Tuesday, March 26, 2013

ಒಂಟಿ ಕಾಲು... ಕರುಳಿನ ಕೂಗು

ಮೈನಾ ಹಕ್ಕಿಗಾಗಿ ಹುಳುಗಳನ್ನು ಹುಡುಕಲು ಅಗೆತ ಮಾಡುತ್ತಿರುವ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ಕನಕಪ್ಪ.

 ಬೈಕಿನ ಹಿಂಬದಿಯ ಚೀಲದಲ್ಲಿ ಗುದ್ದಲಿಯನ್ನಿಟ್ಟುಕೊಂಡು ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಸಾಗುತ್ತಾರೆ. ಅರಣ್ಯ ಇಲಾಖೆಯ ಕಚೇರಿಯ ಆಸುಪಾಸಿನಲ್ಲಿ ರಸ್ತೆ ಬದಿಯಲ್ಲಿ ಸಾಲು ಮರಗಳಿರುವೆಡೆ ಬೈಕ್ ನಿಲ್ಲಿಸಿ ಮರದ ನೆರಳಿನಲ್ಲಿ ನೆಲವನ್ನು ಗುದ್ದಲಿಯಿಂದ ಅಗೆಯುತ್ತಾರೆ. ಮೆದುವಾಗಿ ಅಗೆತ ಮಾಡಿ ಮಣ್ಣನ್ನು ಸರಿಸಿ ಮಣ್ಣಿನಲ್ಲಿರುವ ಗೊಣ್ಣೆ ಹುಳುವನ್ನು ಆಯ್ದು ತನ್ನ ಬಳಿಯಿರುವ ಕವರಿನಲ್ಲಿ ಹಾಕಿಕೊಳ್ಳುತ್ತಾರೆ. ಈ ವಿಚಿತ್ರ ಕಾಯಕವನ್ನು ಇವರು ಪ್ರತಿನಿತ್ಯವೂ ವ್ರತದಂತೆ ಮಾಡುತ್ತಾರೆ.
 ಈ ವಿಶಿಷ್ಠ ಕೆಲಸದಲ್ಲಿ ತೊಡಗಿಸಿಕೊಂಡಿರುವವರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ಕನಕಪ್ಪ. ಇವರು ಮನೆಯಲ್ಲಿ ಸಾಕುತ್ತಿರುವ ಒಂಟಿ ಕಾಲಿನ ಮೈನಾ ಹಕ್ಕಿಗಾಗಿ ಪ್ರತಿದಿನ ಹುಳುಗಳನ್ನು ಅರಸಿ ಅಗೆತ ಮಾಡುತ್ತಾರೆ. ಈ ಹುಳುಗಳಿಗಾಗಿ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಗಿಡನೆಡಲು ಇವರೇ ಗುಣಿಹೊಡೆದುಕೊಟ್ಟಿದ್ದಾರೆ. ಪ್ರತಿ ದಿನ ಎಷ್ಟೇ ಕೆಲಸವಿದ್ದರೂ ಕನಿಷ್ಠ ಒಂದು ಗಂಟೆ ಹುಳುಗಳ ಅನ್ವೇಷಣೆಗೆ ಮೀಸಲಿಡುತ್ತಾರೆ.


 ನೆಲದೊಳಗೆ ಸಿಕ್ಕ ಗೊಣ್ಣೆಹುಳು.


  
ಗೊಣ್ಣೆಹುಳುಗಳ ಭಕ್ಷಣೆಯಲ್ಲಿ ನಿರತ ಮೈನಾ.

  ’ಈ ಮೈನಾ ಹಕ್ಕಿ ನಮ್ಮ ಮಡಿಲಿಗೆ ಬಂದಿದ್ದು ಒಂದು ವಿಚಿತ್ರ ಸಂದರ್ಭದಲ್ಲಿ. ಬೆಂಗಳೂರಿನಲ್ಲಿ ಉದ್ಯಾನವೊಂದರ ಬಳಿ ಹಾರಲು ಪ್ರಯತ್ನಿಸುತ್ತಿದ್ದ ಈ ಮರಿ ಹಕ್ಕಿ ತನ್ನ ಗೂಡಿನಿಂದ ಕೆಳಕ್ಕೆ ಬಿದ್ದಿದೆ. ಅದನ್ನು ನಾಯಿಯೊಂದು ಕಚ್ಚಿಕೊಂಡು ಹೋಗುವಾಗ, ಅದನ್ನು ನನ್ನ ಮಗಳು ಬಿಡಿಸಿ ರಕ್ಷಿಸಿದಳು. ಆದರೆ ಅಷ್ಟರಲ್ಲಿ ಅದರ ಕಾಲು ಮುರಿದಿತ್ತು. ಬೆಂಗಳೂರಿನಲ್ಲಿ ಹಲವು ಪಶುವೈದ್ಯರ ಬಳಿ ತೋರಿಸಿದರೂ ಗುಣಪಡಿಸಲಾಗಲಿಲ್ಲ. ನನ್ನ ಮಗಳು ಮತ್ತು ಅಳಿಯ ಅವರ ಮನೆಯಲ್ಲಿ ಅದನ್ನು ಸಾಕಲು ಪ್ರಯತ್ನಿಸಿದರು. ಕಾಳುಗಳನ್ನು ಪುಡಿಮಾಡಿ ಬಾಳೆಹಣ್ಣಿನೊಂದಿಗೆ ಕಿವುಚಿ ತಿನ್ನಿಸಿದ್ದಾರೆ. ಆದರೆ ಅದು ಕ್ರಮೇಣ ಕೃಶವಾಗತೊಡಗಿತು. ಅದರ ಪುಕ್ಕ ಉದುರಹತ್ತಿತು. ನಾನು ಹೋಗಿದ್ದಾಗ ನೋಡಿ ನಮ್ಮ ಮನೆಗೆ ತಂದೆ’ ಎಂದು ಮೈನಾ ಹಕ್ಕಿಯ ಆಗಮನವನ್ನು ಕನಕಪ್ಪ ವಿವರಿಸಿದರು.


ಕನಕಪ್ಪನವರ ಮಮತೆಯ ಮಡಿಲಲ್ಲಿ ಒಂಟಿಕಾಲಿನ ಮೈನಾ ಹಕ್ಕಿ.

’ಅಂತರ್ಜಾಲದಲ್ಲಿ ಈ ಹಕ್ಕಿಯ ಆಹಾರ ಕ್ರಮ, ಹಕ್ಕಿ ಸಾಕಾಣಿಕೆ ಬಗ್ಗೆ ವಿವರ ಸಂಗ್ರಹಿಸಲು ಪ್ರಯತ್ನಿಸಿದೆ. ಇದು ಕಾಳುಗಳನ್ನು ತಿನ್ನದು. ಇದಕ್ಕೆ ಕಬ್ಬಿಣದ ಅಂಶ ಕಡಿಮೆಯಿರುವ ಪ್ರೋಟೀನ್ ಆಹಾರ ನೀಡಬೇಕು ಎಂದು ತಿಳಿಯಿತು. ಆಗ ಮೊದಲ ಪ್ರಯತ್ನವಾಗಿ ತೋಟಗಾರಿಕೆಯ ಇಲಾಖೆಯಲ್ಲಿ ನೆಲ ತೋಡಿ ಎರೆಹುಳುಗಳನ್ನು ತಂದು ತಿನ್ನಿಸಿದೆ. ಹಾಗೆಯೇ ಒಮ್ಮೆ ಸಿಕ್ಕ ಗೊಣ್ಣೆ ಹುಳುಗಳನ್ನು ತಂದಾಗ ಬಹಳ ಇಷ್ಟಪಟ್ಟು ತಿಂದಿತು. ಅದರ ಇಷ್ಟಾನುಸಾರವಾಗಿ ಹುಳುಗಳನ್ನು ತರಲು ಪ್ರಾರಂಭಿಸಿದೆ.
 ಕಳೆದ ಒಂದು ವರ್ಷದಿಂದ ಈ ಮೈನಾ ಹಕ್ಕಿಯನ್ನು ಸಾಕುತ್ತಿದ್ದೇವೆ. ಒಂದೂವರೆ ಗಂಟೆಗೊಮ್ಮೆ ಇದಕ್ಕೆ ಹುಳುಗಳನ್ನು ತಿನ್ನಿಸಬೇಕು. ದಿನಕ್ಕೆರಡು ಬಾರಿ ನೀರಿನ ಪಾತ್ರೆಯಲ್ಲಿ ಆನಂದದಿಂದ ಸ್ನಾನ ಮಾಡುತ್ತದೆ. ನಾನು ಕೆಲಸಕ್ಕೆ ಹೋದಾಗ ನನ್ನ ಪತ್ನಿ ಇದಕ್ಕೆ ತಿನ್ನಿಸಿ ಸ್ನಾನ ಮಾಡಿಸುವರು. ಒಂದು ಕಾಲಿಲ್ಲದಿರುವುದರಿಂದ ತನ್ನ ಒಂದು ರೆಕ್ಕೆಯನ್ನೇ ಕಾಲಿನಂತೆ ಆಸರೆಗಾಗಿ ಬಳಸುವುದರಿಂದ ಒಂದು ರೆಕ್ಕೆ ಪೂರಾ ಸವೆದುಹೋಗಿದೆ. ಇದು ಹಾರಲಾರದು. ಹೊರಗೆ ಬಿಟ್ಟರೆ ಕಾಗೆ, ಹದ್ದು ಅಥವಾ ಬೆಕ್ಕಿಗೆ ಬಲಿಯಾಗುತ್ತದೆ. ಕಬ್ಬಿಣದ ಮೆಶ್ ಬಳಸಿ ಇದಕ್ಕೆ ಮನೆಯೊಂದನ್ನು ಮಾಡಿದ್ದೇವೆ. ಮನೆಯ ಮುಂದಿನ ಮರದ ರೆಂಬೆಯ ಮೇಲೆ ಅದರ ಸ್ವಜಾತಿ ಮೈನಾಗಳು ಬಂದಾಗ ಇದು ಸಂಭಾಷಣೆಯಲ್ಲಿ ತೊಡಗುತ್ತದೆ. ಹಲವು ಬಾರಿ ಕಾಗೆಗಳು ಬಂದು ಧಾಳಿ ಮಾಡುತ್ತವೆ. ಆಗ ಇದು ಮುದುಡಿಹೋಗುತ್ತದೆ.



ಮೈನಾ ಹಕ್ಕಿಯ ಮನೆ.


  ನನ್ನ ವೃತ್ತಿಯ ನಡುವೆ ಮೈನಾ ಹಕ್ಕಿಗೆ ಹುಳುಗಳನ್ನು ತರಲು ಕಷ್ಟವಾಗುತ್ತದೆ. ಆದರೂ ಈ ಕೆಲಸ ಬಹಳ ಇಷ್ಟಪಟ್ಟು ಮಾಡುತ್ತೇನೆ. ಹಕ್ಕಿಯನ್ನು ಪಂಜರದಲ್ಲಿಟ್ಟು ಸಾಕಬಾರದಂತೆ. ಆದರೆನು ಮಾಡುವುದು ನಮ್ಮ ಮಡಿಲಿಗೆ ಬಂದಿರುವ ಇದನ್ನು ಬೇರೆ ಪ್ರಾಣಿಗೆ ಆಹಾರವಾಗಲು ಬಿಡಲು ಮನಸ್ಸು ಬಾರದು. ಇದರ ಆಯಸ್ಸು ೨೫ ವರ್ಷಗಳಂತೆ. ನಾನು ಇದಕ್ಕೆ ನೋವಾಗದಂತೆ ಸಾಕುತ್ತೇನೆ. ಯಾರಾದರೂ ಇದರ ಕಾಲು ಸರಿ ಮಾಡಿದಲ್ಲಿ ಎಷ್ಟು ಹಣ ಖರ್ಚಾದರೂ ಕೊಡಲು ಸಿದ್ದವಿದ್ದೇನೆ. ಇದನ್ನು ನಮ್ಮಂತೆಯೇ ಸಲಹುವ ಪ್ರಾಣಿದಯಾಸಂಘವಿದ್ದರೆ ನಾನು ದತ್ತು ತೆಗೆದುಕೊಂಡು ಇದರ ಪೋಷಣೆಯ ಖರ್ಚನ್ನೂ ನೀಡುತ್ತೇನೆ’ ಎಂದು ಅವರು ಹೇಳಿದರು. ಕನಕಪ್ಪನವರ ಫೋನ್ ನಂಬರ್: ೭೭೬೦೨೩೪೪೩೩.

1 comment:

sunaath said...

ದಯವೇ ಧರ್ಮದ ಮೂಲವಯ್ಯಾ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ? ಕನಕಪ್ಪನವರಿಗೆ ಅನಂತ ಪ್ರಣಾಮಗಳು. ಅವರ ಬಗೆಗೆ ತಿಖಿಸಿದ ನಿಮಗೆ ಧನ್ಯವಾದಗಳು.