Monday, May 2, 2011

ಮುದ್ದುಮುಖದ ಕಾಡುಪಾಪ



ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಸಮೀಪದ ತೋಪಿನಲ್ಲಿ ಇತ್ತೀಚೆಗೆ ಮುದ್ದುಮುಖದ ದೊಡ್ಡಕಂಗಳ ಬಹಳ ನಾಚಿಕೆಯ ಸ್ವಭಾವದ ಅಪರೂಪದ ಅತಿಥಿಯ ಆಗಮನವಾಗಿತ್ತು. ಅದುವೇ ಕಾಡುಪಾಪ.
ಇಂಗ್ಲೀಷಿನಲ್ಲಿ ಸ್ಲೆಂಡರ್ ಲೋರಿಸ್ ಎಂದು ಕರೆಯುವ ಇದನ್ನು ತೆಲುಗಿನಲ್ಲಿ ‘ಅಡವಿ ಪಾಪ’ ಎನ್ನುವರು. ತೆಲುಗಿನಲ್ಲಿ ಪಾಪ ಎಂದರೆ ಹುಡುಗಿ. ಹೆಣ್ಣಿನ ಸಹಜ ನಾಚಿಕೆ ಗುಣವನ್ನು ಇದು ಹೊಂದಿರುವುದರಿಂದ ಹಾಗೂ ಅಡವಿಯಲ್ಲಿರುವುದರಿಂದ ಅಡವಿ ಪಾಪ ಎನ್ನುತ್ತಾರೆ. ಕನ್ನಡದ ಪಾಪೆ ಎಂಬುದು ಕಣ್ಣನ್ನು ಸೂಚಿಸುತ್ತದೆ. ದೊಡ್ಡ ಕಣ್ಣುಗಳ ಇದನ್ನು ಕನ್ನಡದಲ್ಲಿ ಈ ಅರ್ಥದಲ್ಲಿ ಕಾಡುಪಾಪ ಎನ್ನುವರು. ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆಯ ಸ್ವಭಾವದ ಪ್ರಾಣಿಯಾದ್ದರಿಂದ ಕಾಡಿನ ಮಗು ಅಥವಾ ಕಾಡು ಪಾಪ ಎಂಬ ಹೆಸರು ಬಂದಿದೆ. ಹೆಚ್ಚು ನಾಚಿಕೆಯ ಸ್ವಭಾವವನ್ನು ತೋರುವುದರಿಂದ ಕಾವ್ಯಮಯವಾಗಿ ಜಾನಪದದಲ್ಲಿ ಇದನ್ನು “ಬಿದಿರಮೇಗಳ ಚದುರೆ” ಎಂದು ಕರೆದಿದ್ದಾರೆ.
ಕಾಡುಪಾಪವು ಅಪೂರ್ವವಾದ ಲಕ್ಷಣಗಳನ್ನು ಹೊಂದಿದೆ. ದುಂಡುತಲೆ, ಗಿಡ್ಡಮೂತಿ, ದೊಡ್ಡಕಿವಿ, ಹೊಳೆಯುವ ದುಂಡನೆಯ ದೊಡ್ಡ ಕಣ್ಣುಗಳು, ಹಿಂಗಾಲುಗಳಿಗಿಂತ ಮುಂಗಾಲುಗಳು ದೊಡ್ಡವು ಹಾಗೂ ಬಾಲವಿಲ್ಲ. ತನ್ನ ಹತ್ತಿರದ ಬಂಧುಗಳಾದ ಮಂಗ, ವಾನರ ಮತ್ತು ಮನುಷ್ಯನಂತಹ ಪ್ರಾಣಿಗಳೊಂದಿಗೆ ಹೋಲಿಕೆಯನ್ನು ತೋರಿದರೂ ಅನೇಕ ಆದಿಮ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದೆ.
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಇದು ಕರ್ನಾಟಕದಲ್ಲಿ ಕಂಡುಬರುತ್ತದೆ. ಕಾಡುಪಾಪಗಳ ಹತ್ತಿರದ ಸಂಬಂಧಿಗಳು ಜಾವ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡು ಬರುತ್ತವೆ. ಅಲ್ಲಿಯ ಮೂಲನೆಲೆಯಿಂದ ಕರ್ನಾಟಕವನ್ನು ಇದು ಹೇಗೆ ಬಂದು ತಲುಪಿ ನೆಲೆಸಿತು ಎಂಬುದು ವಿಕಾಸ ತಜ್ಞರಿಗೆ ಇನ್ನೂ ಸೋಜಿಗದ ಸಂಗತಿಯಾಗಿ ಉಳಿದಿದೆ.
‘ನಮ್ಮ ಕಡೆ ತೋಪುಗಳಲ್ಲಿ ಇವು ಅಪರೂಪವಾಗಿ ಕಾಣಿಸುತ್ತವೆ. ನಿಶಾಚರಿ ಜೀವಿಗಳಾದ್ದರಿಂದ ನಮ್ಮ ಕಣ್ಣಿಗೆ ಹೆಚ್ಚಾಗಿ ಬೀಳುವುದಿಲ್ಲ. ನೀಲಗಿರಿ ಮರ, ಆಲದ ಮರ, ಅರಳಿಮರ, ಸರ್ವೆಮರಗಳು ಮತ್ತು ಹುಣಿಸೆಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇವು ದಟ್ಟ ಕಾಡುಗಳಿಗೆ ಸೀಮಿತವಾಗಿರದೆ ತೆಳು ಕಾಡಿನಲ್ಲಿಯ ಮೈದಾನ ಪ್ರದೇಶಗಳಲ್ಲಿಯೂ ಕಂಡುಬರುತ್ತವೆ. ಇವು ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಹಲ್ಲಿ, ಹಾವುರಾಣಿ, ಹಕ್ಕಿಗಳ ಮೊಟ್ಟೆಗಳು, ಮರಗಪ್ಪೆ ಮುಂತಾದುವುಗಳನ್ನು ತಿನ್ನುತ್ತವೆ. ಇದು ಅಪಾಯದ ಅಂಚಿನಲ್ಲಿರುವ ಮತ್ತು ಕಾನೂನಿನಿಂದ ರಕ್ಷಿಸಲ್ಪಟ್ಟಿರುವ ಪ್ರಾಣಿ’ ಎಂದು ಕೊತ್ತನೂರಿನ ಸ್ನೇಕ್ ನಾಗರಾಜ್ ತಿಳಿಸಿದರು.























8 comments:

sunaath said...

ಮಲ್ಲಿಕಾರ್ಜುನ,
ಕಾಡುಪಾಪದ ಅತ್ಯಂತ ಸುಂದರ ಚಿತ್ರಗಳನ್ನು ಕೊಟ್ಟಿರುವಿರಿ. ನಿಮಗೆ ಧನ್ಯವಾದಗಳು. ಜೊತೆಗೆ ತುಂಬ ಉತ್ತಮ ಮಾಹಿತಿಯನ್ನು ಸಹ ಕೊಟ್ಟಿರುವಿರಿ. ನಿಮಗೆ ಮತ್ತೊಮ್ಮೆ ಧನ್ಯವಾದಗಳು.

ragat paradise said...

Very nice sir...

visit my blog www.ragat-paradise.blogspot.com

raghu

Rudramurthy said...

ಮಲ್ಲಿ ಸಾರ್,
ಬಹಳ ಸೊಗಸಾದ ಚಿತ್ರಗಳು ಹಾಗೆ ಬರಹ ಕೂಡ ಚೆನ್ನಾಗಿದೆ. ’ಬಿದಿರಮೇಗಳ ಚದುರೆ’ ಅಂದ್ರೆ ಏನು ಅಂತ ಇವತ್ತೆ ಗೊತ್ತಾಗಿದ್ದು!! ಹೋದ ವಾರ ಪ್ರಜಾವಾಣಿ ನಲ್ಲಿ ಕೂಡ ನಿಮ್ಮ ಈ ಚಿತ್ರ ಕಂಡಿದ್ದು ಖುಶಿ ಕೊಡ್ತು.

ಮಹಾಬಲಗಿರಿ ಭಟ್ಟ said...

chanda photokke uttama mahitiyanna kottiddeeri

shanyavaadagaLu

ದೀಪಸ್ಮಿತಾ said...

ಕಾಡುಪಾಪ ನಿಜಕ್ಕೂ ಪಾಪದ ಪ್ರಾಣಿ. ಇವುಗಳನ್ನೂ ಹಿಡಿದು ಕೊಲ್ಲುವ ಮನುಷ್ಯನಿಗೆ ಏನನ್ನಬೇಕು? ಎಲ್ಲಾ ಚಿತ್ರಗಳೂ ಚೆನ್ನಾಗಿ ಬಂದಿವೆ

Digwas Bellemane said...

nice shots....

ಸೀತಾರಾಮ. ಕೆ. / SITARAM.K said...

sundara chitragalu

Unknown said...

ತುಮಕೂರಿನ ಡಾಬಸಪೇಟೆನಲ್ಲಿ ರಾತ್ರಿ 2 ಗಂಟೆ ಸಮಯದಲ್ಲಿ ನನಗೆ ರಸ್ತೆಯಲ್ಲಿ ಕಾಣಿಸಿದೆ. ತುಮಕೂರಿನಲ್ಲಿ ಇದುವರೆವಿಗೂ ಇವುಗಳು ಇದ್ದದ್ದು ನಮಗೆ ತಿಳಿದೇ ಇರಲಿಲ್ಲ