‘ಸಿಲ್ಕ್’ ಮತ್ತು ‘ಮಿಲ್ಕ್’ಗೆ ಖ್ಯಾತಿ ಗಳಿಸಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾವಿರಾರು ಕುಟುಂಬಗಳು ರೇಷ್ಮೆ ಮತ್ತು ಹೈನುಗಾರಿಕೆ ಮೇಲೆ ಅವಲಂಬಿತವಾಗಿವೆ. ಹೈನುಗಾರಿಕೆ ಅಭಿವೃದ್ಧಿ ಮಾಡುವಲ್ಲಿ ಸಹಕಾರಿ ಸಂಘಗಳ ಪಾತ್ರವೂ ವಿಶೇಷ. ಕೆಲ ಸಹಕಾರಿ ಸಂಘಗಳು ಹೈನುಗಾರಿಕೆ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿದ್ದರೆ ಇನ್ನೂ ಕೆಲ ಸಂಘಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿವೆ.
ಆ ಕೆಲವೇ ಸಂಘಗಳಲ್ಲಿ ನಮ್ಮ ತಾಲ್ಲೂಕಿನ ವರದನಾಯಕನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘ ಕೂಡ ಒಂದು. ದೈನಂದಿನ ಚಟುವಟಿಕೆಗಳ ಜೊತೆಗೆ ಶಾಲಾ ಮಕ್ಕಳಿಗಾಗಿ ಹಾಲು ಪೂರೈಕೆ, ಗ್ರಾಮದಲ್ಲಿ ಬೀದಿದೀಪಗಳನ್ನು ಅಳವಡಿಸುವುದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಹಣಕಾಸು ನೆರವು ನೀಡುವುದು ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಗ್ರಾಮೀಣಾಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ.
"ಸಂಘ ಸ್ಥಾಪನೆಗೊಂಡು ೩೫ ವರ್ಷಗಳು ಕಳೆದಿವೆ. ೧೬ ಲೀಟರ್ ಹಾಲಿನ ಶೇಖರಣೆಯಿಂದ ಆರಂಭಗೊಂಡ ಸಂಘ ಈಗ ೮೦೦ ಲೀಟರಿನಷ್ಟು ಹಾಲನ್ನು ಪ್ರತಿ ದಿನ ಸಂಗ್ರಹಿಸುತ್ತಿದೆ. ಸಹಕಾರಿ ಸಂಘಗಳ ಲೆಕ್ಕ ಪರಿಶೋಧಕರಿಂದ ಪ್ರತಿ ವರ್ಷವೂ ‘ಬಿ’ ಗ್ರೇಡ್ ಪಡೆಯುತ್ತಿದ್ದೇವೆ. ಹಾಲಿನ ಅಳತೆ ನಿಖರವಾಗಿ ದಾಖಲಿಸಲು ಕಂಪ್ಯೂಟರೀಕೃತ ಅಳತೆ ವ್ಯವಸ್ಥೆ ಮಾಡಿದ್ದೇವೆ. ರಾಸುಗಳಿಗೆ ಆರೋಗ್ಯ ತಪಾಸಣೆ, ವೈದ್ಯರಿಂದ ಚಿಕಿತ್ಸೆ, ರಾಸುಗಳಿಗೆ ನೀಡಬೇಕಾದ ಪೌಷ್ಠಿಕ ಆಹಾರ ಹಾಗೂ ಪಾಲನೆ ಬಗ್ಗೆ ಕಾರ್ಯಗಾರ, ಪಶು ಆಹಾರ ಸರಬರಾಜು, ಮೇವಿನ ಬೀಜ ವಿತರಣೆ ಮತ್ತು ಶುದ್ಧ ಹಾಲು ನೀಡುವ ಗ್ರಾಹಕರನ್ನು ಗುರುತಿಸಿ ಬಹುಮಾನ ನೀಡುತ್ತೇವೆ" ಎಂದು ಸಂಘದ ಅಧ್ಯಕ್ಷ ವಿ.ಬಿ.ಅಮರನಾಥ್ ತಿಳಿಸಿದರು.
ಆರಂಭದಲ್ಲಿ ಚೀಮನಹಳ್ಳಿ ಹಾಗೂ ತಾತಹಳ್ಳಿಯಿಂದ ಉತ್ಪಾದಕರು ಬರುತ್ತಿದ್ದರು. ಈಗ ಅಲ್ಲೆಲ್ಲಾ ಸಹಕಾರ ಸಂಘಗಳು ಸ್ಥಾಪನೆಯಾದ್ದರಿಂದ ಕೇವಲ ವರದನಾಯಕನಹಳ್ಳಿಗೆ ಮಾತ್ರ ಈ ಸಂಘ ಸೀಮಿತವಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದಿದ ಈ ಸಂಘವು ಉಳಿತಾಯದ ರೂಪದಲ್ಲಿ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಜಮೆ ಮಾಡಿದ್ದು ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ.
"ಕಳೆದ ೮ ವರ್ಷಗಳಿಂದ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಬಿಸಿಯೂಟದ ಜೊತೆ ಮಜ್ಜಿಗೆಗಾಗಿ ಸಂಘದವರು ಹಾಲು ಒದಗಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳಂದು ಶಾಲಾ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದರ ಜೊತೆ ಬಡ ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿಗಳನ್ನು ವಿತರಿಸುತ್ತಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದರ ಜೊತೆಗೆ ಶಾಲೆಯ ಅಗತ್ಯಗಳಿಗೆ ಸ್ಪಂದಿಸುತ್ತಾರೆ" ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ವಿ.ವೆಂಕಟರೆಡ್ಡಿ ತಿಳಿಸುತ್ತಾರೆ.
"ಗ್ರಾಮದಲ್ಲಿ ಓಡಾಡಲು ಅನುಕೂಲವಾಗುವಂತೆ ಅಗತ್ಯವಾದ ಸಿಎಫ್ಎಲ್ ಬೀದಿ ದೀಪಗಳ ಅಳವಡಿಕೆ. ಆರ್ಥಿಕವಾಗಿ ಅಶಕ್ತ ಕುಟುಂಬದವರಿಗೆ ಅನಾರೋಗ್ಯ ಕಂಡು ಬಂದಾಗ ಅವರ ತುರ್ತು ಅಗತ್ಯಕ್ಕೆ ೨೦೦೦ ದಿಂದ ೪೦೦೦ ರೂಗಳವರೆಗೆ ನೆರವು ನೀಡುವುದರ ಜೊತೆಗೆ ಗ್ರಾಮದ ಜಾತ್ರೆ ಹಾಗೂ ಉತ್ಸವಗಳಿಗೆ ಸಂಘದವರು ಹಾಲು ಮತ್ತು ಮಜ್ಜಿಗೆ ವ್ಯವಸ್ಥೆ ಮಾಡುತ್ತಾರೆ. ಗ್ರಾಮದ ಜನಪದ ಕಲೆಗಳ ಪ್ರೋತ್ಸಾಹಕ್ಕಾಗಿ ನೆರವು ನೀಡುವರು. ಈ ಬಾರಿ ಶಾಲೆ ಹಾಗೂ ಎಲ್ಲ ಗ್ರಾಮಸ್ಥರೂ ಒಂದೇ ಸ್ಥಳದಲ್ಲಿ ರಾಷ್ಟ್ರೀಯ ಹಬ್ಬದಾಚರಣೆ ಮಾಡಬೇಕೆಂಬ ಉದ್ದೇಶದಿಂದ ಧ್ವಜ ಸ್ತಂಬ ಮತ್ತು ಕಲ್ಲಿನ ವೇದಿಕೆ ನಿರ್ಮಿಸುತ್ತಿದ್ದಾರೆ" ಎಂದು ಹೇಳುತ್ತಾರೆ ಗ್ರಾಮದ ಹಿರಿಯ ಗೋಪಾಲಪ್ಪ.
ಒಗ್ಗರಣೆ ಪತ್ರೊಡೆ
2 days ago
5 comments:
ಈ ಸಹಕಾರ ಸಂಘದ ಸೇವೆ ಶ್ಲಾಘನೀಯ.
ಸಂಘದವರ ಕಾರ್ಯ ಉಳಿದವರಿಗೆ ಒಂದು ಆದರ್ಶ !
ವರದನಾಯಕನಹಳ್ಳಿಯ ಸಂಘದ ಬಗ್ಗೆ ಓದಿ ಖುಷಿಯಾಯಿತು. ಆ ಹಳ್ಳಿಯವರು ಇನ್ನಷ್ಟು ಮತ್ತಷ್ಟು ಅಭಿವೃದ್ದಿಗೊಳ್ಳಲಿ ಎಂದು ಹಾರೈಸುವೆ.
ಮಲ್ಲಿ...ಮಾಹಿತಿ ಮಾದರಿಯಾಗಬಹುದು ಇಂತಹ ಹಲವು ಸಂಘಗಳಿಗೆ...ನಮ್ಮ ಊರಲ್ಲೂ ನನ್ನ ಪಿ.ಜಿ. ಮುಗಿದ ನಂತರ ಮೂರು ತಿಂಗಳು ಹಾಲಿನ ಗುಣಪರೀಕ್ಷಣೆಗೆ ನಾನು ಸಹಾಯ ಮಾಡುತ್ತಿದ್ದೆ, ಆಗ ತಿಳಿದದ್ದು...ಈ ಸಂಘಗಳು ಇಂತಹ ಹಲವಾರು ಸಮಾಜಸೇವಾ ಕಾರ್ಯಗಳನ್ನು ಮಾಡುತ್ತವೆಯೆಂದು...
mahitige dhanyavaadagalu. avara aadarsha ellarigu maadariyaagali.
Post a Comment