Thursday, September 9, 2010

ನೆನಪಿನ ಗಣಿ ಈ ತುಂಬುಗೆನ್ನೆಯ ದೀಪ . . . !

ನಮ್ಮ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಇತರೆ ಪುಟ್ಟ ಮಕ್ಕಳೊಂದಿಗೆ ಒಂದು ಮಗು ತನ್ನ ವಿಶೇಷ ನೆನಪಿನ ಶಕ್ತಿಯಿಂದ ಗಮನ ಸೆಳೆಯುತ್ತಿದೆ. ಆ ಮಗುವಿನ ಹೆಸರು ದೀಪ. ದೀಪ ಜ್ಞಾನದ ಅನ್ವರ್ಥವೂ ಹೌದು. ಅಂತೆಯೇ ಈ ೪ ವರ್ಷದ ಮಗುವಿನ ಜ್ಞಾನದಾಹವೂ ವಿಶಿಷ್ಟವಾದುದು.


ಕನ್ನಮಂಗಲದ ಅಂಗನವಾಡಿ ಕೇಂದ್ರದಲ್ಲಿ ಓದುತ್ತಿರುವ ದೀಪಾ.

ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು? ಷಟ್ಪದಿಯ ಬ್ರಹ್ಮ ಯಾರು? ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು? ನಮಗೆ ಸ್ವಾತಂತ್ರ್ಯ ಬಂದ ವರ್ಷ ಯಾವುದು? ಭೂಮಿಗೆ ಗುರುತ್ವಾಕರ್ಷಣ ಬಲ ಇದೆ ಎಂದು ಕಂಡು ಹಿಡಿದವರು ಯಾರು? ಮುಂತಾದ ಪ್ರಶ್ನೆಗಳಿಗೆ ಕಾಲೇಜು ಓದಿರುವ ಯುವಕರೇ ಉತ್ತರ ಕೊಡಲು ತೊದಲುವಾಗ, ಈ ಹುಡುಗಿ ಯಾವುದೇ ಭಯವಿಲ್ಲದೇ ಇಂಥಹ ೫೦-೬೦ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರ ನೀಡುತ್ತಾಳೆ.
ಹೀಗೆ ಈ ಮಗುವಿನ ನೆನಪಿನ ಶಕ್ತಿಯನ್ನು ಸಮರ್ಥವಾಗಿ ಉಪಯೋಗಿಸಲು ತರಬೇತಿ ನೀಡುತ್ತಿರುವವರು ಆಶಾ ಕಾರ್ಯಕರ್ತೆಯಾಗಿರುವ ದೀಪಳ ಅಮ್ಮ ವೆಂಕಟಲಕ್ಷ್ಮಮ್ಮ ಹಾಗೂ ವೈರ್ಮನ್ ಆಗಿರುವ ಅಪ್ಪ ಎಂ.ರಾಮಕೃಷ್ಣಪ್ಪ. ಇವರಿಬ್ಬರೂ ಶೈಕ್ಷಣಿಕವಾಗಿ ಪದವೀಧರರಾಗಿದ್ದು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.
"ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧಿಸಿ ಒಳ್ಳೆಯ ಕೆಲಸ ಪಡೆಯುವ ಆಸೆಯಿತ್ತು. ಆದರೆ ಕಾರಣಾಂತರಗಳಿಂದ ಈ ಆಸೆ ಈಡೇರಲಿಲ್ಲ. ಹೀಗಾಗಿ ನನ್ನ ಆಸೆಯನ್ನು ಮಗಳು ಈಡೇರಿಸಬಹುದೇ ಎಂಬ ಆಸೆಯಿದೆ. ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಭವಿಷ್ಯದಲ್ಲಿ ಐ.ಎ.ಎಸ್ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಲಿ" ಎನ್ನುವ ವೆಂಕಟಲಕ್ಷ್ಮಮ್ಮ ತಾಯಿಯೇ ಮೊದಲ ಗುರು ಎಂಬಂತೆ ತನ್ನ ಮಗಳಿಗೆ ಕತೆಗಳೊಂದಿಗೆ ಸಾಮಾನ್ಯ ಜ್ಞಾನದ ವಿಚಾರಗಳನ್ನು ಧಾರೆಯೆರೆಯುತ್ತಿದ್ದಾರೆ.ತನ್ನ ತಂದೆ ತಾಯಿಯೊಂದಿಗೆ ದೀಪಾ.

ವಿವಿಧ ವೇದಿಕೆಗಳಲ್ಲಿ ಈ ಮಗು ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹಲವಾರು ಗಣ್ಯರ ಪ್ರಶಂಸೆಗೆ ಕೂಡ ಪಾತ್ರವಾಗಿದೆ. ಸ್ನೇಹ ಯುವಕರ ಸಂಘ ಹಾಗೂ ಸ.ಹಿ.ಪ್ರಾ.ಶಾಲೆ ಕನ್ನಮಂಗಲ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೭ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತನ್ನ ನೆನಪಿನ ಶಕ್ತಿಯ ಪ್ರದರ್ಶನದ ಮೂಲಕ ಸಾಹಿತಿ ಹರಿಹರಪ್ರಿಯ, ಮಾಜಿ ಸಚಿವ ಹಾಗೂ ಶಾಸಕ ವಿ.ಮುನಿಯಪ್ಪ, ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ನಿವೃತ್ತ ಉಪನಿರ್ದೇಶಕ ಸಿ.ಬಿ. ಹನುಮಂತಪ್ಪ ಅವರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.
"ಈ ಮಗುವಿನ ರೀತಿ ಎಲ್ಲ ಮಕ್ಕಳಲ್ಲಿಯೂ ಯಾವುದೋ ಒಂದು ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಹೊರತರಲು ಪೋಷಕರು ಸಹಕಾರ ನೀಡಬೇಕು" ಎಂದು ಅಂಗನವಾಡಿ ಕಾರ್ಯಕರ್ತೆಯಾದ ಎನ್. ಪದ್ಮಾವತಿ ತಿಳಿಸುತ್ತಾರೆ. ದೀಪ ಶಿಶುಗೀತೆ, ಕಥೆ ಹಾಗೂ ನೃತ್ಯದಂತಹ ಚಟುವಟಿಕೆಗಳಲ್ಲೂ ಉತ್ಸಾಹದಿಂದ ಭಾಗವಹಿಸುತ್ತಾಳೆ ಎಂದು ಇವರು ಗುರುತಿಸಿದ್ದಾರೆ.
"ಇಂಥಹ ಮಕ್ಕಳ ಪ್ರತಿಭೆಯನ್ನು ಸರ್ಕಾರ ಹಾಗೂ ಸಮುದಾಯ ಗುರುತಿಸಿ ಪುರಸ್ಕರಿಸಿ ಪ್ರೋತ್ಸಾಹಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳು ಹೆಚ್ಚೆಚ್ಚು ಹೊರಹೊಮ್ಮುತ್ತವೆ" ಎಂದು ಅಭಿಪ್ರಾಯಪಡುತ್ತಾರೆ ಕನ್ನಮಂಗಲ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ಎಸ್.ಕಲಾಧರ್.

10 comments:

ದಿನಕರ ಮೊಗೇರ.. said...

ಮಲ್ಲಿಕಾರ್ಜುನ್ ಸರ್,
ಹಳ್ಳಿಯಲ್ಲಿ ಇಂಥಹ ಎಷ್ಟೊಂದು ಪ್ರತಿಭೆಗಳು ಇರಬಹುದೇನೋ... ಅವರಲ್ಲಿ ಒಬ್ಬರನ್ನು ನಮಗೆ ಪರಿಚಯ ಮಾಡಿ ಕೊಟ್ಟಿದೀರಾ ಧನ್ಯವಾದ ಸರ್....

sunaath said...

ತೆರೆಯ ಮರೆಯಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತರುವ ನಿಮ್ಮ ಪ್ರಯತ್ನ ಪ್ರಶಂಸನೀಯ.

ತೇಜಸ್ವಿನಿ ಹೆಗಡೆ said...

ಪರಿಚಯಿಸಿದ್ದಕ್ಕೆ ಧನ್ಯವಾದ. ದೀಪದಂತೇ ತಾನೂ ಬೆಳಗಿ ಇತರರಿಗೂ ಬೆಳಕ ತೋರುವ ಉತ್ತಮ ಹಾಗೂ ಉಜ್ವಲ ಭವಿಷ್ಯ ಈ ಪುಟ್ಟಿಯದ್ದಾಗಲೆಂದು ಹಾರೈಸುವೆ.

nimmolagobba said...

ಈ ಮಗುವಿನ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಥ್ಯಾಂಕ್ಸ್. ಈ ಮಗುವಿನ ಭವಿಷ್ಯ ಉಜ್ವಲ ವಾಗಿರಲಿ ಜ್ಞಾನ ಜ್ಯೋತಿ ನಿರಂತರ ಬೆಳಗಲಿ ಎಂದು ಹಾರೈಸುತ್ತೇನೆ.

ಸಂದೀಪ್ ಕಾಮತ್ said...

ತುಂಬಾ ಖುಷಿಯಾಯ್ತು ದೀಪಾಳ ಬಗ್ಗೆ ಓದಿ.

ದೀಪಸ್ಮಿತಾ said...

ಎಲೆಮರೆಯ ಕಾಯಿಯಂತೆ ಇಂಥಾ ಪ್ರತಿಭೆಗಳು ಎಷ್ಟಿವೆಯೊ. ಪರಿಚಯಿಸಿದ್ದಕ್ಕೆ ಧನ್ಯವಾದಗಳು

AntharangadaMaathugalu said...

ಪುಟ್ಟ ದೀಪಾಳ ಪರಿಚಯ ತುಂಬಾ ಚೆನ್ನಾಗಿದೆ....

ಶ್ಯಾಮಲ

HEBBAR'S PICTURES said...

ಅವೆಷ್ಟು ಇಂತಹ ಪ್ರತಿಭೆಗಳು ಇದ್ದಾವೋ !!!
Thanx DGM

ಸಾಗರದಾಚೆಯ ಇಂಚರ said...

salute to that talent

ಸೀತಾರಾಮ. ಕೆ. / SITARAM.K said...

ದೀಪಾಳಂಥ ಪ್ರತಿಭೆಯನ್ನ ಪರಿಚಯಿಸಿದ್ದಕ್ಕೆ ಧನ್ಯವಾದಗಳು.