಗೋ ಫೋಟೋಗ್ರಫಿನೂ ಮಾಡಿದ್ದಾಯ್ತು!

Guruprasad said...

ಹಾಯ್ ಮಲ್ಲಿಕಾರ್ಜುನ್ ..
ತುಂಬ ಚೆನ್ನಾಗಿ ಇದೆ ಫೋಟೋ ಗಳು,, ಕಾವೇರಿ ನದಿಯಲ್ಲಿ ನೀರಿನ ಕಾರಂಜಿ ಫೋಟೋ ತುಂಬ ಚೆನ್ನಾಗಿ ಇದೆ.. ನಾನು recent ಆಗಿ ನಮ್ಮ ಕಂಪನಿ ಸ್ನೇಹಿತರ ಜೊತೆ ಮಡಿಕೇರಿ, ದುಭಾರೆ ಅರನ್ಯದಮ ಮತ್ತೆ ಗೋಲ್ಡನ್ ಟೆಂಪೇಲೆ ಗೆ ಹೋಗಿ ಬಂದಿದ್ದೆ,, ನಿಜಕ್ಕೂ ಪ್ರವಾಸ ಅನ್ನೋದು ಒಂದು ಔಷಧ ಇದ್ದಹಾಗೆ,, ಅದರಲ್ಲೂ ನಮ್ಮಂಥ ಬೆಂಗಳೂರಿನಲ್ಲಿ ಇ ಟ್ರಾಫಿಕ್ ಮಧ್ಯ ಇರುವವರಿಗೆ ಪ್ರವಾಸ ಒಂದು ಔಷದನೆ .....
ಆರಾಮವಾಗಿ ಪ್ರಕೃತಿಯ ಮಡಿಲಲ್ಲಿ ಒಂದೆರಡು ದಿನ ಇದ್ದು ಖುಷಿ ಪಟ್ಕೊಂದ್ಬರಬಹುದು...
ನನ್ನ ಬ್ಲಾಗಿಗೂ ಬಂದು ಹೋಗಿ,, ಅದರಲ್ಲೂ ಮಡಿಕೇರಿಗೆ ಹೋಗಿದ್ದಗಲಿನ ಫೋಟೋಸ್ ಅಪ್ಲೋಡ್ ಮಾಡಿದ್ದೇನೆ...

ಗುರು

ಮಲ್ಲಿಕಾರ್ಜುನ.ಡಿ.ಜಿ. said...

ಗುರು,
ನೀರಿನ ಕಾರಂಜಿ ಫೋಟೋ ನೋಡಿ ನನ್ನ ಸ್ನೇಹಿತನೊಬ್ಬ ಗಸೆಗೆ ಕೊಡುವ ಮಾತ್ರೆ ಡೆರಿಫಿಲಿನ್ ಜಾಹಿರಾತಿಗೆ ಬಳಸುವಂತಿದೆ ಎಂದು ತಮಾಷೆ ಮಾಡಿದ.
ನಿಮ್ಮ ಬ್ಲಾಗ್ ಗೆ ಹೋಗಿದ್ದೆ. ಒಳ್ಳೊಳ್ಳೆ ಫೋಟೋಗಳನ್ನು ಹುಡುಕಿ ತಂದಿದ್ದೀರಿ. ತುಂಬಾ ಚೆನ್ನಾಗಿದೆ.

armanikanth said...

Akkareya mallikarjuna,
nimma photogala sogase sogasu.adanna padagalalli vivarisalu nanage aagtaa illa.haagaagi wonderful...anta maatra heli summanaagtene...
Manikanth.

PaLa said...

ಮಲ್ಲಿಕಾರ್ಜುನ್,
ಪ್ರವಾಸ ಕಥನದ ಉಪಯುಕ್ತ ಮಾಹಿತಿಯೊಂದಿಗೆ ಉತ್ತಮ ಚಿತ್ರದ ರಸದೌತಣ ಒದಗಿಸಿದ್ದಕ್ಕೆ ವಂದನೆಗಳು. ನೀವು ಕಷ್ಟ ಪಟ್ಟು ಹಿಡಿದ ಹೂಕುಟುಕದಂತಹ ಅಪರೂಪದ ಹಕ್ಕಿಯನ್ನು ಸುಂದರವಾಗಿ ಚಿತ್ರಿಸಿ, ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದ.
--
ಪಾಲ

ಮಲ್ಲಿಕಾರ್ಜುನ.ಡಿ.ಜಿ. said...

* ಮಣಿಕಾಂತ್ ಅವರೆ, ಧನ್ಯವಾದಗಳು
* ಪಾಲಚಂದ್ರ ಅವರೆ, ಹಕ್ಕಿ ಚಿತ್ರವನ್ನು ಪ್ರಕಾಶ್ ಹೆಗಡೆ ಕೂಡ ಮೆಚ್ಚಿದರು. ಥ್ಯಾಂಕ್ಸ್.

chetana said...

ನಿಮ್ಮ (ಕ್ಯಾಮೆರಾ) ಕಣ್ಣಿಗೆ ಸಲಾಮ್.
ಬೆರಗಾಗಿ ಹೋದೆ. ಒತ್ತಡದ ನಡುವೆ ಇದನ್ನು ನೋಡುತ್ತ ಕೂರುವುದೇ ಒಂದು ಅದ್ಭುತ ರಿಲ್ಯಾಕ್ಸೇಷನ್.
ಥ್ಯಾಂಕ್ ಯೂ...
- ಚೇತನಾ ತೀರ್ಥಹಳ್ಳಿ

ಮಲ್ಲಿಕಾರ್ಜುನ.ಡಿ.ಜಿ. said...

ಚೇತನ ಅವರೆ, ನೀವು ನನ್ನ ಬ್ಲಾಗ್ ನೋಡಿದ್ದಕ್ಕೆ ಖುಷಿಯಾಯ್ತು. ಧನ್ಯವಾದಗಳು