Tuesday, May 31, 2011

ಕನ್ನಡ ನಾಡಲ್ಲಿ ತೆಲುಗು ಕವಿ ಜಯಂತಿ



ಪ್ರಾಚೀನ ತೆಲುಗು ಕವಿಯೊಬ್ಬರ ಜಯಂತಿಯನ್ನು ಪ್ರತಿ ವರ್ಷ ಮೇ ತಿಂಗಳಲ್ಲಿ ಕನ್ನಡನಾಡಿನಲ್ಲಿ ಆಚರಿಸಲಾಗುತ್ತಿದ್ದು, ಕನ್ನಡ ಮತ್ತು ತೆಲುಗು ಸಾಹಿತ್ಯಿಕ-ಸಾಂಸ್ಕೃತಿಕ ಸಂಬಂಧ ಗಟ್ಟಿಗೊಳಿಸುತ್ತಿದೆ. ಸುಮಾರು ನಲವತ್ತು ವರ್ಷಗಳಿಂದ ಜಯಂತಿ ಕಾರ್ಯಕ್ರಮ ನಡೆಯುತ್ತಿದ್ದು, ತೆಲುಗು ಕವಿಯ ಕೊಡುಗೆಯನ್ನು ಸ್ಮರಿಸಲಾಗುತ್ತದೆ. ಈ ಕವಿ ಬೇರೆ ಯಾರೂ ಅಲ್ಲ, ತೆಲುಗಿನ ಮಹಾಕವಿ ಪೋತನ.



ಭಕ್ತಿ ಪಂಥದೊಂದಿಗೆ ಗುರುತಿಸಿಕೊಳ್ಳುವ ಕವಿ ಪೋತನ ಮತ್ತು ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ ಗ್ರಾಮಕ್ಕೆ ವಿಶಿಷ್ಟ ಸಂಬಂಧವಿದೆ. ತೆಲುಗು ಮತ್ತು ಕನ್ನಡ ಸಾಹಿತ್ಯದ ಅಪಾರ ಪಾಂಡಿತ್ಯ ಹೊಂದಿದ್ದ ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಅವರು ಸುಮಾರು ೬೦ ವರ್ಷಗಳ ಹಿಂದೆಯೇ ‘ಕನ್ನಡ ಸಾಹಿತ್ಯ ಸೇವಾ ಸದನ’ ಎಂಬ ಸಾಹಿತ್ಯ ಬಳಗದ ಮೂಲಕ ೪೦ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಬರೆದು ಪ್ರಕಟಿಸಿದ್ದರು.ಅವುಗಳಲ್ಲಿ ತರಿಗೊಂಡ ವೆಂಕಮಾಂಬ, ತ್ಯಾಗರಾಜ ಮುಂತಾದ ತೆಲುಗಿನ ಭಕ್ತಿ ಕವಿಗಳನ್ನು ಪರಿಚಯಿಸಿದ್ದರು. ೧೯೬೦ ರಲ್ಲಿ ಪೋತನ ಕವಿಯ ಶ್ರೀಮದ್ಭಾಗವತವನ್ನು ಸರಳಗದ್ಯದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಪೋತನ ಕವಿಯ ಭಾಗವತ ನಾಲ್ಕು ಸಂಪುಟಗಳಲ್ಲಿವೆ.



ಕವಿ ಪೋತನ ೧೪ ನೇ ಶತಮಾನಕ್ಕೆ ಸೇರಿದವರು. ರಾಜಾಶ್ರಯವನ್ನೇ ಧಿಕ್ಕರಿಸಿ ರಾಮಚಂದ್ರನಿಗೇ ತನ್ನನ್ನು ಅರ್ಪಿಸಿಕೊಂಡಂತಹ ಆ ಕವಿಗೆ ಕಾವ್ಯಧರ್ಮ ಮತ್ತು ಭಕ್ತಿಯನ್ನು ಸಮ್ಮಿಲನಗೊಳಿಸಿರುವುದಕ್ಕೆ ಭಕ್ತಿ ಪಂಥದಲ್ಲಿ ಗೌರವದ ಸ್ಥಾನವಿದೆ. ಈ ಕವಿಯ ಜೀವನ ಚರಿತ್ರೆ ‘ಬಮ್ಮೆರ ಪೋತನ’ ಎಂಬ ಪುಸ್ತಕವನ್ನೂ ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಬರೆದಿದ್ದಾರೆ.


ಕನ್ನಡಕ್ಕೆ ಅನುವಾದಿಸಿದ ಪೋತನ ಕವಿಯ ಭಾಗವತ.

‘ಪೋತನ ಕವಿಯ ಭಾಗವತದ ನಾಲ್ಕನೆಯ ಸಂಪುಟವನ್ನು ೧೯೬೧ ರಲ್ಲಿ ಅಂದಿನ ಶೃಂಗೇರಿ ಜಗದ್ಗುರುಗಳಾಗಿದ್ದ ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಚೈತ್ರ ಬಹುಳ ಅಷ್ಠಮಿಯಂದು ಬಿಡುಗಡೆ ಮಾಡಿದ್ದರು. ನಂತರ ಪ್ರತಿ ವರ್ಷ ಚೈತ್ರ ಬಹುಳ ಅಷ್ಠಮಿಯಂದು ಮಹಾಕವಿ ಪೋತನರ ಜಯಂತಿಯನ್ನು ಆಚರಿಸಲು ಹೇಳಿದರು’ ಎಂದು ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಕಿರಿಯ ಸಹೋದರನ ಪುತ್ರ ನಿವೃತ್ತ ಪ್ರೊಫೆಸರ್ ವೇಣುಗೋಪಾಲ್ ತಿಳಿಸಿದರು.

’ಸ್ವಾಮೀಜಿ ನಿರ್ದೇಶನದಂತೆ ಅರ್ಜಿಕ ವೆಂಕಟೇಶ್ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಲಂಕಾ ಕೃಷ್ಣಮೂರ್ತಿ ಅವರ ಸಹಕಾರದಿಂದ ೧೯೭೦ ರ ವರೆಗೂ ಬೆಂಗಳೂರಿನ ಶಂಕರ ಮಠದಲ್ಲಿ ಜಯಂತಿ ಆಚರಿಸಿದೆವು. ನಂತರ ನಮ್ಮ ಮನೆಯಲ್ಲೇ ಆಚರಿಸುತ್ತಿದ್ದೆವು. ನಾನು ಸಂತೇಕಲ್ಲಹಳ್ಳಿಗೆ ಬಂದ ಮೇಲೆ ೨೦೦೬ ರಿಂದ ಚಿಂತಾಮಣಿಯ ಬ್ರಹ್ಮ ಚೈತನ್ಯ ರಾಮ ಮಂದಿರದಲ್ಲಿ ವಸಂತ ಸಾಹಿತ್ಯೋತ್ಸವ ಎಂಬ ಹೆಸರಿನಲ್ಲಿ ಆಚರಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.


ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ



ಚಿಂತಾಮಣಿಯ ಬ್ರಹ್ಮ ಚೈತನ್ಯ ರಾಮ ಮಂದಿರದಲ್ಲಿ ಇತ್ತೀಚೆಗೆ ನಡೆದ ಮಹಾಕವಿ ಪೋತನ ಜಯಂತ್ಯುತ್ಸವದಲ್ಲಿ ಸಂತೇಕಲ್ಲಹಳ್ಳಿ ಲಕ್ಷ್ಮಿನರಸಿಂಹಶಾಸ್ತ್ರಿ ಬರೆದಿರುವ ಕನಕದಾಸರ ಮರುಮುದ್ರಣ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಡಾ.ಶೇಷಶಾಸ್ತ್ರಿ, ಕನ್ನಡ ಸಾಹಿತ್ಯ ಸೇವಾ ಸದನದ ಅಧ್ಯಕ್ಷ ಬಿ.ಶಂಕರ್, ಸಾಹಿತ್ಯ ಕೂಟದ ಅಧ್ಯಕ್ಷ ಶ್ರೀರಾಮಮೂರ್ತಿ, ವೈ.ಜಿ.ಗಿರಿಶಾಸ್ತ್ರಿ ಹಾಜರಿದ್ದರು.



ಲಕ್ಷ್ಮಿನರಸಿಂಹಶಾಸ್ತ್ರಿ ಅವರು ಬರೆದಿರುವ ಕನಕದಾಸ ಕೃತಿಯ ಬಗ್ಗೆ ಸ.ರಘುನಾಥ ಅವರು ಮಾತನಾಡಿದರು.




ನಿವೃತ್ತ ಪ್ರೊಫೆಸರ್ ವೇಣುಗೋಪಾಲ್



ಕಳೆದ ಬಾರಿ ನಡೆದ ಅಷ್ಟಾವಧಾನ ಕಾರ್ಯಕ್ರಮ.

4 comments:

sunaath said...

ತುಂಬ ಮೆಚ್ಚಲೇಬೇಕಾದ ಈ ಸಮಾರಂಭದ ಬಗೆಗೆ ತುಂಬ ಮೆಚ್ಚಲೇಬೇಕಾದ ರೀತಿಯಲ್ಲಿ ಬರೆದು ತಿಳಿಸಿದ್ದೀರಿ. ಧನ್ಯವಾದಗಳು.

Krishnanand said...

ಧನ್ಯವಾದಗಳು, ಉತ್ತಮ ಅವಲೋಕನಕೆ.
ಇಂತ ಕಾರ್ಯಕ್ರಮಗಳ ಬಗ್ಗೆ ಮೊದಲೇ ತಿಳಿಸಿದಲ್ಲಿ, ಸಾಧ್ಯವಾದರೆ ನಾವು ಭಾಗವಹಿಸಬಹುದು. ಅಷ್ಟಾವದಾನ ಚಿತ್ರದಲ್ಲಿ ಡಾ ಗಣೇಶ್ ಬಿಟ್ಟು ಬೇರೆಯವರನ್ನು ನೋಡಿ ಆಶ್ಚರ್ಯವಾಯಿತು. ಚಿತ್ರದಲ್ಲಿರುವ ಅವದಾನಿಗಳ ಹೆಸರೇನು ? ಇದು ತೆಲಗು ಅಷ್ಟಾವದಾನವೇ?


ಕೃಷ್ಣಾನಂದ್

ಮಲ್ಲಿಕಾರ್ಜುನ.ಡಿ.ಜಿ. said...

ಕೃಷ್ಣಾನಂದ್ ಅವರೆ,
ಇದು ಕನ್ನಡದ ಅಷ್ಟಾವಧಾನ. ಕಳೆದ ವರ್ಷ ನಡೆದದ್ದು. ಅವಧಾನಿಗಳ ಹೆಸರು ಡಾ.ಜೆ.ಸದಾನಂದ ಶಾಸ್ತ್ರಿ. ಅವರ ಪಕ್ಕದಲ್ಲಿ ಕುಳಿತಿರುವವರು ಡಾ.ಕೆ.ಆರ್.ಗಣೇಶ್, ಡಾ.ಆರ್.ಶೇಷಶಾಸ್ತ್ರಿ, ಸ.ರಘುನಾಥ, ಜಿ.ಡಿ.ಚೂಡಾಮಣಿ

AntharangadaMaathugalu said...

ತುಂಬಾ ಚೆನ್ನಾದ ಲೇಖನ. ಅನೇಕ ವಿಷಯಗಳು ತಿಳಿದವು. ಧನ್ಯವಾದಗಳು..


ಶ್ಯಾಮಲ