ನಮ್ಮ ಜಿಲ್ಲೆಯಲ್ಲಿ ಕೊಳವೆಬಾವಿಗಳು ಸಾವಿರ ಅಡಿ ಆಳಕ್ಕೆ ಹೋದರೂ ನೀರು ಸಿಗುವುದಿಲ್ಲ. ಹರಸಾಹಸಪಟ್ಟರೂ ಒಂದು ಹನಿ ನೀರು ದೊರೆಯುವುದಿಲ್ಲ. ಕಪಿಲೆ, ಏತ, ಗೂಡೆ ಹಾಕುವುದು, ಪರ್ಷಿಯನ್ ವೀಲ್ ಮುಂತಾದವುಗಳು ಒಂದರ್ಥದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಆದರೆ ನೀರು ಸಿಗುವುದಿಲ್ಲ ಎಂದು ಬೇಸತ್ತು ಕುಳಿತ ರೈತರಿಗೆ ಆಶಾಕಿರಣ ಎಂಬಂತೆ ಏತ ನೀರಾವರಿ ಕೃಷಿ ಕ್ಷೇತ್ರದಲ್ಲಿ ನಿಧಾನವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದೆ.
ಇದಕ್ಕೆ ಅಪ್ಪಟ ಉದಾಹರಣೆ, ಶ್ನಮ್ಮ ಊರು ಶಿಡ್ಲಘಟ್ಟದ ಹೊರವಲಯ ಅಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಮುಕ್ಕಾಲು ಎಕರೆ ಜಮೀನಿನಲ್ಲಿ ಸಹೋದರರು ಸದ್ಬಳಕೆ ಮಾಡುತ್ತಿರುವ ಏತ ನೀರಾವರಿ ಯೋಜನೆ. ಏತ ನೀರಾವರಿಯನ್ನು ವಿಶಿಷ್ಟ ರೀತಿಯಲ್ಲಿ ಬಳಕೆ ಮಾಡುವ ಅವರು ತರಕಾರಿ ಬೆಳೆಗಳನ್ನು ಬೆಳೆಸುತ್ತಾರೆ.
ಕೆರೆಯ ಇನ್ನೊಂದು ಬದಿಯಲ್ಲಿರುವ ಜಮೀನಿಗೆ ಮಧ್ಯೆ ಹಾದು ಹೋಗುವ ರಸ್ತೆಯ ಕೆಳಗಿನಿಂದ ತೂಬಿನ ಮೂಲಕ ಇವರ ಜಮೀನಿಗೆ ನೀರು ಬರುತ್ತದೆ. ಏತವನ್ನು ಬಳಸಿ ಇವರು ಜಮೀನಿಗೆ ನೀರು ಕಟ್ಟುತ್ತಾರೆ.
‘ಸಾಮಾನ್ಯವಾಗಿ ನಾವು ಬೀಟ್ರೂಟ್ ಬೆಳೆಯುತ್ತೇವೆ. ವರ್ಷಕ್ಕೆ ಮೂರು ಬೆಳೆ ತೆಗೆಯುತ್ತೇವೆ. ಬೆಳಿಗ್ಗೆ ೬ ಗಂಟೆಗೆ ನೀರೆತ್ತಲು ಪ್ರಾರಂಭಿಸಿದರೆ ಮಧ್ಯಾಹ್ನ ೨ ಗಂಟೆಯವರೆಗೆ ಮುಂದುವರೆಯುತ್ತದೆ. ನೀರಿನ ಹರಿವು ಕಡಿಮೆಯಿದ್ದರೆ ಸಂಜೆ ೬ ಗಂಟೆಯಾಗುತ್ತದೆ. ವಾರದಲ್ಲಿ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಹರಿಸುತ್ತೇವೆ. ಬೇಸಿಗೆಯಲ್ಲಿ ನೀರು ಇರುವುದಿಲ್ಲ. ಗಾಳಿಯ ಕಾಲದಲ್ಲೂ ಕಷ್ಟ. ನೀರು ಆವಿಯಾಗುತ್ತದೆ. ಗಿಡಗಂಟೆಗಳು ಬೆಳೆದು ಕಾಲುವೆಗಳಲ್ಲಿ ನೀರು ಹರಿಯದಿದ್ದಾಗ ಗಿಡಗಳನ್ನೆಲ್ಲಾ ಸವರುತ್ತೇವೆ. ಅಲ್ಲಿ ಹಾವುಗಳು ಸೇರಿಕೊಂಡಿರುತ್ತವೆ’ ಎಂದು ತಮ್ಮ ಕೆಲಸವನ್ನು ಬಣ್ಣಿಸುವ ಕಿರಿಯ ಸಹೋದರ ಮುನಿರಾಜ ಏತ ನೀರಾವರಿ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ.
‘ಇದು ನಮ್ಮ ತಾತನ ಕಾಲದಿಂದಲೂ ಬಂದ ಬಳುವಳಿ. ನೀರಾವರಿಗೆಂದೇ ನಾವು ಜನರೇಟರ್ ಬಳಸಬಹುದು. ಆದರೆ ನಮಗೆ ನಮ್ಮ ಸ್ವಶಕ್ತಿ ಮೇಲೆ ನಂಬಿಕೆಯಿದೆ. ಸ್ವಾಭಿನಾಮ ಮತ್ತು ಸ್ವಶಕ್ತಿಯಿಂದ ಬದುಕುವ ಇರಾದೆ ಹೊಂದಿರುವ ನಮಗೆ ಏತ ನೀರಾವರಿಯಿಂದ ತುಂಬ ಸಹಾಯವಾಗುತ್ತಿದೆ’ ಎನ್ನುತ್ತಾರೆ ಹಿರಿಯ ಸಹೋದರ ಮಂಜುನಾಥ್.
‘ಆಗಾಗ್ಗೆ ಅಮ್ಮ ಹೇಳುತ್ತಿರುತ್ತಾರೆ. ಆಗ ನೀರೆತ್ತುವ ಬಾನೆ ದೊಡ್ಡದಿತ್ತು, ಒಬ್ಬ ಮಹಿಳೆ ಒತ್ತುಕೊಟ್ಟರೆ ಇನ್ನೊಬ್ಬ ಮಹಿಳೆ ನೀರೆತ್ತುವ ಕೆಲಸ ಮಾಡುತ್ತಿದ್ದರಂತೆ. ಪುರುಷರದು ನೀರು ಕಟ್ಟುವ ಕೆಲಸ. ಆಗ ನೀರೂ ಚೆನ್ನಾಗಿತ್ತು ಮನುಷ್ಯರೂ ಗಟ್ಟಿಮುಟ್ಟಾಗಿದ್ದರು. ಈಗ ಎರಡೂ ಇಲ್ಲ ಎಂದು ಕೆಲವೊಮ್ಮೆ ಅವರು ಬೇಸರ ವ್ಯಕ್ತಪಡಿಸುತ್ತಾರೆ’ ಎಂದು ಅವರು ಹೇಳಿದರು.
ಏತದ ಮೂಲಕ ಮೇಲೆ ಬರುವ ನೀರಿನ ಪ್ರಮಾಣ ಕೊಳವೆ ಬಾವಿಗಳಿಗಿಂದ ಕಡಿಮೆ. ಆದರೆ ಮೇಲೆ ಬಂದ ನೀರು ಪೋಲಾಗದೆ ಉಪಯೋಗವಾಗುತ್ತದೆ. ಈ ಯಂತ್ರಗಳಿಂದ ಬರುವ ಸ್ವಲ್ಪ ಪ್ರಮಾಣದ ನೀರನ್ನು ಕಟ್ಟುವವನು ಪೋಲಾಗದಂತೆ ಮಡಾಯಿಗಳನ್ನು ತಿರುವಲು ಸಾಧ್ಯವಾಗುತ್ತದೆ’ ಎಂದು ಹೇಳುವ ಅವರು ನೀರಿನ ಉಳಿತಾಯದ ಬಗ್ಗೆಯೂ ಮಾತನಾಡುತ್ತಾರೆ.
11 comments:
ಏತ ಅ೦ದ ಕೂಡಲೇ ನೆನಪಾಯ್ತು, ನಮ್ಮ ಊರಲ್ಲಿಯೂ ಈ ಪದ್ಧತಿ ಅನುಸರಿಸಿ ನಾವು ಗಿಡಗಳಿಗೆ ನೀರುಣಿಸುತ್ತಿದ್ದೆವು, ಒ೦ದಾನೊ೦ದು ಕಾಲದಲ್ಲಿ, ಸುಮಾರು 30 ವರುಷಗಳ ಹಿಂದೆ. ಚಿತ್ರ-ಬರಹ ಚೆನ್ನಾಗಿದೆ.
ಚಿತ್ರ, ಲೇಖನಗಳೆರಡೂ ಅತ್ಯಂತ ಸೊಗಸಾಗಿದೆ. ಈಗಲೂ ಏತ ನೀರಾವರಿ ಇದೆ ಉಳಿದುಕೊಂಡಿದೆ ಎನ್ನುವುದೇ ವಿಸ್ಮಯಕರ. ಅಲ್ಲಿಗೊಮ್ಮೆ ಭೇಟಿ ಕೊಟ್ಟು ನೋಡಬೇಕೆಂದೆನಿಸುತ್ತದೆ..
ಯಂತ್ರಗಳ ಮೇಲೆ ಅವಲಂಬಿಸದೆ, ಸಾಂಪ್ರದಾಯಕ ಪದ್ಧತಿಯನ್ನು ಅನುಸರಿಸುವ ಈ ಸೋದರರಿಗೆ ಶಹಭಾಸ್!
ಅವರ ಯತ್ನವನ್ನು ನಮಗೆ ತೋರಿಸಿದ ನಿಮಗೆ ಧನ್ಯವಾದಗಳು.
ಏತ ನೋಡಿ ಬಾಲ್ಯ ನೆನಪಾಯಿತು.
ನಾನು ಚಿಕ್ಕವಳಿದ್ದಾಗ ನಮ್ಮನೆ ಪಕ್ಕ ಇದ್ದ ಏತದಲ್ಲಿ ಹಾರಾಡ್ತಾ ಇದ್ದುದ್ದು ನೆನಪಾಯ್ತು!
Hats off to those brothers and you too..:-)
ಮಲ್ಲಿ ಬಹಳ ನೈಸರ್ಗಿಕ ನಿಮ್ಮ ಚಿತ್ರಣ...ಏತ ನಾನು ಆಡಿಸಿಲ್ಲ ಆದ್ರೆ ನಮ್ಮ ತೋಟದ ಪಕ್ಕ (ಎಚ್ ಕ್ರಾಸ್ ಹತ್ತಿರದ ಚಿಕ್ಕೊಂಡಹಳ್ಳಿ) ನಾಗಪ್ಪ ಅನ್ನೋರ ಏತ ನೋಡ್ತಾ ಇರ್ತಿದ್ದೆ ....
ಅಂದಹಾಗೆ ನಿಮ್ಮನ್ನು ಮತ್ತೆ ಕಾಣಲು ಆಗಲೇ ಇಲ್ಲ...ಆಗಸ್ಟ್ ೨೨ ರ ನಂತರ...
ಮಲ್ಲಿಕಾರ್ಜುನ ಸಾರ್ ಎಟ ದ ಬಗ್ಗೆ ಬ್ಲಾಗ್ ನಲ್ಲಿ ಬರೆದು ನನ್ನ ಬಾಲ್ಯದ ನೆನಪು ಕೆದಕಿದ್ದೀರಿ.ನಾನು ಸಹ ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ಇಂತಹ ಯೆತಗಳನ್ನು ನೋಡಿದ್ದೇ. ಹಾಗು ಇದರಿಂದ ನೀರನ್ನು ಸಹ ಕುತೂಹಲಕ್ಕಾಗಿ ಎತ್ತಿದ್ದೆ.ತುಂಬಾ ಶ್ರಮದ ಕೆಲಸ . ಹಾಗೆ ಪರ್ಷಿಯನ್ ವೀಲ್ ನಲ್ಲಿ ನೀರು ಯೆತ್ತುವುದನ್ನೂ ಸಹ ನೋಡಿದ್ದೇ. ನಿಮ್ಮ ಬರಹ ಚೆನ್ನಾಗಿದೆ. ಥ್ಯಾಂಕ್ಸ್.ಹಾಗೆ ನಾನಾ ಮತ್ತೊಂದು ಬ್ಲಾಗ್ ಶ್ರೀ ರಂಗ ಪಟ್ಟಣದ ಸ್ಮಾರಕ ಗಳ ಬಗ್ಗೆ ನಿರ್ಮಿಸಿದ್ದೇನೆ" ಕಾವೇರಿ ರಂಗ " http://shwethadri.blogspot.com ಗೆ ಭೇಟಿಕೊಡಿ ನಿಮ್ಮ ಅನಿಸಿಕೆ ತಿಳಿಸಿ.
ಮಲ್ಲಿ ಸರ್,
ಏತ ನೀರಾವರಿ ಈಗ ಪ್ರಸ್ತುತದಲ್ಲಿಲ್ಲ..... ಅದರ ಬಗ್ಗೆ ಬರೆದು ಅದರ ಬಗ್ಗೆ ಮಾಹಿತಿ ಕೂಡ ಕೊಟ್ಟೀದ್ದೀರಾ..... ಧನ್ಯವಾದ....
ಮಲ್ಲಿಕಾರ್ಜುನ್ ಸರ್,
ಅಪರೂಪದ ಮತ್ತು ಸುಂದರ ಚಿತ್ರ........
ಈಗಿನ ಕಾಲದಲ್ಲಿ ಶ್ರಮವಿಲ್ಲದೆ ಕೆಲಸವಾಗುವ ಕೊಳವೆಬಾವಿಗಳ ಮುಂದೆ ಶ್ರಮ ಬಯಸುವ ಏತವೆಲ್ಲಿ ಉಳಿದೀತು? ಆದರೂ ಇಂತಹ ಸಮಯದಲ್ಲೂ ಸ್ವ ಶ್ರಮವನ್ನೇ ನಂಬಿದ ಆ ಸಹೋದರರನ್ನು ಮೆಚ್ಚಲೇಬೇಕು.
ನಮ್ಮ ಹಳ್ಳಿಯಲ್ಲಿ ಏತ ಇರಲೇ ಇಲ್ಲ ನಾನು ಹುಟ್ಟಿದ ಸಮಯದಲ್ಲಿ :) ಆದರೆ ಇತ್ತೀಚಿಗೆ ತುಳು ಸಮ್ಮೇಳನದಲ್ಲಿ ರೂಪಿಸಿದ ತುಳು ಗ್ರಾಮದಲ್ಲಿ ಏತ ಕ೦ಡು ಕುಶಿಯಾಗಿತ್ತು!
ಚ೦ದದ ಬರಹ ಸರ್..
ಏತ means
Post a Comment