’ಲೌಕಿಕ ಲಾಭಗಳನ್ನು ಮಾತ್ರ ಎಣಿಸುವ ಇಂದಿನ ಜಗತ್ತಿನಲ್ಲಿ, ಗ್ರಾಮೀಣ ಮಕ್ಕಳು ಓದುವ ಸರ್ಕಾರಿ ಶಾಲೆಗೆ ಬೆನ್ನೆಲುಬಾಗಿ ನಿಂತು, ಹಳ್ಳಿಯ ಮಕ್ಕಳಲ್ಲಿ ಶುದ್ಧ ಸಾಹಿತ್ಯ ಪ್ರೇಮ ಬೆಳೆಯಲು ಸಹಕರಿಸುತ್ತಿರುವ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸ್ನೇಹ ಯುವಕರ ಸಂಘಕ್ಕೆ ಈ ಪುಸ್ತಕ ಅರ್ಪಣೆ’ ಎಂದು ಮೊದಲ ಪುಟದಲ್ಲೇ ಪುಸ್ತಕಾರ್ಪಣೆ ನುಡಿಯಲ್ಲಿ ಈ ಪುಸ್ತಕದ ರೂಪುಗೊಳ್ಳುವಿಕೆಯ ಬಗ್ಗೆ ಸಂಪಾದಕರು ತಿಳಿಸಿದ್ದಾರೆ.
ಇದು ಶಾಮಂತಿ-೩ ಪುಸ್ತಕ. ಸತತವಾಗಿ ಮೂರನೇ ವರ್ಷ ಮಕ್ಕಳ ಬರವಣಿಗೆಗಳ ಸಂಗ್ರಹದ ಸಂಕಲನ ರೂಪುಗೊಂಡಿದೆ. ಮಕ್ಕಳ ಸೃಜನಶೀಲತೆ, ಆತ್ಮಸ್ಥೈರ್ಯ ಮತ್ತು ಆಲೋಚನಾಕ್ರಮವನ್ನು ಉದ್ದೀಪನಗೊಳಿಸುವ ಕ್ರಿಯೆಯಲ್ಲಿ ಮಾದರಿ ಹೆಜ್ಜೆಯಾಗಿ ಪಡಿಮೂಡಿದೆ.
ಈ ಶಾಮಂತಿ ಪುಸ್ತಕದಲ್ಲಿ ಜೀವಸಂಸ್ಕೃತಿ, ಸಂಭ್ರಮ, ಆಸುಪಾಸು ಇಡ್ಲೀಪಾಸು, ನಮ್ಮೋರು, ಕಾಣ್ಕೆ, ಜ್ಞಾಪಕಶಾಲೆ ಎಂಬ ವಿಭಾಗಗಳಿವೆ. ತಮ್ಮ ಅರಿವಿಗೆ ಬಂದ ಜೀವಿಗಳ ಬಗ್ಗೆ, ಸಸ್ಯಗಳ ಬಗ್ಗೆ ಮಕ್ಕಳ ರಚನೆಗಳು ಜೀವಸಂಸ್ಕೃತಿಯಲ್ಲಿದ್ದರೆ, ಮಕ್ಕಳ ಕವನಗಳು ಸಂಭ್ರಮ ವಿಭಾಗದಲ್ಲಿದೆ. ತಾವು ನೋಡಿದ ದೇವಸ್ಥಾನ, ಶಾಸನಕಲ್ಲು, ಕಣ ಮುಂತಾದ ವಿವರಗಳ ಬಗೆಗಿನ ಬರಹಗಳು ಆಸುಪಾಸು ಇಡ್ಲೀಪಾಸು ಎಂಬ ಗುಚ್ಛದಲ್ಲಿದ್ದರೆ, ನಮ್ಮೋರು ವಿಭಾಗದಲ್ಲಿ ಮಕ್ಕಳು ತಮ್ಮ ಬಂಧು ಹಾಗೂ ಸ್ನೇಹಿತರ ಬಗ್ಗೆ ಬರೆದ ಬರಹಗಳಿವೆ. ವಿದ್ಯಾರ್ಥಿಗಳು ತಮ್ಮ ಗ್ರಂಥಾಲಯದಲ್ಲಿ ಓದಿದ ಪುಸ್ತಕಗಳು, ಶಾಲೆಯಲ್ಲಿ ತೋರಿಸಿದ ಸಿನೆಮಾ, ಶಿಕ್ಷಕರೊಂದಿಗೆ ನೋಡಿದ ಸರ್ಕಸ್ ಮುಂತಾದವು ಕಾಣ್ಕೆ ವಿಭಾಗದಲ್ಲಿದೆ. ಜ್ಞಾಪಕಚಿತ್ರಶಾಲೆ-೩ ವಿಭಾಗವು ೨೦೧೧-೧೨ರ ಶಾಲಾ ಶೈಕ್ಷಣಿಕ ಚಟುವಟಿಕೆಗಳಾದ ಅಂಚೆ ಚೀಟಿ ಪ್ರದರ್ಶನ, ರಾಜ್ಯೋತ್ಸವ, ಪುಸ್ತಕ ಪ್ರೀತಿ, ಹೊರಸಂಚಾರ, ಬೇಸಿಗೆ ಶಿಬಿರ, ಬಾಲಮೇಳ ಮುಂತಾದವುಗಳ ಬಗ್ಗೆ ಮಕ್ಕಳು ಬರೆದ ಬರಹಗಳನ್ನೊಳಗೊಂಡಿದೆ. ಪ್ರತಿಯೊಂದು ಲೇಖನ ಹಾಗೂ ಕವನದ ಜೊತೆಯಲ್ಲಿ ಮಕ್ಕಳೇ ರಚಿಸಿದ ಹೊಂದಿಕೆಯಾಗುವ ಚಿತ್ರಗಳಿರುವುದು ಈ ಪುಸ್ತಕದ ವಿಶೇಷ.
ಶಾಮಂತಿ ಪುಸ್ತಕವನ್ನು ಜಾನಪದ ತಜ್ಞ ಡಾ.ಎಂ.ಬೈರೇಗೌಡ ಬಿಡುಗಡೆ ಮಾಡಿದರು. ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಪಿ.ಎಸ್.ರವೀಂದ್ರನಾಥ್ ಹಾಜರಿದ್ದರು.
ಮಕ್ಕಳ ಮನಸ್ಸಿನ ಕರುಣೆ, ಅವಗಾಹನೆ, ನಿಷ್ಕಪಟತೆ, ಪರಿಸರ ಕಾಳಜಿ, ತಿಳುವಳಿಕೆ ಓದುಗರಿಗೆ ಬೆರಗನ್ನು ಮೂಡಿಸುತ್ತದೆ. ಮಕ್ಕಳು ಬಳಸಿರುವ ನಮ್ಮ ನೆಲದ ನುಡಿಗಟ್ಟುಗಳಾದ ಜಡ್ಡೆ, ಗಾಬು, ತ್ಯಾವ, ದಿಗಿಲು, ಇನ್ನೊಂದು ಸರ್ತಿ, ಬಿರೀನ, ಭಾದೆ, ಕಾನೆ, ಕಲ್ದೀರಿರು ಮುಂತಾದ ಪದಗಳು ಪ್ರಾದೇಶಿಕ ಪದಕೋಶದ ಸಂಶೋಧಕರಿಗೆ ಸಹಾಯಕವಾಗಲಿದೆ.
’ಶ್ಯಾಮಂತಿ ಯಾವ ಮಹಾಸಾಧನೆಯೂ ಅಲ್ಲ. ಅದರಲ್ಲಿರುವುದು ನಾವು ಮಕ್ಕಳಿಗೆ ಕೊಡದೇ ಕಿತ್ತುಕೊಂಡಿರುವ ಅವರದೇ ಮಾತುಗಳು. ಇದು ಅವರನ್ನೂ ಪರಿಗಣಿಸುವ ಒಂದು ಸಣ್ಣ ರೀತಿಯಷ್ಟೇ. ಜಗತ್ತಿನ ಎಲ್ಲ ಮಕ್ಕಳಿಗೂ ಅವರ ಮಾತುಗಳು ವಾಪಸ್ಸು ಸಿಗಲಿ. ನಾವು ಹೇಳಿದ್ದನ್ನೇ ಕೇಳಿಕೊಂಡು ಬಿದ್ದಿರಬೇಕೆಂಬ ಹುಂಬ ಹಟಗಳನ್ನು ಪಕ್ಕಕ್ಕಿಟ್ಟು, ಕೇಳೋಣ, ಅವರ ಎದೆಯ ಕ್ಷೀಣ ಸ್ವರಗಳಿಗೆ ಅಭಯ ನೀಡೋಣ. ನಾನು ನಿನ್ನ ಭಾವನೆಗಳನ್ನು ಹಂಚಿಕೊಳ್ಳುತ್ತೇನೆ ಎನ್ನೋಣ’ ಎಂಬ ಉದಾತ್ತ ಹಾಗೂ ಮಕ್ಕಳ ಧ್ವನಿಗೆ ಕನ್ನಡಿ ಹಿಡಿಯುವ ಮಾತುಗಳನ್ನು ಪುಸ್ತಕದ ಸಂಪಾದಕ ಹಾಗೂ ಶಿಕ್ಷಕ ಎಸ್.ಕಲಾಧರ್ ಮಾರ್ಮಿಕವಾಗಿ ಹೇಳುತ್ತಾರೆ.
’ಶಾಮಂತಿ ಪುಸ್ತಕದಲ್ಲಿನ ಮಾಹಿತಿಗಳು ಇಡೀ ಬಯಲುಸೀಮೆಯ ಎಲ್ಲ ಮಕ್ಕಳ ಮನದಾಳದ ಮಾತುಗಳಾಗಿವೆ. ಇಂಥ ಅನುಭವಗಳನ್ನು ತಮ್ಮ ಬಾಲ್ಯದಲ್ಲಿ ಗ್ರಾಮೀಣ ಕರ್ನಾಟಕದ ಮಕ್ಕಳೆಲ್ಲ ಅನುಭವಿಸಿರುತ್ತಾರೆ. ಮಕ್ಕಳ ಮಾತುಗಳು ಅಕ್ಷರ ರೂಪ ಪಡೆಯುವ ಅಭಿಯಾನ ಎಲ್ಲಾ ಶಾಲೆಗಳಲ್ಲೂ ನಡೆದರೆ ಇತಿಹಾಸ ರಚನೆಗೆ ಪೂರಕ ಸಾಮಗ್ರಿ ಒದಗಿಸಿದ ಶ್ರೇಯಸ್ಸು ಲಭಿಸುತ್ತದೆ. ಪ್ರಾದೇಶಿಕವಾಗಿ ಪರಂಪರೆಯ ಕೊಂಡಿಗಳು ಬೆಸೆದುಕೊಳ್ಳುತ್ತವೆ. ಇದೊಂದು ಅಪೂರ್ವ ದಾಖಲೆ ಮತ್ತು ದಾಖಲಿತ ಸಂಕಲನವಾಗಿದೆ. ’ಬೀದೀಲಿ ಅವ್ವನನ್ನು ನೋಡಿದ ಮೇಲೆ ಮನೇಲಿ ಮಗಳನ್ನು ನೋಡುವ ಅಗತ್ಯವಿಲ್ಲ’ ಎಂಬ ಗಾದೆ ಮಾತಿನಂತೆ, ಮಕ್ಕಳ ಮನೋಭಿತ್ತಿಯ ಮೇಲೆ ಅರಳಿದ ಕುಸುಮಗಳನ್ನು ಆಯ್ದು ಪೋಣಿಸಿ ತಯಾರಿಸಿದ ಒಂದು ಸುಂದರವಾದ ಬಾಡದ ಹೂಮಾಲೆಯಾದ ಶಾಮಂತಿಯ ಮೂಲಕ ಇಲ್ಲಿನ ಮಕ್ಕಳ ಸಂಸ್ಕಾರವನ್ನು ಅರಿಯಬಹುದಾಗಿದೆ’ ಎಂದು ಪುಸ್ತಕ ಬಿಡುಗಡೆ ಮಾಡಿದ ಜಾನಪದ ತಜ್ಞ ಡಾ.ಎಂ.ಬೈರೇಗೌಡ ತಿಳಿಸಿದರು.
ಶಾಮಂತಿ ಪುಸ್ತಕದ ಸಂಪಾದಕ ಎಸ್.ಕಲಾಧರ್ ದೂರವಾಣಿ ಸಂಖ್ಯೆ: ೯೯೦೦೬೯೫೧೪೨
1 comment:
ಮಕ್ಕಳ ಪ್ರತಿಭೆಯನ್ನು ಅರಳಿಸುವ ಈ ಕಾರ್ಯದ ಕಾರಣಪುರುಷರಿಗೆ ಹಾಗು ಮಕ್ಕಳಿಗೆ ಅಭಿನಂದನೆಗಳು. ಇದನ್ನು ನಮಗೆ ಅರುಹಿದ ನಿಮಗೆ ಧನ್ಯವಾದಗಳು.
Post a Comment