Sunday, September 28, 2008

ಗೀಜಗ

"ಅಣ್ಣ ನಮ್ ಹಳ್ಯಾಗೆ ಬಾವಿ ಒಳ್ಗೆ ಹಕ್ಕಿ ಗೂಡು ಮಾಡೈತೆ ಫೋಟೋ ತೆಗೀತೀಯಾ?" ಎಂದು ರಮೇಶ ಕರೆದ. ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಅವನ ಹಳ್ಳಿ. ಅಲ್ಲಿ ಹೋಗಿ ನೋಡಿದರೆ ಹಳೆ ಬಾವಿಯ ಸುತ್ತ ಜಿಗ್ಗು, ಮುಳ್ಳುಕಂಟಿಗಳು, ಲಾಂಟಾನಾ ಗಿಡಗಳು ತುಂಬಿಕೊಂಡು ಬಾವಿಯೇ ಕಾಣದಂತಿದೆ. ಆ ಬಾವಿಯ ಪಕ್ಕ ಬೆಳೆದ ಗಿಡಕ್ಕೆ ಗೀಜಗ ಹಕ್ಕಿಗಳು ಗೂಡುಗಳನ್ನು ನೇಯ್ದಿವೆ. ಅವು ಬಾವಿಯೊಳಕ್ಕೆ ನೇತಾಡುತ್ತಿದ್ದವು. ನಾವಿಬ್ಬರೂ ಸೇರಿ ಸ್ವಲ್ಪ ಲಾಂಟಾನಾ ಗಿಡವನ್ನು ಕತ್ತರಿಸಿ ಜಾಗ ಮಾಡಿ ನನ್ನ ಮರೆಯನ್ನಿಟ್ಟು, ಬಟ್ಟೆ ಹೊದ್ದಿಸಿದೆವು. ಮರೆಯೊಳಗೆ ಕೂತು ಅವನನ್ನು ಎರಡು ಮೂರು ಗಂಟೆ ಬಿಟ್ಟು ಬರಲು ಹೇಳಿಕಳಿಸಿದೆ. ಕ್ಯಾಮೆರಾವನ್ನು ಬಟ್ಟೆಯಲ್ಲಿದ್ದ ರಂಧ್ರದಲ್ಲಿ ತೂರಿಸಿ ನೋಡುತ್ತಾ ಕುಳಿತೆ.
ಗೀಜಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ, ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಅಕಸ್ಮಾತ್ ಇಷ್ಟವಾಗಲಿಲ್ಲವೋ ಗಂಡು ಮತ್ತೊಂದು ಗೂಡು ನೇಯಲು ಶುರುಮಾಡುತ್ತದೆ. ನಮಗೆ ಹತ್ತು ಬೆರಳುಗಳಿದ್ದರೂ ನೇಯಲು ಅಸಾಧ್ಯವಾದಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುವುದನ್ನು ನೋಡಿದರೆ ಇದರ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಅದಕ್ಕೇ ಇದನ್ನು ನೇಕಾರ ಹಕ್ಕಿ ಎಂದೂ ಕರೆಯುತ್ತಾರೆ.
ಹಕ್ಕಿಯು ನಾರನ್ನು ತಂದು ತಂದು ತನ್ನ ಕೊಕ್ಕಿನಿಂದ ಸುಲಲಿತವಾಗಿ ಗೂಡು ಕಟ್ಟುವುದನ್ನು ನೋಡುತ್ತಾ ಕ್ಲಿಕ್ಕಿಸತೊಡಗಿದೆ. ನನ್ನ ಬಳಿ ಇದ್ದ ರೋಲ್ ಪೂರಾ ಖಾಲಿಯಾಯ್ತು. ಇನ್ನು ಅಲ್ಲಿದ್ದು ಅವಕ್ಕೆ ತೊಂದರೆ ಕೊಡುವುದು ಬೇಡವೆಂದು ನಿಧಾನವಾಗಿ ಹೊರಬಂದೆ. ಮೂರು ಗಂಟೆ ಕದಲದೇ ಕುಳಿತಿದ್ದರಿಂದಾಗಿ ಕಾಲು ಜೋಮು ಹಿಡಿದಿತ್ತು. ನಾನು ಹೊರಬಂದದ್ದು ನೋಡಿ ದೂರದಲ್ಲಿದ್ದ ರಮೇಶ ಓಡಿ ಬಂದ. ಆ ಹಳೇ ಬಾವಿಯೊಳಗೆ ಮೆಟ್ಟಿಲುಗಳಿದ್ದವು. ಬಗ್ಗಿ ನೋಡಿದೆವು. ದೊಡ್ಡ ನಾಗರಹಾವೊಂದು ನಿಧಾನವಾಗಿ ಒಳಗಿಳಿಯುತ್ತಿತ್ತು. "ಅಣ್ಣ ಅದು ನಿಮ್ಮ ಪಕ್ಕದಿಂದಲೇ ಹೋಗಿರುತ್ತೆ" ಎಂದ ರಮೇಶ. ನನ್ನ ಕೈಕಾಲು ತಣ್ಣಗಾಗತೊಡಗಿತು!