Tuesday, April 23, 2013

ಗೂಡು ನೋಡ ಬಾರೆ ರಾಜಕುಮಾರಿ...

 ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನ ಕೆರೆಯಂಚಿನಲ್ಲಿ ಗೀಜಗನ ಗೂಡನ್ನು ತನ್ನ ಗೂಡನ್ನಾಗಿಸಿಕೊಳ್ಳಲು ಹೊರಟ ಮುನಿಯಾ ಹಕ್ಕಿ.

 ಕೆರೆಯಲ್ಲಿ ಬಿದ್ದ ಕಲ್ಲು ಬಹುದೂರದವರೆಗೂ ಅಲೆಗಳನ್ನೆಬ್ಬಿಸುವಂತೆ, ಮಾನವನ ಆವಾಸಸ್ಥಾನ ಹಿಗ್ಗಿದಂತೆಲ್ಲ ಪರಿಸರದಲ್ಲಿ ಹಲವಾರು ಪಲ್ಲಟಗಳು, ಬದಲಾವಣೆಗಳು ಸಂಭವಿಸುತ್ತಿರುತ್ತವೆ. ಕೆಲವೆಡೆ ಜೀವ ವೈವಿಧ್ಯ ಮತ್ತು ಸಸ್ಯಗಳ ವಿನಾಶ ಸಂಭವಿಸಿದರೆ, ಡಾರ್ವಿನ್‌ನ ವಿಕಾಸ ವಾದದಂತೆ ಬದುಕಲು ನಾನಾ ಹೋರಾಟಗಳು ಮತ್ತು ತಮ್ಮ ಸಂತತಿಯ ಮುಂದುವರಿಕೆಗಾಗಿ ಹೊಸ ತಂತ್ರಗಳನ್ನು ಜೀವಿಗಳು ರೂಪಿಸುತ್ತಿರುತ್ತವೆ.
 ತನ್ನ ಸಂತತಿಯನ್ನು ಮುಂದುವರೆಸಲು ಗುಬ್ಬಿಗಿಂತಲೂ ಪುಟ್ಟದಾದ ಮುನಿಯಾ ಹಕ್ಕಿಗಳು ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರಿನಲ್ಲಿ ಒಂದೆಡೆ ಗೀಜುಗ ಹಕ್ಕಿಗಳ ಗೂಡನ್ನೇ ಆಕ್ರಮಿಸಿಕೊಂಡಿದ್ದರೆ, ಇನ್ನೊಂದೆಡೆ ಟ್ರಾನ್ಸ್‌ಫಾರ್ಮರನ್ನೇ ತನ್ನ ಮನೆಯನ್ನಾಗಿಸಿಕೊಂಡಿದೆ.
 ಮೊಟ್ಟೆಯಿಡುವ ಮುಂಚೆ ಗೂಡನ್ನು ಸಿದ್ಧಪಡಿಸಲು ಒಣಹುಲ್ಲನ್ನು ತೆಗೆದುಕೋಂಡು ಹೋಗುತ್ತಿರುವ ಮುನಿಯಾ ಹಕ್ಕಿ.

 ಸಾಮಾನ್ಯವಾಗಿ ಗೀಜುಗ ಹಕ್ಕಿಗಳ ವೈಶಿಷ್ಟ್ಯವೇನೆಂದರೆ, ಗಂಡು ಹಕ್ಕಿ ಗೂಡನ್ನು ಅರ್ಧ ನೇಯ್ದು ಹೆಣ್ಣಿಗೆ ತೋರಿಸುತ್ತದೆ. ಅದು ಹೆಣ್ಣಿಗೆ ಇಷ್ಟವಾದರೆ ಅವೆರಡೂ ಜೋಡಿಯಾಗುತ್ತವೆ, ಗೂಡನ್ನು ಪೂರ್ತಿ ಮಾಡಿ ಸಂಸಾರ ಸಾಗಿಸುತ್ತವೆ. ಅಕಸ್ಮಾತ್ ಇಷ್ಟವಾಗಲಿಲ್ಲವೋ ಗಂಡು ಮತ್ತೊಂದು ಗೂಡು ನೇಯಲು ಶುರುಮಾಡುತ್ತದೆ. ನಮಗೆ ಹತ್ತು ಬೆರಳುಗಳಿದ್ದರೂ ನೇಯಲು ಅಸಾಧ್ಯವಾದಂತಹ ಗೂಡನ್ನು ಪುಟ್ಟ ಇಕ್ಕಳದಂತಹ ಕೊಕ್ಕಿನಿಂದಲೇ ಈ ಪುಟ್ಟ ಹಕ್ಕಿ ನೇಯುವುದನ್ನು ನೋಡಿದರೆ ಇದರ ಸಾಮರ್ಥ್ಯಕ್ಕೆ ತಲೆದೂಗಲೇಬೇಕು. ಅದಕ್ಕೇ ಇದನ್ನು ನೇಕಾರ ಹಕ್ಕಿ ಎಂದೂ ಕರೆಯುತ್ತಾರೆ.

 ಕುಶಲೋಪರಿಯಲ್ಲಿ ತೊಡಗಿರುವ ಮುನಿಯಾ ಜೋಡಿ ಹಕ್ಕಿಗಳು.

 ತಾಲ್ಲೂಕಿನ ಕೊತ್ತನೂರಿನಲ್ಲಿ ಕೆರೆಯಂಚಿನಲ್ಲಿ ಜಾಲಿ ಮರದಲ್ಲಿ ಸುಂದರವಾಗಿ ನೇಯ್ದ ಗೀಜಗನ ಗೂಡನ್ನು ವೈಟ್ ಥ್ರೋಟೆಡ್ ಮುನಿಯಾ, ಇಂಡಿಯನ್ ಸಿಲ್ವರ್ ಬಿಲ್, ಬಿಳಿ ಕತ್ತಿನ ರಾಟವಾಳ ಎಂದೆಲ್ಲಾ ಕರೆಯುವ ಗುಬ್ಬಿಗಿಂತಲೂ ಚಿಕ್ಕ ಆಕಾರದ ಹಕ್ಕಿಗಳು ತಮ್ಮ ಸಂತತಿಯ ಮುಂದುವರಿಕೆಗಾಗಿ ಮನೆಯನ್ನಾಗಿಸಿಕೊಂಡಿವೆ. ಇನ್ನೊಂದೆಡೆ ವಿದ್ಯುತ್ ಟ್ರಾನ್ಸ್‌ಫಾರ್ಮರಿನೊಳಗೆ ಸ್ಪಾಟೆಡ್ ಮುನಿಯಾ ಅಥವಾ ಚುಕ್ಕೆ ರಾಟವಾಳ ಹಕ್ಕಿಯು ತನ್ನ ಸಂಸಾರವನ್ನು ನಡೆಸಿದೆ.

ವಿದ್ಯುತ್ ಟ್ರಾನ್ಸ್‌ಫಾರ್ಮರನ್ನೇ ತನ್ನ ಮನೆಯನ್ನಾಗಿಸಿಕೊಂಡಿರುವ ಚುಕ್ಕೆ ರಾಟವಾಳ ಹಕ್ಕಿ.

 ’ಹಾವು, ಹದ್ದು, ಬೆಕ್ಕು ಮುಂತಾದವುಗಳಿಂದ ತನ್ನ ಮೊಟ್ಟೆ ಮತ್ತು ಮರಿಗಳನ್ನು ನಾಶಪಡಿಸಬಹುದೆಂದು ಅವುಗಳಿಗೆ ಸಿಗದಂತೆ ಕೆರೆಯಂಚಿನ ಜಾಲಿ ರೆಂಬೆಯ ತುದಿಯಲ್ಲಿ ಗೀಜುಗ ಹಕ್ಕಿಗಳು ತಮ್ಮ ಗೂಡು ನೇಯುತ್ತವೆ. ಅವು ಉಪಯೋಗಿಸಿ ಬಿಟ್ಟ ಗೂಡನ್ನು ಮುನಿಯಾ ತನ್ನ ಮನೆಯನ್ನಾಗಿಸಿಕೊಂಡಿದೆ. ಇನ್ನೊಂದೆಡೆ ವಿದ್ಯುತ್ ಪ್ರವಹಿಸುವ ತಂತಿಗಳ ಕೆಳಗೆ ತನಗೆ ತೊಂದರೆಯಾಗುವುದಿಲ್ಲವೆಂದು ಮನಗಂಡು ಇನ್ನೊಂದು ಮುನಿಯಾ ಹಕ್ಕಿ ತನ್ನ ತಾವನ್ನು ರಚಿಸಿಕೊಂಡಿದೆ. ಇತ್ತ ಮನುಷ್ಯರಿಂದ ಅತ್ತ ತನ್ನನ್ನು ತಿಂದು ಬದುಕುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳುತ್ತಾ ತನ್ನ ಸಂತತಿಯನ್ನೂ ಮುಂದುವರಿಸುವಲ್ಲಿ ಸಾಹಸ ಮೆರೆಯುವ ಈ ಪುಟ್ಟ ಹಕ್ಕಿಗಳಿಂದ ನಾವು ಬಹಳಷ್ಟು ಪಾಠ ಕಲಿಯಬೇಕಿದೆ’ ಎನ್ನುತ್ತಾರೆ ಕೊತ್ತನೂರು ನಾಗರಾಜ್.

1 comment:

ಮಾತಿನಮಂಚ said...

ನಾನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಲೆಬೆಟ್ಟು ಎಂಬ ಪುಟ್ಟ ಹಳ್ಳಿಯ ಪುಟ್ಟ ವ್ಯಕ್ತಿ. ನಮ್ಮ ಊರು ಸುತ್ತಲೂ ಕಾಡು ಪ್ರದೇಶವನ್ನು ಹೊಂದಿದ್ದು ಅನೇಕ ಪ್ರಾಣಿಗಳು, ಪಕ್ಷಿಗಳು, ಹುಳು ಹುಪ್ಪಟೆಗಳಿಗೇನು ಕೊರತೆಯಿಲ್ಲ. ಹಕ್ಕಿಗಳ ವಿಷಯವಾಗಿ ನಾನು ಹಿಂದಿನಿಂದಲೂ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದೇನೆ. ಅವುಗಳ ಗೂಡು ಹುಡುಕುವುದು, ಅವುಗಳ ಜೀವನ ಶೈಲಿ ಬಗ್ಗೆ ತಿಳಿದುಕೊಳ್ಳುವುದು ಇತ್ಯಾದಿ ಇತ್ಯಾದಿ...ಆದರೆ ಅವುಗಳ ಬಗ್ಗೆ ಅಧ್ಯಯನ ನಡೆಸಬೇಕೆಂದು ಅನ್ನಿಸಿರಲಿಲ್ಲ, ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನವೂ ಸಿಕ್ಕಿಲ್ಲ. ಅದಲ್ಲದೇ ನನಗೆ ಫೋಟೋಗ್ರಫಿ ಬಗ್ಗೆಯೂ ಅತೀವ ಆಸಕ್ತಿ ಇದೆ ಆದರೆ ಆಗ ಕೆಮರಾ ಇದ್ದಿರಲಿಲ್ಲ....ಹಾಗಾಗಿ ಆ ಹವ್ಯಾಸವೇ ನಿಂತುಬಿಟ್ಟಿತ್ತು. ಆದರೆ ಇತ್ತೀಚೆಗೆ ನನಗೆ ಉದ್ಯೋಗ ದೊರೆತ ಮೇಲೆ ಅಕಸ್ಮಾತ್ಆಗಿ ನಿಮ್ಮ ಬ್ಲಾಗ್ ಪ್ರವೇಶಿಸಿದೆ ನಿಮ್ಮ ಅತ್ಯುತ್ತಮ ಫೋಟೋಗ್ರಫಿ ಹಾಗೂ ಆ ಕುರಿತ ಚೊಕ್ಕ ವಿವರಣೆಗಳನ್ನು ನೋಡಿ ನಿಂತು ಹೋಗಿದ್ದ ನನ್ನ ಹವ್ಯಾಸಕ್ಕೆ ಮರುಜೀವ ನೀಡಬೇಕೆಂದು ನಿರ್ಧರಿಸಿದೆ. ಅಂತೆಯೇ ನನ್ನ ಹವ್ಯಾಸವನ್ನು ಮುಂದುವರೆಸಿದ್ದೇನೆ. ಇದಕ್ಕೆಲ್ಲಾ ನೀವೇ ಸ್ಪೂರ್ತಿ, ನಿಮ್ಮ ಫೋಟೋಗ್ರಫಿ ಮತ್ತು ಅದಕ್ಕೆ ನೀಡಿದ ವಿವರಣೆಗಳೇ ಸ್ಪೂರ್ತಿ...ನಾನು ನಿಮಗೆ ಸದಾ ಕೃತಜ್ಞ. ನಿಮ್ಮನ್ನೊಮ್ಮೆ ಭೇಟಿಯಾಗುವ ಅವಕಾಶ ಸಿಗಬಹುದೇ?


ಇಂತಿ, ಕೆ.ನಾ.ಗೋರೆ