Thursday, November 26, 2009

ಕಾಮತರ ಮನೆಯಲ್ಲಿ... ಒಂದು ಸಂಜೆ

ಕಾಮತ್ ವೆಬ್‌ಸೈಟಿನ(http://www.kamat.com/) ರೂವಾರಿ ವಿಕಾಸ್ ಕಾಮತ್ ತಮ್ಮ ಪತ್ನಿ ಕಿಮ್ ರೊಂದಿಗೆ ಅಮೇರಿಕೆಯಿಂದ ಬೆಂಗಳೂರಿಗೆ ಬಂದಿದ್ದರು. ಅವರ ತಂದೆ ದಿವಂಗತ ಡಾ.ಕೃಷ್ಣಾನಂದ ಕಾಮತರ ಕೆಲವು ಅಪರೂಪದ ಸಂಗತಿಗಳನ್ನು ತೋರಿಸಿದರು.
ವಿಜ್ಞಾನಿ, ಸಾಹಿತಿ, ಫೋಟೋಗ್ರಾಫರ್, ಪರಿಸರಪ್ರೇಮಿ, ಚಿತ್ರಕಾರರು... ಹೀಗೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಡಾ.ಕೃಷ್ಣಾನಂದ ಕಾಮತರು ನನಗೆ ಸದಾ ಸ್ಫೂರ್ತಿ.


ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಡಾ.ಕೃಷ್ಣಾನಂದ ಕಾಮತರು ಮತ್ತು ಇತಿಹಾಸದ ಸಂಶೋಧಕರು ಹಾಗು ನಿವೃತ್ತ ಆಕಾಶವಾಣಿ ನಿರ್ದೇಶಕರಾದ ಡಾ.ಜ್ಯೋತ್ಸ್ನಾಕಾಮತ್.


ನಲವತ್ತೈದು ವರ್ಷಗಳ ಹಿಂದೆಯೇ ಅವರು ತಮ್ಮ ಮನೆಯಲ್ಲಿ "Guest Book" ಇಟ್ಟಿದ್ದರು. ಅವರ ಮನೆಗೆ ಬರುವ ಅತಿಥಿಗಳ ಕೈಲಿ ಹೆಸರು, ದಿನಾಂಕ ಮತ್ತು ವಿಳಾಸ ಬರೆಸಿಡುತ್ತಿದ್ದರು.
ವಿಕಾಸರು ಅದನ್ನು ತೋರಿಸಿದಾಗ ಅಮೂಲ್ಯ ಹಸ್ತಾಕ್ಷರಗಳ ಅದ್ಭುತ ಸಂಗ್ರಹವನ್ನೇ ನೋಡುವಂತಾಯಿತು. ಡಾ.ಎಸ್.ಎಲ್.ಭೈರಪ್ಪ, ಚದುರಂಗ, ಜಿ.ಬಿ.ಜೋಶಿ, ಕೀರ್ತಿನಾಥ ಕುರ್ತಕೋಟಿ, ಸು.ರಂ.ಎಕ್ಕುಂಡಿ, ಜಿ.ಪಿ.ರಾಜರತ್ನಂ... ಅನೇಕ ಗಣ್ಯರ ಹಸ್ತಾಕ್ಷರಗಳಿವೆ. ಕೆಲಗಣ್ಯರು ಮತ್ತೊಮ್ಮೆ ಮಗದೊಮ್ಮೆ ಇವರ ಮನೆಗೆ ಬಂದಾಗ ಬದಲಾದ ಅವರ ವಿಳಾಸಗಳಿಂದ ಅವರ ಸಾಮಾಜಿಕ ಸ್ಥಾನಮಾನದ ಏರುಗತಿಯೂ ದಾಖಲಾಗಿದೆ.

ಕಾಮತರ ಗೆಸ್ಟ್ ಬುಕ್ ತೋರಿಸುತ್ತಿರುವ ವಿಕಾಸ್ ಕಾಮತ್ ಮತ್ತು ಅವರ ಪತ್ನಿ ಕಿಮ್.


ನೇಮಿಚಂದ್ರ ಮೇಡಂ ಅವರು ಗೆಸ್ಟ್ ಬುಕ್‌ನಲ್ಲಿ ಬರೆಯುತ್ತಿರುವುದು.


ಗೆಸ್ಟ್ ಬುಕ್‌ನ ಮೊದಲ ಪುಟ.


ಚದುರಂಗ, ಜಿ.ಬಿ.ಜೋಶಿ, ಕೀರ್ತಿನಾಥ ಕುರ್ತಕೋಟಿ... ಹಸ್ತಾಕ್ಷರಗಳ ಅಮೂಲ್ಯ ಸಂಗ್ರಹ.


ಡಾ.ಎಸ್.ಎಲ್.ಭೈರಪ್ಪನವರ ಹಸ್ತಾಕ್ಷರ.
ಡಾ.ಕಾಮತರು ಫೋಟೋ ಆಲ್ಬಂ ತಾವೇ ತಯಾರಿಸುತ್ತಿದ್ದರು. ಆಲ್ಬಂ ತೆರೆದರೆ ಚಿತ್ರಗಳು ಚಲನಚಿತ್ರದಂತೆ ಕಥೆ ಹೇಳುವ ರೀತಿ ಜೋಡಿಸಿರುತ್ತಿದ್ದರು. ಪ್ರತಿ ಫೋಟೋ ಕೆಳಗೂ ಆಕರ್ಷಕವಾದ ಶೀರ್ಷಿಕೆ ಕೊಡುವುದು ಅವರ ವೈಶಿಷ್ಟ್ಯ.
ಒಮ್ಮೆ ನಾಗಪುರದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಡಾ.ಕಾಮತರು ಹೋಗಿದ್ದರಂತೆ. ಅವರ ಮನೆಯಲ್ಲಿ ನಡೆದ ಔತಣಕೂಟಕ್ಕೆ ರಘು ಮಾಸೂರ್‌ಕರ್‍ ಎನ್ನುವವರು ಬಂದಿದ್ದರಂತೆ. ಮೂವತ್ತೆರಡರ ಹರೆಯದ ಲವಲವಿಕೆಯ, ಹಾಸ್ಯಮಿಶ್ರಿತ ಮಾತುಗಾರಿಕೆಯ ಆಕರ್ಷಕ ವ್ಯಕ್ತಿತ್ವ. ನೋಡಲೂ ತುಂಬಾ ಸುಂದರನಾಗಿದ್ದ ರಘು ಎಲ್ಲರಿಗೂ ಇಷ್ಟವಾಗಿಬಿಟ್ಟರಂತೆ.
ಕ್ಯಾಂಡಿಡ್ ಫೋಟೋಗ್ರಫಿಯಲ್ಲಿ ಸಿದ್ಧಹಸ್ತರಾಗಿದ್ದ ಡಾ.ಕಾಮತರು ರಘು ಅವರ ಅನೇಕ ಚಿತ್ರಗಳನ್ನು ತೆಗೆದರಂತೆ. ದುರಂತವೆಂದರೆ ಎಲ್ಲರಿಗೂ ಅಷ್ಟೊಂದು ಪ್ರೀತಿಪಾತ್ರರಾಗಿದ್ದ ರಘು ದೇವರಿಗೂ ಪ್ರೀತಿಪಾತ್ರರೇ ಆದರೇನೋ ಅನ್ನುವಂತೆ ಬ್ರೈನ್ ಟ್ಯೂಮರ್ ಬಂದು ಕೆಲವೇ ದಿನಗಳಲ್ಲಿ ತೀರಿಕೊಂಡರಂತೆ. ಪಾಪ ಆಗ ಅವರಿಗೆ ಮದುವೆ ನಿಕ್ಕಿಯಾಗಿತ್ತಂತೆ.
ಬೆಂಗಳೂರಿನಲ್ಲಿದ್ದ ಕಾಮತರಿಗೆ ವಿಷಯ ತಿಳಿದು ದುಃಖವಾಗಿದೆ. ರಘು ಮಾಸೂರ್‌ಕರ್ ಅವರ ಚಿತ್ರಗಳನ್ನೆಲ್ಲಾ ತಮ್ಮ ಡಾರ್ಕ್ ರೂಮಿನಲ್ಲಿ ತೊಳೆದು ಆಲ್ಬಂ ತಯಾರಿಸಿದ್ದಾರೆ. ಅದರ ತಯಾರಿಕೆಯಲ್ಲಿ ವಿಕಾಸರೂ ಸಹಾಯ ಮಾಡಿದ್ದರಂತೆ. ಒಂದೊಂದು ಚಿತ್ರಕ್ಕೂ ಆಕರ್ಷಕ ಶೀರ್ಷಿಕೆಗಳು.. ಇಂಗ್ಲೀಷ್ ಮತ್ತು ಕನ್ನಡ ಎರಡರಲ್ಲೂ ಬರೆದಿದ್ದರಂತೆ. ಆಲ್ಬಂ ಪ್ಯಾಕ್ ಮಾಡಿ ಡಾ.ಕಾಮತರು ರಘು ಅವರ ತಂದೆ ತಾಯಿಗೆ ಕಳಿಸಿದ್ದಾರೆ. ಕಾಕತಾಳೀಯವೆಂದರೆ ಅದು ಅವರಿಗೆ ತಲುಪಿದ್ದು ಅವರ ಮೊದಲ ವರ್ಷದ ಪುಣ್ಯತಿಥಿಯಂದು! ಅವರೆಲ್ಲ ಅದನ್ನು ನೋಡಿ ತಮ್ಮ ಮಗನೇ ಹಿಂತಿರುಗಿ ಬಂದನೆಂದು ಆನಂದಪಟ್ಟರಂತೆ... ಕಣ್ಣೀರಿಟ್ಟರಂತೆ...

ಮುಂದೆ ೨೦೦೨ರ ಫೇಬ್ರವರಿಯಲ್ಲಿ ಡಾ.ಕೃಷ್ಣಾನಂದ ಕಾಮತರು ಹೃದಯಾಘಾತದಿಂದ ನಿಧನರಾದಾಗ ಆ ಸಮಯದಲ್ಲಿ ಡಾ.ಜ್ಯೋತ್ಸ್ನಾಕಾಮತರ ನೆರವಿಗೆ ಬಂದವರು ಇದೇ ರಘು ಮಾಸೂರ್‌ಕರ್‍‌ರ ಸಹೋದರಿ ಲಲಿತ ಕಾಯ್ಕಿಣಿ. "ಆಗ ಏನೂ ತೋಚದಂತಿದ್ದಾಗ ಇವರಿಂದಲೇ ಡಾ.ಕಾಮತರ ಕಣ್ಣುಗಳನ್ನು ದಾನಮಾಡುವಂತಾಯ್ತು" ಎಂದು ನೆನೆಸಿಕೊಳ್ಳುವರು ಜ್ಯೋತ್ಸ್ನಾ ಮೇಡಂ.

ಡಾ.ಕಾಮತರು ರಚಿಸಿದ್ದ ರೇಖಾಚಿತ್ರಗಳು.

ಡಾ.ಕಾಮತರು ಮಧ್ಯಪ್ರದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಾಗ ಅಲ್ಲಿ ಫೋಟೋ ತೆಗೆಯಲಾಗದೆಡೆ ಅವರು ರೇಖಾಚಿತ್ರಗಳನ್ನು ಬಿಡಿಸಿದ್ದರು. ಅದರ ಸಂಗ್ರಹವನ್ನೂ ವಿಕಾಸರು ತೋರಿಸಿದರು.

ಡಾ.ಜ್ಯೋತ್ಸ್ನಾಕಾಮತ್ ಮಗ ವಿಕಾಸರೊಂದಿಗೆ.

ಡಾ.ಕಾಮತರ ಸಂಗ್ರಹ ಅಕ್ಷಯ ಪಾತ್ರೆಯಿದ್ದಂತೆ. ಅವರು ಕ್ಲಿಕ್ಕಿಸಿರುವ ಸುಮಾರು ಎರಡು ಲಕ್ಷ ಚಿತ್ರಗಳಲ್ಲಿ ಮೂರನೇ ಒಂದು ಭಾಗವಷ್ಟೇ ಅವರ ವೆಬ್‌ಸೈಟ್‌ನಲ್ಲಿರುವುದು. ಮುಂದಿನ ವರ್ಷ ವಿಕಾಸರು ಬಂದಾಗ ಇನ್ನಷ್ಟು ಕಾಮತರ ಬೆರಗುಗಳನ್ನು ತೋರಿಸಲಿ.
ನಮ್ಮ ಮನೆಯಲ್ಲಿ "Guest Book" ಇಟ್ಟಿರುವೆ. ನೀವೂ ಇಡುತ್ತೀರಲ್ವಾ?

15 comments:

ಸಾಗರದಾಚೆಯ ಇಂಚರ said...

ತುಂಬಾ ವಿಷಯಗಳು ತಿಳಿಯಿತು,
ತಮ್ಮ ಮನೆಗೆ ಬಂದವರು ವಿಳಾಸ ಇಟ್ಟುಕೊಳ್ಳುವ ಅವರ ಪರಿ ಸೋಜಿಗ ಕಂಡಿತು
ಇಂಥಹ ವಿಧಾನ ಎಲ್ಲರ ಮನೆಯಲ್ಲಿ ಬಂದರೆ ಏನು ಚೆನ್ನ
ಅವರ ಬಗ್ಗೆ ಬಹಳ ಉಪಯುಕ್ತ ಮಾಹಿತಿ ನೀಡಿದ್ದಿರಿ

sunaath said...

ಮಲ್ಲಿಕಾರ್ಜುನ,
ಕಾಮತರ ಮಹತಿಯನ್ನು ಚೆನ್ನಾಗಿ ತೆರೆದು ತೋರಿಸಿರುವಿರಿ.

ಸವಿಗನಸು said...

ಮಲ್ಲಿ ಸರ್,
ತುಂಬಾ ಮಾಹಿತಿ ನೀಡಿದ್ದೀರ....
ಧನ್ಯವಾದಗಳು.....

PARAANJAPE K.N. said...

ಅತ್ಯುಪಯುಕ್ತ ಮಾಹಿತಿ, ಕೃಷ್ಣಾ ನ೦ದ ಕಾಮತರ ಬಗ್ಗೆ ಕೇಳಿ ತಿಳಿದಿದ್ದೆ, ನಿಮ್ಮ ಬರಹ ದಿ೦ದ ಇನ್ನಷ್ಟು ತಿಳಿಯುವ೦ತಾಯ್ತು

Ittigecement said...

ಹುಡುಕಾಟದವರೆ....

ಕಾಮತ್‍ರನ್ನು ಹತ್ತಿರದಿಂದ ನೋಡಿಲ್ಲವಾಗಿತ್ತು
ಅವರ ಬಗೆಗೆ ಬಹಳಷ್ಟು ಮಾಹಿತಿ ಕೊಟ್ಟಿದ್ದೀರಿ..

ನಿಜ ಅವರ ಬದುಕು ಎಲ್ಲರಿಗೂ ಸ್ಪೂರ್ತಿ...

ಮನೆಯಲ್ಲಿ ಗೆಸ್ಟ್ ಬುಕ್ ಇಡುವ..
ಅದರ ಮಹತ್ವ ತುಂಬಾ ಹೊಸತ ಅನಿಸಿತು...
ನಮ್ಮನೆಯಲ್ಲೂ ಇಡುವೆ..."ಅತಿಥಿ ಟಿಪ್ಪಣಿ"

ಕಾಮತ್‍ರು ಕೊನೆಯಲ್ಲಿ ನಿಮಗೆ ಫೋನ್ ಮಾಡಿದ್ದರು ಅಂತ ಕೇಳಿದ ನೆನಪು ನಿಜವಾ...?
ದಯವಿಟ್ಟು ತಿಳಿಸಿ...

ನೇಮಿಚಂದ್ರ, ಜ್ಯೋತ್ಸ್ನಾ ಕಾಮತರು, ವಿಕಾಸ್ ಕಾಮತ್ ಎಲ್ಲರನ್ನೂ ನೋಡಿ ಸಂತೋಷವಾಯಿತು....

ಹಲವಾರು ಗಣ್ಯ್ರ.. ಅದರಲ್ಲೂ ನೆಚ್ಚಿನ ಭೈರಪ್ಪನವರ ಹಸ್ತಾಕ್ಷರ ಖುಷಿಕೊಟ್ಟಿತು...

ನಿಮ್ಮ ಸೃಜನಶೀಲತೆ ಇಷ್ಟವಾಗುತ್ತದೆ...

ಅಭಿನಂದನೆಗಳು...ಮಲ್ಲಿಕಾರ್ಜುನ್...!

ಜಲನಯನ said...

ಮಲ್ಲಿ ಇದು ಪಾಟ್ ಪೂರಿಯಕಾಮತ್ ರವರೇ,,? ಬಹಳ ಮಹತ್ವದ ಮತ್ತು ತಿಳಿದುಕೊಳ್ಳಬೇಕಾದ ಹಲವು ವಿಷಯಗಲನ್ನು ನಿಮ್ಮ ಎಂದಿನ ಚಿತ್ರ ಕ್ಥನದೊಂದಿಗೆ ತಿಳಿಸಿದ್ದೀರಾ..ಧನ್ಯವಾದಗಳು.

shivu.k said...

ಮಲ್ಲಿಕಾರ್ಜುನ್,

ಕಾಮತ್ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. ಮೊದಲು ಅವರ ವೆಬ್‍ಸೈಟಿಗೆ ನಾನು ಬೆರಗಿನಿಂದ ಹೋಗಿ ನೋಡುತ್ತಿದ್ದೆ. ನಮ್ಮೆಲ್ಲರ ಬ್ಲಾಗಿಗೆ ಅವರ ಬ್ಲಾಗು ಸ್ಫೂರ್ತಿ ಎನ್ನುವುದು ಕೂಡ ನಿಜ ವಿಚಾರ. ಕಾಮತರ ಬಗ್ಗೆ ಅವರ ಅಭಿರುಚಿಗಳ ಬಗ್ಗೆ ಫೋಟೊಗ್ರಫಿ, ಇತ್ಯಾದಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ. ಗೆಸ್ಟ್ ಬುಕ್ ಒಂದು ಅದ್ಭುತ ಕಾನ್ಸೆಪ್ಟ್. ನಾನು ಇದನ್ನು ಮನೆಯಲ್ಲಿ ಇಟ್ಟಿದ್ದೇನೆ. ನನ್ನ ಮನೆಗೆ ಬರುವ ಪ್ರತಿಯೊಬ್ಬರೂ ಅದರಲ್ಲಿ ತಮ್ಮ ಅನಿಸಿಕೆ ಬರೆಯುವುದು ಒಂದು ಖುಷಿಯ ವಿಚಾರ.
ಕಾಮತ್‍ರಿಂದ ಕಲಿಯುವುದು ತುಂಬಾ ಇದೆ.
ಮತ್ತಷ್ಟು ವಿಚಾರಗಳನ್ನು ತಿಳಿಸಿ.

ಧನ್ಯವಾದಗಳು.

ಚುಕ್ಕಿಚಿತ್ತಾರ said...

ಕಾಮತ್ ರ೦ತಹಾ ಮಹನೀಯರಿ೦ದ ಕಲಿಯುವುದು ಬೇಕಾದಷ್ಟಿದೆ. ಒಳ್ಳೆಯ ಬರಹ..

AntharangadaMaathugalu said...

ಮಲ್ಲಿಕಾರ್ಜುನ್ ಸಾರ್...

ನಿಮಗೆ ’ಹುಡುಕಾಟದವರು’ ಸಾರ್ಥಕ ನಾಮ. ನಿಜವಾಗಿಯೂ ನನಗೆ ತುಂಬಾ ಅಚ್ಚರಿಯೂ, ಖುಷಿಯೂ ಆಯಿತು. ಗಣ್ಯರ ಅಪರೂಪದ ಸಹಿಗಳು.... ವಾಹ್.. ಎಲ್ಲರ ಮನೆಯಲ್ಲೂ ಅತಿಥಿ ಪುಸ್ತಕ ಇಡುವುದು ನಿಜವಾಗಿ ಮಹತ್ವದ ವಿಚಾರ. ನಮ್ಮನೆಯಲ್ಲೂ ಇಡಲು ಬಯಸುತ್ತೇನೆ... ಒಳ್ಳೆಯ ವಿಚಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....

ಸುಧೇಶ್ ಶೆಟ್ಟಿ said...

ಮಲ್ಲಿಕಾರ್ಜನ್ ಸರ್...

ತು೦ಬಾ ಹಿ೦ದೆ ಕಾಮತರ ಈ ಕೆಲಸದ ಬಗ್ಗೆ, ವೆಬ್ ಸೈಟಿನ ಬಗ್ಗೆ ಓದಿದ್ದೆ... ಈಗ ಮತ್ತೊಮ್ಮೆ ಓದಿ ತು೦ಬಾ ಖುಶಿ ಆಯಿತು...ಥ್ಯಾ೦ಕ್ಸ್...

sritri said...

ಕಾಮತ್.ಕಾಂನ, ಕಾಮತ್ ಕುಟುಂಬದ ಬಗ್ಗೆ ತಿಳಿದು ಸಂತೋಷವಾಯಿತು. ಮತ್ತಷ್ಟು ಬೆರಗುಗಳಿಗಾಗಿ ಕಾಯುತ್ತೇನೆ. ಧನ್ಯವಾದಗಳು.

Unknown said...

ಮಲ್ಲಿಕಾರ್ಜುನ್, ನಿಮ್ಮ ಚಿತ್ರಲೇಖನ ನನ್ನ ನೆಪುಗಳನ್ನು ಇಲ್ಲಿ ಹಂಚಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. ಕೇವಲ ಪತ್ರಕೆಗಳಲ್ಲಿ ಕಾಮತ್ ದಂಪತಿಗಳ ಬಗ್ಗೆ ಓದಿಕೊಂಡಿದ್ದ ನನಗೆ ಉಡುಪಿಯ ಇತಿಹಾಸ ಅಕಾಡೆಮಿ ಸಮ್ಮೇಳನದಲ್ಲಿ ಡಾ.ಜೋತ್ಷ್ನಾ ಕಾಮತ್ ಅಧ್ಯಕ್ಷತೆಯಲ್ಲಿ ಸಂಶೋಧನ ಪ್ರಬಂದವೊಂದನ್ನು ಮಂಡಿಸುವ ಅವಕಾಶ ಸಿಕ್ಕಾಗ ಆಕಾಶವೇ ಅಂಗೈಗೆ ಸಿಕ್ಕಷ್ಟು ಖುಷಿಯಾಗಿತ್ತು. ಜೋತ್ಷ್ನಾ ಕಾಮತರ ಜೊತೆಯಲ್ಲಿ ಒಂದೆರಡು ನಿಮಷಗಳ ಮಾತುಕತೆ ಮಾತ್ರ ಸಾಧ್ಯವಾಗಿತ್ತು. ಆದರೆ ಬಿಸಿಲಿನ ದಗೆ ತಡೆಯಲಾರದೇ ಅಂಗಡಿಯೊಂದರ ಮುಂಗಟ್ಟಿನಲ್ಲಿ ನಿಂತಿದ್ದ ಕಾಮತರ ಜೊತೆಯಲ್ಲಿ ಮುಕ್ಕಾಲು ಗಂಟೆಗೂ ಅಧಿಕ ಹೊತ್ತು ಮಾತನಾಡುವ ಅವಕಾಶ ನನ್ನದಾಗಿತ್ತು. ಮಾತು ಮಾತಿಗೂ ನಮ್ಮನ್ನು ನಗಿಸುತ್ತಾ ಜೋವನೋತ್ಸಾಹವೇ ಪುಟೆದೇಳುವಂತೆ ಮಾತನಾಡುತ್ತಿದ್ದರು ಅವರು. ಅವರದೇ ಖರ್ಚಿನಲ್ಲಿ ನಮಗೂ ತಂಪು ಪಾನೀಯ ಕೊಡಿಸಿ ತಮ್ಮ ಮಾತಿನ ಮೋಡಿಯನ್ನೂ ಉಣಬಡಿಸಿದ್ದರು.
ಇದಾದ ಮುಂದಿನ ವರ್ಷಗಳಲ್ಲಿ ಅವರು ನಮ್ಮನ್ನಗಲಿದರು. ಅವರ ಬಗ್ಗೆ ಎರಡೂ ಸಂಪುಟಗಳಲ್ಲಿ ಬಂದ ಻ಭಿನಂದನಾ/ಸ್ಮರಣ ಸಂಚಿಕೆಗಳು ನನ್ನ ಗುರುಗಳಾದ ಡಾ. ಕೆ.ಆರ್ ಗಣೇಶ (ಸಂಪಾದಕರೂ ಹೌದು) ಅವರು ನನಗೆ ಕೊಟ್ಟಿದ್ದಾರೆ. ಅವುಗಳಲ್ಲಿ ಕಣ್ಣಾಡಿಸುವಾಗ ಕಾಮತರು ಎಂತಹ ಚೈತನ್ಯಶೀಲರು, ಅದ್ಭುತ ಸೃಜನಶೀಲರು ಎಂಬುದು ಅರಿವಾಗುತ್ತದೆ. ಅವರಲ್ಲಿದ್ದ ಕ್ರಿಯೇಟಿವಿಟಿಯ ೊಂದು ಅಂಶ ಇದ್ದವನೂ ಸಹ ಜಡನಾಗಿ ಉಳಿಯಲಾರ. ನನ್ನ ಪಾಳಿಗೆ ಅವರೊಬ್ಬ ಅದ್ಭುತಗಳನ್ನು ಸೃಷ್ಟಿಸುವ ಮಾಯಾವಿ!

ಕೇಶವ ಪ್ರಸಾದ್.ಬಿ.ಕಿದೂರು said...

very gud article

ಕ್ಷಣ... ಚಿಂತನೆ... said...

ಮಲ್ಲಿಕಾರ್ಜುನ ಸರ್‍,
ಡಾ. ಕೃಷ್ಣಾನಂದ ಕಾಮತರ ಬಗ್ಗೆ ತುಂಬಾ ವಿಷಯ ತಿಳಿಯಿತು. ನಾನು ಕೆಲವೊಂದು ಮಾಹಿತಿ ಹುಡುಕುವಾಗ ಕಾಮತ್‌ರ ವೆಬ್‌ಸೈಟಿನಲ್ಲಿ ಮಾಹಿತಿ ಸಿಗುತ್ತಿತ್ತು.
ಗೆಸ್ಟ್‌ಬುಕ್‌ ಬಗ್ಗೆ ತಿಳಿದದ್ದು ನಿಮ್ಮ ಈ ಬರಹದ ಮೂಲಕವೇ.

ಉಪಯುಕ್ತ ಮಾಹಿತಿ ನೀಡಿದ್ದೀರಿ.
ಧನ್ಯವಾದಗಳು.

Earn Staying Home said...

Your blog is very good.