Friday, June 24, 2011

ಅಪರೂಪದ ಎರಡು ತಲೆ ಹಾವು!!


ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಸ್ನೇಕ್ ನಾಗರಾಜ್ ಎರಡು ತಲೆ ರಕ್ಷಿಸಿ ಆರ್ಎಫ್ಓ ರಮೇಶ್ ಮತ್ತು ಫಾರೆಸ್ಟರ್ ಶಂಕರಪ್ಪ ಅವರ ಮೂಲಕ ಕಾಡಿನಲ್ಲಿ ಬಿಟ್ಟರು.


ಮಾನವರ ದುರಾಸೆಗೆ, ಅಪವಾದಕ್ಕೆ, ಅನುಮಾನಕ್ಕೆ, ನಿಂದನೆ ಹಾಗೂ ದುಷ್ಕೃತ್ಯಕ್ಕೆ ಬಲಿಯಾಗುವ ಜೀವಿಯೊಂದನ್ನು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಇತ್ತೀಚೆಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದಿದೆ. ಅಪರೂಪಕ್ಕೆ ಕಾಣಸಿಗುವ ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಎರಡು ತಲೆ ಹಾವು ಎಂದು ಕರೆಯಲ್ಪಡುವ ಈ ಹಾವನ್ನು ತೆಲುಗಿನಲ್ಲಿ ’ಪೂಡು ಪಾಮು’ ಎಂದು ಕರೆದರೆ ಇಂಗ್ಲೀಷ್‌ನಲ್ಲಿ ’ರೆಡ್ ಸ್ಯಾಂಡ್ ಬಾವ’ ಎಂದು ಕರೆಯುತ್ತಾರೆ. ತಾಲ್ಲೂಕಿನ ಕೊತ್ತನೂರು ಗ್ರಾಮದ ಬಳಿ ಗ್ರಾಮಸ್ಥರು ಈ ಹಾವನ್ನು ಕಂಡು ಸ್ನೇಕ್ ನಾಗರಾಜ್‌ಗೆ ತಿಳಿಸಿದ್ದಾರೆ. ಅವರು ಹಾವನ್ನು ರಕ್ಷಿಸಿ ವಲಯ ಅರಣ್ಯಾಧಿಕಾರಿಗಳಾದ ರಮೇಶ್ ಮತ್ತು ಫಾರೆಸ್ಟರ್ ಶಂಕರಪ್ಪ ಅವರ ಮೂಲಕ ಕಾಡಿನಲ್ಲಿ ಬಿಟ್ಟಿದ್ದಾರೆ.



’ಇದು ವಿಷವಿಲ್ಲದ ಯಾರನ್ನೂ ಕಚ್ಚದ ಅತ್ಯಂತ ನಿರುಪದ್ರವಿ ಹಾವು. ಮಣ್ಣನ್ನು ತೋಡಿಕೊಂಡು ಹೋಗುವ ಇದರ ಗುಣದಿಂದ ಇದರ ತಲೆಯ ಮುಂಭಾಗ ಗುದ್ದಲಿಯ ತುದಿಂತೆ ಗಟ್ಟಿಯಾಗಿರುತ್ತದೆ. ಬಾಲ ಮೊಂಡಾಗಿದ್ದು ಥೇಟ್ ತಲೆಯಂತೆಯೇ ಕಾಣುತ್ತದೆ. ಹಾಗಾಗಿ ಇದನ್ನು ಇಮ್ಮಂಡೆ ಹಾವು ಅಥವಾ ಎರಡು ತಲೆ ಹಾವೆಂದು ಕರೆಯುತ್ತಾರೆ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.
’ಅತ್ಯಂತ ಭಯ ಹಾಗೂ ನಾಚಿಕೆ ಸ್ವಭಾವದ ಈ ಹಾವು ಅಪಾಯದ ಸುಳಿವು ಸಿಕ್ಕ ತಕ್ಷಣ ಮೈಯನ್ನು ಸುರುಳಿಯಾಕಾರಕ್ಕೆ ಕುಗ್ಗಿಸಿ ತಲೆಯನ್ನು ಬಚ್ಚಿಟ್ಟುಕೊಂಡು ಬಾಲವನ್ನು ಮೇಲೆ ಬಿಟ್ಟು ಅಲ್ಲಾಡಿಸುತ್ತದೆ. ಇದೇ ಇದರ ತಲೆಯಿರಬೇಕೆಂದು ಬೇರೆ ಪ್ರಾಣಿಗಳು ಘಾತ ಮಾಡುತ್ತವೆ. ಹಾಗಾಗಿಯೇ ಬೆಳೆದಿರುವ ಹೂಳುಹಾವಿನ ಬಾಲ ಸಾಮಾನ್ಯವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿರುತ್ತದೆ’



’ಇಂತಹ ಹಾವು ಮರಿಯಾಗಿದ್ದಾಗ ಅಲ್ಲಲ್ಲಿ ಕಿತ್ತಳೆ ಬಣ್ಣವಿದ್ದರೂ ಬೆಳೆದ ಮೇಲೆ ಗಾಢ ಕಂದು ಬಣ್ಣ ಹೊಂದುತ್ತದೆ. ೭೫ ಸೆಮೀ ಉದ್ದ ಬೆಳೆಯುತ್ತದೆ. ಮರಳು, ಮೆದು ಮಣ್ಣು ಇರುವೆಡೆ ಇವು ವಾಸಿಸುತ್ತವೆ. ರೈತರ ಬೆಳೆಗಳಿಗೆ ಹಾನಿ ಮಾಡುವ ಇಲಿ ಮೊದಲಾದ ದಂಶಕಗಳನ್ನು ತಿಂದು ರೈತ ಮಿತ್ರನಾಗಿದೆ. ಒಣ ಪ್ರದೇಶಗಳಲ್ಲಿ ಕಾಣಸಿಗುವ ಈ ಹಾವು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಹಾಗೂ ವಾಯುವ್ಯ ಭಾರತದಲ್ಲಿ ಕಂಡುಬರುತ್ತದೆ. ಇದು ನಿಶಾಚರಿ. ಕತ್ತಲಲ್ಲೇ ತನ್ನ ಆಹಾರಾನ್ವೇಷಣೆ ಮಾಡುತ್ತದೆ. ಜೂನ್ ತಿಂಗಳು ಇವು ಮರಿ ಮಾಡುವ ಕಾಲ. ಈ ಹಾವುಗಳು ಮೊಟ್ಟೆಯಿಡುವುದಿಲ್ಲ. ಆರರಿಂದ ಎಂಟು ಮರಿಗಳಿಗೆ ಜನ್ಮ ನೀಡುತ್ತವೆ.




‘ಎರಡು ತಲೆ ಹಾವು ಮನೆಯಲ್ಲಿದ್ದರೆ ಐಶ್ವರ್ಯ ಬರುತ್ತದೆ ಎಂಬುದೊಂದು ಮೂಢನಂಬಿಕೆ ಇದೆ. ಇದು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ ಎಂಬ ವದತಿಯಿಂದ ಹಲವರು ಈ ಹಾವಿನ ಪ್ರಾಣಕ್ಕೆ ಸಂಚಕಾರ ತಂದಿದ್ದಾರೆ. ತಮ್ಮ ಹಣವನ್ನೂ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೋಲಿಸರು ಈ ಹಾವನ್ನು ಮಾರಲೆತ್ನಿಸಿದ ಆರೋಪಿಗಳನ್ನು ಬಂಧಿಸಿದ್ದರು. ಖಚಿತ ನಿಲುವಿಲ್ಲದವರಿಗೆ, ಬೇರೆಯವರನ್ನು ಯಾಮಾರಿಸುವವರಿಗೆ ಎರಡು ಹಾವಿನಂತಹವನು ಎನ್ನುತ್ತಾರೆ. ಅನವಶ್ಯಕವಾಗಿ ಮನುಷ್ಯರಿಂದ ನಿಂದನೆಗೆ ಮತ್ತು ಅಪವಾದಕ್ಕೆ ಗುರಿಯಾಗಿರುವ ಜೀವಿಯಿದು. ಮನುಷ್ಯನೂ ಇವುಗಳಂತೆಯೇ ಪರಿಸರದ ಒಂದು ಭಾಗ ಎಂಬುದನ್ನು ಅರಿಯಬೇಕು’ ಎಂದು ಆರ್ಎಫ್ಓ ರಮೇಶ್ ತಿಳಿಸಿದರು.







7 comments:

Pradeep Rao said...

ಎರಡು ತಲೆಯ ಹಾವಿನ ಬಗ್ಗೆ ಲೇಖನ ಚೆನ್ನಾಗಿದೆ.. ಇವೆಲ್ಲ ನೀವೇ ತೆಗೆದ ಚಿತ್ರಗಳೇ?

ಸುಧೇಶ್ ಶೆಟ್ಟಿ said...

very interesting :)

G S Srinatha said...

ಸರ್ ಧನ್ಯವಾದಗಳು,
ವಿಷಯ ಹಾಗೂ ಚಿತ್ರಗಳಿಗಾಗಿ,

sunaath said...

ವಿಚಿತ್ರ ಸೃಷ್ಟಿ!

ಜಲನಯನ said...

ಮಲ್ಲಿ ಚನ್ನಾಗಿದೆ ಚಿತ್ರ ಸಹಿತ ವಿವರಣೆ. ಎರಡು ತಲೆ (ಒಂದು ಮೋಸ ಮಾಡಿ ತನ್ನನ್ನು ಸಂರಕ್ಷಿಸಿಕೊಳ್ಳಲು ಮಾಡಿಕೊಂಡ ಅಳವಡಿಕೆ ತಂತ್ರ)...ಹಾವು ಎಂದರೆ ನಮ್ಮ ಮುಂದೆ ಮೂಡುವ ಚಿತ್ರ ಅಪಾಯಕಾರಿ ವಿಷ ಇರುವುದು ಎನ್ನುವುದೇ...ಆದ್ರೆ ಪ್ರಪಂಚದ ಹಾವುಗಳಲ್ಲಿ ನಿರುಪದ್ರವಿ ಹಾವುಗಳ ಪ್ರಮಾಣವೇ ಹೆಚ್ಚು. ವೆಲ್ ಡನ್ ಮಲ್ಲಿ.

ಕ್ಷಣ... ಚಿಂತನೆ... said...

ಸರ್, ಎರಡು ತಲೆಯ ಹಾವಿನ ಲೇಖನ-ಚಿತ್ರ ಚೆನ್ನಾಗಿದೆ
ಧನ್ಯವಾದಗಳು.

Guruprasad said...

ಎರಡು ತಲೆ ಹಾವಿನ ಬಗ್ಗೆ ಉಪಯುಕ್ತ ಬರಹ.... ಹೌದು ಮನುಷ್ಯ ತನ್ನ ಆಸೆ ಗಾಗಿ ಏನೆಲ್ಲ ಮಾಡುತ್ತಾನೆ ಅಲ್ವ....