Saturday, April 9, 2011

ಕನ್ನಮಂಗಲದ ಸರ್ಕಾರಿ ಶಾಲೆ - ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಹೆಚ್ಚಿಸಲು ಪ್ರಯತ್ನ


ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಬರೆದುಕೊಟ್ಟ ಸುದ್ಧಿ ಮುಖ್ಯಾಂಶಗಳನ್ನು ಓದುತ್ತಿರುವ ವಿದ್ಯಾರ್ಥಿ.


ಪ್ರಾರ್ಥನಾ ಸಮಯದಲ್ಲಿ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿನ ಮುಖ್ಯಾಂಶಗಳು ಮತ್ತು ಸುಭಾಷಿತಗಳನ್ನು ಓದುವುದು ಸಾಮಾನ್ಯ. ಈ ನಿಯಮ ಚಾಚು ತಪ್ಪದೇ ಪಾಲಿಸಲಾಗುತ್ತದೆ. ಆದರೆ ಇದಕ್ಕಿಂತ ಭಿನ್ನವಾದ ಪ್ರಯೋಗಗಳನ್ನು ಕೆಲ ಶಾಲೆಗಳು ಮಾಡುತ್ತವೆ. ಅಂಥವುಗಳಲ್ಲಿ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಂದು. ಸುದ್ದಿ ವಾಚನವಷ್ಟೇ ಮತ್ತು ಮಾಹಿತಿ ಸಂಗ್ರಹಣೆಯಷ್ಟೇ ಅಲ್ಲ, ಅದೇ ಸುದ್ದಿ-ಮಾಹಿತಿಯನ್ನು ಬಳಸಿಕೊಂಡು ಮಕ್ಕಳಲ್ಲಿ ಸಾಮಾನ್ಯಜ್ಞಾನ ಹೆಚ್ಚಿಸಲು ಶಾಲೆಯ ಶಿಕ್ಷಕರು ಪ್ರಯತ್ನ ನಡೆಸಿದ್ದಾರೆ.

ಪತ್ರಿಕೆಗಳು ಯಾವುದೇ ಪಠ್ಯಪುಸ್ತಕಕ್ಕಿಂತ ಹೆಚ್ಚಿನ ಮಾಹಿತಿ ನೀಡಬಲ್ಲವು. ಉಪಯುಕ್ತ ಆಗಬಲ್ಲವು. ಭಾಷೆಯ ಹಾಗೂ ಜ್ಞಾನದ ಬೆಳವಣಿಗೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳನ್ನು ಪರಿಶೀಲಿಸಲು ಅನುಕೂಲವಾಗಲಿದೆ. ಪ್ರಚಲಿತ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡುತ್ತದೆ. ಈ ಕಾರಣಕ್ಕಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತೇವೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.

ಶಾಲೆಯಲ್ಲಿ ಪ್ರಾರ್ಥನೆ ಪ್ರಕ್ರಿಯೆ ಆರಂಭಿಸುವ ಶಿಕ್ಷಕರು ಪತ್ರಿಕೆಗಳಿಂದ ಸುದ್ದಿ ಮುಖ್ಯಾಂಶಗಳನ್ನು ಆರಿಸಿಕೊಳ್ಳುತ್ತಾರೆ. ಮುಖ್ಯಾಂಶದ ಜೊತೆಗೆ ಸುದ್ದಿಯ ತಿರುಳನ್ನು ಪುಸ್ತಕವೊಂದರಲ್ಲಿ ಬರೆಯುತ್ತಾರೆ. ಪ್ರಾರ್ಥನೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅದನ್ನು ಓದುತ್ತಾರೆ. ಸುದ್ದಿಗೆ ಸಂಬಂಧಿಸಿದಂತೆ ಶಿಕ್ಷಕರು ಸಣ್ಣಪುಟ್ಟ ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ಪರೀಕ್ಷಿಸಲು ಶಿಕ್ಷಕರು ಸುದ್ದಿಗೆ ಸಂಬಂಧಿಸಿದ ಸರಳ ಪ್ರಶ್ನೆಗಳನ್ನು ಕೇಳುತ್ತಾರೆ. ವಿದ್ಯಾರ್ಥಿಗಳು ನೀಡುವ ಉತ್ತರದ ಮೇಲೆ ಸುದ್ದಿಯ ಗ್ರಹಿಕೆ ಅರಿವಿಗೆ ಬರುತ್ತದೆ.
ಈ ಪ್ರಕ್ರಿಯೆ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ಶಾಲೆಯ ಕಪ್ಪುಹಲಗೆಯ ಮೇಲೆ ಶಿಕ್ಷಕರು ಬರೆಯುವ ಸುದ್ದಿ ಮುಖ್ಯಾಂಶಗಳನ್ನು ಮತ್ತು ಸುಭಾಷಿತಗಳನ್ನು ವಿದ್ಯಾರ್ಥಿಗಳು ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ. ಒಂದು ವಾರದ ನಂತರ ಎಲ್ಲ ಸುದ್ದಿ-ಮಾಹಿತಿ ಆಧರಿಸಿ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುತ್ತದೆ.



ಶಾಲೆಯ ಕಪ್ಪು ಹಲಗೆಯ ಮೇಲೆ ಶಿಕ್ಷಕರೊಬ್ಬರು ಬರೆಯುತ್ತಿರುವ ಸುದ್ದಿ ಮತ್ತು ಸುಭಾಷಿತವನ್ನು ಬರೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು.

‘ನೀರಸ ಪ್ರಕ್ರಿಯೆ ರೂಪದಲ್ಲಿದ್ದ ಪತ್ರಿಕೆಗಳ ಓದುವಿಕೆಯನ್ನು ಅರ್ಥಪೂರ್ಣಗೊಳಿಸಲು ಪ್ರಯತ್ನಿಸಿದೆವು. ಪಠ್ಯಪುಸ್ತಕದ ಜೊತೆಗೆ ಸಾಮಾನ್ಯ ಜ್ಞಾನದ ಬಗ್ಗೆಯು ವಿದ್ಯಾರ್ಥಿಗಳು ಅರಿವು ಹೊಂದಿರಬೇಕು ಎಂಬುದು ನಮ್ಮ ಉದೇಶವಾಗಿತ್ತು. ಈ ಎಲ್ಲ ಚಟುವಟಿಕೆಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೂತನ ಪ್ರಯೋಗಳಲ್ಲಿ ಯಶಸ್ವಿಯಾಗಿದ್ದೇವೆ ಎಂಬ ಸಂತಸ ನಮಗಿದೆ’ ಎಂದು ಶಿಕ್ಷಕರು ತಿಳಿಸಿದರು.
‘ಶಾಲೆಯ ಮುಖ್ಯ ಶಿಕ್ಷಕರು ಸೇರಿದಂತೆ ಎಂಟು ಮಂದಿ ಸಹಶಿಕ್ಷಕರಿದ್ದೇವೆ. ನಾವು ‘ಪ್ರಜಾವಾಣಿ’ಯನ್ನು ನಿತ್ಯ ಓದುತ್ತೇವೆ. ಶಾಲೆಯ ಪ್ರದರ್ಶನ ಫಲಕದ ಮೇಲೆ ವಿಜ್ಞಾನ ವಿಶೇಷ, ಕರ್ನಾಟಕ ದರ್ಶನ, ಕೃಷಿ, ವೈಜ್ಞಾನಿಕಾ ವಿಸ್ಮಯದ, ಶೈಕ್ಷಣಿಕ ಮಹತ್ವದ ಲೇಖನದ ಪ್ರತಿಯನ್ನು ಅಂಟಿಸುತ್ತೇವೆ’ ಎಂದು ಅವರು ಹೇಳಿದರು.

4 comments:

sunaath said...

ಮಲ್ಲಿಕಾರ್ಜುನ,
ಪ್ರತಿ ಸಲವೂ ಹೊಸ ವಿಚಾರ ತಿಳಿಸುತ್ತ, ನಮಗೆ ಹೊಸ ಹೊಸ ಮಾಹಿತಿಯ ಜೊತೆಗೆ ಖುಶಿಯನ್ನು ಕೊಡುತ್ತಿರುವಿರಿ. ನಿಮಗೆ ಧನ್ಯವಾದಗಳು. ಜೊತೆಗೇ ಕನ್ನಮಂಗಲದ ಸರಕಾರಿ ಶಾಲೆಯ ಶಿಕ್ಷಕರಿಗೆ ಹಾಗು ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

Digwas Bellemane said...

ಶಿಕ್ಷಕರ ಪ್ರಯತ್ನ ಚೆನ್ನಾಗಿದೆ....ಅದನ್ನು ನಮಗೆ ಚಿತ್ರಸಹಿತ ತಿಳಿಸಿರುವ ನಿಮ್ಮ ಪ್ರಯತ್ನ ಇನ್ನೂ ಚೆನ್ನಾಗಿದೆ...ಧನ್ಯವಾದಗಳು

ಗಿರೀಶ್.ಎಸ್ said...

ಒಳ್ಳೆಯ ಪ್ರಯತ್ನ ಮತ್ತು ಅತಿ ಅವಶ್ಯವಾದಂಥಹ ಒಂದು ಕಾರ್ಯಕ್ರಮ

ದಿನಕರ ಮೊಗೇರ said...

ide tharada shikshakarU prayatnisali....

ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......