Friday, July 8, 2011

’ಚಂದ್ರಮುಕುಟ’ ಪಕ್ಷಿಯ ಮಾತೃತ್ವ


ಶಿಡ್ಲಘಟ್ಟ ತಾಲ್ಲೂಕಿನ ಕದಿರಿನಾಯಕನಹಳ್ಳಿಯ ಮನೆಯ ಗೋಡೆ ಬಿರುಕಿನಲ್ಲಿ ಮರಿಗೆ ಆಹಾರ ನೀಡುತ್ತಿರುವ ಕಾಟಿಮರಾಯ ಹಕ್ಕಿ.


ರಸ್ತೆಗಳ ಅಕ್ಕಪಕ್ಕದ ದೊಡ್ಡ ಮರಗಳನ್ನು ಕಡಿಯಲಾಗುತ್ತಿದೆ. ಮರಗಳನ್ನು ಆಶ್ರಯಿಸಿದ್ದ ಪಕ್ಷಿಗಳು, ಕೀಟಗಳು ಹಾಗೂ ಇತರ ಜೀವ ಜಂತುಗಳು ಸಂತತಿ ಮುಂದುವರಿಕೆಗಾಗಿ ಗೂಡು ಕಟ್ಟಲು ಪರ್ಯಾಯ ವ್ಯವಸ್ಥೆಗಳಿಗೆ ಮೊರೆ ಹೋಗುತ್ತಿವೆ.
ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದ ಮನೆಯೊಂದರ ಗೋಡೆಯ ಬಿರುಕಿನಲ್ಲಿ ಸುಂದರ ಕಾಟಿಮರಾಯ ಹಕ್ಕಿಗಳ ಜೋಡಿ ಗೂಡು ಮಾಡಿತ್ತು. ಜನರನ್ನು ಕಂಡು ಹೆದರುವ, ಜನಸಂಚಾರದಿಂದ ಬಹು ದೂರವಿರುವ ಹಕ್ಕಿಗಳು ಮನುಷ್ಯರ ಮನೆಗಳ ಮಧ್ಯೆಯೇ ತಮ್ಮ ಮನೆಯನ್ನೂ ನಿರ್ಮಿಸಿಕೊಂಡು ತಮ್ಮ ಸಂತತಿಯನ್ನು ಕಾಪಾಡುತ್ತಿರುವುದು ಆಶ್ಚರ್ಯಕರ ಸಂಗತಿ.


ಜೀಬ್ರಾ ಮೈಬಣ್ಣದಂತಿರುವ ತನ್ನ ರೆಕ್ಕೆಗಳನ್ನು ಅರಳಿಸಿಕೊಂಡು ಮರಿಗೆ ಆಹಾರ ತರುತ್ತಿರುವ ಹಕ್ಕಿ.

ಈ ಹಕ್ಕಿಗೆ ಆಡು ಭಾಷೆಯಲ್ಲಿ ಕಾಟಿಮರಾಯ ಹಕ್ಕಿ ಎಂದು ಕರೆಯುತ್ತಾರೆ. ‘ನೆಲಕುಟುಕ’ ಹಾಗೂ ‘ಚಂದ್ರಮುಕುಟ’ ಎಂಬುದಾಗಿಯೂ ಕರೆಯುತ್ತಾರೆ. ಈ ಹಕ್ಕಿ ತನ್ನ ವಿಶಿಷ್ಟವಾದ ದನಿಯಲ್ಲಿ ’ಹೂ ಪೂ’ ಎಂದು ಕೂಗುವುದರಿಂದ ಇಂಗ್ಲೀಷ್‌ನಲ್ಲಿ ಇದಕ್ಕೆ "ಹೂ ಪೂ" ಎನ್ನುತ್ತಾರೆ. ಇದರ ತಲೆಮೇಲೆ ಬೀಸಣಿಗೆಯಂತಹ ಜುಟ್ಟಿದೆ. ಮೈಮೇಲೆ ಜೀಬ್ರಾದಂತೆ ಕಪ್ಪು ಬಿಳಿ ಪಟ್ಟೆಗಳು. ಎದೆ ಮತ್ತು ಕತ್ತಿನಲ್ಲಿ ಕೇಸರಿ ಬಣ್ಣವಿದ್ದು ಅತ್ಯಂತ ಸುಂದರವಾಗಿದೆ. ಹೆಣ್ಣು ಗಂಡು ಒಂದೇ ರೀತಿ ಇರುತ್ತವೆ. ಸಾಮಾನ್ಯವಾಗಿ ಎಲ್ಲರೂ ಇವನ್ನು ಮರಕುಟುಕ ಎಂದೇ ತಪ್ಪುತಿಳಿಯುತ್ತಾರೆ.
‘ಹಳ್ಳಿಗಳಲ್ಲಿ ಕಾಟಿಮರಾಯ ಎಂಬ ಗ್ರಾಮ ದೇವರನ್ನು ಪೂಜಿಸುತ್ತೇವೆ. ಈ ಹಕ್ಕಿಯನ್ನೂ ಅದೇ ಹೆಸರಿನಿಂದ ಕಾಟಿಮರಾಯ ಹಕ್ಕಿಯೆಂದು ಕರೆಯುತ್ತೇವೆ. ಈ ಹಕ್ಕಿಗೂ ಆ ದೇವರಿಗೂ ಏನು ಸಂಬಂಧವೋ ತಿಳಿಯದು. ಆದರೆ ರೈತರ ಬೆಳೆಗಳಿಗೆ ಪೀಡೆಯಾಗುವ ಹಲವು ಕೀಟಗಳನ್ನು ತಿಂದು ರೈತ ಸ್ನೇಹಿಯಾಗಿದೆ. ಈ ಹಕ್ಕಿಯನ್ನು ಕೊಲ್ಲಬಾರದು. ಕೊಂದರೆ ಗ್ರಾಮಕ್ಕೆ ಕೆಡುಕಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿತ್ತಿದ್ದರು’ ಎಂದು ಕದಿರಿನಾಯಕನಹಳ್ಳಿಯ ಶ್ರೀನಿವಾಸ್ ತಿಳಿಸಿದರು.
’ನಮ್ಮ ಮನೆಯ ಗೋಡೆ ಬಿರುಕಿನಲ್ಲಿ ಈ ಹಕ್ಕಿ ಜೋಡಿ ಗೂಡು ಮಾಡಿವೆ. ವಿಚಿತ್ರವಾದ ಹುಳುಗಳನ್ನು ತಂದು ತನ್ನ ಮರಿಗಳಿಗೆ ತಿನ್ನಿಸುತ್ತಿವೆ. ಇವಕ್ಕೆ ತೊಂದರೆಯಾಗಬಾರದೆಂದು ಅಲ್ಲಿ ನಾವ್ಯಾರೂ ಓಡಾಡುತ್ತಿಲ್ಲ. ಮರಿಗಳು ದೊಡ್ಡವಾಗುತ್ತಿದ್ದಂತೆಯೇ ತಮ್ಮ ಪಾಡಿಗೆ ತಾವು ಹೋಗುತ್ತವೆ’ ಎಂದರು.

ಮರಿಗೆ ತಿನ್ನಲು ಹುಳುವೊಂದನ್ನು ತರುತ್ತಿರುವ ಹಕ್ಕಿ.

5 comments:

sunaath said...

ಈ ಜುಟ್ಟಿನ ಪಕ್ಷಿಯನ್ನು ನಾನು ನೋಡಿರಲಿಲ್ಲ. ತೋರಿಸಿದ್ದಕ್ಕಾಗಿ ಧನ್ಯವಾದಗಳು.

ಗಿರೀಶ್.ಎಸ್ said...

ಇದಕ್ಕೆ ಮರಕುಟಿಗ ಅಂತಾನು ಕರೆಯುತ್ತಾರೆ !!!

Pradeep Rao said...

Wah! Sundara Kati Maraaya pakshi! marigala chitra tegeyuva avakaashaviddare innu chennaagirutittu!

AntharangadaMaathugalu said...

ತುಂಬಾ ಮುದ್ದಾದ ಹಕ್ಕಿ ಮಲ್ಲಿಕಾರ್ಜುನ್ ಸಾರ್. ಚಂದ್ರಮುಕುಟ ಪಕ್ಷಿಯ ಮಾತೃತ್ವದ ಕ್ಷಣ ತೋರಿಸಿದ ನಿಮಗೆ ಧನ್ಯವಾದಗಳು..

Sandeep K B said...

ಸುಂದರ ಚಿತ್ರ ಹಾಗೂ ಮಾಹಿತಿಗಾಗಿ ಧನ್ಯವಾದಗಳು