Tuesday, April 19, 2011

ವಾಹನಗಳ ಸಂಚಾರದಿಂದ ರಾಗಿ ಕಾಳು!


ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದ ಬಳಿ ರಸ್ತೆ ಮೇಲೆ ಹಾಕಿರುವ ರಾಗಿತೆನೆಗಳು.

ಡಿಸೆಂಬರ್-ಜನವರಿ-ಫೆಬ್ರುವರಿ ತಿಂಗಳುಗಳಲ್ಲಿ ದ್ವಿಚಕ್ರ ವಾಹನ ಸವಾರರು ರಸ್ತೆ ಮೇಲೆ ಹೋಗಲು ಆತಂಕಪಡುತ್ತಾರೆ. ಅವರಿಗೆ ಮಳೆಯ ಭಯವೂ ಇಲ್ಲ. ಬಿಸಿಲಿನ ಕಾಟವೂ ಇಲ್ಲ. ಆದರೆ ರಸ್ತೆಯುದ್ದಕ್ಕೂ ಹರಡಿದ ರಾಗಿ ತೆನೆಗಳು ಗಲಿಬಿಲಿಗೊಳಿಸುತ್ತವೆ. ಭಯ ಮೂಡಿಸುತ್ತವೆ.

ರಸ್ತೆಯಲ್ಲಿ ರಾಗಿ ಹಾಕಿದ್ದಾಗ ವಾಹನ ಚಾಲಕರು ತೆನೆ ಹರಡಿರುವುದು, ತಿರುವಿರುವುದು, ಗುಡ್ಡೆಹಾಕುವವರನ್ನು ಗಮನಿಸಿ ವಾಹನವನ್ನು ಚಲಿಸಬೇಕಾಗುತ್ತದೆ. ನಿಧಾನವಾಗಿ ಸಾಗಬೇಕು. ಬ್ರೇಕ್ ಹಾಕಿದರೆ ವಾಹನದ ಚಕ್ರಗಳು ಜಾರುವ ಸಂಭವವೇ ಹೆಚ್ಚು ಇರುತ್ತದೆ.

ರೈತರ ಜಮೀನಿನಲ್ಲಿದ್ದ ಕಣವು ರಸ್ತೆಗೆ ಬಂದದ್ದು ಹೇಗೆ ಎಂದು ತಿಳಿಯಲು ಪ್ರಯತ್ನಿಸಿದರೆ ಆಗುತ್ತಿರುವ ಸಾಮಾಜಿಕ ಬದಲಾವಣೆಯ ಸ್ಥೂಲ ಪರಿಚಯವೂ ಆಗುತ್ತದೆ.

’ಒಮ್ಮೆ ಕಣ ಮಾಡಲು ಸುಮಾರು ೧೦ ಸಾವಿರ ಲೀಟರ್ ನೀರು ಖರ್ಚಾಗುತ್ತದೆ. ಕನಿಷ್ಠ ೮ ರಿಂದ ೧೦ ಮಂದಿ ರೈತರು ಒಗ್ಗಟ್ಟಾಗಿ ಒಬ್ಬರ ಜಮೀನಿನಲ್ಲಿ ಜಾಗವನ್ನು ಆಯ್ದು ಕಣ ಸಿದ್ದಪಡಿಸಬೇಕು. ಅಲ್ಲಿರುವ ಕೂಳೆಯನ್ನು(ಗಿಡ ಗಂಟಿಗಳನ್ನು) ಚೆಕ್ಕಿ, ನೀರು ಹಾಕಿ ನೆನೆಸಿ, ಎತ್ತುಗಳ ಬಂತಿ ಕಟ್ಟಿ ತುಳಿಸಬೇಕು. ನಂತರ ಎಟ್ಟ ಹೊಡೆಸಿ ಸಮತಟ್ಟು ಮಾಡಬೇಕು. ಒಣಗಿದ ಮೇಲೆ ಸಗಣಿಯನ್ನು ತುಂಬೆ ಕುಚ್ಚಿನಿಂದ ಸಾರಿಸಿ ಆರಲು ಬಿಡಬೇಕು. ಆಗ ಕಣ ಸಿದ್ದವಾದಂತೆ. ಇನ್ನು ರಾಗಿ ಕಟ್ಟುಗಳನ್ನು ತಂದು ಗುಂಡು ಕಟ್ಟಿ ಹೊಡೆಯಬೇಕು’ ಎಂದು ರೈತರು ಕಣದ ಬಗ್ಗೆ ವಿವರಣೆ ನೀಡುತ್ತಾರೆ.


ಶಿಡ್ಲಘಟ್ಟ ತಾಲ್ಲೂಕಿನ ಹಳೇಹಳ್ಳಿ ಗ್ರಾಮದಲ್ಲಿ ಕಂಡು ಬಂದ ಕಣದಲ್ಲಿ ಎತ್ತಿಗೆ ಗುಂಡುಕಟ್ಟಿ ಕಾಳುಮಾಡುವ ದೃಶ್ಯ.

’ಆದರೆ ಈಗ ನೀರಿಲ್ಲ, ಎತ್ತುಗಳಿಲ್ಲ ಮತ್ತು ರೈತರಲ್ಲಿ ಒಗ್ಗಟ್ಟಿಲ್ಲ. ರಾಜಕೀಯವಾಗಿ ಗ್ರಾಮಗಳು ಒಡೆದಿವೆ. ರೈತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿವೆ. ಒಂದಾಗಿ ಕೆಲಸ ಮಾಡುವ ಒಗ್ಗಟ್ಟು ಕಳೆದುಕೊಂಡಿದ್ದೇವೆ. ೫೦ ರಿಂದ ೬೦ ಮೂಟೆಗೂ ಹೆಚ್ಚು ರಾಗಿ ಬೆಳೆಯುವವರು ಕಣ ಮಾಡಿಕೊಳ್ಳುತ್ತಾರೆ. ಬಡತನ ಮತ್ತು ಕಾರ್ಮಿಕರಿಗೆ ಹಣ ನೀಡಲಾಗದ ಕಾರಣ ರಾಗಿ ತೆನೆ ಕಣಗಳನ್ನು ರಸ್ತೆಯ ಮೇಲೆ ಮಾಡುತ್ತೇವೆ. ವಾಹನಗಳ ಸಂಚಾರದಿಂದ ರಾಗಿ ತೆನೆಗಳಿಂದ ಕಾಳುಗಳು ಹೊರಬರುತ್ತವೆ. ಅವುಗಳನ್ನು ನಾವು ಸಂಗ್ರಹಿಸುತ್ತೇವೆ’ ಎಂದು ಅವರು ಹೇಳುತ್ತಾರೆ.

‘ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ದೀರ್ಘ ಬಾಳಿಕೆಯ ಸರ್ವಋತು ಕಣಗಳನ್ನು ನಿರ್ಮಿಸಬಹುದು. ಇದರಿಂದ ರಸ್ತೆಕಣಗಳಿಂದ ಆಗುವ ಪ್ರಾಣಾಪಾಯಗಳನ್ನು ತಪ್ಪಿಸಬಹುದು. ಗ್ರಾಮಗಳ ಬಳಿ ಅಗಲವಾದ ಬಂಡೆಗಳಿದ್ದಲ್ಲಿ ಕಲ್ಲು ಒಡೆಯುವವರಿಂದ ಅದನ್ನು ಸಾರ್ವಕಾಲಿಕ ಕಣಗಳನ್ನಾಗಿ ಮಾರ್ಪಡಿಸಬಹುದು. ಈಗ ಡೀಸಲ್ ಚಾಲಿತ ಬೀಜ ಮಾಡುವ ಯಂತ್ರಗಳೂ ಬಂದಿವೆ. ಅದನ್ನು ಪಂಚಾಯಿತಿ ವತಿಯಿಂದ ತರಿಸಿ ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಿ ಕಾಳು ಮಾಡಿಕೊಳ್ಳಲು ಅನುವು ಮಾಡಿಕೊಡಬಹುದು’ ಎಂದು ವರದನಾಯಕನಹಳ್ಳಿಯ ರೈತ ಜಯರಾಂ ಪರ್ಯಾಯ ವ್ಯವಸ್ಥೆಯ ಬಗ್ಗೆ ತಿಳಿಸಿದರು.

3 comments:

sunaath said...

ಸವದತ್ತಿ, ರಾಮದುರ್ಗ ಊರುಗಳ ಸುತ್ತುಮುತ್ತಲೂ ಸಹ, ರೈತರು ತೆನೆಗಳಿಂದ ಕಾಳುಗಳನ್ನು ಬೇರ್ಪಡಿಸಲು, ಇದೇ ರೀತಿ ರಸ್ತೆಗಳ ಮೇಲೆ ಒಟ್ಟಿರುವದನ್ನು ನೋಡಿದ್ದೇನೆ. ರಸ್ತೆಯ ಹಾಗು ವಾಹನಚಕ್ರಗಳ ಎಲ್ಲ ಹೊಲಸು ಕಾಳುಗಳಲ್ಲಿ ಸೇರಿಕೊಳ್ಳುತ್ತದೆ. ಈ ಅಪರಾಧವನ್ನು ತಡೆಗಟ್ಟುವರು ಯಾರು? ನೀವು ಹೇಳಿದಂತೆ, ಪಂಚಾಯತಿಯವರು ಇದನ್ನು ನಿಲ್ಲಿಸಲು ಸಾಧ್ಯ.

ಗಿರೀಶ್.ಎಸ್ said...

ನಮ್ಮ ಊರಿನಲ್ಲೂ ಇದೆ ಕಥೆ,ಆದರೆ ಕೆಲವರು ಈಗಲೂ ಕೂಡ ಕಣ ಮಾಡುತ್ತಾರೆ.
ಆಧುನಿಕತೆಯ ಭರಾಟೆ ಮತ್ತು ಜನಗಳ ಸೋಮಾರಿತನ,
ಅಲ್ಲದೆ ಸಮಯ ಉಳಿಸುವ ಪ್ರಮೇಯವೂ ಇರಬಹುದು.
ನೀವು ಹೇಳಿದಂತೆ ರಾಜಕೀಯದಿಂದ ಹಳ್ಳಿಗಳು ಇಬ್ಬಾಗ ವಾಗುತ್ತಿರುವುದು ಸತ್ಯ.

ಕ್ಷಣ... ಚಿಂತನೆ... bhchandru said...

sir, samayochita lekhana..
dhanyavaadagalu