Saturday, April 3, 2010

ತೊಗಲು ಗೊಂಬೆಯಾಟ




ಬಾಗೇಪಲ್ಲಿ ತಾಲ್ಲೂಕಿನ ತಿಮ್ಮಪಲ್ಲಿಯಿಂದ ಬಂದಿರುವ ಶಿಂದೆ ರಾಮಮೂರ್ತಿ(೯೯೮೦೯೮೦೩೮೩) ತನ್ನ ಟಿಲ್ಲರಿನಲ್ಲಿ ತೊಗಲು ಗೊಂಬೆಯಾಟದ ಪರಿಕರಗಳನ್ನು ಹೊತ್ತು ತಂದು ವರದನಾಯಕನಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾನೆ. ಮಳೆಗಾಲ ಬಿಟ್ಟರೆ ವರ್ಷ ಪೂರ ಅಲೆಮಾರಿಯಾಗಿ ಈತ ಸುತ್ತುತ್ತಿರುತ್ತಾನೆ. ಸರ್ಕಾರದ ಕರಕುಶಲಕಲೆಯ ಮುಖ್ಯ ಕಚೇರಿಯಿಂದ ಈತನಿಗೆ ಗುರಿತಿನ ಪತ್ರ ನೀಡಿದ್ದಾರೆ. ತೆಲುಗು ಭಾಷೆಯಲ್ಲಿ ರಾಮಾಯಣದಲ್ಲಿ ಬರುವ ಸುಂದರ ಖಾಂಡ, ಮೈರಾವಣ ಚರಿತ್ರೆ, ಸತಿ ಸುಲೋಚನಾ, ಲಕ್ಷ್ಮಣ ಮೂರ್ಚೆ ಪ್ರಸಂಗ ಇತ್ಯಾದಿ ಕಥೆಗಳನ್ನು ಆಡಿಸುವರು.

ತಬಲಾ, ಹಾರ್ಮೋನಿಯಂ, ಮೈಕ್ ಮತ್ತು ಆರು ಜನ ಸದಸ್ಯರುಗಳ ತಂಡ ಈ ಪ್ರದರ್ಶನ ನೀಡುವರು. ಪ್ರತಿ ಪ್ರದರ್ಶನಕ್ಕೆ ೪೦೦೦ ರೂ ಪಡೆಯುವ ಇವರು ಬರಿಯ ಆಟದಿಂದ ಬದುಕು ಸಾಗುವುದು ಕಷ್ಟವೆಂದು ಈಗೀಗ ಚಿಕ್ಕ ಆಕಾರದ ತೊಗಲು ಗೊಂಬೆಗಳನ್ನು ಮಾಡಿ ನಗರಗಳಲ್ಲಿ ೨೦೦ ರೂಗಳಂತೆ ಮಾರಾಟಮಾಡುತ್ತಿರುವರು. ವಿದೇಶೀಯರು ಹೆಚ್ಚಾಗಿ ಇವನ್ನು ಖರೀದಿಸುವರು.





ಕರ್ನಾಟಕದ ಗೊಂಬೆಯಾಟದ ಪ್ರಕಾರಗಳಲ್ಲಿ ತೊಗಲು ಗೊಂಬೆಗೆ ವಿಶಿಷ್ಟ ಸ್ಥಾನವಿದೆ. ಇದು “ಸಿಳ್ಳೆಕ್ಯಾತ” ಎಂಬ ಜನರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿರುವ ಉದ್ಯೋಗಿ ಕಲೆ. ಈ ಸಿಳ್ಳೆಕ್ಯಾತ ಅಥವಾ ಕಿಳ್ಳೆಕ್ಯಾತ ಜನಾಂಗ ಮೂಲತಃ ರತ್ನಗಿರಿ ಜಿಲ್ಲೆಗೆ ಸೇರಿದವರು. ಇವರು ಮರಾಠಿ ಮಿಶ್ರಿತ ತೆಲುಗು ಅಥವಾ ಕನ್ನಡ ಮಾತನಾಡುತ್ತಾರೆ. ತೊಗಲು ಗೊಂಬೆಯಾಡಿಸುವವರನ್ನು ಕಿಳ್ಳೆಕ್ಯಾತರು, ಸಿಳ್ಳೆಕ್ಯಾತರು, ಗೊಂಬೆರಾಮರು, ಗೊಂಬೆಯೋರು ಎಂಬ ಹಲವಾರು ಹೆಸರಿನಿಂದ ಕರೆಯುತ್ತಾರೆ. ತೆಲುಗಲ್ಲಿ ಇವರನ್ನು ಬೊಮ್ಮಲಾಟವಾಳ್ಳು ಎನ್ನುವರು.
ಇವರ ಮನೆ ಮಾತು ಮರಾಠಿ. ಮಹಾರಾಷ್ಟ್ರದ ಕಡೆಯಿಂದ ವಲಸೆ ಬಂದ ಜನ ಇವರು ಎಂಬುದಕ್ಕೆ ಸಾಕಷ್ಟು ಆಧಾರಗಳು ಸಿಗುತ್ತವೆ. ವಲಸೆ ಬರಲು ಕಾರಣವೇನೇ ಇರಲಿ, ಇವರು ಬಂದ ಕಡೆಯೇ ಹೊಂದಿಕೊಂಡಿರುವುದಂತೂ ನಿಜ. ತೊಗಲು ಗೊಂಬೆಯಾಟ ಉದ್ಯೋಗಿ ಕಲೆಯಾದ್ದರಿಂದ ಇವರು ಒಂದೆಡೆ ನೆಲೆಸಲು ಸಾಧ್ಯವಾಗುವುದಿಲ್ಲ. ಇವರು ಹಳ್ಳಿ ಹಳ್ಳಿಗೆ ಗೊಂಬೆಗಳನ್ನು ಹೊತ್ತುಕೊಂಡು ಹೋಗಿ ಆಡಿಸಿ ಜನರನ್ನು ಸಂತೋಷಪಡಿಸಿ ಅವರು ನೀಡಿದ ಮರಿ, ಕುರಿ, ದವಸ, ಧಾನ್ಯ, ಹಣ ಮುಂತಾದ ಕಾಣಿಕೆಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಾರೆ.
ಇವರು ಎಲಾ ಸಂದರ್ಭಗಳಲ್ಲೂ ಒಂದೇ ರೀತಿಯ ಆಟ ಪ್ರದರ್ಶಿಸುವುದಿಲ್ಲ. ತಿಥಿ ಸಂದರ್ಭದಲ್ಲಿ ಸ್ವರ್ಗಾರೋಹಣ ಪ್ರಸಂಗ, ಮದುವೆ ಮತ್ತಿತರ ಸಂದರ್ಭದಲ್ಲಿ ಗಿರಿಜಾ ಕಲ್ಯಾಣ ಪ್ರಸಂಗ ಆರಿಸಿಕೊಳ್ಳುತ್ತಾರೆ. ಮಳೆ ಬರದೆ ಕ್ಷಾಮ ಒದಗಿದಾಗ ಮಳೆ ಹುಯ್ಯಲಿ ಎಂದು ತೊಗಲು ಗೊಂಬೆ ಆಟ ಆಡಿಸುವುದುಂಟು. ಕಲಾವಿದರು ಅನೇಕ ಆಟಗಳ ಸಾಹಿತ್ಯವನ್ನು ಬಾಯಿಪಾಠ ಮಾಡಿಕೊಂಡಿರುತ್ತಾರೆ. ಆರಂಭದಲ್ಲೂ ಗಣೇಶನ ಪೂಜೆ, ಮುಕ್ತಾಯದಲ್ಲೂ ಗಣೇಶನ ಪೂಜೆ ಸ್ತುತಿ ಇರುತ್ತದೆ. ಕಲಾಪ್ರದರ್ಶನದಲ್ಲಿ ಹೆಂಗಸರೂ ಭಾಗವಹಿಸುತ್ತಾರೆ. ಸ್ತ್ರೀ ಪಾತ್ರಗಳ ಗೊಂಬೆಗಳನ್ನು ಕುಣಿಸುವಲ್ಲಿ ಹಾಡು ಮತ್ತು ಸಂಭಾಷಣೆಗಳಿಗೆ ಸ್ತ್ರೀಯೇ ಕಂಠದಾನ ಮಾಡುತ್ತಾಳೆ.



ಮೊದಲು ಗೊಂಬೆರಾಮರು ತೊಗಲು ಗೊಂಬೆಯನ್ನು ಜಿಂಕೆಯ ಚರ್ಮದಿಂದ ಮಾಡುತ್ತಿದ್ದರು. ಆದರೆ ಈಗ ಮೇಕೆಯ ಚರ್ಮ ಬಳಸುವರು. ತೊಗಲು ಗೊಂಬೆ ಆಡಿಸುವುದು ಒಂದು ಕಲೆಯಾದರೆ ಆ ಗೊಂಬೆ ಮಾಡುವುದೂ ಒಂದು ಕುಶಲ ಕಲೆ. ಚರ್ಮ ಹದಮಾಡಿ ಒಣಗಿಸಬೇಕು. ಪಾತ್ರಗಳ ಲಕ್ಷಣ ಹಾಗೂ ಔಚಿತ್ಯಕ್ಕೆ ತಕ್ಕಂತೆ ತೊಗಲನ್ನು ಕತ್ತರಿಸಿ ಯಾವ ಪಾತ್ರಗಳಿಗೆ ಯಾವ ಬಣ್ಣ ಹಾಕಬೇಕು ಎಂಬುದನ್ನು ನೋಡಿಕೊಂಡು ಬಣ್ಣ ಹಾಕುತ್ತಾರೆ. ಬಿದಿರಿನ ಕಡ್ಡಿಯನ್ನು ಪೆನ್ನಿನ ರೀತಿಯಲ್ಲಿ ಬಳಸಿ ಚಿತ್ರಗಳ ರೂಪ ರಚಿಸುತ್ತಾರೆ. ವಿವಿಧ ರೀತಿಯ ಸಣ್ಣ ಉಳಿಗಳನ್ನು ಬಳಸಿ ಚಿತ್ರಗಳಲ್ಲಿ ಬೇಕಾದ ಕಡೆ ರಂಧ್ರ ಮಾಡಿ ಬೆಳಕು ತೂರಿ ಬರುವಂತೆ ಮಾಡುತ್ತಾರೆ. ಗೊಂಬೆಗಳು ಚಲಿಸುವಂತೆ ಅನುಕೂಲವಾಗಲು ಕೈ ಕಾಲು ಕತ್ತುಗಳಿಗೆ ಕೀಲುಗಳಿರುತ್ತವೆ. ಕೈಚಳಕದಿಂದ ಆಡಿಸಲು ಹಿಂದಕ್ಕೆ ಬಿದಿರಿನ ಕಡ್ಡಿಯನ್ನು ಕಟ್ಟಿರುತ್ತಾರೆ. ಗೊಂಬೆಯಾಡಿಸುವುದು ಆಡಿಸುವವನ ಕೈಚಳಕದ ಮೇಲೆ ನಿಂತಿರುತ್ತದೆ. ಗೊಂಬೆಗಳು ಸುಮಾರು ಎರಡು ಮೂರು ಅಡಿ ಎತ್ತರ ಇರುತ್ತವೆ. ಕೆಲವೆಡೆ ಮಾನವಾಕೃತಿಯ ಅಳತೆಯ ಗೊಂಬೆಗಳು ಇರುವುದೂ ಉಂಟು. ಗೊಂಬೆಗಳು ನೋಟಕ್ಕೆ ಪುರಾಣ ಪುರುಷರ ಕಲ್ಪನೆ ಉಂಟುಮಾಡುತ್ತದೆ. ಗೊಂಬೆಗಳನ್ನು ತಯಾರಿಸುವಾಗ ಪಾತ್ರದ ಹಿರಿಮೆ, ಗಂಭೀರತೆ, ಜನ್ಮಕಾಲ, ಬೆಳವಣಿಗೆ ಕಾಲ ಹೀಗೆ ವಿವಿಧ ಹಂತಗಳಿಗೆ ಅನುಗುಣವಾಗಿ ಅವುಗಳ ಆಕಾರವೂ ಸಹ ಬದಲಾವಣೆ ಹೊಂದುತ್ತದೆ.
ಎಂಟರಿಂದ ಹತ್ತು ಬಿದಿರು ಗಳಗಳನ್ನು ಬಳಸಿ ಮಂಟಪದ ರೀತಿ ರಚಿಸಿ ಉದ್ದದ ಬಿಳಿ ಬಟ್ಟೆ ಸುಕ್ಕಿರದಂತೆ ಕಟ್ಟುತ್ತಾರೆ. ಪೆಟ್ರೋಮ್ಯಾಕ್ಸ್ ಇಲ್ಲವೇ ವಿದ್ಯುಚ್ಛಕ್ತಿ ದೀಪದ ಬಳಕು ಬಳಸುತ್ತಾರೆ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಮೇಲೆ ಪಡಿನೆಳಲಾಗುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ. ಈ ಆಟ ಜನಸಾಮಾನ್ಯರಿಗೆ ಸುಲಭವಾಗಿ ಪೌರಾಣಿಕ ಕಥೆಗಳನ್ನು ಹೇಳುವ ಮಾಧ್ಯಮ.
ತೊಗಲು ಗೊಂಬೆಯಾಟ ಆಡಿಸಿದರೆ ಊರಿಗೆ ತಗುಲಿದ ರೋಗ ರುಜಿನ ಅನಿಷ್ಟಗಳು ತೊಲಗುತ್ತವೆಂದು, ಮಳೆ ಬಾರದಿದ್ದಾಗ ಆಡಿಸಿದರೆ ಮಳೆ ಬೀಳುವುದೆಂದು ಜನರಲ್ಲಿ ನಂಬಿಕೆಯಿದೆ. ರಾತ್ರಿ ೯ ರಿಂದ ಪ್ರಾರಂಭಿಸಿ ಮಧ್ಯರಾತ್ರಿ ೨ ಅಥವಾ ೩ ಗಂಟೆಯವರೆಗೂ ಆಟ ನಡೆಯುತ್ತದೆ.








ವರದನಾಯಕನಹಳ್ಳಿ ಗ್ರಾಮದಲ್ಲಿ ಅಪರೂಪದ ಜನಪದ ಕಲೆ ತೊಗಲುಗೊಂಬೆಯಾಟ ರಾತ್ರಿ ೧೦ ಗಂಟೆಗೆ ಪ್ರಾರಂಭವಾಗಿ ಮುಗಿಯುವಷ್ಟರಲ್ಲಿ ಮಧ್ಯರಾತ್ರಿ ೧.೩೦ ಆಗಿತ್ತು. ಶಿಂದೆ ರಾಮಮೂರ್ತಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ರಾಮಾಯಣದ ಸುಂದರಕಾಂಡದ ಪ್ರಸಂಗವನ್ನು ಹಾರ್ಮೋನಿಯಂ ಮತ್ತು ತಬಲದ ಹಿಮ್ಮೇಳದೊಂದಿಗೆ ತೆಲುಗಿನಲ್ಲಿ ಸುಶ್ರಾವ್ಯವಾಗಿ ಹಾಡುತ್ತಾ ನಡೆಸಿಕೊಟ್ಟರು. ಸುತ್ತಮುತ್ತಲಿನ ಗ್ರಾಮಗಳಿಂದ ಹೆಂಗಸರು, ಮಕ್ಕಳು, ವೃದ್ಧರು ಎಲರೂ ಬಂದು ತೊಗಲುಗೊಂಬೆಯಾಟದ ಮೋಜನ್ನು, ಮನರಂಜನೆಯನ್ನು ಅನುಭವಿಸಿದರು.



ಈ ಕಲೆಯ ಪ್ರದರ್ಶನಕ್ಕೆ ವಿಶಿಷ್ಟ ರಂಗಸಜ್ಜಿಕೆ ಬೇಕು. ಎತ್ತರದ ವೇದಿಕೆ ಮೇಲೆ ಸುಮಾರು ೮ ಅಡಿ ಅಗಲ, ೮ ಅಡಿ ಉದ್ದ ಮತ್ತು ೮ ಅಡಿ ಎತ್ತರ ಇರುವಂತೆ ಮಂಟಪ ರಚಿಸಿ, ಎರಡು ಮೊಳ ಅಗಲ ೯ ಮೊಳ ಉದದ ಬಿಳಿ ಬಟ್ಟೆಯನ್ನು ಮುಂಭಾಗಕ್ಕೆ ಕಟ್ಟಿರುತ್ತಾರೆ. ಮಂಟಪದ ಉಳಿದ ಮೂರು ಬದಿಗಳನ್ನು ಚಾಪೆ ಅಥವಾ ಕಂಬಳಿಗಳಿಂದ ಮುಚ್ಚುತ್ತಾರೆ.
ಒಬ್ಬ ಏಕಕಾಲದಲ್ಲಿ ಎರಡು ಗೊಂಬೆಗಳನ್ನು ಆಡಿಸಬಲ್ಲ. ಆಡಿಸುವ ಗೊಂಬೆಗಳಿಗೆ ಮೂರು ಸೂತ್ರದ ಕಡ್ಡಿಗಳಿರುತ್ತವೆ. ಕಡ್ಡಿಗಳನ್ನು ಬೆರಳುಗಳಿಗೆ ಸಿಕ್ಕಿಸಿಕೊಂಡು ಚಮತ್ಕಾರಯುತವಾಗಿ ಕುಣಿಸುತ್ತಾರೆ. ಪರದೆಯ ಹಿಂದೆ ಕುಣಿಯುವ ಈ ಬಣ್ಣದ ಗೊಂಬೆ ಬಿಳಿ ತೆರೆಯ ಮೇಲೆ ಪಡಿ ಮೂಡುವಂತೆ ತೆರೆಯ ಹಿಂಭಾಗದಲ್ಲಿ ವಿದ್ಯುಚ್ಛಕ್ತಿ ದೀಪ ಬಳಸಿ ಮಂದವಾದ ಬೆಳಕು ನೀಡುವ ವ್ಯವಸ್ಥೆ ಮಾಡಿರುತ್ತಾರೆ. ತೆರೆಯ ಹಿಂದೆ ಕುಳಿತ ಕಲಾವಿದರು ಯಾರೂ ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ತೆರೆಯ ಹಿಂದೆ, ಕಥೆಗೆ ತಕ್ಕಂತೆ ಗೊಂಬೆಗಳನ್ನು ಜೋಡಿಸಿಟ್ಟುಕೊಂಡಿರುತ್ತಾರೆ. ತೆರೆಯ ಮೇಲೆ ಮೂಡುವ ಗೊಂಬೆಗಳನ್ನು ಬಿಟ್ಟು ಉಳಿದ ಗೊಂಬೆಗಳು ಯಾರಿಗೂ ಕಾಣುವುದಿಲ್ಲ.
ಆರಂಭದಲ್ಲಿ ಗಣೇಶನ ಸ್ತುತಿಯೊಂದಿಗೆ ಗಣಪತಿಯ ಗೊಂಬೆಯನ್ನು ಕುಣಿಸುತ್ತಾರೆ. ಅನಂತರ ಕಥಾ ಪ್ರಸಂಗ ಪ್ರಾರಂಭವಾಗುತ್ತದೆ. ತೊಗಲುಗೊಂಬೆಯಾಟದಲ್ಲಿ ಯುದ್ಧ ಸನ್ನಿವೇಶಗಳಂತೂ ಅತ್ಯಂತ ಕುತೂಹಲಕಾರಿಯಾಗಿರುತ್ತದೆ. ತೊಗಲುಗೊಂಬೆಯ ತಲೆ, ಎದೆ, ಕೈ ಕಾಲುಗಳು ಬೇರೆ ಬೇರೆಯಾಗಿದ್ದು ಅವನ್ನು ದಾರಗಳಿಂದ ಜೋಡಿಸಲಾಗಿರುವುದರಿಂದ ಇಂತಹ ಪ್ರದರ್ಶನಕ್ಕೆ ಅನುಕೂಲ. ಕೈಕಾಲುಗಳು, ಮುಂಡ, ತಲೆ ಇವುಗಳು ಸರಿದಾಡುವಂತೆ ಅವುಗಳಿಗೆ ಬಿದಿರಿನ ಅಥವಾ ಈಚಲ ಕಡ್ಡಿಗಳನ್ನು ಜೋಡಿಸಿರುತ್ತಾರೆ.
ಕಲಾವಿದರು ಯಾವುದೇ ಪ್ರಸಂಗದಲ್ಲಾಗಲಿ ಮಧ್ಯೆ ಮಧ್ಯೆ ಬಂಗಾರಕ್ಕ, ಕಿಳ್ಳೇಕ್ಯಾತ, ಪಿಳ್ಳಿಜುಟ್ಟು ಮುಂತಾದ ಹಾಸ್ಯ ಪಾತ್ರಗಳನ್ನು ತರಲು ಮರೆಯುವುದಿಲ್ಲ. ಪ್ರೇಕ್ಷಕರು ತೂಕಡಿಸುವಾಗ ಕೆಲವು ಪಾತ್ರಗಳು ಆರ್ಭಟ ಮಾಡಿಕೊಂಡು ಬರುತ್ತವೆ. ಕೊನೆಯ ತನಕ ಪ್ರೇಕ್ಷಕರ ಆಸಕ್ತಿಯನ್ನು ಕಾಯ್ದುಕೊಳ್ಳಲು ಮತ್ತು ಬೇಸರವನ್ನು ನಿವಾರಿಸಿ ಮನರಂಜನೆ ನೀಡಲು ಈ ಪಾತ್ರಗಳು ಮುಖ್ಯ ಪಾತ್ರ ವಹಿಸುತ್ತವೆ. ಕೆಲವು ಸಮಯದಲ್ಲಿ ಅಶ್ಲೀಲವೆನಿಸಬಹುದಾದ ಹಾಸ್ಯವನ್ನು ತಂದು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿಬಿಡುತ್ತಾರೆ. ನಿರ್ಜೀವ ಗೊಂಬೆಗಳು ಜೀವತಳೆದು ಬೆಡಗಿನ ಪ್ರತಿಲೋಕವನ್ನೇ ಸೃಷ್ಟಿಸುವುದು ಇಲ್ಲಿನ ಅನನ್ಯ ತಂತ್ರಗಾರಿಕೆ. ಈ ಆಟವು ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಹದವಾಗಿ ಮೇಳೈಸಿರುವ ಅಪರೂಪದ ಕಲಾಸೃಷ್ಟಿ.



ಹಗಲಿನ ಬೆಳಕಿನಲ್ಲಿ ನೋಡಿದಾಗ ತೀರಾ ಸಾಮಾನ್ಯವೆನಿಸುವ ತೊಗಲುಗೊಂಬೆಗಳು ಕಲಾಸಕ್ತರನ್ನು ತೀವ್ರವಾಗಿ ಸೆಳೆಯುವುದು, ತಮ್ಮ ಬೆಡಗನ್ನು ಮೆರೆಯುವುದು ದೀಪದ ಬೆಳಕಿನಲ್ಲಿ. ಬಿಳಿ ಪರದೆಯ ಮೇಲೆ ಬಂದಾಗ ಯಾವುದೇ ವಸ್ತು ತನ್ನಿಂತಾನೇ ಅದ್ಭುತವಾಗುವುದಿಲ್ಲ. ಪ್ರತಿಭಾವಂತನ ಕೈಗೆ ಸಿಕ್ಕಾಗ ಮಾತ್ರ ಅದರ ವಿಶಿಷ್ಟ ಸಾಧ್ಯತೆ ತೆರೆದುಕೊಳ್ಳುತ್ತದೆ. ಆಟಗಾರನ ಅನುಭವ, ಕರಕೌಶಲ್ಯಗಳು ಹೊಸ ಮಾಯಾಲೋಕವನ್ನು ಸೃಷ್ಟಿಸುವುದನ್ನು ನೋಡಿಯೇ ಅನುಭವಿಸಬೇಕು. ನವರಸಗಳನ್ನು ಮೈದುಂಬಿಕೊಳ್ಳುವ ತೊಗಲುಗೊಂಬೆ ಕಲಾವಿದ ಯಾವುದೇ ಸನ್ನಿವೇಶವನ್ನು ಪ್ರೇಕ್ಷಕರ ಮನಮುಟ್ಟುವಂತೆ ನಿರೂಪಿಸುವಲ್ಲಿ ಸಿದ್ಧಹಸ್ತನಾಗಿರುತ್ತಾನೆ.
ಗೊಂಬೆಗಳಲ್ಲಿನ ವಿಶೇಷ ಆಕರ್ಷಣೆಗಳಲ್ಲಿ ಅವುಗಳ ಬಣ್ಣ, ಹೊಳೆಯುವ ಆಭರಣ, ಮಣಿಸರ ಇತ್ಯಾದಿಗಳು. ಕೆಲವೇ ಬಣ್ಣಗಳನ್ನು ಬಳಸಿಕೊಂಡು ಬೆಡಗು, ಸಂಕೀರ್ಣತೆಯ ಅನುಭವ ಕಟ್ಟಿಕೊಡುತ್ತಾರೆ. ಆಭರಣ ಮತ್ತಿತರ ಹೊಳಪಿನ ಕುಸುರಿ ಬೇಕಿರುವೆಡೆ ಚರ್ಮದಲ್ಲಿ ರಂಧ್ರಗಳನ್ನು ಮಡಿರುತ್ತಾರೆ. ಅತ್ಯಂತ ಜಾಣತನದ ಆದರೆ ಬಹಳ ಪರಿಣಾಮಕಾರಿಯಾದ ಕ್ರಮವಿದು.
ತೊಗಲುಗೊಂಬೆಯಾಟ ಒಂದು ಅದ್ಭುತ ಕೈಚಳಕದ ಆಟ. ಈ ಆಟ ಜನಸಾಮಾನ್ಯರಿಗೆ ಸುಲಭವಾಗಿ ಪೌರಾಣಿಕ ಕಥೆಗಳನ್ನು ಹೇಳುವ ಮಾಧ್ಯಮ. ಇವರು ಬಹುತೇಕ ಮಹಾಭಾರತ ಮತ್ತು ರಾಮಾಯಣದ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಾರೆ. ಗೊಂಬೆಗಳನ್ನು ಕುಣಿಸುತ್ತಾ ಆ ಗೊಂಬೆಗೆ ಜೀವ ತುಂಬುವಂತೆ ತಾವೇ ಹಾಡುತ್ತಾ ಸಂಭಾಷಿಸುವ ಇವರ ಕಲೆ ಎಂಥವರನ್ನೂ ದಂಗುಬಡಿಸುತ್ತದೆ. ಆಧುನಿಕ ಅನಿಮೇಷನ್ ಲೋಕದ ಪುರಾತನ ಕೊಂಡಿ ಈ ತೊಗಲುಗೊಂಬೆಯಾಟ.

15 comments:

ಸವಿಗನಸು said...

ಮಲ್ಲಿ ಸರ್,
ಮತ್ತೊಂದು ಹುಡುಕಾಟದ ವಿಶೇಷ ಪರಿಚಯ....
ಗೊಂಬೆಯಾಟ ಬಹಳ ಚೆನ್ನಾಗಿರುತ್ತೆ...
ಒಳ್ಳೆ ಮಾಹಿತಿ ನೀಡಿದ್ದೀರ ಫೋಟೋ ಸಮೇತ...
ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

ತೊಗಲು ಗೊ೦ಬೆಯ ಬಗೆಗಿನ ಮಾಹಿತಿ ಕುತೂಹಲವಾಗಿತ್ತು. ನಾನು ಇದುವರೆಗೂ ತೊಗಲು ಗೊ೦ಬೆಯಾಟ ನೋಡಿಲ್ಲ. ಬರೇ ಓದಿ ಕೇಳಿರುವುದಷ್ಟೇ. ವಿದೇಶಗಳಲ್ಲೂ ಈ ಆಟ ಪ್ರಚಲಿತದಲ್ಲಿ ಇತ್ತು ಅಂತ ಅನಿಸುತ್ತದೆ. "sound of musics" ಎ೦ಬ ಸಿನಿಮಾದಲ್ಲಿ ತೊಗಲು ಗೊ೦ಬೆಯಾಟದ ಒ೦ದು ಸನ್ನಿವೇಶ ಬರುತ್ತದೆ.

V.R.BHAT said...

ತೊಗಲು ಗೊಂಬೆಯಾಟ ಚೆನ್ನಾಗಿರುತ್ತದೆ ಎಂದು ಕೇಳಿದ್ದೇನೆ, ಆದರೆ ಇನ್ನೂ ನೋಡುವ ಅವಕಾಶ ಸಿಗಲಿಲ್ಲ, ಇತ್ತೇಚೆಗೆ ಅವುಗಳ ಮೇಳದ ಸಂಖ್ಯೆ ಕಡಿಮೆ ಎಂಬುದೂ ಸ್ಪಷ್ಟ, ಮಾಹಿತಿಯುಕ್ತ ಲೇಖನ

sunaath said...

ಅತಿ ಉಪಯುಕ್ತ ಮಾಹಿತಿಯ ಜೊತೆಗೆ, ಅತಿ ಸುಂದರವಾದ ಚಿತ್ರಗಳನ್ನು ಕೊಟ್ಟಿರುವಿರಿ. ಅಭಿನಂದನೆಗಳು.

ದಿನಕರ ಮೊಗೇರ said...

naanoo saha togalu gombeyaata nodiddene....... tumbaa dhanyavaada......... chitra kavanakke......

ಸೀತಾರಾಮ. ಕೆ. / SITARAM.K said...

ಉಪಯುಕ್ತ ಮಾಹಿತಿಯ ವಿಶಿಷ್ಟ ಲೇಖನ.ಜೊತೆಗೆ ಸು೦ದರ ಛಾಯಾಚಿತ್ರಗಳು. ಧನ್ಯವಾದಗಳು.

PARAANJAPE K.N. said...

ಚಿತ್ರ-ಮಾಹಿತಿ ಚೆನ್ನಾಗಿದೆ

PARAANJAPE K.N. said...
This comment has been removed by the author.
Guruprasad said...

ಮಲ್ಲಿ ಸರ್,
ತುಂಬಾ ಮಾಹಿತಿಯುಕ್ತ ಬರಹ, ಹಾಗೆ ಚಿತ್ರಗಳು ಕೂಡ... ಇದರ ಬಗ್ಗೆ ಇಸ್ಟೊಂದು ಮಾಹಿತಿ ಗೊತ್ತಿರಲಿಲ್ಲ,,, ನಿಮ್ಮ ಲೇಖನ ನೋಡಿ,,, ಈ ಕಲೆಯ ಬಗ್ಗೆ,, ಇದನ್ನ ಮಾಡುವವರ ಬಗ್ಗೆ,,, ತುಂಬಾ ವಿಷಯ ತಿಳಿದುಕೊಂಡ ಹಾಗೆ ಆಯಿತು....
ಧನ್ಯವಾದಗಳು...
Guru

ಸಾಗರದಾಚೆಯ ಇಂಚರ said...

ಮಲ್ಲಿ ಸರ್
ಇನ್ನೊಂದು ವಿಶೇಷ ಲೇಖನ
ಸುಂದರ ಫೋಟೋಗಳು, ಜೊತೆಗೆ ವಿವರಣೆ ಮನ ಸೆಳೆಯುತ್ತವೆ

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,
ವಿಶೇಷ ಚಿತ್ರಗಳೊಂದಿಗೆ ವಿಶೇಷ ಮಾಹಿತಿಗಳನ್ನು ಕೊಟ್ಟಿದ್ದೀರಿ.

ಧನ್ಯವಾದಗಳು.

Ashok Uchangi said...

ಚಿಕ್ಕಂದಿನಲ್ಲಿ ನಮ್ಮೂರಿಗೂ ಸಿಳ್ಳೆ ಕ್ಯಾತರು ಬರುತ್ತಿದ್ದರು.ಇದು ಈಗ ಇಲ್ಲವೇ ಇಲ್ಲ ಎಂದು ಕೊಂಡಿದ್ದೆ.ನಿಮ್ಮ ಬರಹದಿಂದ ಮನಸ್ಸು ನಿರಾಳವಾಯ್ತು.ಸಂಶೋಧನಾ ಬರಹದಂತೆ ಇರುವ ನಿಮ್ಮ ಬರಹ,ಪರದೆ ಹಿಂದಿನ ಮತ್ತು ಮುಂದಿನ ಆಕರ್ಷಕ ಚಿತ್ರಗಳು ಮನತಣಿಸಿದವು.ಇಂತಹಾ ಲೇಖನಕ್ಕಾಗಿ ಕಾಯುತ್ತಿರುತ್ತೇನೆ....
ಅಶೋಕ ಉಚ್ಚಂಗಿ

shivu.k said...

ಮಲ್ಲಿಕಾರ್ಜುನ್,

ನಿಮ್ಮ ಚಿತ್ರ ಲೇಖನವನ್ನು ನೋಡಿ ನಾನು ಬಾಲ್ಯದಲ್ಲಿ ರಾತ್ರಿಯೆಲ್ಲಾ ತೊಗಲು ಬೊಂಬೆಯಾಟವನ್ನು ನೋಡಿದ್ದು ನೆನಪಾಯಿತು. ಶಿಂದೆ ರಾಮಸ್ವಾಮಿಯವರ ಪರಿಶ್ರಮ, ತನ್ಮಯತೆ ಇತ್ಯಾದಿಗಳನ್ನು ವಿವರಿಸುತ್ತಾ...ತೊಗಲು ಬೊಂಬೆಯಾಟ ಮಾಹಿತಿಯನ್ನು ಕೊಟ್ಟಿದ್ದೀರಿ...
ಧನ್ಯವಾದಗಳು.

Unknown said...

ಅಧ್ಬುತ. ನಿಮಗೆ ನಮ್ಮ ಧನ್ಯವಾದಗಳು. ಅಪರೂಪವಾಗುತ್ತಿರುವ ಆಟದ ಪ್ರತಿರೂಪವ ಇಲ್ಲಿ ಛಾಪಿಸಿದಿರಿ.

Rajashekar.M.Talikoi said...

ಸರ್ ಅದರ ಸಂಪೂರ್ಣ ಮಾಹಿತಿ ಅಥವಾ ಪುಸ್ತಕ ತೆಗೆದರೆ ನನಗೆ ಬೇಕು ಸಿಗಬಹುದು 9945401498🙏🙏