Thursday, November 11, 2010

ಕಾಡು ಹೂಗಳ ಕಾರುಬಾರು...


ಕ್ಯಾಸಿಯಾಮರ

ಶಿಡ್ಲಘಟ್ಟದ ಹೊರವಲಯದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರೇಷ್ಮೆ ವಿಸ್ತರಾಣಾಧಿಕಾರಿಗಳ ಕಚೇರಿ ಮುಂದೆ ಕ್ಯಾಸಿಯಾಮರ ಹಳದಿ ಬಣ್ಣದ ಹೂಗಳನ್ನು ಅರಳಿಸಿಕೊಂಡು ದಾರಿ ಹೋಕರ ಕಣ್ಮನ ತಣಿಸುತ್ತಿದೆ.
ಈ ಕಚೇರಿಯ ಆವರಣದಲ್ಲಿ ಎರಡು ಮರಗಳಿವೆ. ಟೆಕೋಮಾ ಅಥವಾ ಟಿಬೆಬುಯಾ ಎಂದು ಕರೆಯುವ ಮರ ಬೇಸಿಗೆಯಲ್ಲಿ ಯುಗಾದಿ ಹಬ್ಬದ ಸಮಯದಲ್ಲಿ ಎಲೆಯನ್ನೆಲ್ಲಾ ಉದುರಿಸಿಕೊಂಡು ಹಳದಿ ಹೂಗಳನ್ನು ಮರದ ತುಂಬಾ ಅರಳಿಸಿ ಕಂಗೊಳಿಸುತ್ತದೆ. ಇನ್ನೊಂದು ಮರವಾದ ಸೀಮೆ ತಂಗಡಿ ವಿಜಯದಶಮಿ ಸಮಯದಲ್ಲಿ ಮರದ ತುಂಬಾ ಹಳದಿ ಬಣ್ಣದ ಹೂವನ್ನು ಅರಳಿಸಿ ಹೊನ್ನಿನ ಹೂ ಚೆಲ್ಲುವಂತೆ ಭಾಸವಾಗುತ್ತದೆ.
ಮರದ ಕೆಳಗೆ ಬಿದ್ದ ಹೂವಿನಿಂದ ನೆಲವೆಲ್ಲ ಶೃಂಗಾರಗೊಂಡಿದೆ. ಮಳೆ ಕಡಿಮೆ ಇರುವ ಪ್ರದೇಶದಿಂದ ಮಳೆ ಹೆಚ್ಚು ಇರುವ ಪ್ರದೇಶಗಳಲ್ಲಿ ಬೆಳೆಯಬಲ್ಲ ಈ ಮರ ಸೌಂದರ್ಯದ ಪ್ರತೀಕವಾಗಿದೆ. ಆಂಗ್ಲ ಭಾಷೆಯಲ್ಲಿ ಕ್ಯಾಸಿಯಾ ಎಂದು ಕರೆಯುವ ಇದರ ದಟ್ಟ ಹಳದಿ ಬಣ್ಣದ ಚಿಕ್ಕ ಹೂಗಳು ಆಕರ್ಷಕವಾಗಿವೆ. ಹೂದಾನಿಯಲ್ಲಿ ಸಿಂಗರಿಸಿಟ್ಟರೆ ವಾರಕ್ಕೂ ಹೆಚ್ಚು ಕಾಲ ಬಾಡುವುದಿಲ್ಲ.
ತಂಗಡಿ, ಸೀಮೆತಂಗಡಿ ಮತ್ತು ಕಕ್ಕೆ ಗಿಡಗಳ ಹೂಗಳು ಒಂದೇ ರೀತಿಯಿದ್ದರೂ ಎಲ್ಲವೂ ಬೇರೆ ಬೇರೆ. ಸೌಂದರ್ಯವಷ್ಟೇ ಅಲ್ಲದೆ ಆಯುರ್ವೇದದ ಔಷಧಿ ತಯಾರಿಕೆಯಲ್ಲೂ ಇದರ ಹೂ, ಎಲೆ ಹಾಗೂ ತೊಗಟೆ ಬಳಕೆಗೆ ಬರುತ್ತದೆ.


ಅರಳಿರುವ ಕಾಡು ತುಂಬೆ ಹೂಗಳು.

ಶಿಡ್ಲಘಟ್ಟದ ಹೊರವಲಯದಲ್ಲಿ ಅಮ್ಮನಕೆರೆ ಏರಿಯ ಮೇಲೆ ರಸ್ತೆಯ ಎರಡೂ ಬದಿಯಲ್ಲಿ ಕೆಂಪು ಕೆಂಪಾದ ಪುಟ್ಟ ಪುಟ್ಟ ಹೂಗಳು ಅರಳಿ ಪ್ರಯಾಣಿಗರ ಕಣ್ಮನ ತಣಿಸುತ್ತಿವೆ. ಇಷ್ಟು ದಿನ ಕಳೆ ಗಿಡಗಳಂತೆ ಕಂಡುಬರುತ್ತಿದ್ದ ಗಿಡಗಳಲ್ಲಿ ಈಗ ಹೂಗಳು ಅರಳಿ ಹಸಿರಿನ ಹಿನ್ನೆಲೆಯಲ್ಲಿ ಆಕರ್ಷಕವಾಗಿ ಕಾಣುತ್ತಿದೆ.


ಕಾಡು ತುಂಬೆ ಹೂ

ಪಿ.ಲಂಕೇಶರ "ಕೆಂಪಾದವೋ ಎಲ್ಲ ಕೆಂಪಾದವೋ..." ಹಾಡಿನ ಸಾಲುಗಳನ್ನು ನೆನೆಪಿಸುವಂತೆ ಅರಳಿರುವ ಈ ಹೂವನ್ನು "ಕಾಡು ತುಂಬೆ", "ಹಾಲು ಬಳ್ಳಿ" ಎಂದು ಕರೆಯುವರು. ಇಂಗ್ಲೀಷಿನಲ್ಲಿ ಇದನ್ನು ರೆಡ್ ಸ್ಟಾರ್ ಗ್ಲೋರಿ ಎನ್ನುತ್ತಾರೆ. ಸುಮಾರು ೩ ರಿಂದ ೪ ಸೆಮೀ ಉದದ ಕೆಂಪು ಹೂಗಳಿಂದ ಹಳದಿ ಬಣ್ಣದ ಪರಾಗರೇಣುಗಳು ಹೊರಬಂದು ಅತ್ಯಂತ ಸುಂದರವಾಗಿರುತ್ತವೆ. ಉತ್ತರ ಮೆಕ್ಸಿಕೋ ಮತ್ತು ಅರಿಜೋನಾ ಮೂಲದ ಈ ಸಸ್ಯ ಈಗ ಭಾರದ್ದೇ ಆಗಿಹೋಗಿದೆ. ಸಾಧಾರಣವಾಗಿ ಮಳೆ ಮುಗಿಯುವ ಸಮಯದಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೂ ಈ ಹೂಗಳು ಅರಳುತ್ತವೆ. ಈ ಹೂಗಳನ್ನು ಕಂಡು ರೈತರು ಮಳೆ ಮುಗಿಯಿತೇ ಎಂದು ಆತಂಕ ಅನುಭವಿಸುವಂತಾಗಿದೆ.



ಈ ಹೂವಿನ ಜತೆಯಲ್ಲೇ ತಂಗಡಿ, ದತ್ತೂರಿ, ಮುಟ್ಟಿದರೆ ಮುನಿ, ಲಾಂಟಾನಾ, ಮಾರ್ನಿಂಗ್ ಗ್ಲೋರಿ, ತುಂಬೆ, ಸಿಲ್ವರ್ ಕಾಕ್ಸ್‌ಕೂಂಬ್, ಉತ್ತರಂಗಿ ಮುಂತಾದ ಹೂಗಳೂ ಅಲ್ಲಲ್ಲಿ ಅರಳಿರುವುದರಿಂದ ನಾನಾ ವಿಧದ ಬಣ್ಣ ಬಣ್ಣದ ಚಿಟ್ಟೆಗಳು ಮಕರಂದ ಹೀರಲು ಹಾರಾಡುತ್ತಿರುತ್ತವೆ.


ಮಾರ್ನಿಂಗ್ ಗ್ಲೋರಿ


ಉತ್ತರಂಗಿ



ಈ ಬೆಡಗಿನ ಸಿರಿಗಳು ಕೇವಲ ಕೆಲ ದಿನಗಳು ಮಾತ್ರ ಅರಳಿ ತಮ್ಮ ಚೆಲುವಿನಿಂದ ನೋಡುಗರ ಮನತಣಿಸಿ ಅನೇಕ ಚಿಟ್ಟೆ ಹಾಗೂ ದುಂಬಿಗಳ ಹೊಟ್ಟೆಯನ್ನೂ ತುಂಬಿಸಿ ತಾವು ಬಂದ ಕೆಲಸ ಮುಗಿಯಿತೆಂಬಂತೆ ಮಾಯವಾಗುತ್ತವೆ.


ಮುಟ್ಟಿದರೆ ಮುನಿ



ಮೊದಲು ಪ್ರತಿ ಮನೆಯ ಹಿಂದೆ ಅಥವಾ ಮುಂದೆ ಹೂದೋಟವಿದ್ದೇ ಇರುತ್ತಿತ್ತು. ಇಂಥಹ ಹೂ ಬಳ್ಳಿಗಳನ್ನು ಬೇಲಿಗೆ ಹಬ್ಬಿಸುತ್ತಿದ್ದರು. ಮನೆಗೆ ಸುಂದರ ವಾತಾವರಣವನ್ನು ಇವು ಕಲ್ಪಿಸುತ್ತಿದ್ದವು. ಆದರೆ ಆಧುನಿಕತೆ ಬೆಳೆದಂತೆ ಮನೆ ಮುಂದಿನ ಆವರಣದಲ್ಲಿ ಇಂಥ ಕಾಡು ಹೂ ಬಳ್ಳಿ ಕಾಣೆಯಾಗುತ್ತಿವೆ. ಮುಡಿಗೇರದೆ ಗುಡಿಸೇರದೆ ತನ್ನಷ್ಟಕ್ಕೆ ತಾನರಳಿ ಅಳಿದುಹೋಗುವ ಈ ಸುಂದರ ಸುಮಗಳನ್ನು ಸ್ಪರ್ಷಿಸುವ ಅದೃಷ್ಟ ಪಾತರಗಿತ್ತಿಗಳಂತೆ ನಮ್ಮ ಕಣ್ಣಿಗೂ ಇರಲಿ.


ತುಂಬೆ


ಹಳದಿ ಕಾಡುತುಂಬೆಹೂ



ತಂಗಡಿ

7 comments:

ಮಹೇಶ ಭಟ್ಟ said...

ಮುಟ್ಟಿದರೆ ಮುನಿ ಹೂ.. ಎಷ್ಟೊಂದು ಸುಂದರವಾಗಿವೆ.. ಇನ್ನೂ ತನಕ ಲಕ್ಷ್ಯ ವಹಿಸಿರಲಿಲ್ಲ

sunaath said...

ಮಲ್ಲಿಕಾರ್ಜುನ,
ಬೇಂದ್ರೆಯವರು ’ಪಾತರಗಿತ್ತಿ ಪಕ್ಕ’ ಕವನದಲ್ಲಿ ವರ್ಣಿಸಿದ ತುಂಬಿ ಹೂವನ್ನು ನಿಮ್ಮ blogನಲ್ಲಿ ಇವತ್ತು ನೋಡಿ ಪುಳಕಿತನಾದೆ. ಈ ಎಲ್ಲ ಚಿತ್ರಗಳಿಗಾಗಿ ಧನ್ಯವಾದಗಳು.
ಕ್ಯಾಸಿಯಾ ಹೂವಿನ ಹತ್ತಿರದ ಚಿತ್ರ ಕೊಟ್ಟಿದ್ದರೆ ಇನ್ನ್ನೂ ಚೆನ್ನಾಗಿರುತ್ತಿತ್ತು.

balasubramanya said...

ನಿಮ್ಮಿಂದ ಸುಂದರ ಶಿಡ್ಲಘಟ್ಟ ಊರಿನ ದರ್ಶನವಾಗುತಿದೆ.ಹೂಗಳ ಚಿತ್ರಗಳಂತೂ ಮನಸೂರೆಗೊಂಡಿವೆ .ತುಂಬೆ, ಮುಟ್ಟಿದರೆ ಮುನಿ,ಹಲವಾರು ಹೂಗಳು ನನ್ನ ಹಳ್ಳಿಯ ಜೀವನ ಹಾಗೂ ಇಂತಹ ಸುಂದರ ಹೂಗಳ ಜೊತೆ ಬೆಳೆದ ನೆನಪು ಮೂಡಿಸಿದವು.ಭೇಷ್

Dr.D.T.Krishna Murthy. said...

ನಿಮ್ಮ ಲೇಖನ ಓದಿದ ಮೇಲೆ ನಿಜಕ್ಕೂ ನಾವು ಕಣ್ಣು ತೆರೆದುಕೊಂಡು ಓಡಾಡುತ್ತೇವೆಯೇ ಎನ್ನುವ ಅನುಮಾನ ಬರುತ್ತಿದೆ.ನಮ್ಮ ಸುತ್ತ ಮುತ್ತ ಎಷ್ಟೊಂದು ಸುಂದರ ಪುಷ್ಪಗಳು!ನೋಡುವ ಕಣ್ಣುಗಳು ಬೇಕಷ್ಟೇ.ಸುಂದರ ಚಿತ್ರಗಳು ಮತ್ತು ಉಪಯುಕ್ತ ಮಾಹಿತಿಗೆ ಧನ್ಯವಾದಗಳು.
ನಮಸ್ಕಾರ.ನನ್ನ ಬ್ಲಾಗಿಗೂ ಭೇಟಿ ಕೊಡಿ.

ಸೀತಾರಾಮ. ಕೆ. / SITARAM.K said...

ಅದ್ಭುತವಾದ ಹೂಗಳ ಚಿತ್ರಗಳು. ಕಾದು ತುಂಬೆ ಹೂವಿನ ಗಿಡ ನಮ್ಮ ಮನೆಯ೦ಗಳದಲ್ಲಿದೆ.

Soumya. Bhagwat said...

tumba sundaravaada kaadu hoogalu ..:)

nenapina sanchy inda said...

Oh!!! Lovely capture.
Also now i know the kannada names of most of the flowers
:-)
malathi S