ಶಿಡ್ಲಘಟ್ಟದ ಹೊರವಲಯದ್ಲಲಿ ಕಂಡು ಬಂದ ಹುಲ್ಲಿನ ಮೇಲಿನ ಜೇಡ ಮತ್ತು ಕಂಬಳಿಹುಳು.
ಒಂದೇ ಕಡ್ಡಿಯ ಮೇಲೆ ಎರಡು ಜೀವಿಗಳ ತೊಳಲಾಟಗಳು. ಒಂದು ತನ್ನ ಹೆಜ್ಜೆಯ ಜಾಡನ್ನು ತೋರಿಸದೇ ಮುನ್ನಡೆಯುತ್ತಿದ್ದರೆ, ಇನ್ನೊಂದು ಸಾವಿರ ಕಾಲುಗಳ ಬಲದಿಂದ ಅದನ್ನು ಹಿಂಬಾಲಿಸುತ್ತಿದೆ. ತನ್ನ ಪ್ರೀತಿಯ ಮೊಟ್ಟೆಗಳನ್ನು ಬಲೆಯಲ್ಲಿ ಹೆಣೆದುಕೊಂಡು ನಿಧಾನವಾಗಿ ಜೇಡ ಹೆಜ್ಜೆ ಹಾಕುತ್ತಿದ್ದರೆ, ಸಾವಿರ ಕಾಲುಗಳ ಕಂಬಳಿಹುಳು ಹಿಡಿದೇ ತೀರುತ್ತೇನೆ ಎಂಬಂತೆ ನಿಗಾ ವಹಿಸಿಕೊಂಡು ಸಾಗುತ್ತಿದೆ.
ಮೈಯೆಲ್ಲಾ ಹಸಿರು ಬಣ್ಣದಿಂದ ಕೂಡಿರುವ ಲಿಂಕ್ ಜಾತಿಯ ಜೇಡ ತನ್ನ ಮೊಟ್ಟೆಗಳಿಗೆ ಯಾವುದೇ ಅಪಾಯವಾಗದಿರಲಿ ಎಂದು ಬಲೆಯನ್ನು ನೇಯ್ದು ಉಂಡೆಯಂತೆ ಮಾಡಿಕೊಂಡಿದೆ. ಪ್ರಥಮ ನೋಟಕ್ಕೆ ಮೊಲದ ಹಿಕ್ಕೆಯಂತೆ ಕಾಣುವ ಉಂಡೆಯಲ್ಲಿ ಮೊಟ್ಟೆಗಳಿವೆ ಎಂದು ನಂಬಲು ಸಹ ಆಗುವುದಿಲ್ಲ. ನಿಧಾನವಾಗಿ ಯಾರಿಗೂ ಗೊತ್ತಾಗದ ಹಾಗೆ ಮೊಟ್ಟೆಗಳ ಕೋಶವನ್ನು ಯಾವುದಾದರೂ ಎಲೆಯ ಮರೆಯಲ್ಲಿ ಸೇರಿಸಿ ಜೋಪಾನ ಮಾಡುವ ತಾಯಿ ಕಾಳಜಿ ಅದರದ್ದು.
ಆದರೆ ಮತ್ತೊಂದೆಡೆ ಇಬ್ಬನಿಯಲ್ಲಿ ತೊಯ್ದ ಪುಟಾಣಿ ಕಂಬಳಿ ಹುಳು ಮೈಮೇಲಿರುವ ರೋಮಗಳನ್ನು ಬಿಸಿಲಿಗೆ ಒಡ್ಡಿ ಮೈ ಒಣಗಿಸಿಕೊಳ್ಳುತ್ತಾ ಆಹಾರದ ಹುಡುಕಾಟದಲ್ಲಿ ಮುನ್ನಡೆದಿದೆ. ಅದೇ ಹುಲ್ಲಿನ ಕಡ್ಡಿಯ ಮೇಲೆ ಅವಲಂಬಿತವಾಗಿರುವ ಕಂಬಳಿ ಹುಳು ಜೇಡನ ಹೆಜ್ಜೆ ಜಾಡು ಹುಡುಕುತ್ತ ಸಾಗಿದೆ ಎಂಬಂತೆ ಕಾಣಿಸುತ್ತದೆ.
ತಾಯಿ ಜೇಡ ಮೊಟ್ಟೆಗಳನ್ನು ಕಾಪಾಡಲು ಪ್ರಯತ್ನಿಸುತ್ತಿದ್ದರೆ ರೋಮಗಳ ಕಂಬಳಿಹುಳು ಎತ್ತರಕ್ಕೇರಲು ಪ್ರಯತ್ನಸುತ್ತಿದೆ.
ಎರಡು ಜೀವಿಗಳ ನಾಟಕಕ್ಕೆ ರಂಗಮಂದಿರವಾಗಿರುವ ಹುಲ್ಲಿನ ಕಡ್ಡಿ ಮತ್ತು ದೇವರ ಋಜುವಿನಂತಿರುವ ಎಳೆ ಹುಲ್ಲು ಅದರ ಮೇಲಿನ ಇಬ್ಬನಿ ಅದ್ಭುತ ಸೌಂದರ್ಯದ ದೃಶ್ಯವನ್ನಾಗಿಸಿದೆ.
ಹೆಣ್ಣು ಜೇಡ ಒಂದು ಬಾರಿಗೆ ನೂರಾರು ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳನ್ನಿಡುವುದಕ್ಕಾಗಿಯೇ ಅದು ರೇಷ್ಮೆಯ ಚೀಲವನ್ನು ತಯಾರಿಸುತ್ತದೆ.
ನಿಸರ್ಗದ ಅನಂತ ಕ್ಷಣಗಳಲ್ಲಿ ನಡೆಯುವ ದೃಶ್ಯಾವಳಿಗಳಲ್ಲಿ ಸೆರೆಸಿಕ್ಕ ಕೆಲ ಅಮೂರ್ತ ಕ್ಷಣಗಳಿವು.
ಹೆಣ್ಣು ಜೇಡ ತನ್ನ ಮುಂದಿನ ಸಂತತಿಯನ್ನು ರಕ್ಷಿಸಲು ಸಾಧ್ಯವಾಯಿತೆ? ಸಾವಿರ ರೋಮಗಳ ಕಂಬಳಿಹುಳು ತನ್ನನ್ನು ತಾನು ರಕ್ಷಿಸಿಕೊಂಡು ಗಮ್ಯ ತಲುಪಿತೆ? ಇವೆರಡರ ತೊಳಲಾಟಕ್ಕೆ ಸಾಕ್ಷಿಯಾದ ಹುಲ್ಲಿನ ಪಾತ್ರವೇನು? ಇಬ್ಬನಿಗಳ ಭಾಷೆಯನ್ನು ಓದುವವರ್ಯಾರು? ಮುಂತಾದ ಅನೇಕ ಪ್ರಶ್ನೆಗಳಿಗೆ ಉತ್ತರವೇ ಇಲ್ಲವೇನೊ. ಅರೆ ಕ್ಷಣದ ಸೌಂದರ್ಯವನ್ನು ಸವಿಯುವುದೇ ಪ್ರಕೃತಿ ನಮಗೆ ನೀಡುವ ವರದಾನ.
7 comments:
ತುಂಬ ರೋಮಾಂಚಕವಾದ ಚಿತ್ರಗಳು; ಅದ್ಭುತವಾದ ವಿವರಣೆ. ಅನೇಕ ಧನ್ಯವಾದಗಳು ನಿಮಗೆ!
ಅದ್ಭುತ...ಚೆನ್ನಾಗಿದೆ photos ಮತ್ತು ವಿವರಣೆ
ಅದ್ಭುತ ಚಿತ್ರಗಳು..
ಅಮೋಘ ಚಿತ್ರಗಳು....
ಮಲ್ಲಿಕಾರ್ಜುನ ಅವರೆ, ಬಹರ-ಚಿತ್ರಗಳೆರಡೂ ಚೆನ್ನಾಗಿದೆ.
ಧನ್ಯವಾದಗಳು.
ಚಿತ್ರ-ಲೇಖನ ತು೦ಬಾ ಚೆನ್ನಾಗಿ ಮೂಡಿ ಬ೦ದಿದೆ.
Superb photos and information!! I am waiting to get my hands on ur book..
Post a Comment