Tuesday, March 15, 2011

ಹಸಿರೆಲೆ ಮೇಲೆ ಏನಿದು ತಂತಾನ...



ನಿರ್ಜೀವ ಒಣ ಹುಲ್ಲಿನಲ್ಲಿ ಸಂಚಲನ ಕಾಣುವುದು ಕಷ್ಟ. ನಡೆದಾಡುವುದು ಕಾಣುವುದಂತೂ ಅಸಾಧ್ಯ. ಕಣ್ಣು ಮಿಟುಕಿಸಿದ ಕ್ಷಣ ಮಾತ್ರದಲ್ಲೇ ಒಣಹುಲ್ಲು ಅಲ್ಪಸ್ವಲ್ಪ ಮಿಸುಕಾಡಿದರೆ ಅದು ಅಚ್ಚರಿ. ಅಂತಹ ಒಂದು ಅಚ್ಚರಿ ಕಂಡು ಬಂದುದಷ್ಟೇ ಅಲ್ಲದೆ ಕ್ಷಣಕಾಲ ಕುತೂಹಲಕ್ಕೂ ಎಡೆಮಾಡಿಕೊಟ್ಟಿತು.
ಶಿಡ್ಲಘಟ್ಟದ ಗೌಡನಕೆರೆ ಅಂಚಿನಲ್ಲಿ ಒಣಹುಲ್ಲಿನಂತಿದ್ದ ಎರಡು ಕೀಟಗಳು ಯಾರಿಗೂ ತಿಳಿಯದ ಹಾಗೆ, ಸದ್ದು ಮಾಡದೇ ಪುಟ್ಟ ಎಲೆಯ ಮೇಲೆ ಹೆಜ್ಜೆ ಗುರುತು ಬಿಡದೇ ಸಂಚಲಿಸಿ ಬೆರಗು ಮೂಡಿಸಿದವು. ಒಣಹುಲ್ಲಿಗೂ ಜೀವ ಬಂತೇ ಎಂಬ ಪ್ರಶ್ನೆ ಕ್ಷಣ ಕಾಲ ಕಾಡುವಂತೆ ಮಾಡಿದವು.


ಶಿಡ್ಲಘಟ್ಟದ ಗೌಡನಕೆರೆ ಬಳಿ ಹಸಿರೆಲೆಯ ಮೇಲೆ ಕಾಣಿಸಿದ ಒಣಹುಲ್ಲಿನಂತೆ ಕಾಣುವ ಕಡ್ಡಿಗಳ ಜೋಡಿ.

"ಇಂಡಿಯನ್ ವಾಕಿಂಗ್ ಸ್ಟಿಕ್" ಎಂದು ಕರೆಯಲ್ಪಡುವ ಒಣಹುಲ್ಲಿನಂತಿರುವ ಕಾಣುವ ಕಡ್ಡಿ ಕೀಟಗಳು ತಮ್ಮ ಸಂತತಿಯನ್ನು ಈ ಪ್ರದೇಶದಲ್ಲಿ ಬೆಳೆಸಿಕೊಳ್ಳುತ್ತಿವೆ. ನಿಶಾಚರ ಜೀವಿಯಾದ ಈ ಹುಳುಗಳು ಹಗಲಿನಲ್ಲಿ ಸಂಚರಿಸುವುದು ತೀರ ಕಡಿಮೆ. ಕದಲದೆ ಒಂದೆಡೆ ನಿಲ್ಲುವುದರಿಂದ ಹುಲ್ಲೆಂದು ಮೋಸಹೋಗುವುದು ಸಹಜ. ರಾತ್ರಿ ವೇಳೆಯಲ್ಲಿ ಎಲೆ, ಹೂವಿನ ಎಸಳುಗಳನ್ನು ಆಹಾರವಾಗಿ ಸೇವಿಸುತ್ತದೆ.
ತೀರ ಹತ್ತಿರದಿಂದ ಗಮನಿಸಿದರೆ ಗರಗಸದಂತಹ ಕೈಗಳು, ಜಗಿಯಲು ಹಲ್ಲುಗಳು, ಉದ್ದದ ಕಾಲುಗಳು, ಸಂಯುಕ್ತ ಕಣ್ಣುಗಳನ್ನು ಕಾಣಬಹುದು. ವಿದೇಶಗಳಲ್ಲಿ ನಾಯಿ, ಬೆಕ್ಕು, ಮೀನುಗಳಂತೆ ಮನೆಗಳಲ್ಲಿ ಈ ಕೀಟವನ್ನು ಸಾಕುವ ಹವ್ಯಾಸವಿದೆ.



ಈ ಕೀಟಗಳಲ್ಲಿ ಹೆಚ್ಚಿನವು ಹೆಣ್ಣುಗಳೇ. ಗಂಡುಗಳು ತೀರಾ ಕಡಿಮೆ. ಸಂತಾನೋತ್ಪತ್ತಿಯು ಗಂಡಿನ ಅಗತ್ಯವಿಲ್ಲದೆಯೇ ಈ ಜೀವಿಯಲ್ಲಿ ನಡೆಯುತ್ತದೆ. ಕೀಟವು ಮೊಟ್ಟೆಯಿಂದ ಹೊರಬಂದ ಮೇಲೆ ಆರು ಹಂತದಲ್ಲಿ ಬೆಳೆದು ಪ್ರೌಢಾವಸ್ಥೆಯನ್ನು ತಲುಪುತ್ತದೆ. ಒಂದೊಂದು ಬಾರಿಯೂ ಅದು ಹಾವು ಕಳಚಿದಂತೆ ಪೊರೆ ಕಳಚುತ್ತಾ ಬೆಳೆಯುತ್ತದೆ. ಪ್ರೌಢಾವಸ್ಥೆ ತಲುಪಿದ ತಕ್ಷಣ ಮೊಟ್ಟೆಯಿಡಲು ಪ್ರಾರಂಭಿಸುತ್ತದೆ. ದಿನಕ್ಕೆ ೩ ಮೊಟ್ಟೆಗಳನ್ನಿಡುವ ಇವು ೪ ರಿಂದ ೫ ಇಂಚು ಉದ್ದವಿರುತ್ತದೆ. ಇವುಗಳ ಜೀವಿತಾವಧಿ ೬ ತಿಂಗಳಿನಿಂದ ಒಂದು ವರ್ಷ.
ನಮ್ಮ ಸುತ್ತ ಮುತ್ತ ಅನೇಕ ಕೀಟಗಳು, ಜೇಡಗಳು, ಪತಂಗ, ಚಿಟ್ಟೆ, ವನಸುಮಗಳು, ದುಂಬಿಗಳು ಜೀವಿಸುತ್ತಿರುತ್ತವೆ. ಅವುಗಳನ್ನು ನೋಡುವ, ತಿಳಿದುಕೊಳ್ಳುವ ಮತ್ತು ದಾಖಲಿಸುವ ಕುತೂಹಲ ಮನಸ್ಸು ಮೂಡಬೇಕು. ಮಕ್ಕಳಿಗೆ ಜೀವ ವೈವಿದ್ಯದ ಪರಿಚಯ ಪುಸ್ತಕದಲ್ಲಿ ತೋರಿಸಿಯಲ್ಲ ನೈಜವಾಗಿ ತೋರಿಸಿ ಆಸಕ್ತಿ ಮೂಡಿಸಬೇಕು. ಅಲ್ಲವೇ?

10 comments:

ಚಿತ್ರಾ said...

ಮಲ್ಲಿಕಾರ್ಜುನ್ ,

ವಾಹ್ , ಸೂಪರ್ ! ಈ ಕೀಟವನ್ನು ತುಂಬಾ ಸಲ ನೋಡಿದ್ದೀನಿ . ಆದರೆ , ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಅದು ಕಂಡ ಬಗೆ ಮಾತ್ರ ..... ಸೂಪರ್ ಕಣ್ರೀ.
ಒಳ್ಳೆಯ ಲೇಖನ !

ಅನಿಲ್ ಬೇಡಗೆ said...

ಮಲ್ಲಿ ಅಣ್ಣ,
ನಿಮ್ಮದು ಅದ್ರಷ್ಟವೆ ಅದರಷ್ಟ..
ನಿಮ್ಮಿಂದ ನಮಗೆ 'ಅರೆಕ್ಷಣದ ಅದರಷ್ಟ' :)

ಸುಮ said...

ವಾವ್! ಅದ್ಭುತ ಚಿತ್ರ . ತನ್ನ ವಾಸಸ್ಥಾನದ ಬಣ್ಣ ರೂಪವನ್ನೇ ಹೊಂದಿರುವ ಇಂತಹ ಅದೆಷ್ಟೊ ಜೀವಿಗಳು ವೈರಿಗಳ ಕಣ್ಣಿಂದ ತಪ್ಪಿಸಿಕೊಳ್ಳುತ್ತವೆ. ನಿಜಕ್ಕೂ ಪ್ರಕೃತಿ ವಿಸ್ಮಯಗಳ ಸಂತೆ

Dr.D.T.Krishna Murthy. said...

ಮಲ್ಲಿ ಸರ್;ಪ್ರಕೃತಿ ತನ್ನಲ್ಲಿ ಏನೆಲ್ಲಾ ವೈಚಿತ್ರ್ಯ ಗಳನ್ನು ಅಡಗಿಸಿಕೊಂಡಿದೆ!ನಿಜಕ್ಕೂ ಅದ್ಭುತ!ಮಾಹಿತಿಗೆ ಧನ್ಯವಾದಗಳು.

Kanthi said...

Very nice, few dayz back even I saw this insect near office, kept it in bottle, brought it to home and took few snaps.
BUt it is not as natural as this..:-(

ಕ್ಷಣ... ಚಿಂತನೆ... said...

ಸೂಪರ್! ಚಿತ್ರಗಳು

sunaath said...

ಬರಿ ಕಡ್ಡಿಗಳು ಎನಿಸುವ ಈ ಕೀಟಗಳ ಚಿತ್ರಗಳು ಅದ್ಭುತವಾಗಿವೆ. ಕೊನೆಯ ಚಿತ್ರವಂತೂ shake hand ಮಾಡುತ್ತಿರುವ ಮಾನವರ ರೇಖಾಚಿತ್ರದಂತಿದೆ. ಅವುಗಳ ಜೀವನಚಕ್ರದ ಬಗೆಗೆ ಓದಿ ವಿಸ್ಮಯವಾಯಿತು.
ಇದೆಲ್ಲಕ್ಕಾಗಿ ನಿಮಗೆ ಧನ್ಯವಾದಗಳು.

Soumya. Bhagwat said...

sir, ಮೊನ್ನೆ ಕನ್ನಡ ಸಮ್ಮೇಳನದಲ್ಲಿ (ಬೆಳಗಾವಿ) ನಿಮ್ಮ ಪುಸ್ತಕವನ್ನು ನೋಡಿದೆ. ತುಂಬಾ ಸಂತೋಷವಾಯ್ತು. ಕಡ್ಡಿ ಹುಳದ ಬಗ್ಗೇ ಅತಿ ಸುಂದರವಾದ ಲೇಖನ :)

ದೀಪಸ್ಮಿತಾ said...

ಪ್ರಕೃತಿಯಲ್ಲಿ ಏನೇನು ಇದೆಯೋ. ಈಗ ತಂತ್ರಜ್ಞಾನ (camera, computer) ಮೂಲಕ ಒಬ್ಬರು ಕಂಡಿದ್ದು ಜಗತ್ತಿನ ಬೇರೆಲ್ಲೆಡೆಯಲ್ಲೂ ತಿಳಿಸಬಹುದು, ತೋರಿಸಬಹುದು. ಉತ್ತಮ ಚಿತ್ರ ಲೇಖನ

ಸೀತಾರಾಮ. ಕೆ. / SITARAM.K said...

nice photos and info