Tuesday, January 18, 2011

ಉಣಿಸೆ ಮೀನಿಗಾಗಿ ಪಕ್ಷಿ, ಮನುಷ್ಯರ ಸ್ಪರ್ಧೆ - ಕೆಸರಿನಲ್ಲಿ ನಡೆಯುವ ಜುಗಲಬಂದಿ

ಅಗಲವಾದ ರಕ್ಕೆ ಬಿಚ್ಚಿಕೊಂಡು ಗಿಡುಗ ಆಹಾರಕ್ಕಾಗಿ ಅತ್ತ ಹೊಂಚು ಹಾಕುತ್ತಿದ್ದರೆ, ಇತ್ತ ಅದೇ ಆಹಾರಕ್ಕಾಗಿ ಕೆಲ ಮಂದಿ ಶ್ರಮಿಸುತ್ತಿದ್ದರು. ಅಹಾರ ತನಗೆ ಸಿಕ್ಕೀತು ಎಂದು ದೊಡ್ಡ ಸುತ್ತುಗಳನ್ನು ಹಾಕುತ್ತ ಗಿಡುಗ ನಿಗಾವಹಿಸಿದ್ದರೆ, ಇದ್ದಬದ್ದ ಎಲ್ಲವನ್ನೂ ಒಯ್ದುಬಿಡಬೇಕು ಎಂಬ ಉಮೇದು ಕೆಲ ಮಂದಿಯದ್ದು. ಆಹಾರ ಒಂದು, ಬೇಟೆಗಾರರು ಹಲವರು ಎಂಬಂತೆ ನಡೆದಿತ್ತು ಜುಗಲಬಂದಿ.

ಪಕ್ಷಿ ಮತ್ತು ಮನುಷ್ಯರ ನಡುವಿನ ಆಹಾರ ಸಂಘರ್ಷ ಕಂಡು ಬಂದದ್ದು ಶಿಡ್ಲಘಟ್ಟದ ಕೈವಾರ ರಸ್ತೆಯಲ್ಲಿರುವ ತಮ್ಮನಹಳ್ಳಿ ಕೆರೆಯ ಬಳಿ. ಆಹಾರದ ರೂಪದಲ್ಲಿ ಇದ್ದದ್ದು ಬೃಹತ್ ಪ್ರಾಣಿಯೇನಲ್ಲ, ಪುಟ್ಟ ಪುಟ್ಟ ಆಕಾರದ ‘ಉಣಿಸೆ ಮೀನು’.


ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಕೆರೆಯಲ್ಲಿ ಉಣಿಸೆ ಮೀನು ಹಿಡಿಯುತ್ತಿರುವ ಗ್ರಾಮಸ್ಥರು.

ಸಾಮಾನ್ಯವಾಗಿ ಕೆರೆಯಲ್ಲಿ ನೀರು ಕಡಿಮೆಯಾದಾಗ. ಅಳಿದುಳಿದ ಸ್ವಲ್ಪ ನೀರಿನಲ್ಲಿ ಉಣಿಸೆ ಮೀನು ಸಿಗುತ್ತವೆ. ನಾಟಿ ಮೀನುಗಳಲ್ಲಿಯೇ ಅತ್ಯಂತ ಸಣ್ಣ ಮೀನುಗಳು ಕೆರೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಚಿಮ್ಮತೊಡಗುತ್ತವೆ. ಈ ಒಂದು ಕ್ಷಣಕ್ಕಾಗಿ ಕಾಯುವ ನೀರು ಹಕ್ಕಿಗಳು ಮತ್ತು ಇತರ ಪಕ್ಷಿಗಳು ಗುಂಪುಗುಂಪಾಗಿ ಕೆರೆ ಬಳಿ ಬರುತ್ತವೆ. ಗ್ರಾಮಸ್ಥರು, ‘ಉಣಿಸಲೆದ್ದವೆ ಹಿಡಿಯೋಕೋಗೋಣ ಬರ್ರೋ’ ಎನ್ನುತ್ತಾ ಸಂಭ್ರಮದಿಂದ ಕೆರೆಗಳತ್ತ ಹೋಗುತ್ತಾರೆ. ಗದ್ದೆಗಳಲ್ಲಿ ಹಾಕುವ ರೀತಿ ಟಾಕುಗಳನ್ನು ಕೆರೆಯಲ್ಲಿ ಹಾಕಿ ಉಣಿಸೆ ಮೀನುಗಳನ್ನು ಹಿಡಿಯುತ್ತಾರೆ.


ಮೀನುಹಿಡಿಯಲು ಬಂದ ಬಿಳಿಗರುಡ.

ಉಣಿಸೆ ಮೀನುಗಳು ನೋಡಲಿಕ್ಕೂ ಚೆಂದ, ತಿನ್ನಲು ಸಹ ರುಚಿಕಟ್ಟು. ಆದರೆ ಅವುಗಳನ್ನು ಪಡೆಯಲು ಮೈಕೈ ಎಲ್ಲವೂ ಕೆಸರು ಮಾಡಿಕೊಳ್ಳಬೇಕು. ಗೊಜ್ಜು ಗೊಜ್ಜಾದ ನೀರಿನಲ್ಲಿ ಜರಡಿ ಹಿಡಿದು ಶೋಧಿಸಿ, ಕಪ್ಪೆ, ಏಡಿ ಮುಂತಾದವುಗಳನ್ನು ಬದಿಗಿರಿಸಿ, ಮಣ್ಣಿನಲ್ಲಿ ತೊಳೆದು ಶುದ್ಧೀಕರಿಸಿದಾಗ ಮೀನುಗಳು ಕೈಗೆ ಸಿಗುತ್ತವೆ. ಇಷ್ಟೆಲ್ಲ ಕಷ್ಟಪಟ್ಟು ಮೀನುಗಳನ್ನು ಕೆರೆಯಿಂದ ತೆಗೆದು ಪಕ್ಕಕ್ಕೆ ಇರಿಸಿದರೆ ಸಾಕು, ರೊಂಯ್ಯನೇ ಬರುವ ಗಿಡುಗಗಳು ತಮ್ಮ ಪಂಜದಲ್ಲಿ ಮೀನನ್ನು ಹಿಡಿದು ಹಾರಿಬಿಡುತ್ತವೆ. ಇಷ್ಟಕ್ಕೆ ತೃಪ್ತಿಪಡದ ಹದ್ದು ಮತ್ತು ಗಿಡುಗಗಳು ಹೊಂಚು ಹಾಕುತ್ತ ಆಕಾಶಪೂರ್ತಿ ಸುತ್ತುತ್ತ ಇರುತ್ತವೆ.

ಬೇಕಾದ ಮೀನುಗಳನ್ನು ಒಯ್ಯುವ ಜನರು ಕೆರೆಯಂಚಿನಲ್ಲಿ ಬೇಡದ ಮೀನುಗಳನ್ನು, ಕಪ್ಪೆಗಳನ್ನು, ಏಡಿಗಳನ್ನು ಎಸೆದು ಹೋಗುತ್ತಾರೆ. ಇದರಿಂದ ಕೆರೆ ಪರಿಸರ ಮಲಿನಗೊಳ್ಳುತ್ತದೆ. ಮತ್ತವೇ ಹದ್ದು ಮತ್ತು ಗಿಡುಗಗಳು ಬಂದು ಅವುಗಳನ್ನು ತಮ್ಮ ಪಂಜದಲ್ಲಿ ಹಿಡಿದುಕೊಂಡು ಆ ಸ್ಥಳದಿಂದ ದೂರದೂರಕ್ಕೆ ಹೋಗುತ್ತವೆ. ಇದನ್ನೆಲ್ಲ ನೋಡುವ ಜನರು, ‘ಹದ್ದುಗಳು ನಿಸರ್ಗದ ಪೌರ ಕಾರ್ಮಿಕರು’ ಎಂದು ತಮಾಷೆ ಕೂಡ ಮಾಡುತ್ತಾರೆ.


ಹಾರುವಾಗಲೇ ಕೆಳಗಿರುವ ಮೀನನ್ನು ಅಂದಾಜಿಸಿ ವೇಗ ಮತ್ತು ಗಾಳಿಯದಿಕ್ಕನ್ನು ಲೆಕ್ಕ ಹಾಕಿಕೊಂಡು ಮೀನನ್ನು ಹಿಡಿಯುವ ಗರುಡ.

‘ಉಣಿಸೆ ಮೀನಿನ ಸಾರು ರುಚಿಕಟ್ಟಾದದ್ದು. ಅತ್ಯಂತ ಸಣ್ಣದಾಗಿರುವ ಈ ಮೀನುಗಳನ್ನು ಬೂದಿ, ರಾಗಿ ಹಿಟ್ಟು, ಹುಣಸೆಹಣ್ಣು ಮತ್ತು ಉಪ್ಪಿನಲ್ಲಿ ಬಳಸಿ ಗುಡ್ಡೆ ಹಾಕಿಕೊಂಡು ತೊಳೆಯುತ್ತಾರೆ. ಕೆಲವರು ಗಟ್ಟಿಯಾಗಿ ಸಾರು ಮಾಡಿದರೆ, ಇನ್ನು ಕೆಲವರು ಬಸಿದು ಸಾರು (ಬಸ್ಸಾರು) ಮಾಡುತ್ತಾರೆ. ಜನ ಹೆಚ್ಚು ಇಷ್ಟಪಡುವುದು ರಾಗಿ ಮುದ್ದೆ ಮತ್ತು ತಂಗಳು ಸಾರು. ಈ ಮೀನುಗಳು ತಿನ್ನುವುದರಿಂದ ದೇಹಕ್ಕೆ ಪೌಷ್ಠಿಕತೆ ಸಿಗುತ್ತದೆ. ಮುಳ್ಳು ಚುಚ್ಚುವ ಭಯವಿರುವುದಿಲ್ಲ. ಆದರಿಂದ ಮಕ್ಕಳಿಂದ ಮುದುಕರವರೆಗೂ ಇದು ಉತ್ತಮ ಹಾಗೂ ರುಚಿಕಟ್ಟಾದ ಆಹಾರ’ ಎನ್ನುತ್ತಾರೆ ಪಾಕಪ್ರವೀಣರು.


ಹಾರುವ ಬಿಳಿಗರುಡನ ತೀಕ್ಷ್ಣ ನೋಟ.

‘ಉಣಿಸೆ ಮೀನು ನೋಡಿದರೆ, ಅನೇಕರ ಬಾಯಲ್ಲಿ ನೀರು ಒಸರುತ್ತದೆ. ಇದರ ರುಚಿ ತಿಳಿದವರು ಹಣಕ್ಕೆ ಪ್ರಾಮುಖ್ಯತೆ ನೀಡದೇ ಎಷ್ಟಾದರೂ ಕೊಳ್ಳುತ್ತಾರೆ. ನಮ್ಮ ಮನೆಗಾಗಿ ನಾವು ಇಲ್ಲಿ ಮೀನುಗಳನ್ನು ಹಿಡಿಯುತ್ತೇವೆ. ಆದರೆ ಇಲ್ಲಿ ಕೆಲವರು ಒಂದು ಕೆಜಿಗೆ ೨೫೦ ರೂಪಾಯಿಯಂತೆ ಮೀನುಗಳನ್ನು ಮಾರುತ್ತಾರೆ. ಕೆಸರಿನಲ್ಲಿ ಇಡೀ ದಿನ ನಿಂತು ಮೀನು ಹಿಡಿಯುವ ಶ್ರಮ ಮೀನುಸಾರು ತಿನ್ನುವಾಗ ಸಾರ್ಥಕವಾಯಿತು ಅನ್ನಿಸುತ್ತದೆ’ ಎಂದು ತಮ್ಮನಹಳ್ಳಿಯ ನಾರಾಯಣಸ್ವಾಮಿ ತಿಳಿಸಿದರು.
‘ಕೆರೆಗಳಲ್ಲಿ ನೀರು ನಿಲ್ಲದೇ ಬಟಾಬಯಲಾಗುತ್ತಿದೆ. ದೊಡ್ಡ ಮಾವಿನ ತೋಪುಗಳು, ಕೋಸು ಮುಂತಾದ ಬೆಳೆಗಳಿಗೆ ಸಿಂಪಡಿಸುವ ವಿಷಕಾರಿ ಕ್ರಿಮಿನಾಶಕ ಬಳಸಿದ ಪಂಪ್ ಮತ್ತು ಡ್ರಮ್‌ಗಳನ್ನು ಕೆರೆಯಲ್ಲಿ ತೊಳೆಯುತ್ತಾರೆ. ಲಾರಿ, ಟೆಂಪೋ ಮುಂತಾದ ದೊಡ್ಡ ವಾಹನಗಳನ್ನು ಕೆರೆಯಲ್ಲಿ ತೊಳೆದು ಡೀಸಲ್, ಆಯಿಲ್ ಕೆರೆಯ ನೀರಿಗೆ ಸೇರುತ್ತಿದೆ. ಔಷಧಿ ಸಿಂಪಡಿಸಿರುವ ಗಡ್ಡೆ ತರಕಾರಿಗಳನ್ನು ತೊಳೆಯಲು ರೈತರು ಕೆರೆಯನ್ನೇ ಅವಲಂಬಿಸುತ್ತಾರೆ. ಕೆರೆಯಲ್ಲಿ ಮೀನುಭಕ್ಷಕ ಮೀನುಸಾಕಾಣಿಕೆ ಮುಂತಾದ ಕಾರಣಗಳಿಂದ ಈಗ ಉಣಿಸೆ ಮೀನುಗಳು ಅಪರೂಪವಾಗುತ್ತಿವೆ. ಸ್ಥಳೀಯ ಮೀನುಗಳಲ್ಲಿ ಪ್ರಸಿದ್ಧವಾದ ಉಣಿಸೆ ಮೀನುಗಳನ್ನು ಉಳಿಸುವುದರಿಂದ ಕೆರೆಗಳ ಅಭಿವೃದ್ಧಿಯೂ ಆಗುತ್ತದೆ, ಇದರ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ಅವರು ತಿಳಿಸಿದರು.


ಬಿಳಿಗರುಡ ಪಕ್ಷಿಯ ಹರವಿಕೊಂಡ ರೆಕ್ಕೆಗಳ ಮೇಲಿನ ಚಿತ್ತಾರ ನೋಡಲು ಬಲು ಸುಂದರ.

2 comments: