Wednesday, June 8, 2011

ಚಿತ್ತಾರದ ಹಾವು




ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಬಳಿ ವಿಶೇಷವಾದ ಹಾವೊಂದು ಕಂಡು ಬಂದಿದೆ. ಅದುವೇ ಟ್ರಿಂಕೆಟ್ ಹಾವು. ಕನ್ನಡದಲ್ಲಿ ಇದನ್ನು ಚಿತ್ತಾರದ ಹಾವು ಎನ್ನುವರು. ಕೊತ್ತನೂರಿನ ಕೆ.ಜಿ.ಬಾಬು ಅವರ ರೇಷ್ಮೆ ಹುಳು ಸಾಕಾಣಿಕಾ ಕೇಂದ್ರದ ಬಳಿ ಕಾಣಿಸಿದ ಈ ಹಾವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ಹಿಡಿದು ಕಾಡಿಗೆ ಬಿಟ್ಟರು.
ಈ ಟ್ರಂಕೆಟ್ ಹಾವು ನಯವಾದ ಹೊಳಪುಳ್ಳ ಹುರುಪೆಗಳ ಹೊದಿಕೆಯನ್ನು ಹೊಂದಿದ್ದು ಮುಂಭಾಗ ಬಿಳಿಪಿರುತ್ತದೆ. ಇದರ ಬಾಲ ದಟ್ಟ ಬಣ್ಣವಿರುತ್ತದೆ. ದೇಹ ಕಂದಿದ ಚಾಕಲೇಟ್ ಕಂದು ಬಣ್ಣವಿದ್ದರೆ, ದೇಹದ ಪಕ್ಕದಲ್ಲಿ ಎರಡು ಪ್ರಧಾನ ದಟ್ಟ ಬಣ್ಣದ ಪಟ್ಟಿಗಳಿರುತ್ತವೆ. ಮುಂಭಾಗದಲ್ಲಿ ಚೌಕಳಿ ಗುರುತುಗಳಿರುತ್ತವೆ. ತಲೆ ಉದ್ದ. ಕುತ್ತಿಗೆಯ ಮೇಲ್ಭಾಗದಲ್ಲಿ ಹಿಂದೆ ಮುಂದಾದ ‘ವಿ’ ಗುರುತಿರುತ್ತದೆ. ಇದರ ಹೊಟ್ಟೆಯ ಭಾಗ ಮುತ್ತು ಬಿಳುಪು. ಕಣ್ಣುಗಳ ಮುಂದಿನ ಹುರುಪೆಗಳ ಮೇಲೆ ಅನೇಕ ರಂಧ್ರಗಳಿವೆ.



ರಾಜ್ಯದ ಬಯಲು ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೧೦೦೦ ಮೀಟರ್ ಎತ್ತರದವರೆಗೆ ಕಂಡುಬರುತ್ತವೆ. ಅಪರೂಪವಾಗಿ ಮನುಷ್ಯನ ವಸತಿಗಳ ಬಳಿ ಕಂಡುಬರಬಹುದು. ಸಾಮಾನ್ಯವಾಗಿ ಈ ಹಾವು ೪ ಅಡಿ ಉದವಿರುತ್ತವೆ. ಹೆಣ್ಣು ಗಂಡಿಗಿಂತ ಹೆಚ್ಚು ಉದ್ದವಿರುತ್ತದೆ. ದಂಶಕ ಪ್ರಾಣಿಗಳು ಇದರ ಮುಖ್ಯ ಆಹಾರ. ಅಪರೂಪವಾಗಿ ಹಕ್ಕಿಗಳನ್ನು ಮತ್ತು ಹಕ್ಕಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಹಾವಿನ ಮರಿಗಳು, ಕೀಟಗಳು ಮತ್ತು ಸಣ್ಣ ಹಲ್ಲಿಗಳನ್ನು ಹಾಗೂ ಹಾವುರಾಣಿಗಳನ್ನು ತಿನ್ನುತ್ತವೆ.
‘ಈ ಚಿತ್ತಾರದ ಹಾವು ಗೊಂದಲವಾದಾಗ ಉದ್ರೇಕಗೊಂಡು ರೇಗುತ್ತದೆ. ದೇಹವನ್ನು ನೆಲದಿಂದ ಮೇಲೆತ್ತಿ ಬಡಿಯುತ್ತದೆ. ಕತ್ತನ್ನು ಉಬ್ಬಿಸಿ, ತಲೆಯೆತ್ತಿ ಬಾಯಿ ತೆರೆದು ಕಚ್ಚಲು ಬರುತ್ತದೆ. ಆದರೆ ಇದು ವಿಷಪೂರಿತ ಹಾವಲ್ಲ. ಹಾಗಾಗಿ ಕಚ್ಚಿದರೂ ಅಪಾಯವಾಗದು. ನಾನು ಇದುವರೆಗೂ ನೂರಾರು ಹಾವುಗಳನ್ನು ರಕ್ಷಿಸಿದ್ದೇನೆ. ಈ ರೀತಿಯ ಹಾವನ್ನು ನಮ್ಮ ಪ್ರದಶದಲ್ಲಿ ಎಂದೂ ಕಂಡಿರಲಿಲ್ಲ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಕಂಡು ಬಂದ ಟ್ರಿಂಕೆಟ್ ಹಾವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ರಕ್ಷಿಸಿದರು.

4 comments:

PaLa said...

ನಾನೂ ಈ ಹಾವಿನ ಬಗ್ಗೆ ಕೇಳಿರಲಿಲ್ಲ.. ಪರಿಚಯಕ್ಕೆ ಧನ್ಯವಾದ.. ಹಾವನ್ನು ಕಾಡಿಗೆ ಬಿಟ್ಟಿದ್ದು ಮನಸ್ಸಿಗೆ ಖುಷಿ ನೀಡಿತು.

Unknown said...

nice

Sandeep K B said...

Nice photo and information..

Soumya. Bhagwat said...

You have given good information thank u sir .. :)