Tuesday, March 23, 2010

ಜಗದ ತುಂಬ ಜೀರುಂಡೆ

ತೆಲುಗಿನಲ್ಲಿ "ಕೀಚುರಾಳ್ಳು" ಎಂಬ ಸಿನಿಮಾ ಇದೆ. ಇದರಲ್ಲಿ ಯುವಕರ ಕಿರುಚಾಟ, ಗದ್ದಲ, ಶಕ್ತಿಯ ವ್ಯಯದ ಬಗ್ಗೆ ತಿಳಿಸುವ ಸಂದೇಶವಿದೆ. ಇಂಗ್ಲೀಷ್‌ನಲ್ಲಿ ಬೀಟಲ್ ಎಂದು ಕರೆಯುವ ಜೀರುಂಡೆಯನ್ನು ತೆಲುಗಲ್ಲಿ ಕೀಚುರಾಳ್ಳು ಎಂದು ಕರೆಯುತ್ತಾರೆ. ನಮ್ಮಲ್ಲೂ ಗ್ರಾಮೀಣ ಭಾಗದಲ್ಲಿ ಹಿರಿಯರು ಮಕ್ಕಳ ಗಲಾಟೆ ಅತಿಯಾದಾಗ ಜೀರುಂಡೆ ತರಹ ಉಪಯೋಗವಿಲ್ಲದೆ ಕಿರುಚಬೇಡಿ ಎಂದು ಗದರುವುದುಂಟು.




ಜೀರುಂಡೆ ಅಂದರೆ ಶಬ್ದ ಮಾಡುವ ಕೀಟವೆಂದಲ್ಲ. ಅವುಗಳಲ್ಲಿ ಎಲ್ಲವೂ ಶಬ್ದ ಮಾಡುವುದಿಲ್ಲ. ಇವು ಹೀಗೇ ಎಂದು ಒಂದೇ ಮಾತಿನಲ್ಲಿ ಹೇಳುವ ಹಾಗಿಲ್ಲ. ಕಾರಣ ಇವುಗಳ ಅಗಾಧ ಸಂಖ್ಯೆ ಮತ್ತು ವೈವಿಧ್ಯತೆ.






ಈ ಭೂಮಿಯಲ್ಲಿ ಒಂದೂಮುಕ್ಕಾಲು ದಶಲಕ್ಷ ಜೀವಿಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈ ಜೀವರಾಶಿಯಲ್ಲಿ ಶೇ.೬೦% ರಷ್ಟು ಕೀಟಗಳಿವೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಈ ಜೀರುಂಡೆಗಳಿವೆ. ಜಗತ್ತಿನ ಸಸ್ಯ ವೈವಿಧ್ಯತೆಗಿಂತ ಹೆಚ್ಚಿನ ವಿಧದ ಜೀರುಂಡೆಗಳಿವೆ ಅಂದರೆ ಇದರ ಸಂಖ್ಯೆ, ವೈವಿಧ್ಯತೆ, ಬಣ್ಣ, ಆಹಾರ, ರೂಪಗಳನ್ನು ಊಹಿಸುವುದೂ ಅಸಾಧ್ಯ. ವಿಜ್ಞಾನಿಗಳ ಪ್ರಕಾರ ಇನ್ನೂ ಲಕ್ಷಾಂತರ ವಿಧದ ಜೀರುಂಡೆಗಳನ್ನು ಗುರುತಿಸಿಯೇ ಇಲ್ಲ. ನನ್ನಿಂದ, ನನಗಾಗಿ, ನನ್ನದೇ ಈ ಭೂಮಿ ಎನ್ನುವ ಮಾನವ ಇವುಗಳ ಮುಂದೆ ಎಷ್ಟೊಂದು ಅಲ್ಪಸಂಖ್ಯಾತನಲ್ಲವೇ? ನಮ್ಮ ಪರಿಸರವನ್ನು ಜೀವಂತವಾಗಿರಿಸಲು ಮತ್ತು ಚಲನಶೀಲವಾಗಿರಿಸುವಲ್ಲಿ ಇವುಗಳ ಪಾಲು ಅಗಾಧ.




ಕೋಲಿಯೋಪ್ಟೆರಾ ವರ್ಗಕ್ಕೆ ಸೇರಿರುವ ಈ ಜೀರುಂಡೆಗಳಿಗೆ ಆಮೆಗಳಿಗಿರುವಂತೆ ಗಡುಸಾಗಿರುವ ಬೆನ್ನಿನ ಕವಚವಿರುತ್ತದೆ. ಏರೋಪ್ಲೇನ್ ಚಿಟ್ಟೆಗಳಿಗಿದ್ದಂತೆ ಇವಕ್ಕೂ ನಾಲ್ಕು ರೆಕ್ಕೆಗಳಿತ್ತಂತೆ. ಜೀವ ವಿಕಾಸದಲ್ಲಿ ಮುಂಭಾಗದ ರೆಕ್ಕೆಗಳು ರಕ್ಷಣಾ ಕವಚವಾಗಿ ಮಾರ್ಪಟ್ಟಿದೆ. ಈ ಕವಚದ ಕೆಳಗೆ ರೆಕ್ಕೆಗಳಿವೆ. ರೆಕ್ಕೆ ಮತ್ತು ಕವಚದ ನಡುವೆ ತಂಪಾದ ಗಾಳಿಯನ್ನು ಶೇಖರಿಸಿಟ್ಟುಕೊಂಡು ಮರುಭೂಮಿಯಲ್ಲಿ ಮತ್ತು ನೀರಿನೊಳಗೆ ಬದುಕುವ ಜೀರುಂಡೆಗಳಿವೆ. ಅನೇಕ ವಿಧದ ಆಹಾರವನ್ನು ರೂಢಿಸಿಕೊಂಡು ಎಲ್ಲಾ ಬಗೆಯ ಭೂ ವಾತಾವರಣಕ್ಕೆ ಒಗ್ಗಿಕೊಂಡಿವೆ.






ಉಷ್ಣವಲಯದ ಕಾಡುಗಳಲ್ಲಿ ವಿಜ್ಞಾನಿಗಳು ಎತ್ತರೆತ್ತರ ಮರಗಳ ಮೇಲ್ಪದರದಲ್ಲಿ ವಾಸಿಸುವ ಜೀವಿಗಳ ಆಧ್ಯಯನ ಕೈಗೊಂಡಿದ್ದರು. ಹೊಗೆ ಹಾಕಿದಾಗ ಮಳೆ ಬಂದಂತೆ ತಿಳಿಯದ, ಹೆಸರಿರಿಸದ ಜೀವಿಗಳು ಸಿಕ್ಕಿದವು. ಅವುಗಳಲ್ಲಿ ಹೆಚ್ಚೂ ಕಡಿಮೆ ಎಲ್ಲವೂ ಜೀರುಂಡೆಗಳೇ! ೦.೨೫ ಮಿ.ಮೀಟರ್‌ನಿಂದ ೧೫೦ ಮಿ.ಮೀಟರ್ ಉದ್ದದ ಕಪ್ಪು, ಕೆಂಪು, ಹಳದಿ, ಕಂದು, ಹೊಳೆಯುವ, ಮಿನುಗುವ ಥರಾವರಿ ಜೀರುಂಡೆಗಳ ಮೋಹಕ ಲೋಕವಿದು.







ಚಿಟ್ಟೆಗಳಂತೆ ಇದರದ್ದೂ ಮೊಟ್ಟೆ, ಲಾರ್ವ, ಪ್ಯೂಪ ಮತ್ತು ಜೀರುಂಡೆ ಎಂಬ ನಾಲ್ಕು ಹಂತದ ಬದುಕು. ಮೊಟ್ಟೆಗಳಿಂದ ಹೊರಬಂದ ಇದರ ಲಾರ್ವಾಗಳದ್ದು ತಿನ್ನುವುದಷ್ಟೇ ಕೆಲಸ. ಕೊಳೆತ ಪದಾರ್ಥಗಳನ್ನು ಗಲೀಜು ಇತ್ಯಾದಿ ತ್ಯಾಜ್ಯಗಳನ್ನು ತಿಂದು ಕೆಲವು ಮಾನವನಿಗೆ ಉಪಕಾರಿಯಾಗಿವೆ. ಮರ, ಕಾಳು, ಬೆಳೆಗಳನ್ನೆಲ್ಲ ತಿನ್ನುವ ಕೆಲ ಅಪಕಾರಿಗಳೂ ಇವೆ. ಇದೇ ರೀತಿ ಬೆಳೆದ ಜೀರುಂಡೆಗಳೂ ಪರಾಗಸ್ಪರ್ಶ ಮತ್ತು ಹಾನಿಕಾರಕ ಕೀಟಗಳನ್ನು ಭಕ್ಷಿಸುವುದರಿಂದ ಕೆಲವು ಸಹಾಯ ಮಾಡಿದರೆ, ಇನ್ನು ಕೆಲವನ್ನು ಕೊಲ್ಲಲು ರೈತರು ರಾಸಾಯನಿಕಗಳನ್ನು ಸಿಂಪಡಿಸುವರು.


ಆಸ್ಟ್ರೇಲಿಯಾದಲ್ಲಿ ಜೀರುಂಡೆಗಳ ಸಂಗ್ರಹಾಲಯವಿದೆ. ಅಂಚೆಚೀಟಿಯಂತೆ ಜೀರುಂಡೆಗಳ ಸಂಗ್ರಹಣೆ ಮಾಡುತ್ತಾರೆ. ಅಪರೂಪದ್ದನ್ನು ಮಾರುತ್ತಾರೆ. ಕೆಲವನ್ನು ಔಷಧಿಗೆ ಬಳಸಿದರೆ ಒಡವೆ ತಯಾರಿಸಲು ಇನ್ನು ಕೆಲವು ಬಳಕೆಯಾಗುತ್ತವೆ. ಉತ್ತರ ದ್ರುವದಿಂದ ಹಿಡಿದು ಉಷ್ಣವಲಯದ ಕಾಡಿನವರೆಗೂ ಎಲ್ಲೆಲ್ಲೂ ಇರುವ ಇಷ್ಟೊಂದು ವೈವಿಧ್ಯತೆ ಹೊಂದಿರುವ ಜೀರುಂಡೆಗಳ ಜಗತ್ತಿನಲ್ಲಿ ನಾವಿದ್ದೇವೆಯೇ ಹೊರತು ನಮ್ಮದೇ ಈ ಜಗತ್ತು ಎಂಬುದು ಕೇವಲ ಭ್ರಮೆ!







18 comments:

Unknown said...

ಮಲ್ಲಿಕಾರ್ಜುನ್, ತುಂಬಾ ದಿನವಾಯಿತು. ಹೇಗಿದ್ದೀರಿ. ನಿಮ್ಮ ೀ ಪೋಸ್ಟ್ ನೋಡಿ ಆಹಾ ಜೀರುಂಡೆ ಎನ್ನುವಂತಾಯಿತು. ನಾವು ಚಿಕ್ಕವರಾಗಿದ್ದಾಗ ಅವುಗಳನ್ನು ಹಿಡಿದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಅವುಗಳಿಗೆ ತಿನ್ನಲು ಸೋರೇಗಿಡದ ಕುಡಿಯನ್ನು ಹಾಕುತ್ತಿದ್ದೆವು. ಅವು ತಿನ್ನುತ್ತಿದ್ದವೋ ಇಲ್ಲವೋ ಗೊತ್ತಿಲ್ಲ. ಻ವುಗಳ ಮೈಮೇಲಿನ ವರ್ಣ ಸಂಯೋಜನೆ ಮಕ್ಕಳಲ್ಲಿ ಅತೀವ ಬೆರಗನ್ನುಂಟು ಮಾಡುತ್ತದೆ.

b.saleem said...

ಮಲ್ಲಿಕಾರ್ಜುನ್ ಸರ್,
ಜಿರುಂಡೆಗಳ ಬಗ್ಗೆ ಅನೇಕ ಮಾಹಿತಿ ಕಲೆಹಾಕಿದ್ದಿರಿ,
ಜೀರುಂಡೆಯ ಬದುಕು ಮತ್ತು ಪ್ರಕಾರ ನಿಜಕ್ಕೂ ವಿಸ್ಮಯ,
ಅದೆ ರೀತಿ ಅವುಗಳನ್ನು ಚಿತ್ರಿಸಿರುವ ನಿಮ್ಮ
ತಾಳ್ಮೆ ನಿಜಕ್ಕೂ ಅದ್ಭುತ. ನಿಮ್ಮಿಂದ ಇದೆ ರೀತಿಯ ಬರಹ ಮತ್ತು ಫೊಟೊಗಳನ್ನು ಹೆಚ್ಚು ಮೂಡಿಬರಲಿ.

ಸೀತಾರಾಮ. ಕೆ. / SITARAM.K said...

ಅದ್ಭುತ ಛಾಯಾಚಿತ್ರಗಳು ಜೊತೆಗೆ ಮಾಹಿತಿಯುಕ್ತ ಲೇಖನ. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು ಮಲ್ಲಿಯವರೇ.

ಮನದಾಳದಿಂದ............ said...

"ಜೀರುಂಡೆ ಜೀರುಂಡೆ ಬಾ ನನ್ನ ಜೊತೆಗೆ ಹಾಡು ನನ್ನ ಹಾಡು"
ಎಷ್ಟೊಂದು ಮುದ್ದಾಗಿವೆ ನಿಮ್ಮ ಚಿತ್ರಗಳು! ವಾವ್ !

Subrahmanya said...

Excellene sir. ನಿಮ್ಮ ಫೋಟೋಗ್ರಫಿ ಮಾಸ್ಟರ್ ಮೈಂಡ್ ಗೆ ನನ್ನದೊಂದು ಸಲಾಮು..

Keshav.Kulkarni said...

Super super photos. Great patience an great eyes. By the way, which camera? which lens?

Giri said...

Wow...........!!

Ashok Uchangi said...

ಪ್ರಿಯ ಮಲ್ಲಿಕ್
ಚಿತ್ರ ಹಾಗು ಬರಹ ತುಂಬಾ ಚೆನ್ನಿವೆ.ಮೂರ್ನೆಯ ಚಿತ್ರ ಮುಖಾಮುಖಿ-ಬಣ್ಣದ ದುಂಬಿಗಳ ಚಿತ್ರ ಮತ್ತೆಮತ್ತೆ ನೋಡೂವಂತಿದೆ...

ಸವಿಗನಸು said...

ಮಲ್ಲಿಯವರೇ,
ಅದ್ಭುತ ಚಿತ್ರಗಳ ಜೊತೆಗೆ ಮಾಹಿತಿಯುಕ್ತ ಬರಹ.
ಜಿರುಂಡೆಗಳನ್ನು ಹಿಡಿದು ಬೆಂಕಿಪೊಟ್ಟಣದಲ್ಲಿ ಇಟ್ಟುಕೊಳ್ಳುತ್ತಿದ್ದ ಬಾಲ್ಯದ ನೆನಪು ಆಯಿತು.....
ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.....

UMESH VASHIST H K. said...

ಜೀರುಂಡೆ ಚಿತ್ರಗಳು ಬೊಂಬಾಟ್, ಮಾಹಿತಿನು ಚೆನ್ನಾಗಿದೆ

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ್ ಸರ್‍, ಜೀರುಂಡೆಗಳ ಲೋಕದಲ್ಲಿ ವಿಹರಿಸಿದಂತೆ ಆಯಿತು. ಒಂದಕಿಂತ ಒಂದು ಅದ್ಭುತವಾಗಿವೆ. ಚಿತ್ರಗಳನ್ನು ಸೆರೆಹಿಡಿದಿರುವ ಶ್ರಮ ಇದರಲ್ಲಿ ತಿಳಿಯುತ್ತಿದೆ. ನಿಜಕ್ಕೂ ಈ ಕೀಟಪ್ರಪಂಚ ವಿಸ್ಮಯ.

ಸ್ನೇಹದಿಂದ,

ಸುಮ said...

ಚಿತ್ರ -ಮಾಹಿತಿ ಉತ್ತಮವಾಗಿದೆ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಇವುಗಳದೇ ಹಾವಳಿ . ಬಣ್ಣ ಬಣ್ಣದ ಜೀರುಂಡೆಗಳು , ಸಂಜೆಯ ವೇಳೇಗೆ ತೀವ್ರಗೊಳ್ಳುವ ಅವುಗಳ ಅರಚಾಟ ಎಲ್ಲವೂ ನೆನಪಾಯಿತು.

shivu.k said...

ಮಲ್ಲಿಕಾರ್ಜುನ್,

ಜೀರುಂಡೆಯ ಅದ್ಬುತ ಲೋಕವನ್ನು ತುಂಬಾ ಉಪಯುಕ್ತ ಮಾಹಿತಿ ಸಹಿತ ತೋರಿಸಿದ್ದೀರಿ...ನಾನು ನನ್ನ ಗೆಳೆಯರ ಜೊತೆ ಬಾಲ್ಯದಲ್ಲಿ ಬೆಂಕಿಪಟ್ಟಣ, ಸಿಗರೇಟು ಪ್ಯಾಕು ಇತ್ಯಾದಿಗಳಲ್ಲಿ ಸಂಗ್ರಹಿಸಿ ಅದಕ್ಕೆ ಆಲದ ಎಲೆಗಳನ್ನು ಹಾಕಿ ಮುಚ್ಚಿ ಜೇಬಿನಲ್ಲಿಟ್ಟುಕೊಂಡಿರುತ್ತಿದ್ದವು. ರಾತ್ರಿ ಮಲಗಿರುವಾಗಲು ಜೇಬಿನಲ್ಲಿಟ್ಟುಕೊಂಡೆ ಮಲಗಿರುತ್ತಿದ್ದೆ. ಆಗ ಮನೆಯ ಅಕ್ಕಪಕ್ಕ ಸಿಗುತ್ತಿದ್ದ ಈ ಜೀರುಂಡೆಗಳ ಫೋಟೊ ತೆಗೆಯಲು ಈಗ ಸುಮಾರು ೨೦ ಕಿಲೋಮೀಟರ್ ದೂರಹೋಗಿಬೇಕಿದೆ.

ಫೋಟೊಗ್ರಫಿಯಲ್ಲಿ ದೃಷ್ಟಿಯಿಂದಲೂ ಉತ್ತಮ ತಾಂತ್ರಿಕತೆಯಿಂದ ಕೂಡಿರುವ ಫೋಟೊಗಳನ್ನು ನೋಡಿ ಖುಷಿಯಾಯ್ತು..

sunaath said...

ಮಲ್ಲಿಕಾರ್ಜುನ,
ನೀವು ಹೇಳುವದು ಸರಿ. ಇದು ಕೀಟಪ್ರಪಂಚ. ಆ ಪ್ರಪಂಚದಲ್ಲಿಯೇ ನಾವಿದ್ದೇವೆ. ಈ ಕೀಟಗಳ ಸುಂದರ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು. ಈ ಕೀಟಗಳನ್ನು ಒಡವೆಗಳಿಗಾಗಿ ಬಳಸುವದನ್ನು ಓದಿದಾಗ,ಮನುಷ್ಯರ ತೆವಲಿನ ಬಗೆಗೆ ಬೇಜಾರಾಯಿತು.

PARAANJAPE K.N. said...

ವಿಸ್ಮಯವು೦ಟು ಮಾಡುವ ಕೀಟ ಪ್ರಪ೦ಚದೊಳಗೊ೦ದು ಪ್ರವಾಸ ಹೋಗಿ ಬ೦ದ೦ತಾಯ್ತು. ತು೦ಬಾ ಚೆನಾಗಿವೆ ಚಿತ್ರ ಗಳು

ಸುಧೇಶ್ ಶೆಟ್ಟಿ said...

thumba dhinagalu aagittu nimma bloginaththa baaradhe.... thumba chennaagiruva barahagaLive... avannella eega odikonde....

ಮನಸಿನಮನೆಯವನು said...

ಮಲ್ಲಿಕಾರ್ಜುನ.ಡಿ.ಜಿ.,

ಸೂಪರ್ ಫೋಟೋಗಳು..

ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com

Greeshma said...

tumba oLLe collection! ellinda huDki tandri ishtond variety?