ಕೋಲೆ ಬಸವನಾಟದಲ್ಲಿ ಎರಡು ಕಾಲಿನಲ್ಲಿ ನಿಂತ ಬಸವ.ಇತ್ತೀಚೆಗೆ ನಮ್ಮೂರ ಬಳಿಯ ವರದನಾಯಕನಹಳ್ಳಿ ಗ್ರಾಮದಲ್ಲಿ ಕೋಲೆ ಬಸವನಾಟ ನಡೆಯಿತು. ಆಂಧ್ರಪ್ರದೇಶದ ನಲ್ಲೂರಿನ ಕಡೆಯಿಂದ ಬಂದಿರುವ ರಂಗಪ್ಪ ತನ್ನ ಬಸವ, ಹಸು, ಹೆಂಡತಿ ಮಕ್ಕಳೊಂದಿಗೆ ಈ ಆಟ ಆಡಿಸುತ್ತಾ ಬಂದಿದ್ದರು.
ಪ್ರಾಣಿಗಳಿಗೆ ಕಲಾಭ್ಯಾಸ ಮಾಡಿಸಿ ಪ್ರದರ್ಶನ ಮಾಡುವ ಕಲೆಗಳಲ್ಲಿ “ಕೋಲೆ ಬಸವನಾಟ” ಪ್ರಮುಖವಾದುದು. ಈ ಆಟ ಆಡಿಸುವವರನ್ನು ಕೆಲವು ಕಡೆ ಗಂಗೆತ್ತಿನವರು ಅಥವಾ ಕವಲೆತ್ತಿನವರು ಎಂದು ಕರೆಯುತ್ತಾರೆ. ಮಕ್ಕಳ ಪರಿಭಾಷೆಯಲ್ಲಿ ಬುರ್ ಬುರ್ ಬಸವಣ್ಣ ಎಂದೂ ಹೇಳುವುದುಂಟು. ಪ್ರೇಕ್ಷಕರ ಮನಸ್ಸನ್ನು ಮಂತ್ರಮುಗ್ಧವನ್ನಾಗಿ ಮಾಡುವ ಈ ಕಲೆಯಲ್ಲಿ ಮಾತು ಬಾರದ ಪ್ರಾಣಿ ಮಾನವನ ಮಾತನ್ನು ಅರ್ಥಮಾಡಿಕೊಂಡು ಅದ್ಭುತ ಪ್ರದರ್ಶನ ನೀಡುತ್ತದೆ. ಬುದ್ಧಿ ಸೂಕ್ಷ್ಮತೆ ಮಾನವನಿಗಷ್ಟೇ ಮೀಸಲಲ್ಲ ಎಂಬುದನ್ನು ತೋರಿಸಿಕೊಡುತ್ತದೆ. ‘ಕೋಲೆ ಬಸವ ಆಡಿಸಿದಂತೆ ತಲೆ ಆಡಿಸ್ತೀಯ’ ಎಂಬ ಬಳಕೆಯ ಮಾತು ಈ ಕಲೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಬಸವನನ್ನಾಡಿಸುವ ಕಲಾವಿದರು ಅರೆ ಅಲೆಮಾರಿಗಳು. ಸಾಮಾನ್ಯವಾಗಿ ಹಳ್ಳಿಯಿಂದ ಹಳ್ಳಿಗೆ ತಿರುಗುವ ಇವರು ಈ ಆಟವನ್ನು ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಇವರ ಮೂಲ ಉದ್ಯೋಗ ವ್ಯವಸಾಯ. ಮಳೆಗಾಲದಲ್ಲಿ ಮೈಬಗ್ಗಿಸಿ ಬೆವರು ಸುರಿಸಿ ದುಡಿದರೂ ಬೇಸಿಗೆಯಲ್ಲಿ ಸುಮ್ಮನೆ ಕುಳಿತಿರುವುದಿಲ್ಲ, ಕೋಲೆ ಬಸವನನ್ನು ಹಿಡಿದುಕೊಂಡು ಹೊರಡುತ್ತಾರೆ.
ಮಗುವಿನ ಮೇಲೆ ಪಾದಸ್ಪರ್ಶ ಮಾಡುತ್ತಿರುವ ಬಸವ.ಈ ಕಲೆಯು ಆಂಧ್ರಪ್ರದೇಶದಲ್ಲಿ ಹೆಚ್ಚು ಬಳಕೆಯಲ್ಲಿದೆ. ಕೋಲೆ ಬಸವನಾಟದ ಕಲೆ ಗೊಲ್ಲರಲ್ಲಿ ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಇವರನ್ನು ಪೆದ್ದಟ್ಟಿ ಗೊಲ್ಲರು ಎಂದು ಕರೆಯುತ್ತಾರೆ. ಗೊಲ್ಲರಲ್ಲಿ ತಮ್ಮ ಆರಾಧ್ಯ ದೈವವಾದ ಜುಂಜಪ್ಪನೇ ಬಸವನ ರೂಪವನ್ನು ತಾಳಿದ್ದಾನೆ ಎಂಬ ನಂಬಿಕೆಯಿದೆ.
ಈ ಕಲೆಯ ಪ್ರದರ್ಶನಕ್ಕೆ ಸಾಕಷ್ಟು ಪೂರ್ವಭಾವಿ ಸಿದ್ಧತೆ ಮತ್ತು ಪೂರ್ವಾಭ್ಯಾಸ ಬೇಕಾಗುತ್ತದೆ. ಒಂದು ಬಸವನನ್ನು ಪ್ರದರ್ಶನಕ್ಕೆ ಸಿದ್ಧ ಮಾಡಲು ಅನೇಕ ತಿಂಗಳುಗಳ ನಿರಂತರ ಪರಿಶ್ರಮದ ಅಗತ್ಯವಿದೆ. ಎತ್ತುಗಳನ್ನು ಯಾರಾದರೂ ದಾನ ಮಾಡುತ್ತಾರೆ ಇಲ್ಲವೆ ಉತ್ತಮ ರಾಸುಗಳನ್ನು ನೋಡಿ ಇವರೇ ಆಯ್ಕೆ ಮಾಡಿಕೊಳ್ಳುವರು. ಈ ಪ್ರದರ್ಶನವನ್ನು ಒಂದರ್ಥದಲ್ಲಿ ಬೀದಿಯ ನಾಟಕವೆಂದೇ ಹೇಳಬೇಕು. ನಾಟಕದಲ್ಲಿ ವ್ಯಕ್ತಿಗಳು ಪಾತ್ರವಹಿಸಿದರೆ, ಇಲ್ಲಿ ವ್ಯಕ್ತಿಗಳ ಜೊತೆಗೆ ಪ್ರಾಣಿಗಳೂ ಪಾತ್ರವಹಿಸುತ್ತವೆ. ಕಥೆಯನ್ನು ತಮ್ಮದೇ ಆದ ಶೈಲಿಯಲ್ಲಿ ಅಳವಡಿಸಿಕೊಳ್ಳುವ ಕಲಾವಿದರು ತುಂಬಾ ಪ್ರಭಾವಯುತವಾಗಿ ಅದನ್ನು ನಿರೂಪಿಸುತ್ತಾರೆ.
ಒಂದು ಬಸವ ರಾಮನಾದರೆ, ಒಂದು ಹಸು ಸೀತೆಯಾಗುತ್ತದೆ. ರಾಮನ ಒಡೆಯನೊಬ್ಬನಾದರೆ ಸೀತೆಯ ತಂದೆಯಾಗಿ ಒಬ್ಬ ಪಾತ್ರವಹಿಸುತ್ತಾರೆ. ಬಸವನ ಕೊಂಬುಗಳಿಗೆ ಬಣ್ಣಬಣ್ಣದ ಬಟ್ಟೆ ಸುತ್ತಿ ಅವು ಲಕ್ಷಣವಾಗಿ ಎತ್ತರವಾಗಿ ಕಾಣಿಸುವಂತೆ ಮಾಡಿ ಮೇಲೆ ಕುಚ್ಚನ್ನು ಕಟ್ಟಿರುತ್ತಾರೆ. ಹಣೆಯ ಮೇಲೆ ಆಂಜನೇಯನ ಮುದ್ರೆಯಿರುವ ಹಿತ್ತಾಳೆ ತಗಡಿನ ಅಲಂಕಾರವಿರುತ್ತದೆ. ಬಸವನ ಭುಜ(ಮುಡ)ವನ್ನು ಕರಡಿ ಚರ್ಮದಿಂದ ಗೋಪುರದಂತೆ ಹೊದಿಸಿ ಶೃಂಗರಿಸಿರುತ್ತಾರೆ. ಬೆನ್ನ ಮೇಲೆ ಬಣ್ಣಬಣ್ಣದ ಬಟ್ಟೆಗಳು, ಕಾಲುಗಳಿಗೆ ಗೆಜ್ಜೆ, ಕೊರಳಿಗೆ ಗಂಟೆ ಮತ್ತು ಮಣಿಯ ಸರಗಳಿಂದ ಅಲಂಕಾರ ಮಾಡಿರುತ್ತಾರೆ. ಸೀತೆಯ ಹಣೆಗೆ ಕುಂಕುಮ ಇಟ್ಟು ಬೆನ್ನಿನ ಮೇಲೆ ನಾಲ್ಕಾರು ಬಣ್ಣಬಣ್ಣದ ಸೀರೆಗಳನ್ನು ಹೊದಿಸಿರುತ್ತಾರೆ. ಈ ಬಟ್ಟೆಬರೆಗಳು ಸಾಮಾನ್ಯವಾಗಿ ಪ್ರದರ್ಶನದಲ್ಲಿ ಪ್ರೇಕ್ಷಕರು ಕೊಟ್ಟ ಕೊಡುಗೆಗಳು.
ಸೀತಾರಾಮರ ಮದುವೆಯ ಸನ್ನಿವೇಶದಲ್ಲಿ ರಾಮನ ಸುತ್ತ ಪ್ರದಕ್ಷಿಣೆ ಬರುತ್ತಿರುವ ಸೀತೆ.
ಕೋಲೆ ಬಸವನಾಟಕ್ಕೆ ಡೋಲು, ನಾಗಸ್ವರ, ಮುಖವೀಣೆ ವಾದ್ಯಗಳನ್ನು ಬಳಸುತ್ತಾರೆ. ಕೆಲವು ಹಾಡುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ನಾಗಸ್ವರದಲ್ಲಿ ನುಡಿಸುತ್ತಾರೆ. ವಾದ್ಯಗಳ ನಾದಕ್ಕೆ ಅನುಗುಣವಾಗಿ ಗಂಭೀರ ಗತ್ತಿನಲ್ಲಿ ನಡೆಯುವ ಬಸವನ ಅಭಿನಯ ನೋಡಲು ಮನಮೋಹಕವಾಗಿರುತ್ತದೆ. ಕುಣಿಯುವ ಬಸವನ ಕಾಲಿಗೆ ಕಟ್ಟಿರುವ ಗೆಜ್ಜೆಗಳು ಘಲ್ ಘಲ್ ಎಂದು ಸದ್ದು ಮಾಡುವುದು ಪ್ರದರ್ಶನಕ್ಕೇ ಸೊಗಸು. ಹಳ್ಳಿಗಳಲ್ಲಿ ಬಸವನನ್ನಾಡಿಸುವವರು ಬಂದಿದ್ದಾರೆ ಎಂದರೆ ಮಕ್ಕಳು ಸುತ್ತಲೂ ಸೇರಿಕೊಂಡು ಸಿಳ್ಳು, ಕೇಕೆ ಹಾಕುತ್ತಾ ಕುಣಿಯುತ್ತಾರೆ.
ಕೋಲೆ ಬಸವನ ಆಟದಲ್ಲಿ ಸೀತಾರಾಮರ ಮದುವೆಯ ಸನ್ನಿವೇಶವಂತೂ ಪ್ರೇಕ್ಷಕರನ್ನು ಬೆರಗುಗೊಳಿಸುವಂತಹುದು. ವಿವಾಹಕ್ಕೆ ಮೊದಲು ಸೀತೆ ಒಂದು ಕಡೆ ರಾಮ ಒಂದು ಕಡೆ ನಿಂತಿರುತ್ತಾರೆ. ಆಗ ಸೀತೆಯ ತಂದೆ “ನೋಡು ಸೀತಮ್ಮ, ರಾಮದೇವರು ನಿನ್ನ ಮದುವೆ ಆಗಬೇಕೂಂತ ಕೇಳ್ತಾರೆ. ನಿನ್ನ ರೂಪಕ್ಕೆ ಅವರು ಸೋತಿದ್ದಾರೆ. ಮದುವೆಯಾಗ್ತೀಯೇನಮ್ಮಾ? ಅವರು ನೋಡೋಕೆ ಮನ್ಮಥನ ಥರಾ ಇದಾರೆ” ಎಂದು ಕೇಳಿದಾಗ “ಇಲ್ಲ” ಎಂದು ತಲೆಯಲ್ಲಾಡಿಸಿ ಸೀತಮ್ಮ ತನ್ನ ಅಸಮ್ಮತಿಯನ್ನು ಸೂಚಿಸುತ್ತದೆ. ಆಗ ಒಡವೆಯ ಬಗ್ಗೆ, ಸೀರೆಯ ಬಗ್ಗೆ ಆಸೆ ತೋರಿಸುತ್ತಾರೆ. ಆಗ ಸೀತೆ ಆಗಲೆಂಬಂತೆ ತಲೆ ಹಾಕುತ್ತದೆ. ನಡುವೆ ಸಂಧಾನ ಮಾಡುವ ಹಾಸ್ಯದ ಮಾತುಗಳನ್ನಾಡುವ ಕಲಾವಿದರಿಂದ ಆಟಕ್ಕೆ ರಂಗೇರುತ್ತದೆ. ರಾಮನನ್ನು ಪರಿಚಯ ಮಾಡಿಕೊಟ್ಟು ಧಾರೆಯೆರೆಯಲು ಗಂಡಿನ ಕಡೆಯವರನ್ನು ಕರೆಯುತ್ತಾರೆ. ಸೀತೆ ಸಹಜ ನಾಚಿಕೆಯಿಂದ ತಲೆತಗ್ಗಿಸಿಕೊಂಡು ಮೆಲ್ಲನೆ ಬಂದು ರಾಮನ ಪಕ್ಕದಲ್ಲಿ ನಿಲ್ಲುತ್ತದೆ. ಆಗ ಮಂಗಳವಾದ್ಯಗಳು ಮೊಳಗುತ್ತವೆ. ಧಾರೆಯೆರೆದ ಮೇಲೆ ರಾಮನ ಸುತ್ತ ಸೀತೆ ಮೂರು ಸುತ್ತು ಸುತ್ತುವುದು, ಸಪ್ತಪದಿ ನಡೆಯುವುದು ನಿಜಕ್ಕೂ ಹೃದಯಸ್ಪರ್ಶಿ.
ಮೊದಲು ಸಂಜೆವೇಳೆಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ಈಗ ಟಿ.ವಿ. ಸಂಸ್ಕೃತಿಯಿಂದಾಗಿ ಸಂಜೆ ಜನ ಸೇರುವುದು ಕಡಿಮೆ. ಈ ವೃತ್ತಿಯನ್ನು ಯಾವುದೇ ಕಾರಣಕ್ಕೂ ಬಿಡುವಂತಿಲ್ಲ. ಬಿಟ್ಟರೆ ಮನೆಯಲ್ಲಿ ಏನಾದರೂ ತೊಂದರೆಯಾಗುವುದು. ಆದರಿಂದ ಎಷ್ಟೇ ಶ್ರೀಮಂತರಾದರೂ ವರ್ಷಕ್ಕೆ ಒಂದು ದಿನವಾದರೂ ಬಸವನ ಭಜನೆ ಮಾಡಿಸಲೇಬೇಕೆಂಬುದು ನಮ್ಮ ತಾತನ ಕಾಲದಿಂದಲೂ ಕಂಡುಕೊಂಡ ಸತ್ಯ. ನಮಗೆ ಬಸವನೇ ದೇವರು. ಆತನ ಸೇವೆಯಿಂದಲೇ ನಮ್ಮ ಜೀವನ ಎನ್ನುತ್ತಾರೆ ರಂಗಪ್ಪ.
ಸೀತಾರಾಮರ ಮದುವೆಯ ಸನ್ನಿವೇಶ. ಈ ಕಲಾವಿದರು ಬಸವನೊಂದಿಗೆ ಮನೆಮನೆಗೂ ಹೋಗುತ್ತಾರೆ. ಮನೆ ಹೆಣ್ಣು ಮಕ್ಕಳು ಸೀತಾ ರಾಮರಿಗೆ ಕುಂಕುಮವಿಟ್ಟು, ಗಂಧದಕಡ್ಡಿ ಹಚ್ಚಿ ಬೆಳಗಿ ಹುರುಳಿ ಹಿಟ್ಟು ಅಥವಾ ರಾಗಿ ಹಿಟ್ಟು ಕಲಸಿ ಕೊಡುತ್ತಾರೆ. ಕಲಾವಿದರಿಗೆ ಶಕ್ತ್ಯಾನುಸಾರ ರಾಗಿ, ಜೋಳ, ಅಕ್ಕಿಯನ್ನು ಕೊಟ್ಟು ಕಳುಹಿಸುತ್ತಾರೆ. ಮನರಂಜನೆಯ ದೃಷ್ಟಿಯಿಂದ ಕೋಲೆ ಬಸವನ ಆಟ ಎಲ್ಲರಿಗೂ ಅಚ್ಚುಮೆಚ್ಚು. ಬಸವ, ಹಸುಗಳೊಡನೆ ಅವಿನಾಭಾವ ಸಂಬಂಧ ಬೆಸಿಕೊಂಡಿರುವ ರೈತರಿಗೆ ಇದು ಭಕ್ತಿ, ಮನರಂಜನೆ ಹಾಗೂ ನೀತಿ ಬೋಧಿಸುವ ಮಾಧ್ಯಮವಾಗಿದೆ. ಕೌಲೆತ್ತಿನವರ ತೆಲುಗು ಕನ್ನಡ ಮಿಶ್ರ ಭಾಷೆ ವಿಚಿತ್ರವೆನಿಸಿದರೂ ಭಾವಪೂರ್ಣತೆಯಿಂದಿದ್ದು ಎಲ್ಲರ ಮನಮುಟ್ಟುತ್ತದೆ. ರಾಮ ಸೀತೆಯರ ಮದುವೆ ಹಳ್ಳಿಯ ಮದುವೆಯ ಸಮಗ್ರ ಸಂಕೇತವಾಗಿರುತ್ತದೆ.
9 comments:
ಮಲ್ಲಿಕಾರ್ಜುನ ಸರ್ ..
ಮಾಹಿತಿ ಮತ್ತು ಚಿತ್ರ ಲೇಖನ ಚೆನ್ನಾಗಿದೆ
ಮಲ್ಲಕಾರ್ಜುನ ಸರ್,
ಕೋಲೆ ಬಸವನಟದ - ಒಂದು ಉತ್ತಮ ಮಾಹಿತಿಯುಳ್ಳ ಚಿತ್ರಬರಹ.
ಇತ್ತೀಚೆಗೆ ಇವುಗಳನ್ನು ನೋಡುವುದಿರಲಿ ಕೇಳುವುದಕ್ಕೂ ಸಿಗದಂತಾಗಿದೆ. ಇನ್ನಷ್ಟು ನಾಡಿನ ಸೊಗಸು ನಿಮ್ಮ ಬರಹ-ಚಿತ್ರಗಳ ಮೂಲಕ ಮೂಡಿಬರಲಿ.
ಸ್ನೇಹದಿಂದ,
ನಾನು ತುಂಬ ಚಿಕ್ಕವನಿದ್ದಾಗ ನನ್ನೂರಿನಲ್ಲಿ ಈ ಕೋಲೆಬಸವನ ಮದುವೆ ನೋಡಿದ್ದು, ಈಗ ಇಲ್ಲಿ ಸಚಿತ್ರ ವಿವರಣೆ ನೋಡಿ ಆನಂದವಾಯಿತು. ಧನ್ಯವಾದ.
ಮಲ್ಲಿಕಾರ್ಜುನ ಸರ್
ನಂಗೆ ನನ್ನ ಬಾಲ್ಯದಲ್ಲಿ ನಾನು ನೋಡುತ್ತಿದ್ದ ಇಂಥಹ ಎಷ್ಟೋ ಆಟಗಳು ನೆನಪಾದವು
ಒಳ್ಳೆಯ ವಿವರಣೆ, ಸುಂದರ್ ಫೋಟೋ
ಮಾಯವಾಗುತ್ತಿರುವ ಕಲೆಯ ಬಗೆಗೆ ಉತ್ತಮ ವಿವರಣೆ ಹಾಗು ಸುಂದರ ಚಿತ್ರಗಳು.
ಹುಡುಕಾಟದ ಮಲ್ಲಿಕಾರ್ಜುನ್...
ಈ ಬಸವನ ಆಟ ನಾನು ಸಣ್ಣವನಿದ್ದಾಗ ನೋಡಿದ ನೆನಪು ತಂದಿತು...
ರಾಮ ಬೇಡವೆಂದು ತಲೆಆಡಿಸುವ ಸೀತಮ್ಮ ಕಣ್ಣಿಗೆ ಕಟ್ಟಿದಂತೆ ನೆನಪಾಯಿತು...
ಉತ್ತಮ ಮಾಹಿತಿ...
ಇತ್ತೀಚೆಗೆ ಇಂಥಹವರು ಬರುವದು ಕಡಿಮೆ ಆಗಿದೆ...
ಉತ್ತಮ ಚಿತ್ರ ಲೇಖನಕ್ಕೆ ಅಭಿನಂದನೆಗಳು..
ನಿಮ್ಮ ಹಳೆಯ ಲೇಖನಗಳನ್ನು ಓದಿದ್ದರೂ ಪ್ರತಿಕ್ರಿಯೆ ಕೊಡಲಾಗಲ್ಲಿ ..
ದಯವಿಟ್ಟು ಬೇಸರಿಸದಿರಿ....
ಚಿಕ್ಕವ್ವನಿದ್ದಾಗ ಕೋಲೆಬಸವನ ಆಟ ನೋಡಲು ಅವರ ಹಿ೦ದೆ ಊರೆಲ್ಲಾ ತಿರುಗಿ ಅಪ್ಪಯ್ಯನಿ೦ದ ಬಯ್ಗುಳು ತಿ೦ದದ್ದು ನೆನಪಾಯಿತು. ಸಚಿತ್ರದೊ೦ದಿಗಿನ ಮಾಹಿತಿಪೂರ್ಣ ಲೇಖನ ಮನಕ್ಕೆ ಮುದ ನೀಡಿತು.
ಸುಮಾರು ಸಮಯ ಆಗಿತ್ತು ಕೋಲೆ ಬಸವನ ಆಟ ನೋಡದೆ.
ಚಿತ್ರಗಳು ಮತ್ತು ಮಾಹಿತಿಗಾಗಿ ಧನ್ಯವಾದಗಳು.
ಇತ್ತೀಚೆಗೆ ಕೋಲೆಬಸವನನ್ನು ಕಾಣುವುದು ಆಗುತ್ತಿಲ್ಲ. ಒಳೆಯ ಮಾಹಿತಿ ಮತ್ತು ಚಿತ್ರಗಳು
Post a Comment