Saturday, April 2, 2011

ಧರೆಗಿಳಿದ ಕೈಲಾಸ

ಒಂದೊಂದೇ ಕಲ್ಲನ್ನು ಕೆತ್ತಿ ಜೋಡಿಸಿ ನಿರ್ಮಾಣವಾದ ದೇವಾಲಯವಲ್ಲ. ಬೆಲೆಬಾಳುವ ರತ್ನವನ್ನು ನಾಜೂಕಾಗಿ ಕೆತ್ತಿ ಆಭರಣ ತಯಾರಿಸಿದಂತೆ ಇಡೀ ಚಾರಂದ್ರಿ ಬೆಟ್ಟವನ್ನೇ ಕೊರೆದು ನಿರ್ಮಿಸಿರುವ ದೇವಾಲಯವಿದು. ಪ್ರಪಂಚದ ಏಕಶಿಲಾ ರಚನೆಗಳಲ್ಲೇ ಉತ್ಕೃಷ್ಟವಾದ ಇದು ಕೈಲಾಸನಾಥ ದೇವಾಲಯ. ಎಲ್ಲೋರದ ಈ ಕೈಲಾಸನಾಥ ದೇವಾಲಯವನ್ನು ಬೆಟ್ಟವನ್ನು ಮೇಲಿನಿಂದ ಕೆತ್ತುತ್ತಾ ತಳದವರೆಗೂ ಬಂದು ಕೈಲಾಸದ ರೂಪ ಕೊಟ್ಟಿರುವುದು ವಿಶೇಷ.



ಅಜಂತ ಚಿತ್ರಕಲೆಗೆ ಹೆಸರಾದಂತೆ ವಾಸ್ತುಶಿಲ್ಪಕ್ಕೆ ಹೆಸರಾದದ್ದು ಎಲ್ಲೋರ. ಮಹಾರಾಷ್ಟ್ರದಲ್ಲಿನ ಎಲ್ಲೋರದ ಬೆಟ್ಟದಲ್ಲಿ ೩೩ ಗುಹೆಗಳನ್ನು ಎರಡೂವರೆ ಕಿಮೀ ಉದ್ದ ಕೊರೆಯಲಾಗಿದ್ದು ಇಲ್ಲಿ ಬೌದ್ಧ, ಹಿಂದೂ ಹಾಗೂ ಜೈನ ಗುಹೆಗಳಿವೆ. ಕ್ರಿ.ಶ.೪೦೦ ರಿಂದ ೬೦೦ ರವರೆಗೂ ಬೌದ್ಧಗವಿಗಳನ್ನು, ೬೦೦ ರಿಂದ ೮೦೦ ರವರೆಗೂ ಹಿಂದೂ ಗುಹೆಗಳನ್ನು, ೮೦೦ರ ನಂತರ ಜೈನ ಗುಹೆಗಳನ್ನು ಕೊರೆಯಲಾಗಿದೆ. ಬೌದ್ಧ ಧರ್ಮದ ಅನಂತರ ಪ್ರಾಶಸ್ತ್ಯಕ್ಕೆ ಬಂದ ಶೈವಧರ್ಮದ ಪ್ರತೀಕವಾಗಿದೆ ಕೈಲಾಸನಾಥ ದೇವಾಲಯ.



ಕನ್ನಡಿಗರಾದ ರಾಷ್ಟ್ರಕೂಟರ ದೊರೆ ಮೊದಲನೆ ಕೃಷ್ಣ ಕಟ್ಟಿಸಿದ ಈ ದೇವಾಲಯದ ನಿರ್ಮಾಣದಲ್ಲಿ ನೂರಾರು ವಾಸ್ತು ಶಿಲ್ಪಿಗಳು ಮತ್ತು ಕಲಾವಿದರ ಶ್ರಮವಿದೆ. ಆಲಯದ ಶೈಲಿಯಲ್ಲಿ ದ್ರಾವಿಡ ಸಂಪ್ರದಾಯದ ಛಾಪು ಕಂಡುಬರುತ್ತದೆ. ಸುಮಾರು ೨೦೭ ಮೀ ಉದ್ದ ೩೬ ಮೀ ಅಗಲವಾದ ದೊಡ್ಡ ಬಂಡೆಯನ್ನು ಕಡೆದು ನಿರ್ಮಿಸಿರುವ ಎರಡಂತಸ್ತಿನ ರಚನೆಯಿದು. ಇದರಲ್ಲಿ ಪ್ರಧಾನ ಆಲಯ, ಕೈಸಾಲೆ, ನಂದಿಮಂಟಪ ಮತ್ತು ಗೋಪುರವಿದೆ. ಅತ್ಯುತ್ತಮ ಮೂರ್ತಿ ಶಿಲ್ಪಗಳು, ಅಲಂಕಾರಿಕ ಶಿಲ್ಪಗಳೂ ಇಲ್ಲಿವೆ.



ಈ ದೇವಾಲಯದ ಒಳಭಾಗದ ಉತ್ತಮ ಭಿತ್ತಚಿತ್ರಗಳಿದ್ದವು. ಈಗ ಅವುಗಳಲ್ಲಿ ಉಳಿದಿರುವುದು ಕೆಲವು ಮಾತ್ರ. ನಂದಿ ಮಂಟಪದ ಎರಡು ಭಾಗಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥಾನಕಗಳನ್ನು ಸುಂದರವಾಗಿ ಕೊರೆಯಲಾಗಿದೆ. ರಾವಣ ಕೈಲಾಸಪರ್ವತವನ್ನು ಎತ್ತುವ ಪ್ರಸಂಗದ ಶಿಲ್ಪ ಇಲ್ಲಿ ಅತ್ಯಂತ ಪ್ರಸಿದ್ಧ. ಶಿವಪಾರ್ವತಿಯರಿರುವ ಕೈಲಾಸ ಪರ್ವತವನ್ನು ರಾವಣನ ಪ್ರಯತ್ನದಿಂದ ಪರ್ವತ ಅಲುಗಾಡಿದಾಗ ಪರ್ವತವಾಸಿಗಳಲ್ಲಾಗುವ ಆತಂಕವನ್ನು ಶಿಲ್ಪದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.



ಕರ್ನಾಟಕದ ಮಳಖೇಡದಿಂದ ಆಳಿದ ಗರುಡಲಾಂಛನರಾದ ರಾಷ್ಟ್ರಕೂಟರು ಪಂಪ, ಪೊನ್ನರಂಥ ಕವಿಗಳನ್ನು ಪೋಷಿಸಿದವರು. ಕನ್ನಡದ ಕವಿರಾಜ ಮಾರ್ಗ ಕೃತಿಯೂ ಇವರ ಕಾಲದ್ದೇ. ಖ್ಯಾತ ಗಣಿತಕಾರ ಮಹಾವೀರಾಚಾರ್ಯ, ಸಂಸ್ಕೃತ ವ್ಯಾಕರಣಕಾರ ಶಾಕಟಾಯನ, ಜೈನ ವಿದ್ವಾಂಸ ಜಿನಸೇನ, ವೀರಸೇನ, ಗುಣಭದ್ರ ಇವರ ಕಾಲದವರು. ಎಲಿಫೆಂಟಾದ ಗುಹೆಗಳು, ಎಲ್ಲೋರದ ಕೈಲಾಸನಾಥ ದೇವಾಲಯ ಈ ಕನ್ನಡ ದೊರೆಗಳ ಉತ್ಕೃಷ್ಟ ಕೊಡುಗೆಯಾಗಿದೆ.

9 comments:

ಗಿರೀಶ್.ಎಸ್ said...

nice photos and information

ಸವಿಗನಸು said...

ಚೆನ್ನಾಗಿದೆ ವಿವರಣೆ ಮತ್ತು ಫೋಟೋಗಳು ಎರಡೂ ಸಹ.....
ಅಭಿನಂದನೆಗಳು....

sunaath said...

ಸುಂದರ ಚಿತ್ರಗಳಿಗಾಗಿ ಮತ್ತು ವಿವರಣೆಗಾಗಿ ಧನ್ಯವಾದಗಳು.

AntharangadaMaathugalu said...

ಮಲ್ಲಿ ಸಾರ್..
ತುಂಬಾ ಸುಂದರ ಚಿತ್ರಗಳು ಹಾಗು ವಿವರಣೆ....

ಶ್ಯಾಮಲ

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍, ಸುಂದರವಾದ ಚಿತ್ರಗಳು ಮತ್ತು ವಿವರಗಳ ಬರಹ. ಮತ್ತಷ್ಟು ಪ್ರವಾಸೀ ಕಥನಗಳನ್ನು ಕೊಡಿ.
ಧನ್ಯವಾದಗಳು.

Roopa said...

ಸುಂದರ ಚಿತ್ರಗಳು ಜೊತೆಗೆ ವಿವರಣೆ..
-ರೂpaश्री

ಸುಧೇಶ್ ಶೆಟ್ಟಿ said...

Adbhuthavaagidhe.. maharashtradalliye iruvudarinda ondu sala hogi baralE bEku :)

ಜಲನಯನ said...

ಮಲ್ಲಿ ಸುಂದರ ಚಿತ್ರಣಕ್ಕೆ ಮೆರುಗು ಕೊಟ್ಟ ನಿಮ್ಮ ವಿವರಣೆಗಳ ಲೇಖನ...

ಶಿವಪ್ರಕಾಶ್ said...

ಅದ್ಭುತ...!!!